ಏಳಿ ಎದ್ದೇಳಿ ವಿವೇಕ ಸ್ಮಾರಕ ನಿರ್ಮಾಣವಾಗುವವರೆಗೂ ನಿಲ್ಲದಿರಿ.....

ಲೇಖನ: ಏಳಿ ಎದ್ದೇಳಿ ವಿವೇಕ ಸ್ಮಾರಕ ನಿರ್ಮಾಣವಾಗುವವರೆಗೂ ನಿಲ್ಲದಿರಿ....
ವಿವೇಕಾನಂದರ ಆದರ್ಶದಲ್ಲಿ ನಡೆಯುವವರಂತೆ ಕೇಳ್ತಾರೆ ವಿಶ್ವಾಸದ ಓಟು,
ವಿವೇಕಾನಂದ ಸ್ಮಾರಕ ನಿರ್ಮಾಣದಲ್ಲಿ ಮಾತ್ರ ಹಾಕ್ತಿದ್ದಾರೆ ನಿರ್ಲ್ಯಕ್ಷದ ಹಿಂದೇಟು

ಯುವಜನತೆಯ ಉತ್ಥಾನಕ್ಕಾಗಿ ಬೇಕು
ಯುವ ಮನಸುಗಳ ಚೈತನ್ಯಕ್ಕಾಗಿ ಬೇಕು
ಯುವಭಾರತದ ನಿರ್ಮಾಣಕ್ಕಾಗಿ ಬೇಕು
ವಿವೇಕಾನಂದ ಸ್ಮಾರಕ ಬೇಕೇಬೇಕು

ವಿಶ್ವಮಾನವ ವಿವೇಕಾನಂದರ ಹೆಸರಿಗೆ ತಳುಕು ಹಾಕುತ್ತಿದ್ದಾರೆ ಜಾತಿಯ ಗಂಟು
ಈ ಅನರ್ಥ ಸಂಗತಿಯ ಅರ್ಥೈಸಿಕೊಳ್ಳಲು ಎಲ್ಲಿದೆ ಮೂರ್ಖತನದ ನಿಘಂಟು
ಇನ್ನು ಮುಂದೆ ಬರದಿದ್ದರೆ ಧ್ವನಿಗೊಟ್ಟು ಒಡೆಯುವರು ನಮ್ಮ ಅಖಂಡತೆಯ ಒಗ್ಗಟ್ಟು! 

ಸ್ವಾಮಿ ವಿವೇಕಾನಂದರು ಈ ಮಾತೃಭೂಮಿಗಾಗಿ ಅರ್ಪಿಸಿದರು ತಮ್ಮ ಸರ್ವಸ್ವ
ಆ ಮಹಾತ್ಮನ ಸ್ಮಾರಕ ನಿರ್ಮಿಸಲು ಈ ನಾಯಕರು ವಹಿಸಿಕೊಳ್ಳುತ್ತಿಲ್ಲವೇಕೆ ನೇತೃತ್ವ
ದೇಶದ ಉದ್ಧಾರಕ್ಕಾಗಿ ಬದುಕಿದವರ ಅಗೌರವಿಸಿದರೆ ಉಳಿವುದೇ ಈ ಭವ್ಯ ಭಾರತದ ಅಸ್ತಿತ್ವ.....?

1892ರ ವರ್ಷ, ಮೈಸೂರಿನ ಇತಿಹಾಸದ ಪುಟಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಮಹತ್ತರ ಘಟನೆಗೆ ಸಾಕ್ಷಿಯಾದ ವರ್ಷ. ವೀರ ಸನ್ಯಾಸಿ, ದೇಶ ಪ್ರೇಮಿ, ಶಕ್ತಿ ಸಂಜೀವಿನಿ, ಮಹಾನ್ ಚೈತನ್ಯಶಾಲಿ, ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರು ಮೈಸೂರಿಗೆ ಆಗಮಿಸಿದ್ದಾಗ ನಂಜುಂಡ ಅನಾಥಾಲಯ( ನಿರಂಜನ ಮಠ ) ಎಂಬಲ್ಲಿ ತಂಗಿದ್ದು ಮೈಸೂರಿನ ಜನತೆಯ ಶ್ರೇಯೋಭಿವೃದ್ಧಿಗಾಗಿ ಆಶೀರ್ವದಿಸಿದ್ದರು. ವಿವೇಕಾನಂದರ 150ನೆ ಜಯಂತಿಯ ಸುಸಂದರ್ಭದಲ್ಲಿ ಅವರ ಸ್ಮರಣಾರ್ಥವಾಗಿರುವ ಇಂತಹ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈಗೊಂಡ ಅಂದಿನ ಕೇಂದ್ರ ಸರ್ಕಾರವು, ಮೈಸೂರಿನಲ್ಲಿ ವಿವೇಕ ಸ್ಮಾರಕವನ್ನು ನಿರ್ಮಿಸಲು ಅನುಮೋದಿಸಿತು. ಆದರೆ ಆ ಸ್ಥಳದಲ್ಲಿ ಅಸ್ತಿತ್ವದಲ್ಲಿದ್ದ ಎಲ್.ಟಿ.ಎಮ್ ಶಾಲೆ ಹಾಗೂ ನಿರಂಜನಾ ಮಠವು ಇದರ ವಿರುದ್ಧ ಹಲವಾರು ಪಿಐಎಲ್ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದವು. ಆದರೆ ಎಲ್.ಟಿ.ಎಮ್ ಶಾಲೆಯನ್ನು ಮುಚ್ಚದೆ ಹತ್ತಿರದ ದೇವರಾಜ ಶಾಲೆಯಲ್ಲಿ ವಿಲೀನಗೊಳಿಸಲಾಗುತ್ತಿರುವ ಹಾಗೂ ನಿರಂಜನಾ ಮಠವೆಂದು ಉಲ್ಲೇಖಿಸುತ್ತಿರುವ ವೀರಶೈವ ಸಮುದಾಯದ ಬಳಿ ಸೂಕ್ತ ದಾಖಲೆಗಳಿಲ್ಲದ ಕಾರಣ ಮತ್ತು ಆ ಅನಾಥಲಯಕ್ಕೆ ಪರ್ಯಾಯ ಭೂಮಿಯನ್ನು ನೀಡಿರುವ ಕಾರಣ ಅವರು ಹಾಕಿದ್ದ ಎಲ್ಲಾ ಮೊಕದ್ದಮೆಗಳು ಹೈಕೋರ್ಟ್ ನಿಂದ ತಿರಸ್ಕೃತಗೊಂಡವು.
ಆದ್ದರಿಂದ ಈ ಎಲ್ಲಾ ಕಾನೂನು ಹೋರಾಟಗಳನ್ನು ಮಾಡಿ ವಿಜಯಿಯಾಗಿರುವ ಶ್ರೀರಾಮಕೃಷ್ಣ ಆಶ್ರಮವು ವಿವೇಕಾನಂದರ ಆಶಯದಂತೆ ಯುವಸಿಂಹಗಳ ನಿರ್ಮಾಣಕ್ಕಾಗಿ ವ್ಯಕ್ತಿತ್ವ ನಿರ್ಮಾಣ, ಮೌಲ್ಯ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷಾ ಸಾಮಗ್ರಿ, ಆಧ್ಯಾತ್ಮಿಕ ತರಗತಿ, ಯೋಗ ಮತ್ತು ಪ್ರಾಣಾಯಾಮ ತರಗತಿಗಳನ್ನು ನಡೆಸುವ ವಿವೇಕಾನಂದರ ಸಾಂಸ್ಕೃತಿಕ ಯುವಕೇಂದ್ರವನ್ನು ಆರಂಭಿಸಲು ಉತ್ಸುಕವಾಗಿದೆ. ಆದರೆ ಕೆಲವರು ನಿರಂಜನಾ ಮಠವನ್ನು ಜಾತಿಸೂಚಕವನ್ನಾಗಿ ಮಾರ್ಪಡಿಸಿ, ಮಠದ ಆವರಣದಲ್ಲಿ ಧರಣಿ ನಡೆಸುತ್ತಿರುವುದು ವಿಷಾದನೀಯ. ಈ ಅನ್ಯಾಯದ ನಡೆ ಕೊನೆಗೊಂಡು, ರಾಜಕೀಯ ಸ್ವ-ಹಿತಾಸಕ್ತಿಗಳು ದೂರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಕ್ಷಮ ಮಾರ್ಗವನ್ನು ಪ್ರಶಸ್ತಗೊಳಿಸುವ ವಿವೇಕ ಸ್ಮಾರಕದ ನಿರ್ಮಾಣವು ಶೀಘ್ರವಾಗಿ ನಡೆಯಲಿ. ಹಿಂದೂ ಧರ್ಮದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದ ನಮ್ಮ ಆತ್ಮಗೌರವವನ್ನು ಬಡಿದೆಬ್ಬಿಸಿದ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ನಾವೆಲ್ಲರೂ ಜಾತಿಯ ಸಂಕೋಲೆಯನ್ನು ಕಳಚಿ, ಒಗ್ಗಟ್ಟಿನ ಮಂತ್ರವನ್ನು ಜಪಿಸುವಂತಾಗಲಿ.

ಈ ಒಂದು ಸಂಕ್ಷಿಪ್ತ ವರದಿಯ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳನ್ನು ಅವಲೋಕಿಸಬೇಕಿದೆ. ನಿರಂಜನಾ ಮಠ ಎಂಬ ನಾಮಾಂಕಿತವು ಕೇವಲ ಒಂದು ಸಂಪ್ರದಾಯವರ್ಗದವರಿಗೆ ಸಂಬಂಧಿಸಿದೆ ಎಂದು ಹೇಳುತ್ತಾ ಕೆಲವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರ ಮೂಲನಾಮವಾದ ನಂಜುಂಡ ಅನಾಥಾಲಯವು ಸಮಸ್ತ ಹಿಂದೂ ಧರ್ಮದ ಅನಾಥ ಮಕ್ಕಳಿಗೆ ಆಶ್ರಯವನ್ನು ನೀಡಿ ಬೆಳೆಸುವ ಘನ ಉದ್ದೇಶದಿಂದ ಸ್ಥಾಪನೆಯಾಯಿತು. ಶೈಕ್ಷಣಿಕ ಕಾರಣಗಳಿಂದಾಗಿ ಈ ಭೂಮಿಯನ್ನು ವಶಪಡಿಸಿಕೊಂಡ ಸರ್ಕಾರವು ನಂತರದಲ್ಲಿ ಇದಕ್ಕೆ ಪರ್ಯಾಯವಾಗಿ ಮೈಸೂರಿನಲ್ಲೇ ಸುಬ್ಬರಾಯನ ಕೆರೆಯ ಬಳಿ ಭೂಮಿಯನ್ನು ನೀಡಿತು. ಈ ಬೆಳವಣಿಗೆಯ ನಂತರ ಸ್ತಬ್ಧವಾಗಿದ್ದ ನಿರಂಜನಾ ಮಠದ ಕೂಗು ಇದೀಗ ಮತ್ತೆ ಆ ಸ್ಥಳದಲ್ಲಿ ಧರಣಿಗಳಾಗುವ ಮೂಲಕ ಪ್ರತಿಧ್ವನಿಸಿದೆ. ಈ ಮೂಲಕ ಹೈಕೋರ್ಟ್ ನ ಆದೇಶವನ್ನು ಅವಹೇಳನ ಮಾಡಿದಂತಾಗಿದೆ. ಶಿವಲಿಂಗ, ದಕ್ಷಿಣಾಮೂರ್ತಿ ಹಾಗೂ ನಂದಿ ವಿಗ್ರಹಗಳು ಈ ಸ್ಥಳದಲ್ಲಿರುವುದರಿಂದ ಇವು ವೀರಶೈವ ಸಂಪ್ರದಾಯದವರಿಗೆ ಸೇರಿದವುಗಳು ಎಂದು ವಾದಿಸಲಾಗುತ್ತಿದೆ. ಆದರೆ ಈ ಮೂರ್ತಿಗಳು ಸಮಸ್ತ ಸನಾತನ ಹಿಂದೂಗಳಿಗೆ ಸೇರಿದ ದೈವೀ ಪ್ರತೀಕಗಳು, ಕೇವಲ ಒಂದು ಸಂಪ್ರದಾಯಕ್ಕೆ ಸೇರಿದವುಗಳಲ್ಲ. ಶ್ರೀರಾಮಕೃಷ್ಣಾಶ್ರಮದವರನ್ನೇ ಆ ಸ್ಥಳದ ದೇವಾಲಯದ ಪೂಜೆಗೆ ನಿರಾಕರಿಸಿ, ಅವರ ಮೇಲೆ ಭೌತಿಕವಾಗಿ ಹಲ್ಲೆ ಮಾಡಿರುವುದು ಧರಣಿಕಾರರ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಶ್ರೀರಾಮಕೃಷ್ಣ ಆಶ್ರಮದವರು ಮೊದಲಿನಿಂದಲೂ ಬಸವಾದಿ ಶರಣರ ಮೇಲೆ ಅತೀವ ಗೌರವವನ್ನು ಹೊಂದಿದ್ದು ವೀರಶೈವ ಸಮುದಾಯದವರನ್ನು ಆದರದಿಂದ ಕಾಣುತ್ತಾರೆ. ಅಂತೆಯೇ ವೀರಶೈವ ಸಮುದಾಯದವರು ಶ್ರೀರಾಮಕೃಷ್ಣಾಶ್ರಮವನ್ನು ಗೌರವಿಸುತ್ತಾರೆ ಹಾಗೂ ಬಹುತೇಕರು ವಿವೇಕಸ್ಮಾರಕದ ನಿರ್ಮಾಣವನ್ನು ಬೆಂಬಲಿಸುತ್ತಾರೆ. ಹೀಗಿರುವಾಗ ಈ ಅಖಂಡತೆಯನ್ನು ಒಡೆಯಲು ಯಾರು ಪ್ರಯತ್ನಿಸುತ್ತಿದ್ದಾರೆ? ಇಂತಹ ಸ್ವಾರ್ಥಪರರು ಹಾಗೂ ರಾಜಕೀಯ ಪ್ರೇರಿತರಿಂದ ಹಿಂದೂ ಧರ್ಮದ ಒಗ್ಗಟ್ಟನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಇನ್ನು ಎಲ್.ಟಿ.ಎಮ್ ಶಾಲೆಯ ವಾಸ್ತವಿಕ ಸ್ಥಾನ ಈಗ ನಿರ್ಧರಿತವಾಗಿರುವ ವಿವೇಕ ಸ್ಮಾರಕದ ನಿರ್ಮಾಣ ಸ್ಥಳವಲ್ಲ. ಈ ಶಾಲೆಯು ಮೊದಲು ಅರಮನೆಯ ಪ್ರಾಂಗಣದಲ್ಲಿ ಆರಂಭವಾಗಿ, ಮುಂದೆ ಸಂಖ್ಯಾಹೆಚ್ಚಳದಿಂದಾಗಿ ಸರ್ಕಾರದ ಮೂಲಕವೇ  ನಿರಂಜನಾ ಮಠದಿಂದ ವಶಪಡಿಸಿಕೊಳ್ಳಲಾದ ಕೆಲ ಭೂಭಾಗವನ್ನು ಪಡೆದುಕೊಂಡಿತು. ಪುರಾತನ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಸರ್ವರ ಇಚ್ಛೆಯಿಂದಲೇ ಈ ಶಾಲೆಯನ್ನು ಮುಚ್ಚದೆ, ಹತ್ತಿರದ ದೇವರಾಜ ಶಾಲೆಯಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ. 

ವಿವೇಕ ಸ್ಮಾರಕದ ಧ್ಯೇಯೋದ್ದೇಶಗಳು:

1. ಸ್ವಾಮಿ ವಿವೇಕಾನಂದರ ಆದರ್ಶದಂತೆ ಭೌತಿಕ, ಮಾನಸಿಕ, ಆಧ್ಯಾತ್ಮಿಕ ಎಲ್ಲಾ ಸ್ತರಗಳಲ್ಲೂ ಸಮರ್ಥವಾಗಬಲ್ಲ ಶಕ್ತಿಶಾಲಿ ಯುವಪಡೆಯನ್ನು ನಿರ್ಮಾಣ ಮಾಡುವುದು
2. ವಿವೇಕ ಸ್ಮಾರಕದ ಸುತ್ತ-ಮುತ್ತಲಿನ ಸುಮಾರು 5ರಿಂದ 6 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಸ್ಥಾಪಿಸಿ ವಿವೇಕಾನಂದರ ಕುರಿತ ವಿಶೇಷ ವಿಭಾಗವನ್ನು ಸ್ಥಾಪಿಸುವುದು, ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಪುಸ್ತಕಗಳನ್ನು ಒದಗಿಸುವುದು
3. ವಿದ್ಯಾರ್ಥಿಗಳಿಗಾಗಿ ಅಲ್ಪಾವಧಿಯ ಕೋರ್ಸ್ ಗಳಾದ ವ್ಯಕ್ತಿತ್ವ ವಿಕಸನ ತರಗತಿ, ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪ್ರಭುತ್ವ ತರಗತಿ, ಕೌಶಲ್ಯ ಅಭಿವೃದ್ಧಿ ತರಗತಿ, ಭಾರತೀಯ ಆಧ್ಯಾತ್ಮಿಕ- ಸಂಸ್ಕೃತಿ ತರಗತಿ, ಉನ್ನತ ಮೌಲ್ಯ ಶಿಕ್ಷಣ ತರಬೇತಿ, ಯೋಗ ಮತ್ತು ಪ್ರಾಣಾಯಮದ ತರಗತಿ, ವಿವಿಧ ಪ್ರಕಾರದ ಸಂಗೀತ ಮುಂತಾದವುಗಳನ್ನು ಪ್ರಾರಂಭಿಸುವುದು
4. ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿವೇಕಾನಂದರ ಜೀವನದ ಸಮಗ್ರ ಚಿತ್ರಣ- ಮಾಹಿತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸುವುದು
5. ವಿವೇಕಾನಂದರ ಕುರಿತು ಸಾಕ್ಷ್ಯ ಚಿತ್ರವನ್ನು ನಿರ್ಮಿಸುವುದು
6. ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ  ಗ್ರಾಮಗಳ ಸಮೀಕ್ಷೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು

ಹೀಗೆ ಹಲವಾರು ವಿಕಸನದ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿರುವ ಶ್ರೀರಾಮಕೃಷ್ಣ ಆಶ್ರಮದ ಈ ಘನಾತ್ಮಕ ಕಾರ್ಯ ಸಾಕಾರವಾಗಲು ನಮ್ಮೆಲ್ಲರ ಸಂಪೂರ್ಣ ಬೆಂಬಲ, ಸಹಕಾರ ಹಾಗೂ ಸಹಭಾಗಿತ್ವವು ಅತ್ಯವಶ್ಯಕವಾಗಿದೆ. ವಿವೇಕಾನಂದರ ಚಿಂತನೆಯಂತೆ ಭಾರತದ ಭವ್ಯ ಭವಿಷ್ಯವನ್ನು ನಿರ್ಮಿಸಲು ಸಿದ್ಧವಾಗಿರುವ ಆಶ್ರಮದ ಜೊತೆ ನಮ್ಮೆಲ್ಲಾ ಜಾತಿ, ರಾಜಕೀಯ ಬಂಧನಗಳನ್ನು ಕಳಚಿ ಧೃಡವಾಗಿ ನಿಲ್ಲುವುದು ಅತ್ಯಗತ್ಯವಾಗಿದೆ.

ಮೈಸೂರಿನ  ಶ್ರೀರಾಮಕೃಷ್ಣ ಆಶ್ರಮವು ತನ್ನ 95 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೈಸೂರಿನ ಜನತೆಯ ಕಲ್ಯಾಣಕ್ಕಾಗಿ ನಿಸ್ವಾರ್ಥಭಾವದಲ್ಲಿ ಸೇವಾಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇಂತಹ ನಿಷ್ಕಂಳಕ, ಸಮ್ಮಾನಕರ ಚರಿತ್ರೆಯನ್ನು ಹೊಂದಿರುವ ಆಶ್ರಮವು ಭೂಕಬಳಿಕೆ ಮಾಡುವುದೇ? 'ಆತ್ಮನೊ ಮೋಕ್ಷಾರ್ಥಂ ಜಗತ್ ಹಿತಾಯಚ' ಎಂಬ ವೇದತತ್ತ್ವವನ್ನು ತನ್ನದಾಗಿಸಿಕೊಂಡಿರುವ ಆಶ್ರಮದವರನ್ನೂ ಸಹ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸುವ ದುಃಸ್ಥಿತಿಯನ್ನು ನಿರ್ಮಿಸಿದ್ದೇವಲ್ಲ! ಸ್ವ-ಹಿತಾಸಕ್ತಿಗಳಿಗನುಸಾರ ಎಷ್ಟೇ ಮೊಕದ್ದಮೆಗಳನ್ನು ತಮ್ಮ ಮೇಲೆ ಹೂಡುತ್ತಾ ಬಂದರೂ, ಸಂಯಮವನ್ನು ಕಳೆದುಕೊಳ್ಳದ ಆಶ್ರಮವು ಈ ರಾಷ್ಟ್ರದ ಸಂವಿಧಾನದ ಮೇಲೆ ನಂಬಿಕೆಯನ್ನಿರಿಸಿ ಕಾನೂನಾತ್ಮಕವಾದ ಹೋರಾಟವನ್ನು ಮಾಡುತ್ತಾ ಬಂದಿದೆ. ಪ್ರತೀ ಭಾನುವಾರ ಮನೆ-ಮನೆಗೆ ತೆರಳಿ ವಿವೇಕ ಸ್ಮಾರಕದ ಬಗ್ಗೆ ಜಾಗೃತಿ ಮೂಡಿಸುವ ಶಾಂತಿಪೂರ್ಣ ಕಾರ್ಯವನ್ನು ಮಾಡುತ್ತಾ ಬಂದಿದೆ. ಶ್ರೀರಾಮಕೃಷ್ಣ ಆಶ್ರಮದ ಜೊತೆಗೆ ಮೈಸೂರಿನ ಬಹುತೇಕ ಯುವ ಸಂಘಟನೆಗಳು ಗಟ್ಟಿಯಾಗಿ ನಿಂತಿವೆ. ಯುವಶಕ್ತಿಯನ್ನು ಉದ್ದೀಪನಗೊಳಿಸಲು ಸಂಕಲ್ಪಬದ್ಧವಾಗಿರುವ ವಿವೇಕಸ್ಮಾರಕದ ಯೋಜನೆಯು ಶೀಘ್ರವಾಗಿ ಜಾರಿಯಾಗಬೇಕೆಂದು ಆಗ್ರಹಿಸಿ, ಮೈಸೂರಿನ ನೂರಾರು ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನೇ ನಡೆಸಿದ್ದಾರೆ. ಶ್ರೀರಾಮಕೃಷ್ಣಾಶ್ರಮದ ಸನ್ಯಾಸಿಗಳು ಇಂದಿಗೂ ಸಂಯಮದಿಂದಿರುವುದನ್ನು ನೋಡಿ ಅದನ್ನು ದುರ್ಬಲತೆ ಎಂದು ಅರ್ಥೈಸಿಕೊಂಡರೆ ನಿಮ್ಮಂತಹ ಅಜ್ಞಾನಿಗಳು ಬೇರೆ ಯಾರೂ ಇಲ್ಲ ಎಂದು ತಿಳಿಯಿರಿ.ಏಕೆಂದರೆ ಈ ಪ್ರಪಂಚದಲ್ಲಿ ಯಾರು ಅತ್ಯಂತ ಶ್ರೇಷ್ಠರೊ ಹಾಗೂ ಅತ್ಯಂತ ಧೈರ್ಯಶಾಲಿಗಳೊ ಅವರು ಮಾತ್ರ ಸನ್ಯಾಸತ್ವವನ್ನು ಸ್ವೀಕರಿಸಿ ಸಾಹಸ ಜೀವನವನ್ನು ನಡೆಸಲು ಸಾಧ್ಯ. 

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ