ನಮ್ಮ ನಾಡಿನ ಸಾಂಸ್ಕೃತಿಕ ಉತ್ತರದಾಯಿತ್ವವನ್ನು ವಹಿಸಿರುವ ಮೈಸೂರು ದಸರಾ

ನಮ್ಮ ನಾಡಿನ ಸಾಂಸ್ಕೃತಿಕ ಉತ್ತರದಾಯಿತ್ವವನ್ನು ವಹಿಸಿರುವ ಮೈಸೂರು ದಸರಾ

ಚಾಮುಂಡಿ ಮಹಿಷನ ಕೊಂದ ಮಹಾರಾತ್ರಿ
ಧರ್ಮ ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ
ಮನೆ-ಮನೆ ನಲಿಸುವ ಶುಭ ನವರಾತ್ರಿ ಎಂದು ಸಂಭ್ರಮದಿ ಹಾಡುತ್ತಾ, ಜಯ ಜಯಹೇ ಮಹಿಷಾಸುರಮರ್ಧಿನಿ ಎಂದು ಜಯಕಾರ ಹಾಕುತ್ತಾ, ಆದಿಶಕ್ತಿಯ ನವ ರೂಪಗಳನ್ನು ಪೂಜಿಸುತ್ತಿರಲು ನಾಡಹಬ್ಬ ದಸರಾದಲ್ಲಿ ಸಂಭ್ರಮವೋ ಸಂಭ್ರಮ! ಧರ್ಮದ ವಿಜಯಪತಾಕೆಯನ್ನು ಎತ್ತಿ ಹಿಡಿಯುವ ವಿಜಯದಶಮಿಯ ಜಂಬೂಸವಾರಿಗೆ ಇಂದಿಗೂ ಅಧಿಕಾಧಿಕ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ. ಅದು ಯಾವ ಉತ್ಸಾಹ, ಯಾವ ಉನ್ನತ ಪರಂಪರೆ, ಯಾವ ಸಾಂಸ್ಕೃತಿಕ-ಆಧ್ಯಾತ್ಮಿಕ ಸಂಗತಿಗಳು ಮೈಸೂರು ದಸರಾದ ಯಶೋಗಾಥೆಗೆ ಕಾರಣೀಭೂತವಾಗಿದೆ? ಶತ-ಶತಮಾನಗಳ ಕಾಲದಿಂದಲೂ ಈ ಮಹೋತ್ಸವವು ನಿರ್ವಿಘ್ನವಾಗಿ ನಿಶ್ಕಂಳಕವಾಗಿ ನಡೆದುಕೊಂಡು ಬರಲು ಹೇಗೆ ಸಾಧ್ಯವಾಗಿದೆ? ಕಲಾನಗರಿಯ ಕಲಾವೈಭವವನ್ನು ಉನ್ನತಮಟ್ಟದಲ್ಲೇ ಭದ್ರವಾಗಿರುವಂತೆ ರಕ್ಷಿಸಲು ಯಾವ ಆದರ್ಶ ಸಹಕಾರಿಯಾಗಿದೆ? ಈ ಎಲ್ಲಾ ಘನಾತ್ಮಕ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಕೊಳ್ಳಬೇಕಾದರೆ ಮೈಸೂರು ದಸರಾ ಆಚರಣೆಯ ಒಳನೋಟವನ್ನು ಮಾಡಲೇಬೇಕು. ಹಾಗಾದರೆ ಬನ್ನಿ, ಹಂಪಿಯಿಂದ ಮೈಸೂರಿನವರೆಗಿನ ಈ ಸಡಗರದ ಯಾತ್ರೆಯನ್ನು ಒಮ್ಮೆ ಅವಲೋಕಿಸೋಣ.

ಮೈಸೂರಿನ ವಿಶೇಷತೆಗಳಲ್ಲೇ ಅಗ್ರಗಣ್ಯ ಸ್ಥಾನ ಪಡೆದ ದಸರಾ: ಮೈಸೂರು ಪಾಕು, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯೆದೆಲೆ, ಮೈಸೂರು ವೀಣಾ, ಮೈಸೂರು ಪೇಟಾ, ಮೈಸೂರು ಸಿಲ್ಕ್, ಮೈಸೂರು ಸ್ಯಾಂಡಲ್ ಹೀಗೆ ಹಲವಾರು ಮೈಸೂರಿನ ವಿಶೇಷತೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ, ಮೈಸೂರು ದಸರಾವು ಈ ಎಲ್ಲಾ ವಿಶೇಷತೆಗಳನ್ನು ಮೀರಿದ ಅಥವಾ ಅವುಗಳನ್ನೆಲ್ಲಾ ಒಂದುಗೂಡಿಸಿ ಮತ್ತಷ್ಟು ಹೆಚ್ಚಿಸಿದ ಕೀರ್ತಿಗೆ ಪಾತ್ರವಾಗುತ್ತದೆ.

ವಿಜಯನಗರದ ಸಾಂಸ್ಕೃತಿಕ ಉತ್ತರಾಧಿಕಾರಿಯಾದ ಮೈಸೂರು: ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಮೈಸೂರಿನ ಒಡೆಯರು ನವರಾತ್ರಿ ಉತ್ಸವವನ್ನು ಮುಂದುವರೆಸಿಕೊಂಡು ಬಂದರು. ಕ್ರಿ.ಶ‌. 1610ರಲ್ಲಿ ರಾಜ ಒಡೆಯರಿಂದ ಪ್ರಾರಂಭವಾದ ಈ ಉತ್ಸವವು ನಂತರದಲ್ಲಿ ಕಂಠೀರವ ನರಸರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜರ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ರಾಜರ ಮೂಲಕ ವಿಶೇಷ ಸ್ಥಾನ-ಮಾನವನ್ನು ಪಡೆದುಕೊಂಡಿತು. ಇತಿಹಾಸದ ಪುರಾವೆಗಳ ಪ್ರಕಾರ ಪ್ರಪ್ರಥಮವಾಗಿ ಹೊಯ್ಸಳರಿಂದ ಪ್ರಾರಂಭವಾದ ಈ ವಿಜಯದ ಆಚರಣೆಯು ವಿಜಯನಗರ ಸಾಮ್ರಾಜ್ಯದ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿತು. ಪ್ರತೀ ವರ್ಷವನ್ನು ತನ್ನ ಗೆಲುವಿನ ಸಂವತ್ಸರವನ್ನಾಗಿ ಮಾರ್ಪಡಿಸಿಕೊಳ್ಳುತ್ತಿದ್ದ ಕನ್ನಡ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಈ ನವರಾತ್ರಿ ಉತ್ಸವವು ಹೆಚ್ಚು ಪ್ರಖ್ಯಾತಿಯನ್ನು ಪಡೆಯಿತು. ಇವರ ಕಾಲಾನಂತರದಲ್ಲಿ ವಿಜಯನಗರದರಸರ ಮಾಂಡಳಿಕತ್ವದಿಂದ ಸ್ವತಂತ್ರಗೊಂಡ ಮೈಸೂರು ಒಡೆಯರು ಇದರ ಸಂಕೇತವಾಗಿ ಧಾರ್ಮಿಕವಾಗಿಯೂ ಮತ್ತು ಪ್ರೇಕ್ಷಣೀಯವಾಗಿಯೂ ಇರುವಂತೆ ನವರಾತ್ರಿ ಉತ್ಸವವನ್ನು ಪ್ರಾರಂಭಿಸಿದರು. 

ಮೈಸೂರು ಒಡೆಯರು ಆಚರಿಸಿದ ದಸರೆಯ ಸಿಂಹಾವಲೋಕನ:
ನಮ್ಮ ಹೆಮ್ಮೆಯ ಮೈಸೂರು ರಾಜ್ಯವು ಒಡೆಯರ ಸ್ವತಂತ್ರ ಆಡಳಿತಕ್ಕೊಳಪಟ್ಟ ಮೇಲೆ ನವರಾತ್ರಿ ಉತ್ಸವವು ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದುದು ನಂತರದಲ್ಲಿ ರಾಜಧಾನಿಯಾಗಿ ಮಾರ್ಪಾಡುಗೊಂಡ ಮೈಸೂರಿನಲ್ಲಿ ವಿಜೃಂಭಿಸಿತು. ಪ್ರತಿ ವರ್ಷ ಅಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗಿನ ಕಾಲದಲ್ಲಿ ಶಕ್ತಿಯನ್ನು ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಸ್ಕಂದಮಾತಾ, ಕಾತ್ಯಾಯಿನೀ, ಕಾಲರಾತ್ರೀ, ಮಹಾಗೌರೀ, ಸಿದ್ಧಿದಾತ್ರೀ ಎಂಬ ರೂಪಗಳಲ್ಲಿ ಪೂಜಿಸಲಾಗುತ್ತಿತ್ತು. ಈ ನವದಿನಗಳ ಕಾಲ ಪ್ರತಿ ಸಾಯಂಕಾಲವೂ ದರ್ಬಾರು ಬಹಿರಂಗವಾಗಿ ನಡೆದು, ಅರಮನೆಯ ಒಳಗಡೆ ದೇವತಾಪೂಜಾದಿ ಕಾರ್ಯಗಳು ನಡೆಯುತ್ತಿದ್ದವು. ಮಹಾರಾಜರು ಸಪ್ತಮಿಯ ದಿನ ಸರಸ್ವತಿಯ ಪೂಜೆಯನ್ನು, ಅಷ್ಟಮಿಯ ದಿನ ಮಹಿಷಾಸುರಮರ್ಧಿನಿಯ ಪೂಜೆಯನ್ನು ಭಕ್ತಿಯಿಂದ ನೆರವೇರಿಸುತ್ತಿದ್ದರು. ಬಹುವಿಜೃಂಭಣೆಯ ವಿಜಯದಶಮಿ ದಿನ ಮಹಾರಾಜರು ಪಟ್ಟದ ಕತ್ತಿಗೆ ಪೂಜೆ ಮಾಡಿ, ಅದರ ಎದುರು ಜಟ್ಟಿಕಾಳಗವನ್ನು ವಜ್ರಮುಷ್ಠಿ ಕಾಳಗವನ್ನು ಮಾಡಿಸಿ, ಆಯುಧಕ್ಕೆ ಬಲಿಯನ್ನು ಅರ್ಪಿಸಲು ಸಾಂಕೇತಿಕವಾಗಿ ಬೂದುಗುಂಬಳ ಕಾಯಿಯನ್ನು ಒಡೆದು ಜಂಬೂಸವಾರಿಗೆ ಅಣಿಯಾಗುತ್ತಿದ್ದರು. ನವರತ್ನ ಖಚಿತವಾದ ಆಭರಣಗಳನ್ನು ಧರಿಸಿ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತು ಮಹಾರಾಜರ ಮೆರವಣಿಗೆ ಸಾಗುತ್ತಿದ್ದರೆ, ದಾರಿಯ ಮಧ್ಯೆ-ಮಧ್ಯೆ ಅಲ್ಲಲ್ಲಿ ಮಹಾರಾಜರಿಗೆ ಹಾರತುರಾಯಿಗಳನ್ನು ಅರ್ಪಿಸುವ ಮೂಲಕ ಪ್ರಜಾಸಮೂಹವು ತಮ್ಮ ಅನನ್ಯ ರಾಜಭಕ್ತಿಯನ್ನು ತೋರ್ಪಡಿಸುತ್ತಿತ್ತು. ಅರಮನೆಯಿಂದ ಬನ್ನಿಮಂಟಪವನ್ನು ತಲುಪುವ ಈ ಮೆರವಣಿಗೆ ಸುಮಾರು 3 ಗಂಟೆಗಳ ಕಾಲ ಕುದುರೆಗಳು, ಪಟ್ಟದ ಕತ್ತಿ ಇಟ್ಟಿರುವ ಚಿನ್ನದ ಪಲ್ಲಕ್ಕಿ, ಬೆಳ್ಳಿಯ ಪಲ್ಲಕ್ಕಿ, ಪಂಚಕಲಶ, ಆರು ಕುದುರೆಗಳನ್ನು ಕಟ್ಟಿರುವ ಸಾರೋಟು, ಮೀಸಲು ಪೋಲಿಸ್ ಪಡೆ, ನಗರಿನೌಬತ್ತು ಸಹಿತವಾದ ಆನೆಗಳು ಇವುಗಳ ಅಮೋಘ ದೃಶ್ಯವನ್ನು ಜನರಿಗೆ ಪ್ರದರ್ಶಿಸುತ್ತಿತ್ತು. ನವರಾತ್ರಿಯ ಉತ್ಸವಕ್ಕೆ ಮತ್ತಷ್ಟು ಮೆರುಗು ತುಂಬಲು ಪ್ರತೀ ಸಂಜೆ ಸುಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಿ ಸಂಗೀತ, ನೃತ್ಯ, ನಾಟಕ, ವಾದ್ಯಮೇಳ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದುದು ಇಂದಿಗೂ ಸಹ ಮುಂದುವರೆದಿದೆ.

ವೀರಭೋಗ್ಯಾ ವಸುಂಧರಾ: ದಸರಾ ಮಹೋತ್ಸವದಲ್ಲಿ ಹೆಚ್ಚು ಆಕರ್ಷಕವಾಗಿರುವ ಜಟ್ಟಿಕಾಳಗ, ಕುಸ್ತಿಯಂತಹ ಪಂದ್ಯಗಳ ಅಸ್ತಿತ್ವದ ಹಿಂದೆ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್ ಅವರ ಸಾಹಸ ಕಥನದ ಪ್ರೇರಣೆಯಿದೆ. ಅತ್ಯುತ್ತಮ ಮಲ್ಲಜಟ್ಟಿಯೂ, ವೀರಾಧಿವೀರರೂ ಆಗಿದ್ದ ಇವರು ತಿರುಚನಾಪಳ್ಳಿಯ ಪೈಲ್ವಾನನ ದುರಹಂಕಾರ ಮುರಿಯಲು ಮಾರುವೇಷದಲ್ಲಿ ಸೆಣಸಾಡಿ ಗೆದ್ದಿದ್ದರು ಎಂಬ ಉಲ್ಲೇಖವಿದೆ. ವಿಜಯಿಯಾದ ಪೈಲ್ವಾನನ ವಾಸ್ತವತೆಯನ್ನು ತಿಳಿದು ಅವಮಾನಕ್ಕೊಳಗಾಗುವ ಅಲ್ಲಿನ ಪಾಳೆಗಾರ ದೊಡ್ಡಮ್ಮಣ್ಣಿ ಎಂಬ ಮಹಿಳೆಯನ್ನು ಮುಂದಿರಿಸಿ ಮಹಾರಾಜರ ಮೇಲೆ ಸೇಡು ತೀರಿಸಿಕೊಳ್ಳಲು 30 ಪೈಲ್ವಾನರನ್ನು ಆಕ್ರಮಣ ಮಾಡಲು ಕಳುಹಿಸಿರುತ್ತಾನೆ. ಆ ಎಲ್ಲಾ ಪೈಲ್ವಾನರಿಗೂ ಮಣ್ಣು ಮುಕ್ಕಿಸುವ ಮಹಾರಾಜರು ತಾವು ಬಾಹುಬಲದಿಂದ ಶಸ್ತ್ರಗಳಿಲ್ಲದೆಯೇ ತಮ್ಮ ಪ್ರಾಣರಕ್ಷಣೆ ಮಾಡಿಕೊಂಡ ರೋಚಕ ಸಂಗತಿಯನ್ನು ತಿಳಿಸಿ, ತಮ್ಮಂತಹ ಬಲಶಾಲಿ ಪೈಲ್ವಾನ್ ಗಳ ನಿರ್ಮಾಣಕ್ಕೆ ಅಂದೇ ನಾಂದಿ ಹಾಡುತ್ತಾರೆ. ಅದರ ಪರಿಣಾಮ ಮೈಸೂರು ಮಹಾರಾಜರ ಆಳ್ವಿಕೆಯುದ್ದಕ್ಕೂ ಈ ಪೈಲ್ವಾನರೇ ಅವರ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಆದ್ದರಿಂದಲೇ ದಸರಾದಲ್ಲಿ ಕುಸ್ತಿ ಪಂದ್ಯಾವಳಿಯು ಹೆಚ್ಚಿನ ಮಾನ್ಯತೆ ಪಡೆಯಿತು. 

'ಶಸ್ತ್ರೇಣ ರಕ್ಷಿತೆ ರಾಷ್ಟ್ರೆ ಶಾಸ್ತ್ರ ಚಿಂತಾ ಪ್ರವರ್ತತೆ', ಅರ್ಥಾತ್: ಶಸ್ತ್ರಗಳಿಂದ ರಕ್ಷಿಸಲ್ಪಟ್ಟ ರಾಷ್ಟ್ರಗಳಲ್ಲಿ ಮಾತ್ರ ಶಾಸ್ತ್ರಾರ್ಥ ಚಿಂತನೆಗಳು ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮೈಸೂರು ಮಹಾರಾಜರು ಪರಂಪರಾನುಗತವಾಗಿ ಆಯುಧಗಳ ಪೂಜಾಶಾಸ್ತ್ರವನ್ನು ನೆರವೇರಿಸುತ್ತಾ ಬಂದಿದ್ದಾರೆ. ರಾಜಸಿರಿಯ ಆಯುಧಶಾಲೆಯಲ್ಲಿ ಮಹಾರಾಜರ ಆಡಳಿತ ಕಾಲದಲ್ಲಿದ್ದ 3000ಕ್ಕೂ ಅಧಿಕ ಆಯುಧಗಳಲ್ಲಿ ಈಗ 725 ಮಾತ್ರ ಉಳಿದುಕೊಂಡಿದೆ. ಇವುಗಳಲ್ಲಿ ಕಂಠೀರವ ಒಡೆಯರ ನಿಮ್ಚಾ, ಚಿಕ್ಕದೇವರಾಜ ಒಡೆಯರ ಚುರ್ನಾ, ಮುಮ್ಮಡಿ ಕೃಷ್ಣರಾಜ ಒಡೆಯರ ಖಾಸ ಪ್ರಮುಖವಾದವು. ಅಲ್ಲದೆ ಪರಶು, ಖಡ್ಗ, ಚಾರು ಅಳವಡಿಸಿರುವ ಕೊಡಲಿ, ನರಸಿಂಹರಾಜ ಒಡೆಯರ ಖಡ್ಗ, ವಿಷ್ಣು ಕರಾರಿ, ಬಣ್ಣದ ಹಿಡಿಯ ಕತ್ತಿ, ಬಂದೂಕು, ಪಂಚಲೋಹದ ಕತ್ತಿ, ವಜ್ರಮುಷ್ಠಿಯ ಕೈ ಹಿಡಿಗಳು, ಪ್ರಾಣತ್ಯಾಗದ ಖಡ್ಗಗಳು, ಸೂರ್ಯ-ಚಂದ್ರ ಉಂಗುರಗಳು ಮುಂತಾದವುಗಳನ್ನು ಕಾಣಬಹುದು.

ಸಾವಿರಕ್ಕೆ ಒಬ್ಬ ಕಲಾವಿದ: ಇಂದಿನ ವಿಜ್ಞಾನ-ತಂತ್ರಜ್ಞಾನವು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಂತ-ಹಂತವಾಗಿ ಕಲಾ ಕ್ಷೇತ್ರವನ್ನು ದಮನ ಮಾಡಲೆತ್ನಿಸುತ್ತಿದೆ. ನಾನು ಒಬ್ಬಳು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿ ಬಹಳ ಜವಬ್ದಾರಿಯುತವಾಗಿ ಈ ಕಟುಸತ್ಯದ ಮಾತನ್ನು ಹೇಳಿದ್ದೇನೆ. ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯುವವರ ಪ್ರತಿಷ್ಠೆಯನ್ನು ಹೆಚ್ಚಿಸಿ ಬೆಂಬಲ ನೀಡುವ, ಕಲಾ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಬೇಕೆನ್ನುವವರ ಹೀಯಾಳಿಸುವ ಸಾಧ್ಯವಾದರೆ ಹಿಂದಕ್ಕೆಳೆಯಲು ಸ್ಪರ್ಧೆ ಮಾಡುವ ಮಾನಸಿಕತೆಯು ಸಮಾಜದಲ್ಲಿ ಪ್ರಬಲವಾಗುತ್ತಿದೆ. ವಿಜ್ಞಾನದ ಅಧಿಪತ್ಯವನ್ನು ಮಾತ್ರವೇ ಮೆರೆಸುವ ಬಹುತೇಕ ಜನರ ಉದ್ದೇಶ ಆರ್ಥಿಕತೆ ಎಂಬುದು ಮತ್ತು ಆ ಆರ್ಥಿಕತೆಯ ಚಲನೆ ಸರಾಗವಾಗಿ ನಡೆಯಲು ವಿಜ್ಞಾನ ಅಧ್ಯಯನದ ಇಚ್ಛೆಯಿಲ್ಲದಿರುವವರನ್ನೂ ವಿವಶರನ್ನಾಗಿಸಿ ಇಂಧನವಾಗಿಸುತ್ತಿದ್ದಾರೆ ಎಂಬುದು ಮತ್ತೊಂದು ವಿಷಯ. ಕಲಾಪರಿವಾರದವರಾಗದ ಹೊರತು ಕಲಾವಿದರಾಗಲು ಪ್ರಯತ್ನಿಸುವವರ ಆತ್ಮಗೌರವದ ನಿರ್ಧಾರವನ್ನು ಯಾರೋ ಒಬ್ಬರು ಇಬ್ಬರು ಸಮ್ಮಾನಿಸಬಹುದು. ಆದರೆ ಕಲೆಯಲ್ಲಿ ಯಶಸ್ಸು ಗಳಿಸಿದ ನಂತರ ಯಾವ ಕ್ಷೇತ್ರದಲ್ಲೂ ದೊರೆಯದ ಪ್ರೀತಿ, ಅಭಿಮಾನ, ಅಗಾಧ ಸಮ್ಮಾನಗಳು ಸಾಧಕರನ್ನು ಹುಡುಕಿಕೊಂಡು ಬರುತ್ತವೆ! ಈ ಒಂದು ತೆರನಾದ ವಾತಾವರಣದಲ್ಲಿ ಕಲಾನಗರಿ ಮೈಸೂರಿನಲ್ಲಿ ನಡೆಯುವ ಜಗತ್ಪ್ರಸಿದ್ಧ ಕಲಾವೈಭವದ ದಸರಾ ಕಲಾವಿದರ ಪಾಲಿಗೆ ಎಷ್ಟು ಮಹತ್ವದ್ದು ಎಂದು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ದಸರಾ ಕವಿಗೋಷ್ಠಿ, ಸಂಗೀತ ಸಂಜೆ, ಯುವದಸರಾ, ಬೊಂಬೆಗಳ ಅಲಂಕಾರಿಕ ಪೂಜೆ, ಸ್ತಬ್ಧಚಿತ್ರಗಳ ಮೆರವಣಿಗೆ, ಸಾಂಸ್ಕೃತಿಕ ನೃತ್ಯಗಳ ಪ್ರದರ್ಶನ, ಅಂತರಂಗಕ್ಕೆ ಮುದ ನೀಡುವ ಅಲಂಕಾರಗಳು, ವೈಭವಕರ ವಸ್ತುಪ್ರದರ್ಶನ ಮುಂತಾದ ಎಲ್ಲಾ ಬಗೆಯ ಕಲಾ ಕಾರ್ಯಕ್ರಮಗಳು ಜನಮಾನಸದಲ್ಲಿ ಮಹತ್ತರ ಪರಿಣಾಮವನ್ನು ಬೀರುತ್ತದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಆಧುನಿಕ ದಸರಾ: ಇಂದು ನಮ್ಮ ರಾಷ್ಟ್ರದಲ್ಲಿ ಮೊದಲಿನಂತೆ ರಾಜ್ಯಾಡಳಿತವಿಲ್ಲದಿದ್ದರೂ, ಪ್ರಜೆಗಳ ರಾಜಭಕ್ತಿ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಉತ್ತಮ ನಾಯಕರನ್ನು ಪ್ರಜೆಗಳು ಅತ್ಯಂತ ಗೌರವಾದರಗಳಿಂದ ಕಾಣುತ್ತಾರೆ. ಮೈಸೂರಿನ ಅರಸೊತ್ತಿಗೆಯ ಕೊನೆಯ ಪಟ್ಟಾಭಿಷಿಕ್ತ ದೊರೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ನಿಧನಾನಂತರ ನಿಂತು ಹೋಗಿದ್ದ ಈ ಸಾಂಪ್ರದಾಯಿಕ ಆಚರಣೆಯನ್ನು ನಮ್ಮ ರಾಜ್ಯ ಸರ್ಕಾರವೇ ಮುಂದುವರೆಸುತ್ತಾ ಬಂದಿದೆ. ಅಂಬಾರಿಯಲ್ಲಿ ಮೈಸೂರು ಮಹಾರಾಜರನ್ನು ಕೂರಿಸಿ ಮೆರವಣಿಗೆ ಮಾಡುವ ಬದಲು ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನಿಟ್ಟು ಮೆರವಣಿಗೆ ಮಾಡಲಾಗುತ್ತಿದೆ. ಜಂಬೂಸವಾರಿಯ ಮುಂದೆ ತೆರಳುತ್ತಿದ್ದ ಭವ್ಯಸೈನ್ಯದ ಮೆರವಣಿಗೆಯ ಬದಲು ಈಗ ನಾಡಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಸಾರುವ ಸ್ತಬ್ಧಚಿತ್ರಗಳು, ಸ್ವಯಂ ಸೇವಕದಳಗಳು, ಜನಪದ ಕಲಾವಿದರು ಮುಂತಾದವರ ಮೆರವಣಿಗೆ ನಡೆಯುತ್ತದೆ. ಯುವ ದಸರಾ ಮಾದರಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರತಿಭಾವಂತರಿಗೆ, ಪ್ರಸಿದ್ಧ ಕಲಾವಿದರಿಗೆ ವೇದಿಕೆಯನ್ನೊದಗಿಸಿ ಕೊಡಲಾಗುತ್ತದೆ. 

ನವರಾತ್ರಿ- ಜಗನ್ಮಾತೆಯ ವೈಭವೋಪೇತ ಆರಾಧನೆ: ವಿದ್ಯೆಯನ್ನು ಕರುಣಿಸುವವಳು, ಸಂಪತ್ತನ್ನು ನೀಡುವವಳು, ಶಕ್ತಿಯನ್ನು ಕೊಡುವವಳು, ತನ್ನದೇ ಸೃಷ್ಟಿಯ ಮೀನಿನ ಕಣ್ಣುಗಳ ಸ್ವರೂಪದಂತೆ ಸದಾಕಾಲ ಕಣ್ಣನ್ನು ತೆರೆದಿಟ್ಟುಕೊಂಡು ತನ್ನ ಮಕ್ಕಳನ್ನು ಪೊರೆಯುವ ಮೀನಾಕ್ಷಿಯಾಗಿರುವವಳು ಜಗನ್ಮಾತೆ. ತಾಯಿ ಚಾಮುಂಡೇಶ್ವರಿಯ ಶ್ರದ್ಧಾವಂತ ಭಕ್ತರಾಗಿದ್ದ ಮೈಸೂರಿನ ಮಹಾರಾಣಿಯರು ನಾಡಿನ ಜನತೆಗೆ ಸಂಕಟವೊದಗಿ ಬಂದಾಗಲೆಲ್ಲಾ ಮುಂದೆ ಬಂದು ಸಹಾಯಹಸ್ತ ಚಾಚಿದರು, ತಮ್ಮ ವೈಯಕ್ತಿಕ ಸುಖವನ್ನು ಕಡೆಗಣಿಸಿ ಒಡವೆ-ವೈಢೂರ್ಯಗಳನ್ನೂ ನೀಡಿದರು. ಈ ಜೀವನದಲ್ಲಿ ತೀರಿಸಲಾಗದ ಋಣ, ಕಡಿದುಕೊಳ್ಳಲಾಗದ ಬಂಧನ ಎಂದರೆ ತಾಯಿಯೊಂದಿಗಿನದು ಮಾತ್ರ. ಆದ್ದರಿಂದಲೇ ಸನ್ಯಾಸತ್ವ ಸ್ವೀಕರಿಸುವ ಸರ್ವಸಂಗ ಪರಿತ್ಯಾಗಿಗಳು ತಮಗೆ ತಾವೇ ಶ್ರಾದ್ಧ ಮಾಡಿಕೊಂಡು ಹೊಸ ವ್ಯಕ್ತಿಯಾಗಿ ರೂಪುಗೊಂಡರೂ, ತಮ್ಮ ತಾಯಿಯೊಂದಿಗಿನ ಪವಿತ್ರಬಂಧನವನ್ನು ಎಂದೂ ಕಡಿದುಕೊಳುವುದಿಲ್ಲ. ಇದಕ್ಕೆ ಅತ್ಯುತ್ತಮ ನಿದರ್ಶನ ಶ್ರೀಗುರುಗಳಾದ ಶಂಕರಾಚಾರ್ಯರು ಹಾಗೂ ಸ್ವಾಮಿ ವಿವೇಕಾನಂದರ ಜೀವನ. 

ಸತಿಯ ಅವತಾರದಲ್ಲಿ ತನ್ನಿಂದಲೇ ತನ್ನ ಪತಿದೇವ ಪರಮೇಶ್ವರನ ಗೌರವ, ಘನತೆಗಳಿಗಾದ ಧಕ್ಕೆಯಿಂದಾಗಿ ಯೋಗಾಗ್ನಿಯಿಂದ ದೇಹತ್ಯಾಗ ಮಾಡಿದ ಜಗನ್ಮಾತೆಯು ಪಾತಿವ್ರತ್ಯ ಧರ್ಮದ ಪರಾಕಾಷ್ಠೆಯನ್ನು ಎತ್ತಿಹಿಡಿದಳು. ವಿದೇಶಿ ಆಕ್ರಮಣಕಾರರ ಗುಲಾಮರಾಗಿ ಸಾವಿಗಿಂತಲೂ ದುಃಖಕರವಾದ ಬಾಳನ್ನು ನಡೆಸುವ ಬದಲು ತಮ್ಮ ಆತ್ಮಸಮ್ಮಾನವನ್ನು ರಕ್ಷಿಸಿಕೊಳ್ಳಲು ಹಲವಾರು ಸ್ತ್ರೀಯರು ಸತಿ ಪದ್ಧತಿಯನ್ನೇ ಅನುಸರಿಸಿದರು. ಸೀತಾಮಾತೆಯು ಪ್ರಭು ಶ್ರೀರಾಮನು ಮರ್ಯಾದಾಪುರುಷೋತ್ತಮನ ಸ್ಥಾನದಲ್ಲಿ ಆರಾಧಿತಗೊಳ್ಳಲು ಮಾಡಿದ ಸಕಲ ತ್ಯಾಗಗಳು ಅವಳನ್ನು ಪವಿತ್ರತೆಯ ಹೆಸರಿಗೆ ಸಮಾನವಾಗಿ ಸೂಚಿಸುವಂತೆ ಮಾಡಿದವು. ಇಂದಿಗೂ ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವಾದುದನ್ನು ಸೀತೆ ಎಂಬ ಹೆಸರಿನಿಂದ ಸೂಚಿಸಲಾಗುತ್ತದೆ. ಮಹಿಷಾಸುರನಂತಹ ಅಧರ್ಮಿ ರಾಕ್ಷಸರನ್ನು ಸಂಹಾರ ಮಾಡಿ ಧರ್ಮ ಸ್ಥಾಪನೆ ಮಾಡಿರುವ ಮಾತೆಯ ಅನುಗ್ರಹ, ಆಶೀರ್ವಾದಗಳಿಂದಲೇ ತಾನೆ ಮೈಸೂರು ದಸರಾ ಮಹೋತ್ಸವವು ಸುಸೂತ್ರವಾಗಿ ನಡೆದುಕೊಂಡು ಬರುತ್ತಿರುವುದು! ಈ ಮಹಿಷಾಸುರಮರ್ಧಿನಿಯ ವಿಜಯೋತ್ಸವವನ್ನು ಆಚರಿಸಲೆಂದೇ ವಿಜೃಂಭಣೆಯ ದಸರಾ ಬೆಳಕಿಗೆ ಬಂದಿತು ಎಂಬುದು ನಮ್ಮ ಧರ್ಮದ ಆಧ್ಯಾತ್ಮಿಕ ಹಿನ್ನಲೆ. 'ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ' ಎಂಬ ಈ ದೃಷ್ಟಿಕೋನದ ಮೂಲಕ ನಾವು ಜಗನ್ಮಾತೆಯನ್ನು ತಿಳಿದಿದ್ದೇವೆ. ಆದರೆ ಮಾತೆಯು ದುಷ್ಟರನ್ನು ತನ್ನ ಕೈಯಿಂದ ಸಂಹಾರ ಮಾಡುವುದು ಅವರ ಮೇಲಿನ ಕೃಪೆಯಿಂದಲೇ ಎಂಬ ಮತ್ತೊಂದು ಬಗೆಯ ದೃಷ್ಟಿಕೋನದಿಂದ ನಾವು ಮಾತೆಯನ್ನು ಅರಿತಿದ್ದೇವಾ? ಮಾತೆಯು ಯಾವ ಮಾರ್ಗದಲ್ಲಾದರೂ( ಉದಾ: ಕಾಯಿಲೆ, ಪ್ರಾಕೃತಿಕ ವಿಕೋಪ ) ಲೋಕ ಕಂಟಕರಾಗಿದ್ದಂತಹ ಅಸುರರನ್ನು ವಧೆ ಮಾಡಬಹುದಿತ್ತು. ಎಷ್ಟೇ ದುಷ್ಟರಾದರೂ ಅವರು ತನ್ನ  ಮಕ್ಕಳೆಂದು ವಾತ್ಸಲ್ಯಮೂರ್ತಿ ಮಾತೆಯು, ತನ್ನ ಕೈಯಾರೆ ಮೃತ್ಯುದಂಡವನ್ನು ನೀಡಿದರೆ ಅವರು ಮುಕ್ತಿ ಹೊಂದಲು ಹಕ್ಕುದಾರರಾಗುವರೆಂದು ಹೀಗೆ ಮಾಡುತ್ತಾಳೆ ಎಂದು ದೇವಿ ಮಹಾತ್ಮೆಯನ್ನು ಉದ್ಗರಿಸಲಾಗಿದೆ. ಅದಕ್ಕೆ ಹೇಳೋದು ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲವೆಂದು.

~ಸಿಂಚನ ಎಂ. ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ