ಆರ್.ಎಸ್.ಎಸ್ ಆಳ, ಅಗಲ, ಉದ್ದ: ಸ್ಥಾಪಕರಿಂದ

ಆರ್.ಎಸ್.ಎಸ್ ಆಳ, ಅಗಲ, ಉದ್ದ: ಸ್ಥಾಪಕರಿಂದ
ವ್ಯಕ್ತಿಯಾಗಲ್ಲಾಗಲಿ ಅಥವಾ ಸಂಘಟನೆಯಲ್ಲಾಗಲಿ ಯಾವಾಗ ಅದರ ಆದರ್ಶದ ಸತ್ಯಾಂಶಗಳನ್ನು ಎದುರಿಸಿ ಹೋರಾಡುವುದು ಅಸಾಧ್ಯವೆಂದು ಪ್ರತೀತವಾಗುವುದೊ ಆಗ ಸುಳ್ಳು, ಮೋಸಗಳ ಬಾಣಗಳನ್ನು ಬಳಸಿ ಅತ್ಯಂತ ಕೆಳ ಮಟ್ಟದ ಆಕ್ರಮಣವನ್ನು ಮೊದಲು ಆರಂಭಿಸುತ್ತಾರೆ. ಯಾವ ಡಾ.ಕೇಶವ ಬಲಿರಾಂ ಹೆಡಗೇವಾರ್ ಅವರಿಂದ ಸಣ್ಣದಾಗಿ ಆರಂಭವಾಗಿ ಇಂದು ದೇಶದಲ್ಲಿ 60,000ಕ್ಕೂ ಹೆಚ್ಚು ಶಾಖೆಗಳ 90 ಲಕ್ಷ ಸ್ವಯಂ ಸೇವಕರನ್ನು ಒಳಗೊಂಡ ಪ್ರಪಂಚದ ಬೃಹತ್ ಸಂಘಟನೆಯಾಗಿ ಬೆಳೆದಿದೆಯೊ ಹಾಗೂ ಸದ್ಯದಲ್ಲೇ ಶತಮಾನದ ಸಂವತ್ಸರದೆಡೆಗೆ ದಾಪುಗಾಲಿಡುತ್ತಿದೆಯೊ ಅಂತಹ ಆರ್.ಎಸ್.ಎಸ್ ನ ಬಗ್ಗೆ ಅಘೋಷಿತ ಸಂವಿಧಾನ ಪಂಡಿತರು, ಅಹಿಂದ ನಾಯಕರು ಎಂದು ಬಿಂಬಿಸಿಕೊಳ್ಳುವ ಆಗರ್ಭ ಶ್ರೀಮಂತರು, ಬುದ್ಧಿಜೀವಿಗಳು ಎಂದು ಬೋರ್ಡ್ ಹಾಕಿಕೊಳ್ಳುವ ಅಜ್ಞಾನಿಗಳು, ವೈಜ್ಞಾನಿಕರು ಎಂದು ತೋರ್ಪಡಿಸಿಕೊಳ್ಳುವ ಅವಿವೇಕಿಗಳು ಪ್ರತಿನಿತ್ಯ ತಮ್ಮ ಮನಬಂದಂತೆ ಅತರ್ಕ, ಅಸಂಬದ್ಧ, ಋಣಾತ್ಮಕ ಹೇಳಿಕೆಗಳನ್ನು ಕೊಡುತ್ತಾರೆ. ಇದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಲು ಇಂದಿನ ಅಸಮರ್ಥ ವಿಪಕ್ಷಗಳ ನಡೆಯನ್ನು ಗಮನಿಸಿದರೆ ಸಾಕು! ನಮ್ಮ ಸಮರ್ಥ, ಆದರಣೀಯ, ಜಗದ್ವಿಖ್ಯಾತ, ಜಗತ್ ವಂದನೀಯ ಪ್ರಧಾನಿ ಮೋದೀಜಿ ಅವರ ಆಡಳಿತ ವೈಖರಿ, ನಾಯಕತ್ವದ ಪರಿಯನ್ನು ಎದುರಿಸಲಾಗದೆ ಅವರ ಪ್ರತೀ ಹೆಜ್ಜೆಯನ್ನೂ ಟೀಕಿಸುತ್ತಾರಲ್ಲ ಹಾಗೆ ಕೆಲವು ಅಜ್ಞಾನಿಗಳು ರಾಜಕೀಯ ಸ್ವಾರ್ಥ ಲಾಭದ ಉದ್ದೇಶದಿಂದ ಆರ್.ಎಸ್.ಎಸ್ ಬಗೆಗೆ ವಿರೋಧಾತ್ಮಕವಾದ ಹೇಳಿಕೆಗಳನ್ನು ಕೊಡುತ್ತಾ ಇರುತ್ತಾರೆ. ಇಂತಹ ಮಿಥ್ಯ ಹೇಳಿಕೆಗಳಿಂದ ಆರ್.ಎಸ್.ಎಸ್ ನ ಮೌಲ್ಯ ಕುಸಿಯುವುದಿಲ್ಲ. ಸಿಂಹ ಗಾಂಭೀರ್ಯದಿಂದ ಹೋಗುತ್ತಿರುವಾಗ ನಾಯಿಗಳ ಬೊಗಳಿಕೆಯು ಹೇಗೆ ಅದನ್ನು ವಿಚಲಿತಗೊಳಿಸುವುದಿಲ್ಲವೊ ಹಾಗೆ ಅಜ್ಞಾನಿಗಳ ಹೇಳಿಕೆಗಳು ಆರ್.ಎಸ್.ಎಸ್ ನ ಧ್ಯೇಯವನ್ನು ವಿಚಲಿತಗೊಳಿಸಲು ಸಾಧ್ಯವಾಗುವುದಿಲ್ಲ. ಇದರ ಅಗಾಧ ಸ್ವರೂಪದ ಬಗ್ಗೆ ಅರಿವಿಲ್ಲದಲರು ಮಾತ್ರ ಅದರ ಬಗ್ಗೆ ಕುವಾಕ್ಯದ ಹೇಳಿಕೆಗಳನ್ನು ನೀಡಲು ಸಾಧ್ಯ. ಹಾಗಾದರೆ ಆರ್.ಎಸ್.ಎಸ್ ನ ಆದರ್ಶಗಳೇನು? ಎಂಬುದರ ಬಗ್ಗೆ ಈ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಸವಿವರವಾಗಿ ತಿಳಿದುಕೊಳ್ಳಬೇಕಿದೆ. ಹಾಗಾದರೆ ಬನ್ನಿ ಅದರ ಸ್ಥಾಪಕರಿಂದಲೇ ಸಂಘದ ಆದರ್ಶವನ್ನು ಅರಿಯೋಣ.

ವಿದ್ಯಾರ್ಥಿ ಜೀವನದಲ್ಲೇ ದೇಶಭಕ್ತ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಡಾಕ್ಟರ್ ಜೀ ಅವರು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ ಮೇಲೆ 1925ನೇ ಇಸವಿಯ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದರು. ಭಾರತವು ಹಿಂದುರಾಷ್ಟ್ರವಾಗಿ ಉಳಿಯಬೇಕೆಂಬ ಮಹಾ ಸಂಕಲ್ಪದಿಂದ 'ಹಿಂದೂಸ್ಥಾನ ಹಿಂದೂಗಳಿಗಾಗಿ' ಎಂಬ ವಿಜಯ ಮಂತ್ರವನ್ನು ಕೊಟ್ಟು ಸತತ ಗುಲಾಮಗಿರಿಯ ಅವಸ್ಥೆಯಲ್ಲಿ ದುರ್ಬಲರಾಗಿ ಹೋಗಿದ್ದ ಹಿಂದೂ ಸಮಾಜವನ್ನು ಬಲಿಷ್ಠ ಹಾಗೂ ಸಂಘಟಿತಗೊಳಿಸಲು ಸಂಘವು ಶ್ರಮಿಸಬೇಕೆಂಬ ಕಾರ್ಯ ಕೈಪಿಡಿಯನ್ನು ನೀಡಿದರು.

ಡಾಕ್ಟರ್ ಜೀ ಅವರ ಕಾಲದಲ್ಲಿ 35 ಕೋಟಿಗಳಿದ್ದ ಹಿಂದೂಗಳ ಸಂಖ್ಯೆ ಕ್ರಮೇಣ 25 ಕೋಟಿಗಳಷ್ಟಾಗುತ್ತದೆ. ಗಾಂಧಾರ ಆಫ್ಘಾನಿಸ್ತಾನವಾಗಿ ಇಸ್ಲಾಮಾಸ್ತಾನವಾಗಿರುವುದು, ಕಾಶ್ಮೀರ- ಬಂಗಾಳಗಳಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಭವಿಷ್ಯದ ಆತಂಕ ಸೂಚಕಗಳಾಗುತ್ತವೆ. ಒಂದೆಡೆ ಕ್ರಿಶ್ಚಿಯನ್ ಆಕ್ರಮಣಕಾರರ ರಾಜಕೀಯ ಪ್ರಭುತ್ವ, ಇನ್ನೊಂದೆಡೆ ಮುಸಲ್ಮಾನ್ ಆಕ್ರಮಣಕಾರರ ಸಾಮಾಜಿಕ ಅತ್ಯಾಚಾರ ಇವುಗಳ ನಡುವೆ ಸಿಲುಕಿಕೊಂಡಿರುವ ಹಿಂದೂ ಧರ್ಮದ ರಕ್ಷಣೆಗಾಗಿ ಬಲಿಷ್ಠ ಸಂಘಟನೆಯ ಅವಶ್ಯಕತೆ ಇದ್ದುದರಿಂದ ಆರ್.ಎಸ್.ಎಸ್ ನಿರ್ಮಾಣವಾಯಿತು. ನಮ್ಮ ಉಜ್ವಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗಲೇ ನಮ್ಮ ಹಿಂದೂ ಸಮಾಜವು ವಿಶ್ವಗುರುವಾಗಿ ತಲೆಯೆತ್ತಿ ಬಾಳುವಂತಾಗುತ್ತದೆ. ಸತತ ಘೋರ ಆಕ್ರಮಣಗಳಿಗೆ ನಮ್ಮ ಹಿಂದೂ ಸಮಾಜವು ಗುರಿಯಾಗಲು ಮುಖ್ಯ ಕಾರಣ ನಮ್ಮಲ್ಲಿನ ವ್ಯಕ್ತಿಗತ ಸ್ವಾರ್ಥ, ದುರ್ಬಲತೆ ಮತ್ತು ಸಮಾಜ ಹಿತದ ಬಗ್ಗೆ ಉದಾಸೀನತೆ. ಆದ್ದರಿಂದ ಇಂತಹ ಮಾನಸಿಕ ದುರ್ಬಲತೆಯನ್ನು ಕೊಡಹಿ ಹಾಕಲು ಧರ್ಮ, ರಾಷ್ಟ್ರ, ಸಮಾಜ ಮತ್ತು ಜನಕಲ್ಯಾಣದ ಭಾವನೆಯಿಂದ ಕೂಡಿ ಸದಾ ಕರ್ತವ್ಯನಿಷ್ಠರಾಗಿರಬೇಕು. ಜಗತ್ತಿನ ಶಾಂತಿ ಹಾಗೂ ಸುವ್ಯವಸ್ಥೆಗೆ ಸಮತೋಲನ ಇರಬೇಕಾದುದು ಅತ್ಯಗತ್ಯ. ಬಲಹೀನರು ಮತ್ತು ಬಲಿಷ್ಠರು ಒಟ್ಟಿಗೆ ಬಂದರೆ ಶಾಂತಿಭಂಗ ಆಗಿಯೇ ಆಗುತ್ತದೆ. ಎರಡು ಸಿಂಹಗಳು ಪರಸ್ಪರ ಎಂದೂ ಸೆಣಸಾಡುವುದಿಲ್ಲ. ಆದ್ದರಿಂದ ನಾವು ಎಂದೆಂದಿಗೂ ಶಕ್ತಿಶಾಲಿಗಳಾಗಿರಬೇಕು.

ಸ್ವಯಂ ಸೇವಕರಾದವರು ತಮ್ಮ ವೈಯಕ್ತಿಕ ಸಂಸಾರದ ಜವಾಬ್ದಾರಿಯನ್ನು ಹೊರುವುದರ ಜೊತಗೆ ಹಿಂದೂ ಸಮಾಜದ ಜವಾಬ್ದಾರಿಯನ್ನೂ ಹೊರುವಷ್ಟು ಸಮರ್ಥರಾಗಬೇಕು. ಚಾರಿತ್ರ್ಯದೊಂದಿಗೆ ಆಕರ್ಷಕತೆ, ವ್ಯವಹಾರ ಚಾತುರ್ಯತೆ ಹಾಗೂ ಜಾಣತನ ಇರುವ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಂಘದ ತತ್ವಗಳನ್ನು ಆಚರಣೆಗೆ ತಂದು ನುಡಿದಂತೆ ನಡೆವವನಾಗಬೇಕು. 

ನಾವು ಭಗವಾ ಧ್ವಜವನ್ನೇ ಗುರುವೆಂದು ಭಾವಿಸಿ ಗುರು ಪೂರ್ಣಿಮಾ ದಿನದಂದು ಅದನ್ನು ಪೂಜಿಸುವಂತೆ ಮಾರ್ಗ ಅಚಲವಿರಲು ಸಾಧ್ಯವಿಲ್ಲದ ವ್ಯಕ್ತಿ ಪೂಜೆಗಿಂತ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳ ಬಗೆಗೆ ಸ್ಫೂರ್ತಿಯ ಭಾವನೆಗಳನ್ನು ಬಡಿದೆಬ್ಬಿಸುವ ಭಗವಾ ಧ್ವಜದ ತತ್ವವೇ ಆರ್.ಎಸ್.ಎಸ್ ನ ಆದರ್ಶವಾಗಬೇಕು. ದೇವರ ಹೊರತಾಗಿ ನಾವು ಯಾವ ಮಹನಿಯರ ನಡೆಯನ್ನು ಅನುಸರಿಸಲು ಸಾಧ್ಯವೋ ಅಂತಹ ಧೀರಮತಿ, ನಿಷ್ಕಲ್ಮಷ ವ್ಯಕ್ತಿಯನ್ನು ಆದರ್ಶವಾಗಿರಿಸಿಕೊಳ್ಳಬಹುದು .

ಆರ್.ಎಸ್.ಎಸ್ ನ ಬಗ್ಗೆ ಹೆಚ್ಚು ತಿಳಿದುಕೊಂಡಿರುವವರೂ ಸಹ ಇದು ಕೇವಲ ಗಂಡು ಮಕ್ಕಳನ್ನೊಳಗೊಂಡಿರುವ ಸಂಘಟನೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಆರ್.ಎಸ್.ಎಸ್ ನಲ್ಲಿ ಹೆಣ್ಣು ಮಕ್ಕಳಿಗಾಗಿಯೇ ವಿಶೇಷವಾಗಿ 'ರಾಷ್ಟ್ರೀಯ ಸೇವಿಕಾ ಸಮಿತಿ' ಎಂಬ ಪ್ರತ್ಯೇಕ ಸಂಸ್ಥೆ ಇದೆ. ಇದರ ಮೂಲಕ ಹೆಣ್ಣು ಮಕ್ಕಳಿಗೂ ಸಹ ಹಿಂದುತ್ವ, ರಾಷ್ಟ್ರೀಯತೆಯ ಪಥದಲ್ಲಿ ಮುನ್ನಡೆಯಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಆರ್.ಎಸ್.ಎಸ್ ನಲ್ಲಿ ಜಾತಿ, ತಾರತಮ್ಯಗಳ ಸಮಸ್ಯೆಯಿದೆಯೆಂದು ಸವಾಲು ಹಾಕುವವರಿಗೆ ಒಂದು ದಿನವಾದರೂ ಸಂಘದ ಶಾಖೆಗೆ ಹೋಗಿ ನೋಡಿದ್ದೀರಾ? ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ, ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೀರಾ!? ಎಂದು ಪ್ರಶ್ನಿಸಬೇಕಾಗುತ್ತದೆ. ಡಾಕ್ಟರ್ ಜೀ ಅವರು ನಮ್ಮ ದೇಶದ ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿರುವ ಈ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡಲು ಸ್ವಯಂ ಸೇವಕರೇ ಮುಂದೆ ಬರಬೇಕು ಎಂದು ತಿಳಿಸಿದ್ದಾರೆ. ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯ ರಕ್ಷಣೆಯನ್ನೇ ಧ್ಯೇಯವಾಗಿರಿಸಿಕೊಂಡಿರುವ ಆರ್.ಎಸ್.ಎಸ್ ಅನ್ನು ವಿರೋಧಿಸುತ್ತಿರುವವರಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವನೂರು ಮಹಾದೇವ ಹೀಗೆ ಇತ್ಯಾದಿ ಸೆಕ್ಯುಲರ್ ಹಿಂದೂಗಳ ದೊಡ್ಡ ಪಟ್ಟಿಯೇ ಇದೆ. ಆರ್.ಎಸ್.ಎಸ್ ನ ವಿರೋಧಿಸುವುದೆಂದರೆ ಹಿಂದುತ್ವ, ರಾಷ್ಟ್ರೀಯತೆಯನ್ನೇ ವಿರೋಧಿಸಿದಂತೆ ಅಂದರೆ ಅವರ ಅಸ್ತಿತ್ವವನ್ನೇ ವಿರೋಧಿಸಿ ಕೊಂಡಂತೆ! ವೀರ ಸಾವರ್ಕರ್ ಅವರು ಹೇಳುತ್ತಾರೆ: "I am not afraid of Muslims, I am not afraid of Britishers, but I am afraid of Hindus against Hinduism". ಹೌದಲ್ವಾ, ಈ ಮಾತು ಅಕ್ಷರಶಃ ಸತ್ಯ! ಆದ್ದರಿಂದ ಜಾಗೃತಗೊಂಡಿರುವ ಧರ್ಮ ರಕ್ಷಕರು ಅತ್ಯಂತ ತಾಳ್ಮೆ, ಸೌಜನ್ಯತೆ ಹಾಗೂ ಧೀಮಂತಿಕೆಯಿಂದ ಇಂತಹವರೊಡನೆ ಸಂಘರ್ಷ ಮಾಡಿ ಅವರ ಅಸ್ತಿತ್ವ ಹೀನ ಸೆಕ್ಯುಲರ್ ತತ್ವದ ವಾಸ್ತವವನ್ನು ತೆರೆದಿಡಬೇಕಿದೆ. 

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ