ಮೈಸೂರಿನ ರಂಗಾಯಣದ ವಾರಸುದಾರಿಕೆಗೇ ದಿಗ್ಬಂಧನ

ಮೈಸೂರಿನ ರಂಗಾಯಣದ ವಾರಸುದಾರಿಕೆಗೇ ದಿಗ್ಬಂಧನ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವ ಆಚರಣೆಗಳು ನಮ್ಮ ನಾಡಿನ ಸಾಂಸ್ಕೃತಿಕ ಜವಾಬ್ದಾರಿಯನ್ನೇ ವಹಿಸಿಕೊಂಡಂತೆ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಇಲ್ಲಿ ಜರುಗುವ ಕಲಾ ವೈಭವದ ಕಾರ್ಯಕ್ರಮಗಳಲ್ಲಿ ನಾಡ ಹಬ್ಬ ದಸರಾದ ನಂತರದ ಸ್ಥಾನವನ್ನು ಪಡೆದಿರುವುದು ರಂಗಭೂಮಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವೇ ಎನ್ನಬಹುದು. ಈಗಾಗಲೇ ಆರಂಭವಾಗಿ ಕಲಾಭಿಮಾನಿಗಳ ಪುರಸ್ಕಾರಕ್ಕೆ ಪಾತ್ರವಾಗಬೇಕಿದ್ದ ಪ್ರಸಕ್ತ ಸಾಲಿನ ಬಹುರೂಪಿ ಕಾರ್ಯಕ್ರಮವು ತಾತ್ಕಾಲಿಕವಾಗಿ ಸ್ಥಗಿತಗೊಂಡು ವಿವಾದಕ್ಕೀಡಾಗಿದೆ. ಅಸಹಿಷ್ಣುತೆಯೇ ಈ ವಿವಾದದ ಮೂಲ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ಈ ವರ್ಷದ ಬಹುರೂಪಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯ ಅತಿಥಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಹಾಗೂ ಶ್ರೀಮತಿ ಮಾಳವಿಕಾ ಅವಿನಾಶ್ ಅವರನ್ನು ವಿರೋಧಿಸಿಯೇ ಈಗ ಅಲ್ಲಿನ ಬುದ್ಧಿ ಜೀವಿಗಳು ಹೋರಾಟ ಶುರು ಮಾಡಿರುವುದು. ದಶಕ- ದಶಕಗಳ ಕಾಲ ರಂಗಾಯಣದಲ್ಲಿ ತಮ್ಮ ವಿಚಾರಧಾರೆಯನ್ನು ಪ್ರತಿಪಾದಿಸುತ್ತಾ ಬಂದಿರುವ ಬುದ್ಧಿಜೀವಿಗಳು ಅಥವಾ ಎಡಪಂಥೀಯರು ದೇಶವು ಜಾಗೃತಗೊಂಡು ಪುಟಿದೇಳುತ್ತಿರುವ ಈ ಕಾಲದಲ್ಲೂ ಮತ್ತೆ ಹಿಂದಿನಂತೆ ರಂಗಾಯಣವು ತಮ್ಮ ಕಪಿಮುಷ್ಟಿಯಲ್ಲೇ ಭದ್ರವಾಗಿರಬೇಕೆಂದು ಆಶಿಸುತ್ತಿದ್ದಾರೆ. ದಶಕಗಳ ಕಾಲ ಈ ದೇಶದ ಪ್ರಜೆಗಳ ಮೇಲೆ ಮಾನಸಿಕವಾಗಿ ವೈಚಾರಿಕ ದಾಳಿ ನಡೆಸಿ, ಈ ಪುಣ್ಯಭೂಮಿಯ ಮೂಲ ಸಂಸ್ಕೃತಿಯನ್ನೇ ವಿಸ್ಮೃತಿ ಮಾಡಿಸಲು ಸಕಲ ರೀತಿಗಳಲ್ಲೂ ಪ್ರಯತ್ನಿಸಿದ ಇವರ ಚಿಂತನೆ- ಬರಹಗಳು ಜಾಗೃತಗೊಂಡಿರುವ ಸಮಾಜದ ಎದುರು ತನ್ನ ವೈಫಲ್ಯವನ್ನು ಕಾಣುತ್ತಿದೆ. ತ್ಯಾಗ, ಧರ್ಮ, ಶ್ರದ್ಧೆ, ನೈತಿಕತೆ, ದೇಶಭಕ್ತಿ, ಆದರ್ಶ, ಆಧ್ಯಾತ್ಮಗಳನ್ನೇ ತನ್ನ ಆಧಾರವಾಗಿರಿಸಿಕೊಂಡು ನಿರ್ಮಾಣವಾದ ಭಾರತ ಭೂಮಿಯು ತನ್ನ ಗತವೈಭವವನ್ನು ಮರುಕಾಣುವತ್ತ ಸಾಗಿದೆ. ಇದೇ ಇವರೆಲ್ಲರ ಆತಂಕ, ದುಃಖ, ಯೋಚನೆ, ಪ್ರತಿಭಟನೆಗಳಿಗೆ ಕಾರಣವಾಗಿದೆ. ತಮ್ಮ ವೈರಿಗಳ ತಪ್ಪನ್ನು ಕಂಡುಹಿಡಿಯುವುದು ಅಸಂಭವ ಪ್ರತೀತವಾದಾಗ ತಮಗೆ ತಾವೇ ಕಲ್ಪನಾತೀತವಾಗಿ ತಪ್ಪುಗಳನ್ನು ಸೃಷ್ಟಿಸಿ ಅವರ ಮೇಲೆ ಆಪಾದನೆ ಮಾಡುವ ಜಾಣಕುರುಡು ಕಾರ್ಯದಲ್ಲಿ ಶೇ.100ಕ್ಕೆ 100ರಷ್ಟು ಪ್ರಯತ್ನಶೀಲರಾಗಿದ್ದಾರೆ. ಏಕೆಂದರೆ ಇದಕ್ಕಿಂತ ಸುಲಭವಾದ ಉದ್ಯೋಗವನ್ನು ಹೇಗೆ ಹುಡುಕುವುದು ಹೇಳಿ? ಇವರ ವಿಚಾರಗಳು ಹೀಗೆ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಾ ಹೋದರೆ ಇವರೆಲ್ಲಾ ಮತ್ತೆ ನಿರುದ್ಯೋಗಿಗಳಾಗಬೇಕಾಗುತ್ತದೆ ಅಲ್ಲವೆ!? ವೈಚಾರಿಕತೆಯ ವಿರೋಧಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಖವಾಡ ಹಿಡಿದು ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಅಸ್ತ್ರವನ್ನು ಪ್ರಯೋಗಿಸುವ ಇವರು ತಮ್ಮನ್ನು ಹೊರತುಪಡಿಸಿ ಬೇರೆ ಯಾರಾದರೂ ಈ ಅಸ್ತ್ರವನ್ನು ಬಳಸಿದರೆ ಸಹಿಸುವುದಿಲ್ಲ. ಇದರಲ್ಲೂ ತಮಗೆ ಮಾತ್ರ ಮೀಸಲಾತಿ ಇರುವಂತೆ ನಡೆದುಕೊಳ್ಳುತ್ತಾರೆ.

ಇಷ್ಟೆಲ್ಲಾ ಪೀಠಿಕೆಯನ್ನು ಹಾಕಿದ್ದು ಇದೀಗ ವಿವಾದಕ್ಕೀಡಾಗಿರುವ ಸಂಗತಿಯ ಹಿಂದಿನ ದೊಡ್ಡ ಇತಿಹಾಸವನ್ನು ನಿಮಗೆ ತಿಳಿಯಪಡಿಸಲು. ಯಾವಾಗ ಆರ್.ಎಸ್.ಎಸ್ ಹಿನ್ನೆಲೆಯ ಅಡ್ಡಂಡ ಸಿ. ಕಾರ್ಯಪ್ಪ ಅವರು ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡರೊ ಅಂದಿನಿಂದ ಅವರ ವಿರೋಧವನ್ನು ಮಾಡುತ್ತಲೇ ಬಂದಿದ್ದಾರೆ ಈ ಬುದ್ಧಿಜೀವಿಗಳು. ಕಾರ್ಯಪ್ಪ ಅವರು ನಿರ್ದೇಶಕರಾಗಿ ನೇಮಕಗೊಂಡ ನಂತರ ಮಾಡಿಸಿದ ಟಿಪ್ಪು ಸುಲ್ತಾನ್ ಬಗೆಗಿನ ನಾಟಕವನ್ನು ಮುಂದಿಟ್ಟುಕೊಂಡು ಈ ಗುಂಪು ಗಲಾಟೆ ನಡೆಸಿತ್ತು. ನಂತರ ಇತ್ತೀಚೆಗೆ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದ ಪರ್ವ ಕಾದಂಬರಿ ಆಧಾರಿತ ನಾಟಕಕ್ಕೂ ವಿರೋಧ ವ್ಯಕ್ತಪಡಿಸಿದ್ದರು. ಏನೇ ಹೇಳಿ ಎಷ್ಟೇ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ವ್ಯಕ್ತಿಗಳು ಅವರ ಜ್ಞಾನ, ಪ್ರತಿಭೆಗಳನ್ನು ಸಮ್ಮಾನಿಸುವುದು ಮಾನವೀಯತೆಯ ಪ್ರಮುಖ ಲಕ್ಷಣ. ಆದರೆ 'ಸರಸ್ವತಿ ಸನ್ಮಾನ್' ಬಿರುದಾಂಕಿತರಾದ ಇಂದಿನ ಕಾಲದ ಶ್ರೇಷ್ಠ ಹಾಗೂ ಪ್ರಸಿದ್ಧ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪ ಅವರು ದೀರ್ಘ ಕಾಲದಿಂದ ಮೈಸೂರಿನಲ್ಲೇ ಇದ್ದರೂ ವಿಚಾರಧಾರೆಯ ಕಾರಣಕ್ಕಾಗಿ ರಂಗಭೂಮಿಗೆ ಕರೆಸದೆ ಅವಮಾನಿಸಿದ್ದು ಎಂತಹ ದುರಾದೃಷ್ಟಕರ ಸಂಗತಿ! ಹೌದು, ಕಾರ್ಯಪ್ಪನವರು ನಿರ್ದೇಶಕರಾದ ಮೇಲೆಯೇ ಅವರನ್ನು ಕರೆಸಿ ಗೌರವಿಸಿದ್ದು.

ಇದೀಗ ಮತ್ತೆ ಇವರೆಲ್ಲಾ ಇಂತಹ ವೈಚಾರಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಈ ಸಾಲಿನ ಬಹುರೂಪಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿತರಾಗಿರುವ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕಾ ಅವಿನಾಶ್ ಅವರ ಆಗಮನವನ್ನು ವಿರೋಧಿಸುತ್ತಿರುವುದು. ಈ ಕಾರ್ಯಕ್ರಮಕ್ಕೆ 'ತಾಯಿ' ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ನೆಲ, ಜಲ, ಪ್ರಕೃತಿ, ಭಾಷೆ, ರಾಜ್ಯ ಎಂಬ ವಿಷಯಗಳ ಆಧಾರದ ಮೇಲೆ ರಾಷ್ಟ್ರೀಯತೆಯ ಚಿಂತನೆಗಳನ್ನು ಅಳವಡಿಸುವ ನಿಟ್ಟಿನಲ್ಲಿ ಈ ನಾಟಕೋತ್ಸವವನ್ನು ಆಯೋಜಿಸಲಾಗುತ್ತಿದೆ. ಆದ್ದರಿಂದ ಕೋವಿಡ್ ಸಂದರ್ಭದಲ್ಲಿ ಸುಮಾರು ಒಂದೂವರೆ ಲಕ್ಷ ಜನಕ್ಕೆ ಮಾತೃ ವಾತ್ಸಲ್ಯದಿಂದ ಊಟವನ್ನು ಒದಗಿಸಿಕೊಟ್ಟ ಮಾಳವಿಕಾ ಅವಿನಾಶ್ ಮತ್ತು ಈ ನಾಡಿನ ನೆಲ, ಜಲ, ಭಾಷೆಯ ಉದ್ಧಾರಕ್ಕಾಗಿ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ತಂಡಗಳನ್ನು ಕಟ್ಟಿಕೊಂಡು ರಾಜ್ಯದ ಸುಮಾರು 10 ನದಿಗಳು- 250ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತಾ ಕಾರ್ಯ, ಕೋವಿಡ್ ಸಂದರ್ಭದಲ್ಲಿ ಸುಮಾರು 20000 ಖಾಸಗಿ ಶಿಕ್ಷಕರಿಗೆ ದಿನಸಿ ಪದಾರ್ಥ ಪೂರೈಕೆ, ಸರ್ಕಾರಿ ಶಾಲೆಗಳ ಪುನರುಜ್ಜೀವನ, ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನಗಳ ಜೀರ್ಣೋದ್ಧಾರ, ಪ್ರವಾಹದ ಪರಿಸ್ಥಿತಿಯಲ್ಲಿ ಸೃಜನಾತ್ಮಕ ಕಾರ್ಯಪ್ರವೃತ್ತತೆ, ಯುವಜನತೆಗೆ ನಿರಂತರವಾದ ದೇಶಭಕ್ತಿಯ ಚಿಂತನೆಗಳನ್ನು ಬಿತ್ತಲು ಹಲವಾರು ಭಾಷಣ- ಚರ್ಚೆಗಳು ಹೀಗೆ ಸಮಾಜಮುಖಿಯಾಗಿ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. 'ಚಕ್ರವರ್ತಿ ಅವರನ್ನು ರೈಟ್ ವಿಂಗ್ ಎಂತಲೋ ದೊಡ್ಡ ವಾಗ್ಮಿ ಎಂತಲೋ ಕರೆಸುತ್ತಿಲ್ಲ, ಹಾಗೆಯೇ ಕೆಲವರು ಅಪಪ್ರಚಾರ ಮಾಡಲಾಗುತ್ತಿರುವಂತೆ ಅವರನ್ನು ಬಹುರೂಪಿ ಸಮಾರೋಪದ ಅಧ್ಯಕ್ಷತೆಗೆ ಆಹ್ವಾನಿಸಿಲ್ಲ' ಎಂದು ಕಾರ್ಯಪ್ಪನವರು ತಿಳಿಸಿದ್ದಾರೆ. ಈ ಕ್ಷಣಕ್ಕೆ ಹಾಗೇ ಸುಮ್ಮನೆ ಕಾರ್ಯಪ್ಪ ಅವರು ಚಕ್ರವರ್ತಿ ಅವರನ್ನು ರೈಟ್ ವಿಂಗ್ ಅಥವಾ ರಾಷ್ಟ್ರೀಯತೆ- ಹಿಂದುತ್ವದ ಪ್ರತಿಪಾದಕ ಎಂದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಕಲ್ಪಿಸಿಕೊಳ್ಳಿ. ಹಾಗಿದ್ದರೂ ಸಹ ಇದನ್ನು ಪ್ರಶ್ನಿಸುವ ನೈತಿಕತೆಯನ್ನು ಬುದ್ಧಿಜೀವಿಗಳು ಉಳಿಸಿಕೊಂಡಿದ್ದಾರೆಯೇ? ಯಾರು ತಾನು ಒಬ್ಬ 'ಅರ್ಬನ್ ನಕ್ಸಲ್' ಎಂದು ಬೋರ್ಡ್ ಹಾಕಿಕೊಂಡು ಪ್ರದರ್ಶಿಸಿದರೊ ಅಂತಹ ಗಿರಿಶ್ ಕಾರ್ನಾಡ್ ಅವರನ್ನೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಇವರನ್ನು ಕರೆಸಿದ್ದರು ಎಂದ ಮೇಲೆ ಇದನ್ನು ವಿರೋಧಿಸಲು ಹೇಗೆ ಸಾಧ್ಯ? 

ಕೇವಲ ಗಿರೀಶ್ ಕಾರ್ನಾಡ್ ಒಬ್ಬರೇ ಅಲ್ಲ. ಕಾರ್ಯಪ್ಪನವರಿಗಿಂತ ಮೊದಲು ರಂಗಭೂಮಿಯ ನಿರ್ದೇಶಕರಾಗಿದ್ದ ಜನ್ನಿ ಜನಾರ್ಧನ್ ಮತ್ತವರ ಸಂಗಡಿಗರು, ಜೊತೆಗೆ ಹಿಂದಿನ ಬಹುತೇಕ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಕರೆಸಿದ್ದ ಎಲ್ಲಾ ಅತಿಥಿಗಳು ಅವರ ವಿಚಾರಧಾರೆಯ ವ್ಯಕ್ತಿಗಳೇ. ಆ ಕೆಲವು ಅತಿಥಿಗಳ ಹೆಸರು ಹೀಗಿವೆ: ಶ್ರೀ ದೇವು ಪತ್ತಾರ, ಸಯ್ಯದ್ ರೌಪ್ ಖಾದ್ರಿ, ಎನ್.ಸುಮತಿ, ಡಾ.ಸಿ. ಬಸವರಾಜ್, ಡಾ. ಅಬ್ದುಲ್ ಹಮೀದ್ ಇತ್ಯಾದಿ. ಇನ್ನು ಮಾಳವಿಕಾ ಅವಿನಾಶ್ ಅವರು ಒಂದು ರಾಜಕೀಯ ಪಕ್ಷದ ವಕ್ತಾರೆ ಎಂದು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ಈ ಹಿಂದೆಯೂ ಅನೇಕ ರಾಜಕೀಯ ವ್ಯಕ್ತಿಗಳು ಇಲ್ಲಿ ಅತಿಥಿಗಳಾಗಿ ಭಾಗವಹಿಸಿರುವುದನ್ನು ನಾವು ಕಾಣಬಹುದು (ಉದಾ: ಉಮಾಶ್ರೀ). 

ತಾವು ಯಾವ ತಪ್ಪು ಮಾಡದಿದ್ದರೂ ವೈಚಾರಿಕತೆಯ ಕಾರಣದಿಂದಾಗಿ ನಿರಂತರ ವೈಯಕ್ತಿಕ ಆಕ್ರಮಣಕ್ಕೆ ಗುರಿಯಾಗಿರುವ ಕಾರ್ಯಪ್ಪ ಅವರು "ಯೋಧ ಪರಂಪರೆಯ ಕೊಡಗು ಜಿಲ್ಲೆಯವನಾದ ನಾನು ಯಾರಿಗೂ ಹೆದರುವುದಿಲ್ಲ. ಬಿಜೆಪಿ ಸರ್ಕಾರದಿಂದ ನೇಮಕವಾದವನು, ಆರ್.ಎಸ್.ಎಸ್ ಹಿನ್ನೆಲೆಯುಳ್ಳವನು ಎಂದು ಕೆಲವರಿಗೆ ಕಿರಿಕಿರಿಯಾಗಿದೆ. ಅವರಿಗೆ ಲಸಿಕೆ ಕಂಡು ಹಿಡಿಯುತ್ತೇವೆ. ರಂಗಭೂಮಿಯಲ್ಲಿ ಎಡ-ಬಲ ಎಂಬುದಿಲ್ಲ. ಆಹ್ವಾನಿಸಿರುವ ಅತಿಥಿಗಳನ್ನು ಯಾವ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ" ಎಂದು ತಮ್ಮ ದಿಟ್ಟ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಆದ್ದರಿಂದ ಈ ಕಾಠಿಣ್ಯದ ಸವಾಲಿನ ಸಂದರ್ಭದಲ್ಲಿ ನಾವೆಲ್ಲರೂ ಅವರೊಂದಿಗೆ ಧೃಡವಾಗಿ ನಿಲ್ಲೋಣ. ಬಹುರೂಪಿ ಕಾರ್ಯಕ್ರಮವು ಶೀಘ್ರವೇ ಆರಂಭವಾಗಲು ಸಂಪೂರ್ಣ ಸಹಕಾರ ನೀಡೋಣ.

ಪ್ರಗತಿಪರರು ಎಂದು ಹೇಳಿಕೊಳ್ಳುವ ಈ ವ್ಯಕ್ತಿಗಳು ಪ್ರಗತಿಯನ್ನು ನಿಲ್ಲಿಸಿರುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂದ್ರಿಯ ಭೋಗಗಳನ್ನೇ ಅಥವಾ ಭೌತಿಕ ಪ್ರಪಂಚದ ಸುಖವನ್ನೇ ತಮ್ಮ ಗುರಿಯಾಗಿಟ್ಟುಕೊಂಡಿರುವ ಪಾಶ್ಚಿಮಾತ್ಯರು ಸ್ವಾತಂತ್ರ್ಯದ ಮುಖಪುಟವನ್ನು ಮುಂದಿರಿಸಿ ತಮ್ಮ ಸ್ವ-ಹಿತಾಸಕ್ತಿಗಳ ಸಾಧನೆಗಾಗಿ ಕಂಡು ಕೊಂಡ ಚಿಂತನೆಗಳನ್ನು ರಕ್ತಗತವಾಗಿಯೇ ನಮ್ಮ ಮಹಾನ್ ಪೂರ್ವಜರು ಸಾಕ್ಷಾತ್ಕಾರಿಸಿಕೊಂಡ ಆಧ್ಯಾತ್ಮವನ್ನು ಆದರ್ಶವಾಗಿ ಪಡೆದಿರುವ ಸನಾತನಿಗಳಾದ ನಾವು ಒಪ್ಪಿಕೊಳ್ಳಲು ಸಾಧ್ಯವೇ? ಸನಾತನ ಸಂಸ್ಕೃತಿಯು ಮಾನವನ ಸ್ವಾತಂತ್ರ್ಯಕ್ಕೆ ನೀಡಿರುವಷ್ಟು ಪ್ರಾಮುಖ್ಯತೆಯನ್ನು ಯಾವ ಇತರೆ ಸಂಸ್ಕೃತಿ, ವಿಚಾರಗಳೂ ನೀಡಿಲ್ಲ. ಆದರೆ ಮುಖಪುಟದಲ್ಲಿ ಮಾತ್ರ ಸ್ವಾತಂತ್ರ್ಯವೆಂದು ಬರೆದುಕೊಂಡು ಉಳಿದ ಸಂಪೂರ್ಣ ಪುಸ್ತಕದ ಹಾಳೆಗಳಲ್ಲಿ ಸ್ವಾರ್ಥ, ಲೋಭ, ಮೋಹದಂತಹ ಲೌಕಿಕ ಭೋಗಗಳನ್ನೇ ತುಂಬಿಕೊಂಡು ಬಂಧನದ ದಾಸ್ಯತನ ಸಾಲುಗಳನ್ನು ಗೀಚಿರುವ ಪಾಶ್ಚಾತ್ಯ ಪತ್ರಿಕೆಗೆ ಭಾರತೀಯ ಚಿಂತಕರೂ ಕೂಡ ಮಾರುಹೋಗಿರುವುದು ವಿಪರ್ಯಾಸ! ಗಂಗಾನದಿಯೇ ಬಳಿಯಿರುವಾಗ ಬಾವಿಯನ್ನು ತೋಡುವ ಮೂರ್ಖತನದ ಕಾರ್ಯವನ್ನೇಕೆ ಮಾಡುವಿರಿ? ಆಧ್ಯಾತ್ಮವೇ ನಮ್ಮ ರಾಷ್ಟ್ರದ ಜೀವಾಳ. ಈ ಕಲಿಯುಗದ ಸ್ವಾರ್ಥ ಪ್ರಪಂಚದಲ್ಲಿ ನಮಗೆ ಹಾಗೂ ಇಡೀ ಜಗತ್ತಿಗೆ ಅತ್ಯಂತ ಅವಶ್ಯಕವಾಗಿರುವ ಆಧ್ಯಾತ್ಮದ ಆದರ್ಶವು ಮತ್ತಷ್ಟು ಮಗದಷ್ಟು ಪ್ರಸರಣೆಯಾಗಲಿ.

ಈ ಭವ್ಯವಾದ ಜೀವಸೃಷ್ಟಿಯ ಮೂಲ ಅಸ್ತಿತ್ವವೇ ವೈವಿಧ್ಯತೆಯಾಗಿರುವಾಗ , ಮಾನವರು ತಮ್ಮ ತಮ್ಮ ವೈಯಕ್ತಿಕ ವಿಚಾರಗಳ ಭಿನ್ನಾಭಿಪ್ರಾಯಗಳ ಕಾರಣದಿಂದ ಅನುಚಿತ ತೆರನಾದ ಸಂಘರ್ಷ ಮಾಡುವುದು ಎಷ್ಟು ಸರಿ? ಪ್ರಶ್ನಿಸುವುದು, ವಿರೋಧಿಸುವುದು ಮುಖ್ಯ. ಹಾಗೆಂದು ಭಿನ್ನಾಭಿಪ್ರಾಯ ಹೊಂದಿರುವವರು ಏನೇ ಮಾಡಿದರೂ ಅದನ್ನು ವಿರೋಧಿಸುತ್ತಾ ಹೋಗುವುದು ಎಂದರೆ ಅದು ಅಪ್ರಾಮಾಣಿಕ ಅಸ್ತಿತ್ವದ ಅನಾವರಣದಂತಾಗುತ್ತದೆ. ಪ್ರಕೃತಿಯಲ್ಲಿನ ಶಕ್ತಿ, ಆವೃತ್ತಿ, ಕಂಪನಗಳಲ್ಲಿ ಸಹಜವಾಗಿರುವ ವ್ಯತ್ಯಾಸಗಳಿಂದಲೇ ಜೀವಜಗತ್ತು ಸಮತೋಲನವನ್ನು ಸಾಧಿಸಿ ಬೆಳೆಯುತ್ತಿರುವುದು. ಇವುಗಳಲ್ಲಿ ವ್ಯತ್ಯಾಸವಿಲ್ಲದಿದ್ದರೆ ಗಾಳಿ ಚಲಿಸಲಾಗುತ್ತಿರಲಿಲ್ಲ, ನೀರು ಹರಿಯಲಾಗುತ್ತಿರಲಿಲ್ಲ ಹಾಗೂ ಬೆಂಕಿ ಉರಿಯಲಾಗುತ್ತಿರಲಿಲ್ಲ. ಆದ್ದರಿಂದ ಈ ಸಂವೇದನಾಶೀಲ ಸಂಗತಿಯನ್ನು ಮನಗಂಡು ನಾವೆಲ್ಲರೂ ಸಾಮರಸ್ಯದಿಂದ ಬದುಕುವ ಸಂಕಲ್ಪವನ್ನು ಮಾಡೋಣ.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಕಾರ್ಗಿಲ್ ವೀರರ ಸಾಹಸಗಾಥೆ