2024ಕ್ಕೆ ಈಗಿನಿಂದಲೇ ಏಕೆ ಸಿದ್ಧರಾಗಬೇಕು? ಪ್ರತಿಯೊಬ್ಬ ದೇಶಭಕ್ತನೂ ಏಕೆ ರಾಜಕಾರಣ ಮಾಡಬೇಕು?

2024ಕ್ಕೆ ಈಗಿನಿಂದಲೇ ಏಕೆ ಸಿದ್ಧರಾಗಬೇಕು? ಪ್ರತಿಯೊಬ್ಬ ದೇಶಭಕ್ತನೂ ಏಕೆ ರಾಜಕಾರಣ ಮಾಡಬೇಕು?
ನಾವು ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ನೋಡಿಲ್ಲ, ಮಹಾರಾಣ ಪ್ರತಾಪ್ ಅವರನ್ನು ನೋಡಿಲ್ಲ, ಗುರು ಗೋವಿಂದ ಸಿಂಗ್ ಅವರನ್ನು ನೋಡಿಲ್ಲ, ಶ್ರೀಕೃಷ್ಣದೇವರಾಯ ಅವರನ್ನು ನೋಡಿಲ್ಲ. ಆದರೆ ಅವರೆಲ್ಲರನ್ನೂ ನಮ್ಮ ಇಂದಿನ ಪ್ರಧಾನಮಂತ್ರಿಗಳಾದ 'ಶ್ರೀ ನರೇಂದ್ರ ದಾಮೋದರದಾಸ್ ಮೋದಿ' ಅವರ ಮೂಲಕ ನೋಡುತ್ತಿದ್ದೇವೆ. ನಮ್ಮ ದೇಶವು ಈ ಮಹಾನ್ ನಾಯಕ ಮೋದೀಜಿ ಅವರನ್ನು ಪ್ರಧಾನಿಯನ್ನಾಗಿ ಪಡೆಯಲು ಪುಣ್ಯ ಮಾಡಿದೆಯೊ ಅಥವಾ ನಮ್ಮ ಮೋದೀಜಿ ಅವರು ಈ ಮಹಾನ್ ದೇಶದ ಪ್ರಧಾನಿಯಾಗಲು ಪುಣ್ಯ ಮಾಡಿದ್ದಾರೊ!? "My PM works till AM" ಅನ್ನೋ ಹಾಗೆ ಕಳೆದ 20 ವರ್ಷಗಳ ತಮ್ಮ ನಿರಂತರ ಸಾರ್ವಜನಿಕ ಜೀವನದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ಕರ್ಮಯೋಗಿ ಪ್ರಧಾನಿ, ನಮ್ಮ ದಣಿವರೆಯದ ದೊರೆಯೇ ನಮ್ಮ ಕಾಲದ ಮಹಾನ್ ಸಾಧಕ ಅಥವಾ ಯುಗಪುರುಷ ಎಂದು ಹೇಳಬಹುದು. ನೀವು ಅತಿಶಯೋಕ್ತಿ ಎಂದು ತಿಳಿದುಕೊಂಡರೂ ಪರವಾಗಿಲ್ಲ, ನನ್ನ ಒಂದು ಮಹತ್ವವಾದ ಅಭಿಪ್ರಾಯವನ್ನು ಈ ಲೇಖನದ ಮೂಲಕ ವ್ಯಕ್ತಪಡಿಸಲೇಬೇಕಿದೆ. ಯಾವ ರೀತಿ ಈ ನಮ್ಮ ಮಾತೃಭೂಮಿಯು ಸಂಕಷ್ಟದಲ್ಲಿದ್ದಾಗಲೆಲ್ಲಾ ಧರ್ಮ ಸಂಸ್ಥಾಪನಾಚಾರ್ಯರು ಅವತರಿಸಿ ಈ ಪವಿತ್ರ ಭೂಮಿಯ ಉದ್ಧಾರ ಮಾಡಿದರೊ ಹಾಗೆಯೇ ಈ ದೇಶದ ಆತ್ಮವಿಸ್ಮೃತ ಮನಗಳನ್ನು ಆತ್ಮನಿರ್ಭರತೆಯೆಡೆಗೆ ಕೊಂಡೊಯ್ಯುವ, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಿದ್ದ ಮೆಕಾಲೆ ಕೈಗೊಂಬೆಗಳನ್ನು ನಮ್ಮದೇ ಸ್ವಯಂ ಶ್ರೇಷ್ಠ ಸಂಸ್ಕೃತಿಯೆಡೆಗೆ ಕೊಂಡೊಯ್ಯುವ ಧರ್ಮದ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುತ್ತಿರುವ ಗೌರವಾನ್ವಿತ ಪ್ರಧಾನಿಗಳೂ ಸಹ ಈ ನಮ್ಮ ಪುಣ್ಯಭೂಮಿಯ ಉದ್ಧಾರಕ್ಕಾಗಿ ಜನಿಸಿರುವ ಪುಣ್ಯಾತ್ಮ ಎಂದೇ ಹೇಳಬಹುದು. 2024ರ ಹೈವೋಲ್ಟೇಜ್ ರಣರಂಗಕ್ಕೆ ಇನ್ನೂ ಬಹಳಷ್ಟು ಸಮಯವಿದೆ. ಇವಳೇಕೆ ಇಷ್ಟು ಬೇಗ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾಳೆ ಎಂದು ಯೋಚಿಸುತ್ತಿದ್ದೀರಾ? ಹೌದು ಕಣ್ರೀ ಕರೆಕ್ಟ್. ಆದರೆ ಇಷ್ಟು ಬೇಗ ಏಕೆ ಹಾಗೂ ಈ ಪ್ರಚಾರ ಕಾರ್ಯಕ್ಕೆ ಎಷ್ಟು ಮಹತ್ವವಿದೆ ಎಂಬುದು ಅರ್ಥವಾದರೆ ನಿಮ್ಮ ಯೋಚನಾ ಲಹರಿಯ ಪ್ರಶ್ನೆಗಳಿಗೆ ನಿಖರವಾದ ಉತ್ತರ ದೊರೆಯುವುದು. ಇದಕ್ಕೆ ಉತ್ತರ ವೀರಸಾವರ್ಕರ್ ಅವರ ಒಂದೇ ಹೇಳಿಕೆ: "ರಾಜಕೀಯವನ್ನು ಸಂಪೂರ್ಣವಾಗಿ ಹಿಂದುತ್ವಮಯಗೊಳಿಸಿ, ಹಿಂದೂ ಸಮಾಜವನ್ನು ಸಂಪೂರ್ಣವಾಗಿ ಕ್ಷಾತ್ರಮಯಗೊಳಿಸಿ". ಮಾನವ ಸಮಾಜದ ಇತಿಹಾಸದಲ್ಲೆಲ್ಲಾ ಅತ್ಯಂತ ಪ್ರಾಚೀನವೂ, ನವನವೀನವೂ ಹಾಗೂ ಶಕ್ತಿಶಾಲಿಯೂ ಆಗಿರುವ ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯ ಮೇಲೆ ನಡೆದ ರಾಜಕೀಯ ಆಕ್ರಮಣಗಳು ಒಂದೇ ಎರಡೇ? ಅನ್ಯ ಸಂಸ್ಕೃತಿಗರು ತಮ್ಮ ರಾಜಕೀಯದ ತಲ್ವಾರಿನ ಮೂಲಕ ನಮ್ಮ ಸಂಸ್ಕೃತಿಯ ಸಭ್ಯತೆಯನ್ನು ಬಲಿ ಕೊಡಲು ಪಟ್ಟ ವ್ಯರ್ಥ ಪ್ರಯತ್ನಗಳು ಒಂದೇ ಎರಡೇ? ನಮ್ಮ ಅತೀವ ಶ್ರೀಮಂತಿಕೆ, ಸಜ್ಜನಿಕೆ, ಔದಾರ್ಯತೆಗಳನ್ನು ದುರುಪಯೋಗ ಮಾಡಿಕೊಂಡು ಉಪಕಾರ ಮಾಡಿದ ನಮ್ಮ ದೇಶಕ್ಕೇ ಅಪಕಾರ ಮಾಡಿದ ಕಲ್ಮಶ ಹೃದಯದ ದುಷ್ಕೃತ್ಯಗಳು ಒಂದೇ ಎರಡೇ? ಇಸ್ಲಾಂನ ಹಡಗು ಜಗತ್ತಿನೆಲ್ಲೆಡೆ ರಕ್ತದ ಮಡುವಿನ ಮೇಲೆ ಸಂಚರಿಸಿ ಗೆದ್ದು ಬೀಗುತ್ತಾ ಭಾರತದ ಅಂಗಳಕ್ಕೆ ಧಾವಿಸಿ ಸಿಲುಕಿ ಕೊಂಡಿತು. ಕ್ರಿಶ್ಚಿಯನ್ನರ ಪ್ರಭಾವವು ಅದರ ಮೂಲ ಸಂಸ್ಕೃತಿ ಯಹೂದ್ಯವನ್ನೇ ನುಂಗಿಕೊಂಡು ಪ್ರಪಂಚದ ಬಹುಪಾಲು ರಾಷ್ಟ್ರಗಳ ಮೇಲೆ ಅಧಿಪತ್ಯ ಸಾಧಿಸಿದರೂ ಭಾರತವನ್ನು ಪ್ರವೇಶಿಸಿ ಕಪಟತೆಗಳ ಮೂಲಕ ಸಾಂಸ್ಕೃತಿಕ ದಾಳಿ ನಡೆಸಿದರೂ ಅಸಫಲತೆಯನ್ನು ಕಂಡಿತು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಯಾವುದೇ ಒಂದು ರಾಷ್ಟ್ರ ಕೇವಲ ಒಂದೆರಡು ದಶಕಗಳ ಕಾಲ ಮತ್ತೊಂದು ರಾಷ್ಟ್ರದ ಆಳ್ವಿಕೆಗೊಳಪಟ್ಟರೆ, ತನ್ನ ಸಂಸ್ಕೃತಿ- ಪರಂಪರೆಯ ಪತನವನ್ನು ಕಾಣಬೇಕಾಗುವುದು ಎಂದು. ಆದರೆ ನಮ್ಮ ಸನಾತನ ಸಂಸ್ಕೃತಿಯ ಭಾರತ ರಾಷ್ಟ್ರವು ಸತತವಾಗಿ ಘೋರ ಆಕ್ರಮಣಗಳಿಗೆ ಒಳಗಾದರೂ ಇನ್ನೂ ಬಲವಾಗಿ ಅಸ್ತಿತ್ವದಲ್ಲಿದೆ. 

ಒಂದು ರಾಷ್ಟ್ರವು ಪ್ರಪಂಚದ ಕಣ್ಣಿಗೆ ಅನ್ಯ ರಾಷ್ಟ್ರದ ಆಳ್ವಿಕೆಗೆ ಒಳಪಟ್ಟಿದ್ದರೂ ಎಲ್ಲಿಯವರೆಗೆ ಅದು ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ಅದು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಿಲ್ಲ. ನಮ್ಮ ರಾಷ್ಟ್ರದ ಹಿಂದೂ ಸಂಸ್ಕೃತಿಯ ಅಂತಃಸತ್ವವು ಯಾವ ಇಸ್ಲಾಂ ಅಥವಾ ಕ್ರಿಶ್ಚಿಯನ್ ಮತಗಳ ರಾಜಕೀಯ ತಲ್ವಾರಿನ ಆಕ್ರಮಣಗಳಿಗೂ ಅಲುಗಾಡಲಿಲ್ಲ. ಸರಿಸುಮಾರು ಸಹಸ್ರಾರು ವರ್ಷಗಳ ಕಾಲ ರಾಜಕೀಯ ಸ್ವಾತಂತ್ರ್ಯದಿಂದ ವಂಚಿತರಾಗಿದ್ದ ನಮ್ಮ ರಾಷ್ಟ್ರದ ಕ್ಷಾತ್ರ ವೀರರು ತಾಯ್ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ರಕ್ಷಿಸುತ್ತಿರುವ ಸನಾತನ ಸಂಸ್ಕೃತಿಯ ಮಾನವತ್ವದ ಉತ್ತುಂಗ ಆದರ್ಶದ ಹಡುಗು ಇನ್ನೂ ಕೋಟ್ಯಾನುಕೋಟಿ ಮಾನವರನ್ನು ಅವರ ಗುರಿ ತಲುಪಿಸಲೆಂದು ತಮ್ಮ ಸರ್ವೋಚ್ಛ ಬಲಿದಾನ ಮಾಡಿ ತಮ್ಮ ರಕ್ತದ ಮಡುವಿನ ಮೇಲೆಯೇ ಅದನ್ನು ಸಾಗಿಸಿದರು.

ನಮ್ಮ ರಾಷ್ಟ್ರದ ಇತಿಹಾಸ ಸೋಲಿನ ಇತಿಹಾಸವಲ್ಲ, ನಮ್ಮ ರಾಷ್ಟ್ರದ ಇತಿಹಾಸ ಪರಾಕ್ರಮದ ಇತಿಹಾಸ. ಇತಿಹಾಸಕಾರರು ಯಾವುದೇ ಅಸ್ತಿತ್ವವಿಲ್ಲದ ಇಂದಿನ ಸೆಕ್ಯುಲರಿಸಂ, ಕಮ್ಯುನಲಿಸಂ, ಸೋಷಿಯಲಿಸಂ ಇತ್ಯಾದಿ ಇಸಂ ಗಳ ಪೂರ್ವಾಗ್ರಹವಿಲ್ಲದೆ ಭಾರತದ ಇತಿಹಾಸವನ್ನು ಬರೆದರೆ 'ಪ್ರಪಂಚದ ಇತಿಹಾಸದಲ್ಲೇ ಸನಾತನವಾದ ಈ ಸಂಸ್ಕೃತಿಯು ಕತ್ತಿಯನ್ನು ಕೊಂಡೊಯ್ದು ಕಾಲಿಟ್ಟ ಕಡೆಯೆಲ್ಲೆಲ್ಲಾ ಆ ಭೂಮಿಯನ್ನು ಕಬ್ಜ ಮಾಡಿಕೊಂಡು ತಮ್ಮ ಸಂಸ್ಕೃತಿಯನ್ನು ಹೇರುವಲ್ಲಿ ಯಶಸ್ವಿಯಾಗಿದ್ದ ಇಸ್ಲಾಂ ನ ಕ್ರೌರ್ಯಕ್ಕೂ ಬಗ್ಗದೆ, ಚಾಣಾಕ್ಷತನದಿಂದ ದಾಳ ಉರುಳಿಸಿ ಶತ್ರು ಪಡೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ನಿಸ್ಸೀಮರಾಗಿದ್ದ ಕ್ರಿಶ್ಚಿಯಾನಿಟಿಯ ಮೋಸದ ಜಾಲಕ್ಕೂ ಕುಗ್ಗದೆ ಇಂದಿಗೂ ಗಟ್ಟಿಯಾಗಿ ಬೇರು ಬಿಟ್ಟಿರುವ ಸತ್ವಯುತ ಸಂಸ್ಕೃತಿ' ಎಂದು ಬರೆಯಬೇಕಾಗುತ್ತದೆ. ಆದರೆ ಪರ ರಾಷ್ಟ್ರಗಳ ಮ್ಲೇಚ್ಛರ ಪಾಲಾಗಿ ಹೋದ ನಮ್ಮ ರಾಷ್ಟ್ರದ ರಾಜಕೀಯ ದಾಳವು ನಮ್ಮ ಸಾಂಸ್ಕೃತಿಕ ಅಸ್ತಿತ್ವದ ಹಾವು-ಏಣಿ ಆಟವನ್ನಾಡಿಸಿ, ನಮ್ಮ ಸಭ್ಯ ಸಂಸ್ಕೃತಿಯನ್ನು ಕಟ್ಟರತೆ (ಮತಾಂಧತೆ)ಯೆಂಬ ಹಾವಿನಿಂದ ಕಚ್ಚಿಸಿ ಕೊಲೆ ಮಾಡಲು ಪ್ರಯತ್ನಿಸಿತು. ಆದರೆ ಸನಾತನ ಧರ್ಮದ ಅಂತಃಸತ್ವವೆಂಬ ಏಣಿಯು ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ನಮ್ಮನ್ನು ರಕ್ಷಿಸಿತು.

ಅನ್ಯರಾಷ್ಟ್ರಗಳ ಸ್ಥಿತಿ-ಗತಿಗಳನ್ನು ಅರ್ಥೈಸಿಕೊಳ್ಳದೆ ನಾವು ಬಾವಿಕಪ್ಪೆಗಳಂತಾಗಿದ್ದು, ಧರ್ಮದಲ್ಲಿ ಅಂಧಶ್ರದ್ಧೆ ತಾಳಿ ಮೂಢನಂಬಿಕೆಗಳನ್ನು ಆಚರಿಸ ತೊಡಗಿದ್ದು, ದೇವರಂತೆ ರಕ್ಷಕನಾಗಿದ್ದ ರಾಜನಿಗೆ ದ್ರೋಹವೆಸಗಿ ಕೆಲವರು ದೇಶದ್ರೋಹಿಗಳಾಗಿದ್ದು ನಿಜ. ಆದರೆ ಈ ನಕಾರಾತ್ಮಕತೆಗಳನ್ನೆಲ್ಲಾ ಮೆಟ್ಟಿ ಈ ಮಾತೃಭೂಮಿಯನ್ನು ರಕ್ಷಿಸಿದ್ದು ಅಸಂಖ್ಯಾತ ದೇಶಭಕ್ತ ಬಲಿದಾನವೀರರು. ಈ ಹಿಂದಿನ ಸಾವಿರ ವರ್ಷಗಳಲ್ಲಿ ನಮ್ಮ ದೇಶವು ಇಷ್ಟೆಲ್ಲಾ ಸಂಕಷ್ಟಗಳನ್ನು ಅನುಭವಿಸಲು ಕಾರಣ ರಾಜಕೀಯ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇನಾ? ಹಾಗಾದರೆ ರಾಜಕೀಯ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ತಿಳಿಯಲಾರದಷ್ಟು ನಾವು ಮೂರ್ಖರಾಗಿದ್ದೆವಾ? ಇದಕ್ಕೆ ಉತ್ತರ ಕಂಡುಕೊಳ್ಳಬೇಕೆಂದರೆ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಬೇಕು. ನಮ್ಮ ರಾಷ್ಟ್ರದಲ್ಲಿ ನಮ್ಮ ಹಿಂದೂ ಸಂಸ್ಕೃತಿಯ ರಾಜರದ್ದೇ ಆಳ್ವಿಕೆಯಿದ್ದಾಗ ರಾಜಕೀಯದ ಯುದ್ಧಗಳು ನಡೆಯುತ್ತಿದ್ದರೂ ಅದು ಜನಸಾಮಾನ್ಯರ ಬದುಕಿನ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿರಲಿಲ್ಲ. ಇನ್ನೂ ನೇರವಾಗಿ ಹೇಳಬೇಕೆಂದರೆ ಯುದ್ಧದಲ್ಲಿ ಗೆದ್ದ ರಾಜನ ಕಡೆಯವರು ಸೋತ ರಾಜನ ರಾಜ್ಯದ ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರಲಿಲ್ಲ, ಅಲ್ಲಿನ ಯಾವುದೇ ಹೆಣ್ಣು ಮಕ್ಕಳ ಮಾನಭಂಗ ಮಾಡುತ್ತಿರಲಿಲ್ಲ. ಅದು ಈ ಪವಿತ್ರ ಭೂಮಿಯ ರಾಜರ ಸಂಸ್ಕಾರ. ಆದರೆ ಯಾವಾಗ ಅರಬ್ಬರು ಶತಮಾನಗಳ ಕಾಲ ದಾಳಿ ಮಾಡಿ ಕೊನೆಗೂ ಭಾರತದ ಪ್ರದೇಶಗಳ ಮೇಲೆ ತಮ್ಮ ರಾಜ್ಯಭಾರ ಸ್ಥಾಪಿಸಿದರೊ ಅಂದಿನಿಂದ ಜನಸಾಮಾನ್ಯರ ಬಾಳಲ್ಲಿ ಭಯಂಕರದ ಭೀಕರತೆಗಳು ಆರಂಭವಾದವು. 

ಸಭ್ಯ ಸಂಸ್ಕಾರದ ಸತ್ವಯುತ ಧರ್ಮವನ್ನೇ ಉಚ್ಛ ಸ್ತರದಲ್ಲಿರಿಸಿ, ಕ್ಷಾತ್ರ ತೇಜಸ್ಸಿನ ಆಪತ್ ಧರ್ಮದಿಂದ ದೂರ ಉಳಿಯುವಂತಾಗಿದ್ದ ಜನಸಾಮಾನ್ಯರ ರಾಜಕೀಯ ಸ್ವಾತಂತ್ರ್ಯದ ಬಗೆಗಿನ ನಿರ್ಲಕ್ಷ್ಯದ ತಮಸ್ಸು ಮ್ಲೇಚ್ಛರ ರಕ್ತ ಪಿಪಾಸು ಮನಸ್ಥಿತಿಯ ಮತಾಂಧತೆಯ ಖಡ್ಗವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಇದನ್ನು ನಿಮಗೆ ಸ್ಪಷ್ಟವಾದ ಒಂದು ಉದಾಹರಣೆ ಮೂಲಕ ಅರ್ಥೈಸುತ್ತೇನೆ. 1757ರ ಪ್ಲಾಸಿ ಕದನದಲ್ಲಿ ಸಿರಾಜುದ್ದೌಲನ ಸೇನಾಧಿಪತಿ ಮೀರ್ ಜಾಫರ್ ನ ದ್ರೋಹದಿಂದಾಗಿ ಬ್ರಿಟಿಷರು ವಿಜಯಿಯಾಗಿ ಅವರ ಸೈನ್ಯವನ್ನು ಮೆರವಣಿಗೆಯ ಮೂಲಕ ಕರೆದೊಯ್ಯುತ್ತಿದ್ದಾಗ ಆ ಮಾರ್ಗದಲ್ಲಿದ್ದ ನಮ್ಮ ಭಾರತೀಯರು ಅಂದು ಆಶ್ಚರ್ಯಚಕಿತರಾಗಿ ಏನು ನಡೆಯುತ್ತಿದೆ ಎಂದು ವಿಶ್ಲೇಷಿಸುವ ಮನಃಸ್ಥಿತಿಯಲ್ಲಿರದೆ ರಾಜಕೀಯ ಜ್ಞಾನವನ್ನು ಹೊಂದಿದವರಾಗಿ ಕದನಕ್ಕಿಳಿದಿದ್ದರೆ, ಕನಿಷ್ಟಪಕ್ಷ ಆ ಸೈನ್ಯದ ಮೇಲೆ ಕಲ್ಲು ಎಸೆದಿದ್ದರೂ ಅಲ್ಲಿಂದ ಮುಂದುವರೆಯುವ ದುಸ್ಸಾಹಸವನ್ನು ಅವರು ಮಾಡುತ್ತಿರಲಿಲ್ಲ. ಹೀಗೆಂದು ಸ್ವತಃ ನಾನು ಬರೆಯುತ್ತಿಲ್ಲ, ಬ್ರಿಟಿಷ್ ಇತಿಹಾಸಕಾರರು ಬರೆದಿದ್ದಾರೆ. ಇದು ಕೇವಲ ಒಂದು ಉದಾಹರಣೆ. ಯಾವಾಗಲೆಲ್ಲಾ ಯುದ್ಧದಲ್ಲಿ ರಾಜರು ಹತರಾಗುತ್ತಿದ್ದರೊ ಆವಾಗಲೆಲ್ಲಾ ಸಿಪಾಯಿಗಳು
ಅತಂತ್ರರಾಗಿ ಗೆಲ್ಲುವಂತಹ ಯುದ್ಧದಲ್ಲಿ ಸೋಲನ್ನನುಭವಿಸಿದಂತಹ ಅನೇಕ ಉದಾಹರಣೆಗಳಿವೆ‌. ಸಿಪಾಯಿಗಳೇ ಹೀಗಾಗಿದ್ದರು ಎಂದ ಮೇಲೆ ಇನ್ನು ಜನ ಸಾಮಾನ್ಯರು ಯಾವ ಸ್ಥಿತಿಯಲ್ಲಿದ್ದರು ಎಂಬುದನ್ನು ಪ್ರಮುಖವಾಗಿ ವಿಶ್ಲೇಷಿಸಬೇಕಿದೆ. ಯಾರು ಸಿರ್ ದಾರರೋ ಅವರೇ ಸರ್ ದಾರರು ಎಂಬ ಮಾತಿದೆ. ಇಂತಹ ಸಿರ್ ದಾರರ ಪ್ರಮಾಣ ಕ್ರಮೇಣ ಗಣನೀಯವಾಗಿ ಕಡಿಮೆಯಾಗಿದ್ದು ಕೂಡ ನಮ್ಮ ರಾಜಕೀಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಕಾರಣವಾಯಿತು ಎನ್ನಬಹುದು. 

ಯಾರೆಲ್ಲಾ ಮಹಾಮಹಿಮರು ಈ ದೇಶದಲ್ಲಿ ಜನ್ಮ ತಾಳಿದರೊ ಅವರೆಲ್ಲರೂ ಭಾರತದ ಜವಾಬ್ದಾರಿಯುತ ಪ್ರಜೆಗಳಾದ ನಾವು ನಮ್ಮ ಸನಾತನ ಸಂಸ್ಕೃತಿಯ ರಕ್ಷಣೆ ಅಥವಾ ಧರ್ಮ ರಕ್ಷಣೆ ಮಾಡುವುದರ ಮೂಲಕ ಇಡೀ ವಿಶ್ವದ ಮಾನವ ಜನಾಂಗದ ಕಲ್ಯಾಣವನ್ನು ಮಾಡಬೇಕಿದೆ ಹಾಗೂ ವಿಶ್ವದ ಜನರ ಸಂಕಟ ವಿಮೋಚನೆ ಮಾಡಬೇಕಿದೆ ಎಂದು ಬೋಧಿಸಿದ್ದಾರೆ. ಇಂತಹ ಮೇರು ಕಾರ್ಯ ಧರ್ಮ ರಕ್ಷಣೆ ಪ್ರಸ್ತುತವಾಗಿ ಮುಂದುವರಿಯುತ್ತಿರಬೇಕೆಂದರೆ ರಾಜಕೀಯ ಸ್ವಾತಂತ್ರ್ಯವು ಅತ್ಯಂತ ಅವಶ್ಯಕ ಅಥವಾ ಧರ್ಮ ರಕ್ಷಣೆಗೆ ರಾಜಕೀಯ ಸ್ವಾತಂತ್ರ್ಯವು ಪೂರಕವಾಗಿರಬೇಕಾದ ವ್ಯವಸ್ಥೆ. ಆದ್ದರಿಂದಲೇ ಸಿಂಹಸದೃಶ ಸಂತ ಸ್ವಾಮಿ ವಿವೇಕಾನಂದರ ಭಾರತದ ಸ್ವಾತಂತ್ರ್ಯದ ಬಗೆಗಿನ ಕೆಚ್ಚೆದೆಯ ನುಡಿಗಳು ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿದ್ದು. ಆಂತೆಯೇ ನೇತಾಜಿ, ಸಾವರ್ಕರ್ ಅವರಂತಹ ಆಧ್ಯಾತ್ಮಿಕ ಜ್ಞಾನಿಗಳು ರಾಜಕೀಯ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದ್ದು. ಇಷ್ಟೆಲ್ಲಾ ಆಳವಾಗಿ ಇತಿಹಾಸದ ಚರಿತ್ರೆಯನ್ನು ಕೆದಕಿ ಕೆದಕಿ ನಿಮ್ಮ ಮುಂದಿರಿಸಲು ಕಾರಣ ಮುಂದೆ ಬರಲಿರುವ ಭಾರತದ ಇತಿಹಾಸದಲ್ಲೆಂದೂ ನಡೆದಿರದ ಬೃಹತ್ತಾದ, ಮಹತ್ತರವಾದ, ಸವಾಲುಮಯವಾದ, ಅಮೋಘವಾದ 2024ರ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಲೋಕಸಭಾ ಚುನಾವಣೆ. 2014, 2019ರ ಚುನಾವಣೆಗಳಲ್ಲಿ ಐತಿಹಾಸಿಕ ಪ್ರಮಾದವಾದ ಜನಸಾಮಾನ್ಯರ ರಾಜಕೀಯ ಸ್ವಾತಂತ್ರ್ಯದ ನಿರ್ಲಕ್ಷ್ಯಕ್ಕೆ ವಿರುದ್ಧವಾಗಿ ದೇಶ ಭಕ್ತ ಜನಸಾಮಾನ್ಯರೇ ಬೀದಿಗಿಳಿದು ಚುನಾವಣಾ ರಣರಂಗದಲ್ಲಿ ಸ್ವಾರ್ಥ ರಾಜಕಾರಣಿಗಳ ಮಕ್ಕಳನ್ನು ಪರಾಭವಗೊಳಿಸಿ ದೇಶದ ನಿಜವಾದ ಮಕ್ಕಳನ್ನು ಗೆಲ್ಲಿಸಿದರು. ಕಳೆದ ಸಾವಿರ ವರ್ಷಗಳ ಗುಲಾಮಗಿರಿಯ ನಂತರ, ಕಳೆದ ಸ್ವಾತಂತ್ರ್ಯಾನಂತರದ ಕಪ್ಪು ಬ್ರಿಟಷರ (ಬ್ರಿಟಿಷ್ ಮಾನಸಿಕತೆಯ ಭಾರತೀಯರು) ಆಡಳಿತದ ನಂತರ ಆದರಣೀಯ ಶ್ರೀ ನರೇಂದ್ರ ಮೋದಿ ಎಂಬ ಭಾರತೀಯ ಸಂಸ್ಕೃತಿಯನ್ನು ಆರಾಧಿಸುವ ಅಪ್ರತಿಮ ದೇಶಭಕ್ತ, ಧೈರ್ಯವಂತ, ಸೌಜನ್ಯವಂತ ಪ್ರಧಾನಿಗಳು ದೊರೆತಿದ್ದಾರೆ. ಇವರು ಮಾಡಿರುವ ಅಸಂಭವ ಪ್ರತೀತ ಕಾರ್ಯಗಳಿಗೆ 2024ರ ಚುನಾವಣೆಗೆ ಹಿಂದೆಂದಿಗಿಂತಲೂ ಅಧಿಕವಾಗಿ ಜನ ಸಮೂಹವು ಅವರಿಗಾಗಿ ಹೋರಾಡೇ ತೀರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಗಳು ನಾವು ಸಾವಧಾನದಿಂದಿರಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುತ್ತಿವೆ. ಇತ್ತೀಚೆಗೆ ನಮ್ಮ ದೇಶದಲ್ಲಿ ಧರ್ಮ ಸಂಘರ್ಷಗಳು ಹೆಚ್ಚಾಗುತ್ತಿವೆ. ಕಾಶಿಯ ಜ್ಞಾನವ್ಯಾಪಿ ಸಂಘರ್ಷ, ತಾಜ್ ಮಹಲ್, ಕುತುಬ್ ಮಿನಾರ್ ಗಳ ವಿವಾದದಿಂದ ಹಿಡಿದು ನಮ್ಮ ಕರ್ನಾಟಕದಲ್ಲಿ ಹಿಜಾಬ್ ಸಂಘರ್ಷ, ಹಲಾಲ್ ಬ್ಯಾನ್,
ದೇಗುಲಗಳ ಬಳಿ ಆ ದೇವರನ್ನೇ ಗೌರವಿಸದೆ ವ್ಯಾಪಾರ ಲಾಭ ಪಡೆಯುವವರ ನಿಷೇಧ, ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಕಲಹ, ಮಂಗಳೂರಿನ ಮಳಲಿ ಮಸೀದಿ ಕಲಹ ಹೀಗೆ ಎಗ್ಗಿಲ್ಲದೆ ಈ ಹೋರಾಟಗಳು ನಡೆಯುತ್ತಿವೆ. ನಮ್ಮ ರಾಜ್ಯದಲ್ಲಾದ ಹರ್ಷ ಎಂಬ ಹಿಂದೂ ಯುವಕನ ಭೀಕರ ಹತ್ಯೆ, ಹಾಗೆಯೇ ಭಾಜಪಾದ ಮಾಜಿ ವಕ್ತಾರೆ ನುಪುರ್ ಶರ್ಮಾ ಅವರು ಮೊಹಮ್ಮದ್ ಪೈಗಂಬರ್ ಅವರ ಬಗೆಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಬರುತ್ತಿರುವ ಅಮಾನವೀಯ ಪ್ರತಿಕ್ರಿಯೆಗಳು ಜೊತೆಗೆ ಈ ಪರಿಸ್ಥಿತಿಯ ಉಲ್ಬಣದೊಂದಿಗೆ ಐಸಿಸ್ ನ ಮಾದರಿಯಲ್ಲಿ ರಾಜಸ್ಥಾನದ ಮುಸಲ್ಮಾನರಿಂದ ಆಗಿರುವ ಕನ್ಹಯ್ಯ ಲಾಲ್ ಎನ್ನುವವರ ನಿರ್ದಯ ಹತ್ಯೆ ಇಂತಹ ರಾಕ್ಷಸೀ ಕೃತ್ಯಗಳು ಭವಿಷ್ಯದ ಅಪಾಯಕಾರಿ ಸೂಚಕಗಳಾಗಿವೆ.
ಒಂದೆಡೆ ಜಾಗೃತಗೊಂಡ ಹಿಂದೂಗಳ ಆತ್ಮಗೌರವ ಸಂಘರ್ಷದ ಧ್ವನಿ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಬುದ್ಧಿಜೀವಿಗಳ, ಮತಾಂಧರ ಆತ್ಮವಿಸ್ಮೃತಿಯ ಅಜ್ಞಾನ+ಅಸಹಿಷ್ಣುತೆಯ ಧ್ವನಿ ಹೆಚ್ಚಾಗುತ್ತಿದೆ. ಈ ಬೆಳವಣಿಗೆಗಳನ್ನು ಪ್ರಪಂಚದ ಮುಂದೆ ತಮಗೆ ಬೇಕಾದ ಹಾಗೆ ಚಿತ್ರಿಸಲು ಹೆಣಗಾಡುತ್ತಿರುವ ಪ್ರಭಾವಶಾಲಿ ಬೌದ್ಧಿಕ ರಾಕ್ಷಸರನ್ನೊಳಗೊಂಡ ಎಲ್ಲಾ ಮೋದಿ ವಿರೋಧಿಗಳು ಇವುಗಳೆಲ್ಲಾ ಮೋದೀಜಿ ಅವರ ವಿರುದ್ಧದ ಅಸ್ತ್ರಗಳಾಗಲಿ ಎಂದು ಬಯಸುತ್ತಿದ್ದಾರೆ. ಹಾಗೆ ಜಗದ್ವಿಖ್ಯಾತರಾಗಿ, ವಿಶ್ವನಾಯಕರಾಗಿ ಬೆಳೆಯುತ್ತಿರುವ ನಮ್ಮ ಮೋದೀಜಿಯವರ ಅಭೂತಪೂರ್ವ ಯಶಸ್ಸನ್ನು ಸಹಿಸದೆ ಪ್ರಪಂಚದ ಮುಂದೆ ಮಾತ್ರ ಅವರಿಗೆ ಗೌರವ ಕೊಡುತ್ತಾ, ಹಿಂದೆ ಶೀತಲಸಮರವನ್ನು ನಡೆಸುತ್ತಿರಬಹುದಾದ ಎರಡು ಮುಖಗಳ ರಾಷ್ಟ್ರಗಳೊಂದಿಗೆ ಸೇರಿ ಅಂತರ್ ರಾಷ್ಟ್ರೀಯ ಷಡ್ಯಂತ್ರವನ್ನು ರೂಪಿಸಿ ಮೋದೀಜಿ ಅವರ ವಿರುದ್ಧ ಹೋರಾಡಲು ಸಿದ್ಧರಾಗುತ್ತಿದ್ದಾರೆ. ಇನ್ನು ಚೀನಾ ಹೇಳಿದಂತೆ ಕುಣಿಯುವ, ನಮ್ಮ ಸೇನೆಯನ್ನು ಅಪಮಾನಿಸಿ ಸೇನಾಕಾರ್ಯಾಚರಣೆಗಳಿಗೆ ಸಾಕ್ಷಿ ಕೇಳುವ, ಕೇಂದ್ರ ಸರ್ಕಾರ ಜಾರಿಗೆ ತರುವ ಎಲ್ಲಾ ಯೋಜನೆಗಳನ್ನು ಕಣ್ಣು ಮುಚ್ಚಿಕೊಂಡು ವಿರೋಧಿಸುವ, ಮೋದೀಜಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ ಕಲ್ಯಾಣಕ್ಕೇ ಅಡ್ಡ ಬರುತ್ತಿರುವ ವಿಪಕ್ಷಗಳಿರುವಾಗ ನಾವೆಲ್ಲಾ ಅತೀವ ಜಾಗರೂಕರಾಗಿರುವುದು ಅತ್ಯಾವಶ್ಯಕ. ಒಂದು ವೇಳೆ ಇಂತಹವರ ಕೈಗಳಿಗೆ ಸಾರ್ವಭೌಮ ಭಾರತದ ಆಡಳಿತ ಚುಕ್ಕಾಣಿ ದೊರೆತರೆ ಇಲ್ಲಿ ಮತ್ತೊಂದು ಸಿರಿಯಾವೋ, ಆಫ್ಘಾನಿಸ್ತಾನವೋ ನಿರ್ಮಾಣವಾಗಿ ಹೋಗುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಮತ್ತೊಂದೆಡೆ ಕಟ್ಟರ್ ಬಲಪಂಥೀಯರು ಇಂತಹ ಸನ್ನಿವೇಶದಲ್ಲಿ ಮೋದೀಜಿ ಅವರ ವಿರೋಧಿಗಳ ಜಾಲದಲ್ಲಿ ಸಿಲುಕಿ, ಧರ್ಮ ಸಂಘರ್ಷಗಳ ವಿಚಾರದಲ್ಲಿ ನೇರ ಹೇಳಿಕೆಗಳನ್ನು ಬೆಂಬಲವನ್ನು ನೀಡದಿರುವ ಪ್ರಧಾನಿಗಳ ವಿರುದ್ಧವೇ ವ್ಯರ್ಥವಾಗಿ ಕೋಪ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶದ ಸೂಕ್ಷ್ಮತೆ, ಗಂಭೀರತೆಗಳನ್ನು ಅರ್ಥೈಸಿಕೊಳ್ಳದೆ ಇವರು ವರ್ತಿಸುತ್ತಿರುವ ಪರಿಯು ಅವಿವೇಕತನದಿಂದ ಕೂಡಿದೆ. ನಮ್ಮವರನ್ನೇ ನಮ್ಮ ವಿರುದ್ಧ ತಿರುಗಿಸಿ ನಮ್ಮನ್ನು ಸೋಲಿಸುವ ತಂತ್ರಗಾರಿಕೆಗೆ ಹಿಂದೂಗಳು ಅದೆಷ್ಟು ಬಾರಿ ಮೋಸ ಹೋಗಿದ್ದಾರೆ, ಮತ್ತೆ ಮೋಸ ಹೋಗಬೇಡಿ ಎಂದಷ್ಟೇ ನಾನು ಎಚ್ಚರಿಸುತ್ತೇನೆ. ದೇಶ, ಧರ್ಮಕ್ಕಾಗಿ ತನ್ನದೆಲ್ಲವನ್ನೂ ತ್ಯಾಗ ಮಾಡಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿರುವ, ತಮ್ಮ ಬದುಕಿನ ಪ್ರತೀ ಹಂತದಲ್ಲೂ ಧರ್ಮವನ್ನು ಪಾಲಿಸಿಕೊಂಡು ಬರುತ್ತಿರುವ ಪ್ರಧಾನಿಗಳಿಗೆ ಧರ್ಮರಕ್ಷಣೆಯ ಕುರಿತು ಭೋದನೆ ಮಾಡುತ್ತೀರಾ!? ಶಿವ ಶಿವಾ! ಈ ಸಮಯ ಪ್ರತಿಯೊಬ್ಬ ಹಿಂದುತ್ವವಾದಿ ಅಥವಾ ದೇಶಭಕ್ತ ರಾಜಕಾರಣ ಮಾಡಬೇಕಾದ ಸಮಯ. ಇಸ್ಲಾಂ, ಕ್ರಿಶ್ಚಿಯಾನಿಟಿಗಳ ವಿಸ್ತಾರವಾದದ ರಾಜಕೀಯ ಅಸ್ತ್ರದಿಂದ ಈ ನೆಲವನ್ನು ಕಾಪಾಡಿ ಭಾರತವನ್ನು ಭಾರತವಾಗಿಯೇ ಉಳಿಸಬೇಕೆಂದರೆ, ಮತ್ತೆಂದೂ ಭಾರತ ಮ್ಲೇಚ್ಛರ ಆಳ್ವಿಕೆಗೆ ಒಳಗಾಗಬಾರದೆಂದರೆ ಹಿಂದುತ್ವವೆಂಬ ಶಕ್ತಿಯುತವಾದ ರಾಜಕೀಯ ಅಸ್ತ್ರವನ್ನೇ ಬಳಸಿ ಪ್ರತಿಯೊಬ್ಬ ದೇಶಭಕ್ತನೂ ರಾಜಕೀಯ ಮಾಡಲೇಬೇಕು. 2024ಕ್ಕೆ ನರೇಂದ್ರಮೋದಿ ಅವರನ್ನೇ ಮರು ಆಯ್ಕೆ ಮಾಡಿ, ಪ್ರಧಾನಿಗಳನ್ನಾಗಿ ಮಾಡಲೇಬೇಕು.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ