ಡಿಗ್ರಿ ಎಷ್ಟು ಬೇಕಾದ್ರೂ ಕೊಡ್ತಾರೆ, ಆದ್ರೆ ಉದ್ಯೋಗಕ್ಕೆ ಗ್ಯಾರಂಟಿ ಕೊಡಲ್ಲ
ಡಿಗ್ರಿ ಎಷ್ಟು ಬೇಕಾದ್ರೂ ಕೊಡ್ತಾರೆ, ಆದ್ರೆ ಉದ್ಯೋಗಕ್ಕೆ ಗ್ಯಾರಂಟಿ ಕೊಡಲ್ಲ
ಒಂದು ತರಗತಿಯಲ್ಲಿ ಒಂದು ದಡ್ಡ ಮಗು. ಆ ತರಗತಿಯ ಶಿಕ್ಷಕಿಯು ನಾವೆಷ್ಟೇ ಪ್ರಯತ್ನ ಪಟ್ಟರೂ ಇವನಿಗಂತು ಬುದ್ಧಿ ಬರುವುದಿಲ್ಲ, ಮೊದಲು ಇವನನ್ನು ನಮ್ಮ ಶಾಲೆಯಿಂದ ಹೊರ ಹಾಕಬೇಕು ಎಂದು ನಿರ್ಧರಿಸುತ್ತಾಳೆ. ಅದರಂತೆ "ನಿಮ್ಮ ಮಗು ಈ ಪ್ರಪಂಚದಲ್ಲೇ ಅತ್ಯಂತ ದಡ್ಡ ಮಗು. ನಮ್ಮ ಶಾಲೆಯ ಯಾವುದೇ ಶಿಕ್ಷಕರಿಂದ ಈ ಮಗುವಿಗೆ ಪಾಠ ಹೇಳಿಕೊಡಲಾಗುವುದಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಆತನನ್ನು ನಮ್ಮ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ. ನೀವೇ ಅವನಿಗೆ ತರಬೇತಿ ನೀಡಿ" ಎಂದು ಪತ್ರ ಬರೆದು ಮನೆಗೆ ಕೊಟ್ಟು ಕಳಿಸುತ್ತಾರೆ. ಆದರೆ ಆ ಮಗುವಿನ ತಾಯಿ ಕುತೂಹಲಭರಿತ ಮಗನಿಗೆ ಆ ಪತ್ರದಲ್ಲಿ "ನಿಮ್ಮ ಮಗು ಪ್ರಪಂಚದಲ್ಲೇ ಅತಿ ಹೆಚ್ಚು ಬುದ್ಧಿವಂತನಾದ ಮಗು. ಆತನ ಬುದ್ಧಿವಂತಿಕೆಗೆ ಹೋಲಿಸಿದರೆ ನಮ್ಮ ಶಾಲೆ ತುಂಬಾ ಚಿಕ್ಕದು. ನಮ್ಮ ಶಾಲೆಯ ಯಾವ ಶಿಕ್ಷಕರಿಂದಲೂ ಅವನಿಗೆ ತರಬೇತಿ ನೀಡಲು ಸಾಧ್ಯವಿಲ್ಲ. ನೀವೇ ಅವನಿಗೆ ತರಬೇತಿ ನೀಡಿ" ಎಂದು ಶಿಕ್ಷಕರು ಬರೆದಿರುವುದಾಗಿ ತಿಳಿಸುತ್ತಾಳೆ. ಆ ದಡ್ಡ ಮಗುವೇ ಜಗತ್ತಿನ ಇರುಳು ಕಳೆಯಲು ಬೆಳಕು ನೀಡಿದ (ಬಲ್ಬ್ ಕಂಡು ಹಿಡಿದ) ಶ್ರೇಷ್ಠ ವಿಜ್ಞಾನಿ 'ಥಾಮಸ್ ಆಲ್ವಾ ಎಡಿಸನ್'. ಅಂದು ಆ ಮಹಾತಾಯಿ ಮಾಡಿದ ಒಂದು ಕಾರ್ಯದಿಂದ ದಡ್ಡ ಹುಡುಗ ಅದ್ಭುತವಾಗಿ ಬೆಳೆದು ಶ್ರೇಷ್ಠ ವಿಜ್ಞಾನಿಯಾದನು. ಕೋಟಿ ಕಳೆದುಕೊಂಡರೂ ಮತ್ತೆ ಸಂಪಾದಿಸಬಹುದು, ಮನೆ, ಆಸ್ತಿ - ಪಾಸ್ತಿ ನಷ್ಟವಾದರೂ ಮತ್ತೆ ಗಳಿಸಬಹುದು, ಪರೀಕ್ಷೆಯಲ್ಲಿ ಫೇಲ್ ಆದರೂ ಮತ್ತೆ ಪಾಸಾಗಬಹುದು, ಆದರೆ ಒಂದು ಬಾರಿ ಬದುಕಿನ ಆತ್ಮವಿಶ್ವಾಸದ ಸೌಧ ಮುರಿದು ಬಿದ್ದರೆ ಮತ್ತೆ ಕಟ್ಟಿಕೊಳ್ಳಲು ತುಂಬಾ ತುಂಬಾ ಕಷ್ಟವಾಗುತ್ತದೆ ಅಥವಾ ಜೀವನಪರ್ಯಂತ ಸಾಧ್ಯವೇ ಆಗದಿರಬಹುದು.
ವಿದ್ಯಾಭ್ಯಾಸವೊ ಅಥವಾ ವ್ಯವಸ್ಥಿತ ಬಂಧನವೊ?: ಶಾಲಾ ಕಾಲೇಜಿನ ದಿನಗಳಲ್ಲಿದ್ದಾಗ ಜೀವನವೆಲ್ಲಾ ಪರೀಕ್ಷೆಗಳು ಮುಗಿದು ಹೋಗಲಿ ಎಂದು ಕಾದು ಕುಳಿತೆವು. ಆದರೆ ನಮಗೆ ಅರ್ಥವೇ ಆಗಲಿಲ್ಲ, ಕಾಲೇಜಿನ ಪರೀಕ್ಷೆಗಳು ಮುಗಿದ ಮೇಲೆ ಪ್ರತಿದಿನವೂ ಪರೀಕ್ಷೆ ಇರುತ್ತದೆ ಎಂದು. 21ನೆ ಶತಮಾನದಲ್ಲಿ ಒಬ್ಬ ತಂದೆ ತನ್ನ ಮಗನನ್ನು ಅವನಿಚ್ಛೆಯ ವಿರುದ್ಧವಾಗಿ ಅವರ ಗದ್ದೆಯಲ್ಲಿ ಕೆಲಸ ಮಾಡಿಸಿದರೂ ಬಾಲ ಕಾರ್ಮಿಕ ಪದ್ಧತಿಯ ಕಾನೂನಿನಡಿಯಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದು. ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಯನ್ನು ಸರಿದಾರಿಗೆ ತರಲು ಒಂದು ಪೆಟ್ಟು ಕೊಟ್ಟರೂ ಕಾನೂನಿನಡಿಯಲ್ಲಿ ಆತನಿಗೆ ಶಿಕ್ಷೆ ವಿಧಿಸಬಹುದು. ಆದರೆ ಇಂದಿನ ಶಿಕ್ಷಣ ಪದ್ಧತಿಯನುಸಾರ ಮಕ್ಕಳಿಗೆ ಸ್ವಲ್ಪವೂ ಇಷ್ಟ ಇಲ್ಲದಿರುವಂತೆ 4 ಗೋಡೆಗಳ ಮಧ್ಯೆ ಕೂಡಿ ಹಾಕಿ ಶಿಕ್ಷಕರು ಇಂತಿಷ್ಟು ನಿಮಿಷಗಳಿಗೊಂದು ತರಗತಿ, ಮತ್ತಷ್ಟು ನಿಮಿಷಗಳಿಗೊಂದು ತರಗತಿ ಎಂದು ಅವರ ಸ್ವಾತಂತ್ರ್ಯ, ಭಾವನೆಗಳಿಗೆ ಬೆಲೆಯೇ ಕೊಡದೆ ನಿರಂತರ ಪಾಠ ಮಾಡುತ್ತಿರಬಹುದು. ಇದನ್ನು ನಾವು ಏನೆಂದು ಅರ್ಥ ಮಾಡಿಕೊಳ್ಳಬೇಕು? ಹೇಗಿದ್ದರೂ ವಿದ್ಯಾಭ್ಯಾಸವಾದ ಮೇಲೆ ಕಂಪನಿ/ಫ್ಯಾಕ್ಟರಿಗಳಿಗೆ ಸೇರಿ ನಿಯಮಿತವಾಗಿ ನಿರ್ದಿಷ್ಟ ಅವಧಿಯವರೆಗೆ ಕಾರ್ಯ ಮಾಡಬೇಕು, ಪ್ರಪಂಚದ ವೈಭೋಗ ಆರ್ಥಿಕ ಕ್ಷೇತ್ರದ ವಾಹನದ ಚಕ್ರಗಳು ನಿರಂತರ ಚಲಿಸುವಂತೆ ನೋಡಿಕೊಳ್ಳುವುದೇ ನಮ್ಮ ಕಾಯಕವಾಗಿರುವಾಗ ಚಿಕ್ಕಂದಿನಿಂದಲೇ ಈ ತರಬೇತಿ ನೀಡೋಣವೆಂದು ರಚಿಸಲಾಗಿರುವ ವ್ಯವಸ್ಥಿತ ಬಂಧನವೆಂದೇ!? ದೈಹಿಕ ಶ್ರಮ, ಪೆಟ್ಟುಗಳು ಇಚ್ಛೆಗೆ ವಿರುದ್ಧವಾದರೂ ಶಿಕ್ಷೆ ನೀಡುವ ನಮ್ಮ ಕಾನೂನುಗಳು ಮಾನವನ ಸಹಜ ಪ್ರಕೃತಿಗೆ ಹೆಚ್ಚು ಪ್ರಿಯವಾದ ಮಾನಸಿಕ ಸ್ವಾತಂತ್ರ್ಯಕ್ಕೆ ಮಾರಕವಾಗುವಂತೆ ಚಾಲ್ತಿಯಲ್ಲಿರುವ ಶಿಕ್ಷಣ ವ್ಯವಸ್ಥೆಯ ಬಗೆಗೆ ಯಾವುದೇ ಗಣನೀಯ ಸುಧಾರಣೆಯನ್ನು ಮಾಡದೆ ಇರುವುದು ವಿಚಿತ್ರವಾಗಿದೆ.
ಧರ್ಮಸಂಕಟವೊ ಅಥವಾ ಧರ್ಮಾಂಧತೆಯೊ?: ಶಿಕ್ಷಣವನ್ನು ಪ್ರತಿಷ್ಠೆಯನ್ನಾಗಿ ಕಾಣುತ್ತಿರುವವರು ನಮ್ಮ ದೇಶದಲ್ಲಿ ಪಾಸಾಗಲು ಬೇಕಾಗುವ ಅಂಕಗಳು ಕೇವಲ 35ಅಲ್ಲ, 98,99 ಎಂದು ಅಘೋಷಿತವಾಗಿ ಬದಲಾವಣೆ ಮಾಡುತ್ತಿದ್ದಾರೆ. ಅಷ್ಟಾದಾಗ್ಯು ಇನ್ನು 1,2 ಅಂಕಗಳು ಏಕೆ ಕಡಿಮೆಯಾದವು ಎಂದು ಯೋಚಿಸುತ್ತಾ ಕೂರುವ ಮಂದಿಗೇನು ಕಡಿಮೆಯಿಲ್ಲ. ಮನುಷ್ಯ ರೋಬೋಟ್ ಅಲ್ಲ, ಭಾವನಾ ಜೀವಿ. ಒಬ್ಬ ವಿದ್ಯಾರ್ಥಿ ಯಾವುದೋ ವೈಯಕ್ತಿಕ ಸಂವೇದನಾಶೀಲತೆಯ ಕಾರಣಕ್ಕೆ ಅಥವಾ ಸಾಮಾಜಿಕ ಜೀವನದ ಸಮಸ್ಯೆಗಳ ಕಾರಣಕ್ಕೆ ಅಥವಾ ಶಿಕ್ಷಣದಲ್ಲಿ ಅನಾಸಕ್ತಿ, ಒತ್ತಡಗಳ ಕಾರಣಕ್ಕೆ ವಿದ್ಯಾಭ್ಯಾಸವನ್ನು ನಿಲ್ಲಿಸಿದ ಎನ್ನಿ. ಅಲ್ಲಿಗೆ ಅವನ ಕಥೆ ಮುಗಿದಂತೆಯೇ ಎಂದು. ಎಷ್ಟೋ ಉದ್ಯೋಗಗಳಿಗೆ ಅಪ್ಲಿಕೇಶನ್ ಹಾಕುವಾಗ ವಿದ್ಯಾಭ್ಯಾಸದ ಅವಧಿಯಲ್ಲಿ ಒಂದು ವರ್ಷವೂ ಮಧ್ಯೆ ಅಂತರ ಇರಬಾರದು ಎಂಬುದು ಮೊಟ್ಟ ಮೊದಲನೆಯ ಕಂಡಿಷನ್ ಆಗಿರುತ್ತದೆ. ಇದಕ್ಕಿಂತಲೂ ಗಂಭೀರ ಸಂಗತಿಯನ್ನು ಚರ್ಚಿಸೋಣ. ಒಬ್ಬ ವಿದ್ಯಾರ್ಥಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಬಿ.ಇ ಓದುತ್ತಿರುತ್ತಾನೆ ಎಂದುಕೊಳ್ಳಿ. ಮುಂದೆ ಈ ವಿಷಯವನ್ನು ನಾನು ಓದಲಾಗುವುದಿಲ್ಲ, ಕಲೆಯ ವಿಭಾಗದಲ್ಲಿ ಮುಂದುವರಿಯಬೇಕೆಂದು ಜ್ಞಾನೋದಯವಾದರೆ ಆತ ಏನು ಮಾಡಬೇಕು? ಮತ್ತೆ ಹಿಂದೆ ಹೋಗಿ ಪಿಯುಸಿ ಮಾಡಿ, ಬಿ.ಎ ಓದಬೇಕು. ಎಂತಹ ಕ್ಲಿಷ್ಟಕರ ಪರಿಸ್ಥಿತಿ ಇದು!? ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದೆಡೆ ಪೋಷಕರು ತಾವು ದುಡಿದ ಬಹುಪಾಲು ಹಣವನ್ನು ಶಿಕ್ಷಣದ ಹೆಸರಲ್ಲಿ ಹಣ ಸುಲಿಗೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಟ್ಟಿರುತ್ತಾರೆ, ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆದ ಮಕ್ಕಳು ತಮ್ಮ ಅಪ್ಪ-ಅಮ್ಮನ ಈ ಬೆಲೆಕಟ್ಟಲಾಗದ ಶ್ರಮದ ಫೀಸ್ ಹಣವನ್ನೆಲ್ಲಾ ನೀರಲ್ಲಿ ಹೋಮ ಮಾಡಿದಂತೆ ವ್ಯರ್ಥ ಮಾಡಿ ಮತ್ತೆ ಪಿಯುಸಿಯಿಂದ ಬೇರೆ ಇಷ್ಟಪಟ್ಟ ವಿಷಯಗಳನ್ನು ಓದುವುದು ಎಂತಹ ಧರ್ಮ ಸಂಕಟ! ಈಗಿನ ಹೊಸ ಶಿಕ್ಷಣ ಪದ್ಧತಿ ಬಂದ ಮೇಲೆ ಈ ಸಮಸ್ಯೆಗೆ ಅಲ್ಪ-ಸ್ವಲ್ಪವಾದರೂ ಪರಿಹಾರ ದೊರೆತಿದೆ. ಒಂದು ಡಿಗ್ರಿಯನ್ನು ಮಾಡುತ್ತಾ ಅನಿರೀಕ್ಷಿತವಾಗಿ ಯಾವುದಾದರೂ ಒಂದು ಹಂತದಲ್ಲಿ ನಿಲ್ಲಿಸಿದರೂ, ಓದಿರುವಷ್ಟು ನಮೂದಿಸಿ ಆ ಡಿಗ್ರಿ ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ. ಹಾಗೆಯೇ ವಿಜ್ಞಾನದ ಡಿಗ್ರಿಯಲ್ಲೂ ಕಲಾ ವಿಷಯಗಳನ್ನು ಜೊತೆ ಜೊತೆಗೆ ಓದಿ ಅದಕ್ಕೆ ಪೂರಕವಾದ ಉದ್ಯೋಗವನ್ನು ಪಡೆಯಬಹುದಾದ ಗಣನೀಯ ಸುಧಾರಣೆಗಳು ಕಂಡು ಬರುತ್ತಿವೆ.
ಆತ್ಮನಿರ್ಭರತೆಯೊ ಅಥವಾ ಆತ್ಮವಿಸ್ಮೃತಿಯೊ?: ಕಳೆದ ವಾರವಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ ಫಲಿತಾಂಶ ಕೂಡ ಹೊರಬೀಳಲಿದೆ. ಈ ಎರಡೂ ಪರೀಕ್ಷೆಗಳು ಭವಿಷ್ಯದ ವಿದ್ಯಾಭ್ಯಾಸಕ್ಕೆ ದಿಕ್ಸೂಚಿಗಳೇನೊ ನಿಜ. ಆದರೆ ಇವುಗಳಲ್ಲಿ ಫೇಲಾದರೆ ಆತ್ಮಹತ್ಯೆಯೇ ಮಾಡಿಕೊಳ್ಳಬೇಕು ಎಂಬ ಅತೀ ಒತ್ತಡದಾಯಕ, ನಕಾರಾತ್ಮಕ ಬೆಳವಣಿಗೆಗಳೇಕೆ ನಮ್ಮ ಸಮಾಜದಲ್ಲಿ ಆಗುತ್ತಿದೆ? ಮಾನವ ಜೀವನದ ಸತ್ಯಾಸತ್ಯತೆಯನ್ನು ಅನ್ವೇಷಿಸಲು, ಮಹಾ ಸಾಹಸದ ಆಧ್ಯಾತ್ಮಿಕ ಜೀವನದ ಅಗ್ನಿಪಥದಲ್ಲಿ ಸಾಗಲು, ವೇದ, ಯೋಗ, ಶಾಸ್ತ್ರ, ಕ್ಷಾತ್ರ ಮುಂತಾದ ಮಾರ್ಗಗಳಿಂದ ಉತ್ತಮವಾಗಿ ಬದುಕಲು ಜಗತ್ತಿಗೇ ಅಭಯ ನೀಡಿದ ನಮ್ಮ ತಾಯ್ನಾಡಿನಲ್ಲಿಂದು ಶಿಕ್ಷಣ ವ್ಯವಸ್ಥೆಯ ಒತ್ತಡದಿಂದ ಭವಿಷ್ಯದ ತೇಜಸ್ವಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಈ ಅಸಹನೀಯ ದುಃಖವನ್ನು ಹೇಗೆ ಎದುರಿಸುವುದು? ಇತ್ತೀಚೆಗೆ ದೇಶದಲ್ಲೇ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾಗಿರುವ ಐಐಟಿಗಳಲ್ಲೂ ರಾಂಕ್ ವಿದ್ಯಾರ್ಥಿಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಪಿಯುಸಿಯ ಮುಂದಿನ ಅಂಧಕಾರದ ಅಧ್ಯಾಯ! ಸನಾತನಿ, ಹಿಂದೂಸ್ತಾನಿಗಳಾದ ನಾವು ಕನಿಷ್ಟ 10000ಕ್ಕಿಂತಲೂ ಅಧಿಕ ಸಂವತ್ಸರಗಳ ಇತಿಹಾಸವನ್ನು ಹೊಂದಿರುವ ಮಹಾನ್ ಪರಂಪರೆಯ ಚೇತನಗಳು ಎಂದು ಮರೆಯಬೇಡಿ ಮಕ್ಕಳೇ.....
ಸ್ಪರ್ಧೆಯ ಸಂಕುಚಿತತೆಯೊ ಅಥವಾ ಸ್ಪರ್ಧಾತೀತದ ವಿಕಸತೆಯೊ?: ಕಲಿಯುಗ ಎಂದರೆ ಸ್ಪರ್ಧಾಯುಗ ಅನ್ನುವಷ್ಟರ ಮಟ್ಟಿಗೆ ಸ್ಪರ್ಧೆಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಇದು ಕೇವಲ ಶಿಕ್ಷಣ ಕ್ಷೇತ್ರಕ್ಕಷ್ಟೆ ಸೀಮಿತವಾಗದೆ ಸರ್ವಸ್ಪರ್ಶಿ ಸರ್ವವ್ಯಾಪಿ ಎಂಬಂತಾಗಿದೆ. "ಅನ್ಯರ ಸೋಲು ನನ್ನ ಗೆಲುವು, ಅನ್ಯರ ದುಃಖ ನನ್ನ ಸುಖ", ಇದುವೇ ಸ್ಪರ್ಧಾ ಜಗತ್ತಿನ ವಿಜಯಮಂತ್ರ. ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿರುವ ಮತ್ತೊಬ್ಬ ವ್ಯಕ್ತಿಯನ್ನು ನೋಡಿ, ಅವನ ಜೊತೆ ಸ್ಪರ್ಧೆಗಿಳಿದು ಮತ್ತಷ್ಟು ವೇಗವಾಗಿ ನಡೆಯಬಹುದು. ಆದರೆ ಸ್ಪರ್ಧಾ ಮನೋಭಾವದಿಂದ ಅವನ ಜೀವನ ಅಷ್ಟೇ ಆಗಿ ಬಿಡಬಹುದು. ಯಾರಿಗೆ ಗೊತ್ತು ಸ್ಪರ್ಧಾತೀತವಾಗಿ ಆ ವ್ಯಕ್ತಿ ತನ್ನ ಜೀವನದ ಎಲ್ಲಾ ಸ್ತರಗಳಲ್ಲೂ ವಿಕಾಸ ಹೊಂದುತ್ತಾ ಮುನ್ನುಗ್ಗಿದ್ದರೆ ಒಂದು ದಿನ ಹಾರಬಹುದಿತ್ತೊ ಏನೋ!
ನಿರುದ್ಯೋಗದ ಬಿಸಿಯೊ ಅಥವಾ ಉದ್ಯೋಗದ ಅನರ್ಹತೆಯೊ?: ಇಡೀ ಜಗತ್ತಿನಲ್ಲೇ ಫಲವತ್ತಾದ ಭೂ ಸಂಪನ್ಮೂಲ, ಜಲ ಸಂಪನ್ಮೂಲ, ಜ್ಞಾನ ಸಂಪನ್ಮೂಲ, ಮಾನವ ಸಂಪನ್ಮೂಲ ಮುಂತಾದವುಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಕೆಲಸಕ್ಕಾಗಿ ಇಷ್ಟೊಂದು ಅಲೆದಾಟ, ಪರದಾಟ, ಹೊಡೆದಾಟ, ಹೋರಾಟಗಳಾಗುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿ! ಈಗಲಾದರೂ ಹಲವಾರು ಪ್ರರೀಕ್ಷೆ, ಸಂದರ್ಶನ ಮುಂತಾದ ಪ್ರಕ್ರಿಯೆಗಳ ಮೂಲಕ ಉದ್ಯೋಗಗಳ ನೇಮಕಾತಿ ನಡೆಯುತ್ತಿದೆ. ಭ್ರಷ್ಟಾಚಾರ ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೆ ಮೊದಲು ಕೆಲಸ ಹುಡುಕಲು ಕಚೇರಿಗಳಿಗೆ ಅಲೆಯುತ್ತಿದ್ದ ಯುವಕ-ಯುವತಿಯರು ಸಂದರ್ಶನದಲ್ಲಿ ಪಾಸಾಗುತ್ತೀನೊ ಇಲ್ಲವೊ ಎಂದು ಯೋಚಿಸುತ್ತಿರಲಿಲ್ಲ, ಬದಲಾಗಿ ಈ ಕೆಲಸ ಗಿಟ್ಟಿಸಿಕೊಳ್ಳಲು ಯಾವ ರಾಜಕಾರಣಿ/ಪ್ರಮುಖ ವ್ಯಕ್ತಿಯಿಂದ ಶಿಫಾರಸ್ಸು ಮಾಡಿಸುವುದು ಎಂದು ಯೋಚಿಸುತ್ತಿದ್ದರು. ವಾಸ್ತವದಲ್ಲಿ ನಮಗೆ ಸಮಸ್ಯೆಯಾಗುತ್ತಿರುವುದು ನಿರುದ್ಯೋಗದ ಹೆಚ್ಚಳವೊ ಅಥವಾ ಉದ್ಯೋಗಕ್ಕೆ ಅನರ್ಹವಾದ ಕೌಶಲ್ಯರಹಿತ ವಿದ್ಯಾರ್ಥಿಗಳ ಹೆಚ್ಚಳವೊ? ನಮ್ಮ ಶಿಕ್ಷಣ ಸಂಸ್ಥೆಯವರು ಎಷ್ಟು ಬೇಕಾದ್ರೂ ಡಿಗ್ರಿ ಕೊಡ್ತಾರೆ, ಆದರೆ ಉದ್ಯೋಗಕ್ಕೆ ಗ್ಯಾರಂಟಿ ಕೊಡಲ್ಲ. ಮತ್ತೆ ಇದಕ್ಕೂ ಮೂಲಭೂತ ಕಾರಣ 'ನಮ್ಮ ಅತ್ಯುನ್ನತ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ, ಯೋಜನಾಬದ್ಧವಾಗಿ ಧ್ವಂಸ ಮಾಡಿ ಕಪ್ಪು ಬ್ರಿಟಿಷರನ್ನು (ಶರೀರದಿಂದ ಹಿಂದುಸ್ತಾನಿಯಾಗಿ ಬುದ್ಧಿಯಿಂದ ಬ್ರಿಟಿಷರಾಗಿರುವವರು) ನಿರ್ಮಾಣ ಮಾಡಲು ಬ್ರಿಟಿಷರು ಜಾರಿಗೊಳಿಸಿದ ಮೆಕಾಲೆ ಶಿಕ್ಷಣ ಪದ್ಧತಿ. ಇದೀಗ ಹೊರಬಂದಿರುವ ಇಂಡಿಯಾ ಸ್ಕಿಲ್ ರಿಪೋರ್ಟ್ -2023ರ ಪ್ರಕಾರ ನಮ್ಮ ದೇಶದ ಶೇ.50ರಷ್ಟು ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಕೆ ಅವಶ್ಯಕವಾದ ಕೌಶಲ್ಯವಿಲ್ಲ. ಇದರಂತೆ MBA- 40%, BE- 43%, B.com- 40%, B.sc- 63%, ITI- 66%, Diplamo- 72%, B.pharma- 43% ಪ್ರಮಾಣದ ವಿದ್ಯಾರ್ಥಿಗಳಲ್ಲಿ ಸಂಬಂಧಿತ ಉದ್ಯೋಗಗಳನ್ನು ಪಡೆಯಲು ಅವಶ್ಯಕವಾದ ಕೌಶಲ್ಯಗಳಿಲ್ಲ. ಪ್ರತಿಷ್ಠಿತ ಐಐಟಿ ಮುಂತಾದ ಕೆಲವು ಉತ್ತಮ ಖಾಸಗಿ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳೇನೊ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗವನ್ನು ಗಳಿಸಿಕೊಳ್ಳುತ್ತಾರೆ. ಆದರೆ ಇನ್ನುಳಿದ ವಿದ್ಯಾರ್ಥಿಗಳು ಕಾಲೇಜಿನ ನಂತರವೂ ಉದ್ಯೋಗ ಸಿಗದೆ, ಕೌಶಲ್ಯ ತರಬೇತಿಯನ್ನು ಪಡೆಯಲು ಕಾಲೇಜಿಗಿಂತ ಹೆಚ್ಚು ಫೀಸ್ ಖರ್ಚು ಮಾಡಿ ಅಲೆದಾಡುತ್ತಿರುತ್ತಾರೆ. ಅಂದ ಹಾಗೆ ಇಷ್ಟು ದೊಡ್ಡ ದೇಶದಲ್ಲಿ ಲಭ್ಯವಿರುವುದು ಕೇವಲ 23 ಐಐಟಿಗಳ 16000 ಸೀಟುಗಳು ಮಾತ್ರ.
ಸರ್ಕಾರಿ ಕೆಲಸ- ಭ್ರಮೆಯೊ ಅಥವಾ ವಾಸ್ತವವೊ?: ನಮ್ಮ ದೇಶದ ಹಲವಾರು ಬಡ ಕುಟುಂಬಗಳಲ್ಲಿ ಅಥವಾ ಮಧ್ಯಮವರ್ಗದ ಕುಟುಂಬಗಳಲ್ಲಿ ಸರ್ಕಾರಿ ಕೆಲಸ ಪಡೆಯುವುದು ಜೀವನದ ಗುರಿಯೇ ಆಗಿದೆ ಎಂದು ಹೇಳಬಹುದು. ಒಂದು ವರ್ಷ ಓದುತ್ತಾರೆ, ಎರಡು ವರ್ಷ ಓದುತ್ತಾರೆ, ಐದು ವರ್ಷ ಓದುತ್ತಾರೆ, ಹತ್ತು ವರ್ಷ ಓದುತ್ತಾರೆ.... ಅಬ್ಬಬ್ಬಾ ಒಂದು ಸರ್ಕಾರಿ ಕೆಲಸ ಪಡೆಯಲು ಎಷ್ಟೊಂದು ಸಮಯ, ಮಾನವ ಸಂಪನ್ಮೂಲ ವ್ಯರ್ಥವಾಗುತ್ತದೆ. ಐಎಎಸ್ ನಂತಹ ದೊಡ್ಡ ಪರೀಕ್ಷೆಗೆ ಓದುವವರಿಗಾದರೂ ಅವರು ಆಳವಾಗಿ ಓದಿ ಸಂಪಾದಿಸಿದ ಜ್ಞಾನ ಉಪಯುಕ್ತವಾಗುತ್ತದೆ. ಆದರೆ MCQ (ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು) ವಿಧಾನದ ಪರೀಕ್ಷೆಗಳಿಗೆ ಅಷ್ಟೊಂದು ವರ್ಷಗಳ ಕಾಲ ಓದಿದವರಿಗೆ ಆಳವಾದ ಜ್ಞಾನವಿಲ್ಲದೆ ಯಂತ್ರಗಳಂತೆ ಮಾಹಿತಿ ಮಾತ್ರ ಇರುತ್ತದೆ. ಉದ್ಯೋಗ ಪಡೆದುಕೊಂಡವರೇನೊ ಬದುಕಿಕೊಂಡರು, ಆದರೆ ಪಡೆದುಕೊಳ್ಳಲಾಗದವರ ಕಥೆಯೇನು? ಕೇವಲ ನೂರರಿಂದ ಇನ್ನೂರು ಖಾಲಿ ಇರುವ ಹುದ್ದೆಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಪ್ಲಿಕೇಶನ್ಗಳು ಬಂದಿರುತ್ತವೆ. ಮೊದಲೇ ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ, ಅದರಿಂದಲೇ ಇಷ್ಟೊಂದು ಸ್ಪರ್ಧೆ, ಜಟಾಪಟಿ ಎಲ್ಲವೂ. ಅತೀ ಕಡಿಮೆ ಗ್ರೇಡ್ ನ ಸರ್ಕಾರಿ ಹುದ್ದೆಗಳಿಗೂ ಸಹ ಪಿ.ಹೆಚ್.ಡಿ, ಮಾಸ್ಟರ್ಸ್ ಓದಿರುವ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕುತ್ತಿರುವುದು ಈಗ ಸರ್ವೇ ಸಾಮಾನ್ಯ! ದೀರ್ಘ ಕಾಲ ನಿಮ್ಮನ್ನು ನೀವು ಬಂಧನದಲ್ಲಿರಿಸಿಕೊಂಡು ನಿರ್ದಿಷ್ಟ ವಿಷಯಗಳನ್ನು ಅಧ್ಯಯನ ಮಾಡಬೇಕಾದ ಅವಶ್ಯಕತೆಯಿರುವ ಸರ್ಕಾರಿ ಕೆಲಸ ಪಡೆಯಲು ನಿಮಗೆ ಸಾಧ್ಯವೇ, ನಿಮ್ಮ ಕೌಟುಂಬಿಕ-ಸಾಮಾಜಿಕ ವಾತಾವರಣ ಅದಕ್ಕೆ ಪೂರಕವೇ? ಈ ಎಲ್ಲಾ ವೈಯಕ್ತಿಕ ವಿಚಾರಗಳನ್ನು ನಿಮ್ಮ ವಿಶ್ವಾಸಾರ್ಹರ ಬಳಿ ಚರ್ಚಿಸಿ, ಮೌಲ್ಯ ಮಾಪನ ಮಾಡಿಸಿಕೊಂಡು ಮುಂದಿನ ಹೆಜ್ಜೆ ಇಡುವುದು ಒಳಿತು. ಇಲ್ಲದಿದ್ದರೆ ನೀವು ಫೇಲಾಗಿ ಫೇಲಾಗಿ ಸಮಯ ವ್ಯರ್ಥ ಮಾಡುತ್ತಾ ಹೋದರೆ ಏನು ಕಥೆ? ನಿಮ್ಮ ಟ್ಯೂಷನ್ ಸೆಂಟರ್ ಗಳೇನೊ ಫೀಸ್ ನ ಹಣದಲ್ಲಿ ಜೀವನ ನಡೆಸುತ್ತವೆ, ನೀವೇನು ಮಾಡುತ್ತೀರಾ? ಈ ಸರ್ಕಾರಿ ಕೆಲಸಗಳಲ್ಲಿ ಹೇಳುವವರು ಕೇಳುವವರು ಯಾರೂ ಇರುವುದಿಲ್ಲ, ಇಷ್ಟಬಂದ ಹಾಗೆ ಕೆಲಸ ಮಾಡುತ್ತಾ ಸಂಬಳದ ಜೊತೆ ಜೊತೆಗೆ ಮತ್ತಷ್ಟು ದುಡ್ಡು ಮಾಡಿಕೊಳ್ಳಬಹುದು ಎಂದು ಭಾವಿಸಿರುವ ಮಂದಿಯೇ ಹೆಚ್ಚು. ನಮ್ಮ ದೇಶದ ಸರ್ಕಾರದಲ್ಲಿ ಅತೀ ಹೆಚ್ಚು ಶಕ್ತಿಶಾಲಿಯಾಗಿರುವ ಪ್ರಧಾನಮಂತ್ರಿ ಹುದ್ದೆಯಿಂದ ಹಿಡಿದು ಗ್ರಾಮ ಪಂಚಾಯಿತಿ ಅಧ್ಯಕ್ಷರವರೆಗೆ ಎಲ್ಲರನ್ನೂ ಪ್ರಶ್ನಿಸಬಹುದಾದ, ನಿಂದಿಸಬಹುದಾದ, ಚುನಾವಣೆಗಳಲ್ಲಿ ಅನರ್ಹರನ್ನು ಉಚ್ಛಾಟಿಸಬಹುದಾದ ಮಹತ್ತಮ ವ್ಯವಸ್ಥೆಯೇ ನಮ್ಮಲ್ಲಿದ್ದರೂ ಸರ್ಕಾರದ ಅಧಿಕಾರಿಗಳು ಮಾತ್ರ ಒಮ್ಮೆ ನೇಮಕಾತಿಯಾದ ನಂತರ ಶಾಶ್ವತವಾಗಿ ಯಾವುದೇ ನಿಂದನೆ, ಉಚ್ಛಾಟನೆಗಳಿಲ್ಲದೆ ಪ್ರಶ್ನಾತೀತರಾಗಿ ಉಳಿದುಬಿಡುವುದು ಪ್ರಪಂಚದ ಎಂಟನೇ ಅದ್ಭುತ!
ವಿಜ್ಞಾನ - ವಿಷಯವೊ ಅಥವಾ ಮತವೊ?: 21ನೆ ಶತಮಾನದಲ್ಲಿ ನಿಸ್ಸಂಶಯವಾಗಿ ವಿಜ್ಞಾನ - ತಂತ್ರಜ್ಞಾನದ್ದೇ ಹೆಚ್ಚು ದರ್ಬಾರು ನಡೆಯುತ್ತಿರುವುದು. ಶಿಕ್ಷಣದಲ್ಲಿ ಈಗ ಕ್ರಾಂತಿಯನ್ನೇ ಮಾಡಿರುವ ವಿಜ್ಞಾನ ತನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಮಹಾಕ್ರಾಂತಿಯನ್ನೇ ಮಾಡಬಹುದಾದ ಎಲ್ಲಾ ಮುನ್ಸೂಚನೆಗಳು ಕಂಡು ಬರುತ್ತಿವೆ. ಈ ತಂತ್ರಜ್ಞಾನದಿಂದ ಹೆಚ್ಚು ನೆನಪಿಟ್ಟುಕೊಂಡು ಅಂಕ ಗಳಿಸುವ ಅಥವಾ ಬುದ್ಧಿವಂತನೆಂದು ತೋರ್ಪಡಿಸಿಕೊಳ್ಳುವ ಯಾರಿಗೂ ಬೆಲೆ ಇರುವುದಿಲ್ಲ, ಇನ್ನೇನಿದ್ದರೂ ಆಳವಾದ ಜ್ಞಾನ ಹೊಂದಿರುವವರಿಗೇ ಬೆಲೆ! ವಿಜ್ಞಾನದಲ್ಲಿ ಹಲವಾರು ಅನುಕೂಲಗಳ ಜೊತೆಗೆ ಅನಾನುಕೂಲಗಳೂ ಇವೆ. ಅದರಲ್ಲಿ ಒಂದು ಕಲಾ ವಿಭಾಗದ ಮೇಲೆ ಅದು ಸಾಧಿಸುತ್ತಿರುವ ಪ್ರಾಬಲ್ಯ. ಜೊತೆಗೆ ವಿಜ್ಞಾನವನ್ನು ಅತೀ ಶ್ರೇಷ್ಠ ಎಂಬ ಪಟ್ಟಕ್ಕೇರಿಸಿ ಪಾಶ್ಚಾತ್ಯ ಮತಗಳಂತೆ ಅದನ್ನು ಪ್ರಶ್ನಾತೀತವಾಗಿ ಮಾಡುತ್ತಿರುವುದು. ವಿಜ್ಞಾನವು ನಮ್ಮ ಸನಾತನ ಪದ್ಧತಿಯಲ್ಲಿರುವ ವೇದಗಣಿತ, ವೈಜ್ಞಾನಿಕ ಸಂಶೋಧನೆಗಳಂತೆ ಪ್ರಶ್ನೆ, ಚರ್ಚೆ, ವಿಮರ್ಶೆಗಳನ್ನು ಹುಟ್ಟು ಹಾಕುತ್ತಾ ಸಾಗಿದರೆ ಮಾತ್ರ ನಿರಂತರ ಸಾವಿರಾರು ವರ್ಷಗಳ ಕಾಲ ಬೆಳೆಯಲು ಸಾಧ್ಯ.
ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿ, ಧಿಡೀರನೆ ಆಮೂಲಾಗ್ರ ಬದಲಾವಣೆ ಮಾಡುವುದು ಅಸಾಧ್ಯವಷ್ಟೇ ಅಲ್ಲ, ಅನಾಹುತವೂ ಹೌದು. ಹಾಗೆ ಮಾಡಿದ್ದೇ ಆದರೆ ದೇಶದ ಸಂಪೂರ್ಣ ವ್ಯವಸ್ಥೆಯೇ ಮುರಿದು ಬೀಳುತ್ತದೆ. ಈ ಎಲ್ಲಾ ಸುಧಾರಣೆಗಳು ಹಂತ ಹಂತವಾಗಿ ನಡೆಯಬೇಕಿದೆ. ಈಗ ಜಾರಿಯಾಗಿರುವ ನೂತನ ಶಿಕ್ಷಣ ಪದ್ಧತಿ, ಪ್ರಧಾನಮಂತ್ರಿ- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಪರೀಕ್ಷಾ ಪೆ ಚರ್ಚಾ ಉಜ್ವಲ ಭವಿಷ್ಯದ ಭರವಸೆಯನ್ನು ನೀಡುತ್ತಿದೆ. ಶ್ರೀ ಗುರು ಸ್ವಾಮಿ ವಿವೇಕಾನಂದರು ಹೇಳಿರುವಂತೆ, ನಮ್ಮ ದೇಶದ ಎಲ್ಲಾ ಬೆಳವಣಿಗೆಗಳಿಗೆ ಶಕ್ತಿ ಹಾಗೂ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ 'ಶಿಕ್ಷಣ'. ಸದ್ಗುರು ಜಗ್ಗಿ ವಾಸುದೇವ್ ಎಂಬ ಮಹಾಯೋಗಿಗಳ ಪ್ರೇರಣೆಯಿಂದ ಆರಂಭಗೊಂಡಿರುವ ಜೀವನೋಪಾಯ ಆಧಾರಿತ ಇಶಾ ವಿದ್ಯಾಲಯ ಹಾಗೂ ಜೀವನ ವಿಕಾಸ ಆಧಾರಿತ ಇಶಾ ಸಂಸ್ಕೃತಿ ಶಾಲೆಗಳನ್ನು ಒಳಗೊಂಡಂತೆ ಇನ್ನಿತರ ಪ್ರಮುಖರ ಕಲ್ಪನೆಯ ಶಾಲೆಗಳ ಕೇಸ್ ಸ್ಟಡಿಯನ್ನು ಮಾಡಿದರೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುವುದು. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಅದನ್ನು ಭೇದಿಸಿ ಭಾರತೀಯರು/ಭಾರತೀಯ ಮೂಲದವರು ಇಂದಿಗೂ ಪ್ರಪಂಚದ ನಾನಾ ರಾಷ್ಟ್ರಗಳಲ್ಲಿ ಪ್ರಧಾನಮಂತ್ರಿ, ಉಪರಾಷ್ಟ್ರಪತಿ, ಸಿಇಒ ಸೇರಿದಂತೆ ಅನೇಕ ಉನ್ನತ ಹುದ್ದೆಗಳನ್ನಲಂಕರಿಸಿ ಸಾಧನೆಗೈಯುತ್ತಿದ್ದಾರೆ. ತನ್ನ ಒಡಲೊಳಗೆ ಎಷ್ಟೇ ದುಃಖವಿದ್ದರೂ ಬೇರೆಯವರಿಗೆ ಮಾತ್ರ ದುಃಖ ನೀಡದೆ ಸಂತೋಷವನ್ನೇ ಧಾರೆ ಎರೆ ಎಂಬ ಭಾರತೀಯ ಸಂಸ್ಕೃತಿಯ ಆದರ್ಶವನ್ನು ಇದು ಪ್ರಸ್ತುತ ಪಡಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯ ಬಗೆಗೂ ನಮಗೆ ಗೌರವವಿದೆ. ಇಂದಿಗೂ ನಮ್ಮಂತಹ ಎಷ್ಟೋ ಅಸಂಖ್ಯಾತ ಜನರಿಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಮಾರ್ಗವನ್ನು ಪ್ರದರ್ಶಿಸುತ್ತಿರುವುದು ಶಿಕ್ಷಣವೇ. ಆದರೆ ಅತ್ಯುತ್ತಮವಾಗಿದ್ದ ನಮ್ಮ ಶಿಕ್ಷಣ ವ್ಯವಸ್ಥೆಯು ಮೊಘಲರು, ಬ್ರಿಟಿಷರಂತಹ ವಿದೇಶಿ ಆಕ್ರಮಣಕಾರರ ಕೈಯಲ್ಲಿ ಸಿಲುಕಿ ಸಾಕಷ್ಟು ಹಾಳಾಗಿದೆ. ಈ ವಿದೇಶಿ ಆಕ್ರಮಣಕಾರರಿಂದ ಧಕ್ಕೆಗೊಂಡಿರುವ ನಮ್ಮ ದೇಶದ ಅಸ್ಮಿತೆಯನ್ನು ಪುನರ್ ಸ್ಥಾಪಿಸಲು ಇಂದು ನಾವೆಲ್ಲಾ ಜೊತೆಯಾಗಿ ಹೋರಾಡಬೇಕಿದೆ. ಈ ಲೇಖನವು ಶಿಕ್ಷಣ ವ್ಯವಸ್ಥೆ ಸುಧಾರಣೆಯ ಅತ್ಯಗತ್ಯತೆ ಬಗೆಗೆ ಕೇವಲ ಆಕ್ರೋಶದಿಂದ ಬರೆದಿರುವುದಲ್ಲ, ಕೋಟ್ಯಂತರ ಯುವ ಜನತೆಯು ಅನುಭವಿಸುತ್ತಿರುವ ನೋವಿಗೆ ಗಟ್ಟಿ ಧ್ವನಿಯಾಗಿ ಬರೆದಿರುವುದು. ಇದಿಷ್ಟು ನನ್ನ ತಿಳುವಳಿಕೆ, ಅನುಭವದ ಮೇಲೆ ಮಂಡಿಸಿರುವ ಅಭಿಪ್ರಾಯ. ಮತ್ತಷ್ಟು ಮಗದಷ್ಟು ಯುವಧ್ವನಿಗಳು ಹೊರ ಹೊಮ್ಮಿ ಇನ್ನೂ ಅಗಾಧವಾಗಿ ಈ ಕುರಿತು ಮಾತನಾಡಲಿ, ಬರೆಯಲಿ, ಚರ್ಚಿಸಲಿ. ಈಗ ನಮ್ಮ ರಾಜ್ಯ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಈ ಸಂವೇದನಾಶೀಲ, ಗಂಭೀರ ವಿಷಯವನ್ನು ಕಣದಲ್ಲಿರುವ ಅಭ್ಯರ್ಥಿಗಳ ಗಮನಕ್ಕೆ ತಂದು ಚರ್ಚಿಸೋಣ, ಪರಿಹಾರ ಕಂಡುಕೊಳ್ಳಲು ಸಾಗಬೇಕಾದ ಈ ಸುದೀರ್ಘ ಅಗ್ನಿಪಥದಲ್ಲಿ ಧೈರ್ಯದಿಂದ ಮುನ್ನೆಡೆಯೋಣ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment