ಮನೆಯಲ್ಲೇ ಹುಡುಕುವರು ಮನೆ- ಕಲಿಯುಗದ ವನವಾಸಿಗಳು
ಮನೆಯಲ್ಲೇ ಹುಡುಕುವರು ಮನೆ- ಕಲಿಯುಗದ ವನವಾಸಿಗಳು
ಅಲ್ಲೂ ಇದ್ದದ್ದು ಸುತ್ತಲಿನ ನಾಲ್ಕು ಗೋಡೆಗಳು
ಇಲ್ಲೂ ಇರುವುದು ಅದೆ ನಾಲ್ಕು ಗೋಡೆಗಳು
ಅಲ್ಲೂ ಸಿಗುತ್ತಿತ್ತು ನೀರು, ಆಹಾರ, ನಿದ್ದೆ
ಇಲ್ಲೂ ಅವು ಹಾಗೆಯೇ ಸಿಗುತಲಿದೆ
ಅಲ್ಲೂ ಭರಪೂರ ಗಾಳಿ, ಮಳೆ, ಬೆಳಕು
ಇಲ್ಲೂ ಅಷ್ಟೆ ಪ್ರಕೃತಿಯ ಸರಕು
ಅಲ್ಲಿ ಕುಶಲಕರವಾಗಿತ್ತು ಆಧುನಿಕ ಸೌಕರ್ಯತೆ
ಇಲ್ಲಿ ಹೆತೇಚ್ಯವಾಗಿಯೇ ಇದೆ ಅನ್ನಬಹುದಂತೆ
ಅಲ್ಲಿ ಕೆಲವು ಪುಟ್ಟ ಮನೆ, ಕೆಲವು ದೊಡ್ಡ ಮನೆ
ಇಲ್ಲಿ ಹೆಜ್ಜೆ ಹೆಜ್ಜೆಗೂ ಮನೆ, ಅರಮನೆ, ಬಂಗಲೆಗಳೇನೆ
ಅಲ್ಲಿ ಕೆಲವೊಮ್ಮೆ ಒಲವು, ಕೆಲವು ಮುನಿಸು
ಇಲ್ಲಿ ನಾಟಕೀಯ ಮಾತುಗಳಿಂದ ಗಪ್ಪು ಚಿಪ್ಪು
ಅಲ್ಲಿತ್ತು ಕರುಣೆ, ಮಮತೆ, ಪ್ರಸನ್ನತೆಯ ಸಹಜತೆ
ಇಲ್ಲಿದೆ ಅವುಗಳಿಗೆಲ್ಲ ದುಬಾರಿ ಬೆಲೆಯ ಅಸಹಜತೆ
ಅಲ್ಲಿತ್ತು ಮನ ಪ್ರಫುಲ್ಲತೆಯ ನೆಮ್ಮದಿ, ಪ್ರೀತಿ ಕಥೆ
ಇಲ್ಲಿದೆ ಮನದ ತುಂಬಾ ಸಾವಿರಾರು ತರಾವರಿ ಚಿಂತೆ
ಅಲ್ಲಿತ್ತು ಕಾಳಜಿಗೊಂದು ಕೈ, ಸುರಕ್ಷತೆಗೊಂದು ಕೈ
ಇಲ್ಲಿದೆ ಕಳಚಿಕೊಳ್ಳಲು ಹಾತೊರೆಯುವ ಅವಿಶ್ವಾಸದ ಕೈ
ಅಲ್ಲಿತ್ತು ಕುಟುಂಬದ ಶ್ರೀರಕ್ಷೆ, ದೈವಿಕ ಅಸ್ಮಿತೆ
ಇಲ್ಲಿದೆ ಕೌಟುಂಬಿಕವಾಗಿ ಕಂಡರೂ ಸಿಗದ ಪರಸ್ಪರತೆ
ಅಲ್ಲಿನ ಉದಾರತೆಗಳು ಉಚಿತವಾಗಿ ದೊರೆತದ್ದರಿಂದ ತಿಳಿಯಲಿಲ್ಲ ಬೆಲೆ
ಇಲ್ಲಿನ ವಾತಾವರಣದಲ್ಲಿ ಆ ಅನುಭವ ಪಡೆಯಲು ಭಾರೀ ಮೌಲ್ಯ ತೆತ್ತರೂ ಸಾಧ್ಯವಾಗುವುದಿಲ್ಲವಂತೆ
ಹಾಗಾದರೆ ಅಲ್ಲಿನದು ಮುಗಿಯುವುದೆ ಭಾವ-ಬಂಧ?
ಇಲ್ಲಾ ಎಂದು ಪ್ರಮಾಣೀಕರಿಸುತ್ತದೆ ಸೀತಾರಾಮ, ಪಾಂಡವರ ಬಾಳಲ್ಲಿ ಮರಳಿ ದೊರೆತ ಅವಿನಾಭಾವ ಸಂಬಂಧ!
1975ರ ದೀವಾರ್ ಸಿನಿಮಾದ ಮುಖ್ಯ ದೃಶ್ಯ. ಹಾದಿ ತಪ್ಪಿದ ಹುಡುಗ (ಅಮಿತಾಭ್ ಬಚ್ಚನ್) ತನ್ನ ಸಹೋದರನಿಗೆ (ಶಶಿಕಪೂರ್) ಎದುರಾಗಿ ಹೇಳುತ್ತಾನೆ - "ಆಜ್ ಮೇರೆ ಪಾಸ್ ಬಿಲ್ಡಿಂಗ್ ಹೇ, ಪ್ರಾಪರ್ಟಿ ಹೇ, ಬ್ಯಾಂಕ್ ಹೇ, ಬಂಗ್ಲಾ ಹೇ, ಗಾಡಿ ಹೇ, ಕ್ಯಾ ಹೇ ಕ್ಯಾ ಹೇ ತುಮ್ಹಾರೆ ಪಾಸ್ " (ಇಂದು ನನ್ನ ಬಳಿ ಬಿಲ್ಡಿಂಗ್ ಇದೆ, ಪ್ರಾಪರ್ಟಿ ಇದೆ, ಬ್ಯಾಂಕ್ ಇದೆ, ಬಂಗ್ಲಾ ಇದೆ, ಗಾಡಿ ಇದೆ. ನಿನ್ನ ಬಳಿ ಏನಿದೆ ಏನಿದೆ). ಅದಕ್ಕೆ ಸಹೋದರನು (ಶಶಿಕಪೂರ್) ಉತ್ತರಿಸುತ್ತಾನೆ "ಮೇರೆ ಪಾಸ್ ಮಾ ಹೇ" (ನನ್ನ ಬಳಿ ಅಮ್ಮಾ ಇದ್ದಾರೆ) ಎಂದು! ಕೋಟಿ ಕೋಟಿ ಸಂಪತ್ತು ಇದ್ದರೂ ಅದು ತಂದೆ-ತಾಯಿಯ ಎದುರು ಶೂನ್ಯ ಮಾತ್ರ. ಮಕ್ಕಳು ಅವರ ಅಮ್ಮನೊಂದಿಗೆ ಹೆಚ್ಚು ಆತ್ಮೀಯವಾಗಿರುವಂತೆ ಕಂಡರೂ ಕುಟುಂಬದ ನೊಗವನ್ನು ಹೊತ್ತಿರುವ ಅಪ್ಪನ ಮೇಲೆ ಒಂದು ಪಟ್ಟು ಹೆಚ್ಚು ವಿಶೇಷವಾದ ಗೌರವದ ಆತ್ಮೀಯತೆಯನ್ನು ಹೊಂದಿರುತ್ತಾರೆ. ಆದರೆ ಅವರ ಮೇಲಿನ ಭಯದಿಂದಲೋ ಅಥವಾ ಗೌರವದಿಂದಲೋ ತಮ್ಮ ಪ್ರೀತಿಯನ್ನು ಹೆಚ್ಚು ವ್ಯಕ್ತಪಡಿಸಿಕೊಳ್ಳುವುದಿಲ್ಲ. ಪುತ್ರಶೋಕಂ ನಿರಂತರಂ ಎಂಬಂತೆ ಒಬ್ಬ ಮಗನನ್ನು ಕಳೆದುಕೊಂಡರೇನೆ ಆ ದುಃಖ ತಂದೆ-ತಾಯಿಯನ್ನು ಜೀವನ ಪರ್ಯಂತ ಕಾಡುತ್ತದೆ ಎಂಬ ಲೋಕಾರೂಢಿ ಮಾತಿದೆ. ಅಂತಹದ್ದರಲ್ಲಿ ಕೆಲವೇ ದಿನಗಳಲ್ಲಿ ಒಬ್ಬೊಬ್ಬರಾಗಿ ತಮ್ಮ ಸಂಪೂರ್ಣ ನೂರೂ ಮಕ್ಕಳನ್ನು ಕಳೆದುಕೊಂಡ ತಾಯಿ ಗಾಂಧಾರಿ ಹಾಗೂ ತಂದೆ ಧೃತರಾಷ್ಟ್ರ ಅವರ ಸ್ಥಿತಿ ಹೇಗಾಗಿರಬೇಡ! ಆ ಅತೀವ ದುಃಖದಿಂದ ಅತ್ತು ಅತ್ತು ಕಣ್ಣೀರೆಲ್ಲಾ ಬತ್ತಿ ಹೋದ ಮೇಲೆ ಗಾಂಧಾರಿ ಶ್ರೀಕೃಷ್ಣನನ್ನು ಕೇಳುತ್ತಾಳೆ - ನನಗೇಕೆ ಈ ಸ್ಥಿತಿ ಬಂದಿತು ಎಂದು. ಆಗ ಶ್ರೀಕೃಷ್ಣನು ಹೇಳುತ್ತಾನೆ - ಕುಂತಿಯು ಪ್ರತೀ ಕ್ಷಣ ತನ್ನ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಬೆಳೆಸಿದಳು. ಆದರೆ ನೀನು ನಿನ್ನ ಪತಿಗೆ ಸಿಗದ ಭಾಗ್ಯ ನಿನಗಿದ್ದರೂ ಅದನ್ನು ಧಿಕ್ಕರಿಸಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸದೆ ಬಟ್ಟೆ ಕಟ್ಟಿಕೊಂಡೆ ಎಂದು. ತಂದೆ - ತಾಯಿಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ಅವರ ಭವಿಷ್ಯ ಎಂದೆಂದೂ ಸುಭದ್ರ.
ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿಯಿದೆ? ಈ ಒಂದೇ ಒಂದು ಸಾಲಲ್ಲಿ ಅದೆಷ್ಟು ಭಾವತರಂಗವಿದೆ! ಈಗಾಗಲೇ ತಮ್ಮ ಊರನ್ನು ಬಿಟ್ಟು ಬಂದವರ ಹೃದಯಕ್ಕೆ ಇದು ಒಮ್ಮೆಗೇ ಲಗ್ಗೆಯಿಡುತ್ತದೆ. ತಿಳಿಯದೂರಿಗೆ, ಪರರ ಹಾದಿಗೆ, ಜವಾಬ್ದಾರಿಯ ಗದ್ದುಗೆ, ಕರ್ತವ್ಯದ ಸಾರಿಗೆ, ಪ್ರೀತಿಪಾತ್ರರು ಕಾಣರು ಕಣ್ಣಿಗೆ ಎಂಬ ಈ ಅಗಾಧ ಬೆಳವಣಿಗೆಗಳು ಜೀವನದ ಪ್ರಮುಖ ಘಟ್ಟದಲ್ಲಿ ಆರಂಭವಾಗುತ್ತವೆ. ಇಷ್ಟು ವರ್ಷ ನಮ್ಮ ಬಾಳಲ್ಲಿ ಪ್ರತೀ ದಿನ ಜೊತೆಗಿದ್ದವರು, ಇನ್ನು ಮುಂದೆ ಇರಲು ಸಾಧ್ಯವಾಗದಷ್ಟು ದೂರ ಸಾಗಬೇಕಾದ ಪರಿಸ್ಥಿತಿ. ಸ್ವರ್ಗವಾಗಿದ್ದ ತಾಯಿಯ ಮಡಿಲು, ಆಸರೆಯಾಗಿದ್ದ ತಂದೆಯ ಹೆಗಲು ಇಲ್ಲದೆ ನಮ್ಮ ಜೀವನದ ಆಧಾರಸ್ತಂಭವೇ ಕುಸಿದಂತಾಗುತ್ತದೆ. ನಮ್ಮ ಜೀವನದಲ್ಲಿ ಎಂತಹದ್ದೇ ಸಮಸ್ಯೆ ಇರಲಿ, ಎಷ್ಟಾದರೂ ಸಮಸ್ಯೆ ಬರಲಿ, ನಮ್ಮ ಕುಟುಂಬ ನಮ್ಮ ಜೊತೆಗಿದ್ದರೆ ಅವುಗಳನ್ನು ಎದುರಿಸಿ ಗೆಲ್ಲಬಹುದು. ಕುಟುಂಬ ನಮ್ಮೊಂದಿಗಿದ್ದರೆ ನಮ್ಮದು ರಾಜ ಜೀವನ, ತುಂಬು ಜೀವನ, ಶ್ರೀಮಂತ ಜೀವನ, ಪ್ರೀತಿಯ ಜೀವನ, ನೆಮ್ಮದಿಯ ಜೀವನ. ಅದೇ ಒಂದು ವೇಳೆ ಕುಟುಂಬ ನಮ್ಮ ಜೊತೆಯಿಲ್ಲವೆಂದರೆ ಅದಕ್ಕಿಂತ ಮತ್ತೊಂದು ಕಷ್ಟದ ಜೀವನ, ಖಾಲಿ ಜೀವನ, ಬಡ ಜೀವನ, ದುಃಖ ಜೀವನ, ಅಶಾಂತ ಜೀವನ ಮತ್ತೊಂದಿರಲು ಸಾಧ್ಯವಿಲ್ಲ. ಓದಿಗಾಗಿಯೋ ಉದ್ಯೋಗಕ್ಕಾಗಿಯೋ ಕುಟುಂಬದಿಂದ ದೂರವಾಗಿ ವಿವಿಧ ಸ್ಥಳಗಳಿಗೆ ಕಾಲಿಡುವ ಮಕ್ಕಳು ಕುಟುಂಬದೊಂದಿಗೆ ತೀವ್ರ ಆತ್ಮೀಯತೆಯನ್ನು ಹೊಂದಿದವರಾಗಿದ್ದರೆ, ತಮ್ಮ ತಂದೆ-ತಾಯಿಯನ್ನು ಶಿವ-ಪಾರ್ವತಿಯಂತೆ ಕಂಡು ಆರಾಧಿಸುವವರಾಗಿದ್ದರೆ ಅವರು ಶ್ರೀರಾಮ-ಸೀತೆಯರಂತೆ ವನವಾಸದ ವೇದನೆಯನ್ನೇ ಅನುಭವಿಸುತ್ತಾರೆ. ಒಂದು ಪಿಜಿಯನ್ನೋ ಅಥವಾ ಬಾಡಿಗೆ ರೂಮ್ ಅನ್ನೋ ಖರೀದಿಸಿ ಮನೆ ಮಾಡಿಕೊಳ್ಳುವ ಇವರು ಮನೆಯಲ್ಲಿದ್ದರೂ ಮನೆಯನ್ನೇ ಹುಡುಕುತ್ತಾರೆ. 'ಆಕಾಶವೇ ಬೀಳಲಿ ಮೇಲೆ ನಾ ನಿನ್ನ ಕೈಬಿಡೆನು' ಎಂಬ ಹಾಡಿನಂತೆ ಒಂದು ಕ್ಷಣವೂ ಮೊಬೈಲ್ ಅನ್ನು ಕೈಯಿಂದ ಬಿಡಲಾಗದ ಸ್ಥಿತಿಗೆ ತಲುಪುತ್ತಾರೆ. ಇದರಿಂದ ಅವರ ಉತ್ತಮ ಹವ್ಯಾಸಗಳು, ಕ್ರಿಯಾಶೀಲತೆಯು ಕಡಿಮೆಯಾಗುತ್ತಾ ಹೋಗುತ್ತದೆ.
ಮಕ್ಕಳು ಬೆಳೆದು ಒಂದು ಹಂತಕ್ಕೆ ಬಂದ ಮೇಲೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕುಟುಂಬದಿಂದ ದೂರವಾಗಿ ವಲಸೆ ಹೋಗುವುದು ಸಾಮಾನ್ಯ ಅಥವಾ ಅನಿವಾರ್ಯ ಎಂಬಂತೆ ಸಮಾಜ ವರ್ತಿಸುತ್ತಿರುವುದು ನಿಜಕ್ಕೂ ಆಘಾತಕಾರಿ! ಎಲ್ಲ ಮಕ್ಕಳಿಗೂ ಇದು ಸಾಧ್ಯವಲ್ಲ ಹಾಗೂ ಅನಿವಾರ್ಯವೂ ಅಲ್ಲ ಅಲ್ಲವೆ? ನೀವೇ ನಿಮ್ಮ ಮನಸ್ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ಇದಕ್ಕೆ ಕಾರಣ ವಾಸ್ತವವಾಗಿ ಎದ್ದು ಕಾಣದಿದ್ದರೂ ಆತ್ಮಸಾಕ್ಷಿಗೆ ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿರುವ ಒಂದು ಕಟುಸತ್ಯ, ಅದೇ 'ದ ಪವರ್ ಆಫ್ ಮನಿ/ಸ್ಟೇಟಸ್'. ಕುಟುಂಬದ ಜೊತೆ ನಾವು ಇರುವಾಗ ದೊರಕುವ ಸ್ಟೇಟಸ್ ಮತ್ತ್ಯಾವ ಸ್ಥಿತಿಯಲ್ಲಾದರೂ ಸಿಗಲು ಸಾಧ್ಯವೆ? ನಮ್ಮ ಸನಾತನ ಸಂಸ್ಕೃತಿಯು ಸಾವಿರಾರು ವರ್ಷಗಳ ನಿರಂತರ ತಪಸ್ಸಿನ ನಂತರ ಸಾರುತ್ತದೆ - 'ಉತ್ತಮ ಕುಟುಂಬದ ವ್ಯವಸ್ಥೆಯೇ ಸ್ವಸ್ಥ ಸಮಾಜಕ್ಕೆ ಬುನಾದಿಯೆಂದು'. ಕುಟುಂಬದೊಂದಿಗೆ ಅನ್ಯೋನ್ಯ ಅನುಬಂಧವನ್ನು ಹೊಂದಿ, ಅತೀವ ಅಕ್ಕರೆಯನ್ನು ಹೊಂದಿ ಅವರನ್ನು ನಾನು ಬಿಟ್ಟಿರಲಾರೆ ಎಂದು ಈ ಕಲಿಯುಗದಲ್ಲೂ ಹೇಳುವಂತಹ ಮನಸ್ಥಿತಿ ಇರುವ ಮಕ್ಕಳು ನಿಜಕ್ಕೂ ಪುಣ್ಯ ಮಾಡಿರುವವರೆ! ಪ್ರೀತಿ, ಸ್ನೇಹದ ಬಗ್ಗೆ ನಾವು ನೂರಾರು ಸುಮಧುರ ಗೀತೆಗಳನ್ನು ಕೇಳಿರಬಹುದು, ಆ ಹಾಡುಗಳು ನಮಗೆ ಹುಚ್ಚನ್ನೂ ಹಿಡಿಸಿರಬಹುದು.ಆದರೆ ಜೋಗಿ ಸಿನಿಮಾದಲ್ಲಿನ ತಾಯಿಯ ಬಗೆಗಿನ ಹಾಡಿನಂತೆ ಅವು ನಮ್ಮ ಎದೆಯನ್ನು ಝಲ್ ಎನ್ನಿಸ್ಸಿಲ್ಲ. ಅದೇ ಕುಟುಂಬದ ಪ್ರೀತಿಯ ಮಹಿಮೆ.
ಈ ಜೀವನದಲ್ಲಿ ಬೆಲೆ ಕಟ್ಟಲಾಗದಿದ್ದರೂ ಉಚಿತವಾಗಿ ಸಿಗುವ ಅಮೋಘ ರತ್ನವೇ 'ತಂದೆ-ತಾಯಿಯ ಪ್ರೀತಿ'. ಹಾಗಂತ ನಮ್ಮ ತಂದೆ-ತಾಯಿಯನ್ನು ಬಿಟ್ಟು ಹೋಗದೆ ಸದಾಕಾಲ ಅವರ ಜೊತೆಯೇ ಇರಬೇಕು ಎಂಬುದು ಎಲ್ಲರ ಬದುಕಿನಲ್ಲೂ ಸಾಧ್ಯವಾಗದ ಮಾತು. ಕೆಲವರ ಜೀವನದಲ್ಲಿ ಅಂತಹ ಅನಿವಾರ್ಯತೆಗಳು ಬಂದು, ಕೊನೆಗೆ ಯಾವುದೇ ಆಯ್ಕೆಗಳಿಲ್ಲದೆ ದೂರ ಹೋಗಲೇಬೇಕಾಗುತ್ತದೆ. ದೂರವಾದ ಮಾತ್ರಕ್ಕೆ ಆ ಅನುಬಂಧ ಕಡಿಮೆಯಾಗುತ್ತದೆ ಎಂದಲ್ಲ, ಆದರೆ ಅದನ್ನು ಗರಿಷ್ಠವಾಗಿಯೇ ಇರುವಂತೆ ಕಾಪಾಡಿಕೊಳ್ಳುವುದು ಅವರ ಕೈಯಲ್ಲೇ ಇರುತ್ತದೆ. ಈಗಂತು ನಾವು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಂತ್ರಜ್ಞಾನದ ಸಹಾಯದಿಂದ ಮನೆಗೆ ವೀಡಿಯೋ ಕಾಲ್ ಮಾಡಿ ಮಾತನಾಡಬಹುದು. ಆದರೆ ಪವರ್ ಆಫ್ ಮನಿ/ಸ್ಟೇಟಸ್ ನ ಗಾಳಕ್ಕೆ ಬಿದ್ದು ಅನಿವಾರ್ಯವಲ್ಲದಿದ್ದರೂ ದುಡ್ಡು ಮಾಡಲು ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಅಪ್ಪ-ಅಮ್ಮನನ್ನು ಒಂಟಿ ಮಾಡದಿರೋಣ. ಆ ಜೀವಗಳು ನಮಗಾಗಿಯೇ ಜೀವ ತೇಯ್ದು ದುಡಿದು ನಿವೃತ್ತಿಯಾಗಿ ನಮ್ಮ ಜೊತೆ ಕಾಲ ಕಳೆಯಲು ತವಕಿಸುತ್ತಿರುತ್ತವೆ, ಆದರೆ ಆಗ ನಾವು ಅವರಿಂದ ದೂರವಾಗಿ ದುಡಿಯಲು ಹೋಗುತ್ತೇವೆ. ಅನಿವಾರ್ಯದಿಂದ ದೂರವಾಗಿದ್ದರೂ ಒಂದಷ್ಟು ವರ್ಷಗಳ ನಂತರ ಕೆಲಸದ ಅನುಭವದ ಮೇಲೆ ನಮ್ಮ ಮನೆಗೆ ಹತ್ತಿರವಾಗುವ ಸ್ಥಳದಲ್ಲೆ ಉದ್ಯೋಗವನ್ನು ಪಡೆದುಕೊಳ್ಳಬಹುದು. ಅದಾಗದಿದ್ದರೆ ಅಪ್ಪ-ಅಮ್ಮನನ್ನೇ ನಮ್ಮ ಕೆಲಸದ ಸ್ಥಳಕ್ಕೆ ಕರೆಸಿಕೊಂಡು ಹೊಂದಾಣಿಕೆ ಮಾಡಿಸಬಹುದು. ಅದನ್ನು ಬಿಟ್ಟು ವರ್ಷಾನುಗಟ್ಟಲೆ ನಾನೊಂದು ತೀರ ನೀನೊಂದು ತೀರ ಎಂದು ಮಕ್ಕಳು ವಿದೇಶದಲ್ಲಿ, ಅಪ್ಪ-ಅಮ್ಮ ಈ ದೇಶದಲ್ಲಿ ಅರ್ಥವಿಲ್ಲದಂತೆ ಬದುಕುತ್ತಾ ಹೋದರೆ ಏನು ಫಲ? ನಾವು ಇಷ್ಟೊಂದು ಹೋರಾಟ ಮಾಡುತ್ತಿರುವುದು ನಮ್ಮ ಕುಟುಂಬಕ್ಕಾಗಿಯೇ ಆದರೂ, ಅವರ ಜೊತೆ ನಮಗೆ ಬದುಕಲಾಗುತ್ತಿಲ್ಲವೆಂದರೆ ಇದಕ್ಕಿಂತ ದೊಡ್ಡ ದುರಂತ ಬೇರೇನಿದೆ? ಇನ್ನೂ ಕೆಲವು ಮಹಾಶಯರಿದ್ದಾರೆ, ತಂದೆ-ತಾಯಿಯ ಜೊತೆ ಮನೆಯಲ್ಲೇ ಇದ್ದರೂ ಅಲ್ಲಿಯೇ ತಮ್ಮದೊಂದು ಬೇರೆ ಪ್ರಪಂಚವನ್ನು ಮಾಡಿಕೊಂಡಿರುತ್ತಾರೆ. ಈ ಸಮಸ್ಯೆಯನ್ನು ಕೇವಲ ವ್ಯಕ್ತಿಗತವಾದುದೆಂದು ನಿರ್ಲಕ್ಷಿಸದೆ ಸಾಮಾಜಿಕವಾಗಿ ಕಳಕಳಿ ವಹಿಸಿ ಸರ್ಕಾರಗಳು ಕೂಡ ಇದರ ಕುರಿತು ಚಿಂತನೆ ನಡೆಸಬೇಕಿದೆ. ಉದಾಹರಣೆಗೆ ಮಹಾನಗರ ಬೆಂಗಳೂರಿನ ಅಗಾಧ ಕಂಪನಿಗಳನ್ನು ಮೈಸೂರು, ಮಂಗಳೂರು, ಮಂಡ್ಯದಂತಹ ನಗರಗಳಿಗೂ ಸ್ಥಳಾಂತರಿಸಿ ಹೊಸ ಶಾಖೆಗಳನ್ನು ಪ್ರಾರಂಭಿಸಬೇಕು. ಮೆಟ್ರೋನಂತಹ ಅತಿವೇಗದ ಸಾರಿಗೆ ವ್ಯವಸ್ಥೆಯನ್ನು ಹೆಚ್ಚೆಚ್ಚು ವಿಸ್ತಾರ ಮಾಡಬೇಕು. ಖುದ್ದು ನಮ್ಮ ಪ್ರಧಾನಮಂತ್ರಿಯವರೇ 'ಬಿ ವೋಕಲ್ ಫರ್ ಲೋಕಲ್' (ಸ್ಥಳೀಯತೆಗೆ ಧ್ವನಿಯಾಗಿರಿ) ಎಂದು ಘೋಷಿಸಿರುವುದು ಉತ್ತಮ ಬೆಳವಣಿಗೆ. ಎಲ್ಲರೂ ಅದಾಗಲೆ ಅಭಿವೃದ್ಧಿ ಹೊಂದಿರುವ ದಿಲ್ಲಿ, ಬೆಂಗಳೂರಿಗೇ ಹೋಗುತ್ತೇವೆ ಎಂದರೆ ದೇಶದಲ್ಲಿ ಮತ್ತಷ್ಟು ದಿಲ್ಲಿ, ಬೆಂಗಳೂರನ್ನು ಕಟ್ಟುವವರು ಯಾರು?
ಮಹಾತ್ಕಾರ್ಯಗಳನ್ನು ಅಥವಾ ನಿರ್ದಿಷ್ಟ ಕಾರ್ಯಗಳನ್ನು ಮಾಡುವಾಗ ಪರಿವಾರದಿಂದ ದೂರವಾಗಬೇಕಾಗುತ್ತದೆ ಎಂದು ನಮ್ಮ ರಾಮಾಯಣ, ಮಹಾಭಾರತಗಳು ತಿಳಿಸುತ್ತವೆ. ಉದಾಹರಣೆಗೆ, ಶ್ರೀರಾಮ ಸೋದರರು ಹಾಗೂ ಪಾಂಡವ-ಕೌರವ ಸೋದರರು ವಿದ್ಯಾಭ್ಯಾಸ ಮಾಡುವಾಗ ಮತ್ತು ನ್ಯಾಯಕ್ಕಾಗಿ ಸಂಘರ್ಷ ಮಾಡುವಾಗ ಕುಟುಂಬದಿಂದ ದೂರವಾಗಿ ಬಾಳಬೇಕಾಯಿತು. ಆದರೆ ಅವರ ಅನುಬಂಧ ಹೆಚ್ಚೇ ಆಯಿತು, ಅವರ ಕುಟುಂಬವೇ ಅವರ ಶಕ್ತಿಯಾಯಿತು. ಆದರೆ ಇದು ಕೆಲವು ಮಹಾನ್ ವ್ಯಕ್ತಿಗಳ ಜೀವನದಲ್ಲಿ ಮಾತ್ರ ಸಂಭವಿಸುವಂತಹದ್ದು. ಉಳಿದವರಲ್ಲಿ ಅದರಲ್ಲೂ ಈ ಕಲಿಯುಗದ ಮಕ್ಕಳಲ್ಲಿ ಶ್ರೀರಾಮ-ಸೀತೆಯರ ಆದರ್ಶ ಕಾಣಸಿಗುವುದು ತೀರಾ ವಿರಳ. ತಂದೆ-ತಾಯಿಯಿಂದ ದೂರವಿರುವ ಮಕ್ಕಳಲ್ಲಿ ಬಹುಪಾಲು ಮಂದಿ ಹಾದಿ ತಪ್ಪುತ್ತಿದ್ದಾರೆ. ನಮ್ಮ ಸದ್ಗುರು ಅವರೇ ಹೇಳಿರುವಂತೆ ನಮ್ಮ ದೇಶದ ಪೋಷಕರು 35-40 ವರ್ಷ ದಾಟಿದ ಮೇಲೆ ತಮ್ಮ ಬದುಕನ್ನು ಸಂಪೂರ್ಣ ಮರೆತೇ ಬಿಡುತ್ತಾರೆ, ತಾವು ಬದುಕುತ್ತಿರುವುದು ತಮ್ಮ ಮಕ್ಕಳಿಗಾಗಿ ಮಾತ್ರ ಎಂಬ ಮನಸ್ಥಿತಿಗೆ ತಲುಪಿ ಬಿಡುತ್ತಾರೆ. ಅದಕ್ಕಾಗಿ ಪೋಷಕರು ಬದಲಾದ ಮಕ್ಕಳ ಸ್ಟೇಟಸ್ ನಿಂದ ಮುಜುಗರದಿಂದಲೋ ಅಥವಾ ಮತ್ತ್ಯಾವುದೋ ಹಿಂಜರಿಕೆಯಿಂದಲೋ ನಮ್ಮ ಅವರ ನಡುವೆ ಗೋಡೆ ಕಟ್ಟಿಕೊಳ್ಳಲು ಪ್ರಯತ್ನಿಸಿದರೆ ಅದನ್ನು ನಾವೇ ಕೆಡವಿ ಹಾಕಬೇಕು. ನಾವು ಎಷ್ಟೇ ಎತ್ತರಕ್ಕೇರಿದರೂ ತಂದೆ-ತಾಯಿಯ ಮುಂದೆ ಮಾತ್ರ ಎಂದಿಗೂ ಚಿಕ್ಕ ಮಕ್ಕಳೇ! ಆದ್ದರಿಂದ ಶಿವಪ್ಪ-ಪಾರ್ವತಿಯಮ್ಮ ಅವರಲ್ಲಿ ನಮ್ಮದೊಂದೇ ಪ್ರಾರ್ಥನೆ ನಿಮ್ಮ ಪ್ರತಿರೂಪವೇ ಆಗಿರುವ, ನಮ್ಮ ಎರಡು ಕಣ್ಣುಗಳೇ ಆಗಿರುವ ನಮ್ಮ ತಂದೆ-ತಾಯಿಯರು ಸದಾ ನಮ್ಮ ಕಣ್ಣ ಮುಂದೆಯೇ ಜೊತೆಯಾಗಿರಲಿ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment