ಸ್ವಾತಂತ್ರ್ಯ ವೀರ ಸಾವರ್ಕರ್ ಸತ್ಯ ಸಂಘರ್ಷ.....
ಸ್ವಾತಂತ್ರ್ಯ ವೀರ ಸಾವರ್ಕರ್ ಸತ್ಯ ಸಂಘರ್ಷ.....
ಈ ಪುಣ್ಯಭೂಮಿಯ ಸ್ವಾತಂತ್ರ್ಯಕ್ಕಾಗಿ ಜೀವನದುದ್ದಕ್ಕೂ ಸಂಘರ್ಷ ಮಾಡಿದ ಸ್ವಾತಂತ್ರ್ಯವೀರ ಸಾವರ್ಕರ್ ಅವರು ಭವಿಷ್ಯದಲ್ಲಿ ತಮ್ಮ ಈ ಸಂಘರ್ಷದ ಬಗ್ಗೆಯೇ ಕಿಡಿಗೇಡಿಗಳಿಂದ ಪ್ರಶ್ನೆಗಳು ಏಳುವುದು, ಆಗ ಅದನ್ನು ಸಾಬೀತುಪಡಿಸಲೂ ಕೂಡ ಸಂಘರ್ಷ ಮಾಡಬೇಕಾಗುವುದೆಂದು ಕನಸಿನಲ್ಲೂ ಬಹುಶಃ ಯೋಚಿಸಿರಲಿಕ್ಕಿಲ್ಲ. ಒಬ್ಬ ವ್ಯಕ್ತಿಗೆ ನೌಕರಿ ನೀಡುವ ಮೊದಲು ಆತನ ಓದಿನ, ಯೋಗ್ಯತೆಯ ಸರ್ಟಿಫಿಕೇಟ್ ಗಳನ್ನು ಕೇಳುವಂತೆ ಈ ನಾಡಿನ ದಾಸ್ಯ ವಿಮೋಚನೆಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೂ ಅವರ ಭಾವಚಿತ್ರಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲು ಅವರ ಯೋಗ್ಯತೆಯ ಸರ್ಟಿಫಿಕೇಟ್ ಗಳನ್ನು ಹುಡುಕುವ ಕಾಲ ಬಂದಿದೆಯೇ? ಅದರಲ್ಲೂ ಗೂಂಡಾಗಳಿಂದ, ಕಿಡಿಗೇಡಿಗಳಿಂದ ಆ ಸರ್ಟಿಫಿಕೇಟ್ ಗಳನ್ನು ಪಡೆದುಕೊಂಡು, ನಂತರ ಅವರು ಸ್ವಾತಂತ್ರ್ಯ ಹೋರಾಟಗಾರರೆಂದು ನಿರ್ಧರಿಸಬೇಕಾದ ಆಪತ್ಕಾಲ ಬಂದೊದಗಿದೆಯೇ? ಈಗ ಮೊನ್ನೆ ಮೊನ್ನೆ ಶಿವಮೊಗ್ಗದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಿ.ಎಫ್.ಐ ಸಂಘಟನೆಯ ಮುಸಲ್ಮಾನ್ ಗೂಂಡಾಗಳು ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಹರಿದು ಹಾಕಿ ಘೋರ ಅಪಮಾನ ಮಾಡಿದ್ದಾರೆ. ಈ ಘಟನೆಯ ನಂತರ ಸರಣಿ ಪ್ರಕ್ರಿಯೆಯಂತೆ ತುಮಕೂರು, ಉಡುಪಿ ಮುಂತಾದ ಕಡೆಗಳಲ್ಲಿ ಇಂತಹದ್ದೇ ಕೃತ್ಯಗಳು ಸಂಭವಿಸಿರುವುದು ನಮ್ಮ ರಾಷ್ಟ್ರದ ಅಮೃತ ಮಹೋತ್ಸವ ಸಂಭ್ರಮಕ್ಕೆ ಕಲ್ಲು ಹಾಕಲು ಅಂದರೆ ವಿಶ್ವದ ಮುಂದೆ ಭಾರತ ಅಶಾಂತವೆಂದು ಪ್ರಸ್ತುತ ಪಡಿಸಲು ಯೋಜನಾಬದ್ಧವಾಗಿ ಮಾಡಿರುವ ಹುನ್ನಾರವೇನೊ ಎಂಬ ಅನುಮಾನಕ್ಕೀಡುಮಾಡುತ್ತದೆ.
ಇವರು ಮಾಡಿರುವ ಹುನ್ನಾರ ಯಾರ ವಿರುದ್ಧ? ಸ್ವಾತಂತ್ರ್ಯ ವೀರ ಸಾವರ್ಕರ್ ಎಂಬ ಶ್ರೇಷ್ಠ ಸೇನಾನಿಯ ವಿರುದ್ಧ! ಭಾರತವನ್ನು ಬಂಧಮುಕ್ತಗೊಳಿಸಲು ಬಾಲ್ಯದಲ್ಲೇ ಸಂಕಲ್ಪಿಸಿದ ಸಾವರ್ಕರ್ ಮುನ್ನುಗ್ಗಿರದ ಯಾವುದಾದರೂ ಸ್ವಾತಂತ್ರ್ಯ ಹೋರಾಟದ ಸಾಹಸಿ ಹಾದಿಗಳು ಅಸ್ತಿತ್ವದಲ್ಲಿವೆಯೇ? ಅಗಾಧ ವಿದೇಶಿ ಬಟ್ಟೆಗಳ ಹೋಳಿ, ಅಗಾಧ ರಾಷ್ಟ್ರಭಕ್ತಿಯಿಂದಾಗಿ ಕಾಲೇಜು-ಹಾಸ್ಟೆಲ್ ಗಳಿಂದ ಅಮಾನತು, ಪ್ರಕಟಣೆಗೊಳ್ಳುವ ಮುನ್ನವೇ ನಿಷೇಧಕ್ಕೊಳಗಾಗುವ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕೃತಿ, ಅತ್ಯುನ್ನತ ಪದವಿಯಾಗಿದ್ದ ಬ್ಯಾರಿಸ್ಟರ್ ನ ಹಕ್ಕುದಾರರಾದರೂ ಅದರಿಂದ ವಂಚನೆ, ನವಕ್ರಾಂತಿಕಾರಿಗಳ ನಿರ್ಮಾಣಕ್ಕೆ ಮುನ್ನುಡಿ, ಬ್ರಿಟಿಷರ ಬಂಧನಕ್ಕೊಳಪಟ್ಟಿದ್ದಾಗ ಹಡಗಿನಿಂದ ತಪ್ಪಿಸಿಕೊಂಡು ರಕ್ತ ಹರಿಸಿದ ಪರಿ, ಪ್ರಪಂಚದ ಇತಿಹಾಸದಲ್ಲೆ ಸಂಭವಿಸಿರದ ಎರಡು ಜೀವಾವಧಿ ಶಿಕ್ಷೆಗೆ ಗುರಿ( 50 ವರ್ಷ ), ನರಕಸದೃಶ ಅಂಡಮಾನ್ ನ ಕಾಲಾಪಾನಿಯ ಜೈಲುವಾಸ ( 13 ವರ್ಷ ), ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಅವಿರತ ಶ್ರಮ, ಸಮಸ್ಯೆಗಳನ್ನು ಸೀಳಿ ಸತ್ಯ ತಿಳಿಸಲು ಸತ್ಯ ವಚನಕಾರರಾದ ಚಾಣಾಕ್ಷತನ, ಕ್ರಾಂತಿ ಜ್ಯೋತಿ ಹಚ್ಚಿ ಮಾತೃಭೂಮಿಯನ್ನುಳಿಸಲು ಹಿಂದೂಗಳ ಸೈನ್ಯಿಕೀಕರಣ, ರಾಷ್ಟ್ರದ ಹಿತಕ್ಕಾಗಿ ತಮ್ಮ ಸ್ವಂತ ಹಿತಾಸಕ್ತಿಗಳನ್ನು ತ್ಯಜಿಸಿದ ಕರ್ಮಯೋಗಿತ್ವ, ತಮ್ಮ ಒಂದೇ ಒಂದು ತಪ್ಪಿಲ್ಲದಿದ್ದರೂ ಗಾಂಧೀಜಿ ಹತ್ಯೆಯ ಆರೋಪಿ ಸ್ಥಾನದ ಅಪಮಾನಕ್ಕೊಳಗಾದ ನಿರಪರಾಧಿತ್ವ, ಬ್ರಿಟಿಷರಂತಹ ನಮ್ಮ ದೇಶದ ಆಕ್ರಮಣಕಾರರ ವಿರುದ್ಧವೂ ಹಿಂಸಾಮಾರ್ಗದ ಹೋರಾಟವನ್ನು ಖಂಡಿಸಿದ ಅಹಿಂಸಾಮಾರ್ಗಿಗಳಿಂದಾದ ತಮ್ಮ ಸಹೋದರನ ಹತ್ಯೆ, ಸ್ವತಂತ್ರ ಭಾರತದಲ್ಲೂ ತಮ್ಮ ಯೋಗ್ಯತೆಯನ್ನು ಗೌರವಿಸದ ಜಾಣ ವಿರೋಧಿಗಳಿಂದಾದ ನಿಂದನೆ, ಸಶಕ್ತ ಹಿಂದೂ ಧರ್ಮದ ಜಾಗೃತಿಗಾಗಿ ರಣಕಹಳೆ ಮೊಳಗಿಸಿದ ಹಿಂದುತ್ವದ ಶಕ್ತಿಯುತ ವ್ಯಾಖ್ಯಾನ, ತುಂಬು ಜೀವನದ ನಂತರ ತಮ್ಮ ದೇಶವಾಸಿಗಳಿಂದಲೇ ಆದ ಆಘಾತದ ತರುವಾಯ 21 ದಿನಗಳ ಆಹಾರ ತ್ಯಾಗದ ಆತ್ಮ ಸಮರ್ಪಣೆ. ಒಬ್ಬ ವ್ಯಕ್ತಿ ತಮ್ಮ ಒಂದು ಜೀವನದಲ್ಲಿ ಇನ್ನೆಷ್ಟು ಸವಾಲುಗಳನ್ನು ಎದುರಿಸಿ ಸಫಲವಾಗಲು ಸಾಧ್ಯ ಹೇಳಿ.
ಕಾಂಗ್ರೆಸ್ ನಾಯಕರಂತೆ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡದೆ ವಾಸ್ತವ ಸತ್ಯವನ್ನು ಅನಾವರಣ ಮಾಡಿ ಹಿಂದುತ್ವ, ರಾಷ್ಟ್ರೀಯತೆಯ ಕಹಳೆಯನ್ನು ಮೊಳಗಿಸಿದರಲ್ಲಾ ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ? ಅಥವಾ ಕಾಂಗ್ರೆಸ್ ನಾಯಕರಂತೆ ಭಾರತದ ಸಣ್ಣ-ಪುಟ್ಟ ಅವಶ್ಯಕತೆಗಳಿಗೆ ಬ್ರಿಟಿಷರಿಗೆ ಅಪ್ಲಿಕೇಶನ್ ಹಾಕದೆ ನೇರವಾಗಿ ಪೂರ್ಣ ಸ್ವರಾಜ್ಯ, ಸ್ವಾತಂತ್ರ್ಯ ಎಂಬ ದೊಡ್ಡ - ದೊಡ್ಡ ಕ್ರಾಂತಿಯ ಅಪ್ಲಿಕೇಶನ್ ಗಳನ್ನು ಹಾಕಿದರಲ್ಲಾ, ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ? ಕಾಂಗ್ರೆಸ್ ನಾಯಕರಂತೆ ಆಗರ್ಭ ಶ್ರೀಮಂತರಿಗೆ ಹೊಂದುವಂತಹ ಐಷಾರಾಮಿ ಜೈಲುವಾಸ ಪಡೆಯಲಾಗದೆ ಭೂಮಿಯ ಮೇಲಿನ ನರಕಸದೃಶ, ಮಾನವರು ವಾಸಿಸಲು ಯೋಗ್ಯವಲ್ಲದ ಅಂಡಮಾನ್ ನ ಕಾಲಾಪಾನಿ ಕರಿನೀರಿನ ಶಿಕ್ಷೆಗೆ ಗುರಿಯಾದರಲ್ಲಾ, ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ? ಕಾಂಗ್ರೆಸ್ ನಾಯಕರಂತೆ ಸ್ವತಂತ್ರ ಭಾರತದಲ್ಲಿ ಅಧಿಕಾರ ಗಿಟ್ಟಿಸಿಕೊಂಡು ಮಂತ್ರಿಗಳಾಗಿ ಮೆರೆಯದೆ ಸಮಾಜ ಸೇವಕರಾಗಿಯೇ ಉಳಿದು ತಮ್ಮ ಕಾರ್ಯಗಳನ್ನು ಮುಂದುವರಿಸಿದರಲ್ಲಾ, ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ? ಕಾಂಗ್ರೆಸ್ ನಾಯಕರಂತೆ ತಮ್ಮ ಮಕ್ಕಳು -ಮೊಮ್ಮಕ್ಕಳಿಗೆಲ್ಲಾ ಆಸ್ತಿ ಸಂಪಾದಿಸಿಕೊಂಡು ನೆಮ್ಮದಿಯಿಂದಿರದೆ ದೇಶದ ಸವಾಲುಗಳನ್ನೆಲ್ಲಾ ಮೈ ಮೇಲೆ ಎಳೆದು ಕೊಂಡು ತಮ್ಮ ಕುಟುಂಬವನ್ನೇ ದೇಶಕ್ಕಾಗಿ ತ್ಯಾಗ ಮಾಡಿದರಲ್ಲಾ, ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ? ಕಾಂಗ್ರೆಸ್ ನಾಯಕರಂತೆ ದೇಶಕ್ಕೆ ಕ್ಷಾತ್ರತೇಜದ ಅತೀವ ಅವಶ್ಯಕತೆಯಿದ್ದಾಗ ವಿವೇಚನಾರಹಿತವಾಗಿ ಅಹಿಂಸಾವಾದವನ್ನು ಪಾಲಿಸದೆ ಹಿಂದೂಗಳ ಸೈನ್ಯಕೀಕರಣ ಎಂಬ ರಕ್ಷಣಾ ಮಂತ್ರವನ್ನ ಉದ್ಗರಿಸಿದರಲ್ಲಾ, ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ? ಕಾಂಗ್ರೆಸ್ ನಾಯಕರಂತೆ ಬ್ಯಾರಿಸ್ಟರ್ ಪದವಿ, ಪ್ರಶಸ್ತಿಗಳನ್ನು ಪಡೆದುಕೊಂಡು ಬ್ರಿಟಿಷರ ಗೌರವಕ್ಕೆ ಪಾತ್ರರಾಗದೆ ಕ್ರಾಂತಿಯ ಹೋರಾಟದಿಂದ ಗಳಿಸಿದ್ದ ಪದವಿ, ಪ್ರಶಸ್ತಿಗಳಿಂದ ವಂಚಿತರಾದರಲ್ಲಾ, ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ? ಕಾಂಗ್ರೆಸ್ ನಾಯಕರಂತೆ ಸ್ವತಂತ್ರ ಭಾರತದಲ್ಲಿ ಸಾಧಕರಂತೆ ಬದುಕಲಾಗದೆ ಶತ್ರು ಪಡೆಯಿಂದ ಜೀವನದ ಅಂತ್ಯಕಾಲದಲ್ಲೂ ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಲು ಸಂಘರ್ಷ ಮಾಡಿ ಕೊನೆಗೆ 21 ದಿನಗಳು ಆಹಾರ ಸೇವಿಸದೆ ಆತ್ಮಾಹುತಿಯನ್ನು ಮಾಡಿಕೊಂಡರಲ್ಲಾ, ಅದಕ್ಕಾಗಿ ಅವರ ಭಾವಚಿತ್ರ ಹರಿದಿರಾ?
"ನಾವು ಸ್ವಾತಂತ್ರ್ಯವನ್ನು ಪಡೆಯಲು ಧೃಡವಾಗಿ ನಿರ್ಧರಿಸಿದ್ದೇವೆ, ನಾವು ಕುರುಡಾಗಿ ಈ ಪ್ರಮಾಣವನ್ನು ಆರಂಭಿಸಿಲ್ಲ. ನಮ್ಮ ಇತಿಹಾಸ, ಪ್ರಕೃತಿ ಮತ್ತು ಸಂಸ್ಕೃತಿಯ ಬಗೆಗಿನ ಪ್ರಕಾಶಮಾನವಾದ ಬೆಳಕಿನಲ್ಲಿ ಪಡೆದುಕೊಂಡ ಜ್ಞಾನದಿಂದ ನಮ್ಮನ್ನು ನಾವು ಈ ಸ್ವಾತಂತ್ರ್ಯದ ಹವಿಸ್ಸಿನಲ್ಲಿ ಸಮರ್ಪಿಸಿಕೊಳ್ಳಲು ನಿರ್ಧರಿಸಿದ್ದೇವೆ." ಈ ಮೇಲಿನ ಒಂದೇ ಒಂದು ಹೇಳಿಕೆ ಸಾಕು, ಸಾವರ್ಕರ್ ಅವರನ್ನು ಅರ್ಥೈಸಿಕೊಳ್ಳಲು. ಅವರು ತಮ್ಮ ಜೀವನಪರ್ಯಂತ ಹಾಗೆಯೇ ನಡೆದುಕೊಂಡರು. ಭಾರತಮಾತೆಯನ್ನು ಮುಕ್ತಿಗೊಳಿಸಲು ಅಗ್ನಿಪಥದಲ್ಲಿ ಸಾಗುತ್ತಿದ್ದಾಗ ಎಷ್ಟೇ ಅವಮಾನ, ಸನ್ಮಾನಗಳು ಬಂದರೂ ಅವರು ವಿಚಲಿತರಾಗಲಿಲ್ಲ. ಕೆಲವು ಕಿಡಿಗೇಡಿಗಳು ಇಂತಹ ಮಹಾನ್ ನಾಯಕನ ಭಾವಚಿತ್ರವನ್ನು ಹರಿದಿರುವುದು, ನಂತರ ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದು ನಮ್ಮ ಸರ್ಕಾರ, ಕಾನೂನು ವ್ಯವಸ್ಥೆಯ ದೌರ್ಬಲ್ಯತೆಯನ್ನು ಪ್ರದರ್ಶಿಸುತ್ತಿದೆ. ಹಿಜಾಬ್ ವಿವಾದದಿಂದ ಹಿಡಿದು ಇತ್ತೀಚಿನ ಭಾಜಪಾ ಯುವಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಅವರ ಹತ್ಯೆ, ಸಾವರ್ಕರ್ ಫ್ಲೆಕ್ಸ್ ಹರಿದಿರುವುದು ಮುಂತಾದ ಪ್ರಕರಣಗಳಲ್ಲೆಲ್ಲಾ ಈಗಿನ ರಾಜ್ಯಸರ್ಕಾರವು ಯಾವುದೇ ದಿಟ್ಟ ಕ್ರಮವನ್ನು ತೆಗೆದುಕೊಳ್ಳದಿರುವುದು ಆತಂಕಕ್ಕೀಡು ಮಾಡಿದೆ. ಗೆಟ್ ವೆಲ್ ಸೂನ್ ಡಿಯರ್ ಸ್ಟೇಟ್ ಗವರ್ನಮೆಂಟ್. ಕನ್ನಡ ನಾಡಿನ ಜನತೆ ನಿಮಗೆ ಅಧಿಕಾರ ಕೊಟ್ಟಿರುವುದು ಎಲ್ಲಾ ಪಕ್ಷಗಳು ಮಾಡಬಹುದಾದ ರಸ್ತೆ ಕಾಮಗಾರಿ, ಶಾಲೆ, ಆಸ್ಪತ್ರೆ ಮುಂತಾದ ನಿರ್ಮಾಣ ಕಾರ್ಯಗಳನ್ನಷ್ಟೇ ಮಾಡಲಿ ಎಂದಲ್ಲ, ಹಿಂದುತ್ವ, ರಾಷ್ಟ್ರೀಯತೆಯ ಉತ್ಕೃಷ್ಟ ಧ್ಯೇಯಗಳಿಂದ ಭವ್ಯ ಭಾರತವನ್ನು ಬೆಳಗಿಸಲಿ ಎಂಬ ಮಹದಿಚ್ಛೆಯಿಂದ. ಹೇಗೆ ಶಾಲೆಗೆ ಬರುವ ಒಂದು ಮಗುವು ಪುಸ್ತಕಗಳನ್ನು ಓದುವುದಾದರೂ ಅದರ ಗುರಿ ಉನ್ನತವಾದದ್ದನ್ನೇನೊ ಸಾಧಿಸುವುದಾಗಿರುತ್ತದೊ ಹಾಗೆಯೇ ಈ ಸರ್ಕಾರ ಕಾಮಗಾರಿ, ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಜೊತೆಗೆ ಸಮಾಜದಲ್ಲಿ ಉನ್ನತ ತತ್ತ್ವ-ಆದರ್ಶಗಳು ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳುವುದನ್ನೇ ಅದರ ಪ್ರಮುಖ ಗುರಿಯನ್ನಾಗಿ ಮಾಡಿಕೊಳ್ಳಬೇಕು.
ಈಗ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಹರಿದಿರುವುದಕ್ಕಿಂತಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಸಿದ್ದರಾಮಯ್ಯ ಅವರ "ಮುಸ್ಲಿಂ ಏರಿಯಾ" ಬಗೆಗಿನ ಹೇಳಿಕೆಯನ್ನು ವಿಶ್ಲೇಷಿಸೋಣ ಬನ್ನಿ. ನೋಡಿ ಸ್ವಯಂ ಘೋಷಿತ ಸಂವಿಧಾನ ಪಂಡಿತರು ಎಂದು ಪ್ರಖ್ಯಾತರಾಗಿರುವ ಸಿದ್ದರಾಮಯ್ಯನವರ ಪ್ರಕಾರ ನಮ್ಮ ದೇಶದಲ್ಲಿ ಎರಡು ಬಗೆಯ ಸಂವಿಧಾನ ಅಥವಾ ಕಾನೂನುಗಳಿವೆ. ಮುಸ್ಲಿಂ ಏರಿಯಾಗಳಿಗೆ ಒಂದು ಹಾಗೂ ಮುಸ್ಲಿಮೇತರ ಏರಿಯಾಗಳಿಗೆ ಒಂದು. ಅವರ ಪ್ರಕಾರ ಭಾರತದಲ್ಲೇ ಇರುವ ಮುಸ್ಲಿಂ ಏರಿಯಾಗಳಲ್ಲಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಹಾಕುವಂತಿಲ್ಲ! ಅದೆಲ್ಲಾ ಬಿಡಿ, ನಮ್ಮ ಭಾರತದಲ್ಲಿರುವ ಏರಿಯಾಗಳೆಲ್ಲಾ ಭಾರತದ ಏರಿಯಾಗಳು ಅಲ್ಲವೆ, ಅದರಲ್ಲಿ ಅವರು ಪ್ರತ್ಯೇಕವಾಗಿ ಮುಸ್ಲಿಂ ಏರಿಯಾಗಳು ಎಂದೇಕೆ ಉಲ್ಲೇಖಿಸಿದರು? ಅದಾಗಲೇ ಹಿಂದುತ್ವವನ್ನು ವಿರೋಧಿಸಿ ವಿರೋಧಿಸಿ ಅಳಿವಿನಂಚಿಗೆ ಬರುತ್ತಿರುವ ಪ್ರಾಚೀನ ಪಕ್ಷ ಕಾಂಗ್ರೆಸ್ ಇಂತಹ ನಾಯಕರ ಹೇಳಿಕೆಗಳಿಂದ ಮತ್ತಷ್ಟು ಪಾತಾಳಕ್ಕಿಳಿಯುವುದು ಶತಸಿದ್ಧ. ಉದ್ದೇಶಪೂರ್ವಕವಾಗಿಯೋ ಅಥವಾ ಉದಾಸೀನತೆಯಿಂದಲೋ ಒಟ್ಟಿನಲ್ಲಿ ಸಿದ್ದರಾಮಯ್ಯನವರ ಹೇಳಿಕೆಯಿಂದ ಅವರ ಮಾನಸಿಕತೆ, ವಿಚಾರಧಾರೆ ಯಾವ ಹಂತ ತಲುಪಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಯಿತು. ಸತ್ಯ ಎಂದಾದೂ, ಎಷ್ಟೇ ತಡವಾದರೂ ಹೊರಗೆ ಬಂದೇ ಬರುತ್ತದೆ. ಅವರು ಹೇಳಿರುವಂತೆ ಮುಸಲ್ಮಾನರು ಹೆಚ್ಚಿರುವ ಮುಸ್ಲಿಂ ಏರಿಯಾಗಳಲ್ಲಿ ಅವರಿಗೆ ಅಪ್ರಿಯವಾದ ಯಾವುದೇ ಚಟುವಟಿಕೆಗಳು ಉದಾಹರಣೆಗೆ ಹಿಂದೂಗಳ ಧಾರ್ಮಿಕ ಉತ್ಸವಗಳು, ಅವರ ವಿಚಾರಕ್ಕೆ ಹೊಂದಿಕೊಳ್ಳದ ರಾಷ್ಟ್ರೀಯ ನಾಯಕರ ಜನ್ಮದಿನಾಚರಣೆಗಳು ನಡೆಯಬಾರದೆಂಬ ಅಘೋಷಿತ ಮೌಖಿಕ ಕಾನೂನೇ ಜಾರಿಯಾಗಿ ಹೋಗಿದೆ. ರಾಷ್ಟ್ರೀಯತೆಯ ಅಲೆಯಲ್ಲಿ ಮುಸಲ್ಮಾನರಾದಿಯಾಗಿ ಎಲ್ಲಾ ಅಲ್ಪಸಂಖ್ಯಾತರನ್ನು ಜೊತೆ ಮಾಡಿಕೊಂಡು ರಾಷ್ಟ್ರಾಭಿವೃದ್ಧಿಯಲ್ಲಿ ತೊಡಗಿಸದೆ ಅವರನ್ನು ಹಾಗೂ ಅವರ ಮತಾಂಧತೆಯನ್ನು ಬೆಂಬಲಿಸುತ್ತಾ ಅವರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿರುವ ನಾಯಕರ ಮಾನಸಿಕತೆಯು ಅತ್ಯಂತ ಅಪಾಯಕಾರಿ. ಬನ್ನಿ ನಾವೆಲ್ಲರೂ ಭಾರತ ವಿರೋಧಿ ಶಕ್ತಿಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಿ ರಾಷ್ಟ್ರದ ಅಖಂಡತೆಯನ್ನು ಎತ್ತಿಹಿಡಿಯೋಣ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment