ಅವರು ಒಡೆದದ್ದು ಕೇವಲ ದೇವಸ್ಥಾನವನ್ನಲ್ಲ

ಅವರು ಒಡೆದದ್ದು ಕೇವಲ ದೇವಸ್ಥಾನವನ್ನಲ್ಲ
ಅವರು ಒಡೆದದ್ದು ಕೇವಲ ದೇವಸ್ಥಾನವನ್ನಲ್ಲ. ಅವರು ಒಡೆದದ್ದು ಕೋಟಿ-ಕೋಟಿ ಶ್ರದ್ಧಾವಂತ ಭಕ್ತರ ಮನಸ್ಸನ್ನು, ಹಿಂದುತ್ವ ಪರ ಸರ್ಕಾರವೆಂದು ವಿಶ್ವಾಸವಿರಿಸಿ ಮತ ಹಾಕಿದ್ದ ಹಿಂದೂಗಳ ಭಾವನೆಯನ್ನು, ಪ್ರಜಾಪ್ರಭುತ್ವದ ಘನತೆಗೆ ಸಾಕ್ಷಿಯಾಗಿ ಸಂವಿಧಾನಕ್ಕೆ ಬದ್ಧವಾಗಿರುವ ಪ್ರಜೆಗಳ ಗೌರವವನ್ನು, ಸರ್ಕಾರವು ಪ್ರಜಾಹಿತೈಷಿ ಎಂದು ಭಾವಿಸಿ ಬದುಕುತ್ತಿದ್ದ ನಾಡಜನರ ಭರವಸೆಯನ್ನು, ಈ ಪುಣ್ಯಭೂಮಿಯ ಸಾಂಸ್ಕೃತಿಕ ಸಂಕೇತವೇ ಆಗಿರುವ ಭಕ್ತವೃಂದದ ಸಮರ್ಪಣೆಯಿಂದ ಕಟ್ಟಲಾದ ಶಕ್ತಿ ಕೇಂದ್ರವನ್ನು, ತಮ್ಮ ಮನೆಗಳಿಗಿಂತಲೂ ಮೊದಲು ದೇವಸ್ಥಾನವನ್ನು ಕಟ್ಟಬೇಕೆಂಬ ಲೋಕ ಕಲ್ಯಾಣಕಾರಿ ಮಾರ್ಗವನ್ನು ಪ್ರಶಸ್ತಗೊಳಿಸಿದ್ದ ಆಧ್ಯಾತ್ಮಿಕತೆ ಎಂಬ ಮಹೋನ್ನತ ಆದರ್ಶವನ್ನು, ಅತ್ಯಂತ ಶ್ರೇಷ್ಠ ಯೋಗಿಗಳು ಹಾಗೂ ಸನ್ಯಾಸಿಗಳಂತೆ ಧ್ಯಾನ-ತಪಸ್ಸುಗಳಲ್ಲಿ ಸಿದ್ಧಿ ಹೊಂದಲು ಸಾಧ್ಯವಾಗದವರಿಗಾಗಿ ರಚಿಸಲಾದ ಅತ್ಯುತ್ತಮ ಧಾರ್ಮಿಕ ತಳಹದಿಯನ್ನು, ದೇಶದ ಪ್ರತೀ ಹಳ್ಳಿಗಳಲ್ಲೂ ಪರಂಪರಾನುಗತವಾಗಿ ನಡೆಸಿಕೊಂಡು ಬಂದಿದ್ದ ಗ್ರಾಮದೇವತೆ ಕಲ್ಪನೆಯ ಹಿರಿಮೆಯನ್ನು.

ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲಬಾರದು
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ ಎಂಬ ಬಸವಣ್ಣನವರ ವಚನವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವ ಅವಶ್ಯಕತೆಯಿದೆ.
ಸುಪ್ರೀಂಕೋರ್ಟ್ ನ 2009ನೆ ವರ್ಷದ ತೀರ್ಪಿನನ್ವಯ ಅನಧಿಕೃತ ಧಾರ್ಮಿಕ ಕೇಂದ್ರಗಳ ಮೇಲಿನ ಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನದಿಂದ ದೇಗುಲಗಳನ್ನು ನಿರ್ದಯವಾಗಿ ನೆಲಸಮ ಮಾಡಿರುವ ಅತೀವ ದುಃಖಕರ ಸಂದರ್ಭದಲ್ಲಿ ಈ ಮೇಲಿನ ವಚನಕ್ಕೆ ಅನ್ವಯವಾಗುವಂತೆ 
ಪ್ರಜಾಪಾಲಕರೇ ಪ್ರಜಾಪೀಡಕರಾಗಿರಲು ಇನ್ನಾರಿಗೆ ದೂರುವುದಯ್ಯಾ
ಹಿಂದಿನ ಹಿಂದೂವಿರೋಧಿ ನಿಲುವುಗಳನ್ನು ಪ್ರದರ್ಶಿಸಿದ್ದ ಸರ್ಕಾರದ ವಿರುದ್ಧ ಇಂದಿನ ಹಿಂದೂ ಪರ ಸರ್ಕಾರವನ್ನು ನಂಬಿ ಗೆಲ್ಲಿಸಿದ ಮೇಲೂ ಈ ದುಃಸ್ಥಿತಿ ಉಂಟಾದರೆ ಇನ್ನಾರಿಗೆ ದೂರುವೆ ಶಿವ? ಎಂಬಂತೆ ಅರ್ಥೈಸಬೇಕಿದೆ. 

ಇದುವರೆವಿಗೂ ನಾವು ತಿಳಿದುಕೊಂಡಿದ್ದೆವು ಮೊಹಮ್ಮದ್ ಘೋರಿ, ಮೊಹಮ್ಮದ್ ಘಜನಿ, ತೈಮೂರ್ ಎಂಬ ಮೂರ್ತಿ ಭಂಜಕ ಆಕ್ರಾಂತರು ನಮ್ಮ ದೇಗುಲಗಳನ್ನು ಒಡೆದಿದ್ದರು ಎಂದು ಮತ್ತು ಪಾಕಿಸ್ತಾನ, ಆಫ್ಘಾನಿಸ್ತಾನದಂತಹ ಭಯೋತ್ಪಾದಕ ರಾಷ್ಟ್ರಗಳಲ್ಲಿ ನಮ್ಮ ದೇಗುಲಗಳನ್ನು ಒಡೆಯುತ್ತಿದ್ದಾರೆ ಎಂದು. ಹಾಗೆಯೇ ಹಿಂದೂ ವಿರೋಧಿ ಸರ್ಕಾರಗಳ ಆಡಳಿತದ ಚುಕ್ಕಾಣಿ ಹಿಡಿದರೆ ದೇಗುಲಗಳನ್ನು ಒಡೆಯುವ ಸಂಭವವಿದೆ ಎಂದು. ಆದರೆ ನಾವೆಂದೂ ನಿರೀಕ್ಷಿಸಿರಲಿಲ್ಲ ಯಾವ ಪಕ್ಷ ಹಿಂದೂಗಳ ಅತಿ ದೊಡ್ಡ ಆಶಾಕಿರಣವಾಗಿ, ಹಿಂದೂಗಳ ಆತ್ಮಗೌರವವನ್ನು ಎತ್ತಿ ಹಿಡಿಯಲು ರಾಮಮಂದಿರ ನಿರ್ಮಾಣಕ್ಕೆ ಸುದೀರ್ಘ ಹೋರಾಟವನ್ನು ಮಾಡಿ ಜಯಗಳಿಸಿತೊ ಆ ಪಕ್ಷದ ಆಡಳಿತದಲ್ಲಿ ದೇಗುಲಗಳನ್ನು ಒಡೆಯುವ ದೌರ್ಭಾಗ್ಯಕರ ದೃಶ್ಯವನ್ನು ಕಾಣಬೇಕಾಗುವುದೆಂದು. ಸರ್ಕಾರದ ಜನಪ್ರತಿನಿಧಿಗಳು ಮಾಧ್ಯಮಗಳ ಹಾಗೂ ಕ್ರೋಧಗೊಂಡಿರುವ ಹಿಂದೂ ಸಮಾಜದ ಪ್ರಶ್ನೆಗಳಿಗೆ ಜಾರಿಕೊಳ್ಳುವ ಉತ್ತರವನ್ನು ನೀಡುತ್ತಿದ್ದಾರೆ. ಸರ್ಕಾರವನ್ನು ಪ್ರಶ್ನಿಸಿದರೆ ಅಧಿಕಾರಿಗಳ ಕಡೆ ಬೆಟ್ಟು ಮಾಡಿ ತೋರಿಸುವ, ಅಧಿಕಾರಿಗಳನ್ನು ಪ್ರಶ್ನಸಿದರೆ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ನೆಡೆಗೆ ಬೆಟ್ಟು ಮಾಡಿ ತೋರಿಸುವ ನಡೆ ಕಂಡುಬರುತ್ತಿದೆ. ಸುಪ್ರೀಂಕೋರ್ಟ್ ನ ಒಂದು ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಧಿಕಾರಿಗಳು ನಮ್ಮ ರಾಜ್ಯದಲ್ಲಿದ್ದಾರಾ? ಇಂತಹ ಅಧಿಕಾರಿಗಳು ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿ ಜನಮಾನಸದಲ್ಲಿ ದುಃಖವನ್ನು ತಂದಿಡಲು ಕಾಠಿಣ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಬರುತ್ತಿದ್ದಾರಾ? ಇನ್ನು ಸರ್ಕಾರ ತನ್ನ ಸುಪರ್ದಿಯಲ್ಲೇ ಬರುವ ಅಧಿಕಾರಿಗಳು ಅವರಿಗೆ ತಿಳಿಯದಂತೆಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸುತ್ತಿದೆ. ಸರ್ಕಾರದ ಈ ಜಾಣಕುರುಡು ಮಾತುಗಳನ್ನು ನಂಬಲು ಇಲ್ಲಿ ಯಾವ ಮೂರ್ಖರೂ ಇಲ್ಲ. ಅಧಿಕಾರಿಗಳೇ ಸ್ವಯಂಚಾಲಿತರಾಗಿ ಸರ್ಕಾರದ ಸಂಪರ್ಕವಿಲ್ಲದೆ ತಮ್ಮ ಕಾರ್ಯಗಳನ್ನು ಮಾಡುವುದಾದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವೆಂಬ ವಿಭಾಗಗಳ ಕಾರ್ಯಸಂಯೋಜನೆಯನ್ನು ಏಕೆ ರಚಿಸಲಾಗಿದೆ? ಆಡಳಿತ ಸರ್ಕಾರದ ಪರವಾಗಿ ಕೇಳಿಬಂದಿರುವ ಮತ್ತೊಂದು ವಾದವೇನೆಂದರೆ ಮುಖ್ಯಮಂತ್ರಿಗಳ ಕಾರ್ಯದರ್ಶಿಯವರು ಅವರಿಗೆ ತಿಳಿಸದೆ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ ಎಂಬುದು. ಇದಂತೂ ಪರಮಾಶ್ಚರ್ಯ! 2009ರಿಂದಲೂ ಚಾಲ್ತಿಯಲ್ಲಿರುವ ಈ ಆದೇಶಕ್ಕೆ ಹಿಂದುತ್ವ ಪರಿಪಾಲಕರು ಎಂದು ಗುರುತಿಸಿಕೊಳ್ಳುವವರು ಪರ್ಯಾಯವಾದ ಉಚಿತ ಪರಿಹಾರಕ್ಕಾಗಿ ಪ್ರಯತ್ನಿಸಿದ್ದಾರೆಯೇ? ತಿಂಗಳ ಹಿಂದೆಯೇ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧವಾಗಿದ್ದಾಗ ಕಾರ್ಯೋನ್ಮುಖರಾಗದ ಸಂಸದರು, ಶಾಸಕರ ಆದಿಯಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಪ್ರಮುಖರು ಈಗ ಶ್ರದ್ಧಾಳುಗಳ ಆಕ್ರೋಶ ಹೆಚ್ಚಾದ ಮೇಲೆ ಇದರ ವಿರುದ್ಧ ಧ್ವನಿಯೆತ್ತುತ್ತಿರುವುದು ವಿಪರ್ಯಾಸ. 

ಅಷ್ಟಕ್ಕೂ ಸುಪ್ರೀಂಕೋರ್ಟ್ ನ ಆದೇಶದಲ್ಲೇನಿದೆ? ಇದರ ಅನ್ವಯ 2009ರ ನಂತರ ನಿರ್ಮಿಸಲಾಗಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳ ಮೇಲೆ ಕಠಿಣ ಕ್ರಮವನ್ನು ಜರುಗಿಸಿ ತೆರವುಗೊಳಿಸಬೇಕು. ಆದರೆ 2009ರ ಹಿಂದಿನ ಐತಿಹಾಸಿಕ ನೆಲೆಗಟ್ಟಿನ ಈ ಕೇಂದ್ರಗಳಲ್ಲಿ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಿ, ಸ್ಥಳೀಯರ ವಿಶ್ವಾಸ-ಸಲಹೆಗಳುನುಸಾರ ಸಕ್ರಮ ಮಾಡುವುದೋ ಅಥವಾ ಸ್ಥಳಾಂತರ ಮಾಡುವುದೋ ಅಥವಾ ತೆರವು ಮಾಡುವುದೋ ಎಂಬ ನಿರ್ಧಾರಕ್ಕೆ ಬರುವುದು. ಮೊದಲನೆಯ ಆದ್ಯತೆ ಸಕ್ರಮ ಮಾಡುವುದಾಗಿರಬೇಕು. ಆದರೆ ಸರ್ಕಾರ ಹಾಗೂ ಅಧಿಕಾರವರ್ಗದವರು ಇದನ್ನು ತದ್ವಿರುದ್ಧವಾಗಿ ಅರ್ಥೈಸಿಕೊಂಡಿದ್ದಾರೋ ಏನೋ ಎಂಬಂತೆ ತೀವ್ರತರವಾಗಿ ತೆರವಿನ ಕಾರ್ಯಾಚರಣೆ ನಡೆಯುತ್ತಿದೆ. ಈ ಸಂಗತಿಯನ್ನು ಅರ್ಥೈಸಿಕೊಳ್ಳಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ನಮ್ಮ ರಾಷ್ಟ್ರದ ಸಂವಿಧಾನದಲ್ಲಿ ಮೊದಲ ಆದ್ಯತೆ ಪ್ರಜಾಪ್ರಭುತ್ವ ಸರ್ಕಾರ ನಡೆಸುವುದು, ಎರಡನೆಯದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಂದಾಗ್ಯು ಅದರ ರಕ್ಷಣೆಗೆ ಪ್ರಯತ್ನಿಸುವುದು ಹಾಗೂ ಕೊನೆಗೆ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವುದು. ಈಗ ಈ ಅಧಿಕಾರಿಗಳು ಅನುಸರಿಸುತ್ತಿರುವ ಧೋರಣೆಯಂತೆ ಈ ಮೇಲಿನ ಉದಾಹರಣೆಯನ್ನು ತದ್ವಿರುದ್ಧವಾಗಿ ಅರ್ಥೈಸಿಕೊಂಡರೆ ಮೊದಲು ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕಾಗುವುದು.ಇದಕ್ಕಿಂತ ಮೂರ್ಖತನದ ಪರಮಾವಧಿ ಮತ್ತೇನಿರಲು ಸಾಧ್ಯ?

ನಂಜನಗೂಡಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನದ ನೆಲಸಮ ದೃಶ್ಯವು ಎಲ್ಲೆಡೆ ವೈರಲ್ ಆದ ನಂತರ ಈ ವಿಷಯ ಹೆಚ್ಚು ಚರ್ಚೆಗೆ ಬಂದಿದೆ. ನ್ಯಾಯಸಂಗತವಾಗಿ ಕಾರ್ಯ ಮಾಡುವುದಾಗಿದ್ದರೆ ಸುಪ್ರೀಂಕೋರ್ಟ್ ನ ಆದೇಶದಂತೆ ಮಾಡಬೇಕಿತ್ತು. ಅಲ್ಲಿನ ಹಿರಿಯರು, ಭಕ್ತಾದಿಗಳನ್ನು ಹೆದರಿಸಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ಅನ್ಯಾಯ ಮಾರ್ಗದಲ್ಲಿ ಕಾರ್ಯ ಮಾಡುವವರಂತೆ ಈ ಕೃತ್ಯವನ್ನು ಮಾಡಬೇಕಿರಲಿಲ್ಲ.
                  
       ಅನಧಿಕೃತ|ತೆರವು|ಬಾಕಿ 
ಹಾವೇರಿ 41      3        12
ದಾವಣಗೆರೆ23   13       10
ಧಾರವಾಡ324   43    281
ಬೆಳಗಾವಿ  46      17    39
ಚಿತ್ರದುರ್ಗ 130   98    32
ಚಿಕ್ಕಬಳ್ಳಾಪುರ198 198 0
ಬಾಗಲಕೋಟೆ352.159.126
ಬೆಂ.ಗ್ರಾಮಾಂತರ75. 2. 3
ಮಂಡ್ಯ           140  76 13

ಈ ಮೇಲಿನ ಪಟ್ಟಿಯ ಅಂಕಿ ಅಂಶಗಳನ್ನು ನೋಡಿ, ಪರಮಾದ್ಭುತ! ನಮ್ಮ ದೇಶದಲ್ಲಿ ಅಧಿಕಾರಿಗಳು ಇಷ್ಟು ವೇಗವಾಗಿ ಕಾರ್ಯ ಮಾಡುತ್ತಾರಾ? ಎಷ್ಟು ಶೀಘ್ರವಾಗಿ ದೇವಸ್ಥಾನಗಳನ್ನು ತೆರವುಗೊಳಿಸುತ್ತಿದ್ದಾರಾ? ಅವರು ಅಧಿಕಾರಿಗಳಾಗುವುದಕ್ಕೂ ಮೊದಲು ಮಾನವರು. ಅವರು ನಾಗರಿಕ ಸೇವಾ ಅಧಿಕಾರಿಗಳೇ ಹೊರತು ಸರ್ವಾಧಿಕಾರಿಗಳಲ್ಲ. ಪ್ರತಿಷ್ಠಿತ ಸ್ಥಾನದಲ್ಲಿ ಕುಳಿತಿರುವ, ನಾಗರಿಕ ಸೇವೆ ಮಾಡಬೇಕೆಂದು ಸ್ವ-ಇಚ್ಛೆಯಿಂದ ಈ ಕ್ಷೇತ್ರವನ್ನು ಆರಿಸಿಕೊಂಡಿರುವ ಅಧಿಕಾರಿಗಳು ಯಾವುದೇ ಆದೇಶವನ್ನು ಪಾಲಿಸುವ ಮೊದಲು ಅಲ್ಲಿನ ಪ್ರಜೆಗಳ ಹಿತದ ಬಗ್ಗೆ ಆಲೋಚಿಸಲಾಗಲಿಲ್ಲ ಎಂದರೆ ನಂಬಿಸಲಾಗುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳೆಲ್ಲಾ ಸುಪ್ರೀಂಕೋರ್ಟ್ ನ ಒತ್ತಡದಿಂದ ಹೀಗೆ ಅವಸರದಲ್ಲಿ ಅವಘಡವಾಗಿದೆ ಎಂದು ಸಮಜಾಯಿಷಿ ಕೊಡುತ್ತಿದ್ದಾರೆ. ಅವರೆಲ್ಲಾ ಕೆಲವು ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಲಿ. ಇಷ್ಟೊಂದು ಒತ್ತಡ, ಕಾರ್ಯ, ವೇಗಗಳೆಲ್ಲಾ ಯಾರಿಗಾಗಿ ಮತ್ತು ಯಾವ ಕಾರಣಕ್ಕಾಗಿ? ದೇಶದ ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಅಲ್ಲವೆ? ದೇಶದ ಪ್ರಜೆಗಳಿಗಾಗಿ ಸರ್ಕಾರವೊ ಅಥವಾ ಸರ್ಕರಕ್ಕಾಗಿ ಪ್ರಜೆಗಳೋ? ಪ್ರಜೆಗಳಿಗಾಗಿ ಆಡಳಿತವೊ ಅಥವಾ ಆಡಳಿತಕ್ಕಾಗಿ ಪ್ರಜೆಗಳೊ? 

ಈಗ ಮತ್ತೊಂದು ಗಂಭೀರವಾದ ಸಂಗತಿಯನ್ನು ಪ್ರಸ್ತಾಪಿಸಲೇಬೇಕು. ಸರ್ಕಾರದ ದ್ವಾರ ಪಟ್ಟಿ ಮಾಡಲಾಗಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳಲ್ಲಿ ಶೇ.95ರಷ್ಟು ಭಾಗ ದೇವಸ್ಥಾನಗಳೇ ಏಕಿವೆ? ನಮ್ಮ ರಾಜ್ಯದಲ್ಲಿ ದೇವಸ್ಥಾನಗಳೇ ಹೆಚ್ಚಿವೆ ನಿಜ. ಆದರೆ ಅನ್ಯ ಧಾರ್ಮಿಕ ಕೇಂದ್ರಗಳ ಸಂಖ್ಯೆಯು ಬೆಳೆಯುತ್ತಲೇ ಇದೆ ಎಂಬುದು ವಾಸ್ತವ. ಏಕೆಂದರೆ ಇದು ಭಾರತ. ಇಲ್ಲಿ ಪಾಕಿಸ್ತಾನ, ಆಫ್ಘಾನಿಸ್ತಾನದಂತೆ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗುವುದಿಲ್ಲ. ಹಾಗಾದರೆ ಸರ್ಕಾರದ ಈ ನಿರ್ಧಾರದ ಮೂಲಕ ನಾವೇನು ತಿಳಿದುಕೊಳ್ಳಬೇಕು? ಹಿಂದೂಗಳ ಸಹನಶೀಲ, ಸೌಜನ್ಯಶೀಲ ವ್ಯಕ್ತಿತ್ವಕ್ಕೆ ಕೇವಲ ದಂಡನೆ ಸಿಗುವುದೆಂದೇ? ಹಿಂದೂಗಳು ವಿಭಜಿತ ಶಕ್ತಿಯೆಂದು ತಿಳಿಯದಿರಿ. ಹಿಂದೂಗಳು ಎಂದೆಂದಿಗಿಂತಲೂ ಈಗ ಜಾಗೃತರಾಗಿದ್ದಾರೆ, ಕನಿಷ್ಟಪಕ್ಷ ನಿಮ್ಮ ಸರ್ಕಾರಕ್ಕಿಂತ ಜಾಗೃರತವಾಗಿದ್ದಾರೆ! ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನಮ್ಮ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಪ್ರಭಾವವು ಇಳಿತ ಕಂಡಿದ್ದು ಹಾಗೂ ತಮ್ಮನ್ನು ತಾವು ಕಾಮನ್ ಮೆನ್ ಎಂದು ಕರೆದುಕೊಳ್ಳುವ ಸಿಎಂ ದೊರೆತಿರುವುದು ರಾಜ್ಯದ ಕಳೆಯನ್ನು ಮತ್ತಷ್ಟು ಹೆಚ್ಚಸಿದೆ ಎಂದು ನಾವು ಭಾವಿಸಿದ್ದೆವು. ಆದರೆ ಈ ರೀತಿ ನಿಮ್ಮ ಸರ್ಕಾರವು ಹಿಂದೂ ಸಮಾಜಕ್ಕೆ ವಿಶ್ವಾಸಘಾತವನ್ನು ಮಾಡುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆಯಿತು ಈಗ ಏನೋ ಅವ್ಯವಸ್ಥೆಯಿಂದಲೋ ಅಥವಾ ಅಜಾಗರೂಕತೆಯಿಂದಲೋ ಈ ರೀತಿ ದುರಂತ ಸಂಭವಿಸಿದೆ ಎಂದುಕೊಳ್ಳೋಣ. ಸರ್ಕಾರಕ್ಕೆ ನಿಜವಾಗಿಯೂ ಇದರಿಂದ ವಿಷಾದವಾಗಿದ್ದರೆ, ಇಷ್ಟರೊಳಗೆ ಈ ಕೃತ್ಯ ಸಂಭವಿಸಲು ಕಾರಣೀಭೂತರಾದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕಿತ್ತು ಮತ್ತು ಹಿಂದೂ ಸಮಾಜದ ಎದುರು ತಮ್ಮ ತಪ್ಪನ್ನು ಒಪ್ಪಿಕೊಂಡು ತಮ್ಮ ವೈಫಲ್ಯಕ್ಕಾಗಿ ಕ್ಷಮೆಯಾಚಿಸಬೇಕಿತ್ತು ಅಲ್ಲವೆ?

16 ಸೆಪ್ಟೆಂಬರ್ ರಂದು ಜಗದೀಶ್ ಕಾರಂತರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆಯವರಿಂದ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇಗುಲ ತೆರವಿನ ವಿರುದ್ಧ ಬೃಹತ್ ಪ್ರತಿಭಟನೆಯೇ ನಡೆಯಿತು. ದಿಕ್ಸೂಚಿ ಭಾಷಣವನ್ನು ಮಾಡಿದ ಕಾರಂತರು ಸುಪ್ರೀಂಕೋರ್ಟ್ ನ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಸರ್ಕಾರ ಹಾಗೂ ಅಧಿಕಾರಿಗಳ ಅವಿವೇಕತನವನ್ನು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ನ ಆದೇಶವೆಂದು ಒತ್ತಿ ಹೇಳುತ್ತಿರುವ ಅಧಿಕಾರಿಗಳಿಗೆ ಅದರ ಮತ್ತೊಂದು ಆದೇಶವಾದ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡದಿರುವುದು ಮಾತ್ರ ಏಕೆ ಪಾಲನೆಯಾಗುತ್ತಿಲ್ಲ? ಎಂದು ಪ್ರಶ್ನಿಸಿದರು. ಬೊಮ್ಮಾಯಿ ಅವರ ಸರ್ಕಾರಕ್ಕೆ 10 ದಿನಗಳ ಗಡುವನ್ನು ನೀಡಿರುವ ಕಾರಂತರು ಅಷ್ಟರಲ್ಲಿ ಈ ದುರಂತಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅವರ ನಿವಾಸದವರೆಗೆ ಪಾದಯಾತ್ರೆ ಮಾಡುವ, ಬೃಹತ್ ಸಂಘಟನೆಯನ್ನು ಮಾಡುವ ಎಚ್ಚರಿಕೆಯನ್ನು ನೀಡಿದರು. ಇದರ ಜೊತೆಗೆ ಪ್ರಸ್ತಾಪಿಸಬೇಕಾದ ಮತ್ತೊಂದು ಅಂಶವೇನೆಂದರೆ ಇದೇ ಸುಪ್ರೀಂಕೋರ್ಟ್ ನ ತೀರ್ಪಿನನ್ವಯ ಬೆಂಗಳೂರಿನ ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಕಾರ್ಯಪ್ರವೃತ್ತರಾಗಿ ಸಾಮಾನ್ಯ ಬಡವ-ಬಲ್ಲಿದರ ಮನೆಗಳನ್ನು ನೆಲಸಮಗೊಳಿಸಿದ ತರುವಾಯ ರಾಜಕಾರಣಿಗಳು, ಪ್ರಭಾವಿಗಳ ನಿವಾಸ ಎದುರಾದ ನಂತರ ಕಾರ್ಯಾಚರಣೆಯನ್ನೇಕೆ ಸ್ಥಗಿತಗೊಳಿಸಲಾಯಿತು? ಏಕೆ ಪ್ರಭಾವಿಗಳ ನಿವಾಸ-ಕಟ್ಟಡಗಳನ್ನು ಕೆಡುವಲು ಜೆಸಿಬಿ ವಾಹನಗಳು ಅಸಮರ್ಥವಾದವೆ? ಪ್ರಭಾವಿಗಳ ನಿವಾಸ ಬಂದೊಡನೆ ಅಕ್ರಮ ಸ್ಥಳವನ್ನು ಸಕ್ರಮ ಸ್ಥಳವನ್ನಾಗಿಸಲಾಯಿತೆ? ಈ ದೇಶದ ಕಾನೂನು ಪ್ರಭಾವಿಗಳಿಗೆ ಅನ್ವಯವಾಗುವುದಿಲ್ಲವೆ?

ಇಷ್ಟೆಲ್ಲಾ ಸಮಗ್ರವಾಗಿ ವಿಶ್ಲೇಷಣೆ ಮಾಡಿದ ನಂತರವೂ ಕೊನೆಯಲ್ಲಿ ಕಾಡುವ ಹೀಗೂ ಉಂಟೆ ಪ್ರಶ್ನೆಯನ್ನು ಇಲ್ಲಿ ಹಂಚಿಕೊಳ್ಳಲೇಬೇಕು. ಸರ್ಕಾರದ ಅಧಿಕಾರಿಗಳು ಸಿದ್ಧಪಡಿಸಿರುವ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ ಒಂದೇ ಒಂದು ಸಂಪದ್ಭರಿತ, ಪ್ರತಿಷ್ಠಿತ ದೇವಸ್ಥಾನದ ಉಲ್ಲೇಖವೇ ಇಲ್ಲದಿರುವುದು ಆ ಯಕ್ಷಪ್ರಶ್ನೆ. ನಮ್ಮ ದೇವಸ್ಥಾನಗಳನ್ನು ಇಂದಿಗೂ ಸಹ ಸಂಪತ್ತಿನ ದೃಷ್ಟಿಯಲ್ಲೇ ನೋಡುವ ಬ್ರಿಟಿಷ್ ಮಾನಸಿಕತೆಯು ನಮ್ಮ ಸರ್ಕಾರಗಳಲ್ಲೇ ಅಸ್ತಿತ್ವದಲ್ಲಿರುವುದು ಅಶೋಭನೀಯ. ಹಿಂದೂಗಳ ಬಾಹುಳ್ಯವಿರುವ ಈ ನಮ್ಮ ಮಾತೃಭೂಮಿಯಲ್ಲಿ ಅನ್ಯ ಧರ್ಮೀಯರಿಗೆ ನೀಡಿರುವಂತೆ ಅವರ ಶ್ರದ್ಧಾಕೇಂದ್ರಗಳನ್ನು ಶ್ರದ್ಧಾಳುಗಳಿಗೆ ವಹಿಸಿಕೊಡದೆ, ಸರ್ಕಾರವೇ ಇಂದಿಗೂ ಬ್ರಿಟಿಷರಂತೆ ಅದರ ಸ್ವಾಯತ್ತತೆಯನ್ನು ಅನುಭವಿಸುತ್ತಿದೆ. ಆದ್ದರಿಂದ ಬಹುಸಂಖ್ಯೆಯಲ್ಲಿರುವ ಹಿಂದೂಗಳಿಗೆ ಅವರ ದೇವಸ್ಥಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿಲ್ಲ, ಅವರ ಮೇಲೆ ನಮಗೆ ನಂಬಿಕೆಯಿಲ್ಲವಾದ್ದರಿಂದ ನಾವೇ ಅದನ್ನು ನೋಡಿಕೊಳ್ಳುತ್ತಿದ್ದೇವೆಂದು ಒಮ್ಮೆ ಘೋಷಿಸಿಬಿಡಿ. ನಂತರ ಇಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂದು ನಾವೂ ನೋಡುತ್ತೇವೆ!

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ