ಈ ದಾರಿ ನಿನ್ನೆಯದಲ್ಲ ನಾಳೆಗೆ ಮುಗಿದು ಹೋಗುವುದಿಲ್ಲ......
ಈ ದಾರಿ ನಿನ್ನೆಯದಲ್ಲ ನಾಳೆಗೆ ಮುಗಿದು ಹೋಗುವುದಿಲ್ಲ......
ಜಂಬೂದ್ವೀಪ, ಭರತಖಂಡ, ಆರ್ಯವರ್ತ, ಭಾರತವರ್ಷ ಈ ನಮ್ಮ ದೇಶ. 'ಭಾರತದ ಧೂಳೇ ನನ್ನ ಸರ್ವೋಚ್ಚ ದೇವಲೋಕ', 'Who lives if India dies, who dies if India lives' (ಭಾರತ ಸತ್ತರೆ ಯಾರು ಬದುಕುವರು, ಭಾರತ ಬದುಕಿದರೆ ಯಾರು ಸಾಯುವರು) ಎಂದರು ಶ್ರೀಗುರು ಸ್ವಾಮಿ ವಿವೇಕಾನಂದರು. ಇಂತಹ ನಮ್ಮ ದೇಶದ ಮೇಲೆ ಆಗಿದ್ದು ಒಂದೆರಡು ಆಕ್ರಮಣವಲ್ಲ, ಸರಣಿ ಸರಣಿ ಭೀಕರ ಆಕ್ರಮಣಗಳು. ಮನುಕುಲದ ಇತಿಹಾಸದಲ್ಲೇ ನಮ್ಮ ದೇಶದ ಮೇಲೆ ನಡೆದಷ್ಟು ಘೋರ ದಾಳಿಗಳು ಎಲ್ಲೂ ನಡೆದಿಲ್ಲ ಎಂದು ವಿವೇಕಾನಂದರಾದಿಯಾಗಿ ಸದ್ಗುರು ಅವರ ವರೆಗಿನ ಎಲ್ಲಾ ಗುರು ವರಿಷ್ಠರು ವಿಶ್ಲೇಷಿಸಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯವರ ದಾಳಿಯಿಂದ ಪ್ರಪಂಚದಾದ್ಯಂತ ವಿವಿಧ ಬಗೆಯ ಸಂಸ್ಕೃತಿಗಳು ನಾಶವಾಗಿ ಹೋದವು. ಆದರೆ ಹಿಂದೂಗಳಾದ ನಾವಿನ್ನೂ ನಮ್ಮ ಸಂಸ್ಕೃತಿಯನ್ನು ಆಚರಿಸುತ್ತಿದ್ದೇವೆ. ಮನು, ವಸಿಷ್ಠ, ವಿಶ್ವಾಮಿತ್ರರಂತಹ ಪ್ರಾಚೀನ ಸಂತರು ಮರಳಿ ಭೂಮಿಗೆ ಬಂದರೂ ನಮ್ಮ ಇಂದಿನ ಸಂಸ್ಕೃತಿಯ ಮೂಲ ಸತ್ತ್ವವನ್ನು ಕಂಡು ಅವರಿಗೇನು ಆಶ್ಚರ್ಯವೆನಿಸುವುದಿಲ್ಲ.
ಒಬ್ಬ ಮನುಷ್ಯನ ಆತ್ಮ ವಿಶ್ವಾಸಕ್ಕೆ ಪೆಟ್ಟು ಬಿದ್ದರೇನೇ ಅದರಿಂದ ಸುಧಾರಿಸಿಕೊಳ್ಳುವುದು ಕಠಿಣ, ಹಾಗಿರುವಾಗ ಇಡೀ ದೇಶದ ಸಂಸ್ಕೃತಿಗೆ ಹೊಡೆತ ಬಿದ್ದರೆ ಅದರ ಸುಧಾರಣೆ ಎಷ್ಟು ಕ್ಲಿಷ್ಟಕರವಾಗಿರಬಹುದು! ನಮ್ಮ ಚೇತನವನ್ನು ಒಡೆಯಲು ನಾವು ಪೂಜಿಸುತ್ತಿದ್ದ ದೇವಸ್ಥಾನಗಳನ್ನು, ಮೂರ್ತಿಗಳನ್ನು ಒಡೆದರು. ಈ ಸಾಂಸ್ಕೃತಿಕ ಸಂಘರ್ಷದಲ್ಲಿ ಅಪಾರ ನಷ್ಟವಾಯಿತು, ಅಗಣಿತ ಬಲಿದಾನಗಳಾದವು, ಅನಿರೀಕ್ಷಿತ ಆಘಾತಗಳಾದವು. ಧರ್ಮ ಮಾರ್ಗದ ರೀತಿ-ನೀತಿಗಳನುಸಾರ ಯುದ್ಧ ಮಾಡುವ ನಮಗೆ ವಿಜಯವೊಂದನ್ನೇ ಮಾನದಂಡವನ್ನಾಗಿಟ್ಟುಕೊಂಡು ಯುದ್ಧ ಮಾಡುವ ಪಾಶ್ಚಿಮಾತ್ಯ ಸಂಸ್ಕೃತಿಗರ ಘೋರ ಆಕ್ರಮಣವನ್ನೆದುರಿಸುವುದು ಕೇವಲ ಸಾಹಸದ ವಿಷಯವಾಗಿರಲಿಲ್ಲ, ನಮ್ಮ ಜೀವಾಳವೇ ಆಗಿರುವ ಧರ್ಮದ ವಿರುದ್ಧ ನಡೆಯಬೇಕಾದ ಆತ್ಮಸಾಕ್ಷಿ ಒಪ್ಪದ ಕಾಠಿಣ್ಯ ಕಾರ್ಯವಾಗಿತ್ತು. ನಮ್ಮ ದೇವಸ್ಥಾನವನ್ನು ಅವರು ಒಡೆದರೆ ಅದರ ಹತ್ತಿರದಲ್ಲೇ ಮತ್ತೆ ಆ ದೇವಸ್ಥಾನವನ್ನು ಚಿಕ್ಕದಾಗಿಯಾದರೂ ನಿರ್ಮಿಸಿದೆವು. ಮೂಲ ವಿಗ್ರಹವನ್ನು ಉಳಿಸಿಕೊಂಡು ದಿನನಿತ್ಯ ಪೂಜೆ ಸಲ್ಲಿಸಿ ಶಕ್ತಿಯನ್ನು ಕಾಪಾಡುತ್ತಿದ್ದೆವು. ಯಾವ ಕಾರಣಕ್ಕೂ ನಮ್ಮ ದೇವಸ್ಥಾನಗಳನ್ನು ನಾವು ಬಿಟ್ಟುಕೊಡಲಿಲ್ಲ. ಮುಂದೊಂದು ದಿನ ನಾವು ವಿಜಯಿಯಾಗಿ 'ಮಂದಿರವಲ್ಲೇ ಕಟ್ಟುವೆವು' ಎಂಬ ವಿಶ್ವಾಸದ ಮೇಲೆ ಹೋರಾಡುತ್ತಾ ಬಂದೆವು. ಈ ನಮ್ಮ ಸಾಹಸಗಾಥೆಗೆ ಸಾಕ್ಷಿಯಾಗಿ ನಿಂತಿರುವುದು 500 ವರ್ಷಗಳ ಸತತ ಹೋರಾಟದ ನಂತರ ತಲೆ ಎತ್ತಿ ನಿಂತಿರುವ ದಿವ್ಯವಾದ, ಭವ್ಯವಾದ, ಅಲೌಕಿಕವಾದ ಅಯೋಧ್ಯೆಯ ಶ್ರೀ ರಾಮಮಂದಿರ.
ಹೌದು ಈಗ ಮೊನ್ನೆ ಮೊನ್ನೆ ಪ್ರಾಣ ಪ್ರತಿಷ್ಠಾಪನೆ ಆಗಿದ್ದು ರಾಮಲಲ್ಲಾ ಅಥವಾ ಬಾಲರಾಮನ ಮೂರ್ತಿಯಷ್ಟೆ ಅಲ್ಲ, ಅಂದು ಪ್ರತಿಷ್ಠಾಪನೆ ಆಗಿದ್ದು ನಮ್ಮ ಸಂಸ್ಕೃತಿ, ಆತ್ಮಗೌರವ, ಸ್ವಾಭಿಮಾನ, ಆತ್ಮಾಭಿಮಾನ ಕೂಡ! ರಾಮಮಂದಿರವನ್ನು 500 ವರ್ಷಗಳ ವರೆಗೆ ನಮ್ಮ ಹೃದಯದಲ್ಲಿಟ್ಟುಕೊಂಡು ಪ್ರತಿಷ್ಠಾಪನೆಗಾಗಿ ಹೋರಾಡಿದೆವು. ಈ ಸುದೀರ್ಘ ಪ್ರಯಾಣದಲ್ಲಿ ಅದೆಷ್ಟೋ ಹೃದಯಗಳ ಬಡಿತವನ್ನು ಬಲವಂತವಾಗಿ ನಿಲ್ಲಿಸಲಾಯಿತು, ಅದೆಷ್ಟೋ ಹೃದಯಗಳು ತಮ್ಮ ಪ್ರಿಯ ಹೃದಯಗಳನ್ನು ಕಳೆದುಕೊಂಡು ಪರಿತಪಿಸುವಂತೆ ಮಾಡಲಾಯಿತು. ಏನೇ ಆದರೂ ಹೋರಾಟ ಮಾತ್ರ ನಿಲ್ಲಲಿಲ್ಲ, ಮುಂದೆ ಮುಂದೆ ಧಾವಿಸುತ್ತಾ ಸಾಗಿತು. ರಾಮಮಂದಿರ ನಿರ್ಮಾಣವನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ರಾಜಕೀಯಕ್ಕೆ ಕಾಲಿಟ್ಟ ಬಿಜೆಪಿ ಪಕ್ಷವು ಎರಡೇ ಎರಡು ಸಂಸದರನ್ನು ಹೊಂದಿದ್ದಾಗಲೂ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಪ್ರಸ್ತಾಪಿಸಿತ್ತು, ನಂತರ 300ರ ಗಡಿ ದಾಟಿದಾಗಲೂ ಪ್ರಸ್ತಾಪಿಸಿತ್ತು, 5 ರಾಜ್ಯಗಳನ್ನು ಕಳೆದುಕೊಂಡಾಗಲೂ ಪ್ರಸ್ತಾಪಿಸಿತ್ತು. ಹಿಂದೂಗಳು ರಾಮಮಂದಿರಕ್ಕಾಗಿ ದೇಣಿಗೆಯನ್ನು ನೀಡಿದರು, ಇಟ್ಟಿಗೆಗಳನ್ನು ನೀಡಿದರು, ತಮ್ಮ ತನು-ಮನ-ಧನವನ್ನೆಲ್ಲಾ ಸಮರ್ಪಿಸಿದರು. ಶ್ರೀಮಂತರು ವಿವಾದಿತ ಜಾಗವನ್ನು ಗರಿಷ್ಠ ಮೊತ್ತಕ್ಕೆ ಖರೀದಿಸಲು ಯತ್ನಿಸಿದರು. ಭಕ್ತರು ಆ ಸ್ಥಳದ ಪವಿತ್ರತೆಯನ್ನು, ಶಕ್ತಿಯನ್ನು ಹಾಗೇ ಉಳಿಸಲು ನಿರಂತರವಾಗಿ ಪೂಜೆ ಮಾಡಿದರು. ಕೊನೆಗೆ ಮಂದಿರವನ್ನು ಕೆಡವಿ ಕಟ್ಟಲಾಗಿದ್ದ ಬಾಬ್ರಿ ಮಸೀದಿಯನ್ನು ಒಡೆದು ಹಾಕಿದರು. ಸಾಮ, ದಾನ, ದಂಡ, ಭೇದದಂತಹ ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಸಾಧ್ಯವಾಗದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ನಿರ್ಮಾಣ ಕೊನೆಗೆ ಸಾಧ್ಯವಾಗಿದ್ದು ಮರ್ಯಾದಾ ಮಾರ್ಗದಿಂದ ಸಾಕ್ಷ್ಯಾಧಾರಿತವಾಗಿ ದೊರೆತ ಸುಪ್ರೀಂ ಕೋರ್ಟ್ ನ ತೀರ್ಪಿನಿಂದ! ನಮ್ಮ ಭಾರತದಲ್ಲಿ ಪ್ರತಿನಿತ್ಯದ ಕಾರ್ಯಗಳಲ್ಲೂ ಆಧ್ಯಾತ್ಮಿಕತೆ ಹಾಸುಹೊಕ್ಕಾಗಿರುವುದರಿಂದ ಗತಿಸಿದ ಎಲ್ಲಾ ಘಟನೆಗಳು ದೇವರ ಆಟವೆಂದೇ ಅನಿಸುತ್ತದೆ. ಅತಿ ಹೆಚ್ಚು ಸಂಖ್ಯೆಯ ಸೈನ್ಯ-ಆರಕ್ಷಣ ಬಲವಿದ್ದರೂ, ರಾಮ ಮಂದಿರ ನಿರ್ಮಾಣಕ್ಕೆ ವಿರೋಧವಾಗಿದ್ದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರವಿದ್ದರೂ ಮಂದಿರವನ್ನು ಕೆಡವಿ ಕಟ್ಟಲಾಗಿದ್ದ ಬಾಬ್ರಿ ಮಸೀದಿಯ ಧ್ವಂಸವಾಗುವುದನ್ನು ನಿಲ್ಲಿಸಲಾಗಲಿಲ್ಲ. ಇದು ದೇವರ ಇಚ್ಛೆಯಲ್ಲದೆ ಹೇಗೆ ತಾನೆ ನಡೆಯಲು ಸಾಧ್ಯ? ಭಜರಂಗಬಲಿಯ ಭಕ್ತರಲ್ಲಿ ಅಂದು ಭಜರಂಗಿಯೇ ಆವಾಹನೆಗೊಂಡು ರಾಮಮಂದಿರ ನಿರ್ಮಾಣಕ್ಕೆ ಪಣ ತೊಡಲಾಯಿತು ಎಂದೆನಿಸುತ್ತದೆ. 'No Regrets No Repentance No Sorrow No Grief' ಎಂಬ ಕಲ್ಯಾಣ ಸಿಂಗ್ ಅವರ ಹೇಳಿಕೆಯಷ್ಟೇ ರಾಮ ಮಂದಿರ ನಿರ್ಮಾಣಕ್ಕೆ ಉತ್ತರ.
ರಾಮಭಕ್ತರು ಕರಸೇವೆಯಲ್ಲಿ ತೊಡಗಿದ್ದಾಗ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆದೇಶದಂತೆ ಗೋಲಿಬಾರ್ ಆದ ಕಾರಣ ಕೆಲವರ ಬಲಿದಾನವಾಯಿತು. ಪರಿಸ್ಥಿತಿಯ ತೀವ್ರತೆ ಅರ್ಥವಾಗಿದ್ದರೂ ಎಷ್ಟೋ ಕರ ಸೇವಕರನ್ನು ಅವರ ಮನೆಯವರು ರಾಮಭಕ್ತಿಗಾಗಿ ಸಮರ್ಪಿಸಿ ಕಳಿಸಿದರೆ, ಮತ್ತಷ್ಟು ಕರಸೇವಕರು ಮನೆಯವರ ಅನುಮತಿಯನ್ನು ಪಡೆಯದೆ ಬಂದು ತಮ್ಮನ್ನು ತಾವು ಸಮರ್ಪಿಸಿ ಕೊಂಡರು. ಎಷ್ಟೋ ಜನ ಅವರ ಮನೆಗೆ ಅವರೇ ಆಧಾರಸ್ತಂಭವಾಗಿದ್ದರು, ಬಡತನದ ಸುಳಿಯಲ್ಲಿ ಸಿಲುಕಿಕೊಂಡಿದ್ದರೂ ಧಾವಿಸಿದ್ದರು. ಅಂತಹವರೆಲ್ಲರ ಬಲಿದಾನದಿಂದಲೇ ಇಂದು ನಮ್ಮ ಅಸ್ಮಿತೆಯಾದ ರಾಮಮಂದಿರ ನಿರ್ಮಾಣವಾಗಿರುವುದು. ಕೆಲವು ಸುದ್ದಿ ವಾಹಿನಿಗಳಲ್ಲಿ ಹೀಗೆ ಬಲಿದಾನವಾದ ಕರಸೇವಕರ ಕುಟುಂಬಗಳ ಚಿತ್ರಣವನ್ನು ಪ್ರದರ್ಶಿಸಿದರು. ವಾಸ್ತವದಲ್ಲಿ ಅವರ ಕುಟುಂಬಗಳು ಇಂದಿಗೂ ಬಡತನದಲ್ಲಿ ಸಂಘರ್ಷದ ಬದುಕನ್ನು ನಡೆಸುತ್ತಿವೆ. ಆದ್ದರಿಂದ ಅವರ ತ್ಯಾಗ, ಬಲಿದಾನಗಳ ಘನತೆಗೆ ಅಪಮಾನವಾಗಬಾರದೆಂದರೆ ಅವರ ಬದುಕನ್ನು ಸುಧಾರಿಸಲು ಅಗತ್ಯದ ಸಹಾಯವನ್ನು ಮಾಡಬೇಕಿದೆ. ರಾಮಮಂದಿರ ನಿರ್ಮಾಣದ ಜೊತೆ ಜೊತೆಗೆ ಅವರ ಮನೆಯವರ ಬದುಕೂ ಕೂಡ ಸುಂದರವಾಗಿ ನಿರ್ಮಾಣವಾಗಲಿ ಎಂಬುದಷ್ಟೇ ನಮ್ಮ ಆಶಯ.
ಅಡ್ವಾಣಿ, ವಾಜಪೇಯಿಯವರಂತಹ ದಿಗ್ಗಜ ನಾಯಕರ ರಥಯಾತ್ರೆಯು ಕರಸೇವಕರಿಗೆ ಹೆಚ್ಚು ಬಲ, ಉತ್ಸಾಹ, ಹುಮ್ಮಸ್ಸನ್ನು ತಂದು ಕೊಟ್ಟಿತು. ಆ ನಾಯಕರ ವಾರಸುದಾರರಾಗಿ ಬಂದ ನಮ್ಮ ಮೋದೀಜಿ ಅವರು ರಾಮಲಲ್ಲಾನ ಮೂರ್ತಿಯನ್ನು ಟೆಂಟ್ ನಲ್ಲಿ ನೋಡಿ ಇನ್ನು ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಭವ್ಯ ಮಂದಿರವನ್ನು ಕಟ್ಟುವವರೆಗೆ ಇಲ್ಲಿಗೆ ಬರುವುದಿಲ್ಲ ಎಂದು ಸಂಕಲ್ಪ ಮಾಡಿದರು. ನಮ್ಮ ಸಂಸ್ಕೃತಿಯು ದೇವರು, ಗುರು ಇಬ್ಬರೂ ಒಟ್ಟಿಗೆ ಎದುರಾದರೆ ಗುರುವಿಗೇ ಮೊದಲು ನಮಸ್ಕಾರ ಮಾಡಬೇಕೆಂದು ತಿಳಿಸುತ್ತದೆ, ಏಕೆಂದರೆ ದೇವರೆಡೆಗೆ ಸಾಗಲು ದಾರಿ ತೋರಿ, ಕತ್ತಲನ್ನು ದೂರ ಮಾಡಿ ಬೆಳಕು ಹರಿಸುವವರೇ ಗುರು. ಅಂತೆಯೇ ಗುರುವಿನ ಸ್ಥಾನದಲ್ಲಿ ನಿಂತು ರಾಮಮಂದಿರ ನಿರ್ಮಾಣದಲ್ಲಿ ಅತೀವ ಧೈರ್ಯ ತೋರಿ ಪ್ರಮುಖ ಪಾತ್ರ ವಹಿಸಿದ ಮೋದೀಜಿ ಆದಿಯಾಗಿ ಎಲ್ಲಾ ಕರಸೇವಕರಿಗೂ ನಮಸ್ಕಾರಗಳನ್ನು ಅರ್ಪಿಸಲೇಬೇಕು. ಸ್ವಾತಂತ್ರ್ಯ ಬಂದ ನಂತರ ಶೀಘ್ರವಾಗಿ ಮಾಡಬೇಕಾದ ರಾಮ ಮಂದಿರ ನಿರ್ಮಾಣದ ಕಾರ್ಯವನ್ನು ರಾಜಕೀಯ ಇಚ್ಛಾಶಕ್ತಿಯಿಲ್ಲದ ನಾಯಕರು 70 ವರ್ಷಗಳವರೆಗೆ ಮುಂದೂಡಿದರು. ಆದರೆ ಮೋದೀಜಿ ಅವರ ಸಿಂಹ ಸಾಹಸಿಕ ನಡೆಯಿಂದ ಕೊನೆಗೂ ಸಮಸ್ಯೆ ಬಗೆಹರಿದಿದೆ. ರಾಮ ಮಂದಿರದ ಪ್ರತಿಷ್ಠಾಪನೆಯ ನಂತರದ ಕಾರ್ಯಕ್ರಮದಲ್ಲಿ ಸಂತರಾದ ಆಚಾರ್ಯ ಗೋವಿಂದ ದೇವ ಗಿರಿ ಅವರು ಮೋದೀಜಿ ಅವರು ಆ ಶುಭಗಳಿಗೆಗಾಗಿ ನಡೆಸಿದ ಕಠಿಣ ವ್ರತಾಚರಣೆಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. 73ರ ವಯಸ್ಸಿನ ಮೋದೀಜಿ ಅವರು ವ್ರತಾಚರಣೆಯನ್ನು ನಿಯಮಿತವಾಗಿ ಮಾಡಬಹುದೆಂದು ತಿಳಿಸಿದ್ದಾಗ್ಯು ಸಂಪೂರ್ಣ ನಿಯಮಾನುಸಾರ ವ್ರತವನ್ನು ಆಚರಿಸಿದ್ದರಿಂದ ಭಾವುಕರಾಗಿ ಅವರನ್ನು ಕೊಂಡಾಡಿದರು. ತಪಸ್ವಿಗಳಿಂದಲೇ ತಪಸ್ವಿ ಎನಿಸಿಕೊಳ್ಳುವ ನಮ್ಮ ಮೋದಿಜಿ ಅವರು ರಾಜರ್ಷಿಯೇ ಸರಿ! ವಾಜಪೇಯಿ ಅವರು ಹೇಳಿದಂತೆ ತಮ್ಮ ಪರಿವಾರದ ಕಾರ್ಯಕರ್ತನಿಂದಲೇ ಮಂದಿರದ ಉದ್ಘಾಟನೆಯಾಗುತ್ತದೆ ಎಂಬ ಮಾತು ಸತ್ಯವಾಯಿತು. ಬಹುಶಃ ರಾಮಲಲ್ಲಾನಿಗೆ ಮೋದೀಜಿಯಿಂದಲೇ ತಾನು ಪ್ರತಿಷ್ಠಾಪನೆಗೊಳ್ಳಬೇಕೆಂಬ ಇಚ್ಛೆಯಿತ್ತೋ ಏನೋ!
ಒಂದು ಕಾಲದಲ್ಲಿ ಜೈ ಶ್ರೀರಾಮ್ ಎಂದು ಹೇಳಿದರೆ ಕೋಮುವಾದಿ ಎನ್ನುತ್ತಿದ್ದರು. ಆದರೆ ಅಂದು ಇಡೀ ದೇಶವೇ ಹೆಮ್ಮೆಯಿಂದ ಜೈ ಶ್ರೀರಾಮ್ ಘೋಷಣೆ ಕೂಗಿತು. ಹಿಂದೂ ಅಸ್ಮಿತೆಯ ಬಗ್ಗೆ ಹೆಮ್ಮೆ ಪಡುವುದೇ ಕೋಮುವಾದ ಎಂಬಂತೆ ಬಿಂಬಿಸಿದ್ದ ರಾಜಕೀಯ ನಾಯಕರ ಮಿಥ್ಯ, ಭ್ರಮೆಗಳನ್ನು ಹೋಗಲಾಡಿಸಿ ನಮ್ಮ ಮೋದೀಜಿ ಅವರು ಹಿಂದೂ ಅಸ್ಮಿತೆಯ ಘನತೆಯನ್ನು ಎತ್ತಿ ಹಿಡಿದರು. ನಗುವಾಗ ಎಲ್ಲಾ ನೆಂಟರು, ಅಳುವಾಗ ಯಾರೂ ಇಲ್ಲ ಎಂಬಂತೆ ಇಂದು ರಾಮಮಂದಿರ ಭವ್ಯವಾಗಿ ಬೆಳೆದು ನಿಂತ ಮೇಲೆ ಎಲ್ಲರೂ ಅತ್ಯಂತ ಪ್ರಸನ್ನರಾಗಿ ಸಂಭ್ರಮಾಚರಣೆ ಮಾಡಿದರು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕಿದರು, ಯಾವ ವಿರೋಧಿ ಪಕ್ಷಗಳ ನಾಯಕರು ಈ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದರೋ ಅವರ ಪಕ್ಷದ ಕಾರ್ಯಕರ್ತರೂ ಕೂಡ ಸಂಭ್ರಮಿಸಿದರು, ಹಿಂದಿನಿಂದ ರಾಮಮಂದಿರ ನಿರ್ಮಾಣಕ್ಕೆ ವಿರೋಧವಾಗಿದ್ದವರು ಹಾಗೂ ಬೆಂಬಲವನ್ನು ನೀಡದಿದ್ದವರು ಕೂಡ ತಾವು ಶ್ರೇಷ್ಠ ರಾಮಭಕ್ತರೆಂಬಂತೆ ತೋರ್ಪಡಿಸಿಕೊಂಡರು. ಆದರೆ ಅಂದು ಪರಿಸ್ಥಿತಿ ಕ್ಲಿಷ್ಟಕರವಾಗಿದ್ದಾಗ, ಅನಿಶ್ಚಿತತೆ - ಅಪಾಯಗಳಿಂದ ಕೂಡಿದ್ದಾಗ ಇಂದು ಬದಲಾಗಿರುವ ವ್ಯಕ್ತಿಗಳ್ಯಾರೂ ಹೋರಾಟಕ್ಕೆ ಜೊತೆಯಾಗಿರಲಿಲ್ಲ. ಇರಲಿ, ಎಲ್ಲರೂ ಸತ್ಯವನ್ನು ಮನಗಂಡು ಬದಲಾಗಲಿ ಎಂಬುದೇ ನಮ್ಮ ಆಸೆಯೂ ಕೂಡ. ಒಂದೆಡೆ ಯಶಸ್ವೀ ಪ್ರಧಾನಮಂತ್ರಿಯಾದ ಮೋದೀಜಿ ಅವರು ತಮ್ಮ ದೂರದೃಷ್ಟಿಯ ಯೋಜನೆಗಳಿಂದ ದೊಡ್ಡ ಕ್ರಾಂತಿಯನ್ನು ಮಾಡುತ್ತಿದ್ದರೆ ವಿಪಕ್ಷ ನಾಯಕರು ಎಂದಿನಂತೆ ತಮ್ಮ ಟೀಕಾಸ್ತ್ರ, ಬಾಯ್ಕಾಟ್ ಅಸ್ತ್ರಗಳನ್ನು ಪ್ರಯೋಗಿಸುತ್ತಾ ರಣನೀತಿಯೇ ಇಲ್ಲದೆ ರಣಭೂಮಿಯಲ್ಲಿ ಹೋರಾಡುತ್ತಿದ್ದಾರೆ. ಇನ್ನೂ ಮಂದಿರ ನಿರ್ಮಾಣ ಬಾಕಿಯಿದ್ದರೂ ಶೀಘ್ರವೇ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು ಎಂಬುದು ಕೆಲವರ ಆಕ್ಷೇಪ. ಜನರು ಮಂದಿರದೊಂದಿಗೆ ಹೇಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆಂದರೆ ಮಂದಿರವನ್ನು ಎಷ್ಟೇ ಉತ್ತಮಗೊಳಿಸಿದರೂ ಮತ್ತಷ್ಟು ಉತ್ತಮವಾಗಬೇಕು ಎಂದು ಅವರು ಆಸೆ ಪಡುತ್ತಾರೆ. ಆದ್ದರಿಂದ ಈ ಕಾಯುವಿಕೆಗೆ ಶೀಘ್ರವಾಗಿ ಅಂತ್ಯ ಹಾಡುವುದು ಅವಶ್ಯಕವಾಗಿತ್ತು. ಜೊತೆಗೆ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಬಿಜೆಪಿಯವರು ಶ್ರೇಯಸ್ಸನ್ನು ಪಡೆಯಲು ಶೀಘ್ರವಾಗಿ ಈ ಕಾರ್ಯ ಮಾಡಿದರು ಎಂದು ಹಲವರು ದೂರುತ್ತಿದ್ದಾರೆ. ತಮ್ಮ ಕಾರ್ಯಕ್ಕೆ ತಾವು ಶ್ರೇಯಸ್ಸನ್ನು ಪಡೆಯುವುದರಲ್ಲಿ ಯಾವ ತಪ್ಪೂ ಇಲ್ಲ ಅಲ್ಲವೆ? ಈಗಾಗಲೇ ರಾಮ ಮಂದಿರ ರಾಜಕೀಯ ಕ್ಷಿಪ್ರ ಕ್ರಾಂತಿಗೆ ಕಾರಣವಾಗಿದೆ, I.N.D.I.A ಮೈತ್ರಿಕೂಟ ಹಂತ ಹಂತವಾಗಿ ಒಡೆದು ಹೋಗುತ್ತಿದೆ.
ಪ್ರತಿಷ್ಠಾಪನೆಯಂದು ನಾವು ಸಡಗರದಿಂದ ಆಚರಿಸುವ ಹಬ್ಬಗಳಿಗಿಂತಲೂ ಹೆಚ್ಚು ಸಡಗರದಿಂದ ಹೊಸದೊಂದು ಹಬ್ಬವನ್ನು ಮಾಡಿದೆವೇನೋ ಎಂಬಂತಹ ಭಾವ. ಹಳ್ಳಿ ಹಳ್ಳಿಗಳಲ್ಲೂ ಆಚರಣೆ ಚೆನ್ನಾಗಿತ್ತು. ನಮ್ಮ ಕರ್ನಾಟಕದ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮಲಲ್ಲಾನ ಮೂರ್ತಿ 500 ವರ್ಷಗಳ ನೋವನ್ನು ಮರೆಸಿತು. ನಮ್ಮ ನಿಜವಾದ ಇತಿಹಾಸವು ಬ್ರಿಟಿಷರ ಹಿಂಬಾಲಕರು ಬರೆದ ನಾಲ್ಕು ಪುಸ್ತಕಗಳಲ್ಲಿಲ್ಲ. ಆ ಪುಸ್ತಕಗಳನ್ನು ಮುಚ್ಚಿ, ಕಣ್ಣು ತೆರೆದು ನೋಡಿದರೆ ದೇವಸ್ಥಾನಗಳಲ್ಲಿ ಕೆತ್ತಲಾಗಿರುವ ಶಿಲೆಗಳಲ್ಲೇ ನೈಜ ಇತಿಹಾಸ ದೊರೆಯುತ್ತದೆ. ವಿದೇಶಿ ಆಕ್ರಮಣಕಾರರು ಸಾವಿರಾರು ದೇವಸ್ಥಾನಗಳನ್ನು ಒಡೆದಿದ್ದಾರೆ ಎಂದು ಹೇಳಲಾಗುತ್ತದೆ. ಸನಾತನಿಗಳಾದ ನಾವು ದೇವಸ್ಥಾನಗಳಲ್ಲಿ ಮೂರ್ತಿಗಳನ್ನು ಪೂಜೆ ಮಾಡುತ್ತೇವೆಂದು ಅವರು ದೇವಸ್ಥಾನಗಳನ್ನು, ಮೂರ್ತಿಗಳನ್ನು ಒಡೆದಿರಬಹುದು. ನಾವು ಸೂರ್ಯನನ್ನು ಪೂಜಿಸುತ್ತೇವೆ, ಹಾಗಾದರೆ ಅವರು ಸೂರ್ಯನನ್ನೇ ಅಸ್ತಂಗತ ಮಾಡುವರಾ? ನಾವು ಚಂದ್ರನನ್ನು ಪೂಜಿಸುತ್ತೇವೆ, ಹಾಗಾದರೆ ಅವರು ಚಂದ್ರನನ್ನೇ ತೆಗೆದು ಹಾಕುವರಾ? ನಾವು ಜಲವನ್ನು ಪೂಜಿಸುತ್ತೇವೆ, ಹಾಗಾದರೆ ಅವರು ಜಲವನ್ನೇ ಇಂಗಿಸಿ ಬಿಡುತ್ತಾರಾ? ನಾವು ಪರ್ವತವನ್ನು ಪೂಜಿಸುತ್ತೇವೆ, ಹಾಗಾದರೆ ಅವರು ಪರ್ವತವನ್ನೇ ಬೀಳಿಸಿ ಬಿಡುತ್ತಾರಾ? ನಾವು ಮಣ್ಣನ್ನು ಪೂಜಿಸುತ್ತೇವೆ, ಹಾಗಾದರೆ ಅವರು ಮಣ್ಣನ್ನೇ ನಾಶ ಮಾಡುತ್ತಾರಾ? ಯಾವುದು ಅಂದೂ ಇತ್ತೋ, ಇಂದಿಗೂ ಇದೆಯೋ, ಮುಂದೆಯೂ ಇರುವುದೋ, ಯಾವುದಕ್ಕೆ ಆದಿ-ಅಂತ್ಯಗಳಿಲ್ಲವೋ, ಯಾವುದು ಜೀವನ ಪದ್ಧತಿಯೇ ಆಗಿದೆಯೋ ಅಂತಹ ಸನಾತನ ಸಂಸ್ಕೃತಿಯನ್ನು ಹೇಗೆ ನಾಶ ಮಾಡುವರು?
~ಸಿಂಚನ.ಎಂ.ಕೆ ಮಂಡ್ಯ
Comments
Post a Comment