ಹಿಜಾಬ್ ವಿವಾದದಲ್ಲಿ ಮರೆಮಾಚಿದ ಲಾವಣ್ಯ, ಕಿಶನ್ ಸಾವು: ಇದಕ್ಕೇನು ಜವಾಬು
ಹಿಜಾಬ್ ವಿವಾದದಲ್ಲಿ ಮರೆಮಾಚಿದ ಲಾವಣ್ಯ, ಕಿಶನ್ ಸಾವು: ಇದಕ್ಕೇನು ಜವಾಬು
#RightForHijab....-Secular ultra pro Max
ಕಳೆದ ಒಂದು ತಿಂಗಳಿನಿಂದ ಅದರಲ್ಲೂ ಕಳೆದ ಎರಡು ವಾರಗಳಿಂದ ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ
ಕರ್ನಾಟಕದ ಕಾಲೇಜುಗಳು ಸಮವಸ್ತ್ರ ಸಂಹಿತೆಗೆ ವಿರೋಧವಾಗಿರುವ ಹಿಜಾಬ್ ಅನ್ನು ನಿರಾಕರಿಸಿರುವ ಸುದ್ದಿಯು ಹೆಚ್ಚು ಸದ್ದು ಮಾಡುತ್ತಿದೆ. ಉಡುಪಿಯಲ್ಲಿ ಶುರುವಾದ ಈ ವಿವಾದದ ಕಿಚ್ಚು ಚಿಕ್ಕಮಗಳೂರು, ಹಾಸನ, ಬೆಳಗಾವಿ, ಶಿವಮೊಗ್ಗ, ಮಂಡ್ಯ, ಮೈಸೂರು ಮುಂತಾದ ಜಿಲ್ಲೆಗಳಿಗೂ ವ್ಯಾಪಿಸಿದೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎಂದು ವಿವಾದ ಎಬ್ಬಿಸಿರುವ ವಿದ್ಯಾರ್ಥಿನಿಯರನ್ನು ಬೆಂಬಲಿಸುತ್ತಿರುವ ಯಾವ ಮಹನೀಯರೂ ಸಹ ಲಾವಣ್ಯ ಹಾಗೂ ಕಿಶನ್ ಭಾರ್ವಾಡ್ ಎಂಬ ಅಮೂಲ್ಯ ಜೀವಗಳ ನಿರ್ಮಮ ಹತ್ಯೆಯಾಗಿರುವುದರ ಬಗೆಗೆ ಧ್ವನಿಯೆತ್ತಿ ನ್ಯಾಯವನ್ನೊದಗಿಸಲು ಸನ್ನದ್ಧವಾಗಿಲ್ಲ. ಮತಾಂಧತೆಯ ಅಜ್ಞಾನದ ಅಂಧಕಾರದಲ್ಲಿ ಲಾವಣ್ಯ ಹಾಗೂ ಕಿಶನ್ ಭಾರ್ವಾಡ್ ಎಂಬ ಜ್ಞಾನದ ಪ್ರಕಾಶಮಾನವನ್ನು ಅಂತ್ಯಗೊಳಿಸಿರುವ ಪ್ರಕರಣವು ಹಿಜಾಬ್ ಪ್ರಕರಣದಷ್ಟೇಕೆ ಸುದ್ದಿ ಮಾಡುತ್ತಿಲ್ಲ? ಅಥವಾ ಸುದ್ದಿಯಾಗಲು ಅವಕಾಶ ದೊರೆಯುತ್ತಿಲ್ಲ? ಮೊದಲಿನಿಂದಲೂ ಶಾಲಾ ಕಾಲೇಜುಗಳ ಸಮವಸ್ತ್ರ ನೀತಿಗನುಗುಣವಾಗಿ ನಡೆದುಕೊಂಡು ಬಂದಿದ್ದ ವಿದ್ಯಾರ್ಥಿಗಳು ಈಗ ಏಕೆ ಇದ್ದಕ್ಕಿದ್ದಂತೆ ಹಿಜಾಬ್ ಅನ್ನು ತರಗತಿಗಳಲ್ಲಿ ಧರಿಸಬೇಕೆಂದು ಹೋರಾಡುತ್ತಿದ್ದಾರೆ? ಲಾವಣ್ಯ, ಕಿಶನ್ ಅಂತಹವರ ಪ್ರಕರಣವನ್ನು ಮುಖ್ಯ ವಾಹಿನಿಯಿಂದ ದೂರ ಮಾಡಲು ಹಿಜಾಬ್ ಪ್ರಕರಣವನ್ನು ಬೆಳಕಿಗೆ ತಂದಿರುವುದು ಒಂದು ಷಡ್ಯಂತರವೇ?
ತಮಿಳುನಾಡಿನ ಒಂದು ಕ್ರಿಶ್ಚಿಯನ್ ಶಾಲೆಯಲ್ಲಿ ಅತೀವವಾಗಿ ಕಿರುಕುಳಕ್ಕೊಳಗಾದ ಲಾವಣ್ಯ ಎಂಬ ವಿದ್ಯಾರ್ಥಿನಿಯು ದುಃಖವನ್ನು ಸಹಿಸಲಾಗದೆ ಈಗ ತಾನೆ ಅರಳುತ್ತಿದ್ದ ತನ್ನ ಯುವ ಜೀವನಕ್ಕೆ ವಿದಾಯ ಹೇಳುತ್ತಾಳೆ. ತನ್ನ ಶಾಲೆಯಲ್ಲಿ ತನಗೆ ಕಿರುಕುಳ ನೀಡಿದ ಸಿಸ್ಟರ್ ಗಳ ಹೆಸರನ್ನು, ಆ ಕಿರುಕುಳದ ಅಮಾನವೀಯ ಪರಿಯನ್ನು ಜೀವ ಬಿಡುವ ಮುನ್ನ ಆ ನರಳಾಟದಲ್ಲೇ ವಿವರಿಸುತ್ತಾಳೆ. ಈ ಒಂದು ದೃಶ್ಯವನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡ ವಿಶ್ವ ಹಿಂದೂ ಪರಿಷತ್ ನ ಮುಖಂಡರು ಆ ಮಗುವಿಗೆ ನ್ಯಾಯವನ್ನು ಒದಗಿಸಲು, ಆ ದಾರುಣ ಅಂತ್ಯದ ವಿರುದ್ಧ ಸಮಾಜವು ಒಗ್ಗಟ್ಟಾಗಿ ಧ್ವನಿಯೆತ್ತುವಂತಾಗಲೆಂದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಈ ಒಂದು ಸ್ಪಷ್ಟ ಸಾಕ್ಷಿಯನ್ನು ಆಧಾರವಾಗಿಟ್ಟುಕೊಂಡು ತನಿಖೆಯನ್ನು ಆರಂಭಿಸಬೇಕಾದ ಆರಕ್ಷಕರು ರಕ್ಷಕರಾಗುವ ಬದಲು, ಬಲವಂತದ ಮತಾಂತರ ಎಂಬ ದೃಷ್ಟಿಕೋನವನ್ನು ಪರಿಗಣಿಸಲಾಗುವುದಿಲ್ಲ ಎನ್ನುವ ಮೂಲಕ ನ್ಯಾಯವನ್ನು ಕದಿಯುತ್ತಿರುವವರಂತೆ ತಮ್ಮ ನಿಲುವನ್ನು ಪ್ರದರ್ಶಿಸುತ್ತಾರೆ. ಅದಷ್ಟೆ ಅಲ್ಲದೆ ಆ ಹೆಣ್ಣು ಮಗುವಿನ ದಾರುಣ ಅಂತ್ಯದ ಸತ್ಯಾಸತ್ಯತೆಯನ್ನು ಸಾಬೀತುಪಡಿಸಿ ಅಪರಾಧಿಗಳನ್ನು ಶಿಕ್ಷಿಸುವ ಕಾರ್ಯಕ್ಕಿಂತ ಆ ಮಗುವಿನ ಕೊನೆಯ ಸ್ಪಷ್ಟ ಸಾಕ್ಷಿಯ ಹೇಳಿಕೆಯ ದೃಶ್ಯವನ್ನು ಸೆರೆ ಹಿಡಿದು ಸಮಾಜದ ಮುಂದೆ ತಂದವರನ್ನು ಶಿಕ್ಷಿಸುವ ಕಾರ್ಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಾರೆ. ಇಷ್ಟೆಲ್ಲಾ ಆದರೂ ಮೌನವಾಗಿದ್ದ ತಮಿಳುನಾಡಿನ ಶಿಕ್ಷಣ ಸಚಿವರು ಕೊನೆಗೆ ವಿವಶತೆಗೆ ಸಿಲುಕಿ ಒಂದೆರಡು ಸಿದ್ಧ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುತ್ತಾರೆ. ಈ ಅವಿಶ್ವಾಸದ ಬೆಳವಣಿಗೆಯಿಂದ ನೊಂದ ಮೃತರ ಪೋಷಕರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿಶ್ವಾಸವನ್ನು ಕಳೆದುಕೊಂಡ ನಂತರ ಈ ಪ್ರಕರಣವನ್ನು ಹೈಕೋರ್ಟ್ ನ ಆದೇಶದ ಮೇರೆಗೆ ಸಿ.ಬಿ.ಐಗೆ ವಹಿಸುತ್ತಾರೆ. ಕ್ರಿಶ್ಚಿಯನ್ ಶಾಲೆಯ ವಾರ್ಷಿಕ ಪೇಪರ್ ಗಳ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಲಾವಣ್ಯ ಕ್ರಿಶ್ಚಿಯನ್ ಶಾಲೆಯ ಮತಾಂತರದ ಅಗ್ನಿಪರೀಕ್ಷೆಯಲ್ಲಿ ಸುಟ್ಟು ಬೂದಿಯಾಗುತ್ತಾಳೆ.
ಇನ್ನು ಕಿಶನ್ ಭಾರ್ವಾಡ್ ಅವರ ಕಥೆ ಇದಕ್ಕಿಂತಲೂ ವ್ಯಥಿತವಾಗಿದೆ. ಒಬ್ಬ ಧೀರ ಹಿಂದೂ ಯುವ ಸೇನಾನಿಯನ್ನು ನಾವು ಕಳೆದುಕೊಂಡಿದ್ದೇವೆ. ಸರಳ, ಸಜ್ಜನ ವ್ಯಕ್ತಿ ಹಿಂದೂ ಸಂಸ್ಕೃತಿಯ ಅಸ್ಮಿತೆಯ ಬಗ್ಗೆ ಅಭಿಮಾನ ಹೊಂದಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯ ಪ್ರತಿನಿಧಿಯಾಗಿ ಫೋಟೋ-ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಏಸುಕ್ರಿಸ್ತ- ಭಗವಂತನ ಮಗ, ಮೊಹಮ್ಮದ್ ಪೈಗಂಬರ್- ಭಗವಂತನ ದೂತ, ಆದರೆ ಶ್ರೀಕೃಷ್ಣ ಸ್ವಯಂ ಭಗವಂತ ಎಂಬುದಾಗಿ ತಿಳಿಸಿರುವ ಒಂದು ವೀಡಿಯೋವನ್ನು ಹಂಚಿಕೊಂಡ ಇವರಿಗೆ ಕೆಲವೇ ಗಂಟೆಗಳಲ್ಲಿ ಎಚ್ಚರಿಕೆಯ ಕರೆಗಳು, ಕೊಲೆ ಬೆದರಿಕೆಗಳು ಬರಲು ಶುರುವಾಗುತ್ತದೆ, ಕೊನೆಗೆ ಕ್ಷಮೆ ಕೇಳಬೇಕಾದ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಇದರಿಂದಲೂ ತೃಪ್ತಿಯಾಗದ ಇಸ್ಲಾಂ ಮೂಲಭೂತವಾದಿಗಳು ಪೋಲಿಸ್ ಠಾಣೆಗೆ ಹೋಗಿ FIR ದಾಖಲಿಸುತ್ತಾರೆ. ನಂತರ ಮೌಲಾನ ಉಸ್ಮಾನಿ ಎಂಬ ಮೌಲ್ವಿಗಳ ಪ್ರಭಾವಕ್ಕೆ ಸಿಲುಕಿ ಮಾನವೀಯತೆಯನ್ನು ಬಲಿಕೊಡುವ ನಿರ್ಧಾರಕ್ಕೆ ಬರುವ ಮತಾಂಧರು ಕಿಶನ್ ನ ನಿರ್ಮಮ ಹತ್ಯೆಯನ್ನು ಮಾಡುತ್ತಾರೆ. ಗೋವು ಪ್ರಿಯ, ಶ್ರೀಕೃಷ್ಣ ಪ್ರಿಯ, ಸಂಸ್ಕೃತಿ ಪ್ರಿಯ, ಮಾತೃಭೂಮಿ ಪ್ರಿಯ ಕಿಶನ್ ಭಾರ್ವಾಡ್ ಅವರು ಆತ್ಮಗೌರವದ ಜೀವನವನ್ನು ನಡೆಸುತ್ತಿದ್ದರ ಬದಲಾಗಿ ತಮ್ಮ ಜೀವವನ್ನೇ ಮೌಲ್ಯವನ್ನಾಗಿ ಕೊಡಬೇಕಾಯ್ತು! ಅಧರ್ಮದ ಮತಾಂಧತೆಯ ಘೋರ ನಕಾರಾತ್ಮಕತೆಗೆ ಧರ್ಮದ ಸಾಂಸ್ಕೃತಿಕ ಮಹತ್ವದ ಸಕಾರಾತ್ಮಕತೆಯು ಬಲಿಯಾಗಬೇಕಾಯ್ತು!
ಆದರೆ ಈ ಘಟನೆಗಳಲ್ಲಿನ ವ್ಯಥೆ, ಕ್ರೂರತೆ, ಮತಾಂಧತೆಗಳು ಜಾತ್ಯಾತೀತ ಕಣ್ಣುಗಳಿಗೆ ಕಾಣುವುದಿಲ್ಲ, ಜಾತ್ಯಾತೀತ ದೇಶದಲ್ಲಿ ಇದಕ್ಕೆ ಮಹತ್ವವಿಲ್ಲ. ಏಕೆಂದರೆ ಮೃತ ದುರ್ದೈವಿಗಳ ಹೆಸರು ಲಾವಣ್ಯ ಹಾಗೂ ಕಿಶನ್ ತಾನೆ! ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಲು ಅವಕಾಶ ನೀಡದೆ ಮತಾಂಧತೆಯ, ಮತಾಂತರದ ಖಡ್ಗಗಳು ಇವರನ್ನು ಇರಿದು ಕೊಂದಿದ್ದು ಈಗ ಮುಖ್ಯ ವಿಷಯವಲ್ಲ! ಜಾತ್ಯಾತೀತವೆಂಬ ಅಸ್ತಿತ್ವವಿಲ್ಲದ ಪವರ್ ನ ಕನ್ನಡಕ ಹಾಕಿಕೊಂಡಿರುವ ಕಣ್ಣುಗಳಿಗೆ ನೈಜ ವಾಸ್ತವವೇ ಗೋಚರಿಸುತ್ತಿಲ್ಲ. ಜೀವ ಕಳೆದುಕೊಂಡವರಿಗಿಂತ ಶಾಲಾ-ಕಾಲೇಜಿನ ಸಮವಸ್ತ್ರ ಸಂಹಿತೆಯ ಉಲ್ಲಂಘನೆ ಮಾಡಿ ಪ್ರತ್ಯೇಕತೆಯ ಸೂಚಿಯಾಗಿರುವ ಧಾರ್ಮಿಕ ಸಂಕೇತವಾದ ಹಿಜಾಬ್ ಅನ್ನು ಕಳೆದುಕೊಂಡಿರುವವರ ಬಗ್ಗೆಯೇ ಇವರಿಗೆಲ್ಲ ಹೆಚ್ಚು ಚಿಂತೆ. ಐಸಿಯುನಲ್ಲಿರುವ ರೋಗಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸಣ್ಣ-ಪುಟ್ಟ ಗಾಯ ಮಾಡಿಕೊಂಡಿರುವವರ ಬಗೆಗೆ ಅತೀವವಾಗಿ ಕಾಳಜಿಯನ್ನು ತೋರಿಸುವಂತಾಗಿದೆ ಇವರ ಅವಿವೇಕದ ಪರಾಕಾಷ್ಠೆ. ಇಸ್ಲಾಂ ಬೆಳೆದು ಬಂದ ಸೌದಿ ಅರೇಬಿಯಾ, ಟರ್ಕಿ, ಇರಾನ್ ಮುಂತಾದ ದೇಶಗಳ ಜೊತೆಗೆ ಹಲವಾರು ಇಸ್ಲಾಮಿಕ್ ದೇಶಗಳಲ್ಲಿ ಮಹಿಳೆಯರು ಹಿಜಾಬ್, ಬುರ್ಖಾ ಗಳಿಂದ ತಮಗೆ ಮುಕ್ತಿ ಬೇಕೆಂದು ಹೋರಾಡುತ್ತಿದ್ದರೆ ಜಾತ್ಯಾತೀತ ಭಾರತ ರಾಷ್ಟ್ರದಲ್ಲಿ ಮಾತ್ರ ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಮಹಿಳೆಯರು ಹಿಜಾಬ್ ಬೇಕೇ ಬೇಕೆಂದು ಹೋರಾಡುವ ಮೂಲಕ ತಮ್ಮ ದೌರ್ಭಾಗ್ಯದ ಬಾಗಿಲನ್ನು ತಾವೇ ತೆರೆಯುತ್ತಿದ್ದಾರೆ. ಕೇವಲ 6 ಜನ ವಿದ್ಯಾರ್ಥಿನಿಯರಿಂದ ಶುರುವಾದ ಈ ಹೋರಾಟವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತದೆ, ಹೈಕೋರ್ಟ್ ಮೆಟ್ಟಿಲೇರುತ್ತದೆ! ಈ ದೇಶದ ಒಬ್ಬ ಸಾಮಾನ್ಯ ಪ್ರಜೆ ಬುದ್ಧಿವಂತನಾಗಿದ್ದರೂ ತನಗಾದ ಅನ್ಯಾಯದ ವಿರುದ್ಧ ಸಿಡಿದೆದ್ದು ಸ್ಥಳೀಯ ನ್ಯಾಯಾಲಯದಲ್ಲಿ ಹೋರಾಡುವುದು ಕೂಡ ಬೃಹತ್ ಕಾರ್ಯವಾಗಿರುವಾಗ 6 ಜನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಇಷ್ಟು ಬೃಹತ್ತಾದ ಪ್ರಮಾಣದಲ್ಲಿ ಹೋರಾಟವನ್ನು ವ್ಯಾಪಿಸಿದ್ದಾರೆ ಎಂಬುದನ್ನು ನಂಬಬಹುದೇ? ಮಧ್ಯರಾತ್ರಿಯಲ್ಲಿ ಭಯೋತ್ಪಾದಕನೋರ್ವನ ಪ್ರಕರಣವನ್ನು ವಿಚಾರಣೆ ಮಾಡಿಸಲು ಈ ರಾಷ್ಟ್ರದ ಸುಪ್ರೀಂಕೋರ್ಟ್ ಅನ್ನು ತೆರೆಸಲಾಗಿತ್ತು ಎಂದ ಮೇಲೆ ಈ ಸುದ್ದಿಯೇನು ಮಹಾ ಬಿಡಿ! ತಮಗೆ ಬೇಕಾದಾಗ ಶರಿಯಾ ಕಾನೂನನ್ನು ತಮ್ಮದಾಗಿಸಿಕೊಳ್ಳುವ, ಬೇಡವಾದಾಗ ಸಂವಿಧಾನದ ಕಾನೂನನ್ನು ತಮ್ಮದಾಗಿಸಿಕೊಳ್ಳುವ ಕಲೆಯಲ್ಲಿ ನಿಸ್ಸೀಮರಾಗಿರುವ ಅವಕಾಶವಾದಿಗಳು ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ತಮ್ಮ ನಿಲುವನ್ನು, ನಿಷ್ಠೆಯನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರದಲ್ಲಿ ಶರಿಯಾ ಕಾನೂನಿಗಾಗಿ ಹೋರಾಡುತ್ತಾರೆ.
ಶರಿಯಾ ಜಾರಿಗೆ ಬಂದರೆ ಆ ರಾಷ್ಟ್ರದಿಂದ ಓಡಿ ಹೋಗಿ, ಮತ್ತೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಶ್ರಯ ಪಡೆಯುತ್ತಾರೆ.
ನಂತರ ಮತ್ತೆ ಆಶ್ರಯ ನೀಡಿದ ರಾಷ್ಟ್ರದಲ್ಲಿ ಶರಿಯಾ ಕಾನೂನಿಗಾಗಿ ಹೋರಾಡುತ್ತಾರೆ. ಎಲ್ಲಿಯವರೆಗೆ ಈ ಚಕ್ರವು ಮುಂದುವರಿಯುತ್ತಿರುತ್ತದೆ?
ಸ್ವಾತಂತ್ರ್ಯವನ್ನು ಪಡೆಯುವ ಸಂದರ್ಭದಲ್ಲಿ ಭಾರತ ರಾಷ್ಟ್ರವು ವಿಭಜನೆಯಾಗಿದ್ದು ಧರ್ಮದ ಆಧಾರದ ಮೇಲೆಯೇ ಎಂಬುದು ಕಟುಸತ್ಯ. ಭಾರತದ ಒಂದು ಭಾಗವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಿ ಮುಸಲ್ಮಾನರಿಗೆ ಅತಿ ದೊಡ್ಡ ಉಡುಗೊರೆಯನ್ನು ನೀಡಿದ ಮೇಲೂ ಅಲ್ಲಿಗೆ ಹೋಗದೆ ಭಾರತದ ಹಿಂದೂಗಳ ಸಂಸ್ಕೃತಿ-ಆದರ್ಶಗಳಿಗನುಗುಣವಾಗಿ ಸೌಹಾರ್ದಯುತವಾಗಿ ಇಲ್ಲೇ ಜೀವಿಸುತ್ತೇವೆ ಎಂದು ನಿರ್ಧಾರ ಮಾಡಿ ಉಳಿದುಕೊಂಡು ಈಗ ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಉತ್ತರವಲ್ಲ ಅದು ಕೋಮುವಾದ ನಮ್ಮದು ಮಾತ್ರ ಜಾತ್ಯಾತೀತವಾದ, ಗಣೇಶ ಪೂಜೆ ಗೌರಿ ಪೂಜೆ ಸರಸ್ವತಿ ಪೂಜೆಗಳನ್ನೆಲ್ಲಾ ಶಾಲಾ ಕಾಲೇಜುಗಳಲ್ಲಿ ಮಾಡಿದಾಗ ನಾವೇನು ಆಕ್ಷೇಪ ವ್ಯಕ್ತಪಡಿಸುತ್ತೇವಾ ಎಂದು ಪ್ರಶ್ನಿಸುತ್ತಿರುವವರಿಗೆ ಹೇಗೆ ಈ ಹೃದಯದ ಭಾರವನ್ನು ಇಳಿಸಿ ಉತ್ತರಿಸುವುದೋ ತಿಳಿಯುತ್ತಿಲ್ಲ! ಭಾರತ ದೇಶ ಯಾವುದು? ಹಿಂದೂ ಸಂಸ್ಕೃತಿಯ ಆಧ್ಯಾತ್ಮದ ಆಧಾರದ ಮೇಲೆ ಬೆಳೆದು ಬಂದ ದೇಶ. ಮಾನವ ಜೀವನದ ವಿಕಾಸಕ್ಕೆ ಅಮೂಲ್ಯಗಳಲ್ಲೇ ಅಮೂಲ್ಯವಾದ ಆದರ್ಶಗಳನ್ನು ತಮ್ಮ ತಪಃ ಶಕ್ತಿಯಿಂದ ಕಂಡುಕೊಂಡು ಸಮಾಜಕ್ಕೆ ಸಮರ್ಪಿಸಿದ ಭೋದನೆಯಾಗಿರುವ ನಮ್ಮ ಧರ್ಮವನ್ನು ಧರ್ಮವೀರರು ಬಲಿದಾನದ, ಪರಾಕ್ರಮದ ಮೂಲಕ ರಕ್ಷಿಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಇಂದಿಗೂ ಈ ಧರೆಯ ಮೇಲೆ ಬದುಕುಳಿದಿರುವ ಶ್ರೇಷ್ಠ, ಪ್ರಾಚೀನ ಸನಾತನ ಧರ್ಮ ನಮ್ಮದಾಗಿದೆ. ಇದ್ದಕ್ಕಿದ್ದಂತೆ ಹಿಜಾಬ್ ಧರಿಸದಿದ್ದವರೂ ಸಹ ಧರಿಸುತ್ತಿರುವ, ಧರ್ಮದ ಬಗ್ಗೆ ಚಿಂತಿಸದಿದ್ದವರು ಸಹ ಚಿಂತಿಸಲು ಆರಂಭಿಸಿರುವ ಈ ಈ ಬೆಳವಣಿಗೆಗಳು ಮೂಲಭೂತವಾದಕ್ಕೆ ಎಡೆ ಮಾಡಿಕೊಡುವ ಮೂಲಕ ಸನಾತನ ಧರ್ಮದ ಮೇಲೆ ಮತ್ತಷ್ಟು ವೈಚಾರಿಕ ಆಕ್ರಮಣ ಮಾಡುವುದಕ್ಕೆ ಸಿದ್ಧವಾಗಿರುವಂತೆ ಕಾಣುತ್ತದೆ. ತಿಲಕ, ಬಿಂದಿಯನ್ನು ಹಿಜಾಬ್ ಗೆ ಸಮೀಕರಿಸಿ ಸಮವಸ್ತ್ರದ ಜೊತೆಗೆ ಈ ಎರಡನ್ನು ವಿವಿಧ ಧರ್ಮಗಳ ವಿದ್ಯಾರ್ಥಿಗಳು ಹಾಕಿಕೊಂಡು ಬರುತ್ತಾರೆ, ಅದರಲ್ಲಿ ಹಿಜಾಬ್ ಗೆ ಮಾತ್ರ ವಿರೋಧವೇಕೆ ಎಂದು ಪ್ರಶ್ನಿಸುತ್ತಿರುವವರು ಬಿಂದಿ ವಸ್ತ್ರವಲ್ಲ ಎಂಬ ಸಾಮಾನ್ಯ ಜ್ಞಾನವನ್ನು ಅರಿತುಕೊಳ್ಳಲಾರದಷ್ಟು ಪೂರ್ವಾಗ್ರಹ ಪೀಡಿತ ಭಾದೆಗೆ ಒಳಗಾಗಿರುವುದು ವಿಪರ್ಯಾಸ. ಅಂಬೇಡ್ಕರ್ ಅವರ ಮುಖವಾಡವನ್ನು ಧರಿಸಿ ಅವರ ವಿಚಾರಗಳನ್ನೇ ತಿರುಚುವ ಸರ್ವಜ್ಞರಿಗೆ, ಸ್ವಯಂಘೋಷಿತ ಸಂವಿಧಾನ ಪಂಡಿತರಿಗೆ, ಮ್ಯಾಜಿಕ್ ಇತಿಹಾಸಕಾರರಿಗೆ ಅಂಬೇಡ್ಕರ್ ಅವರ ಈ ಕೆಳಗಿನ ಮುಸ್ಲಿಂ ಮಹಿಳೆಯರ ಬಗೆಗಿನ ಹೇಳಿಕೆ ಸಮರ್ಪಣೆ: "ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿ ರಸ್ತೆಯಲ್ಲಿ ನಡೆಯುವುದನ್ನು ಯಾವುದೇ ವ್ಯಕ್ತಿ ಭಾರತದಲ್ಲಿ ನೋಡಬಹುದಾದ ಭೀಕರ ದೃಶ್ಯಗಳಲ್ಲೊಂದು. ಇಂಥ ವಿಚಿತ್ರತೆ ಮುಸ್ಲಿಂ ಮಹಿಳೆಯ ದೈಹಿಕ ರಚನೆಯ ಮೇಲೆ ಹಾನಿಕಾರಕ ಪರಿಣಾಮವನ್ನುಂಟು ಮಾಡುತ್ತದೆ. ರಕ್ತಹೀನತೆ, ಕ್ಷಯ ಮತ್ತು ಬಾಯಿಯ ದುರ್ಗಂಧ ಮೊದಲಾದ ರೋಗಗಳಿಗೆ ಸಹಜವಾಗಿ ಇವರು ತುತ್ತಾಗುತ್ತಾರೆ. ವಸ್ತಿಕುಹರದ ವಿರೂಪತೆಯ ಪರಿಣಾಮದಿಂದಾಗಿ ಹೆರಿಗೆ ಸಂದರ್ಭದಲ್ಲಿ ಸಾವು ಸಂಭವನೀಯ. ಮುಸ್ಲಿಂ ಮಹಿಳೆಯ ಮಾನಸಿಕ ಮತ್ತು ದೈಹಿಕ ಸ್ಥೈರ್ಯವನ್ನು ಪರ್ದಾ ಕುಂಠಿತಗೊಳಿಸುತ್ತದೆ. ಹೀಗೆ ಆರೋಗ್ಯಕರವಾದ ಸಾಮಾಜಿಕ ಬದುಕಿನಿಂದ ವಂಚಿತವಾದ ಇವರ ಮನಸ್ಸು ನೈತಿಕ ಅಧಃಪತನಕ್ಕೆ ಗುರಿಯಾಗುತ್ತದೆ. ಹೀಗೆ ಹೊರ ಪ್ರಪಂಚದಿಂದ ಸಂಪೂರ್ಣವಾಗಿ ದೂರ ಉಳಿದು ಬಿಡುವುದರಿಂದ ತಮ್ಮ ಮನಸನ್ನು ಮನೆಯಲ್ಲಿ ಸಣ್ಣ-ಪುಟ್ಟ ಕಲಹಗಳತ್ತ ಹರಿಯಬಿಡುತ್ತಾರೆ. ಇದರ ಪರಿಣಾಮದಿಂದ ಅವರ ನಡೆ-ನುಡಿಯಲ್ಲಿ ಸಂಕುಚಿತತೆ ನೆಲೆಗಾಣುತ್ತದೆ".
ಈ ಜೀವನವು ರೂಪಿತವಾಗುತ್ತಾ ಹೋಗುವುದು ನಮಗೆ ಎದುರಾಗುವ ಸಂಘರ್ಷ ಅಥವಾ ಸಮಸ್ಯೆಗಳಿಂದಲ್ಲ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ. ಸ್ನೇಹಿತರು, ಬಂಧುಮಿತ್ರರು ಕೊನೆಗೆ ಗುರುಗಳು ಪುರುಷರು ಎಂದು ಅವರೆದುರು ಹಿಜಾಬ್ ಹಾಕಿಕೊಳ್ಳಬೇಕು ಎಂದರೆ ಇದು ಆ ವಿದ್ಯಾರ್ಥಿನಿಯರ ಆಲೋಚನೆ ಎಂತಹದ್ದು? ಯಾವ ಗುರುಗಳು ನಮ್ಮ ಜೀವನದ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಪ್ರಕಾಶವನ್ನು ಬೆಳಗಿಸುವರೊ ಅಂತಹವರ ಮೇಲೆ ನಿಮಗೆ ಶ್ರದ್ಧೆ, ಭಕ್ತಿ, ಗೌರವ, ವಿಶ್ವಾಸಗಳಂತಹ ಪವಿತ್ರ ಭಾವನೆಯಿಲ್ಲವೇ? ಬಾಹ್ಯಮುಖಕ್ಕೆ ಪರದೆ ಹಾಕುವುದಲ್ಲ, ಆಂತರ್ಯದ ಮನಸ್ಸಿನ ಪರಿಶುದ್ಧತೆ ಕಾಪಾಡಲು ಪರದೆ ಹಾಕಿ. ಈ ಪ್ರಕರಣದಲ್ಲಿ ಹೆಚ್ಚು ವೈರಲ್ ಆಗಿರುವ ಒಂದು ವೀಡಿಯೋದಲ್ಲಿ ನೂರಾರು ಹಿಂದೂ ವಿದ್ಯಾರ್ಥಿಗಳ ಜೈ ಶ್ರೀರಾಮ್ ಘೋಷಗಳ ವಿರುದ್ಧವಾಗಿ ಒಬ್ಬಳು ಮುಸ್ಲಿಂ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಎಂದು ಕೂಗುತ್ತಾಳೆ. ಆ ಸನ್ನಿವೇಶವನ್ನು ವಿಶ್ಲೇಷಿಸಿ ನೋಡಿ, ಆ ವಿದ್ಯಾರ್ಥಿನಿ ಯಾವುದೇ ಭಯ-ಅಸುರಕ್ಷತೆಗಳಿಲ್ಲದೆ ಆ ವಿದ್ಯಾರ್ಥಿಗಳ ಘೋಷಣೆಯನ್ನು ವಿರೋಧಿಸಿ ತನ್ನ ಘೋಷಣೆಯನ್ನು ಕೂಗಿದಳು. ಒಂದು ವೇಳೆ ಈ ಸನ್ನಿವೇಶಕ್ಕೆ ವ್ಯತಿರಿಕ್ತವೆಂಬಂತೆ ನೂರಾರು ಮುಸ್ಲಿಂ ವಿದ್ಯಾರ್ಥಿಗಳ ಮಧ್ಯೆ ಒಬ್ಬಳು ಹಿಂದೂ ವಿದ್ಯಾರ್ಥಿನಿ ಅವರ ವಿರುದ್ಧದ ಘೋಷಣೆ ಕೂಗಿದ್ದರೆ ಏನಾಗುತ್ತಿತ್ತು ಎಂದು! ಆಗ ಏನಾಗುತ್ತಿತ್ತು ಎಂಬುದಕ್ಕೆ ಇತಿಹಾಸದಲ್ಲಿ ಗತಿಸಿ ಹೋದ ಘಟನೆಗಳೇ ಸಾಕ್ಷಿ. ಮುಸ್ಲಿಂ ಹೆಣ್ಣು ಮಕ್ಕಳು ಪುರುಷರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಜಾಬ್ ಧರಿಸುತ್ತೇವೆ ಎನ್ನುತ್ತಾರೆ, ಆದರೆ ವಾಸ್ತವದಲ್ಲಿ ರಕ್ಷಣೆ ಬೇಕಿರುವುದು ಹಿಂದೂ ಹೆಣ್ಣು ಮಕ್ಕಳಿಗೆ ಅದುವೇ ಲವ್ ಜಿಹಾದ್ ಎಂಬ ಇಸ್ಲಾಂ ಮೂಲಭೂತವಾದಿಗಳ ವಂಚನೆಯ ಆಕ್ರಮಣದಿಂದ. ಆದರೆ ಪರದೆ ಹಾಕುವುದರಿಂದ ಈ ಸಮಸ್ಯೆ ನಿವಾರಣೆಯಾಗುವುದೇ? ಸಮಸ್ಯೆ ಕಣ್ಣ ಮುಂದೆ ಬಂದು ನಿಂತಾಗ ಅದನ್ನು ಎದುರಿಸದೆ ಕಣ್ಣು ಮುಚ್ಚಿ ಕೊಂಡು ನನಗೆ ಅದು ಕಾಣುತ್ತಿಲ್ಲ ಎಂದರೆ ಸಮಸ್ಯೆ ನಿವಾರಣೆಯಾಗುವುದಿಲ್ಲ, ಮತ್ತಷ್ಟು ಮುಂದಕ್ಕೆ ಹೋಗುತ್ತದೆ ಅಷ್ಟೆ. ಹಿಜಾಬ್ ಬಲವಂತವಲ್ಲ, ಆಯ್ಕೆ ಎಂದು ಪ್ರತಿಪಾದಿಸುತ್ತಿರುವ ಮುಸ್ಲಿಂ ಹೆಣ್ಣು ಮಕ್ಕಳ ಹೇಳಿಕೆ ಶೇ.100 ಪ್ರತಿಶತ ಸತ್ಯ. ಆದರೆ ಅವರಿಗಾಗಿ ಆಯ್ಕೆ ಮಾಡಿದವರು ಮಾತ್ರ ಮುಸ್ಲಿಂ ಗಂಡು ಮಕ್ಕಳು. ಭಾರತದಲ್ಲಿ ನಡೆಯುತ್ತಿರುವ ಹಿಜಾಬ್ ಸಂಘರ್ಷಕ್ಕೆ ತಲೆ ಹಾಕಿ ಮುಸ್ಲಿಂ ಹೆಣ್ಣು ಮಕ್ಕಳ ಪರ ಧ್ವನಿಯೆತ್ತುತ್ತಿರುವ ನೋಬಲ್ ವಿಜೇತೆ ಮಲಾಲಾ ಅವರಿಗೆ ತಮ್ಮ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಪ್ರತನಿತ್ಯ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅಸಹನೀಯ ಶೋಷಣೆ ಗೋಚರಿಸುತ್ತಿಲ್ಲವೆ? ಹಿಜಾಬ್-ಬುರ್ಖಾಗಳಿಗೆ ಇಷ್ಟೊಂದು ಬೆಂಬಲ ನೀಡುತ್ತಿರುವ ಮಲಾಲಾ ಅವರು ಬುರ್ಖಾವನ್ನು ಬ್ಯಾನ್ ಮಾಡಿರುವ ನಾರ್ವೆ ದೇಶದಿಂದ ಅದ್ಯಾವ ಆತ್ಮಸಾಕ್ಷಿಯಿಂದ ನೋಬಲ್ ಪುರಸ್ಕಾರವನ್ನು ಸ್ವೀಕರಿಸಿದರು?
ಸಮವಸ್ತ್ರದ ಮೇಲೆ ಹಿಜಾಬ್ ಹಾಕಿ ಪ್ರತ್ಯೇಕತೆ ಸೃಷ್ಟಿಸಿದಾಗ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲ್ ಹಾಕಿ ಸಮಾನತೆಯನ್ನು ಪ್ರತಿಪಾದಿಸಿದ್ದು ರಾಷ್ಟ್ರಭಕ್ತಿ, ಹಿಂದುತ್ವದ ಆದರ್ಶಗಳು ಎಂದೆಂದಿಗಿಂತಲೂ ಇಂದು ಹೆಚ್ಚು ಜಾಗೃತವಾಗಿದೆ ಎಂಬುದಕ್ಕೆ ಸಾಕ್ಷಿ. ಮಧ್ಯಯುಗದ ಬಾಳನ್ನು ಜೀವಿಸಬೇಕಾದಂತಹ ಅಜ್ಞಾನದ ವಿವಶತೆಯಿಂದ ಪಾರಾಗಿ ಮುಸ್ಲಿಂ ಹೆಣ್ಣು ಮಕ್ಕಳು ಇತರರಂತೆ ಶಿಕ್ಷಣ ಪಡೆದು ಉತ್ತಮ ಸ್ಥಾನವನ್ನು ತಲುಪಲಿ, ಮತಾಂಧತೆಗೆ ಬಲಿಯಾಗದಿರಲಿ ಎಂಬುದಷ್ಟೇ ನನ್ನ ಕೋರಿಕೆ. ಈ ಒಂದು ವಿವಾದವನ್ನು ಎಬ್ಬಿಸಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಇದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಏಕರೂಪ ನಾಗರಿಕ ಸಂಹಿತೆ ಅನ್ನು ಜಾರಿಗೊಳಿಸಲಿ. ಕೊನೆಯದಾಗಿ ಭಾರತ ಭಾರತವಾಗಿಯೇ ಉಳಿಯಬೇಕೆಂದರೆ ಮತಾಂಧರಿಗಿಂತಲೂ ಭಯಾನಕವಾಗಿರುವ ಬುದ್ಧಿಜೀವಿಗಳ ವೈಚಾರಿಕ ಆಕ್ರಮಣದ ಸೂತ್ರಗಳನ್ನು ಅರಿತುಕೊಂಡು ಜಾಗೃತವಾಗಬೇಕಿರುವುದು ಅನಿವಾರ್ಯವಾಗಿದೆ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment