ಸತ್ಯದಿಂದ ವಿಮುಖವಾದರೆ ಪರಿಹಾರ ದೊರಕದು.....

ಸತ್ಯದಿಂದ ವಿಮುಖವಾದರೆ ಪರಿಹಾರ ದೊರಕದು.....

ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥತೆ ನಿತ್ಯಂ ವಿದ್ಯಾ ಧನಂ ಚ ದೇಹಿಮೆ.
ಚಿಕ್ಕಂದಿನಿಂದಲೂ ಪ್ರತಿನಿತ್ಯ ಶಾಲೆಯಲ್ಲಿ ಈ ಶ್ಲೋಕವನ್ನು ಪ್ರಾರ್ಥಿಸುತ್ತಾ ಬಂದೆವು. ಆದರೆ ನಮಗೆ ತಿಳಿಯಲೇ ಇಲ್ಲ ಕಾಶ್ಮೀರ ಪುರವಾಸಿನಿ ಶಾರದಾ ದೇವಿಯ ಮಂದಿರವನ್ನು ಕಾಶ್ಮೀರದಲ್ಲೇ ಧ್ವಂಸ ಮಾಡಲಾಗಿದೆ ಎಂದು. ಒಂದಾನೊಂದು ಕಾಲದಲ್ಲಿ ಕಾಶ್ಮೀರವು ಕಶ್ಯಪರ ಭೂಮಿ, ಮೇಧಾವಿ ಪಂಡಿತರು ನೆಲೆ ನಿಂತಿರುವ ಭೂಮಿ ಎಂದು ಪ್ರಸಿದ್ಧವಾಗಿತ್ತು. ಆಧ್ಯಾತ್ಮ ಸಾಧಕರಿಗೆ, ಪ್ರಕೃತಿ ಪ್ರೇಮಿಗಳಿಗೆ, ಶಾಂತಿಪ್ರಿಯರಿಗೆ, ಪ್ರವಾಸಿಗರಿಗೆ, ಸಂಶೋಧನಾಕಾರರಿಗೆ ಸ್ವರ್ಗವಾಗಿದ್ದ ಕಾಶ್ಮೀರವು ಮುಂದೊಂದು ದಿನ ಘೋರ ನರಕವಾಗಿ ಭಯೋತ್ಪಾದಕರ ತಂಗುದಾಣವಾಗಿ ರೂಪಾಂತರ ಹೊಂದುವುದೆಂದು ಯಾರು ಅರಿತಿದಿದ್ದರು! 'ಅಸೀ ಗಚ್ಛೇ ಪಾಕಿಸ್ತಾನ್, ಬಟಾವ್ ರೋಚ್ ಬಟ್ನೇವ್ ಸಾನ್' ಎಂಬ ಘೋಷಣೆಗಳನ್ನು ಕೂಗಿ ಸಾತ್ವಿಕ ಕಾಶ್ಮೀರಿ ಪಂಡಿತರನ್ನು ಓಡಿಸಿದ ಕರಾಳತೆಯನ್ನು ನೆನೆದರೆ ಇಂದಿಗೂ ಮನಸ್ಸಿನಲ್ಲಿ ಜ್ವಾಲಾಮುಖಿ ಸ್ಫೋಟಿಸಿದಂತಾಗುತ್ತದೆ. ಅದರರ್ಥವೇನು ಗೊತ್ತೇ? 'ನಾವು ಹೊರಟೆವು ಪಾಕಿಸ್ತಾನಕ್ಕೆ ಪಂಡಿತರ ಹೆಣ್ಣುಮಕ್ಕಳನ್ನು ಕರಕೊಂಡು, ಪಂಡಿತರನ್ನು ಹೊರದಬ್ಬಿ' ಅಂತ!

ಈ ಸಂದರ್ಭದಲ್ಲಿ ಮತ್ತೆ ಆ ದುರಂತವನ್ನು ಪ್ರಸ್ತಾಪಿಸಲು ಕಾರಣ ಇದೀಗ ಮತ್ತೊಮ್ಮೆ ಕಾಶ್ಮೀರದಲ್ಲಿ ಇಸ್ಲಾಮಿಕ್ ಜಿಹಾದಿಗಳು, ಭಯೋತ್ಪಾದಕರು ಭಾರತದವರೇ ಆದ ಮುಸ್ಲಿಮೇತರ ಪ್ರವಾಸಿಗರ ಹತ್ಯೆಗಳನ್ನು ಮಾಡಿರುವುದು ಹಾಗೂ ಮುಖ್ಯವಾಗಿ ಇದಕ್ಕಿಂತಲೂ ಭಯಾನಕವಾಗಿ ಬಾಂಗ್ಲಾದೇಶದಲ್ಲಾಗಿರುವ ಹಿಂದೂಗಳ ನರಮೇಧ, ದುರ್ಗಾಮಾತೆ ವಿಗ್ರಹಗಳ ಭಂಜನೆ, ಹಿಂದೂ ಹೆಣ್ಣುಮಕ್ಕಳ ಮೇಲೆಸಗಿರುವ ಅತ್ಯಾಚಾರ. ಕೇಂದ್ರ ಸರ್ಕಾರವು ಕಾಶ್ಮೀರವನ್ನು ಭಾರತದೊಂದಿಗೆ ಐಕ್ಯವಾಗಿಸಲು ಇದ್ದ ಅಡೆ-ತಡೆಗಳಾದ 370 ಹಾಗೂ 35A ವಿಧಿಗಳನ್ನು ರದ್ದುಪಡಿಸಿದ ನಂತರವೂ, ಕಾಶ್ಮೀರದ ಮೂಲ ನಿವಾಸಿಗಳಾಗಿದ್ದ ಪಂಡಿತರು ಹಾಗೂ ಕಾಶ್ಮೀರದಲ್ಲಿ  ಬದುಕು ಕಟ್ಟಿ ಕೊಳ್ಳಬೇಕೆಂದು ಇಚ್ಛುಕರಾಗಿರುವ ಅನ್ಯರಾಜ್ಯದ ಪ್ರಜೆಗಳು ಕಾಶ್ಮೀರದಲ್ಲಿ ನೆಲೆಯೂರುತ್ತಿವುದನ್ನು ವಿರೋಧಿಸುತ್ತಿರುವ ಮತಾಂಧರು ಭಾರತದ ಸಾರ್ವಭೌಮತೆಗೇ ಸವಾಲೆಸೆಯುತ್ತಿದ್ದಾರೆ. ಇಂತಹ ಮತಾಂಧರ ವಿಕೃತ ಕಾರ್ಯಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರವು ಕಾಶ್ಮೀರದ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಇವರನ್ನು ದೇಶದ ಕೆಲಸಕ್ಕೆ ಹಚ್ಚಬೇಕೆಂದರೂ ಸಾಧ್ಯವಾಗದಿರುವುದು ಆ ಮತಾಂಧರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ. 

ಇನ್ನು ಮುಖ್ಯವಾಗಿ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಆಕ್ರಮಣದ ವಾಸ್ತವತೆಯು ಆ ಘಟನೆಯ ಸಂಬಂಧ ದೊರೆತಿರುವ ಗರಿಷ್ಠ ಅಂಕಿ-ಅಂಶಗಳಲ್ಲೇ ವ್ಯಕ್ತವಾಗಿದೆ. ಅಲ್ಲಿನ ಹಿಂದೂ ಫೆಡರೇಶನ್ ಆರ್ಗನೈಜೇಷನ್ ಮತ್ತು ಬಾಂಗ್ಲಾದೇಶಿ ಹಿಂದೂ ಮೈನಾರಿಟಿ ವಾಚ್ ಅಧ್ಯಕ್ಷರು ನೀಡಿರುವ ಅಂಕಿ-ಅಂಶಗಳು:
*ಇಸ್ಕಾನ್ ನಂತಹ ಪ್ರತಿಷ್ಠಿತ ದೇವಸ್ಥಾನಗಳನ್ನು ಒಳಗೊಂಡಂತೆ 315 ದೇವಸ್ಥಾನಗಳ ಧ್ವಂಸ
*1500 ಹಿಂದೂ ಮನೆಗಳಿಗೆ ಬೆಂಕಿ
*10 ವರ್ಷದ ಹೆಣ್ಣು ಮಗುವನ್ನೂ ಒಳಗೊಂಡಂತೆ 15 ಸ್ತ್ರೀಯರ ಮೇಲೆ ಅತ್ಯಾಚಾರ
*14 ಹಿಂದೂಗಳು ನಾಪತ್ತೆ
*12 ಹಿಂದೂ ನಾಯಕರ ಬರ್ಬರ ಹತ್ಯೆ
ಬಾಂಗ್ಲಾದಲ್ಲಿ ದಿನಾಂಕ 13ರಂದು ಬೆಳಗಿನ ಜಾವ 4 ಗಂಟೆಗೆ ದುರ್ಗಾಮಾತೆಯ ದೇವಸ್ಥಾನಕ್ಕೆ ಬರುವ ಇಸ್ಲಾಮಿಕ್ ಜಿಹಾದಿಗಳು (ಅದರಲ್ಲೂ ಇಕ್ಬಾಲ್ ಹುಸೇನ್ ಎಂಬಾತನು) ಹನುಮಂತನ ಮೂರ್ತಿಯ ಪಾದದ ಮೇಲೆ ಕುರಾನ್ ಗ್ರಂಥವನ್ನಿಟ್ಟು ಅದರ ಛಾಯಾಚಿತ್ರ ತೆಗೆದು, ಕುರಾನಿನ ಅಪಮಾನವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ ಹಿಂದೂಗಳ ವಿರುದ್ಧ ದಂಗೆಯೇಳುವಂತೆ ಪ್ರಚೋದಿಸಿದ್ದಾರೆ. ಹಿಂದೂಗಳು ದುರ್ಗಾಪೂಜೆಯನ್ನು ಬಹಳ ಉತ್ಸವದಿಂದ ಆಚರಿಸುವುದರಿಂದ ಅವರೆಲ್ಲಾ ಒಂದೆಡೆ ಏಕೀಕೃತವಾಗಿ ಸಂಭ್ರಮದಲ್ಲಿರುವಾಗ ಮನೆ, ಮಂದಿರ, ಮಹಿಳೆ, ಮಹಾನಾಯಕರ ಮೇಲೆ ಸುಲಭವಾಗಿ ಆಕ್ರಮಣ ಮಾಡಬಹುದೆಂದು ಮೊದಲೇ ಷಡ್ಯಂತ್ರ ಮಾಡಲಾಗಿತ್ತು ಎಂಬ ಅನುಮಾನಗಳು ವ್ಯಕ್ತವಾಗುವುದು ಸಹಜ. ಏಕೆಂದರೆ ಅಷ್ಟು ಯೋಜನಾಬದ್ಧವಾಗಿ, ತೀವ್ರತರ ವೇಗದಲ್ಲಿ ಈ ಎಲ್ಲಾ ಘಟನೆಗಳು ನಡೆದಿವೆ. 
ಈ ಅಮಾನುಷ ಘಟನೆ, ಈ ಭೀಕರ ಘಟನೆ, ಈ ಕರುಣಾಜನಕ ಘಟನೆ ಇದೇ ಮೊದಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಭವಿಸಿದೆಯೇನೊ ಎಂಬಂತೆ ನೀವು ಯೋಚಿಸುತ್ತಿದ್ದರೆ, ಇಲ್ಲಿಯವರೆಗಿನ ನಿಮ್ಮ ಮೂರ್ಖತನಕ್ಕೆ ನೀವೇ ಜೈ ಎಂದುಕೊಳ್ಳಿ ಸೆಕ್ಯುಲರ್ ಹಿಂದೂಗಳೇ! ಇದರ ಅಪ್ಪ, ದೊಡ್ಡಪ್ಪನಂತಹ ಘಟನೆಗಳು ಅದಾಗಲೇ ಸಂಭವಿಸಿ ಹೋಗಿದೆ. ಯಾವಾಗೆಲ್ಲಾ ಆಗಿದೆ, ಯಾವ ಮಟ್ಟದಲ್ಲಿ ಆಗಿದೆ ಎಂಬ ದೀರ್ಘಕಾಲದ ಚರಿತ್ರೆಯನ್ನು ಇಂದಿನ ಬಾಂಗ್ಲಾ ಪ್ರಧಾನಿ ಶೇಖ್ ಹಸಿನಾ ಅವರ ಒಂದೇ ಒಂದು ಹೇಳಿಕೆಯಿಂದ ಅರ್ಥೈಸಿಕೊಳ್ಳಬಹುದು. ಅವರ ಹೇಳಿಕೆ- "ಭಾರತದಲ್ಲಿ ನೀವು ಯಾವುದೇ ಒಂದು ಕಾನೂನನ್ನು ಜಾರಿಗೊಳಿಸುವ ಮೊದಲು ಬಾಂಗ್ಲಾದಲ್ಲಿರುವ ಹಿಂದೂಗಳ ಮೇಲೆ ಏನಾಗಬಹುದೆಂಬ ಪರಿಣಾಮವನ್ನು ಊಹಿಸಿಕೊಂಡು ಜಾರಿಗೆ ತನ್ನಿ". ಇಷ್ಟೊಂದು ನೇರಾನೇರ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರೂ, ನಾವೇಕೆ ಆ ಕಟುಸತ್ಯವನ್ನು ಎದುರಿಸಲು ಸಿದ್ಧವಿಲ್ಲ? ಇಂದಿಗೂ ಪ್ರತ್ಯೇಕತಾವಾದ ತತ್ವವನ್ನು ಅನುಸರಿಸುವ ಅಬ್ರಹಾಮಿಕ್ ಮತಗಳನ್ನು ಎದುರಿಸಿ, ಅದರಿಂದ ನಮ್ಮ ಉದಾರ ಹಿಂದೂ ಧರ್ಮ-ಸಂಸ್ಕೃತಿಯ ರಕ್ಷಣೆಗೆ ಅನಿವಾರ್ಯವಾಗಿರುವ ಹಿಂದುತ್ವವನ್ನು ಎತ್ತಿಹಿಡಿಯುವವರಿಗೆ ಕೋಮುವಾದಿಗಳು ಎಂದು ಪಟ್ಟಕಟ್ಟುತ್ತಾರೆ. ಇನ್ನು ಯಾರು ಸತ್ಯದ ಪರದೆಯಲ್ಲಿ ಕಾಣುತ್ತಿರುವ ದೃಶ್ಯಗಳಿಗೆ ಅಂಧರಾಗಿ ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲದ ಜಾತ್ಯಾತೀತತೆಯ ಮುಖವಾಡವನ್ನು ಧರಿಸಿದ್ದಾರೊ ಅವರಿಗೆ ಮಹಾಮಾನವತಾವಾದಿ, ಜಾತ್ಯಾತೀತವಾದಿ ಎಂಬ ಬಿರುದುಗಳನ್ನು ನೀಡಿ ಸಮ್ಮಾನಿಸಲಾಗುತ್ತದೆ. ಇನ್ನು ಇವರು ಟಿ.ವಿಯ ಡಿಬೆಟ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾದ ಮಾಡುವುದನ್ನು ನೋಡಬೇಕು. ಚರ್ಚೆಯಾಗುತ್ತಿರುವ ಪ್ರಮುಖ ಕೇಂದ್ರಿತ ವಿಷಯವನ್ನು ಹೊರತುಪಡಿಸಿ, ಬೇರೆಲ್ಲಾ ವಿಷಯಗಳಲ್ಲೂ ದೊಡ್ಡ ತಜ್ಞರಾಗಿ ದಿಕ್ಕು ತಪ್ಪಿಸಿ ವಾದ ಮಾಡುತ್ತಿರುತ್ತಾರೆ. ಇವರು ಹೇಗೆಂದರೆ ಸೈನಿಕರು ಭಯೋತ್ಪಾದಕರನ್ನು ಗುಂಡಿಟ್ಟು ಕೊಂದಾಗ ಭಯೋತ್ಪಾದಕರ ಜೀವನವನ್ನು ವೈಭವೀಕರಿಸಿ, ಅವರ ಪಾಪಕರ್ಮಗಳನ್ನು ಮರೆಸಿ ವಾದ ಮಾಡುತ್ತಾರೆ. ಇತ್ತೀಚೆಗೆ ಡ್ರಗ್ಸ್ ಕೇಸ್ ನಲ್ಲಿ ಬಂಧಿತನಾಗಿರುವ ಶಾರುಕ್ ಖಾನ್ ನ ಪುತ್ರ ಆರ್ಯನ್ ಖಾನ್ ಪರ ವಹಿಸಿ ಅವನನ್ನು ಬಂಧಿಸಿದ ಅಧಿಕಾರಿಗಳನ್ನೇ ವಿರೋಧಿಸುತ್ತಿದ್ದಾರಲ್ಲ ಹಾಗೆ. ಇನ್ನೂ ಸುಲಭವಾಗಿ ಅರ್ಥೈಸಬೇಕೆಂದರೆ ಒಂದು ಕೊಲೆ ಪ್ರಕರಣ ಜರುಗಿದ್ದರೆ ಅದರಲ್ಲಿ ಇವರು ಕೊಲೆಯಾದ ವ್ಯಕ್ತಿಗೆ ನ್ಯಾಯ ಕೊಡಿಸುವ ಕೇಂದ್ರೀಯ ವಿಷಯವನ್ನು ಮರೆಸಿ, ಕೊಲೆ ಮಾಡಿದ ವ್ಯಕ್ತಿ ಇವರ ಪ್ರೊಪಗ್ಯಾಂಡಕ್ಕೆ ಸರಿ ಹೊಂದುವವರಾದರೆ ಅವರ ಪರ ವಾದ ಮಾಡಿ ಕನಿಕರ ಹುಟ್ಟಿಸುವ ಹಾಗೆ.

ಅದೆಲ್ಲಾ ಸರಿ, ಸತ್ಯವನ್ನು ವಿರೋಧಿಸಿ ಇವರಂತೆ ಭ್ರಮೆಯ ಬದುಕನ್ನು ಸೃಷ್ಟಿಸುತ್ತಾ ಹೋದರೆ ಈ ಪ್ರಪಂಚದ ಕಥೆ ಏನಾಗುವುದು? "ಸರ್ವಸ್ವವನ್ನೂ ಸತ್ಯಕ್ಕಾಗಿ ತ್ಯಾಗ ಮಾಡಬಹುದು, ಆದರೆ ಸತ್ಯವನ್ನು ಯಾವುದಕ್ಕಾಗಿಯೂ ತ್ಯಾಗ ಮಾಡಲಾಗದು" ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಭದ್ರವಾದ ಸತ್ಯದಿಂದ ವಿಮುಖವಾದ ಸಮಾಜದ ಭವಿಷ್ಯ ಅಭದ್ರವಾದ ಭ್ರಮೆಯ ಬುನಾದಿಯ ಮೇಲೆ ನಿಲ್ಲುವುದೇ? 'ಸತ್ಯಮೇವ ಜಯತೇ', 'ಯತೊ ಧರ್ಮಸ್ತತೊ ಜಯಃ' ಎಂಬ ಸರ್ವೋಚ್ಚ ತತ್ವವನ್ನು ಉಚ್ಛರಿಸಿದ ನಮ್ಮ ರಾಷ್ಟ್ರದಲ್ಲಿ ಇಂದು ಅಸತ್ಯವನ್ನು ಭೋದಿಸಲಾಗುತ್ತಿದೆಯೇ? ಶಾಲೆಗೆ ಹೋಗುವ ಪ್ರತಿ ಮಗುವಿಗೂ ಅದರ ರಾಷ್ಟ್ರದ ಶೌರ್ಯ-ಸಾಹಸ-ಬಲಿದಾನದ ಇತಿಹಾಸವನ್ನು ಸೋಲಿನ, ಕೀಳರಿಮೆಯ ಇತಿಹಾಸವೆಂದು ಭೋದಿಸುತ್ತಿದ್ದ ಮೇಲೆ ಮಕ್ಕಳು ಭ್ರಷ್ಟಹಾದಿಯಲ್ಲಿ ಹೋಗದೆ ಸತ್ಯದ ಹಾದಿಯಲ್ಲಿ ಹೋಗಬೇಕೆಂದು ಹೇಗೆ ಅಪೇಕ್ಷಿಸಲಾಗುವುದು? ನಮ್ಮ ರಾಷ್ಟ್ರದ ಬಗ್ಗೆ ಕೀಳರಿಮೆ ಬೆಳೆಯುವಂತೆ ಅವರಿಗೆ ಶಿಕ್ಷಣ ನೀಡಿದ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಟ್ಟು ನಮ್ಮ ಸಂಸ್ಕೃತಿಯನ್ನು ಅನುಸರಿಸಲಿ ಎಂದು ಹೇಗೆ ನಿರೀಕ್ಷಿಸುವುದು? ಇಂದು ತಾವು ಪ್ರಯಾಣಿಸುತ್ತಿರುವ ಭಾರತ ದೇಶವೆಂಬ ಪ್ರಶಾಂತಚಿತ್ತ ಹಡಗು ಲಕ್ಷಾಂತರ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ರಕ್ತಸಾಗರದಲ್ಲಿ ತೇಲಿ ಬಂದಿದೆ ಎಂಬುದನ್ನು ತಿಳಿಸದೆ ಅವರು ಸ್ವಾತಂತ್ರ್ಯದ ಬೆಲೆಯನ್ನು ಅರ್ಥೈಸಿಕೊಂಡು ದೇಶಕ್ಕಾಗಿ ಬದುಕಲಿ ಎಂದು ಹೇಗೆ ಆಶಿಸುವುದು? 

ಇಸ್ರೇಲ್ ದೇಶ ಕೂಡ ಬಹಳಷ್ಟು ಆಕ್ರಮಣದ ಪೆಟ್ಟನ್ನು ತಿಂದಿದೆ. ಇಸ್ರೇಲಿಗಳು ತಮ್ಮ ಕಲೆ, ಸಂಗೀತ, ಸಿನೆಮಾ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಮೇಲಾದ ಘೋರ ಆಕ್ರಮಣದ ದುಃಖ, ಆಕ್ರೋಶ, ಅನ್ಯಾಯಗಳನ್ನೇ ತೋರ್ಪಡಿಸುತ್ತಾರೆ. ಅವರು ಸದಾ ಜಾಗೃತರಾಗಿದ್ದು ಮತ್ತೆಂದೂ ಈ ರೀತಿಯ ಆಕ್ರಮಣಗಳಿಗೆ ಬಲಿಯಾಗಬಾರದೆಂದು ಸಾಹಸ ಸಂದೇಶವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ಭೇಟಿಯಾಗಿ ಶುಭಾಶಯವನ್ನು ಕೋರುವಾಗ ಇನ್ನು ತಮ್ಮ ಮುಂದಿನ ಭೇಟಿ ಜೆರುಸಲೆಂ ನಲ್ಲಿ ಎಂದು ಹೇಳಿಕೊಳ್ಳುವ ಮೂಲಕ ಪ್ರತಿಬಾರಿಯೂ ತಮ್ಮ ಪವಿತ್ರ ಕ್ಷೇತ್ರವನ್ನು ಮರಳಿ ಪಡೆಯಬೇಕೆಂದು ಸತ್ಯೋಚ್ಛಾರ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ನಾವು ನಮ್ಮ ಸತ್ಯ, ಅಸ್ತಿತ್ವವನ್ನು ಮರೆಯಲು ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ. ಬಾಂಗ್ಲಾದಲ್ಲಿ ಇಸ್ಕಾನ್ ಮಂದಿರಗಳು ಪ್ರತಿವರ್ಷವೂ ಇಫ್ತಾರ್ ಕೂಟವನ್ನು ಆಯೋಜಿಸಿ ಅಲ್ಲಿನ ಮುಸಲ್ಮಾನರನ್ನು ಬಂಧುಗಳಂತೆ ಸತ್ಕರಿಸುತ್ತಾ ಬಂದವು, ಇದಕ್ಕೆ ಪ್ರತಿಯಾಗಿ ಅವರು ತಮ್ಮ ಮಂದಿರದ ವಿನಾಶಕ್ಕೆ ಸಾಕ್ಷಿಯಾಗಿ ತಮ್ಮ ಸಂಸ್ಥೆಯ ಭಕ್ತರ ದುರಂತ ಅಂತ್ಯವನ್ನು ಕಾಣಬೇಕಾಯಿತು. ಹಾಗೆಯೇ ಕಳೆದ ವರ್ಷ ನಮ್ಮ ಸಹೋದರ ರಿಂಕು ಶರ್ಮಾ ಎಂಬ ಶ್ರೀರಾಮಭಕ್ತನು ಮಂದಿರದ ದೇಣಿಗೆಯ ಸಂಗ್ರಹದಲ್ಲಿ ಸಕ್ರಿಯವಾಗಿದ್ದ ಕಾರಣಕ್ಕೆ ನೆರೆಹೊರೆಯ ಜಿಹಾದಿಗಳು ಆತನ ಹತ್ಯೆಯನ್ನು ಮಾಡುತ್ತಾರೆ. ಹತ್ಯೆ ಮಾಡಲಾದ ಆ ಕುಟುಂಬದವರ ಮಹಿಳೆಗೆ ರಕ್ತದಾನ ಮಾಡಿದ್ದರ ಫಲವಾಗಿ ಕೃತಘ್ನರಾಗಿ ಆತನ ರಕ್ತವನ್ನೇ ಪ್ರತಿಯಾಗಿ ಪಡೆಯಲಾಯಿತು. ದೆಹಲಿಯ ವಿದ್ಯಾವಂತರು ಇಚ್ಛಿಸಿ ಆರಿಸಿದ ಉಚಿತ ವಿದ್ಯುತ್ ಹಾಗೂ ನೀರನ್ನು ನೀಡುವ ಸರ್ಕಾರದ ಬಿಲ್ ಅನ್ನು ರಿಂಕುಶರ್ಮಾ ತನ್ನ ಬಲಿದಾನದ ಮೂಲಕ ತೀರಿಸಬೇಕಾಯಿತು. ಸತತವಾದ ಸಹಸ್ರಾರು ವರ್ಷಗಳ ಆಕ್ರಮಣದ ಪರಿಣಾಮ ಬಹುತೇಕ ಹಿಂದೂಗಳ ಜೀವನವು ಉಳಿಯುವಿಕೆಗೆ ಮಾತ್ರ ಸೀಮಿತಗೊಳ್ಳುತ್ತಿದೆಯೇ? ಇದರೊಂದಿಗೆ ದೇಶದೆಲ್ಲೆಡೆ ಹೆಚ್ಚಾಗಿರುವ ಶೃಂಗಾರಕಾವ್ಯಗಳ ವೈಭವೀಕರಣದ ಹಾವಳಿ ಯುವಜನತೆಯನ್ನು ದುರ್ಬಲಗೊಳಿಸುತ್ತಿದೆಯೇ? ಈ ಸಾಫ್ಟ್ ಪವರ್ ನ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಏಕೆಂದರೆ ಎರಡನೆ ಮಹಾಯುದ್ಧದಲ್ಲಿ ಜರ್ಮನಿಯು ಪರಾಭವಗೊಳ್ಳಲು ಅತಿಯಾದ ಶೃಂಗಾರ ಕಾವ್ಯಗಳೇ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

ನೆನಪಿರಲಿ, ಸಾವಿರಾರು ವರ್ಷಗಳ ವಿದೇಶಿಗರ ಆಕ್ರಮಣದ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿ ಭೌತಿಕವಾಗಿ ಸ್ವಾತಂತ್ರ್ಯವನ್ನು ಗಳಿಸಿದ ನಾವು ಮಾನಸಿಕವಾಗಿಯೂ ಸಂಪೂರ್ಣ ಸ್ವರಾಜ್ಯ ಸಾಧಿಸಲು ಇಂದು ಮಾಡಬೇಕಿರುವುದು ಆತ್ಮಗೌರವದ ಹೋರಾಟ. ಹೌದು, ಇದು ಆತ್ಮವಿಸ್ಮೃತಿಯ ವಿರುದ್ಧ ಆತ್ಮಗೌರವದ ಹೋರಾಟ. ನಮ್ಮ ಧರ್ಮದ ಕರ್ಮಸಿದ್ಧಾಂತದಲ್ಲಿನ ಅತೀವ ನಂಬಿಕೆಯಿಂದಲೇ (ಪ್ರಾರಬ್ಧ) ನಮ್ಮ ದೇಶವು ಪರಕೀಯರ ಆಕ್ರಮಣಕ್ಕೆ ಬಲಿಯಾಗಬೇಕಾಯಿತು ಎಂದು ವಿದೇಶಿ ಇತಿಹಾಸಕಾರರು ಬರೆದಿದ್ದಾರೆ. ನೋಡಿ ಯಾವ ರೀತಿಯ ಆತ್ಮವಿಸ್ಮೃತಿಯ ಅಸ್ತ್ರವಿದು, ಎಷ್ಟೊಂದು ಆಘಾತಕಾರಿಯಾಗಬಲ್ಲದು! ಆದರೆ ಸ್ವಾಮಿ ವಿವೇಕಾನಂದರು ಇದಕ್ಕೆ ಪ್ರತಿಯಾಗಿ 'ದೋಷವಿದ್ದದ್ದು ನಮ್ಮ ಧರ್ಮದಲ್ಲಲ್ಲ, ಧರ್ಮವನ್ನು ಸರಿಯಾಗಿ ಅರ್ಥೈಸಿಕೊಳ್ಳದ ನಮ್ಮಲ್ಲಿ' ಎಂದು ವಿವರಿಸುವ ಮೂಲಕ ಆತ್ಮಗೌರವದ ಪ್ರತ್ಯಾಸ್ತ್ರವನ್ನು ಹೂಡಿ ಭಾರತೀಯರ ಗೆಲುವಿನ ಹಾದಿಯನ್ನು ಪ್ರದರ್ಶಿಸಿದ್ದಾರೆ. ನಾವು ನಮ್ಮ ಶಕ್ತಿಯುತ ಧರ್ಮವನ್ನು ಉಪನಿಷತ್, ಭಗವದ್ಗೀತೆ, ಅದ್ವೈತ ಸಿದ್ಧಾಂತ ಮುಂತಾದ ತತ್ವಗಳನ್ನು ಸರಿಯಾಗಿ ಅರ್ಥೈಸಿಕೊಂಡಾಗ ಮಾತ್ರವೇ ಭಾರತಕ್ಕೆ ಜಯ ಎಂದು ತಿಳಿಸಿದ್ದಾರೆ.

ಬಾಂಗ್ಲಾ ದೇಶ ಅಸ್ತಿತ್ವಕ್ಕೆ ಬಂದಾಗ ಶೇ.28ರಷ್ಟಿದ್ದ ಅಲ್ಪಸಂಖ್ಯಾತರ (ಹಿಂದೂಗಳು)ಸಂಖ್ಯೆ ಶೇ.7ಕ್ಕೆ ಇಳಿದಿದೆ, ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ದೇಶದಲ್ಲಿ ವಿಭಜನೆಯ ನಂತರ ಶೇ.9ರಷ್ಟಿದ್ದ ಅಲ್ಪಸಂಖ್ಯಾತರ (ಮುಸಲ್ಮಾನರು) ಸಂಖ್ಯೆ ಶೇ.21ಕ್ಕೆ ಏರಿಕೆಯಾಗಿದೆ. ಸ್ವಾಮಿ ವಿವೇಕಾನಂದರ ಮಾತಿನಂತೆ 'ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟವಷ್ಟೇ ಅಲ್ಲ, ಬದಲಿಗೆ ಹಿಂದೂ ಧರ್ಮಕ್ಕೆ ಒಬ್ಬ ವಿರೋಧಿ ಹೆಚ್ಚಾದ' ಎಂದು ಭಾವಿಸಬೇಕು. ಹಿಂದೂಗಳು ಅನ್ವೇಷಕರು (ಸತ್ಯವನ್ನು ಹುಡುಕುವವರು), ಉಳಿದ ಹಲವು ಮತದವರು ನಂಬುವವರು. ಶತ-ಶತಮಾನಗಳಿಂದಲೂ ಹಿಂದೂಗಳ ಮೇಲೆ ಮತಾಂತರ, ವೈಚಾರಿಕ ಆಕ್ರಮಣ ಒಟ್ಟಾರೆ ದ್ವೇಷಿಸುವ ಪ್ರವೃತ್ತಿ ಬಂದಿರುವುದಕ್ಕೆ ಎಷ್ಟೇ ರಾಜಕೀಯ, ಆರ್ಥಿಕ ಕಾರಣಗಳಿದ್ದರೂ ಮೂಲಭೂತ ಕಾರಣ ಮಾತ್ರ ಇದೇ. ಸತ್ಯದ ದಾರಿಯಲ್ಲಿ ನಡೆಯುವವರಿಗೆ ಯಾರ ಹಂಗೂ ಬೇಕಿಲ್ಲ. ಆದರೆ ನಂಬುವವರಿಗೆ ಅವರ ಮಾರ್ಗವನ್ನೇ ಅನುಸರಿಸುವ ದೊಡ್ಡ ಗುಂಪು ಇರಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ, ಅವರನ್ನು ಈ ಪ್ರಪಂಚ ಮೂರ್ಖರೆಂದು ಭಾವಿಸುತ್ತದೆ.

ಗೌರವಾನ್ವಿತ ಪ್ರಧಾನಿಗಳೇ, ನಿಮಗಾಗಿ ಪ್ರಧಾನಿ ಪಟ್ಟವಲ್ಲ, ಪ್ರಧಾನಿ ಪಟ್ಟಕ್ಕಾಗಿ ನೀವು ಎಂದು ನಿಮ್ಮನ್ನು ಕೊಂಡಾಡಿದ ದೇಶವಾಸಿಗಳ ಮಾತನ್ನು ಸತ್ಯವೆಂದು ಸಾಬೀತುಪಡಿಸಿದಿರಿ. ಇನ್ನು ನಮ್ಮ ದೇಶದಲ್ಲಿ ಬಗೆಹರಿಸಲು ಸಾಧ್ಯವೇ ಇಲ್ಲ ಎಂಬಂತೆ ಮಾರ್ಪಡಿಸಲಾಗಿದ್ದ ಸಮಸ್ಯೆಗಳನ್ನು ಬಗೆಹರಿಸಿದಿರಿ. ಕೊರೊನಾದ ವಿಷಮಯ ಪರಿಸ್ಥಿತಿಯಲ್ಲೂ 'ಆತ್ಮನಿರ್ಭರ ಭಾರತ'ದ ಕಹಳೆ ಮೊಳಗಿಸಿ ತಂದೆಯ ಸ್ಥಾನದಲ್ಲಿ ನಿಂತು ಪ್ರಜೆಗಳಿಗೆ ಧೈರ್ಯ ತುಂಬಿದಿರಿ. ತಮ್ಮ ವೈಫಲ್ಯವನ್ನು ಮುಚ್ಚಿಟ್ಟು ಭಾರತಕ್ಕೆ ಮುಖಭಂಗ ಮಾಡಲು ಯತ್ನಿಸಿದ ವಿದೇಶಿ ಮಾಧ್ಯಮದವರು ಇನ್ನು ತಿರುಗಿ ನೋಡದಂತೆ 100 ಕೋಟಿ ಡೋಸ್ ಲಸಿಕೆ ವಿತರಿಸಿದಿರಿ. ಇದನ್ನೆಲ್ಲಾ ನೋಡಿದ ಮೇಲೆ ನಾವು ಬಹಳ ಆಶಾಜೀವಿಗಳಾಗಿ ಹೋಗಿದ್ದೇವೆ. ಈಗ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದಂತಹ ಹೃದಯ ವಿದ್ರಾವಕ ಸಮಸ್ಯೆಗೆ ನೀವು ಪರಿಹಾರ ಒದಗಿಸಲೇಬೇಕು. ಹಿಂದೂಗಳಿಗಿರುವುದು ಒಂದೇ ದೇಶ, ಅದುವೇ ನಮ್ಮ ಹಿಂದೂಸ್ಥಾನ. ಇದಕ್ಕೆ ಅನುಕೂಲವಾಗುವಂತೆ ಅದಾಗಲೇ ಸಿಎಎ ಕಾಯ್ದೆಯನ್ನು ರಚಿಸಿದ್ದರೂ, ಅದು ಜಾರಿಯಾಗದಂತೆ ತಡೆಯಲು ಸಾಕಷ್ಟು ನಕಾರಾತ್ಮಕ ಶಕ್ತಿಗಳು ಯೋಜನಾಬದ್ಧವಾಗಿ ಕೆಲಸ ಮಾಡುತ್ತಿವೆ. ಸಿಎಎ ಒಳಗೊಂಡಂತೆ ಕೃಷಿಕಾನೂನಿನ ವಿರುದ್ಧವೂ ಹೇಗೆಲ್ಲಾ ಹೋರಾಟಗಳು ನಡೆದವು ಎಂಬುದನ್ನು ಈ ದೇಶ ನೋಡಿದೆ. ಭಾರತವು ಸರ್ವಾಧಿಕಾರಿಯನ್ನು ಹೊಂದಿಲ್ಲ, ಪ್ರಜಾನುರಾಗಿ ಪ್ರಧಾನಿಯನ್ನೇ ಹೊಂದಿರುವುದು ಎಂದು ಎಲ್ಲರಿಗಿಂತ ಅವರಿಗೇ ಚೆನ್ನಾಗಿ ತಿಳಿದಿದೆ. ಆದ್ದರಿಂದಲೇ ತಮ್ಮ ಮೇಲೆ ಕಠಿಣ ಕ್ರಮ ಜರುಗುವುದಿಲ್ಲವೆಂಬ ನಂಬಿಕೆಯಿಂದ ಇಷ್ಟು ಧೈರ್ಯವಾಗಿ ಈ ರೀತಿಯ ದೇಶಕ್ಕೆ ಮಾರಕವಾದ ಹೋರಾಟಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಜೊತೆಗೆ ನಿಮ್ಮನ್ನು ಹಿಟ್ಲರ್ ಎಂದೇ ಸಂಭೋದಿಸುತ್ತಾರೆ. ನಿಮಗೆ, ನಿಮ್ಮ ಪಕ್ಷಕ್ಕೆ ಎಂದಿಗೂ ಮತ ಹಾಕದಿರುವವರನ್ನು ಓಲೈಕೆ ಮಾಡುವುದರಲ್ಲಿ ಯಾವ ಅರ್ಥವಿದೆ? ದೇಶದ ಬಹುಪಾಲು ಪ್ರಜೆಗಳ ಶಕ್ತಿ, ಆಶೀರ್ವಾದಗಳು ನಿಮ್ಮೊಂದಿಗಿದೆ. ನೀವು ಒಂದು ದೇಶದ ಪ್ರಧಾನಿಯಾಗಿದ್ದರೂ ಜನಸಂಖ್ಯೆಯನುಸಾರ ಯೂರೋಪ್-ಅಮೆರಿಕಾ ಖಂಡಗಳ 87 ದೇಶಗಳ ಪ್ರಧಾನಿಗಳಿಗೆ ಸಮವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದೀರಿ. ಅದುವೇ ಈ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗಿರುವುದು. ಪ್ರಸ್ತುತ ನಿಮ್ಮ ಹೆಸರಿಗಿರುವ ಬ್ರ್ಯಾಂಡ್ ವ್ಯಾಲ್ಯು ಇನ್ನ್ಯಾರಿಗಿದೆ? ಈಗ ನಮ್ಮ ದೇಶಕ್ಕೆ ಅಗತ್ಯವಾಗಿ ಬೇಕಾದ ಇನ್ನಿತರ ಕಾಯ್ದೆಗಳು ಜಾರಿಯಾಗುವುದು ಅವಶ್ಯಕವಾಗಿದೆ. ಜನಸಂಖ್ಯಾ ಹೆಚ್ಚಳ, ಅದರಿಂದ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಹಾಗೂ ಭಾರತವು ಭಾರತವಾಗಿಯೇ ಉಳಿಯಲು ಜನಸಂಖ್ಯಾ ನಿಯಂತ್ರಣ ಕಾಯ್ದೆ, ವಾಸ್ತವದಲ್ಲಿ ಸಮಾನತೆಯ ಗರಿಯನ್ನು ಮುಟ್ಟಲು ಸಮಾನ ನಾಗರಿಕ ಹಕ್ಕು, ಹಲವಾರು ಪಕ್ಷಗಳು ವೋಟ್ ಬ್ಯಾಂಕ್ ರಾಜನೀತಿಯಿಂದ ಹೊರಬಂದು ದೇಶದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಒಂದು ದೇಶ ಒಂದು ಚುನಾವಣೆ ಕಾಯ್ದೆ ಇತ್ಯಾದಿ. ನಿಮ್ಮ ಕಾಲದಲ್ಲೇ ಭವ್ಯ ಭಾರತವು ಆತ್ಮವಿಸ್ಮೃತಿಯ ವಿರುದ್ಧ ಹೋರಾಡಿ ಆತ್ಮಗೌರವದ, ಆತ್ಮನಿರ್ಭರತೆಯ ವಿಜಯವನ್ನು ಸಾಧಿಸಿತು ಎಂದು ನಮ್ಮ ಮುಂದಿನ ಇತಿಹಾಸದ ಪುಸ್ತಕಗಳು ನಿಮ್ಮನ್ನು ಕೊಂಡಾಡಲಿ ಮಹಾನಾಯಕರೇ!

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ