ಕಾಂತಾರ ರೂಪಂ ದೈವಾಶೀರ್ವದಿತ ಚಿತ್ರಂ

ಕಾಂತಾರ ರೂಪಂ ದೈವಾಶೀರ್ವದಿತ ಚಿತ್ರಂ
ಕೆಲವೊಮ್ಮೆ ನಮ್ಮ ಜೀವನದಲ್ಲಿ ಮಾನವ ಜೀವನದ ಚೌಕಟ್ಟನ್ನು ಮೀರಿ ಹೋಗುವಂತಹ ಅಲೌಕಿಕ ಅದ್ಭುತಗಳು ಸಂಭವಿಸುತ್ತದೆ. ನೀವು ನಿಮ್ಮ ಜೀವನದಲ್ಲೇ ಅಥವಾ ಇತರ ಮಹನಿಯರ ಜೀವನದಲ್ಲಿ ಗಮನಿಸಿರಬಹುದು, ಜಟಿಲಾತಿ ಜಟಿಲ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ, ನಂತರ ಕಠಿಣ ಹಂತವನ್ನು ತಲುಪಿ ಇನ್ನು ಮಾನವ ಪ್ರಯತ್ನ ಅಸಾಧ್ಯ ಎಂಬ ಸ್ತರಕ್ಕೆ ಕೊಂಡೊಯ್ಯುತ್ತದೆ, ಆಗ ಏನಿದ್ದರೂ ದೈವೇಚ್ಛೆಯೇ ನಡೆಯುತ್ತದೆ! ಈ ರೀತಿಯ ಕ್ಲಿಷ್ಟ ಸನ್ನಿವೇಶದಲ್ಲಿ ನಾವು ಕಲ್ಪನೆ ಕೂಡ ಮಾಡಿಕೊಂಡಿರದಷ್ಟು ಅಗಾಧವಾದ ಯಶಸ್ವಿ ಬೆಳವಣಿಗೆಯು ಆಗಬಹುದು ಅಥವಾ ಗಾಢವಾದ ಪೆಟ್ಟಿನ ಕರ್ಮಫಲ ದೊರೆಯುವುದರ ಮೂಲಕ ಭವಿಷ್ಯದ ಹಾದಿಯೇ ಪ್ರದರ್ಶಿತವಾಗಬಹುದು. ಈಶ್ವರನು ಒಮ್ಮೆ ನಿಶ್ಚಯ ಮಾಡಿ ಒಂದು ಜವಾಬ್ದಾರಿಯನ್ನು ಒಬ್ಬರಿಗೆ ವಹಿಸಿದ ಮೇಲೆ ಅದನ್ನು ಅವನಿಂದ ಮಾಡಿಸಿಯೇ ಮಾಡಿಸುತ್ತಾನೆ. ಈ ಎಲ್ಲಾ ಮಹಾನ್ ಆದರ್ಶಗಳು 'ಕಾಂತಾರ' ಸಿನಿಮಾ ಯಶಸ್ಸಿಗೆ ಹಿಡಿದ ಕೈಗನ್ನಡಿಗಳಾಗಿವೆ ಎನ್ನಬಹುದು.

ನಮ್ಮ ಹೆಮ್ಮೆಯ ತುಳುನಾಡಿನ ಪ್ರಮುಖ ಧಾರ್ಮಿಕ ಆಚರಣೆಯಾದ ದೈವಾರಾಧನೆಯನ್ನು ಮುಖ್ಯ ಕೇಂದ್ರವಾಗಿರಿಸಿಕೊಂಡು ಪ್ರಸ್ತುತ ಪಡಿಸಿರುವ 'ಕಾಂತಾರ' ಸಿನಿಮಾದ ರೋಚಕ ಪಯಣವು ಅಸಾಮಾನ್ಯವಾದುದೆಂದು ಸಾಮಾನ್ಯರಾದವರೂ ಸಹ ಅರ್ಥೈಸಿಕೊಳ್ಳಬಲ್ಲರು. ಈ ಕಾಲದಲ್ಲಿ ಸಿನಿಮಾ ಬಜೆಟ್ ನಷ್ಟೇ ಅಥವಾ ಅದಕ್ಕಿಂತಲೂ ಒಂದು ಪಟ್ಟು ಹೆಚ್ಚು ಖರ್ಚು ಮಾಡಿ ಪ್ರಮೋಷನ್ ಮಾಡುವ ಮೂಲಕ ಸಿನಿಮಾವನ್ನು ಪ್ರತಿಷ್ಠಿತ ಸ್ಥಾನಕ್ಕೇರಿಸಿ ಗೆಲುವನ್ನು ಸಂಭ್ರಮಿಸುವ ವ್ಯವಸ್ಥೆ ಜಾರಿಯಲ್ಲಿರುವಾಗ ಒಂದು ಸಿನಿಮಾ ತನ್ನ ಸತ್ತ್ವ, ಕಾರ್ಯನಿಷ್ಠೆ, ಪ್ರಾಮಾಣಿಕತೆ ಅದೆಲ್ಲಕ್ಕಿಂತ ಹೆಚ್ಚಾಗಿ ದೈವತ್ವದ ಕಾರಣದಿಂದಾಗಿ ಕೋಟಿ ಕೋಟಿ ಹಣದ ಪ್ರಚಾರಕ್ಕಿಂತಲೂ ವೇಗವಾದ ಕೋಟಿ ಕೋಟಿ ಜನರ ಹೃದಯಗಳ ಮೂಲಕ ಜರುಗುವ ಪ್ರಚಾರವನ್ನೇ ಗಿಟ್ಟಿಸಿಕೊಂಡು ಸಿನಿಮಾ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ. ಮೊದಲನೆಯದಾಗಿ ಅಂಧರಂತೆ ವಿದೇಶಿ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಇಂದಿನ ಯುವಜನತೆಗೆ ಅವರಿಗೆ ಇಷ್ಟವಾಗುವ ಸಿನಿಮಾ ಕ್ಷೇತ್ರದ ಪಥದ ಮೂಲಕವೇ ನಮ್ಮ ಹಿರಿಮೆಯ ಸಂಸ್ಕೃತಿಯನ್ನು ಅರ್ಥೈಸಿ ಅವರ ಕಣ್ತೆರೆಸುವುದು ಮುಖ್ಯ ಕೆಲಸವಾಗಿತ್ತು. ಈ ಒಂದು ಸಾಹಸವನ್ನು ಕೈಗೆತ್ತಿಕೊಂಡು ಸಫಲರಾಗಿರುವ ಸ್ಯಾಂಡಲ್ ವುಡ್ ನ ಹೆಮ್ಮೆಯ ನಿರ್ದೇಶಕ, ನಟ ರಿಷಬ್ ಶೆಟ್ಟಿಯವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು. ಈ ಸಿನಿಮಾಗೆ 'ದೈವಾರಾಧನೆ' ಎಂಬ ವಿಷಯ ವಸ್ತುವನ್ನು ಆರಿಸಿಕೊಂಡ ಕ್ಷಣವೇ ತಮ್ಮ ವಿಜಯದ ಪುಸ್ತಕಕ್ಕೆ ಮುನ್ನುಡಿ ಬರೆದರು ನಿರ್ದೇಶಕರು. ತಮ್ಮ ಪರಿಶುದ್ಧ ಉದ್ದೇಶದಿಂದ ಮಾಡುವ ಯಾವುದೇ ಬಹುಜನ ಹಿತಾಯ ಬಹುಜನ ಸುಖಾಯ ಆದರ್ಶದ ಕಾರ್ಯಗಳು ಸಾಕಾರವಾಗಲು ದೈವಶಕ್ತಿಯೇ ನೆರವಾಗುವುದು ಎಂಬಂತೆ ತಮ್ಮ ಮಣ್ಣಿನ ಸಂಸ್ಕೃತಿಯನ್ನು ಪ್ರಪಂಚದ ಮುಂದೆ ಪ್ರಸ್ತುತ ಪಡಿಸುವ ಸಲುವಾಗಿ ಶುರುವಾದ ಕಾಂತಾರದ ಪಯಣವನ್ನು ದೈವವೇ ಆಶೀರ್ವದಿಸಿ ಮುನ್ನೆಡೆಸುತ್ತಿರುವಂತೆ ಕಾಣುತ್ತಿದೆ.

ಸಿನಿಮಾದಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವದ ದೃಶ್ಯಗಳು ಬಂದಾಗಲೆಲ್ಲಾ ಪ್ರಸ್ತುವಾಗುವ ದೈವದ ಒಂದೊಂದು ಭಾವ, ನೋಟ, ಸಂಗೀತ, ಸಂಭಾಷಣೆ ಎಲ್ಲವೂ ಹೃದಯಸ್ಪರ್ಶಿಯಾಗಿದೆ. ಆ ಅದ್ಭುತ ಅನುಭವವನ್ನು ಅಕ್ಷರ ರೂಪಕ್ಕಿಳಿಸುವುದು ಅಸಾಧ್ಯ. ಜೀವನದಲ್ಲಿ ಒಮ್ಮೆಯೂ ಈ ಆಚರಣೆಯ ಬಗ್ಗೆ ತಿಳಿದುಕೊಂಡಿರದ ವಿವಿಧ ಜನಾಂಗದವರಿಗೂ ಸಹ ಒಮ್ಮೆಲೆಗೆ ಈ ಸಿನಿಮಾ ಕನೆಕ್ಟ್ ಆಗಿದೆ. ಸಿನಿಮಾದಲ್ಲಿ ಕಥಾನಾಯಕ ಒರಟ ಶಿವನು ತನ್ನ ಜವಾಬ್ದಾರಿಯಿಂದ ಎಷ್ಟೇ ಹಿಂದೆ ಸರಿಯುತ್ತಿದ್ದರೂ ಹೇಗೆ ದೈವವು ಅವನಿಗೆ ಧರ್ಮ ಸಂಸ್ಥಾಪನಾ ಕಾರ್ಯವನ್ನು ಮಾಡುವಂತೆ ಪ್ರೇರೇಪಿಸುತ್ತದೆ ಹಾಗೂ ಅದಕ್ಕೆ ಕಂಟಕವಾಗಲು ಆತನಿಗೆ ಅಪಾಯಗಳು ಎದುರಾದಾಗಲೆಲ್ಲಾ ಹೇಗೆ ರಕ್ಷಣೆ ಮಾಡುತ್ತದೆ ಎಂಬ ಸೂಕ್ಷ್ಮ ಸಂಗತಿಗಳು ದೈವವು ಸದಾ ನಮ್ಮಂತಹ ಭಕ್ತರ ಜೊತೆಯಲ್ಲೇ ಇದ್ದು ನಮ್ಮನ್ನು ಕಾಪಾಡುತ್ತದೆ ಎಂಬ ಅಭಯವನ್ನು ಸೂಚಿಸುತ್ತದೆ. ಈ ಸಿನಿಮಾ ಜರ್ನಿಯ ಆರಂಭದಿಂದ ಅಂತ್ಯದವರೆಗೂ ಅಂದರೆ ದೈವದ ಅನುಮತಿಯಿಂದ ಹಿಡಿದು ಭಕ್ತರ ನಂಬಿಕೆಗಳಿಗೆ ಘಾಸಿ ಮಾಡದೆ, ದೈವದ ಗೌರವವನ್ನು ಸಿನಿಮಾದುದ್ದಕ್ಕೂ ಎತ್ತಿ ಹಿಡಿಯಬೇಕಾದ ಕಾರ್ಯದವರೆಗೂ ಸಿನಿಮಾ ತಂಡವು ಅನುಸರಿಸಿರುವ ಭಕ್ತಿಪಥವು ಸಾಕಾರಗೊಂಡಿದೆ. 

ಈ ಲೇಖನ ಬರೆಯುತ್ತಿರುವ ವೇಳೆಗೆ ಈ ಸಿನಿಮಾ ಪಡೆದುಕೊಂಡಿರುವ ಮೌಲ್ಯ 100 ಕೋಟಿಗೂ ಅಧಿಕ, ಹಾಗೆಯೇ ನಮ್ಮ ದೇಶದಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ಎಂಬ ಪ್ರಖ್ಯಾತಿ, ಪ್ರೇಕ್ಷಕರ ಒತ್ತಾಯದ ಮೇರೆಗೆ ಡಬ್ ಆಗಿರುವ ಪ್ರಸಿದ್ಧಿ. ಆದರೆ ಇದು ಪಡೆದುಕೊಂಡಿರುವ ಇದಕ್ಕಿಂತ ಹೆಚ್ಚಿನ ಮೌಲ್ಯವೆಂದರೆ ದಶಕಗಳ ಕಾಲ ನಮ್ಮ ಹಿಂದೂ ಧರ್ಮ - ಸಂಸ್ಕೃತಿಯ ಅವಹೇಳನದ ಸಿನಿಮಾಗಳನ್ನು ಮಾಡುತ್ತಿದ್ದವರ ಎಕನಾಮಿಕ್, ವೆಸ್ಟರ್ನ್ ಪ್ರೋಪಗ್ಯಾಂಡವನ್ನು ಭೇದಿಸಿ ನಮ್ಮ ಸಂಸ್ಕೃತಿಯ ನೈಜವಾದ ವಿರಾಟ ದರ್ಶನವನ್ನು ಮಾಡಿಸಿ ಬ್ರೈನ್ ವಾಶ್ ಗೆ ಒಳಗಾಗಿದ್ದ ಯುವಜನತೆಯನ್ನು ಸತ್ಯಪಥಕ್ಕೆ ಕರೆದೊಯ್ಯುತ್ತಿರುವುದು. ಇಷ್ಟೆಲ್ಲಾ ಯಶಸ್ಸನ್ನು ಕಂಡು ಇಡೀ ಕನ್ನಡ ಚಿತ್ರರಂಗ ಯಾಕೆ, ಇಡೀ ಭಾರತೀಯ ಚಿತ್ರರಂಗಕ್ಕೆ ಕೀರ್ತಿ ತಂದರೂ ಈ ಸಿನಿಮಾದ ಬಗೆಗೆ ಹಲವರು ಕುಹಕ ಮಾತುಗಳನ್ನಾಡುತ್ತಿದ್ದಾರೆ. ತಮಗಂತೂ ಒಂದು ಉತ್ತಮ ಚಿತ್ರವನ್ನು ನಿರ್ಮಿಸುವ ಯೋಗ್ಯತೆಯಿಲ್ಲ, ಕಡೆಯ ಪಕ್ಷ ಹಾಗೆ ಉತ್ತಮ ಚಿತ್ರವನ್ನು ನಿರ್ಮಿಸಿದವರಿಗೆ ಶಹಬ್ಬಾಸ್ ಹೇಳುವ ವಿಶಾಲ ಹೃದಯವಂತಿಕೆಯೂ ಇಲ್ಲ. ತಮ್ಮ ಸ್ವಾರ್ಥ ಉದ್ದೇಶದಿಂದ ಪ್ರಚಾರ ಗಿಟ್ಟಿಸಿಕೊಳ್ಳಲು ಯಶಸ್ವೀ ಚಿತ್ರದ ಅಪಪ್ರಚಾರ ಮಾಡುತ್ತಾರೆ. ಚೇತನ್ ಅಹಿಂಸ ಎಂದು ಹೆಸರಿಟ್ಟುಕೊಂಡು ಹಿಂಸಾತ್ಮಕ, ಪ್ರಚೋದನಾತ್ಮಕ ನುಡಿಗಳನ್ನೇ ಆಡುವ ಇವರು ತುಳುನಾಡಿನ ದೈವಾರಾಧನೆಯು ಹಿಂದೂ ಸಂಸ್ಕೃತಿಯಲ್ಲ, ಅದು ಆದಿವಾಸಿಗಳದ್ದು ಅಥವಾ ಮೂಲನಿವಾಸಿಗಳದ್ದು ಎಂದು ಹೇಳುವುದರ ಮೂಲಕ ಎಂದಿನಂತೆ ತಮ್ಮ ಹಿಂದೂ ಸಂಸ್ಕೃತಿಯ ದ್ವೇಷವನ್ನು ಹೊರ ಹಾಕಿದ್ದಾರೆ. ಇವರ ಈ ಅಜ್ಞಾನದ ವ್ಯಾಖ್ಯಾನಕ್ಕೆ ಉತ್ತರ: ಚೇತನ್ ಅಹಿಂಸ ನೀವು ಹಿಂದುವೂ ಅಲ್ಲ, ಭಾರತೀಯರೂ ಅಲ್ಲ, ನೀವು ಅಮೆರಿಕಾದಲ್ಲೇ ಹುಟ್ಟಿ ಅದರಲ್ಲೇ ಪೌರತ್ವವನ್ನು ಪಡೆದಿರುವವರು. ಇವರಿಗೆ ಹಿಡಿದಿರುವ ಹುಚ್ಚಿಗೆ ಕಾಂತಾರ ಕಾಡಿನಲ್ಲಿ ಯಾವುದಾದರೂ ಔಷಧಿಯ ಸೊಪ್ಪು ಸಿಕ್ತದ ಅಂತ ನೋಡಬೇಕು ಮಾರ್ರೆ! ಇವರು ಈ ರೀತಿ ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಹಿಂದೂ ಸಂಸ್ಕೃತಿಯ ಬಗ್ಗೆ ಕುಹಕ ಮಾತುಗಳನ್ನಾಡುತ್ತಿದ್ದರೂ ಹಿಂದೂಗಳ ಬಾಹುಳ್ಯ ಇರುವ ಈ ದೇಶದಲ್ಲಿ ಅವರು ಸುರಕ್ಷಿತವಾಗಿಯೇ ಇದ್ದಾರೆ. ಇದೇ ನಮ್ಮ ಹಿಂದೂ ಧರ್ಮ - ಸಂಸ್ಕೃತಿ. 

ಇನ್ನೂ ಕೆಲವರು ಇದು ಮೌಢ್ಯಾಚರಣೆ, ಮೂಢನಂಬಿಕೆ ಎಂದೆಲ್ಲಾ ಮನಸ್ಸೋ ಇಚ್ಛೆ ಮಾತನಾಡುತ್ತಿದ್ದಾರೆ. ಒಂದು ಬಾರಿಯೂ ಈ ಆಚರಣೆಯಲ್ಲಿ ಭಾಗವಹಿಸದೆ, ಅದರ ಮಹತ್ವವನ್ನು ಅರಿತುಕೊಳ್ಳದೆ ಹೀಗೆ ಮಾತನಾಡುತ್ತಿದ್ದಾರೆ. ಯಾವುದೇ ಸಂಸ್ಕೃತಿ, ಆಚರಣೆಯಾಗಲಿ ಅದು ಅಲ್ಲಿನ ಜನರ ಮೇಲೆ ದೈವಿಕವಾದ ಅಥವಾ ಸಕಾರಾತ್ಮಕವಾದ ಪರಿಣಾಮವನ್ನು ಬೀರುತ್ತಿಲ್ಲವೆಂದರೆ ಜನರೇಕೆ ಅದನ್ನು ಸಾವಿರಾರು ವರ್ಷಗಳಿಂದ ಕಷ್ಟಪಟ್ಟು ಕಾಪಾಡುತ್ತಾ ಬಂದಿದ್ದಾರೆ!? ಈ ಸಿನಿಮಾವನ್ನೇ ತೆಗೆದುಕೊಳ್ಳಿ. ಅದರಿಂದ ಜನರು ಯಾವುದೇ ಅದ್ಭುತ, ಅಲೌಕಿಕ ಅನುಭವವನ್ನು ಪಡೆದುಕೊಳ್ಳುತ್ತಿರುವುದರಿಂದಲೇ ತಾನೆ ಮತ್ತೆ ಮತ್ತೆ ಥಿಯೇಟರ್ ಗಳಿಗೆ ಹೋಗಿ ಸಿನಿಮಾ ನೋಡಿ ಯಶಸ್ವಿಯಾಗಿಸುತ್ತಿದ್ದಾರೆ. ಧ್ಯಾನ, ತಪಸ್ಸುಗಳೆಂಬ ಏಕಾಂಗಿಯ ಪಯಣದ ಹೊರತಾಗಿ ಜೀವನದ ಸತ್ಯ ಸಾಕ್ಷಾತ್ಕಾರಕ್ಕಾಗಿ ಅಥವಾ ಧಾರ್ಮಿಕ ಅನುಷ್ಠಾನಕ್ಕಾಗಿ ಅಥವಾ ಶಕ್ತಿಯುತ ಜೀವನಕ್ಕಾಗಿ ಇರುವ ಒಟ್ಟಾಗಿ ಪರಸ್ಪರ ಸಹಯೋಗದಿಂದ ಸಾಗುವ ಈ ಆಚರಣೆಗಳು ಬಹುಪಾಲು ಮಾನವ ಸಮಾಜಕ್ಕೆ ಅವಶ್ಯಕವಾಗಿದೆ. ಭಕ್ತಿಯ ಸ್ತರದಲ್ಲಿ ನಮ್ಮ ಶಕ್ತಿ, ಉತ್ಸಾಹ, ಚೈತನ್ಯ ಅದಮ್ಯವಾಗಿದ್ದು ನಮ್ಮ ಬದುಕು ಎಲ್ಲಾ ರೀತಿಯ ನಕಾರಾತ್ಮಕತೆಗಳಿಂದ ಮುಕ್ತವಾಗಲು ಸಹಕರಿಸುತ್ತದೆ. ಇಂತಹ ಉದಾತ್ತತೆಯನ್ನು ಸಿನಿಮಾದ ಮೂಲಕ ತೆರೆದಿಟ್ಟಿರುವ ಕಾಂತಾರ ತಂಡವು ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್, ಅಡ್ವೆಂಚರ್ ಎಲ್ಲಕ್ಕಿಂತ ಹೆಚ್ಚಾಗಿ ಡಿವೋಷನ್ ಅನ್ನು ಜನರ ಅಂತರಂಗಕ್ಕೆ ತಲುಪಿಸಿದೆ. ಈ ನಮ್ಮ ಹೆಮ್ಮೆಯ ಸುಸಂಸ್ಕೃತ ಚಿತ್ರವನ್ನು ಥಿಯೇಟರ್ ಗೆ ಹೋಗಿ ನೋಡೋಣ, ಎಲ್ಲಾ ಹಳೆಯ ರೆಕಾರ್ಡ್ ಗಳನ್ನು ಧೂಳಿಪಟ ಮಾಡೋಣ. 

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ