ಕಳಂಕದ ಹಣೆಪಟ್ಟಿಗಳೆಲ್ಲಾ ರಾಜಕಾರಣಕ್ಕೆ ಮಾತ್ರ, ಏಕೆ?

ಕಳಂಕದ ಹಣೆಪಟ್ಟಿಗಳೆಲ್ಲಾ ರಾಜಕಾರಣಕ್ಕೆ ಮಾತ್ರ, ಏಕೆ?
2019ರ ಲೋಕಸಭೆ ಚುನಾವಣೆ ಮುಗಿದು, ಬಿರುಗಾಳಿ - ಸುನಾಮಿಗಳ ಆರ್ಭಟವೆಲ್ಲಾ ಕೊನೆಗೊಂಡು ಶಾಂತವಾಗಿದ್ದ ಸಮಯ. ಆದರೆ ಆ ಸಮಯದಲ್ಲೇ ಮತ್ತೆ ಬಿರುಗಾಳಿಯಂತಹ ಸುದ್ದಿ ಮೇಲೆದ್ದು ಕನ್ನಡಿಗರ ಮೇಲೆ ಅಪ್ಪಳಿಸಿತು. ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತಿಯಾದ ಖಡಕ್ ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಧಿಡೀರ್ ರಾಜೀನಾಮೆ ನೀಡಿದರು. ಅವರು ತಮ್ಮ ಪೊಲೀಸ್ ಕೆಲಸದ ಕ್ಷೇತ್ರದಲ್ಲಿ ಯಾವ ರೀತಿಯ ಛಾಪು ಮೂಡಿಸಿದ್ದರೆಂದರೆ ರಾಜೀನಾಮೆ ಕೊಟ್ಟ ನಂತರವೂ ಜನರಿಗೆ ಅವರನ್ನು ಬಿಟ್ಟು ಕೊಡಲು ಇಷ್ಟವಿರಲಿಲ್ಲ. ಅವರ ಈ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ 'ಸಿವಿಲ್ ಸರ್ವಿಸ್ ಅಧಿಕಾರಿಗಿಂತಲೂ ಒಬ್ಬ ಸಾಮಾನ್ಯನಿಗೆ ನಮ್ಮ ದೇಶದಲ್ಲಿ ಹೆಚ್ಚಿನ ಪವರ್ ಇದೆ, ಮುಂದಿನ ದಿನಗಳಲ್ಲಿ ಸಾಮಾನ್ಯನಾಗಿಯೇ ಹೆಚ್ಚು ಜನಸೇವೆ ಮಾಡುತ್ತೇನೆಂದು' ಉತ್ತರಿಸಿದರು. ಹಾಗಾದರೆ ಆ ಸಾಮಾನ್ಯ ವ್ಯಕ್ತಿಯ ಪವರ್ ಏನು ಎಂದು ಹುಡುಕಲು ಹೊರಟರೆ ಸಿಗುವುದು ಒಂದೇ ಚಿತ್ರಣ, ಅದುವೇ ಗುಜರಾತಿನ ರೈಲ್ವೆ ಸ್ಟೇಷನ್ ನಲ್ಲಿ ಟೀ ಮಾರುತ್ತಿದ್ದ ಒಬ್ಬ ಸಾಮಾನ್ಯ ಕುಟುಂಬದ ಚಾಯ್ ವಾಲಾ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನ ಮಂತ್ರಿ ಆಗಿದ್ದು!

ರಾಜಕಾರಣ ಎಂದರೆ ಸಾಕು, ಮೊದಲು ನಮ್ಮ ತಲೆಗೆ ಬರುವುದೇ ಭ್ರಷ್ಟಾಚಾರ, ಶ್ರೀಮಂತರ ವ್ಯವಹಾರ, ಕುದುರೆ ವ್ಯಾಪಾರ ಹಾಗೂ ಸಿನಿಮಾಗಳಲ್ಲಿ ತೋರಿಸುವ ರಾಕ್ಷಸರ ಮುಖವಾಡ. ಇದರಂತೆ ಬೇರೆ ಕ್ಷೇತ್ರಗಳಲ್ಲಿ ಸಮಸ್ಯೆಗಳಿದ್ದರೂ ಅದು ರಾಜಕಾರಣದಂತೆ ಹೆಚ್ಚು ಮುನ್ನೆಲೆಗೆ ಬರುವುದಿಲ್ಲ. ಏಕೆಂದರೆ, ರಾಜಕಾರಣ ಕ್ಷೇತ್ರದಲ್ಲಿರುವವರು ಪ್ರಮುಖವಾದ ಸಂವಿಧಾನದ ಶಾಸಕಾಂಗ, ಕಾರ್ಯಾಂಗಗಳಲ್ಲಿ ಕಾರ್ಯ ನಿರ್ವಹಿಸುವುದರೊಂದಿಗೆ ಆಗಿಂದಾಗ್ಗೆ ನಡೆಯುವ ಚುನಾವಣೆ ಎಂಬ ಅಗ್ನಿ ಪರೀಕ್ಷೆಯಲ್ಲಿ ನಿಂತು ಸವಾಲುಗಳನ್ನೆಲ್ಲಾ ಎದುರಿಸುತ್ತಾ, ಉದ್ವಿಗ್ನರಾಗದೆ ಸಮಚಿತ್ತದಿಂದ ಪ್ರತಿಕ್ರಿಯಿಸಿ ಮತಗಳನ್ನು ಗಳಿಸಿ ಗೆಲ್ಲಬೇಕಾದವರು. ಸಮಾಜದಲ್ಲಿ ರಾಜಕಾರಣ ಎಂದರೆ ಸಾಕು, ದೂರ ಓಡಿ ಹೋಗುವವರೇ ಹೆಚ್ಚು. ಬಹುಕಾಲದಿಂದ ರಾಜಕಾರಣ ಕ್ಷೇತ್ರವನ್ನು ಎಷ್ಟರಮಟ್ಟಿಗೆ ಹದಗೆಡಿಸಲಾಗಿದೆ ಎಂದರೆ ಇಂದು ಅದರ ವಾಸ್ತವ ಸ್ವರೂಪವೇ ತಿಳಿಯಲಾಗದಿರುವಷ್ಟು. ಹೇಗೆ ಒಂದು ಚಿನ್ನವು ಅರಮನೆಯಲ್ಲಿ ರಾರಾಜಿಸುತ್ತಿದ್ದರೂ, ಬೀದಿಯಲ್ಲಿ ಬಿದ್ದು ಹೋಗಿದ್ದರೂ ಅದರ ಬೆಲೆ ಬದಲಾಗುವುದಿಲ್ಲವೊ ಹಾಗೆ ಇಂದು ರಾಜಕಾರಣವು ಯಾವ ಸ್ಥಿತಿಯಲ್ಲಿದ್ದರೂ ಅದರ ಬೆಲೆ ಮಾತ್ರ ಗರಿಷ್ಠವೇ ಆಗಿರುತ್ತದೆ. ಒಂದು ರಾಷ್ಟ್ರವನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಬಹುದಾದ ಮತ್ತು ಅಧೋಗತಿಗೆ ಇಳಿಸಬಹುದಾದ ಬ್ರಹ್ಮಾಸ್ತ್ರವೇ ರಾಜಕಾರಣ. ಇದನ್ನು 2014-2024 ಹಾಗೂ 2004-2014ರ ದಶಕಗಳ ವಿವಿಧ ರಾಜಕೀಯ ನಾಯಕರ ಆಡಳಿತದಲ್ಲಿ ನಾವೇ ಸಾಕ್ಷಾತ್ ಅನುಭವಿಸಿದ್ದೇವೆ. ಯಾವುದೇ ವಸ್ತುವಿನ ಬೆಲೆ ತಿಳಿಯುವುದು ಅದನ್ನು ಕಳೆದುಕೊಂಡಾಗ ಮತ್ತು ಅದನ್ನು ಮರಳಿ ಪಡೆದಾಗ ಎಂದು ಹೇಳುತ್ತಾರೆ. ಮೊಘಲರು, ಪೋರ್ಚುಗೀಸರು, ಬ್ರಿಟಿಷರು, ಫ್ರೆಂಚರು ಹೀಗೆ ಒಬ್ಬರ ನಂತರ ಮತ್ತೊಬ್ಬರಂತೆ ಹಲವಾರು ವಿದೇಶಿಗರ ಆಕ್ರಮಣಕ್ಕೆ ತುತ್ತಾಗಿ ರಾಜಕೀಯ ಅಧಿಕಾರವನ್ನು ಕಳೆದುಕೊಂಡು ಬಹುತೇಕ ಸಾವಿರ ವರ್ಷಗಳ ಗುಲಾಮಗಿರಿಯ ನೋವನ್ನು ಅನುಭವಿಸಿದ ನಮಗಲ್ಲದೆ ಮತ್ತ್ಯಾರಿಗೆ ಅದರ ಬೆಲೆ ತಿಳಿದಿರಲು ಸಾಧ್ಯ? ಇದರಿಂದಲೇ ಸ್ವಾತಂತ್ರ್ಯವೀರ ಸಾವರ್ಕರ್ ಅವರು ಹೇಳಿದ್ದು "ರಾಜಕಾರಣವನ್ನು ಹಿಂದುತ್ವಮಯಗೊಳಿಸಿ, ಹಿಂದೂ ಸಮಾಜವನ್ನು ಕ್ಷಾತ್ರತೇಜಗೊಳಿಸಿ" ಎಂದು. ಆದ್ದರಿಂದಲೇ ಶತ-ಶತಮಾನಗಳೇ ಕಳೆದರೂ ಇಂದಿಗೂ ಛತ್ರಪತಿ ಶಿವಾಜಿ, ಮಹಾರಾಣ ಪ್ರತಾಪ್, ಶ್ರೀ ಕೃಷ್ಣ ದೇವರಾಯ, ಗುರು ಗೋವಿಂದ ಸಿಂಹ ಅವರ ಬಗ್ಗೆ ಹೆಚ್ಚು ಕ್ರೇಜ್ ಇರುವುದು.

ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ನಮ್ಮ ರಾಷ್ಟ್ರದಲ್ಲಿ ಪ್ರಜೆಗಳೇ ಪ್ರಭುಗಳು, ಅವರಿಂದ ಆರಿಸಲ್ಪಟ್ಟ ಪ್ರಜಾಪ್ರತಿನಿಧಿಗಳೇ ಶಕ್ತಿಶಾಲಿಗಳು ಎಂಬುದನ್ನು ತಮ್ಮ ಗಟ್ಟಿ ನಿರ್ಧಾರಗಳ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು. ರಾಜಕಾರಣ ಎಂದರೆ ತಾತ್ಸಾರ ಮಾಡುತ್ತಿದ್ದ ಸಮಾಜದ ಪ್ರಮುಖ ಭಾಗವಾದ ಯುವ ಜನತೆಗೆ ಅದರ ಮೇಲೆ ವಿಶೇಷ ಆಸಕ್ತಿ ಬರುವಂತೆ ಮಾಡಿದ ಸಂಪೂರ್ಣ ಕೀರ್ತಿ, ಶ್ರೇಯಸ್ಸು ಅವರಿಗೇ ಸಲ್ಲಬೇಕು. ನೋಟುಗಳ ಅಮಾನ್ಯೀಕರಣ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಟ್ರಿಪಲ್ ತಲಾಖ್ ನಿಷೇಧ, ಆರ್ಟಿಕಲ್ 370ರ ರದ್ಧತಿ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಸಿಎಎ ಹೀಗೆ ಮೋದೀಜಿ ಅವರು ಮಾಡಿರುವ ಎದೆಗಾರಿಕೆಯ ಕಾರ್ಯಗಳು ವಾಸ್ತವದಲ್ಲಿ ಸಂಭವನೀಯ ಎಂದು ಬಹುತೇಕರು ಭಾವಿಸಿಯೂ ಇರಲಿಲ್ಲ. ರಾಜಕೀಯದ ಶಕ್ತಿ ಏನೆಂದು ಸಮಗ್ರವಾಗಿ ಅರಿತಿರುವ, ಅದನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುತ್ತಿರುವ ಶ್ರೇಷ್ಠ ರಾಜಕಾರಣಿಯಾದ ನಮ್ಮ ಪ್ರಧಾನಿ ಮೋದೀಜಿ ಅವರ ಕಾಲದಲ್ಲಾದರೂ ನಾವು ರಾಜಕಾರಣವನ್ನು ಸಕಾರಾತ್ಮಕವಾದ ಅದರ ನಿಜ ಸ್ವರೂಪದಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. 

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ 5 ವರ್ಷಗಳ ಬಳಿಕ ನಡೆದ ಪೊಲೀಸ್ ಪೇದೆಗಳ ನೇಮಕಾತಿ ಪರೀಕ್ಷೆಗೆ ತೆರಳಲು ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಕಾನ್ಪುರ ರೈಲ್ವೆ ಸ್ಟೇಷನ್ ಮುಂದೆ ಜಮಾಯಿಸಿದ್ದ ಲಕ್ಷಾಂತರ ಯುವಕ-ಯುವತಿಯರ ಚಿತ್ರಣ ನಮ್ಮ ದೇಶದಲ್ಲಿ ಎಷ್ಟು ಸ್ಪರ್ಧೆ ಇದೆ ಎಂಬುದನ್ನು ಮತ್ತೊಮ್ಮೆ ಜೋರಾಗಿ ನೆನಪಿಸಿತು. ಈಗ ಬಹುತೇಕ ಸರ್ಕಾರದ ನೇಮಕಾತಿಯಲ್ಲಾಗಲಿ ಅಥವಾ ಪ್ರಮುಖ ಖಾಸಗಿ ಕಂಪನಿಗಳ ನೇಮಕಾತಿಯಲ್ಲಾಗಲಿ ವಿದ್ಯಾರ್ಹತೆಯನ್ನೇ ಮೂಲ ಮಾನದಂಡವನ್ನಾಗಿರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ವಿದ್ಯಾರ್ಹತೆ ಎಂಬ ಮಾನದಂಡವೇ ಇರದ ಸಾಮಾಜಿಕವಾಗಿ ಪ್ರಜ್ಞಾವಂತರಾಗಿರುವ ಪ್ರಜೆಗಳು ಯಾರು ಬೇಕಾದರೂ ರಾಜಕಾರಣ ಕ್ಷೇತ್ರಕ್ಕೆ ಹೋಗಬಹುದಾದರೂ ಇಲ್ಲಿ ಏಕೆ ಸ್ಪರ್ಧೆ ತುಂಬಾ ಕಡಿಮೆ? ಸರ್ಕಾರಿ ಅಥವಾ ಪ್ರಮುಖ ಖಾಸಗಿ ಕಂಪನಿಗಳ ನೇಮಕಾತಿಯಲ್ಲಿ ಒಂದು ಸ್ಥಾನಕ್ಕೆ ಕಡಿಮೆಯೆಂದರೆ ಸಾವಿರಾರು ಸಂಖ್ಯೆಯ ಆಕಾಂಕ್ಷಿಗಳ ನಡುವೆ ಸ್ಪರ್ಧೆಯಿರುತ್ತದೆ. ಆದರೆ ಇವರೆಲ್ಲರನ್ನು ಒಳಗೊಂಡ ಇಡೀ ಸಮಾಜದ ಆಡಳಿತ ನಡೆಸಬೇಕಾದ ರಾಜಕಾರಣಿಯ ಒಂದು ಸ್ಥಾನಕ್ಕೆ ಹೆಚ್ಚೆಂದರೆ ನೂರರ ಸಂಖ್ಯೆಯ ಆಕಾಂಕ್ಷಿಗಳ ನಡುವೆ ಸ್ಪರ್ಧೆಯಿರುತ್ತದೆ. ಶ್ರೀಮಂತರಿಗೆ, ಪ್ರಭಾವಿಗಳಿಗೆ, ಕೆಲವು ನಿರ್ದಿಷ್ಟ ರಾಜಕೀಯ ಕುಟುಂಬಗಳಿಗೆ ಅಪ್ಪನ ಮನೆಯ ಆಸ್ತಿಯಂತೆ ಮೀಸಲು ಇರುವ ಕಾರಣ ಸಾಮಾನ್ಯರಿಗೆ ಇದು ಸಿಂಹ ಸ್ವಪ್ನವಾಗಿ ಪರಿಣಮಿಸುತ್ತದೆ. ಆದರೂ ಸಾಮಾನ್ಯರಾದ ನಾವು ರಾಜಕಾರಣದಲ್ಲಿ ಹೆಚ್ಚು ಭಾಗವಹಿಸದಿರುವ ಸಮಸ್ಯೆಗೆ ಪ್ರಭಾವಿಗಳ ಕಡೆಯೇ ಬೆಟ್ಟು ಮಾಡಿ ತೋರಿಸಿ, ನಮ್ಮದೇನೂ ತಪ್ಪಿಲ್ಲ ಎನ್ನುವ ಹಾಗಿಲ್ಲ. ಏಕೆಂದರೆ ಸಾಮಾನ್ಯರಾದ ನಾವೇ ಸರ್ಕಾರಿ ಅಥವಾ ಪ್ರಮುಖ ಖಾಸಗಿ ಕಂಪನಿಗಳ ನೇಮಕಾತಿಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಿ, ಎಷ್ಟೇ ಸಮಸ್ಯೆಗಳಿದ್ದರೂ ಮುನ್ನುಗ್ಗುತ್ತಿರುತ್ತೇವೆ. ರಾಜಕಾರಣದಲ್ಲಿ ಸರ್ಕಾರಿ ಕೆಲಸಗಳಂತೆ ಕೆಲಸದ ಭದ್ರತೆಯಿಲ್ಲದಿರುವುದು, ಆಕರ್ಷಕ ಸಂಬಳವಿಲ್ಲದಿರುವುದು ಒಂದು ಬಗೆಯ ಸಮಸ್ಯೆಯಾದರೆ ರಿಸ್ಕ್ ಫ್ಯಾಕ್ಟರ್ ಗಳು ಹೆಚ್ಚಾಗಿರುವುದು, ಕಾರ್ಯದ ಸಿದ್ಧ ಸೂತ್ರಗಳಿಲ್ಲದಿರುವುದು ಮತ್ತೊಂದು ಬಗೆಯ ಸಮಸ್ಯೆಗಳು. ಆದ್ದರಿಂದ ರಾಜಕೀಯ ಕ್ಷೇತ್ರಕ್ಕೆ ಯುವಜನತೆಯನ್ನು, ಸಮರ್ಥ ನಾಯಕರನ್ನು ಸೆಳೆಯಲು ಸಾಕಷ್ಟು ಸುಧಾರಣೆಗಳು ಜಾರಿಯಾಗಬೇಕಿದೆ.

ನಾವು ಸಾಮಾನ್ಯವರ್ಗದವರು, ನಾವು ಬದುಕು ಕಟ್ಟಿಕೊಳ್ಳಲು ಇಷ್ಟೊಂದು ಕಷ್ಟ ಪಡಬೇಕು ಎಂದು ದುಃಖಿಸಬೇಕಾದ ಅಗತ್ಯವಿಲ್ಲ. ಕಷ್ಟಪಡಲೇಬೇಕಾದ ವಿವಶತೆಯು ನಮ್ಮಲ್ಲಿ ಸಂಘರ್ಷಗಳಿಗೆ ಒಡ್ಡಿಕೊಳ್ಳುವ ಧೀರತೆಯನ್ನು ಬೆಳೆಸಿ ಶಕ್ತಿಯನ್ನು ತುಂಬುತ್ತದೆ. ನಾವು ಎದುರಿಸುತ್ತಿರುವ ಸಮಾಜಕ್ಕೆ ಕಂಟಕವಾದ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇಂದು ನಮ್ಮಲ್ಲಿ ಇಲ್ಲದಿರಬಹುದು, ಆದರೆ ನಾವು ಕಷ್ಟಪಟ್ಟು ದೊರೆತ ಅವಕಾಶಗಳ ಮೂಲಕ ಬೆಳೆದರೆ ದಶಕಗಳ ನಂತರ ಆ ಶಕ್ತಿ ಸಿಗಬಹುದೇನೋ! ಏನೇ ಆಗಲಿ ದೇಶಸೇವೆ ಮಾಡಲು ಬಯಸಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸರ್ಕಾರಿ ಕೆಲಸಗಳಿಗೆ (ಸಿವಿಲ್ ಸರ್ವಿಸ್) ಅಪ್ಲಿಕೇಶನ್ ಹಾಕುವ ನಾವು ಅದರಲ್ಲೇ ಹೆಚ್ಚು ಪ್ರಯತ್ನ ಮಾಡುತ್ತಾ ಅಮೂಲ್ಯವಾದ ಸಮಯವನ್ನು, ಶಕ್ತಿಯನ್ನು ವ್ಯಯಿಸುತ್ತೇವೆ. ಅಷ್ಟೆಲ್ಲಾ ಪ್ರಯತ್ನದ ನಂತರವೂ ಅದರಲ್ಲಿ ಎಲ್ಲರೂ ಪಾಸಾಗಿ ಉದ್ಯೋಗ ಗಳಿಸಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಅದರಲ್ಲಿ ಸಫಲವಾಗದವರು ಅಥವಾ ಅದರಲ್ಲಿ ಸಫಲವಾಗಲು ಅನುಸರಿಸಬೇಕಾದ ಮಾರ್ಗದಲ್ಲಿ ಚಲಿಸಲಾಗದವರು ಅಥವಾ ರಾಜಕೀಯ ಕ್ಷೇತ್ರವನ್ನು ಅರಿತುಕೊಂಡು ಆಸಕ್ತಿ ತಳೆದವರು ದೇಶಸೇವೆ ಮಾಡಲು ಯಾವುದೇ ವಿದ್ಯಾರ್ಹತೆಯಂತಹ ಕಠಿಣ ಮಾನದಂಡವನ್ನಿರಿಸದೆ, ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳಬಹುದಲ್ಲವೆ? 

ಇನ್ನು ಮುಂದೆ ನಾನು ಐ.ಎ.ಎಸ್ ಆಗಬೇಕು, ಐ.ಪಿ.ಎಸ್ ಆಗಬೇಕು ಎನ್ನುವವರ ಜೊತೆಜೊತೆಗೆ ನಾನು ಎಂ.ಪಿ ಆಗಬೇಕು, ಎಂ.ಎಲ್.ಎ ಆಗಬೇಕು ಎನ್ನುವವರ ವರ್ಗವೂ ಬೆಳೆಯಬೇಕು. ವಿದ್ಯಾರ್ಥಿಗಳು ನಾನು ತಾಲ್ಲೂಕು ಪಂಚಾಯಿತಿ ಸದಸ್ಯನಾಗಬೇಕು, ಗ್ರಾಮ ಪಂಚಾಯಿತಿ ಸದಸ್ಯನಾಗಬೇಕು, ಪ್ರಧಾನಮಂತ್ರಿಯಾಗಬೇಕು ಎಂದು ತಮ್ಮ ಗುರಿಯನ್ನು ಹೇಳುವಂತಾಗಬೇಕು! ಇಷ್ಟೆಲ್ಲಾ ವಿಶ್ಲೇಷಣೆ ಮಾಡಿದ ನಂತರವೂ ನಮಗೆ ಕಾಡುವ ಕಟ್ಟ ಕಡೆಯ, ಮತ್ತೆ ಮತ್ತೆ ಯೋಚಿಸುವಂತೆ ಮಾಡುವ ಪ್ರಶ್ನೆ 'ನಿಜವಾಗಿಯೂ ಸಾಮಾನ್ಯ ವರ್ಗದವರು ಪ್ರಾಮಾಣಿಕವಾಗಿದ್ದುಕೊಂಡು ರಾಜಕಾರಣದಲ್ಲಿ ಯಶಸ್ಸು ಪಡೆಯಬಹುದೆ?' ಎಂದು. ಅನುಭವಿಗಳ ಪ್ರಕಾರ ರಾಜಕಾರಣಕ್ಕೆ ಬಂದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಇಚ್ಛೆಯುಳ್ಳ ಸಾಮಾನ್ಯ ವರ್ಗದವರು ಮೊದಲು ಒಂದು ನಿರ್ದಿಷ್ಟ ಕೌಶಲ್ಯದ ವೃತ್ತಿಯಲ್ಲಿ ಪರಿಣಿತಿ ಹೊಂದಬೇಕು, ಇದರಿಂದ ರಾಜಕೀಯದಲ್ಲಾಗುವ ಸಹಜವಾದ ಏರುಪೇರುಗಳ ಸಮಸ್ಯೆಯನ್ನು ಎದುರಿಸಲು ಯಾವುದೇ ಭ್ರಷ್ಟ ಮಾರ್ಗವನ್ನು ಆಯ್ದುಕೊಳ್ಳದೆ ಧೈರ್ಯವಾಗಿ ಪ್ರಾಮಾಣಿಕ ಮಾರ್ಗದಲ್ಲೇ ಸಾಗಬಹುದು. ಈ ಒಂದು ಸೂಕ್ಷ್ಮ ಸಂವೇದನೆಯ, ಅರ್ಥಗರ್ಭಿತ ಸಂಗತಿಯು ರಾಜಕೀಯ ಪ್ರವೇಶವನ್ನು ಮಾಡಲಿಚ್ಛಿಸುವ ಸಾಮಾನ್ಯ ವ್ಯಕ್ತಿಗೆ ಡೈನಾಸ್ಟಿಗಳ ರಾಜಕಾರಣದ ವಿರುದ್ಧ ಯೋಗ್ಯತೆಯ ರಾಜಕಾರಣವನ್ನು ಮಾಡಲು ಶೌರ್ಯಪಥವನ್ನು ಪ್ರದರ್ಶಿಸುತ್ತದೆ. ಈ ಆದರ್ಶ ಮಾರ್ಗದಲ್ಲಿ ಗೆಲುವಾಗಲಿ ಅಥವಾ ಸೋಲಾಗಲಿ, ಆದರೆ ನಾವು ಇಂತಹ ಸಾಹಸ ಕಾರ್ಯವನ್ನು ಕೈಗೊಂಡೆವು ಎಂಬ ಸಂತೋಷವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕೆಲವೊಂದು ಗುರಿಗಳು ಎಷ್ಟು ಯೋಗ್ಯವಾಗಿವೆ ಎಂದರೆ ಅದರಲ್ಲಿ ವಿಫಲವಾಗುವುದು ಕೂಡಾ ಅದ್ಭುತವೇ!

~ಸಿಂಚನ.ಎಂ.ಕೆ ಮಂಡ್ಯ 

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ