ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು
ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು
ಯಾವ ಸ್ಥಳವು ಮೊದಲು ಮೌರ್ಯ, ಶಾತವಾಹನ, ಪಲ್ಲವರ ಆಳ್ವಿಕೆಗೊಳಪಟ್ಟಿತ್ತೊ ಆ ಸ್ಥಳದ ವಿದ್ಯಾವಂತನಿಗೆ ಪಲ್ಲವ ಕುದುರೆ ಸವಾರನಿಂದಾದ ಅಪಮಾನದಿಂದ ಸ್ವಾಭಿಮಾನವನ್ನು ಸಿಡಿದೆಬ್ಬಿಸಿಕೊಂಡಾತ (ಮಯೂರವರ್ಮ) ಕಟ್ಟಿದ್ದು ಕನ್ನಡನಾಡಿನ ಮೊದಲ ಸಾಮ್ರಾಜ್ಯ 'ಕದಂಬ ಸಾಮ್ರಾಜ್ಯ', ಇಂತಹ ಪುಣ್ಯಭೂಮಿಯಲ್ಲಿ ಜನಿಸಿರುವುದಕ್ಕೆ ಸ್ವಾಭಿಮಾನದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು. ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಸಾಮ್ರಾಜ್ಯದವರು, ಮೈಸೂರು ಒಡೆಯರು ಈ ಶೌರ್ಯ ಸಾಮ್ರಾಜ್ಯಗಳು ವಿದೇಶಿಗರ ಬರ್ಬರ ಆಕ್ರಮಣಗಳನ್ನು ತಡೆಗಟ್ಟಿ ನಮ್ಮನ್ನು ರಕ್ಷಿಸಿದವು. ಇಂತಹ ಧನ್ಯನಾಡಿನಲ್ಲಿ ಜನಿಸಿರುವುದಕ್ಕೆ ಶೌರ್ಯದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು.
ಯಾವ ಕನ್ನಡ ಸ್ವಾಭಿಮಾನದ ಸಾಮ್ರಾಜ್ಯಕ್ಕೆ ಮಯೂರವರ್ಮ ನಾಂದಿ ಹಾಡಿದನೊ, ಅದನ್ನು ಚಾಲುಕ್ಯರ ಪ್ರಸಿದ್ಧ ದೊರೆ ಇಮ್ಮಡಿ ಪುಲಕೇಶಿಯು ವಿಸ್ತಾರವಾಗಿ ಬೆಳೆಸಿ, ಉತ್ತರ ಭಾರತದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಮೆರೆಯುತ್ತಿದ್ದ ರಾಜ ಹರ್ಷವರ್ಧನನನ್ನು ಹಿಮ್ಮೆಟ್ಟಿಸಿದನು. ಅಮೋಘವರ್ಷನೃಪತುಂಗನು ಜನಾನುರಾಗಿಯಾಗಿದ್ದು, ರಾಜ್ಯಕ್ಕೆ ಕ್ಷಾಮ ಬಂದಾಗ ಅದನ್ನು ನಿವಾರಿಸಲು ಕೊಲ್ಲೂರು ಲಕ್ಷ್ಮಿದೇವಿಗೆ ತನ್ನ ಬೆರಳನ್ನೇ ಬಲಿನೀಡಿ ಪ್ರಾರ್ಥಿಸಿದನು. ರಾಜ್ಯದ ವಿದ್ರೋಹಕ್ಕಾಗಿ ತನ್ನ ಸ್ವಂತ ಮಗನಿಗೇ ಮರಣದಂಡನೆ ಶಿಕ್ಷೆ ನೀಡಿ ದಿಟ್ಟ ನ್ಯಾಯವಾದಿಯಾಗಿದ್ದನು ರಾಜ ನೃಪತುಂಗ, ನಂತರ ಮತ್ತೆ ಪ್ರಜೆಗಳ ಕೂಗಿನ ಮೇರೆಗೆ ಶಿಕ್ಷೆಯನ್ನು ಹಿಂಪಡೆದನು. ಹೊಯ್ಸಳರ ಪ್ರಖ್ಯಾತ ದೊರೆ ವಿಷ್ಣುವರ್ಧನನು ಗರುಡ ಸೈನ್ಯ ಪಡೆಯನ್ನು ಕಟ್ಟಿ ಚೋಳರಿಂದ ನಮ್ಮನ್ನು ರಕ್ಷಿಸಿದನು. ಗಂಡುಗಲಿ ಕುಮಾರರಾಮನು ಮೊಘಲ್ ದೊರೆಗಳ ಆಡಂಬರಕ್ಕೆ ನಮ್ಮ ಶ್ರಮದ ಕರವನ್ನು ನೀಡುವುದು ಸಲ್ಲದೆಂದು ಅನ್ಯಾಯದ ವಿರುದ್ಧ ಸಿಡಿದೆದ್ದು ಎರಡೆರಡು ಬಾರಿ ತುಘಲಕ್ ಸೈನ್ಯವನ್ನು ಪರಾಭವಗೊಳಿಸಿದನು ಹಾಗೂ ವಿಜಯನಗರ ಸಾಮ್ರಜ್ಯ ಸ್ಥಾಪನೆಗೆ ಪ್ರೇರಣೆಯಾದನು.
ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀಕೃಷ್ಣದೇವರಾಯನು ತನ್ನ ಆಡಳಿತ ಕಾಲದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತೆ ನಿರ್ಮಿಸಿದನು. ಚಿನ್ನ, ರತ್ನ, ವಜ್ರ, ವೈಢೂರ್ಯಗಳು ರಸ್ತೆಗಳಲ್ಲಿ ಮಾರಾಟವಾಗುತ್ತಿತ್ತು. ಹಿಂದವಿಸ್ವರಾಜ್ಯಸಾಮ್ರಾಟ್ ಶಿವಾಜಿ ಮಹಾರಾಜರಿಗೆ ಪ್ರೇರಣೆ ನೀಡಿದ್ದು ಇದೇ ವಿಜಯನಗರ ಸಾಮ್ರಾಜ್ಯ. ಮೈಸೂರು ಒಡೆಯರು ಪ್ರಜೆಗಳಿಗಾಗಿ ತಮ್ಮ ಮನೆತನದ ಸಂಪತ್ತನ್ನು ಅಡಕ್ಕಿಟ್ಟು ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸಲು ಕಾರಣರಾದರು. ರಾಣಿ ಅಬ್ಬಕ್ಕಾದೇವಿಯು ಕಡಲತೀರದಲ್ಲೇ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದಳು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಆಲೂರು ವೆಂಕಟರಾಯ, ಹರ್ಡೇಕರ್ ಮಂಜಪ್ಪ, ಸದಾಶಿವರಾವ್ ಮುಂತಾದ ವೀರಸ್ವಾತಂತ್ರ್ಯ ಸೇನಾನಿಗಳು ಬ್ರಿಟಿಷರ ದಬ್ಬಾಳಿಕೆಗೆ ಎದೆಗುಂದದೆ ದಿಟ್ಟ ಹೋರಾಟ ಮಾಡಿ ನಮ್ಮ ರಕ್ಷಣೆ ಮಾಡಿದರು.ಇಂತಹ ಸಾಹಸಿ ನಾಡಿನಲ್ಲಿ ಜನಿಸಿರುವುದಕ್ಕೆ ಪರಾಕ್ರಮದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು.
ಹಳೇಬೀಡು, ಬೇಲೂರು, ಪಟ್ಟದಕಲ್ಲು, ಐಹೊಳೆ, ಹಂಪೆ, ಮೈಸೂರು ಅರಮನೆ ಇಂತಹ ಶ್ರೇಷ್ಠ ವಾಸ್ತುಶಿಲ್ಪ ಕಲೆಯಿರುವ ನಾಡಿನಲ್ಲಿ ಜನಿಸಿರುವುದಕ್ಕೆ ಹೆಮ್ಮೆಯಿಂದ ಹೇಳಿಕೊಳ್ಳಿ ನಾವು ಕನ್ನಡಿಗರು. ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಕಾಳಿದಾಸ , ಕುವೆಂಪು, ಬೇಂದ್ರೆಯವರಂತಹ ಹಲವಾರು ಕವಿರತ್ನರು ಬೆಳಗಿದಂತಹ ನಾಡಿನಲ್ಲಿ ಜನಿಸಿರುವುದಕ್ಕೆ ಮನಃಪೂರ್ವಕವಾಗಿ ಹೇಳಿಕೊಳ್ಳಿ ನಾವು ಕನ್ನಡಿಗರು. ಕೃಷ್ಣೆ, ಕಾವೇರಿ, ತುಂಗಭದ್ರ, ನೇತ್ರಾವತಿ, ಶರಾವತಿ, ಮಲಪ್ರಭದಂತಹ ಪವಿತ್ರನದಿಗಳು ಹರಿಯುವಂತಹ ನಾಡಿನಲ್ಲಿ ಜನಿಸಿರುವುದಕ್ಕೆ ಹೃತ್ಪೂರ್ವಕವಾಗಿ ಹೇಳಿಕೊಳ್ಳಿ ನಾವು ಕನ್ನಡಿಗರು. ಸಹ್ಯಾದ್ರಿ ಬೆಟ್ಟಗಳು, ಜೋಗ ಜಲಪಾತ, ಗಗನ ಚುಕ್ಕಿ-ಭರ ಚುಕ್ಕಿಯಂತಹ ಸುಂದರತಾಣಗಳಿರುವ ನಾಡಿನಲ್ಲಿ ಜನಿಸಿರುವುದಕ್ಕೆ ಗರ್ವದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು.
ಪರಶುರಾಮರು ತಪಸ್ಸು ಮಾಡಿದ್ದು ಸಹ್ಯಾದ್ರಿ ಬೆಟ್ಟದಲ್ಲಿ. ಋಷಿ ಅಗಸ್ತ್ಯರು ಕಾವೇರಿಯನ್ನು ಧರೆಗಿಳಿಸಿದ್ದು ಮತ್ತು ಆ ಕಾವೇರಿ ಜೀವನದಿಯಾಗಿ ಹರಿಯುತ್ತಿರುವುದು ಇದೇ ನಾಡಿನಲ್ಲಿ. ಶ್ರೀರಾಮನಿಗೆ ಸೀತಾಮಾತೆಯನ್ನು ಹುಡುಕಿಕೊಟ್ಟ ಭಜರಂಗ ಬಲಿ ಜನಿಸಿದ್ದು ನಮ್ಮ ರಾಜ್ಯದ ಕಿಷ್ಕಿಂಧೆಯಲ್ಲಿ. ಶಬರಿ ಶ್ರೀರಾಮನಿಗಾಗಿ ಕಾದು ಸೇವೆ ಮಾಡಿದ ಮತಂಗಾಶ್ರಮವು ಇದ್ದದ್ದು ನಮ್ಮ ನಾಡಿನ ಶಬರಿಕೊಳ್ಳದಲ್ಲೆ. ಸೀತೆ, ಲವ-ಕುಶರು ಇದ್ದ ವಾಲ್ಮೀಕಿ ಆಶ್ರಮವು ಇದ್ದದ್ದು ನಮ್ಮ ರಾಜ್ಯದ ಅವನಿಬೆಟ್ಟದಲ್ಲೆ. ರಾವಣನ ಕೈಯಿಂದ ಆತ್ಮಲಿಂಗವನ್ನು ಪಡೆದುಕೊಂಡ ಗಣಪತಿಯು ಅದನ್ನು ಪ್ರತಿಷ್ಠಾಪನೆ ಮಾಡಿದ್ದು ನಮ್ಮ ನಾಡಿನ ಗೋಕರ್ಣದಲ್ಲೆ. ಪಾಂಡವರಿಗೆ ಪ್ರಪ್ರಥಮವಾಗಿ ಹೆಚ್ಚು ಕೀರ್ತಿಯನ್ನು ತಂದುಕೊಟ್ಟ ಹಿಡಿಂಬವಧೆ, ಬಕಾಸುರಸಂಹಾರ ನಡೆದದ್ದು ನಮ್ಮ ರಾಜ್ಯದ ದುರ್ಗ ಹಾಗೂ ಮಾಲೂರು ಎಂಬ ಸ್ಥಳಗಳಲ್ಲೆ. ಈ ರೀತಿ ಹಲವಾರು ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನಲೆಯ ಸ್ಥಳಗಳಿಗೆ ನಮ್ಮ ಶ್ರೀಗಂಧದ ನಾಡು ಸಾಕ್ಷಿಯಾಗಿ ನಿಂತಿದೆ. ಈ ನಾಡಿನ ಭವಿಷ್ಯದ ಪ್ರಜೆಗಳು ಎಂದೆಂದಿಗೂ ಕನ್ನಡದ ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂದರೆ ನಮ್ಮ ಶ್ರೇಷ್ಠ ಪರಂಪರೆಯನ್ನು ಅವರಿಗೆ ತಿಳಿಸಲೇಬೇಕು. ಕನ್ನಡದ ಬಗ್ಗೆ ಮಕ್ಕಳಿಗೆ ಅಭಿಮಾನವಿಲ್ಲ ಎಂದರೆ ಅದರ ಅರ್ಥ ಅವರಿಗೆ ಈ ಶ್ರೇಷ್ಠ ಪರಂಪರೆ ತಿಳಿದಿಲ್ಲ ಎಂದು. ಯಾವ ಕರ್ನಾಟಕ ರಾಜ್ಯವು ಸ್ವಾಭಿಮಾನದಿಂದ ನಿರ್ಮಾಣವಾಯಿತೊ ಅದೇ ಸ್ವಾಭಿಮಾನದಿಂದ ಈ ಪರಂಪರೆ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment