ಕೆ.ಆರ್.ಎಸ್ ನಿಂದ ನೀರು ಮಾತ್ರ ಅಲ್ಲ, ಕನ್ನಡಿಗರ ಕಣ್ಣೀರು ಕೂಡ ಹರಿಯುತ್ತಿದೆ.....

ಕೆ.ಆರ್.ಎಸ್ ನಿಂದ ನೀರು ಮಾತ್ರ ಅಲ್ಲ, ಕನ್ನಡಿಗರ ಕಣ್ಣೀರು ಕೂಡ ಹರಿಯುತ್ತಿದೆ.....
ಯಾವಾಗ ಈ ಬಾರಿ ಕಳೆದ ನಾಲ್ಕೈದು ದಶಕಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿ ಬರಗಾಲ ಎದುರಾಗುವ ಮುನ್ಸೂಚನೆ ದೊರೆಯಿತೊ, ಆಗಲೇ ನಮ್ಮ ರಾಜ್ಯದ ರೈತರು ಹಠಾತ್ ಚಿಂತೆಗೊಳಗಾದರು. ಈ ಸಂದರ್ಭದಲ್ಲಿ ರೈತರ ಚಿತ್ತ ಸಾಗುವುದು ಕನ್ನಂಬಾಡಿ ಅಣೆಕಟ್ಟೆಯತ್ತ. ಪ್ರತೀ ದಿನ‌ ವಾಟ್ಸಪ್ ಸ್ಟೇಟಸ್ ಅನ್ನು ನೋಡುವಂತೆ ಅವರು ಕೆ.ಆರ್.ಎಸ್ ಜಲಾಶಯದ ಸ್ಟೇಟಸ್ ಅನ್ನು ಮರೆಯದೆ ನೋಡುತ್ತಾರೆ. ಈ ವರ್ಷ ಈಗಿನ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣರಾಜ ಒಡೆಯರ್ ಅವರ ಬಳಿ ಒಬ್ಬ ಮಂಡ್ಯದ ರೈತನು 'ಇನ್ನು ಮುಂದೆ ನೀವೇ ಕೆ.ಆರ್.ಎಸ್ ಗೆ ಬಾಗಿನವನ್ನು ಅರ್ಪಿಸಬೇಕು, ಯಾರೋ ರಾಜಕಾರಣಿಯ ಕೈಯಿಂದ ಅದನ್ನು ಅರ್ಪಿಸಿದರೆ ಅದಕ್ಕೆ ಅರ್ಥವಿಲ್ಲ. ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತವರ ಪರಿವಾರದ ಮಹಾನ್ ತ್ಯಾಗದ ಫಲದಿಂದ ಕೆ ಆರ್ ಎಸ್ ನ ನಿರ್ಮಾಣವಾಯಿತು' ಎಂದು ವಿವರಿಸಿದರು. ಅಂದು ಕೆ.ಆರ್.ಎಸ್ ನಿರ್ಮಿಸಲು ಮೈಸೂರು ರಾಜ್ಯದ 3 ವರ್ಷಗಳ ಬಜೆಟ್ ನಷ್ಟು ಹಣದ ಅವಶ್ಯಕತೆಯಿತ್ತಾದರೂ, ರಾಜ ಮನೆತನದ ರಾಣಿಯರು 4 ಮೂಟೆಗಳಷ್ಟು ಆಭರಣಗಳನ್ನು ರಾಜ್ಯದ ಜಲಕಲ್ಯಾಣ ಯಜ್ಞಕ್ಕೆ ಅರ್ಪಿಸಿದ್ದರಿಂದ ಬರಗಾಲ ಪೀಡಿತವಾಗಿದ್ದ ಮಂಡ್ಯ ಮೈಸೂರಿನ ಭಾಗದ ರೈತರು ಸಮೃದ್ಧ ಬೆಳೆಗಳನ್ನು ಬೆಳೆಯುತ್ತಾ ಸಕ್ಕರೆ ನಾಡನ್ನು ನಿರ್ಮಿಸಿದ್ದಾರೆ.

ಹತ್ತು ಸಾವಿರ ಶ್ರಮಿಕರು ಬರೋಬ್ಬರಿ 21 ವರ್ಷಗಳ ಕಾಲ ಬೆವರು ಸುರಿಸಿ ಈ ಜಲಾಶಯವನ್ನು ನಿರ್ಮಿಸಿದ್ದರಿಂದ ಕಾವೇರಿಯ ನೀರನ್ನು ಕೃಷಿ ಭೂಮಿಗೆ ಹರಿಸಲು ಸಾಧ್ಯವಾಗಿದೆ. ಬ್ರಿಟಿಷರ ಪ್ರೆಸಿಡೆನ್ಸಿ ಸ್ಟೇಟ್ (ನೇರ ಆಳ್ವಿಕೆಗೆ ಒಳಪಟ್ಟಿದ್ದ ಪ್ರಾಂತ್ಯ) ಮದ್ರಾಸಿನ ಮೇಲೆ ಅವರಿಗೆ ಹೆಚ್ಚು ಒಲವು ಇದ್ದುದರಿಂದ ಸಹಜವಾಗಿಯೇ ಮೈಸೂರು ಪ್ರಾಂತ್ಯದ ಬಗೆಗೆ ಮಲತಾಯಿ ಧೋರಣೆಯನ್ನು ತೋರಿದರು. ಅದರ ಫಲವಾಗಿ ಆರಂಭವಾದ ಸಂಘರ್ಷಕ್ಕೆ ಇಂದಿಗೂ ಇತಿಶ್ರೀ ಹಾಡಲಾಗಿಲ್ಲ. ಇತ್ತ ಕರ್ನಾಟಕದ ವಾದ ಏನೆಂದರೆ- 'ಬ್ರಿಟಿಷರು ಅಂದು ಪಕ್ಷಪಾತದಿಂದ ನಿರ್ಧಾರ ಮಾಡಿದ ಮುಂದುವರಿದ ಭಾಗದಂತಿರುವ ಇಂದಿನ ನೀರು ಹಂಚಿಕೆ ಸೂತ್ರದಲ್ಲಿ ಸ್ಪಷ್ಟತೆ, ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಗಳಿಲ್ಲ. ಆದ್ದರಿಂದ ಇದನ್ನು ಮರು ಪರಿಶೀಲಿಸಿ ನಿರ್ಣಯ ಮಾಡಬೇಕು. ಹಾಗೆ ಮಳೆಯ ಅಭಾವ ಉಂಟಾದಾಗಲೇ ಈ ಸಮಸ್ಯೆಯು ಉದ್ಭವವಾಗುವುದರಿಂದ, ಆ ಕ್ಲಿಷ್ಟಕರ ಸನ್ನಿವೇಶದಲ್ಲಿ ಹೇಗೆ ನೀರು ಹಂಚಿಕೆಯಾಗಬೇಕು ಎಂಬುದಕ್ಕೆ ನಿರ್ದಿಷ್ಟ ಸಂಕಷ್ಟ ಸೂತ್ರ ಬೇಕು' ಎಂಬುದು. ಅತ್ತ ತಮಿಳುನಾಡಿನ ವಾದವೇನೆಂದರೆ- 'ನಮಗೆ ದೊರೆಯುತ್ತಿದ್ದ ನೀರಿನ ಪ್ರಮಾಣಕ್ಕನುಗುಣವಾಗಿ ನೀರಾವರಿ ಭೂಮಿಯು ವಿಸ್ತಾರವಾಗಿರುವುದರಿಂದ, ನೀರು ಕಡಿಮೆಯಾದರೆ ಈಗ ಮತ್ತೆ ಅವುಗಳನ್ನು ಪರಿವರ್ತಿಸಲಾಗುವುದಿಲ್ಲ. ನಮಗೆ ಸಿಗಬೇಕಾದ ನೀರಿನ ಪಾಲು ಬೇಕೇ ಬೇಕು ಎಂಬುದು'. ಇತ್ತೀಚೆಗೆ ತೆರೆಕಂಡ ಸಪ್ತ ಸಾಗರದಾಚೆಯೆಲ್ಲೋ ಸಿನಿಮಾ ಹಾಡಿನಲ್ಲಿ ನಾಯಕನು ಮನ ಮೆಚ್ಚಿದ ಹುಡುಗಿಯು ತನ್ನನ್ನು ಸೇರಲು ಬರುವಳೆಂಬ ಭರವಸೆಯನ್ನು ನದಿಯ ಕಾರ್ಯಕ್ಷೇತ್ರಕ್ಕೆ ಹೋಲಿಸಿ ಹಾಡುವ 'ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ....ಸಪ್ತಸಾಗರದಾಚೆಯೆಲ್ಲೋ ನಿನ್ನ ಸೇರುವ ಆಸೆಯಲ್ಲೇ ನಾ' ಎಂಬ ಸಾಲುಗಳು ಒಂದು ನದಿಯು ಪ್ರಕೃತಿಯ ನಿಯಮದಂತೆ ಎಷ್ಟೆಲ್ಲಾ ಅಡೆತಡೆಗಳನ್ನು ಮೀರಿ ತನ್ನ ಗುರಿಯನ್ನು ತಲುಪಬೇಕಾಗುತ್ತದೆ ಎಂಬುದು ನಮ್ಮ ಕಾವೇರಿ ನದಿಯ ಇಂದಿನ ಪರಿಸ್ಥಿತಿಯನ್ನು ನೋಡಿ ಚೆನ್ನಾಗಿ ಅರ್ಥವಾಗುತ್ತಿದೆ.

ಸಾವನ್ನಪ್ಪುವ ಕೊನೆ ಗಳಿಗೆಯಲ್ಲಿ ಕೂಡ ಬೇಕಾಗುವ ನೀರು ನಮ್ಮ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಪ್ರಮುಖವಾದುದು. ಈ ವರ್ಷವಂತೂ ಮಳೆಯ ಪ್ರಮಾಣ ಬಹಳ ಕಡಿಮೆಯಾಗಿರುವುದರಿಂದ ಕೃಷಿ ಕ್ಷೇತ್ರಕ್ಕೆ ನೀರು ಬಿಡಲಾಗದೆ, ಕುಡಿಯುವ ನೀರಿನ ಉಪಯೋಗಕ್ಕಷ್ಟೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಚಿಂತಾಜನಕ ಸ್ಥಿತಿಯಲ್ಲಿರುವಾಗಲೂ ತಮಿಳುನಾಡು ಸರ್ಕಾರವು ಅವರ ರೈತರ ಹೆಚ್ಚುವರಿ ಬೆಳೆಗೆ ನೀರು ಕೇಳುತ್ತಿರುವುದು ಕನ್ನಡಿಗರ ಕಣ್ಣಲ್ಲಿ ನೀರು ಹರಿಸುತ್ತಿದೆ!! ಇದನ್ನು ತಮಿಳುನಾಡು ಸರ್ಕಾರ ಸಮೇತ ಅಲ್ಲಿನ ಜನರೆಲ್ಲಾ ಅರ್ಥೈಸಿಕೊಳ್ಳಬೇಕಿದೆ. ನಮ್ಮ ರಾಜ್ಯ ಸರ್ಕಾರವು ರೈತರಿಗೆ ಈ ಬಾರಿ ಭತ್ತ ಹಾಕಬೇಡಿ, ಕಾಳುಗಳನ್ನು ಬೆಳೆದುಕೊಳ್ಳಿ ಎಂದು ಸಲಹೆ ನೀಡಿರುವಾಗ ತಮಿಳುನಾಡು ಸರ್ಕಾರ ಮಾತ್ರ ಅದಾಗಲೆ ಒಂದು ಬೆಳೆಗೆ ಭವಿಷ್ಯದ ವಿಚಾರ ಮಾಡದೆ ಸಂಗ್ರಹದ ನೀರನ್ನು ಹಾಯಿಸಿ ಹೆಚ್ಚುವರಿ ಬೆಳೆಗೆ ನೀರು ಕೇಳುತ್ತಿರುವುದು ಎಂತಹ ವಿಪರ್ಯಾಸ. ಮೈ ಲಾರ್ಡ್, ಮೈ ಪಿಎಂ, ಮೈ ಸಿಎಂ, ಮೈ ಆಫೀಸರ್ ನಿಮ್ಮೆಲ್ಲರಲ್ಲೂ ನಮ್ಮದು ಒಂದೇ ಪ್ರಾರ್ಥನೆ- ದಯವಿಟ್ಟು ನ್ಯಾಯದ, ಕಾನೂನಿನ ದಂಡವನ್ನು ಹಿಡಿದು ನಮ್ಮ ಜೀವಜಲ ಕಾವೇರಿಗಾಗಿ ಹೋರಾಡುತ್ತಿರುವ ರೈತರಿಗೆ ಪೆಟ್ಟು ಕೊಡಬೇಡಿ. ನೀವು ನಮ್ಮ ಬೆನ್ನೆಲುಬಾದ ರೈತನ ಬೆನ್ನಿಗೆ ಹೊಡೆದರೆ ಅವನು ಬಾಗುತ್ತಾನೆ, ಅವನ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ, ನಮ್ಮೆಲ್ಲರ ಪೋಷಣೆ ಮಾಡುತ್ತಾ ತಾಯಿಯ ಸ್ಥಾನದಲ್ಲಿರುವ ಭೂಮಿ ತಾಯ ಮಗನಾದ ಅವನ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ. 

ಇದರ ಬಗೆಗೆ ಇನ್ನೂ ವಿಷಾದದಿಂದ ಹೇಳಬೇಕಾದ ಸಂಗತಿಯೇನೆಂದರೆ ನಮ್ಮ ನ್ಯಾಯಾಲಯ ವ್ಯವಸ್ಥೆಯಲ್ಲಿ ಒಂದು ವೇಳೆ ಈ ಕಷ್ಟವನ್ನೆಲ್ಲಾ ಕಣ್ಣಾರೆ ಕಂಡು ಬೆಳೆದ ರೈತನ ಮಗನು ನ್ಯಾಯಾಧೀಶನಾದರೂ, ಅವನು ಕಾವೇರಿ ನಿರ್ವಹಣಾ ಪ್ರಾಧಿಕಾರಗಳ ಸೂತ್ರಕ್ಕನುಗುಣವಾಗಿ ತೀರ್ಪನ್ನು ಕೊಡಬೇಕಾಗುತ್ತದೆ. ರೈತ ಕುಟುಂಬದಲ್ಲಿ ಜನಿಸಿರುವ ನಮಗೆ ಎಕ್ಸ್ ಪರ್ಟ್ ಗಳಂತೆ ಹೆಚ್ಚು ತಾಂತ್ರಿಕ ಜ್ಞಾನವಿಲ್ಲದಿರಬಹುದು, ಕಾನೂನಿನ ಕಟ್ಟಲೆಗಳು ಅರ್ಥವಾಗದಿರಬಹುದು, ಸರ್ಕಾರದ ಜವಾಬ್ದಾರಿ ತಿಳಿಯದಿರಬಹುದು ಆದರೆ ನಮಗೆ ಮಾನವನನ್ನು ಮಾನವನನ್ನಾಗಿಯೇ ಕಾಣುವ ಒಳ್ಳೆಯ ಮನಸ್ಸಿದೆ, ನಿಷ್ಕಲ್ಮಶ ಹೃದಯವಿದೆ, ಸರಿತಪ್ಪುಗಳನ್ನು ನೇರವಾಗಿ ಹೇಳುವ, ಧೈರ್ಯದಿಂದ ಅದಕ್ಕಾಗಿ ಹೋರಾಡುವ ಸಾಮರ್ಥ್ಯವಿದೆ. ನಗರದ ಮಂದಿಯಂತೆ ದೊಡ್ಡ ದೊಡ್ಡ ಆಫೀಸುಗಳಲ್ಲಿ ಕೆಲಸ ಮಾಡುತ್ತಿಲ್ಲವೆಂದ ಮಾತ್ರಕ್ಕೆ ನಾವೇನೂ ದಡ್ಡರಲ್ಲ. ಸ್ವತಂತ್ರವಾಗಿ ನಮ್ಮ ಶ್ರೇಷ್ಠ ಆಸ್ತಿಯಾದ ಜಮೀನಿನಲ್ಲಿ ಉಳುಮೆ ಮಾಡಿ, ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಆದ್ದರಿಂದ ಪ್ರತಿಸಲದ ಹಾಗೆ ಈ ಬಾರಿಯೂ ನಾವೇ ಮೊದಲು ಕಾವೇರಿ ನೀರಿನ ವಿಚಾರದಲ್ಲಿ ನಮಗೆ ಅನ್ಯಾಯವಾಗುತ್ತಿದೆ ಎಂದು ಬೀದಿಗಿಳಿದು ಹೋರಾಟ ಆರಂಭಿಸಿ ರಾಜಧಾನಿಯನ್ನು ಎಚ್ಚರಿಸಿದ್ದು. ಮಂಡ್ಯ ಭಾಗದಲ್ಲಿ ಕಳೆದ 2-3 ತಿಂಗಳುಗಳಿಂದ ಬಹುತೇಕ ಪ್ರತೀದಿನ ವಿಭಿನ್ನವಾಗಿ ಉದಾಹರಣೆಗೆ ಬಾಯಿಗೆ ಮಣ್ಣು ಹಾಕಿ ಕೊಳ್ಳುವ, ಮೆಣಸಿನಕಾಯಿ ತಿನ್ನುವ, ಬೇವು-ಬೆಲ್ಲ ತಿನ್ನುವ, ಮೈ ಮೇಲೆ ಸಗಣಿ ಹಾಕಿಕೊಳ್ಳುವ, ನೇಣಿನ ಕುಣಿಕೆ ಮುಂದಿರಿಸಿಕೊಂಡು ಪ್ರದರ್ಶನ ಮಾಡುವ ಹೋರಾಟಗಳ ಮೂಲಕ ಸರ್ಕಾರಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದೇವೆ. ಇದೇ ತೆರನಾದ ಸಂಕಷ್ಟದ ಸಮಯದಲ್ಲಿ ಹೋರಾಡಿದ್ದ ಬಂಗಾರಪ್ಪ - ದೇವೇಗೌಡರಂತಹ ಜನನಾಯಕರ ಆದಿಯಾಗಿ ಎಲ್ಲಾ ಕನ್ನಡ ಹೋರಾಟಗಾರರಿಂದ, ಹೋರಾಟಕ್ಕೆ ಶಕ್ತಿ ತುಂಬುವ ಸ್ಯಾಂಡಲ್ ವುಡ್ ಕಲಾವಿದರಿಂದ ಸ್ಫೂರ್ತಿಯನ್ನು ಪಡೆದು ಹೋರಾಡುತ್ತಿದ್ದೇವೆ. ಆದರೆ ಮೊದಲಿನಂತೆ ನಮ್ಮ ಇತ್ತೀಚಿನ ಜನನಾಯಕರು ಭರಪೂರ ಜನಬೆಂಬಲವಿದ್ದಾಗ್ಯು ಗಟ್ಟಿಯಾಗಿ ಮುಂದೆ ನಿಂತು ಹೋರಾಡದೆ, ಕಾವೇರಿ ನಿರ್ವಹಣಾ ಪ್ರಾಧಿಕಾರಗಳ ನಿರ್ಣಯವನ್ನು ಸಹಜವಾಗಿ ಸ್ವಾಗತಿಸುತ್ತಾ ತಮಿಳುನಾಡಿಗೆ ನೀರು ಹರಿಸುತ್ತಿರುವುದು ನಮಗೆ ಆಘಾತ ತಂದಿದೆ. ಯುದ್ಧ, ಪರಾಕ್ರಮಗಳ ಕಡೆ ತಿರುಗಿ ನೋಡಲು ಕೂಡ ಸಮಯ ಮಾಡಿಕೊಳ್ಳದೆ ಜೀವನದುದ್ದಕ್ಕೂ ಜನಾನುರಾಗಿಯಾಗಿ ಕಾರ್ಯಗಳನ್ನು ಮಾಡಿದ ಮೈಸೂರು ಮಹಾರಾಜರು ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ಕಾರ್ಯಗಳಲ್ಲಿ ತಾಂತ್ರಿಕ ಶಕ್ತಿಯನ್ನು ತುಂಬಿದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಇಂದಿಗೂ ನಮ್ಮ ಹೃದಯಗಳಲ್ಲಿ ಪೂಜಿಸುತ್ತಿದ್ದೇವೆ. 

ಕಾವೇರಿ ನೀರು ಜೀವನದ ಮೂಲಭೂತ ಅವಶ್ಯಕತೆಯೆಂದು ಹೋರಾಡಬೇಕಾದ ವಿಚಾರವು ಭಾವನಾತ್ಮಕ ರೂಪ ತಳೆದು ಎಂದೋ ಕರ್ನಾಟಕ -‍‍ ತಮಿಳುನಾಡು ನಡುವಿನ ವೈಷಮ್ಯದ ವಿಚಾರವಾಗಿ ಪರಿವರ್ತನೆಯಾಯಿತು ಎಂಬುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಈ ಸಮಸ್ಯೆಯನ್ನು ಹಾಗೆಯೇ ಜೀವಂತವಾಗಿರಿಸಿ ತಮ್ಮ ಸ್ವಹಿತಾಸಕ್ತಿಗಳಿಗಾಗಿ ರಾಜ್ಯಗಳ ಹಿತಾಸಕ್ತಿಯನ್ನು ಬಲಿಕೊಡಲಾಗುತ್ತಿದೆ ಎಂಬುದು. ಇಂದು ದೇಶ-ದೇಶಗಳ ನಡುವೆ ಹರಿಯುವ ನದಿ ನೀರಿನ ಹಂಚಿಕೆಯೇ ಬಗೆಹರಿದಿರುವಾಗ ರಾಜ್ಯ-ರಾಜ್ಯಗಳ ನಡುವೆ ಹರಿಯುವ ಕಾವೇರಿ ನೀರಿನ ಹಂಚಿಕೆ ಏಕಿಷ್ಟು ವಿವಾದಗ್ರಸ್ತವಾಗಿದೆ ಎಂಬುದು ನಮ್ಮನ್ನು ಕಾಡುತ್ತದೆಯಲ್ಲವೆ? ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಉಪಶಮನ ಮಾಡಲಾಗುತ್ತಿದೆಯೇ ಹೊರತು, ಶಾಶ್ವತ ಪರಿಹಾರವನ್ನು ಕಂಡುಕೊಳ್ಳವ ನಿಟ್ಟಿನಲ್ಲಿ ಯಾವುದೇ ತ್ವರಿತ ಕೆಲಸಗಳಾಗುತ್ತಿಲ್ಲ. ಏಕೆಂದರೆ ಕಾವೇರಿ ನೀರಿನ ವಿಷಯ ರಾಜಕೀಯದೊಂದಿಗೆ ತಳುಕು ಹಾಕಿಕೊಂಡಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ, ರಾಜಕೀಯದ ಹೊರತಾಗಿ ನಡೆಯದ ವಿಶ್ಲೇಷಣೆ, ಸ್ಪಷ್ಟತೆ - ಪಾರದರ್ಶಕತೆಗಳ ಕೊರತೆ, ಸಾಮಾನ್ಯರ ಧ್ವನಿಗಳಿಗೆ ಸಿಗದ ಆದ್ಯತೆ, ರಾಜ್ಯ ರಾಜ್ಯಗಳ ನಡುವೆ ಹೆಚ್ಚಾಗುತ್ತಲೇ ಇರುವ ಅನಿರ್ದಿಷ್ಟತೆ ಮುಂತಾದ ಕಾರಣಗಳಿಂದ ನಾವು ಪರಿಹಾರವನ್ನು ಕಂಡುಕೊಳ್ಳಲಾಗುತ್ತಿಲ್ಲ. ಕಾವೇರಿಯ ರೋಷಾಗ್ನಿ ದಹಿಸುವಾಗ ಮಾತ್ರ ಹೋರಾಟ ಮಾಡುವುದು, ಮಳೆ ಬಂದು ಆ ರೋಷಾಗ್ನಿ ನಂದಿ ಹೋದ ಮೇಲೆ ಸಹಜವಾಗಿ ಸುಮ್ಮನಿದ್ದು ಬಿಡುವುದು ಹೀಗೆ ಮಾಡುತ್ತಾ ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಮುಂದೂಡುತ್ತಿದ್ದೇವೆ. ಶುದ್ಧ ಜಲ ವಿರಳವಾಗಿರುವ ಇಸ್ರೇಲ್ ನಂತಹ ದೇಶವು ಸಮುದ್ರದ ನೀರನ್ನೇ ಡಿಸ್ಯಾಲಿನೇಶನ್ ಮಾಡಿ (ನಿರ್ಲವಣೀಕರಣ), ಶುದ್ಧೀಕರಿಸಿ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುತ್ತಿದೆ. ಅಂತಹದ್ದರಲ್ಲಿ ಇಂತಹ ಫಲವತ್ತಾದ ನಾಡಿನಲ್ಲಿರುವ ನಾವು ಕೃಷಿಯ ವಿಷಯದಲ್ಲಿ ಇಷ್ಟೊಂದು ಪರಿತಪಿಸುತ್ತಿರುವುದು ದುಃಖಕರ. ನಾವೂ ಸಹ ತಂತ್ರಜ್ಞಾನದ ಮೂಲಕ ನೀರು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸುವುದು, ಕೃಷಿಯೋಗ್ಯ ನೀರಿನ ಪ್ರಮಾಣವನ್ನು ಹೆಚ್ಚಿಸುವುದು ಮಾಡಿ ಈ ಸಮಸ್ಯೆಗೆ ಪರಿಹಾರವನ್ನು ಪಡೆಯಬೇಕಿದೆ. 

ಊರಿನ ಹೆಸರಲ್ಲೇ ಕರುಣೆ ಇರೋ ಕರುಣೆಯ ಕರುನಾಡು ಎಲ್ಲೂ ಇಲ್ಲ ಅನ್ನೋ ಹಾಡಿನ ಹಾಗೆ ಕನ್ನಡಿಗರು ಎಂದೆಂದಿಗೂ ಪ್ರೀತಿಗೆ ಹೆಚ್ಚು ಮಹತ್ವವನ್ನು ನೀಡುವವರು. 'ಕಾವೇರಿ ಮಾತೆಗೆ ತಾನು ಯಾವ ರಾಜ್ಯಕ್ಕೆ ಸೇರಿರುವೆ ಎಂದು ತಿಳಿದಿಲ್ಲ. ಆಕೆ ಹರಿಯುವ ಸ್ಥಳದಲ್ಲೆಲ್ಲಾ ಸಮೃದ್ಧಿಯನ್ನು ಹೊತ್ತು ತರುತ್ತಾಳೆ. ಅವಳನ್ನು ಕಾಪಾಡಬೇಕಾದ ಉತ್ತರದಾಯಿತ್ವವನ್ನು ನಾವು ವಹಿಸಿಕೊಳ್ಳಬೇಕು' ಎಂದು ಸದ್ಗುರುಜಿ ಮತ್ತಿತರ ಪ್ರಮುಖರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಖ್ಯಾನ ಮಾಡಿರುವಂತೆಯೇ ನಮ್ಮ ಆಲೋಚನೆ ಸಹ ಇದೆ. ಮಾನವರೆಂದ ಮೇಲೆ ಎಲ್ಲರೂ ಪ್ರಕೃತಿಗೆ ಸಮಾನರು.ಆದರೆ ಪ್ರಾಕೃತಿಕ ಜಲಸಂಪತ್ತು ಹುಟ್ಟಿರುವ ಸ್ಥಳದವರಿಗೆ ಅದರ ಮೊದಲ ಹಕ್ಕು ಎಂದು ಜ್ಞಾನಿಗಳು ಹೇಳುವಂತೆ ಅಥವಾ ಅಂತಾರಾಷ್ಟ್ರೀಯ ನದಿ ನೀರು ಹಂಚಿಕೆ ಕಾನೂನು ಹೇಳುವಂತೆ ಕಾವೇರಿ ನೀರಿನ ಮೊದಲ ಹಕ್ಕನ್ನು ಕನ್ನಡಿಗರು ಹೊಂದಿದ್ದಾರೆ. ಆದ್ದರಿಂದ ನಾವು ಮುಂಗಾರು ಮಳೆಯಿಲ್ಲದೆ ಬರಗಾಲವನ್ನು ಎದುರಿಸಬೇಕಾದ ಸ್ಥಿತಿಯಲ್ಲಿರುವಾಗಲೂ, ನಮ್ಮ ಕುಡಿಯುವ ನೀರಿನ ಉಪಯೋಗಕ್ಕೆಂದು ಸಂಗ್ರಹಿಸಿಟ್ಟಿರುವ ನೀರನ್ನು ಹಿಂಗಾರು ಮಳೆಯನ್ನು ಪಡೆದುಕೊಳ್ಳುವ ಪಕ್ಕದ ರಾಜ್ಯಕ್ಕೆ ಹರಿಸಿ ಎಂದರೆ ಹೇಗೆ? ಎಂಬುದಷ್ಟೆ ಕನ್ನಡಿಗರ ಈಗಿನ ಪ್ರಶ್ನೆ.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ