ಇಸ್ರೇಲಿಗಳು ಭಯೋತ್ಪಾದನೆಯ ವಿರುದ್ಧ ನಡೆಸುವ ಹೋರಾಟ ವಿಶ್ವಕ್ಕೆ ಮಾದರಿ
ಇಸ್ರೇಲಿಗಳು ಭಯೋತ್ಪಾದನೆಯ ವಿರುದ್ಧ ನಡೆಸುವ ಹೋರಾಟ ವಿಶ್ವಕ್ಕೆ ಮಾದರಿ
ಇಸ್ರೇಲ್ ನ ಅಸ್ತಿತ್ವದ ಹೋರಾಟವು ಇಂದು ನಿನ್ನೆಯದಲ್ಲ. ತುಂಬಾ ಪ್ರಾಚೀನ ಕಾಲದಿಂದಲೂ ನಿರಂತರವಾಗಿ ಸಂಘರ್ಷ ನಡೆಸುತ್ತಲೇ ಸಾಗಿದೆ. ಹಿಂಸಾತ್ಮಕ ಭಯೋತ್ಪಾದನೆಯ ದಾಳಿಗಳಿಗೆ ಶಾಂತಿ ಮಂತ್ರ ಜಪಿಸದ, ರಾಷ್ಟ್ರದ ಸುರಕ್ಷತೆಗಾಗಿ ದಾಳಿಗೆ ಪ್ರತಿಯಾಗಿ ಭಯಾನಕ ದಾಳಿಯನ್ನು ನಡೆಸಿ ಉಗ್ರರನ್ನು ನಿಗ್ರಹಿಸುವ ತಂತ್ರಜ್ಞಾನ ಮಿಶ್ರಿತ ಸಾಹಸ ಕಲೆಯನ್ನು ಇಸ್ರೇಲ್ ನಿಂದ ಭಯೋತ್ಪಾದನಾ ಪೀಡಿತ ರಾಷ್ಟ್ರಗಳು ಕಲಿಯಬೇಕಿದೆ.
ಜೆರುಸಲಂ ನಲ್ಲಿ ಪ್ಯಾಲಿಸ್ತಿನ್ ಹಾಗೂ ಹಮಾಸ್ ಉಗ್ರ ಸಂಘಟನೆಗಳು ಸಾವಿರಾರು ರಾಕೆಟ್ ಗಳಿಂದ ದಾಳಿ ಮಾಡುವ ಮೂಲಕ ಇಸ್ರೇಲ್ ನ ಆಂತರಿಕ ಭದ್ರತೆಗೆ ಸವಾಲೊಡ್ಡುವ ದುಸ್ಸಾಹಸ ಮಾಡಿದೆ. ಆದರೆ, ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿರುವ ಇಸ್ರೇಲ್ ತನ್ನ ಪ್ರಜೆಗಳನ್ನು ರಕ್ಷಿಸಲು ಹಾಗೂ ಈ ರೀತಿಯ ಅಭದ್ರತೆಗೆ ಕಾರಣವಾಗಿರುವ ಉಗ್ರರನ್ನು ಮಟ್ಟ ಹಾಕಲು ಐರನ್ ಡೋಮ್ ಗಳೆಂಬ ಆಂಟಿ ಮಿಸೈಲ್ ಗಳನ್ನು ಪ್ರತಿದಾಳಿಗೆ ಬಳಸಿ ರಾಕೆಟ್ ಗಳನ್ನು ನಾಶಗೊಳಿಸುವಲ್ಲಿ ಸಫಲವಾಗಿದೆ. ಇಸ್ರೇಲ್ ನ ರಕ್ಷಣಾ ವಿಭಾಗದ ವಿಜ್ಞಾನಿಗಳ ಕನಸಿನ ಕೂಸೆಂಬಂತೆ ಭೀಕರ ದಾಳಿಗೆ ಪ್ರತ್ಯುತ್ತರವೆಸಗಲು ಸಂಕಲ್ಪಿಸಿ ತಯಾರಾದ ಈ ಐರನ್ ಡೋಮ್ ಗಳು 70ಕಿ.ಮೀ.ವರೆಗೆ ತನ್ನ ಟಾರ್ಗೆಟ್ ಅನ್ನು ತಲುಪಿ ದಾಳಿ ಮಾಡಲು ಸಕ್ಷಮವಾಗಿವೆ. ಇಸ್ರೇಲ್ ನ ರಕ್ಷಣಾ ಪಡೆಗಳು ನಡೆಸಿದ ಏರ್ ಸ್ಟ್ರೈಕ್ ಕಾರ್ಯಾಚರಣೆಯಲ್ಲಿ ಉಗ್ರರು ಅಡಗಿಕೊಂಡಿದ್ದ ಗಾಜಾ ಪ್ರದೇಶದ 14 ಫ್ಲೋರ್ ಗಳ ದೊಡ್ಡ ಬಿಲ್ಡಿಂಗ್ ನಾಶವಾಗಿದೆ. ಆ ಬಿಲ್ಡಿಂಗ್ ನ ಮೇಲೆ ದಾಳಿ ನಡೆಸುವ ಮೊದಲು ಅಲ್ಲಿ ನೆಲೆಸಿದ್ದ ನಾಗರಿಕರನ್ನು ಸುರಕ್ಷತಾ ಸ್ಥಳಗಳಿಗೆ ರವಾನಿಸಲಾಗಿತ್ತು ಎಂದು ರಕ್ಷಣಾ ವಿಭಾಗೀಯ ಕಾರ್ಯಾಲಯವು ಮಾಹಿತಿ ನೀಡಿದೆ. ಹಾಗೆಯೇ ಈ ದಾಳಿಯಲ್ಲಿ 16 ಹಮಾಸ್ ನ ಉಗ್ರರು ಮೃತರಾಗಿದ್ದಾರೆಂದು ದಾಖಲೆ ನೀಡಿದೆ. ಇದರ ಜೊತೆಗೆ ಏರ್ ಸ್ಟ್ರೈಕ್ ನ ದಾಳಿಯಿಂದ ರಾಕೆಟ್ ಲಾಂಚ್ ಸ್ಥಳಗಳು, ಹಮಾಸ್ ಕಾರ್ಯಾಲಯಗಳು ಹಾಗೂ ಹಮಾಸ್ ನ ನಾಯಕರ ಮನೆಗಳಿಗೂ ಹಾನಿಯನ್ನುಂಟು ಮಾಡಲಾಗಿದೆ. ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಒಟ್ಟು 41 ಉಗ್ರರು ಸಾವಿನ್ನಪ್ಪಿದ್ದಾರೆಂದು ವರದಿಯಾಗಿದೆ.
ಹಮಾಸ್ ಉಗ್ರರು ದಾಳಿ ನಡೆಸಲು ಪ್ರಚೋದಿಸಿದ ಅಂಶಗಳಾದರೂ ಯಾವುದು? ಜೆರುಸೆಲಂ ನಲ್ಲಿ ಮತ್ತೆ ಮತ್ತೆ ಸಂಘರ್ಷಗಳು ನಡೆಯಲು ಐತಿಹಾಸಿಕವಾದ ಕಾರಣಗಳಾದರೂ ಯಾವುದು? ಪ್ಯಾಲಿಸ್ತಿನ್ ಸ್ವತಂತ್ರ ದೇಶದ ಬೇಡಿಕೆಯ ಆಗ್ರಹದ ಹಿಂದಿರುವ ಉದ್ದೇಶಗಳಾದರೂ ಏನು? ನಮ್ಮ ದೇಶವೇಕೆ ಇಸ್ರೇಲ್ ಅನ್ನು ಸಮರ್ಥನೆ ಮಾಡುತ್ತದೆ? ತನ್ನ ಸುತ್ತಲೂ ವೈರಿ ಮುಸಲ್ಮಾನ್ ರಾಷ್ಟ್ರಗಳಿಂದಲೇ ಸುತ್ತುವರೆದಿರುವ ಇಸ್ರೇಲ್ ಅಸ್ತಿತ್ವದಲ್ಲಿರುವುದಾದರೂ ಹೇಗೆ? ಬನ್ನಿ ಈ ಎಲ್ಲಾ ಸವಾಲಿನ ಪ್ರಶ್ನೆಗಳಿಗೆ ಉತ್ತರ ಹುಡುಕೋಣ. ಇಸ್ರೇಲ್ ನ ಸುಪ್ರೀಂಕೋರ್ಟ್ ನಲ್ಲಿ ಶೇಖ್ ಜರ್ರಾ ದಲ್ಲಿ ಕಾನೂನು ಬಾಹಿರವಾಗಿ ನೆಲೆಸಿರುವ ಪ್ಯಾಲಿಸ್ತಿನ್ ನ ಕುಟುಂಬದವರನ್ನು ಹೊರ ಹಾಕುವ ಬಗ್ಗೆ ವಿಚಾರಣೆ ನಡೆಯುತ್ತಿರುವುದರಿಂದ ಉಂಟಾದ ಆಕ್ರೋಶವೇ ಈ ಘರ್ಷಣೆಗೆ ಕಾರಣವಾಗಿದೆ. ಅಲ್ ಅಕ್ಸಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಪ್ಯಾಲಿಸ್ತಿನಿಯನ್ನರು ಹಾಗೂ ಪೋಲಿಸರ ನಡುವೆ ಆರಂಭವಾದ ಘರ್ಷಣೆಗಳು ಹಿಂಸಾತ್ಮಕ ರೂಪವನ್ನು ತಾಳಿದವು. ಅಂದಿನ ಪ್ಯಾಲಿಸ್ತಿನಿಯನ್ನರ ಆಕ್ರಮಣಕ್ಕೆ 21 ಆಫಿಸರ್ ಗಳು ಗಾಯಗೊಂಡಿದ್ದಾರೆ. ಈ ಘಟನೆಯ ಬೆಳವಣಿಗೆಗಳಿಂದ ಪ್ರಚೋದನೆಗೊಂಡ ಪ್ಯಾಲಿಸ್ತಿನ್ ಉಗ್ರ ಸಂಘಟನೆಗಳು ರಾಕೆಟ್ ಗಳ ಮೂಲಕ ದಾಳಿ ಮಾಡುತ್ತಾ ಅಭದ್ರತೆಯನ್ನುಂಟು ಮಾಡುತ್ತಿದ್ದರೆ, ಸ್ವತಂತ್ರ ಪ್ಯಾಲಿಸ್ತಿನ್ ನ ಆಗ್ರಹಕ್ಕಾಗಿ ಚಳುವಳಿ ನಡೆಸಲು ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ಬೀದಿಗಿಳಿದು ಮತ್ತೊಂದು ಅಭದ್ರತೆಯನ್ನುಂಟು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಸ್ಲಾಮಿಕ್ ದೇಶಗಳೆಲ್ಲವೂ ಇಸ್ರೇಲ್ ನ ವಿರುದ್ಧ ಒಗ್ಗಟ್ಟಾಗಿವೆ. ಇವರೊಂದಿಗೆ ಭಾರತದ ಬುದ್ಧಿಜೀವಿಗಳು, ಸೆಕ್ಯುಲರ್ ಜೀವಿಗಳು ಸೇರಿರುವುದು ಅಚ್ಚರಿಯ ಸಂಗತಿಯೇನಲ್ಲ, ಅದರಲ್ಲೂ ವಿಶೇಷವಾಗಿ ಅವರ ಚರಿತ್ರೆಯನ್ನು ತಿಳಿದುಕೊಂಡಿರುವವರಿಗೆ. ಹಮಾಸ್ ಉಗ್ರರು ಇಸ್ರೇಲಿಗಳ ಮೇಲೆ ದಾಳಿ ನಡೆಸಿ ಅಲ್ಲಿನ ನಾಗರಿಕರಿಗೆ ಹಾನಿ ಮಾಡುತ್ತಿದ್ದಾಗ ಮೌನವಾಗಿದ್ದ ಈ ಎಲ್ಲಾ ಮಾನವ ಹಕ್ಕುಗಳ ಹೋರಾಟಗಾರರು ಇಸ್ರೇಲ್ ತನ್ನ ರಾಷ್ಟ್ರದ ಸುರಕ್ಷತೆಗಾಗಿ ಪ್ರತಿ ದಾಳಿ ಆರಂಭಿಸಿದಾಗ ಅದರ ವಿರುದ್ಧ ಮಾತನಾಡಲು ಶುರು ಮಾಡಿದರು! ನಮ್ಮದೇ ದೇಶದ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ನಂತರ ನಡೆದ ಭಾಜಪಾ ಕಾರ್ಯಕರ್ತರ ಮೇಲಿನ ಅತ್ಯಾಚಾರ, ಹಿಂಸೆ, ಹತ್ಯೆಗಳನ್ನು ನೋಡಿ ಮರುಗದ ಇವರ ಹೃದಯವು ದೂರದ ಪ್ಯಾಲಿಸ್ತಿನ್ ಉಗ್ರರಿಗಾಗಿ ಮರುಗುತ್ತಿರುವುದು ಎಂತಹ ವಿಪರ್ಯಾಸ!
ಲೆಬನಾನ್, ಸಿರಿಯಾ, ಜೋರ್ಡಾನ್, ಈಜಿಪ್ಟ್ ನಂತಹ ಇಸ್ಲಾಮಿಕ್ ದೇಶಗಳಿಂದಲೇ ಸಂಪೂರ್ಣವಾಗಿ ಸುತ್ತುವರೆದಿರುವ ಇಸ್ರೇಲ್ ಇಂದಿಗೂ ಸಮರ್ಥವಾದ ಸಂಘರ್ಷವನ್ನು ಮಾಡುತ್ತಾ ಅಸ್ತಿತ್ವದಲ್ಲಿರುವುದು ದೊಡ್ಡ ಸಾಧನೆಯೇ ಸರಿ. ಈ ಭಯಾನಕ ದಾಳಿಗಳು ನಡೆಯುತ್ತಿರುವ ಇಸ್ರೇಲ್ ನ ಜೆರುಸೆಲಂ ಸ್ಥಳವು ಯಹೂದಿಗಳು, ಕ್ರಿಶ್ಚಿಯನ್ನರು ಹಾಗೂ ಮುಸಲ್ಮಾನರು ಮೂರೂ ಮತದವರಿಗೂ ಈ ಸ್ಥಳ ಪ್ರಮುಖವಾಗಿದ್ದು, ಪವಿತ್ರವೆಂದು ಗುರುತಿಸಲ್ಪಟ್ಟಿದೆ. ಯಹೂದಿಗಳು ಈ ಸ್ಥಳವನ್ನು ಪವಿತ್ರಗಳಲ್ಲೇ ಪವಿತ್ರ ಸ್ಥಳವೆಂದು ನಂಬುತ್ತಾರೆ. ಇದನ್ನು ತಮ್ಮ ಮೂಲ ಪುರುಷ ಆಡಮ್ ಜನಿಸಿ ಭೋದಿಸಿದ ಸ್ಥಳವೆಂದು ನಂಬುತ್ತಾರೆ. ಹಾಗೆಯೇ ತಮ್ಮ ದೊರೆ ಅಬ್ರಹಾಂ ಟೆಂಪಲ್ ಮೌಂಟ್( ಹರ್ ಹಬಿಯತ್ )ಎಂಬ ದೇವಾಲಯದಲ್ಲಿ ದೇವರ ಆಗ್ರಹದನುಸಾರ ತಮ್ಮ ಮಗ ಐಸಾಕ್ ನನ್ನೇ ಬಲಿದಾನ ನೀಡಲು ಮುಂದಾಗಿದ್ದು ಹಾಗೂ ಅವರ ಈ ನಿರ್ಧಾರದಿಂದ ಆ ಭಕ್ತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿಮಿತ್ತ ದೇವರು ಒಂದು ಪ್ರಾಣಿಯನ್ನು ಕಳುಹಿಸಿ ಅದನ್ನೇ ಬಲಿ ನೀಡುವಂತೆ ತಿಳಿಸಿದ್ದರೆಂಬ ಪ್ರತೀತಿಯಿದೆ. ಆದರೆ ಟೆಂಪಲ್ ಮೌಂಟ್ ಅನ್ನು ಸತತವಾಗಿ ಬ್ಯಾಬಿಲೋನಿಯನ್ನರು, ರೋಮನ್ನರು ಆಕ್ರಮಣ ಮಾಡಿ ಧ್ವಂಸಗೊಳಿಸಿದ್ದರಿಂದ ಅವಶೇಷವಾಗಿ ಒಂದು ಪಶ್ಚಿಮದ ಗೋಡೆಯನ್ನು ಮಾತ್ರ ಅಲ್ಲಿ ಕಾಣಬಹುದಾಗಿದೆ. ಆ ಗೋಡೆಯನ್ನೇ ತಮ್ಮ ಶ್ರದ್ಧಾ ಕೇಂದ್ರವನ್ನಾಗಿರಿಸಿ ಭಕ್ತಿಭಾವದಿಂದ ತಮ್ಮ ಆಚರಣೆಗಳನ್ನು ಮಾಡುತ್ತಾ ಬಂದಿರುವ ಇಸ್ರೇಲಿನ ಯಹೂದಿಗಳು ಆ ಸ್ಥಳದಿಂದಲೇ ದೇವರು ತಮ್ಮನ್ನು ರಕ್ಷಿಸುತ್ತಿದ್ದಾನೆಂದು ನಂಬಿದ್ದಾರೆ. ಟೆಂಪಲ್ ಮೌಂಟ್ ನ ಹತ್ತಿರದಲ್ಲೇ ಅಲ್ ಅಕ್ಸಾ ಮಸೀದಿಯು ನಿರ್ಮಾಣಗೊಂಡಿರುವುದು ಹಾಗೂ ಸ್ವಾತಂತ್ರ್ಯಾನಂತರ ಪ್ರತ್ಯೇಕಗೊಂಡಿದ್ದ ಪೂರ್ವ ಪ್ಯಾಲಿಸ್ತಿನ್ ಭೂಮಿಯನ್ನು1967ರ ಯುದ್ಧದಲ್ಲಿ ಇಸ್ರೇಲಿಗಳು ಮರಳಿ ಪಡೆದದ್ದು ಯಹೂದಿಗಳು ಹಾಗೂ ಮುಸಲ್ಮಾನರ ನಡುವೆ ಆಗಾಗ್ಗೆ ನಡೆಯುವ ಘರ್ಷಣೆಗಳಿಗೆ ಮುನ್ನುಡಿಯಾಗಿದೆ. ಈ ಘರ್ಷಣೆಯಲ್ಲೂ ಕೂಡ ಮುಸಲ್ಮಾನರ ಸ್ವತಂತ್ರ ಪೂರ್ವ ಪಾಲಿಸ್ತೀನ್ ನ ಬೇಡಿಕೆ ಮುಂದುವರಿಯುತ್ತಾ ಬಂದಿದೆ. ಮುಸಲ್ಮಾನರು ಮೆಕ್ಕಾ ಹಾಗೂ ಮದೀನಾ ಸ್ಥಳಗಳ ನಂತರ ಹೆಚ್ಚು ಪವಿತ್ರವೆಂದು ಭಾವಿಸುವುದು ಅಲ್ ಅಕ್ಸಾ ಮಸೀದಿ ಹೊಂದಿರುವ ಜೆರುಸೆಲಂ ಸ್ಥಳವನ್ನು. ಅಲ್ಲಿಂದಲೇ ತಮ್ಮ ಪ್ರವಾದಿ ಮೊಹಮ್ಮದ್ ಪೈ ಗಂಬರ್ ಸ್ವರ್ಗಸ್ಥರಾದರೆಂದು ನಂಬುತ್ತಾರೆ. ಇನ್ನು ಕ್ರಿಶ್ಚಿಯನ್ನರು ಈ ಸ್ಥಳದಲ್ಲಿ ಜೀಸಸ್ ಕ್ರಿಸ್ತರನ್ನು ಶಿಲುಬೆಗೇರಿಸಿದ್ದು ಎಂದು ನಂಬುತ್ತಾರೆ ಹಾಗೂ ಅದರ ಸ್ಮರಣಾರ್ಥ ನಿರ್ಮಿಸಲಾಗಿರುವ ಸೆಪಲ್ಕರ್ ಚರ್ಚ್ ಕೂಡ ಅವರ ಪಾಲಿಗೆ ಪವಿತ್ರವಾಗಿದೆ. ಈ ಎಲ್ಲಾ ಸಂವೇದನಾತ್ಮಕ ಸಂಗತಿಗಳಿಂದ ಆಗಾಗ್ಗೆ ನಡೆಯುತ್ತಲೇ ಇರುವ ಘರ್ಷಣೆಗಳಿಂದ ತಮ್ಮ ರಾಷ್ಟ್ರವನ್ನು ರಕ್ಷಿಸಲು ಇಸ್ರೇಲಿಗಳ ದೇಶಭಕ್ತಿ, ಸ್ವಾಭಿಮಾನ, ಶ್ರಮದ ಜೀವನ, ತಂತ್ರಜ್ಞಾನ ಹಾಗೂ ಆಧ್ಯಾತ್ಮ ಅಸ್ತ್ರಗಳಾಗಿವೆ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಹಾಗೂ ಪ್ಯಾಲಿಸ್ತಿನ್ ಇಸ್ಲಾಮಿಕ್ ಉಗ್ರಸಂಘಟನೆಗಳು ತಾವು ಮಾಡಿರುವ ಕಾರ್ಯಕ್ಕೆ ಸರಿಯಾದ ಮೌಲ್ಯವನ್ನು ಕಟ್ಟಲೇಬೇಕು. ನಾವೆಲ್ಲ ಉಗ್ರರ ವಿರುದ್ಧ ಒಗ್ಗಟ್ಟಾಗಿ ನಿಂತು ಹೋರಾಡಬೇಕಿದೆ. ಆದರೆ ಈ ಬೆಳವಣಿಗೆಯಿಂದ ತಮ್ಮ ಜೀವವನ್ನು ಕಳೆದುಕೊಂಡಿರುವ ನಾಗರಿಕರ ಬಗ್ಗೆ ದುಃಖವಿದೆ ಎಂದು ನೇರವಾಗಿ ಉತ್ತರಿಸುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ನಂತಹ ಸಂಘರ್ಷಾತ್ಮಕ ದೇಶಕ್ಕೆ ಗಟ್ಟಿಯಾಗಿ ನಿಂತು ಸಮರ್ಥನೆ ಮಾಡಲು ಯಾವ ದೇಶಗಳು ಮುಂದೆ ಬರದಿದ್ದರೂ, ಪ್ರಪ್ರಥಮವಾಗಿ ಭಾರತೀಯ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿ ತಮ್ಮ ಸ್ಪಷ್ಟ ಬೆಂಬಲವನ್ನು ಸೂಚಿಸಿದರು. ಇಸ್ರೇಲ್ ನ ಪ್ರಜೆಗಳು ಭಾರತೀಯರ ಮೇಲೆ ಎಷ್ಟು ಗೌರವ-ಆದರಗಳನ್ನು ಹೊಂದಿದ್ದಾರೆಂಬುದು ಅವರ ಪ್ರಧಾನಮಂತ್ರಿ ಉಚ್ಚರಿಸಿದ ಒಂದೇ ಒಂದು ವಾಕ್ಯದಿಂದ ಅರ್ಥವಾಗುತ್ತದೆ. ನಮ್ಮ ಪ್ರಧಾನಿಯ ಮೊದಲ ಭೇಟಿಯಲ್ಲಿ ಅವರ ಪ್ರಧಾನಿ 'ಈ ಭೇಟಿಗಾಗಿ ನಾವು 70 ವರ್ಷಗಳಿಂದ ಕಾದಿದ್ದೆವು' ಎಂದು ಹೇಳಿದ್ದೇ ಆ ಆದರದ ವಾಕ್ಯ. ಇಡೀ ಮಾನವಕುಲದ ಇತಿಹಾಸದಲ್ಲೆ ಅತ್ಯಂತ ಪ್ರಾಚೀನವಾಗಿರುವ ಹಾಗೂ ಅಷ್ಟೇ ನವಚೈತನ್ಯಶೈಲಿಯಾಗಿರುವ ನಮ್ಮ ಸನಾತನ ಭಾರತೀಯ ಹಿಂದೂ ಧರ್ಮ-ಸಂಸ್ಕೃತಿಯ ಮೇಲೆ ನಡೆದಿರುವಷ್ಟು ಆಕ್ರಮಣಗಳು ಬೇರೆಲ್ಲೂ ನಡೆದಿಲ್ಲ ಹಾಗೂ ನಡೆಯುತ್ತಿಲ್ಲ. ಎಲ್ಲಾ ದುರ್ಗಮಾತಿ ದುರ್ಗಮ ಆಕ್ರಮಣಗಳನ್ನು ಮೆಟ್ಟಿ ನಿಂತಿರುವ ನಮ್ಮ ಕ್ಷಾತ್ರತೇಜ, ಧರ್ಮದ ಅಂತಃಶಕ್ತಿ, ಸಂಘರ್ಷದ ಪರಿಯ ಪ್ರೇರಣಾಸ್ತೋತ್ರವು ಇಸ್ರೇಲಿಗರಿಗೆ ಅವರ ಈ ಹೋರಾಟದ ಕಾಲದಲ್ಲಿ ಅತ್ಯವಶ್ಯಕವಾಗಿದೆ.
~ಸಿಂಚನ. ಎಂ.ಕೆ ಮಂಡ್ಯ
Comments
Post a Comment