ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ.....

ಕಾರ್ಯೇಶು ದಾಸಿ
ಕರುಣೇಶು ಮಂತ್ರಿ
ಭೋಜೇಶು ಮಾತಾ
ಶಯನೇಶು ರಂಭಾ
ಕ್ಷಮಯಾಧರಿತ್ರಿ
ರೂಪೇಶು ಲಕ್ಷ್ಮಿ
ಸತ್ಕರ್ಮಯುಕ್ತ
ಕುಲಧರ್ಮ ಪತ್ನಿ
ಹೀಗೆ ನಮ್ಮ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ತ್ರೀ ಲಕ್ಷಣಗಳ ಬಗ್ಗೆ ವ್ಯಾಖ್ಯಾನಿಸಲಾಗಿದೆ. 

ಕವಲೊಡೆದರೆ ಕಾವ್ಯವಾಗುವಳು
ಜ್ವಲಿಸಿದರೆ ಝರಿಯಾಗುವಳು
ತ್ರಾಸವಾದರೆ ತ್ರಾಹಿಯಾಗುವಳು 
ದಮನಿಸಿದರೆ ಧರೆಯಾಗುವಳು
ಸಂಕಟವಾದರೆ ಸಿಂಧೂರವಾಗುವಳು 
ಅವಳೇ ಸಂಸಾರದ ಕಣ್ಣಾಗಿರುವ ಹೆಣ್ಣು ಮಗಳು! 
ಊರನ್ನೇ ರಕ್ಷಿಸುವ ಕಾಟೇರನನ್ನು ರಕ್ಷಿಸಿದ, ಇಂತಹ ಲಕ್ಷಣಗಳನ್ನು ಹೊಂದಿರುವ 'ವಿಜಯಲಕ್ಷ್ಮಿ' ಎಂಬ ಹೆಣ್ಣುಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಒಂದು ವರ್ಷದ ಹಿಂದಷ್ಟೆ ತೆರೆ ಕಂಡ ಕಾಟೇರ ಚಿತ್ರವು ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರದ ನಂತರ ಉಳುವವನೇ ಹೊಲದೊಡೆಯ ಎಂಬ ಕಿಚ್ಚಿನ ವಿಷಯದ ಮೇಲೆ ಮೂಡಿ ಬಂದು ರೈತರಿಗೆ ಭರಪೂರ ಬೆಂಬಲ ನೀಡಿ ಹೃದಯಕ್ಕೆ ಹೆಚ್ಚು ಹತ್ತಿರವಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿ ಕೆರಿಯರ್ ಗೆ ಸಂಗೊಳ್ಳಿ ರಾಯಣ್ಣ, ಸಾರಥಿ ಚಿತ್ರಗಳಂತೆ ಕಳಶಪ್ರಾಯವಾಯಿತು. ಅದೇ ಖುಷಿಯಲ್ಲಿ ಮುಂದೆ ಸಾಗುತ್ತಿದ್ದ ದರ್ಶನ್ ಅವರ ಪಯಣಕ್ಕೆ 11-ಜೂನ್-2024ರಂದು ಸಡನ್ ಬ್ರೇಕ್ ಬಿದ್ದಿತು. ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಹತ್ಯೆಯ ಕೇಸ್ ನಲ್ಲಿ ದರ್ಶನ್ ಮತ್ತು ಅವರ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಇಡೀ ಕರ್ನಾಟಕಕ್ಕೆ ಶಾಕ್ ನೀಡಿತು. ನಂತರ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಎಂದರೆ ದರ್ಶನ್ ಅವರು ತಮ್ಮ ಗೆಳತಿ ಪವಿತ್ರಾಗಾಗಿ ಮಾಡಿದ್ದಾರೆ ಎನ್ನಲಾದ ಈ ಕೊಲೆಯ ಕೇಸ್ ನಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಪರವಾಗಿ ನಿಂತು ಹೋರಾಡಿದ್ದು. ಯಾವ ಹೆಣ್ಣಾದರೂ ಅವಳ ಪತಿಯ ಬಹುತೇಕ ತಪ್ಪುಗಳನ್ನು ಸುಲಭವಾಗಿ ಕ್ಷಮಿಸಿ ಬಿಡುತ್ತಾಳೆ, ಆದರೆ ಅವಳ ಪತಿಯು ಮತ್ತೊಬ್ಬಳ ಹಿಂದೆ ಹೋಗುವ ತಪ್ಪನ್ನು ಕ್ಷಮಿಸಲಾರಳು. ಮಾನ-ಮರ್ಯಾದೆಯ ಆಭರಣಗಳನ್ನೇ ತೊಟ್ಟಿರುವ ಮಧ್ಯಮ ವರ್ಗದ ಹೆಣ್ಣು ಮಕ್ಕಳು ತಮ್ಮ ಪತಿಯು ಇಂತಹ ತಪ್ಪನ್ನು ಮಾಡಿದರೆ ಸಾಮಾಜಿಕ ಸುರಕ್ಷತೆಯ ಸಲುವಾಗಿಯಾದರೂ ಕ್ಷಮಿಸುವ ವಿವಶತೆಗೆ ಸಿಲುಕುತ್ತಾರೆ. ಆದರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಹೊಂದಿದ್ದಾರೆ, ಅವರು ಮನಸ್ಸು ಮಾಡಿದ್ದರೆ ದರ್ಶನ್ ಅವರಿಂದ ಸಂಬಂಧ ಕಡಿದುಕೊಂಡು ಬೇರೆಯಾಗಬಹುದಿತ್ತು. ತವರು ಮನೆಯ ಹೊಸ್ತಿಲನ್ನು ದಾಟಿ ಗಂಡನ ಮನೆಯನ್ನು ಸೇರಿದ ಮೇಲೆ ಇನ್ನು ಕೊನೆಯ ಉಸಿರಿರುವವರೆಗೂ ಅದೇ ತನ್ನ ಮನೆ ಎಂದು ಬದುಕುವ ನಮ್ಮ ಸಂಸ್ಕೃತಿಯ ಸಂಸ್ಕಾರವಂತ ಹೆಣ್ಣು ಮಕ್ಕಳಂತೆ ಅವರು ತಮ್ಮ ಪತಿಯೊಂದಿಗೇ ಬದುಕುತ್ತಿದ್ದಾರೆ. ದರ್ಶನ್ ಅವರು ಒಬ್ಬರೇ ಅಲ್ಲ, ಬಣ್ಣದ ಲೋಕದಲ್ಲಿ ವಿಹರಿಸುವ ಅನೇಕ ಸೆಲೆಬ್ರಿಟಿಗಳು ಈ ರೀತಿ ವಿವಾಹದ ನಂತರವೂ ಮತ್ತೊಂದು ಸಂಬಂಧ ಹೊಂದುವುದು ಸಾಮಾನ್ಯ ಸಂಗತಿಯಾಗಿರುವುದೇ ಚಿಂತನೀಯ. ರಾಜಕೀಯ, ಪ್ರತಿಷ್ಠೆ, ಹಿರಿಮೆ-ಗರಿಮೆಗಳ ಕಾರಣದಿಂದ ಒಂದಕ್ಕಿಂತ ಹೆಚ್ಚು ವಿವಾಹವಾಗುವುದು ಅಥವಾ ಸಂಬಂಧ ಹೊಂದುವುದು ಅನಿವಾರ್ಯವಾಗಿದ್ದಂತಹ ಪ್ರಾಚೀನ ಕಾಲದಲ್ಲಿ ಕುಂತಿ, ದ್ರೌಪದಿಯರಂತಹ ಕ್ಷಮಯಾಧರಿತ್ರಿಯರು ತಮ್ಮ ಪತಿಯರನ್ನು ಕ್ಷಮಿಸಿದ್ದರು. ಆದರೆ ಈಗ ಅನಿವಾರ್ಯವಿಲ್ಲದಿದ್ದರೂ ಆಯ್ಕೆಯಿಂದ ಒಂದಕ್ಕಿಂತ ಹೆಚ್ಚು ವಿವಾಹವಾಗುವ ಅಥವಾ ಸಂಬಂಧ ಹೊಂದುವ ಈ ಕಾಲದಲ್ಲೂ ವಿಜಯಲಕ್ಷ್ಮಿ ಅವರು ಕ್ಷಮಯಾಧರಿತ್ರಿಯಾಗಿ ತಮ್ಮ ಪತಿಯನ್ನು ಕ್ಷಮಿಸಿ ಕುಂತಿ, ದ್ರೌಪದಿಯರಂತೆ ದಿಟ್ಟ ಹೆಣ್ಣು ಮಗಳಾಗಿ ಕಾಣುತ್ತಿದ್ದಾರೆ. ದರ್ಶನ್ ಅವರಂತಹ ಸುಂಟರಗಾಳಿ ವ್ಯಕ್ತಿತ್ವದ ಶಕ್ತಿವಂತನ ಜೊತೆ ಸಂಸಾರ ನಡೆಸಲು ಸಹನಾ ಮೂರ್ತಿಯಂತೆ ಶಕ್ತಿ ಮಾತೆಯೇ ಆಗಿ ಹೋಗಿದ್ದಾರೆ!

ದರ್ಶನ್ ಅವರು ಇನ್ನೂ ಆರೋಪಿ ಸ್ಥಾನದಲ್ಲೇ ಇದ್ದರೂ, ರೇಣುಕಾಸ್ವಾಮಿ ಕೊಲೆ ಉದ್ದೇಶಿತವೊ ಅಚಾತುರ್ಯವೊ ಎಂಬುದು ತನಿಖೆಯಲ್ಲಿ ಸಾಬೀತಾಗದೆ ಇದ್ದರೂ ಮಾಧ್ಯಮದವರು ಮಾತ್ರ ದರ್ಶನ್ ಅರೆಸ್ಟ್ ಆದ ದಿನದಿಂದಲೇ ಕೊಲೆಗಾರ ಎಂಬ ಹಣೆಪಟ್ಟಿಯನ್ನು ಅಂಟಿಸಿದ್ದಾರೆ. ದರ್ಶನ್ ಕೊಲೆಗಾರ ಎಂದಾದರೂ ರೇಣುಕಾಸ್ವಾಮಿ ಹುತಾತ್ಮನೇನಲ್ಲ! ಮೊದಲು ತಪ್ಪು ಮಾಡಿರುವುದು ರೇಣುಕಾಸ್ವಾಮಿ, ನಂತರ ಆ ತಪ್ಪಿಗೆ ಶಿಕ್ಷೆ ನೀಡಲು ಹೋದಾಗ ಆಗಿರುವ ತಪ್ಪು ದರ್ಶನ್ ರದ್ದು ಎಂಬ ಮುಖ್ಯ ವಿಷಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಮಾಧ್ಯಮಗಳು ರೇಣುಕಾಸ್ವಾಮಿ ಏನೂ ತಪ್ಪು ಮಾಡದ ಅಮಾಯಕ ಎಂಬಂತೆ ಬಿಂಬಿಸುತ್ತಿವೆ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ದರ್ಶನ್ ಅವರ ಬಂಧನವಾದಾಗ ಅನೇಕರು ಅವರ ಬಗ್ಗೆ ವಾಚಾಮಗೋಚರವಾಗಿ ಮಾತನಾಡಿದರು.
ಒಂದು ವೇಳೆ ದರ್ಶನ್ ಮತ್ತು ಗುಂಪಿನವರು ಕೊಲೆ ಮಾಡಿರುವುದು ಸಾಬೀತಾದರೂ, ಅದು ರೇಣುಕಾಸ್ವಾಮಿ ಮಾಡಿರುವ ತಪ್ಪಿಗೆ ಪ್ರತಿರೋಧವಾಗಿ ಮಾಡಿರುವ ತಪ್ಪು ಎಂದು ಪರಿಗಣಿಸ ಬೇಕಾಗುತ್ತದೆ. ಹಾಗಾದರೆ ಕಾನೂನುಗಳಿರುವಾಗ ಶಿಕ್ಷೆ ನೀಡಲು ಅವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ದೇಶದಲ್ಲಿ ಕಾನೂನುಗಳ ಮೂಲಕ ಶಿಕ್ಷೆ ಕೊಡಿಸುವುದು ಎಷ್ಟು ಜಟಿಲವಾಗಿದೆ, ಅದರಲ್ಲೂ ಶೋಷಿತ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುವುದು ಎಷ್ಟು ಕಠಿಣವಾಗಿದೆ ಎಂಬುದು ನಮಗೆಲ್ಲ ತಿಳಿದಿದೆ. ಪೌರುಷವಂತನಾದ ಯಾವುದೇ ಸಾಮಾನ್ಯ ವ್ಯಕ್ತಿಯಾದರೂ ತನ್ನ ಮನೆಯ ಹೆಣ್ಣು ಮಗಳಿಗೆ ಯಾರೋ ಪರ ಪುರುಷ ಕಿರುಕುಳ ನೀಡುತ್ತಿದ್ದಾನೆಂದರೆ ತಾನೇ ಅವನಿಗೆ ಹೊಡೆದು ಬುದ್ಧಿ ಕಲಿಸುತ್ತಾನೆ. ಹೀಗಿರುವಾಗ ಸಮಾಜದಲ್ಲಿ ಶಕ್ತಿಯುತ ಸ್ಥಾನದಲ್ಲಿರುವ ದರ್ಶನ್ ಅವರು ಸುಮ್ಮನೆ ಕೂರುತ್ತಾರೆಯೇ? ಈಗ ನಡೆದಿರುವ ಘಟನೆ ಏನಾದರೂ ಸಿನಿಮಾ ಆಗಿ ಮೂಡಿ ಬಂದಿದ್ದರೆ ಸೂಪರ್ ಹಿಟ್ ಆಗುತ್ತಿತ್ತು. ಬಾಹುಬಲಿ, ಮೈನಾದಂತಹ ಸಿನಿಮಾಗಳಲ್ಲಿ ಖಳನಾಯಕ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿ ಕಿರುಕುಳ ನೀಡಿದ್ದರಿಂದ ನಾಯಕ ಅವನ ಕೊಲೆ ಮಾಡುತ್ತಾನೆ, ಆ ದೃಶ್ಯಗಳನ್ನು ನೋಡಿ ನಾವೇ ಚಿತ್ರಮಂದಿರಗಳಲ್ಲಿ ಚಪ್ಪಾಳೆ ತಟ್ಟಿದ್ದೇವೆ. ಪವಿತ್ರಾ ಅವರು ಏನೇ ಆಗಿರಲಿ, ಅದು ಅವರ ಮತ್ತು ದರ್ಶನ್ ನಡುವಿನ ವ್ಯಕ್ತಿಗತ ವಿಚಾರ. ಪವಿತ್ರಾ ಓರ್ವ ಹೆಣ್ಣು ಮಗಳು, ಆ ಹೆಣ್ಣು ಮಗಳಿಗೆ ರೇಣುಕಸ್ವಾಮಿ ಕಿರುಕುಳ ನೀಡಿರುವುದಕ್ಕೆ ದರ್ಶನ್ ಮತ್ತು ಅವರ ಗುಂಪಿನವರು ಹೀಗೆ ದಂಡಿಸಿರುವುದು. ದರ್ಶನ್ ಅವರೇನಾದರೂ ಈಗ ಮುಂದೆ ಬಂದು ಏನೂ ತಪ್ಪು ಮಾಡಿರದ ರೇಣುಕಾಸ್ವಾಮಿ ಕುಟುಂಬದ ಜವಾಬ್ದಾರಿಯನ್ನು ಒಂದು ಹಂತಕ್ಕೆ ಹೊರುವುದಾದರೆ ಉತ್ತಮ ಮಾದರಿಯಾಗಬಹುದು.

ದರ್ಶನ್ ಅವರಿಗೆ ಜಾಮೀನು ಸಿಕ್ಕ ನಂತರ ಟಿ.ಆರ್.ಪಿಗೆ ಕಿಂಗ್, ಕಾಂಟ್ರವರ್ಸಿಗೆ ದಾದಾ, ಮೀಡಿಯಾಗೆ ಗಾಡ್ ಫಾದರ್, ಆನೆ ಎಲ್ಲಿದ್ದರೂ ಒಂದೇ ರೇಟು, ಮಹಾರಾಜನು ಎಲ್ಲಿದ್ದರೂ ಮಹಾರಾಜನೇ ತಾನೆ ಎಂಬ ಪೋಸ್ಟರ್ ಗಳನ್ನು ಹಾಕಲಾಯಿತು. ಮೊದಲಿನಿಂದಲೂ ದರ್ಶನ್ ಅವರಿಗೆ ದುರಹಂಕಾರ ಎಂದು ಹಲವರು ದೂರುತ್ತಾರೆ. ಹೌದು, ಸ್ವಂತ ಯೋಗ್ಯತೆಯ ಮೇಲೆ ಬೆಳೆದು ಬಂದ, ಅವಮಾನ-ನಿರಾಕರಣೆಗಳಲ್ಲಿ ಬೆಂದು ಬಂದ ವ್ಯಕ್ತಿಗೆ ದುರಹಂಕಾರ ಇದ್ದೇ ಇರುತ್ತದೆ. ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮದವರು ಕೇವಲ ದರ್ಶನ್ ಅವರ ದುರಹಂಕಾರದ ಮುಖವನ್ನು ಮಾತ್ರ ಏಕೆ ತೋರಿಸುತ್ತಾರೆ? ಮತ್ತೊಂದು ಮಗುವಿನ ಮುಖವನ್ನು ಏಕೆ ತೋರಿಸುವುದಿಲ್ಲ? ದರ್ಶನ್ ಅವರ ಮೇಲೆ ಕೊಲೆಯಂತಹ ದೊಡ್ಡ ಆರೋಪ ಬಂದಿದ್ದರೂ, ಇಂದಿಗೂ ಅಸಂಖ್ಯ ಅಭಿಮಾನಿಗಳು ಅವರಿಗೆ ಬೇಷರತ್ ಬೆಂಬಲ ನೀಡುತ್ತಿದ್ದಾರೆ ಎಂದರೆ ಅವರು ಇಂದಿಗೂ ಕನ್ನಡದ ಆಸ್ತಿ ಹಾಗೂ ಹಲವು ಮನಸ್ಸುಗಳಿಗೆ ಸ್ಫೂರ್ತಿ ಎಂದರ್ಥವಲ್ಲವೇ? ಯಾವ ವ್ಯಕ್ತಿಯಾದರೂ ಸರಿ ಪರಿಪೂರ್ಣನಾಗಿ ಒಳ್ಳೆಯವನಾಗಲು ಸಾಧ್ಯವಿಲ್ಲ, ಒಂದಲ್ಲಾ ಒಂದು ಕುಂದು ಕೊರತೆಗಳನ್ನು ಹೊಂದೇ ಹೊಂದಿರುತ್ತಾನೆ. ನಮ್ಮ ಜೀವನದಲ್ಲಿ ಕೆಟ್ಟದಾದ ಮೇಲೆ ಒಳ್ಳೆಯದಾಗೇ ಆಗುತ್ತದೆ. ರೇಣುಕಾಸ್ವಾಮಿಯ ಕೇಸ್ ಆದ ಮೇಲೆ ದರ್ಶನ್ ಅವರ ಸಂಪೂರ್ಣ ಕುಟುಂಬ ಒಂದಾಗಿದೆ. ದರ್ಶನ್ ಅವರ ಬದುಕಿನ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಟುಂಬ ಹಾಗೂ ಅಭಿಮಾನಿ ವರ್ಗದವರಲ್ಲಿ ಸಂಯಮವನ್ನು ಕಾಪಾಡಿಕೊಂಡು ಹೋಗುತ್ತಿರುವ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ದೊಡ್ಡ ಸೆಲ್ಯೂಟ್. 

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ