ದೀಪ ಹಿರಿದಾಗಲಿ ಅಥವಾ ಕಿರಿದಾಗಲಿ, ಅದರ ಕಾರ್ಯ ಬೆಳಗುವುದು ಮಾತ್ರ!
ದೀಪ ಹಿರಿದಾಗಲಿ ಅಥವಾ ಕಿರಿದಾಗಲಿ, ಅದರ ಕಾರ್ಯ ಬೆಳಗುವುದು ಮಾತ್ರ!
ಸುತ್ತಲು ಕವಿದಿರುವ ಕತ್ತಲು ಎಷ್ಟೇ ಗಾಢವಾಗಿರಲಿ, ಎಷ್ಟೇ ಭಯಾನಕವಾಗಿರಲಿ ನಾವು ಒಂದು ದೀಪವನ್ನು ಹಚ್ಚಿದರೆ ಅದು ಬೆಳಗೇ ಬೆಳಗುತ್ತದೆ. ದೀಪ ಹಿರಿದಾಗಲಿ ಅಥವಾ ಕಿರಿದಾಗಲಿ ಅದು ಬೆಳಗುತ್ತದೆ, ಕತ್ತಲೆಯ ಭಯಾನಕತೆಗೆ ಹೆದರಿ ಆರಿ ಹೋಗುವುದಿಲ್ಲ. ಏಕೆಂದರೆ ದೀಪದ ಕರ್ತವ್ಯ ಅಥವಾ ಧರ್ಮ ಸದಾ ಬೆಳಕು ನೀಡುವುದು. ಹಾಗೆಯೇ ನಮ್ಮ ಜೀವನದಲ್ಲಿ ಕಷ್ಟಗಳ ಕಗ್ಗತ್ತಲು ಆವರಿಸುತ್ತದೆ, ಭಯ ತರಿಸುತ್ತದೆ, ಅತಿರೇಕವಾದಾಗ ಸಾವಿನ ದಾರಿಗೆ ಕರೆದೊಯ್ಯಲು ಯತ್ನಿಸುತ್ತದೆ. ಆದರೆ, ನಾವು ಬದುಕಲೇ ಬೇಕು, ಕಷ್ಟಗಳನ್ನು ಎದುರಿಸುತ್ತಾ ಹೋರಾಡಲೇಬೇಕು. ಏಕೆಂದರೆ ಬದುಕುವುದೇ ನಮ್ಮ ಕರ್ತವ್ಯ. ಇಂದು ನಮ್ಮ ಬಾಳಲ್ಲಿ ಕತ್ತಲು ಆವರಿಸಿ ರಾತ್ರಿಯಾಗಿರಬಹುದು, ಆದರೆ ನಾಳೆ ಬೆಳಿಗ್ಗೆಯಾಗಿ ಬೆಳಕು ಬಂದೇ ಬರುತ್ತದೆ. ಸೂರ್ಯನ ಬೆಳಕಿಲ್ಲದಿರುವಾಗ ಇರುಳಿನಲ್ಲಿ ಕಾಣುವ ಚಂದ್ರನ ಬೆಳಕು ಭರವಸೆಯ ಕಿರಣವಾಗಿ ಮತ್ತೆ ಪ್ರಖರ ಬೆಳಕು ಮೂಡುವ ವಿಶ್ವಾಸವನ್ನು ತುಂಬುತ್ತದೆ.
ಸಸ್ಯಗಳಲ್ಲಿ ಚಿಗುರುವ ಹೂವುಗಳು ಒಂದು ಹಂತವನ್ನು ತಲುಪಿದ ನಂತರ ಕಾಯಿಗೆ ಜನ್ಮ ನೀಡಲು ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತದೆ. ಇದರ ಅರ್ಥ ಹೂವು ನಾಶವಾಯಿತು ಎಂತಲೇ? ಇಲ್ಲ, ಸಸ್ಯದ ಬೆಳವಣಿಗೆಯಾಗುತ್ತಿದೆ ಎಂದು. ವಸಂತ ಕಾಲ ಸನ್ನಿಹಿತವಾದಾಗ ಮರದಿಂದ ಬಾಡಿದ ಎಲೆಗಳೆಲ್ಲಾ ಉದುರಿ ಹೊಸ ಚಿಗುರಿನ ಎಲೆಗಳು ಬೆಳೆಯುತ್ತವೆ. ಇದರ ಅರ್ಥ ಬಾಡಿದ ಎಲೆಗಳ ನಾಶವಾಯಿತು ಎಂತಲೇ? ಇಲ್ಲ, ಮರದ ಸಮೃದ್ಧಿಯಾಗುತ್ತಿದೆ ಎಂದು. ಹಾಗೆಯೇ ಕಷ್ಟಗಳು ನಮ್ಮ ಜೀವನದಲ್ಲಿ ಬಂದು ನಮ್ಮನ್ನು ಕುಗ್ಗಿಸುತ್ತವೆ, ನಮ್ಮ ಧೈರ್ಯ - ಆತ್ಮವಿಶ್ವಾಸಕ್ಕೆ ಪೆಟ್ಟನ್ನು ಕೊಡುತ್ತವೆ. ಆದರೆ ಅದರ ಉದ್ದೇಶ ನಮ್ಮ ಜೀವನವನ್ನು ನಾಶ ಮಾಡುವುದಲ್ಲ, ನಮ್ಮ ಜೀವನವನ್ನು ಬಲ ಪಡಿಸುವುದಾಗಿದೆ. ಈಶ್ವರನು ತನ್ನ ಭಕ್ತರು ತಪಸ್ಸು ಮಾಡುವಾಗ ಅವರನ್ನು ಪರೀಕ್ಷಿಸಿ ನಂತರ ವರವನ್ನು ದಯಪಾಲಿಸುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ. ಪರಮೇಶ್ವರ ಶಿವನು ತನ್ನ ಶಕ್ತಿಯಾದ ಸಾಕ್ಷಾತ್ ಜಗನ್ಮಾತೆ ಪಾರ್ವತಿಯು ತನ್ನನ್ನು ವರಿಸಲು ತಪಸ್ಸು ಮಾಡುತ್ತಿದ್ದಾಗಲೂ ಆಕೆಯ ಪರೀಕ್ಷೆಯನ್ನು ಮಾಡುತ್ತಾನೆ ಎಂದು ಶಿವಪುರಾಣ ತಿಳಿಸುತ್ತದೆ. ರಘುಕುಲಕ್ಕೆ ಹಿರಿಮಗನಾಗಿ, ಸರ್ವ ವಿಧಗಳಲ್ಲೂ ಸನ್ನದ್ಧನಾಗಿ, ರಾಜ್ಯವಾಳಲು ಹಕ್ಕುದಾರನಾಗಿ ನಾಳೆ ರಾಜ್ಯಾಭಿಷಕ್ತನಾಗಬೇಕಾದವನು ವನವಾಸಕ್ಕೆ ಹೊರಡಬೇಕಾಗುತ್ತದೆ. ವನವಾಸವು ಇನ್ನೇನೋ ಅಂತ್ಯವಾಗುವುದು ಎಂದು ಕೊಳ್ಳುವಾಗ ತನ್ನ ಪತ್ನಿ ಸೀತಾಳ ಅಪಹರಣದ ಆಘಾತವಾಗುತ್ತದೆ, ನಂತರ ಯುದ್ಧ ಮಾಡಿ ಆಕೆಯನ್ನು ಮರಳಿ ಪಡೆಯಬೇಕಾಗುತ್ತದೆ. ಇನ್ನೇನು ಎಲ್ಲಾ ಸುಭೀಕ್ಷವಾಗುವುದು ಎನಿಸಿದಾಗ ಪ್ರಜೆಗಳು ತಾಳಿದ ಭಾವನೆಯಿಂದ ರಾಜನಾಗಿ ಸೀತಾಳ ತ್ಯಾಗವನ್ನು ಮಾಡುವುದರ ಮೂಲಕ ತನ್ನ ಖುಷಿ, ಉಲ್ಲಾಸಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಒಂದಾದ ನಂತರ ಒಂದರಂತೆ ದುರಂತಗಳನ್ನು ಕಂಡ ಶ್ರೀರಾಮನ ಬದುಕನ್ನು ಯಶಸ್ವಿ ಎಂದು ಕರೆಯಲಾಗುವುದೆ? ಅಂತೆಯೇ ಶ್ರೀಕೃಷ್ಣನು ಹುಟ್ಟಿದ ತಕ್ಷಣವೇ ತನ್ನವರಿಂದ ಬೇರ್ಪಟ್ಟು ರಾಜಕುಮಾರನಾಗಿರಬೇಕಾದವನು ಗೊಲ್ಲನಂತೆ ಬೆಳೆಯಬೇಕಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವ ವಯಸ್ಸಿನಲ್ಲಿ ತನ್ನ ಶಿಕ್ಷಣವನ್ನು ತುಂಬಾ ನಿಧಾನವಾಗಿ ಪ್ರಾರಂಭಿಸಬೇಕಾಯಿತು. ತಾನು ಅತಿ ಹೆಚ್ಚು ಪ್ರೀತಿಸಿದ ರಾಧೆಯನ್ನು ತ್ಯಾಗ ಮಾಡಬೇಕಾಯಿತು. ರಾಕ್ಷಸನ ಸೆರೆಯಲ್ಲಿದ್ದ 16000 ಸ್ತ್ರೀಯರನ್ನು ಬಿಡುಗಡೆಗೊಳಿಸಿ ಅವರ ಘನತೆ ಕಾಪಾಡಲು ತಾನೇ ವರಿಸಿದ ಶ್ರೇಷ್ಠ ಕಾರ್ಯಕ್ಕೆ ಕಳಂಕವನ್ನು ಹೊತ್ತಿಕೊಳ್ಳಬೇಕಾಯಿತು. ತಾನೇ ರಾಜನಾಗಿ ಮೆರೆಯಬಹುದಾಗಿದ್ದರೂ ಕುರುಕ್ಷೇತ್ರದಲ್ಲಿ ಧರ್ಮಯುದ್ಧವನ್ನು ನಡೆಸಿ ಅಧರ್ಮಿಗಳಿಗೆ ಶಿಕ್ಷೆ ನೀಡಿ, ಧರ್ಮಪಾಲಕರನ್ನು ಅಧಿಕಾರಕ್ಕೇರಿಸಲಾಯಿತು. ಈಗ ಹೇಳಿ, ಶ್ರೀಕೃಷ್ಣನ ಬದುಕನ್ನು ಯಶಸ್ವಿ ಎಂದು ಕರೆಯಲಾಗುವುದೆ? ಇವರೀರ್ವರು ಸಂತಸ, ಸಂಕಷ್ಟ ಎರಡರ ಸಮಯದಲ್ಲೂ ತಮ್ಮ ಪಾಲಿನ ಕರ್ತವ್ಯವನ್ನು ಮಾಡಿದ್ದರಿಂದ ಇಂದಿಗೂ ಪೂಜಿತರು!
ಜಗತ್ತಿನ ಶ್ರೇಷ್ಠ ವಿಜ್ಞಾನಿಗಳು ಎಂದು ಕರೆಯಲ್ಪಡುವ ಐನ್ ಸ್ಟೀನ್, ಥಾಮಸ್ ಆಲ್ವಾ ಎಡಿಸನ್ ಅವರ ಕಥೆ ಗೊತ್ತಲ್ಲವೆ? ಇವರು ತಮ್ಮ ಶಾಲೆಯ ಗುರುಗಳಿಂದ ತುಂಬಾ ದಡ್ಡ ಮಕ್ಕಳು, ಉದ್ಧಾರವಾಗಲು ಸಾಧ್ಯವಾಗದವರು ಎನಿಸಿಕೊಂಡು ಹೊರದೂಡಲ್ಪಟ್ಟವರು. ಆದರೆ ಮುಂದೆ ಅತೀ ಬುದ್ಧಿವಂತರೆನಿಸಿಕೊಂಡರು. ಥಾಮಸ್ ಆಲ್ವಾ ಎಡಿಸನ್ ಅವರು ಜಗತ್ತಿನ ಇರುಳು ಕಳೆಯಲು ವಿದ್ಯುತ್ ಬಲ್ಬ್ ಅನ್ನು ಕಂಡು ಹಿಡಿದರು. ಐನ್ ಸ್ಟೀನ್ ಅವರು ಭೌತಶಾಸ್ತ್ರದ ವಿಕಸನಕ್ಕೆ ಪ್ರಮುಖವಾದ ಸಿದ್ಧಾಂತಗಳನ್ನು ನೀಡಿ 2 ನೋಬೆಲ್ ಪ್ರಶಸ್ತಿಗಳನ್ನು ಪಡೆದುಕೊಂಡರು. ಜಾಹೀರಾತಿಗೆ ಧ್ವನಿಯಾಗುವ ಆಡಿಷನ್ ನಲ್ಲಿ ತಿರಸ್ಕೃತಗೊಂಡ ಅಮಿತಾಬ್ ಬಚ್ಚನ್ ಅವರ ಧ್ವನಿ ಹಲವು ದಶಕಗಳ ಕಾಲ ಬಾಲಿವುಡ್ ನಲ್ಲಿ ಮಾರ್ದನಿಸಿತು. ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಅವರು ಮುಂದೆ ಸೂಪರ್ ಸ್ಟಾರ್ ಆಗಿ ಬೆಳೆದು ದಕ್ಷಿಣ ಭಾರತದ ಚಿತ್ರರಂಗದಲ್ಲೇ ಹೆಚ್ಚು ಪ್ರಸಿದ್ಧಿಯಾದರು. ಸಂಗೀತದ ರಿಯಾಲಿಟಿ ಶೋ ನಲ್ಲಿ ಫೈನಲ್ ಗೂ ತಲುಪದ ಅರ್ಜಿತ್ ಸಿಂಗ್, ಸಂಚಿತ್ ಹೆಗಡೆಯಂತಹ ಗಾಯಕರು ಅವರು ಇಂದು ಟಾಪ್ ಸಿಂಗರ್ಸ್ ಆಗಿದ್ದಾರೆ. ದಶಕದ ಹಿಂದೆ ನಡೆದ ಕ್ರಿಕೆಟ್ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದಲ್ಲಿ ಒಬ್ಬ ಸ್ಪರ್ಧಿಯಾಗಿಯೂ ಪ್ರವೇಶವನ್ನು ಪಡೆದುಕೊಳ್ಳಲಾಗದ ರೋಹಿತ್ ಶರ್ಮಾ ಅವರು ಈ ಬಾರಿ ನಡೆದ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿದರು. ಹಾಗೆಯೇ ಮೊಹಮ್ಮದ್ ಶಮಿ ಅವರು ಕೂಡ ಟೀಮ್ ಇಂಡಿಯಾದಿಂದ ದೂರವಾಗಿ ಮರಳಿ ಅವಕಾಶ ದೊರೆತ ನಂತರ ಅತ್ಯುತ್ತಮವಾಗಿ ಆಟವಾಡಿದರು. ಎರಡೂ ಕೈಗಳಿಲ್ಲದ ಶೀತಲ್ ದೇವಿ ಏಷ್ಯನ್ ಪ್ಯಾರಾ ಗೇಮ್ಸ್ ನ ಬಿಲ್ಲುಗಾರಿಕೆಯಲ್ಲಿ ಭಾಗವಹಿಸಿ 2 ಚಿನ್ನದ ಪದಕಗಳನ್ನು ಗೆದ್ದರು. ಇವರಂತೆ ಹಲವಾರು ಕ್ರೀಡಾಪಟುಗಳು ತಮ್ಮ ಅಂಗವೈಕಲ್ಯದ ಸಮಸ್ಯೆಯನ್ನು ಮೆಟ್ಟಿ ನಿಂತು ಪ್ಯಾರಾ ಗೇಮ್ಸ್ ನಲ್ಲಿ ಸಾಧನೆಗೈದಿದ್ದಾರೆ. ಭಯೋತ್ಪಾದಕರ ದಾಳಿಯಿಂದ ರೈಲ್ವೆ ಟ್ರ್ಯಾಕ್ ನಲ್ಲಿ ಸಿಲುಕಿ ತನ್ನ 2 ಕಾಲುಗಳನ್ನು ಕಳೆದುಕೊಂಡ ಅರುಣಿಮಾ ಸಿನ್ಹಾ ಪ್ರಪಂಚದ ಎತ್ತರದ ಪರ್ವತಗಳನ್ನು ಏರುತ್ತಾ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಅನ್ನೇ ಓದದ ಸ್ಟೀವ್ ಜಾಬ್ಸ್ ಅವರು ಆಪಲ್ ಎಂಬ ಬೃಹತ್ ಕಂಪನಿಯನ್ನು ಸ್ಥಾಪಿಸಿ, ಸಾವಿರಾರು ಇಂಜಿನಿಯರ್ ಗಳಿಗೆ ಕೆಲಸ ನೀಡಿದರು. ಹಾಗೆಯೇ ಇಂಜಿನಿಯರಿಂಗ್ ನಲ್ಲಿ ಫೇಲಾದ ಬಿಲ್ ಗೇಟ್ಸ್ ಅವರು ಮೈಕ್ರೋ ಸಾಫ್ಟ್ ಎಂಬ ಬೃಹತ್ ಕಂಪನಿಯನ್ನು ಕಟ್ಟಿ, ತಮ್ಮ ತರಗತಿಯಲ್ಲಿದ್ದ ಟಾಪರ್ಸ್ ಇಂಜಿನಿಯರಿಂಗ್ ಫ್ರೆಂಡ್ಸ್ ಗಳನ್ನು ಒಳಗೊಂಡಂತೆ ಹಲವಾರು ಇಂಜಿನಿಯರ್ ಗಳಿಗೆ ಕೆಲಸ ನೀಡಿದರು. ಐಐಟಿ ಕಾಲೇಜಿನಲ್ಲಿ ಓದಲು ಆಯ್ಕೆಯಾಗಿ ಹಣದ ಸಮಸ್ಯೆಯ ಕಾರಣ ಅಲ್ಲಿ ಓದಲಾಗದಿದ್ದರೂ ನಾರಾಯಣ ಮೂರ್ತಿ ಅವರು ಅಂತಹ ಐಐಟಿ ವಿದ್ಯಾರ್ಥಿಗಳಿಗೇ ಕೆಲಸ ಕೊಡುವಂತಹ ಇನ್ಫೋಸಿಸ್ ಎಂಬ ಬೃಹತ್ ಕಂಪನಿಯನ್ನು ಕಟ್ಟಿ ಬೆಳೆಸಿದರು.
ಹೀಗೆ ಮೊದಲು ಫೇಲ್ಯೂರ್ ಆಗಿ ನಂತರ ಸಕ್ಸಸ್ ಕಂಡ ಲೆಕ್ಕವಿಲ್ಲದಷ್ಟು ಸ್ಟೋರಿಗಳಿವೆ. ಬಹುತೇಕ ಎಲ್ಲಾ ಮನುಷ್ಯರು ವಿಫಲರಾಗಿಯೇ ಸಫಲರಾಗುವುದು. ವಿಫಲತೆಯಿಂದ ಸಫಲತೆಯವರೆಗಿನ ದಾರಿ ಮನುಷ್ಯನ ವ್ಯಕ್ತಿತ್ವವನ್ನು ಪಕ್ಟವಾಗಿಸುತ್ತದೆ, ಪ್ರೌಢವಾಗಿಸುತ್ತದೆ, ವಿನಮ್ರವಾಗಿಸುತ್ತದೆ. ವಿಫಲವಾಗುವುದರಲ್ಲಿ ಖಂಡಿತ ಯಾವುದೇ ತಪ್ಪಿಲ್ಲ, ಆದರೆ ಆ ವಿಫಲತೆಯಿಂದ ನಾವು ಯಾವ ಪಾಠವನ್ನೂ ಕಲಿಯದಿದ್ದರೆ ಅದು ದೊಡ್ಡ ತಪ್ಪಾಗುತ್ತದೆ. ಒಂದೇ ಬಾರಿಗೆ ಸಫಲತೆಯನ್ನು ಕಂಡು ಎತ್ತರಕ್ಕೇರಿದವರು ಭವಿಷ್ಯದಲ್ಲಿ ಪೆಟ್ಟು ಬಿದ್ದಾಗ ಅದನ್ನು ಸಹಿಸಿಕೊಳ್ಳಲಾಗುವುದಿಲ್ಲ, ದೀರ್ಘ ಕಾಲ ಎತ್ತರದಲ್ಲಿ ಉಳಿಯಲಾಗುವುದಿಲ್ಲ, ಮೊದಲ ಹೊಡೆತಕ್ಕೇನೆ ಕೆಳಗೆ ಬೀಳುತ್ತಾರೆ. ಆದರೆ ವಿಫಲತೆಯ ಹೊಡೆತಗಳನ್ನು ಅನುಭವಿಸಿ, ಕಠಿಣ ಮಾರ್ಗದ ಮೂಲಕ ಪ್ರಯಾಣಿಸಿ ತಡವಾಗಿ ಸಫಲತೆಯನ್ನು ಕಂಡವರು ಎಂದಿಗೂ ಹೊಡೆತಗಳಿಗೆ ಹೆದರುವುದಿಲ್ಲ, ಅಚಲವಾಗಿ ನಿಂತು ಎಲ್ಲವನ್ನೂ ಎದುರಿಸಿ ಗೆಲ್ಲುತ್ತಾರೆ. ನಾವು ಈಗ ನಮ್ಮ ಕಾರ್ಯದಲ್ಲಿ ವಿಫಲರಾಗಿದ್ದೇವೆ ಎಂದರೆ ನಮಗೆ ಶಕ್ತಿಯಿಲ್ಲ, ಸಾಮರ್ಥ್ಯವಿಲ್ಲ ಎಂದು ಅರ್ಥವಲ್ಲ, ನಾವು ಯಶಸ್ವಿಯಾಗಲು ಪೂರಕವಾಗುವಷ್ಟು ಪ್ರಯತ್ನವನ್ನು ಮಾಡಿಲ್ಲ ಎಂದಷ್ಟೇ ಅರ್ಥ. ನಾವು ಮತ್ತೆ ಅವಶ್ಯಕವಾದ ಪ್ರಯತ್ನವನ್ನು ಮಾಡಿದರೆ ಸಫಲರಾಗುತ್ತೇವೆ. ಎಲ್ಲಾ ಮನುಷ್ಯರಿಗೂ ಈಶ್ವರನು ಸಮಾನ ಶಕ್ತಿಯನ್ನು ನೀಡಿದ್ದಾನೆ. ಕತ್ತಲು ಎಂದು ಎಷ್ಟೇ ಅತ್ತರೂ ಪ್ರಯೋಜನವಿಲ್ಲ, ಬೆಳಕನ್ನು ತಂದಾಗಲೇ ಕತ್ತಲು ದೂರವಾಗುವುದು. ಸಮಸ್ಯೆ ಸಾವಿರ ಇರಲಿ, ಪರಿಹಾರ ಒಂದೇ. ಅದುವೇ ಸಮರ್ಪಕ ಜ್ಞಾನ ಅಥವಾ ಶಿಕ್ಷಣ. ನಿರಂತರ ಕಲಿಕೆಯೇ ಸಫಲ ಜೀವನದ ಸೂತ್ರ.
ನಾವು ಎಷ್ಟು ಓದಿದ್ದೇವೆ, ನಮ್ಮ ಬಳಿ ಎಷ್ಟು ಸಂಪತ್ತಿದೆ ಎಂಬುದರ ಆಧಾರದ ಮೇಲೆ ನಮ್ಮ ಯಶಸ್ಸು ನಿಂತಿಲ್ಲ. ಎಲ್ಲರೂ ಸಮಾನ ಶಕ್ತರು. ನಮ್ಮಲ್ಲಿ ಶ್ರದ್ಧೆ, ಭಕ್ತಿ, ಇಚ್ಛಾಶಕ್ತಿಯಿದ್ದರೆ ಯಶಸ್ಸು ಸಿಗಲೇಬೇಕು. ಇತ್ತೀಚೆಗೆ ತೆರೆಕಂಡ '12th fail' ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಕಥಾನಾಯಕನು ತನ್ನ ಕೊನೆಯ ಪ್ರಯತ್ನದಲ್ಲಿ ಐಎಎಸ್ ನ ಮೇನ್ಸ್ ನಲ್ಲಿ ಪಾಸಾಗಿ ಇಂಟರ್ ವ್ಯೂ ಗೆ ಹೋಗಿದ್ದಾಗ ಆತನಿಗೆ ಇದರಲ್ಲಿ ನೀನು ಫೇಲ್ ಆದರೆ ಏನು ಮಾಡುವೆ? ಎಂದು ಕೇಳಿದಾಗ ನಾನು ಈ ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ದೇಶದ ಸುಧಾರಣೆ ಮಾಡುವ ನನ್ನ ಗುರಿಯನ್ನು ಐಪಿಎಸ್ ಮೂಲಕ ತಲುಪಲಾಗದಿದ್ದರೆ ಶಿಕ್ಷಕನಾಗುವುದರ ಮೂಲಕವಾದರೂ ತಲುಪುತ್ತೇನೆ, ಪ್ರಪಂಚಕ್ಕೇ ಬೆಳಕು ನೀಡುವ ಸೂರ್ಯನಾಗಲು ಸಾಧ್ಯವಾಗದಿದ್ದರೆ ಒಂದು ಬೀದಿಗೆ ಬೆಳಕು ನೀಡುವ ಸಣ್ಣ ವಿದ್ಯುತ್ ದೀಪವಾದರೂ ಆಗುತ್ತೇನೆ ಎಂದು ಉತ್ತರಿಸುತ್ತಾನೆ. ಕೊನೆಗೆ ಆತ ಐಪಿಎಸ್ ಅಧಿಕಾರಿ ಆಗುತ್ತಾನೆ. ಈ ರೀತಿ ಇಂದು ನೀವು ಸಂಘರ್ಷದ ಹಾದಿಯಲ್ಲಿದ್ದರೆ ಭರವಸೆ ಕಳೆದುಕೊಳ್ಳಬೇಡಿ, ಏಕೆಂದರೆ ಸಂಘರ್ಷದ ಹಾದಿಯನ್ನು ಕ್ರಮಿಸಿದ ಮೇಲೆಯೇ ನಾವು ಯಶಸ್ವಿಯಾಗುವುದು. ಯಶಸ್ಸು ಸಿಗುವುದು ತಡವಾಗಬಹುದು, ಆದರೆ ನಾವು ಪ್ರಯತ್ನವನ್ನು ಮಾಡುತ್ತಿದ್ದರೆ ಖಂಡಿತ ಅದರ ಫಲ ಸಿಕ್ಕೇ ಸಿಗುತ್ತದೆ. ಸ್ವಾಮಿ ವಿವೇಕಾನಂದರನ್ನು ಮಾನವ ಜನಾಂಗಕ್ಕೆ ನಿಮ್ಮ ಸಂದೇಶವೇನು ಎಂದು ಕೇಳಿದಾಗ ಅವರು ಹೇಳುತ್ತಾರೆ: 'ಹತ್ತು ವರ್ಷಗಳ ಹಿಂದೆ ನನ್ನ ಸಂದೇಶ ಸಂಘರ್ಷವಾಗಿತ್ತು. ಇಂದು ನನ್ನ ಸಂದೇಶ ಸಂಘರ್ಷವಾಗಿದೆ. ಹತ್ತು ವರ್ಷಗಳ ನಂತರವೂ ನನ್ನ ಸಂದೇಶ ಸಂಘರ್ಷವೇ ಆಗಿರುತ್ತದೆ'.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment