ಗಾಯಗೊಂಡ ಸಿಂಹದ ಘರ್ಜನೆ ಮತ್ತಷ್ಟು ಜೋರಾಗುತ್ತಾ?
ಗಾಯಗೊಂಡ ಸಿಂಹದ ಘರ್ಜನೆ ಮತ್ತಷ್ಟು ಜೋರಾಗುತ್ತಾ?
'ಒಬ್ಬ ಸಾಮಾನ್ಯ ಬಡ ಕುಟುಂಬದ ಪ್ರತಿಭಾವಂತ, ಯೋಗ್ಯವಂತ ಹುಡುಗನ ಮೇಲೆ ನಂಬಿಕೆಯಿಟ್ಟು ದೊಡ್ಡ ಸ್ಥಾನವನ್ನು ನೀಡಿದರೆ ಆತನು ಹೇಗೆ ಅದರ ಸದುಪಯೋಗ ಮಾಡಿಕೊಂಡು ಉತ್ತಮ ಕೆಲಸಗಳನ್ನು ಮಾಡುತ್ತಾನೆ ಎಂದು ನಾನು ನಿರೂಪಿಸಿದರೆ ಭವಿಷ್ಯದಲ್ಲಿ ಮತ್ತೆ ನನ್ನಂತೆಯೇ ಮತ್ತೊಬ್ಬ ಹುಡುಗನಿಗೆ ಅವಕಾಶ ನೀಡುತ್ತಾರೆ ಎಂಬ ಒಂದೇ ಒಂದು ಕಾರಣಕ್ಕಾಗಿ ನಾನು ಸಂಪೂರ್ಣ ಶ್ರಮವಹಿಸಿ ಕೆಲಸ ಮಾಡಿದೆ' ಎನ್ನುತ್ತಾರೆ ಈ ಬಾರಿಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತರಾದ ಪ್ರತಾಪ್ ಸಿಂಹ ಅವರು. ಯಾವುದೇ ಕ್ಷೇತ್ರದಲ್ಲಾಗಲಿ ಗಾಡ್ ಫಾದರ್ ಇಲ್ಲದವರು, ಸ್ವಂತ ಯೋಗ್ಯತೆಯ ಮೇಲೆ ಸಾಮ್ರಾಜ್ಯ ಕಟ್ಟಲು ಬಂದವರನ್ನು ಕೆಳಗೆ ಬೀಳಿಸಲು ಹಲವಾರು ಜನ ಕಾದು ಕುಳಿತಿರುತ್ತಾರೆ. ಇದೀಗ ಜನಪ್ರಿಯ, ಕ್ರಿಯಾಶೀಲ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ಕೇಸ್ ನಲ್ಲೂ ಇದೇ ಆಗಿದೆ. ಸ್ವಂತ ಬಲದಿಂದ ಬೆಳೆಯುತ್ತಿದ್ದ ಯುವ ನಾಯಕ ಸಿಂಹ ಅವರು ಮತ್ತಷ್ಟು ಎತ್ತರಕ್ಕೇರಿ ಚಿಕ್ಕ ಮೋದಿಯಾಗಿ ಹೊರ ಹೊಮ್ಮಿ ತಮಗೆಲ್ಲಾ ಸಂಕಟಪ್ರಾಯವಾಗುವುದು ನಮ್ಮ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ಮುಖಂಡರಿಗೂ ಇಷ್ಟವಿರಲಿಲ್ಲವೆಂದು ಕಾಣುತ್ತದೆ. ಆದ್ದರಿಂದ ಹೀಗೆ ಅಗಾಧ ಜನಬೆಂಬಲ, ಭರಪೂರ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಹೊಂದಿರುವ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಮೈಸೂರು ಮಹಾರಾಜರಾದ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ಅತ್ಯಂತ ಖುಷಿಯ ವಿಚಾರ. ಇದರಿಂದ ಮೈಸೂರು ಮಹಾರಾಜರೇ ಸಮರ ಸೇನಾನಿಯಾಗಿ ಮುಂದೆ ನಿಂತು ಮೋದೀಜಿ ಅವರ ಪರ ಹೋರಾಟ ಮಾಡುತ್ತಾರೆ. ಆದರೆ ಮೈಸೂರಿನ ಹೊರತಾಗಿಯೂ ಹಲವಾರು ಕ್ಷೇತ್ರಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಸಿಂಹ ಅವರಿಗೆ ಪರ್ಯಾಯ ಕ್ಷೇತ್ರದ ಟಿಕೆಟ್ ನೀಡದೆ ರಾಯಲ್ ಚಾಲೆಂಜ್ ನೀಡಿದ್ದಾರೆ.
ಇಂದಿಗೂ ಪ್ರಧಾನಿ ಮೋದೀಜಿ ಅವರಿಗೆ ಕೋಟ್ಯಾನುಕೋಟಿ ಜನರು ಅತ್ಯಂತ ಪ್ರೀತಿಯಿಂದ ಬೆಂಬಲವನ್ನು ನೀಡುತ್ತಿದ್ದಾರೆಂದರೆ ಅದಕ್ಕೆ ಅಭಿವೃದ್ಧಿಯೊಂದೇ ಕಾರಣವಲ್ಲ. ಅದಕ್ಕೆ ಪ್ರಮುಖ ಕಾರಣ ಮೋದೀಜಿ ಅವರು ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಯಾವುದೇ ಗಾಡ್ ಫಾದರ್ ಇಲ್ಲದಿದ್ದರೂ ಸ್ವಸಾಮರ್ಥ್ಯದಿಂದ ಗೆದ್ದು ಬಂದಿದ್ದಾರೆ ಎಂದು! ಇಂದು ರಾಜಕಾರಣ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಆಗಬೇಕಿರುವ ಮುಖ್ಯ ಬೆಳವಣಿಗೆ ಇದೇ. ಆದರೆ ಈಗ ಮೋದಿ ಅವರಂತೆ ಗಾಡ್ ಫಾದರ್ ಇಲ್ಲದೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಂಹ ಅವರಿಗೆ ಟಿಕೆಟ್ ನೀಡದಿರುವುದು ಇನ್ನು ಬಿಜೆಪಿಯಲ್ಲೂ ಕಾಂಗ್ರೆಸ್ ನಂತೆ ಸಮರ್ಥರಿಗೆ ಖೆಡ್ಡಾ ತೋಡುವ ಕಥೆಗಳನ್ನು ಕೇಳಬೇಕಾಗುವುದೋ ಏನೋ? ಎಂದೆನಿಸುತ್ತಿದೆ. ಸಾಮಾನ್ಯ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಅವರನ್ನು ಎರಡೆರಡು ಬಾರಿ ಎಂ.ಪಿ ಮಾಡಿದ್ದು ಹಾಗೂ ಈ ರೀತಿಯ ಸಾಹಸವನ್ನು ಮಾಡುವುದು ಬಿಜೆಪಿಯೇ ಎಂದು ನಮಗೆ ತಿಳಿದಿದೆ. ಹಾಗೆಂದ ಮಾತ್ರಕ್ಕೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮೇಲೆಯೂ, ಯಾವುದೇ ಸರಿಯಾದ ಕಾರಣವಿಲ್ಲದೆ ಸಾರಾಸಗಟಾಗಿ ಆಘಾತಕಾರಿಯಾಗಿ ಹೀಗೆ ನಿರ್ಧಾರ ತೆಗೆದುಕೊಂಡಿರುವುದನ್ನು ಪ್ರಶ್ನಿಸದೆ ಸುಮ್ಮನೆ ಅನ್ಯಾಯವನ್ನು ನೋಡುತ್ತಾ ಕೂರುತ್ತೇವೆಂದಲ್ಲ. ಕೆಲವರು ಸಕಾರಾತ್ಮಕವಾಗಿ ಸಿಂಹ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆತರುತ್ತಾರೆ, ಸಂಘಟನಾ ವಲಯದಲ್ಲಿ ಕಾರ್ಯ ನೀಡುತ್ತಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದೆಲ್ಲಾ ಸಂಭವ ಎಂದೆನಿಸುತ್ತಿಲ್ಲ, ಸಂಭಾವ್ಯಗಳು ಗೋಚರಿಸುತ್ತಿಲ್ಲ, ನಮ್ಮ ಕಣ್ಣಿಗೆ ಕಾಣುತ್ತಿರುವುದು ಅವರಿಗೆ ಆಗಿರುವ ಅನ್ಯಾಯ ಮಾತ್ರ.
ಈ ಬೆತ್ತಲೆ ಜಗತ್ತಿನಲ್ಲಿ ಮುಖವಾಡಕ್ಕೆ ಮಾತ್ರ ಬೆಲೆ. ಸ್ವತಂತ್ರವಾಗಿ, ರಾಜಾರೋಷವಾಗಿ, ನೇರವಾಗಿದ್ದುಕೊಂಡು ಬದುಕುವ 'ಸಿಂಹ'ಕ್ಕೆ ಬೆಲೆಯಿಲ್ಲ. ಸುಮ್ಮನೆ ತಮ್ಮ ಪಾಡಿಗೆ ತಾವಿದ್ದು, ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಎಲ್ಲರಿಗೂ ಸೆಲ್ಯೂಟ್ ಹೊಡೆಯುತ್ತಾ, ಅನ್ಯಾಯದ ವಿರುದ್ಧ ಧ್ವನಿಯೆತ್ತದೆ ನೆಮ್ಮದಿಯಿಂದ ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಿದ ಸಂಸದರಿಗೆಲ್ಲಾ ಟಿಕೆಟ್ ಸಿಕ್ಕಿದೆ. ಈ ಸಂಸದರು ನಮಗೆ ಬೇಡ ಎಂದು ಗೋ ಬ್ಯಾಕ್ ಅಭಿಯಾನವನ್ನು ಮಾಡಿಸಿಕೊಂಡ ಸಂಸದರಿಗೂ ಟಿಕೆಟ್ ಸಿಕ್ಕಿದೆ. ಆದರೆ ಸವಾಲುಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಶಕ್ತಿ ಮೀರಿ ಕೆಲಸ ಕಾರ್ಯಗಳಲ್ಲಿ ತೊಡಗುತ್ತಿದ್ದ, ಹಿಂದುತ್ವ-ರಾಷ್ಟ್ರೀಯತೆಯ ವಿಚಾರದಲ್ಲಿ ಸದಾ ಮುಂದೆ ಬಂದು ಗಟ್ಟಿ ಧ್ವನಿಯಾಗುತ್ತಿದ್ದ, ಮೈಸೂರಿನಲ್ಲಿ ಶುರುವಾಗಿದ್ದ ಮಹಿಷ ದಸರದಂತಹ ಅನಾಚಾರಗಳ ವಿರುದ್ಧ ಏಕಾಂಗಿಯಾಗಿ ಸಮರ ಸಾರಿದ ತಾಯಿ ಚಾಮುಂಡೇಶ್ವರಿಯ ವಾಹನವೇ ಆಗಿರುವ ಸಂಸದ 'ಸಿಂಹ'ಕ್ಕೆ ಟಿಕೆಟ್ ತಪ್ಪಿದೆ ಅಥವಾ ತಪ್ಪಿಸಲಾಗಿದೆ. ಪತ್ರಕರ್ತರಾಗಿದ್ದಾಗಿನಿಂದಲೂ ನೇರವಂತಿಕೆ, ನಿಷ್ಠುರತೆಗಳಿಂದಲೇ ಹೆಸರುವಾಸಿಯಾಗಿದ್ದ ಸಿಂಹ ಅವರು ರಾಜಕೀಯದಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದರು. ಇದು ಅವರ ರಾಜಕೀಯ ಅನುಭವದ ಕೊರತೆಯಿಂದ ಆದದ್ದಲ್ಲ, ಅವರ ವ್ಯಕ್ತಿತ್ವವೇ ಹಾಗಿದೆ. ಸ್ವತಃ ಅವರ ತಂದೆ ಹಾಸನದಲ್ಲಿ ಜನಸಂಘದಿಂದ ಗೆದ್ದು 10 ವರ್ಷಗಳ ಕಾಲ ಪಂಚಾಯಿತಿ ಅಧ್ಯಕ್ಷರಾಗಿದ್ದರು.
ಸಿಂಹ ಮತ್ತು ಅವರ ಕ್ಷೇತ್ರದ ಶಾಸಕರ ನಡುವೆ ಹಾಗೂ ಕೆಲವು ರಾಜ್ಯ ನಾಯಕರ ನಡುವೆ ಸಂಬಂಧ ಸರಿಯಿಲ್ಲದ ಕಾರಣ ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಚರ್ಚೆ ಆಗುತ್ತಿದೆ. ಸಿಂಹ ಅವರು ಯಾರಿಗೂ ಸಲಾಂ ಹೊಡೆಯಲಿಲ್ಲ, ಸುಲಭ ರಾಜಕಾರಣದ ಹಾದಿಯನ್ನು ತುಳಿಯಲಿಲ್ಲ. ಯಾವುದೇ ತಪ್ಪುಗಳನ್ನು ಮಾಡದೆ ಪ್ರಾಮಾಣಿಕರಾಗಿರುವವರು ಮಾತ್ರ ಇಷ್ಟೊಂದು ಧೈರ್ಯವಾಗಿ, ಗಟ್ಟಿಯಾಗಿ ಮಾತನಾಡಲು ಸಾಧ್ಯ. ಇದೇ ಧೈರ್ಯದಿಂದಲೇ ಸಿಂಹ ಅವರು ಮೈಸೂರು ಮಹಾರಾಜರು ಸಂಸದರಾದರೆ ರಾಜಮನೆತನದ ಹಾಗೂ ಸರ್ಕಾರದ ನಡುವೆ ನಡೆಯುತ್ತಿರುವ ಕೋರ್ಟಿನ ವ್ಯಾಜ್ಯಗಳನ್ನು ಎದುರಿಸಲು ಹೇಗೆಲ್ಲಾ ತೊಂದರೆಯಾಗುವುದು ಎಂದು ವಿವರವಾಗಿ ಹೇಳಿದ್ದು.
ಇಡೀ ಪ್ರಪಂಚದಲ್ಲೇ ಜನಪ್ರಿಯ ನಾಯಕರಾದ ನಮ್ಮ ಪ್ರಧಾನಿಯವರೇನು ಕಡಿಮೆ ಅಗ್ನಿ ಪರೀಕ್ಷೆಗಳನ್ನು ಎದುರಿಸಿಲ್ಲ. ಬಡ ಕುಟುಂಬದಿಂದ ಆರಂಭವಾದ ಅವರ ಪರಿಶ್ರಮದ ಯಾತ್ರೆಯನ್ನು ನಿಲ್ಲಿಸಲು ಅನೇಕ ಕಾಣದ ಕೈಗಳು ಪ್ರಯತ್ನಿಸಿದವು. ಸಾಮಾನ್ಯ ಕುಟುಂಬದಿಂದ ಬರುವವರೆಲ್ಲರೂ ಈಗ ಪ್ರತಾಪ್ ಸಿಂಹ ಅವರಿಗೆ ಬಂದಿರುವಂತೆ ಅಗ್ನಿ ಪರೀಕ್ಷೆಗಳನ್ನು ಎದುರಿಸಲೇಬೇಕು. ಸಿಂಹ ಅವರು ಪತ್ರಕರ್ತರಾಗಿದ್ದಾಗಲೇ ಜೀವ ಬೆದರಿಕೆಯ, ಅನ್ಯ ಪತ್ರಕರ್ತರ ಮಾನಸಿಕ ಕಿರುಕುಳದಂತಹ ಭಯಂಕರ ಪರೀಕ್ಷೆಗಳನ್ನು ಎದುರಿಸಿ ಗೆದ್ದಿದ್ದಾರೆ. ಇದೀಗ ಬಂದಿರುವ ಪರೀಕ್ಷೆಯನ್ನು ಎದುರಿಸಲು ಅವರಿಗೆ ಲಕ್ಷಾಂತರ ಅಭಿಮಾನಿಗಳ ಹಾರೈಕೆ, ಆಶೀರ್ವಾದಗಳು ಶಕ್ತಿ ತುಂಬುತ್ತಿದೆ. ಪ್ರತಿಭಾವಂತರಾಗಿರುವ ಸಿಂಹ ಅವರು ಈ ಪರೀಕ್ಷೆಯನ್ನು ಗೆದ್ದು ಮತ್ತಷ್ಟು ಮಗದಷ್ಟು ಎತ್ತರಕ್ಕೆ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಿಂಹ ಸರ್ ನೀವೇ ಹೇಳಿರುವಂತೆ ದೇದೀಪ್ಯಮಾನವಾಗಿ ಪ್ರಕಾಶಿಸುವ ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ, ಇನ್ನು ಮನುಷ್ಯರು ಯಾವ ಲೆಕ್ಕ? ಸಿಂಹ ಯಾವಾಗಲೂ ಕಾಡಿನ ರಾಜ. ನಿಮಗೆ ಅಧಿಕಾರವಿರಲಿ ಅಥವಾ ಇಲ್ಲದಿರಲಿ, ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ಏಕೆಂದರೆ ನಾವು ಇಷ್ಟಪಟ್ಟಿದ್ದು ನಿಮ್ಮ ಸ್ಥಾನವನ್ನಲ್ಲ, ನಿಮ್ಮ ವ್ಯಕ್ತಿತ್ವವನ್ನು!
~ಸಿಂಚನ.ಎಂ.ಕೆ ಮಂಡ್ಯ
Comments
Post a Comment