ಪ್ರಧಾನಿ ಮೋದಿಯವರ ಮಾತೃ ಹೃದಯ
ಪ್ರಧಾನಿ ಮೋದಿಯವರ ಮಾತೃ ಹೃದಯ
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮಾ ಅಮ್ಮಾ ಐ ಲವ್ ಯು…
ಅಮ್ಮಾ ಅಮ್ಮಾ ಐ ಲವ್ ಯು…
ತಾಯಿಯ ಬಗೆಗೆ ಇಂತಹ ಅಗಣಿತ ಹಾಡುಗಳನ್ನು ರಚಿಸಲಾಗಿದೆ. 1975ರ ದೀವಾರ್ ಸಿನಿಮಾದ ಮುಖ್ಯ ದೃಶ್ಯ. ಹಾದಿ ತಪ್ಪಿದ ಹುಡುಗ (ಅಮಿತಾಭ್ ಬಚ್ಚನ್) ತನ್ನ ಸಹೋದರನಿಗೆ (ಶಶಿಕಪೂರ್) ಎದುರಾಗಿ ಹೇಳುತ್ತಾನೆ - "ಆಜ್ ಮೇರೆ ಪಾಸ್ ಬಿಲ್ಡಿಂಗ್ ಹೇ, ಪ್ರಾಪರ್ಟಿ ಹೇ, ಬ್ಯಾಂಕ್ ಹೇ, ಬಂಗ್ಲಾ ಹೇ, ಗಾಡಿ ಹೇ, ಕ್ಯಾ ಹೇ ಕ್ಯಾ ಹೇ ತುಮ್ಹಾರೆ ಪಾಸ್ " (ಇಂದು ನನ್ನ ಬಳಿ ಬಿಲ್ಡಿಂಗ್ ಇದೆ, ಪ್ರಾಪರ್ಟಿ ಇದೆ, ಬ್ಯಾಂಕ್ ಇದೆ, ಬಂಗ್ಲಾ ಇದೆ, ಗಾಡಿ ಇದೆ. ನಿನ್ನ ಬಳಿ ಏನಿದೆ ಏನಿದೆ). ಅದಕ್ಕೆ ಸಹೋದರನು (ಶಶಿಕಪೂರ್) ಉತ್ತರಿಸುತ್ತಾನೆ "ಮೇರೆ ಪಾಸ್ ಮಾ ಹೇ" (ನನ್ನ ಬಳಿ ಅಮ್ಮಾ ಇದ್ದಾರೆ). 2017ರ ಮಿಸ್ ವರ್ಲ್ಡ್ ಕಾಂಪಿಟೇಶನ್ ನಲ್ಲಿ ವಿಶ್ವಸುಂದರಿ ಪಟ್ಟಕ್ಕೇರಿದ ಭಾರತದ ಯುವತಿ ಮಾನುಷಿ ಚಿಲ್ಲರ್ ತಮಗೆ ಕೇಳಿದ "ಅತಿ ಹೆಚ್ಚು ಸಂಬಳವನ್ನು ಪಡೆಯಲು ಅರ್ಹವಾಗಿರುವ ವೃತ್ತಿ ಯಾವುದು?" ಎಂಬ ಪ್ರಶ್ನೆಗೆ "ಅತ್ಯಧಿಕ ಸಂಬಳ ಪಡೆಯಲು ತಾಯಿಯ ಕೆಲಸ ಅರ್ಹವಾಗಿದೆ. ಅದು ಕೇವಲ ಸಂಬಳದ ವಿಷಯದಲ್ಲಿ ಅಲ್ಲ, ನಾವು ಅವಳಿಗೆ ನೀಡಬೇಕಾದ ಪ್ರೀತಿ ಮತ್ತು ಗೌರವಗಳ ಬಗೆಗೆ ಕೂಡ" ಎಂದು ಉತ್ತರಿಸುತ್ತಾಳೆ. ಈ ಜಗತ್ತಿನ ಮಹಾನ್ ಸಾಹಸಿಗರು, ಗಟ್ಟಿಗರು, ಬಲಿಷ್ಠರು, ಶಕ್ತಿವಂತರು ಅದೆಷ್ಟೇ ತಾಕತ್ತನ್ನು ಹೊಂದಿದವರಾದರೂ ಸಹ ತಾಯಿಯ ವಿಷಯ ಬಂದಾಗ ಆ ಮಮತಾಮಯಿ ಶಕ್ತಿಯ ಮುಂದೆ ಸೋತು ಹೋಗುತ್ತಾರೆ! ಮಕ್ಕಳು ಎಷ್ಟೇ ದೊಡ್ಡ ವ್ಯಕ್ತಿಗಳಾಗಿ ಬೆಳೆದು ಡಾಕ್ಟರ್, ಪ್ರೊಫೆಸರ್, ಇಂಜಿನಿಯರ್, ಮಿನಿಸ್ಟರ್ ಗಳಾದರೂ ತಾಯಿಯ ಪಾಲಿಗೆ ಮಾತ್ರ ಎಂದೆಂದಿಗೂ ಮಕ್ಕಳೇ.
ಈ ಪ್ರಪಂಚದಲ್ಲಿ ತೀರಿಸಲಾಗದ ಋಣ, ಕಡಿದುಕೊಳ್ಳಲಾಗದ ಬಂಧನ ಎಂದರೆ ಅದು ತಾಯಿಯ ಜೊತೆಗಿನ ಸಂಬಂಧ ಮಾತ್ರ. ಈ ಬಂಧನದಿಂದ ಶ್ರೇಷ್ಠಾತಿ ಶ್ರೇಷ್ಠ ಸಂತರಾದ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು ಕೂಡ ತಪ್ಪಸಿಕೊಳ್ಳಲಾಗಿಲ್ಲ. ಬಾಲ್ಯಕಾಲದಲ್ಲೇ ಸಂಸಾರವನ್ನು ತ್ಯಜಿಸಿದ, ಭಾರತ ರಾಷ್ಟ್ರದ ಧರ್ಮ ಸಂಸ್ಥಾಪನಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಶಂಕರರು ತಮ್ಮ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದ ಅಂತಿಮ ಕಾಲದಲ್ಲಿ ಅವರ ಬಳಿ ತೆರಳಿ ಹಾರೈಕೆ ಮಾಡಿದರು. ಭಾರತವು ಆತ್ಮವಿಸ್ಮೃತಿಯ ದಾಳಿಗೆ ಒಳಗಾಗಿದ್ದ ಸಂದರ್ಭದಲ್ಲಿ ಅದರ ವಿರುದ್ಧ ಸಿಡಿದೆದ್ದು ಆತ್ಮನಿರ್ಭರತೆಯ ಕಹಳೆಯನ್ನು ಮೊಳಗಿಸಿದ ಸ್ವಾಭಿಮಾನಿ ವಿವೇಕಾನಂದರು ತಮ್ಮ ತಾಯಿಯ ಚಿಂತಾಜನಕ ಸ್ಥಿತಿಯಿಂದ ನೊಂದು ಅವರ ಪರಮಮಿತ್ರ ಖೇತ್ರಿ ಮಹಾರಾಜರಿಗೆ 'ನನ್ನ ತಾಯಿ ತುಂಬಾ ಸಂಕಷ್ಟದಲ್ಲಿದ್ದಾರೆ. ನೀನು ಅವರಿಗೆ ಮಾಸಿಕವಾಗಿ ಅವಶ್ಯಕ ಧನ ಸಹಾಯವನ್ನು ಮಾಡಬೇಕು. ಕೊನೆಗೆ ನನ್ನ ನಿನ್ನ ಸಂಬಂಧ ಹಾಳಾದರೂ ಈ ಸಹಾಯವನ್ನು ನಿಲ್ಲಿಸುವುದಿಲ್ಲ ಎಂದು ಮಾತುಕೊಡಬೇಕು' ಎಂದು ವಿನಂತಿಸಿ ಪತ್ರ ಬರೆದಿದ್ದರು. ಇವರಂತೆಯೇ ಇಂದಿನ ಸಂತಸದೃಶ ರಾಜರ್ಷಿ, ಆದರಣೀಯ ಪ್ರಧಾನಿ ನರೇಂದ್ರ ಮೋದಿಯವರ ಮಾತೃ ಪ್ರೇಮ. ಮೋದಿಯವರ ಖಡಕ್ ನಿರ್ಣಯ, ಐತಿಹಾಸಿಕ ಹೆಜ್ಜೆಗಳನ್ನು ಬೇಷರತ್ತಾಗಿ ಬೆಂಬಲಿಸಿ ಸಾಹಸಮಯ ಲೇಖನಗಳನ್ನು ಬರೆಯುತ್ತಾ ಬಂದಿರುವ ನನಗೆ ಅವರ ತಾಯಿಯ ನಿಧನದ ನಂತರ ಆ ತಾಯಿ-ಮಗನ ವಾತ್ಸಲ್ಯದ ಬಗ್ಗೆ ಸಂವೇದನಾಶೀಲತೆ ಯಿಂದ ಲೇಖನ ಬರೆಯಲು ಧೈರ್ಯ ಸಾಲಲಿಲ್ಲ. ಆದರೆ 56 ಇಂಚಿನ ಎದೆ, ಚೌಕಿದಾರ್ ಶೇರ್ ಹೇ, ದೇಖೊ ದೇಖೊ ಕೌನ್ ಆಯಾ ಶೇರ್ ಆಯಾ ಶೇರ್ ಆಯಾ ಎಂಬೆಲ್ಲಾ ಶೌರ್ಯದ ಘೋಷಣೆಗಳಿಗೆ ಪಾತ್ರರಾಗಿರುವ ಮಹಾ ತಾಕತ್ತಿನ ಪ್ರಧಾನಿಯವರಲ್ಲಿ ಅಡಕವಾಗಿರುವ ಮಾತೃ ಹೃದಯದ ಬಗ್ಗೆ ಅರಿವಾಗುತ್ತಾ ಹೋದಂತೆ ಈ ಬಗೆಗೆ ಲೇಖನವನ್ನು ಬರೆಯಲೇಬೇಕು ಎಂದೆನಿಸಿತು. ಮೋದಿಯವರು ನಮ್ಮ ದೇಶದ ಎಲ್ಲಾ ಮಹಿಳೆಯರನ್ನು ತಮ್ಮ ಸ್ವಂತ ಮಾತೆ, ಸಹೋದರಿಯಂತೆ ಕಾಣುತ್ತಾ ಅವರ ಅಭ್ಯುದಯಕ್ಕಾಗಿ ಜಾರಿಗೆ ತರುತ್ತಿರುವ ಮಹತ್ವಪೂರ್ಣ ಯೋಜನೆಗಳ ಸಾಕಾರದ ಹಿಂದೆ ತಾಯಿ ಹೀರಾ ಬೆನ್ ಮೋದಿಯವರ ಸಂಕಷ್ಟ- ಸಮಸ್ಯೆಗಳಿಗೆ ಸಾಕ್ಷಿಯಾಗಿದ್ದ ಮಗನ ದುಃಖತಪ್ತ ಮನವಿದೆ. 130 ಕೋಟಿ ಭಾರತೀಯರ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ ನರೇಂದ್ರ ಮೋದಿಯವರು 2014ರಲ್ಲಿ ತಮ್ಮ ಐತಿಹಾಸಿಕ ವಿಜಯದ ನಂತರ ಕಾಂಗ್ರೆಸ್ ನಿಂದ ಬಳುವಳಿಯಾಗಿ ಬಂದಿದ್ದ ಸಮಸ್ಯೆಗಳ ರಾಶಿಯನ್ನು ಭೇದಿಸುವಾಗಲಾಗಲಿ ಅಥವಾ ಪಕ್ಕದಲ್ಲೇ ಇರುವ ಶತ್ರು ರಾಷ್ಟ್ರಗಳು ತಮ್ಮ ಕಪಟದಾಟಗಳನ್ನು ಪ್ರದರ್ಶಿಸಿದಾಗ ಅದಕ್ಕೆ ಸರಿಯಾದ ಪೆಟ್ಟು ಕೊಡುವಾಗಲಾಗಲಿ ಅಥವಾ ಕೊರೊನಾದಂತಹ ಶತಮಾನದ ಪಿಡುಗು ಎದುರಾದಾಗ ಭಾರೀ ಪ್ರಮಾಣದ ಜನರ ಜೀವನವನ್ನು ಉಳಿಸಬೇಕಾದ ಜವಾಬ್ದಾರಿಯುತ ಹೋರಾಟ ಮಾಡುವಾಗಲಾಗಲಿ ಅಥವಾ ವಿಪಕ್ಷಗಳ ನಿರಂತರ ನಕಾರಾತ್ಮಕ ದಾಳಿಗಳ ಸರಮಾಲೆ ಜೊತೆಗೆ ಆಂತರಿಕ ಭ್ರಷ್ಟಾಚಾರ, ಭಯೋತ್ಪಾದನೆಯ ಜೊತೆಗೆ ಸೆಣಸಾಡುವಾಗಲೇ ಆಗಲಿ ಎಂದಿಗೂ ಧೈರ್ಯಗೆಟ್ಟವರಲ್ಲ. ಆದರೆ ಫೇಸ್ ಬುಕ್ ನ ಮಾರ್ಕ್ ಜುಕರ್ ಬರ್ಗ್ ಅವರೊಂದಿಗಿನ ಸಂವಾದದಲ್ಲಿ ತಮ್ಮ ತಾಯಿಯ ವಿಷಯ ಎದುರಾದಾಗ ಅವರ ಕಷ್ಟಗಳನ್ನೆಲ್ಲಾ ನೆನೆದು ಅತ್ಯಂತ ಭಾವುಕರಾಗಿ, ಗದ್ಗದಿತರಾಗಿ ಮಾತನಾಡಿದರು. ಮೋದಿಯವರ ತಂದೆಯ ಸಾವಿನ ನಂತರ ಮನೆಯ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅವರ ತಾಯಿ ಮಕ್ಕಳನ್ನೆಲ್ಲಾ ಸಾಕಲು ಹೇಗೆ ಅಕ್ಕ-ಪಕ್ಕದ ಮನೆಗಳಲ್ಲಿ ಮನೆಕೆಲಸ ಮಾಡಿ ಶ್ರಮ ಪಡುತ್ತಿದ್ದರು ಎಂಬುದನ್ನು ತಿಳಿಸಿದರು. ಸನ್ಯಾಸವನ್ನು ಸ್ವೀಕರಿಸುವಾಗ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು, ತಮಗೆ ತಾವೇ ಶ್ರಾದ್ಧ ಮಾಡಿಕೊಂಡು ಹೊಸ ವ್ಯಕ್ತಿಯಾಗಿ ಪುನರ್ಜನ್ಮ ದಂತೆ ಬದುಕಲು ಆರಂಭಿಸುವ ಸಂತರು ತಾಯಿಯನ್ನು ಮಾತ್ರ ಅಮ್ಮಾ ಎಂದೇ ಕರೆಯಬಹುದು, ತಾಯಿಗೆ ಮಾತ್ರ ಮಗನಾಗಿಯೇ ಇರಬಹುದು ಎಂದು ಜ್ಞಾನಿಗಳು ಹೇಳುತ್ತಾರೆ.
ಮೋದಿಯವರು ತಮ್ಮ ಜೀವನದ ಮಹತ್ವದ ಸಂದರ್ಭಗಳಲ್ಲಿ, ಹುಟ್ಟು ಹಬ್ಬಗಳಲ್ಲಿ ಅಮ್ಮನನ್ನು ಭೇಟಿಯಾಗಿ ಸೌಖ್ಯವನ್ನು ವಿಚಾರಿಸಿ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ಮೋದಿಯವರು ಭಾಜಪಾದ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಘೋಷಣೆಯಾದ ಮೇಲೆ ಅವರ ಅಮ್ಮನಿಗೆ ಮೋದಿ ನಿಜವಾಗಲೂ ಪ್ರಧಾನಿಯಾಗುವರೆ? ಎಂದು ಕೇಳಿದ ಪ್ರಶ್ನೆಗೆ 'ಅವನು ಆಗೇ ಆಗುತ್ತಾನೆ. ಅವನು ಕೇವಲ ಗುಜರಾತನ್ನು ಆಳಲು ಬಂದ ರಾಜನಲ್ಲ, ಅವನು ಇಡೀ ಜಗತ್ತಿನ ಚಕ್ರವರ್ತಿಯಾಗುತ್ತಾನೆ' ಎಂದು ಘಂಟಾಘೋಷವಾಗಿ ಹೇಳಿದರು. ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿದ್ದ 500, 1000 ರೂಪಾಯಿಗಳ ನೋಟ್ ಬ್ಯಾನ್ ಮಾಡಿದ್ದ ಮೋದಿ ಸರ್ಕಾರದ ವಿರುದ್ಧ ವೃದ್ಧರು, ಅನಕ್ಷರಸ್ಥರನ್ನೆಲ್ಲಾ ಮುಂದಿರಿಸಿ ಅವರ ಸಂಕಷ್ಟಗಳಿಗೆ ಉತ್ತರಿಸುವಂತೆ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದ ವಿಪಕ್ಷಗಳಿಗೆ ಸ್ವತಃ 97 ವರ್ಷದ ಹೀರಾಬೆನ್ ಅವರೇ ಸಾಮಾನ್ಯ ಪ್ರಜೆಯಂತೆ ಬ್ಯಾಂಕ್ ನ ಸರತಿ ಸಾಲಿನಲ್ಲಿ ನಿಂತು ನೋಟು ವಿನಿಮಯ ಮಾಡಿಕೊಂಡು ಸರಿಯಾದ ಪಾಠ ಕಲಿಸಿದರು. ಇಂತಹ ಛಲವಾದಿ ತಾಯಿಯ ಮಗ ಹಠವಾದಿ ನಮ್ಮ ನೆಚ್ಚಿನ ಪ್ರಧಾನಿ ಮೋದೀಜಿ!
ಅಮ್ಮನ ಅಂತಿಮ ಪಯಣದ ಮೆರವಣಿಗೆಗೆ ತಮ್ಮ ಭುಜವನ್ನು ಆಧಾರವಾಗಿ ಕೊಟ್ಟ ಮೋದಿಯವರಿಗೆ ಅಂದು ಆಗಿರಬಹುದಾದ ಭಾರ ಬಹುಶಃ ಎಂದಿಗೂ ಆಗಿರಲಿಕ್ಕಿಲ್ಲ. ಅದರ ಮುಂದೆ 130 ಕೋಟಿ ಭಾರತೀಯರ ಭಾರವೇ ಕಡಿಮೆಯಾಯಿತೇನೊ! ಪ್ರಧಾನಮಂತ್ರಿಯ ಕಾರ್ಯಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ಕೆಂಪುಕೋಟೆಯಲ್ಲಿ ಮಾಡುವ ಭಾಷಣದಲ್ಲಿ ಮೋದಿಯವರು ದೇಶದಾದ್ಯಂತ ಶೀಘ್ರಾತಿ ಶೀಘ್ರವಾಗಿ ಶಾಲಾ ಹೆಣ್ಣುಮಕ್ಕಳ ಸಮ್ಮಾನ, ಆರೋಗ್ಯ ಹಾಗೂ ಶಿಕ್ಷಣದ ನಿರಂತರತೆಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಎಲ್ಲಾ ಜನಪ್ರತಿನಿಧಿಗಳಿಗೆ ಕರೆ ನೀಡಿದರು. ಇದನ್ನು ಶಾಲಾ ಮಕ್ಕಳಿಗಷ್ಟೇ ಸೀಮಿತಗೊಳಿಸದೆ ಪ್ರತಿಯೊಂದು ಮನೆಯಲ್ಲೂ ಒಂದು ಶೌಚಾಲಯವನ್ನು ನಿರ್ಮಿಸಬೇಕೆಂಬ ಬಯಲು ಶೌಚ ಮುಕ್ತ ಭಾರತವಾಗಬೇಕೆಂಬ ಸಂಕಲ್ಪವನ್ನು ಮಾಡಿದರು.
ಬಲಾತ್ಕಾರದ ಪ್ರಕರಣಗಳ ಬಗ್ಗೆ ಕೇಳಿದಾಗಲೆಲ್ಲಾ ಮುಜುಗರದಿಂದ ನಮ್ಮ ತಲೆಗಳು ತಗ್ಗುತ್ತವೆ. ಹುಡುಗಿಗೆ 10-12 ವರ್ಷ ತುಂಬುತ್ತಿದ್ದಂತೆ ಆಕೆಯ ಎಲ್ಲಾ ಆಗು-ಹೋಗುಗಳ ಬಗ್ಗೆ ಕಣ್ಣಿಡುತ್ತೀರಿ ಹಾಗೂ ಎಲ್ಲಿಗೆ ಹೋಗುತ್ತಿರುವೆ ಯಾವಾಗ ಬರುವೆ ಎಂದೆಲ್ಲಾ ನಾನಾ ವಿಧವಾಗಿ ಪ್ರಶ್ನಿಸುತ್ತೀರಿ, ಆದರೆ ಎಂದಾದರೂ ಹುಡುಗನಿಗೆ ಹೀಗೆ ಪ್ರಶ್ನಿಸುವ ಧೈರ್ಯ ಮಾಡಿದ್ದೀರಾ? ಬಲಾತ್ಕಾರ ಮಾಡುವವನು ಯಾರದ್ದೋ ಮಗನೇ ಆಗಿರುತ್ತಾನೆ ತಾನೆ ಎಂದು ಮೋದಿಯವರು ಕೆಂಪುಕೋಟೆಯಿಂದಲೇ ದೇಶದ ಎಲ್ಲಾ ಪೋಷಕರನ್ನು ಉದ್ದೇಶಿಸಿ ಗಂಭೀರವಾಗಿ ಮಾತನಾಡಿದರು. ಇದೇರೀತಿ 2 ವರ್ಷಗಳ ಹಿಂದೆ ಅವರು ಮಾಡಿದ ಭಾಷಣದಲ್ಲಿ 6000 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಂದ 5 ಕೋಟಿಗೂ ಅಧಿಕ ಸ್ಯಾನಿಟರಿ ಪ್ಯಾಡ್ ಗಳನ್ನು 1 ರೂ. ದರದಲ್ಲಿ ಬಡಮಹಿಳೆಯರಿಗೆ ನೀಡಿರುವುದರ ಬಗ್ಗೆ ಉಲ್ಲೇಖಿಸಿದರು. ಕಳೆದ ವರ್ಷದ ಭಾಷಣದಲ್ಲಿ ಕಾರಣಾಂತರಗಳಿಂದ ನಮ್ಮ ವ್ಯವಹಾರ, ಸಂಭಾಷಣೆಗಳಲ್ಲಿ ಒಂದಲ್ಲಾ ಒಂದು ತೆರನಾಗಿ ನಾರಿಯರ ಅಪಮಾನ ಮಾಡುತ್ತಿದ್ದೇವೆ. ನಮ್ಮ ಸ್ವಭಾವ, ಸಂಸ್ಕಾರಗಳಲ್ಲಿ ನಾರಿಯರ ಅಪಮಾನ ಮಾಡುವ ಎಲ್ಲಾ ವಿಚಾರಗಳಿಂದ ಮುಕ್ತಿ ಹೊಂದುವ ಸಂಕಲ್ಪವನ್ನು ಮಾಡಬಹುದೆ? ಎಂದು ಪ್ರಶ್ನಿಸಿದರು. ವೈರಾಗ್ಯ ಸ್ವಭಾವದ ನಮ್ಮ ಮೋದಿಯವರು ಗುಜರಾತ್ ನ ಸಿಎಂ ಆಗಿದ್ದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಜನರಿಂದ ದೊರೆಯುತ್ತಿದ್ದ ಉಡುಗೊರೆಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಿ ಅದರಿಂದ ದೊರೆತ ನೂರು ಕೋಟಿಗೂ ಅಧಿಕ ನಗದನ್ನು ಹೆಣ್ಣು ಮಕ್ಕಳ ಶಿಕ್ಷಣ ನಿಧಿಗೆ ಸಮರ್ಪಿಸಿದರು. ನಂತರ ಪ್ರಧಾನಿಯಾದ ಬಳಿಕ ದೆಹಲಿಗೆ ತೆರಳುವಾಗ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಗಳಿಸಿದ್ದ ಸಂಬಳದ ಗಣನೀಯ ಮೊತ್ತದಿಂದ ಚಾರಿಟಿಯನ್ನು ಸ್ಥಾಪಿಸಿ ಸಚಿವಾಲಯದ ಪೀವನ್ ಹಾಗೂ ಡ್ರೈವರ್ ಗಳ ಮಕ್ಕಳ ಶಿಕ್ಷಣಕ್ಕೆ ಉತ್ತಮ ವ್ಯವಸ್ಥೆ ಮಾಡಿದರು.
ನನ್ನ ಮಾತಾ-ಸಹೋದರಿಯರು ಪ್ರತೀದಿನ ಒಲೆಗಳಲ್ಲಿ ಅಡಿಗೆ ಮಾಡಲು ಸೌದೆ, ಇದ್ದಿಲುಗಳನ್ನು ಉರಿಸುತ್ತಾ ಅದರ ಮುಂದೆಯೇ ತಾಸುಗಟ್ಟಲೆ ಕಾಲ ಕಳೆಯುವುದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಂದು ಅವರ ಆರೋಗ್ಯದ ಕಾಳಜಿಯಿಂದ ಉಜ್ವಲ ಯೋಜನೆಯನ್ನು ಜಾರಿಗೆ ತಂದು 9 ಕೋಟಿಗೂ ಅಧಿಕ ಎಲ್.ಪಿ.ಜಿ ಸಿಲಿಂಡರ್ ಗಳನ್ನು ಮನೆಮನೆಗಳಿಗೆ ವಿತರಿಸಿದರು. ಹಾಗೆಯೇ ಸಹೋದರಿಯರು ಅನಾರೋಗ್ಯಕ್ಕೊಳಗಾದರೂ ಎಲ್ಲಿ ನನ್ನಿಂದ ಕುಟುಂಬಕ್ಕೆ ಹೊರೆಯಾಗುವುದೊ ಎಂದು ಚಿಂತಿಸಿ ಅದನ್ನು ಮುಚ್ಚಿಟ್ಟು ಕೊನೆಗೆ ಜೀವವನ್ನೇ ಕಳೆದುಕೊಳ್ಳಬೇಕಾದ ವಿವಶತೆಗೆ ಒಳಗಾಗುತ್ತಿದ್ದಾರೆಂದು ಅದನ್ನು ತಡೆಯಲು ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದು 5 ಲಕ್ಷದವರೆಗೆ ಆಸ್ಪತ್ರೆ ಖರ್ಚನ್ನು ಭರಿಸುವುದಾಗಿ ಬಡವರಿಗೆ ಕಾರ್ಡ್ ಗಳನ್ನು ವಿತರಿಸಿದರು. ತಲಾಖ್ ತಲಾಖ್ ತಲಾಖ್ ಎಂದು ಹೇಳಿ ಮುಸ್ಲಿಂ ಹೆಣ್ಣು ಮಕ್ಕಳ ಭವಿಷ್ಯವನ್ನು ಅಂಧಕಾರದಲ್ಲಿ ಮುಳುಗಿಸಿ ಅವರನ್ನು ತೊರೆದು ಹೋಗಲು, ಅವರ ಪತಿಯರಿಗೆ ಸಹಕಾರಿಯಾಗಿದ್ದ ಟ್ರಿಪಲ್ ತಲಾಖ್ ಅನ್ನು 2017ರಲ್ಲಿ ನಿಷೇಧಗೊಳಿಸಿದರು. ಸರ್ಕಾರವು ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನದಡಿ ಇಂದಿಗೂ ಹೆಣ್ಣು ಮಕ್ಕಳ ರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಎಲ್ಲಾ ಸ್ತರಗಳಲ್ಲಿಯೂ ಸಹಕರಿಸುತ್ತಿದೆ. ಪಿಎಂ ಆವಾಸ್ ಯೋಜನೆಯಡಿ 122 ಲಕ್ಷ ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು 65 ಲಕ್ಷಕ್ಕೂ ಹೆಚ್ಚು ಮನೆಗಳು ಈಗಾಗಲೇ ನಿರ್ಮಾಣಗೊಂಡಿವೆ. ಹಾಗೆಯೇ ತಮ್ಮದೇ ಸರ್ಕಾರದ ಮೊದಲ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ರಕ್ಷಣಾ ಮಂತ್ರಿ, ಸುಷ್ಮಾ ಸ್ವರಾಜ್ ಅವರಿಗೆ ವಿದೇಶಾಂಗ ಮಂತ್ರಿ, ಸ್ಮೃತಿ ಇರಾನಿ ಅವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿ ಸ್ಥಾನಗಳು ಹಾಗೂ ಈಗಿನ ಎರಡನೇ ಅವಧಿಯಲ್ಲಿ ಸೀತಾರಾಮನ್ ಅವರಿಗೆ ಹಣಕಾಸು ಮಂತ್ರಿ, ಸ್ಮೃತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ, ಅಲ್ಪಸಂಖ್ಯಾತರ ವ್ಯವಹಾರಗಳ ಮಂತ್ರಿ ಸ್ಥಾನಗಳನ್ನು ನೀಡಿದ್ದಾರೆ. 57 ವರ್ಷಗಳ ಇತಿಹಾಸದ ಸೈನಿಕ್ ಶಾಲೆಗಳಲ್ಲಿ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ, ಭಾರತೀಯ ಸೇನೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಾದ ಮಹಿಳೆಯರ ನೇಮಕಾತಿ ಪ್ರಮಾಣ, ಮಹಿಳೆಯರ ಸ್ವಯಂ ಉದ್ಯಮಕ್ಕೆ ಶಕ್ತಿ ತುಂಬಲು 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವಿಕೆ ಹೀಗೆ ಮುಂತಾದ ಮಹಿಳಾಪರ ಕಾರ್ಯಗಳು ಚಾಲ್ತಿಯಲ್ಲಿವೆ. ಈ ಎಲ್ಲಾ ಯೋಜನೆಗಳಿಂದ ಮೋದಿಯವರನ್ನು ತಮ್ಮ ಮನೆಮಗನಂತೆ ಕಾಣುತ್ತಿರುವ ಮಹಿಳೆಯರು ಸೈಲೆಂಟ್ ವೋಟರ್ಸ್ ಆಗಿ ಅವರಿಗೆ ಅತ್ಯಧಿಕ ಬೆಂಬಲವನ್ನು ನೀಡುತ್ತಿದ್ದಾರೆ.
ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ನಂತರ ಶೀಘ್ರವಾಗಿ ಮಾಡಿ ಮುಗಿಸಬೇಕಾದ ಪ್ರಮುಖ ಅವಶ್ಯಕ ಸಂಗತಿಗಳಾದ ಎಲ್ಲರಿಗೂ ನೀರು, ಮನೆ, ವಿದ್ಯುತ್, ಶಾಲಾ-ಕಾಲೇಜುಗಳಲ್ಲಿ ಸ್ತ್ರೀಯರಿಗಾಗಿ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಇವುಗಳನ್ನು ಕಾಂಗ್ರೆಸ್ ನವರು 70 ವರ್ಷಗಳವರೆಗೆ ಮುಂದೂಡುತ್ತಾ ಬಂದಿದ್ದರಿಂದ ಮೋದಿಯವರು ಪಟ್ಟಕ್ಕೇರಿದ ನಂತರ ಪ್ರಪ್ರಥಮವಾಗಿ ಈ ಬಹುದೊಡ್ಡ ಮಿಷನ್ನನ್ನೇ ಕೈಗೊಳ್ಳಬೇಕಾಯಿತು. ಸ್ವಾತಂತ್ರ್ಯಾನಂತರ 70 ವರ್ಷಗಳ ಕಾಲ ಸ್ವಾರ್ಥ ರಾಜಕಾರಣ ಮಾಡುತ್ತಾ ಉದ್ದೇಶಪೂರ್ವಕವಾಗಿ ಭಾರತೀಯರನ್ನು ಅಭಿವೃದ್ಧಿಯ ಪಥದಿಂದ ವಂಚಿತರನ್ನಾಗಿ ಮಾಡಿದ್ದ ಡೈನಾಸ್ಟಿಗಳು, ಯಾರು ಹುಟ್ಟುತ್ತಲೇ ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದರೋ ಹಾಗೂ ಏರ್ ಕಂಡಿಷನರ್ ಮನೆ - ಕಚೇರಿಗಳಲ್ಲೇ ಬೆಳೆದರೋ ಅವರಿಗೆ ಭಾರತವನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಒಂದೊಂದಾಗಿ ಬಹುತೇಕ ರಾಜ್ಯಗಳಲ್ಲಿ ತಮ್ಮ ಸರ್ಕಾರವನ್ನು ಕಳೆದುಕೊಳ್ಳುತ್ತಾ ಪತನದಂಚಿಗೆ ಸಾಗುತ್ತಿದ್ದರೂ, ಭಾರತ್ ಜೋಡೋ ಯಾತ್ರೆಯ ಭಾಗವಾಗಿ ದೇಶ ಪರ್ಯಟನೆ ಮಾಡಿದರೂ ಇವರಿಗೆ ಭಾರತ ಅರ್ಥವಾಗುತ್ತಿಲ್ಲ ಅಥವಾ ಇವರ ದುರಹಂಕಾರ ಅರ್ಥ ಮಾಡಿಕೊಳ್ಳಲು ಬಿಡುತ್ತಿಲ್ಲ. ನಮ್ಮ ತಾಯ್ನಾಡನ್ನು ಜಮೀನಿನ ಸ್ತರದಿಂದ ಆಮೂಲಾಗ್ರವಾಗಿ ತಿಳಿದುಕೊಂಡ ಸಂವೇದನಾಶೀಲ ವ್ಯಕ್ತಿ ಮೋದಿಯವರು ಪ್ರಧಾನಿಯಾದದ್ದರಿಂದ ಈ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಮೇಲ್ಪಂಕ್ತಿಗೆ ತಂದು, ಜಾಗೃತಿ ಮೂಡಿಸಿ ಕಾರ್ಯಸಾಧನೆ ಗೈಯುತ್ತಿದ್ದಾರೆ. ಕಾಂಗ್ರೆಸ್ ನವರು ಎಲೆಕ್ಷನ್ ಪ್ರಚಾರವಿದ್ದಾಗ ಮಾತ್ರ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಡವರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಆಡಳಿತ ಪಕ್ಷವಾಗಿದ್ದಾಗ ಇವರದ್ದು ಈ ರೀತಿಯ ಕಥೆ, ಈಗ ವಿಪಕ್ಷವಾದ ನಂತರ ಮೋದಿ ಸರ್ಕಾರದ ಎಲ್ಲಾ ನಡೆಗಳಿಗೂ ವಿರೋಧ ಮಾಡುವ ಒಂದೇ ಆಚರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ವಿಪಕ್ಷವು ಆಡಳಿತ ಸರ್ಕಾರಕ್ಕೆ ಕಾವಲು ನಾಯಿಯಾಗಿ ಇರಬೇಕೇ ಹೊರತು ಬೊಗಳೋ ನಾಯಿಯಾಗಿ ಅಲ್ಲ.
ಕಣ್ಣೆದುರೇ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ಬಾರಿ ತಾಯಿ ಪ್ರಾಣಿ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುವ ದೃಶ್ಯಗಳನ್ನು ನೋಡಿದ್ದೇವೆ. ಜಗತ್ತಿನಲ್ಲೇ ಅತಿ ದೊಡ್ಡ ಸಾಹಸಿ, ಯೋಧೆ ತಾಯಿ! ನಮ್ಮ ಹಿಂದೂ ಧರ್ಮದ ಶಾಸ್ತ್ರಗಳನುಸಾರ ಈ ಜಗತ್ತಿನ ಸೃಷ್ಟಿಕರ್ತ ಬ್ರಹ್ಮ, ಸಂರಕ್ಷಕ ವಿಷ್ಣು ಹಾಗೂ ಸಂಹಾರಕ ಶಿವ, ಈ ಮೂವರೂ ತ್ರಿಮೂರ್ತಿಗಳನ್ನು ತನ್ನ ಮಕ್ಕಳನ್ನಾಗಿ ಮಾಡಿಕೊಂಡು ಆಡಿಸಿದ್ದ ಮಾತಾ ಅನುಸೂಯೆಯ ಕಥೆಯು ಮಾತೃಶಕ್ತಿಯ ಮಹಿಮೆಯನ್ನು ವರ್ಣಿಸುತ್ತದೆ. ಮೌನ ದೇವತೆ ಎಂದೇ ಕರೆಯಲಾಗುವ ಜಗನ್ಮಾತೆ ಗೌರಿಯು ತನ್ನ ಭಕ್ತರಿಗೆ ತೊಂದರೆಯುಂಟಾದಾಗ ಅಧರ್ಮದ ವಿರುದ್ಧ ಸಿಡಿದೆದ್ದು ಕಾಳಿಯಾಗಿ ಭಯಂಕರ ಯುದ್ಧ ಮಾಡುವಳೆಂಬುದು ಮಾತೃಶಕ್ತಿಯ ಸಾಹಸವಂತಿಕೆಯನ್ನು ಅರ್ಥೈಸುತ್ತದೆ. ಹಾಗೆಯೇ ತಾರಕಾಸುರನನ್ನು ಸಂಹರಿಸಿ ಜಗತ್ತಿನ ಕಲ್ಯಾಣ ಮಾಡಲು ತನ್ನ ಪುತ್ರ ಕಾರ್ತಿಕೇಯನನ್ನು ತನ್ನಿಂದ ದೂರ ಮಾಡಿಕೊಂಡು ಅನ್ಯ ಮಾತೆಯರೊಡನೆ ಬೆಳೆಸಬೇಕಾದ, ಒಬ್ಬ ತಾಯಿಗೆ ಅತೀ ಕಷ್ಟದಾಯಕವಾದ ಈ ಕರ್ತವ್ಯವನ್ನು ಪಾಲಿಸಿದ ಮಾತೆ ಪಾರ್ವತಿಯ ಕಥೆಯು ಮಾತೃ ಶಕ್ತಿಯ ತ್ಯಾಗವನ್ನು ಉಲ್ಲೇಖಿಸುತ್ತದೆ. ತನ್ನ ಪ್ರಾಣಕ್ಕಿಂತಲೂ ಪ್ರಿಯನಾಗಿದ್ದ ಶ್ರೀರಾಮನಿಂದ ದೂರವಾಗಿ ಬದುಕಬೇಕಾದ ಕಠೋರಾತಿ ಕಠೋರ ಸನ್ನಿವೇಶ ನಿರ್ಮಾಣವಾದಾಗಲೂ ಸೀತಾಮಾತೆಯು ತನ್ನ ಮಕ್ಕಳಿಗಾಗಿ ಬದುಕಿ ಅವರನ್ನು ವಿಶ್ವದ ಸರ್ವಶ್ರೇಷ್ಠ ಯೋಧರನ್ನಾಗಿ ಬೆಳೆಸಿದ ಉತ್ತರ ರಾಮಾಯಣದ ಕಥೆಯು ಮಾತೃ ಶಕ್ತಿಯ ಅಗಾಧತೆಯನ್ನು ವಿವರಿಸುತ್ತದೆ.
ಆದ್ದರಿಂದ ನಮ್ಮ ಸನಾತನ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ವ್ಯಕ್ತಿಗಳನ್ನು ತಮ್ಮ ತಾಯಿಯ ಹೆಸರಿನಿಂದಲೇ ಗುರುತಿಸಲಾಗುತ್ತದೆ (ಉದಾ: ಕೌಸಲ್ಯನಂದನ ಶ್ರೀರಾಮ, ದೇವಕೀನಂದನ ಶ್ರೀಕೃಷ್ಣ). ಅಂತೆಯೇ ಶ್ರೇಷ್ಠತಮ ಸೂಚಕಗಳಾದ ರಾಷ್ಟ್ರ, ನದಿ, ಭೂಮಿ ಗಳನ್ನು ಮಾತೃಸ್ವರೂಪವಾಗಿ ಕಾಣಲಾಗುತ್ತದೆ.
ಬೆಳಿಗ್ಗೆ ಎದ್ದ ಮೇಲೆ ನಾವೆಲ್ಲಾ ಸ್ಕೂಲು, ಕಾಲೇಜು ಅಥವಾ ಆಫೀಸಿಗೆ ಹೋಗುತ್ತೇವೆ. ಆದರೆ ಪ್ರತೀದಿನ ನಾವು ಹೋಗಲು ಸ್ನಾನ, ಊಟ, ಮನೆ ಶುಚಿತ್ವ ಮುಂತಾದ ಎಲ್ಲಾ ಅವಶ್ಯಕತೆಗಳನ್ನು ವ್ಯವಸ್ಥಿತವಾಗಿ ಪೂರೈಸುವ ತಾಯಿಯ ತ್ಯಾಗಮಯ ಕರ್ತವ್ಯವು ಕೌಟುಂಬಿಕ ಸಮಾಜದ ಪವಿತ್ರ ಸಂಬಂಧಗಳ ಯಂತ್ರದ ನಿರಂತರ ಚಾಲನೆಗೆ ಇಂಧನವಾಗಿ ಸಾಗುತ್ತಿದೆ. ಇಂತಹ ಮಾತೃ ಹೃದಯವನ್ನು ಹೊಂದಿರುವ, ಈ ದೇಶದ ಎಲ್ಲಾ ಮಹಿಳೆಯರನ್ನು ತಮ್ಮ ಮಾತೆ-ಸಹೋದರಿಯರಂತೆ ಕಾಣುತ್ತಾ ಅವರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ಪ್ರವೃತ್ತರಾಗಿರುವ ಭಾರತ ಮಾತೆಯ ಹೆಮ್ಮೆಯ ಸುಪುತ್ರ ಮೋದೀಜಿ ಅವರನ್ನೇ 2024ಕ್ಕೆ ಮತ್ತೆ ಆಯ್ಕೆ ಮಾಡಿ ಪ್ರಧಾನಮಂತ್ರಿಯಾಗಿ ಮುಂದುವರೆಸೋಣ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment