ಮಹಿಷಾಸುರ ಪ್ರವೃತ್ತಿ ಸಂಹಾರವಾಗಲಿ ನಾರಿಶಕ್ತಿ ಜಾಗೃತವಾಗಲಿ

ಮಹಿಷಾಸುರ ಪ್ರವೃತ್ತಿ ಸಂಹಾರವಾಗಲಿ ನಾರಿಶಕ್ತಿ ಜಾಗೃತವಾಗಲಿ
ಸಾಂಸ್ಕೃತಿಕ ನಗರಿ ಮೈಸೂರು ಅಸಾಂಸ್ಕೃತಿಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆಯೇ? ಬಾಹ್ಯ ಮತ್ತು ಆಂತರ್ಯಗಳೆರಡರಲ್ಲೂ ಸ್ವಚ್ಛಂದತೆಯನ್ನು ಸಾಧಿಸಿ ಸ್ವಚ್ಛನಗರವೆಂದು ಹೆಸರುವಾಸಿಯಾಗಿದ್ದ ಮೈಸೂರು ಅಶುದ್ಧ ಮನಸುಗಳ ಅಪರಾಧಕ್ಕೆ ಸಾಕ್ಷಿಯಾಗುತ್ತಿದೆಯೇ? ಮಹಿಷಾಸುರನ ಸಂಹಾರ ಮಾಡಿದ ತಾಯಿ ಚಾಮುಂಡೇಶ್ವರಿಯ ನಾಡಿನಲ್ಲಿ ಈಗ ಮತ್ತೆ ಮಹಿಷಾಸುರರು ತಲೆ ಎತ್ತುತ್ತಿದ್ದಾರಾ? ಹತ್ಯೆ ಮಾಡುವುದಕ್ಕಿಂತಲೂ ಘನಘೋರ, ಕ್ರೂರ, ಕ್ಷಮಿಸಲನರ್ಹ ಅಪರಾಧವಾದ ಅತ್ಯಾಚಾರಕ್ಕೆ ಕೊನೆ ಯಾವಾಗ? ಪರ ಸ್ತ್ರೀಯರಲ್ಲಿ ತಮ್ಮ ಮಾತೆಯನ್ನು, ಸಹೋದರಿಯನ್ನು ಕಾಣಬೇಕೆಂಬ ಸರ್ವೋಪರಿ ಜೀವನ ತತ್ವವನ್ನು ಮರೆತಿರುವ ಕೀಚಕರಿಗೆ ಸರಿಯಾದ ದಂಡನೆ ನೀಡುವುದು ಯಾವಾಗ? ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ನಿರಂತರವಾಗಿ ಸ್ತ್ರೀಯರ ಮೇಲೆ ಅಪಮಾನ, ಶೋಷಣೆ ನಡೆದಾಗಲೆಲ್ಲಾ ಸ್ವಯಂ ಭಗವಂತ ವಿಷ್ಣುವು ಮಾನವ ಅವತಾರ ತಾಳಿ ಅಪರಾಧಿಗಳಿಗೆ ದಂಡನೆ ನೀಡಿರುವುದನ್ನು ಕಾಮಾಸುರರು ಅರ್ಥೈಸಿಕೊಳ್ಳುವುದು ಯಾವಾಗ? ಶಿಕ್ಷಣ, ಉದ್ಯೋಗದಂತಹ ಎಲ್ಲಾ ಆಚಾರ-ವಿಚಾರಗಳಲ್ಲೂ ಚಾರಿತ್ರ್ಯಕ್ಕೆ ಪ್ರಾಶಸ್ತ್ಯ ನೀಡಿ ಸಭ್ಯ ಸಮಾಜವನ್ನು ನಿರ್ಮಿಸಿದ ರಾಷ್ಟ್ರದಲ್ಲಿ ಇಂದು ಚಾರಿತ್ರ್ಯವನ್ನು ಭೋದಿಸುವ ಕಾಲ ಬಂದಿದೆಯೇ?

ಬೆಳಕಿಗೆ ಬರುವ ಅತ್ಯಾಚಾರ ಪ್ರಕರಣಗಳು ಕೆಲವಾದರೆ, ಬರದಿರುವ ಪ್ರಕರಣಗಳು ಹಲವಾರು! ಸ್ತ್ರೀಯರ ಅಗ್ನಿಪಥಕ್ಕೆ ಮತ್ತಷ್ಟು ಮಗದಷ್ಟು ತುಪ್ಪವನ್ನು ಸುರಿದು ಕಾಠಿಣ್ಯತೆಯನ್ನು ಹೆಚ್ಚಿಸುತ್ತಿರುವ ಅತ್ಯಾಚಾರಿಗಳನ್ನು ಶೀಘ್ರವಾಗಿ ಶಿಕ್ಷಿಸಲು ಒಂದೇ ಒಂದು ಸಮರ್ಥ ಕಾನೂನನ್ನೂ ಸಹ ನಮ್ಮ ರಾಷ್ಟ್ರದಲ್ಲಿ ಜಾರಿಗೊಳಿಸದಿರುವುದು ದೌರ್ಭಾಗ್ಯ! ಸ್ತ್ರೀಯನ್ನು ಸದಾ ಸದಾಕಾಲದವರೆಗೆ ದುಃಖಸಾಗರದಲ್ಲಿ ಮುಳುಗಿಸುವ, ಆಕೆಯ ಗುರಿ-ಕನಸುಗಳಿಗೆ ಕೊಳ್ಳಿಯಿಟ್ಟು ತಿಲಾಂಜಲಿ ಹಾಡುವ, ಆಕೆಯ ಭವಿಷ್ಯಕ್ಕೆ ಜೀವಿತ ಕಾಲದಲ್ಲೇ ಶ್ರಾದ್ಧ ಮಾಡುವ, ಆಕೆಯ ಪವಿತ್ರತೆಯನ್ನು ಅಪವಿತ್ರಗೊಳಿಸಲು ಯತ್ನಿಸುವ ಪಾಪಿಗಳ ಭಯಾನಕ ಅಂತ್ಯವಾಗಲಿ. ಪಾಪಿಗಳ ಅಂತ್ಯದ ಜೊತೆಗೆ ಆ ಪಾಪದ ಮೂಲವನ್ನು ಅಂತ್ಯ ಮಾಡುವ ಕಾರ್ಯವೂ ಜಾರಿಯಾಗಲಿ. ಇನ್ನು ಮುಂದಾದರೂ ಸರ್ಕಾರ ಹಾಗೂ ಆರಕ್ಷಕರ ರಕ್ಷಣೆಯ ಮೇಲಷ್ಟೇ ನಿರ್ಭರವಾಗದೆ, ಸ್ತ್ರೀಯರು ತಮ್ಮ ಆತ್ಮರಕ್ಷಣೆಯನ್ನು ಮಾಡಿಕೊಳ್ಳಲು ಸಕ್ಷಮರಾಗಲಿ.

ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣವು ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆಯು ತ್ವರಿತವಾದಷ್ಟು ಕಾಮಾಸುರರ ಪಾಪದ ಚರಿತ್ರೆ ತೆರೆದುಕೊಳ್ಳುತ್ತಲೇ ಇದೆ. ಸುಮಾರು 80 ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿ, ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಪಾಪಿಗಳನ್ನು ಹೆಡೆಮುರಿ ಕಟ್ಟಿರುವ ಕರ್ನಾಟಕ ರಾಜ್ಯ ಪೋಲಿಸ್ ನ ಎಸಿಪಿ ಶಿವಶಂಕರ್ ನೇತೃತ್ವದ ವಿಶೇಷ ತನಿಖಾ ತಂಡದವರಿಗೆ ಒಂದು ಬಿಗ್ ಸೆಲ್ಯೂಟ್. ಈ ಸಮಸ್ಯೆಗೆ ಮುಖ್ಯ ಕಾರಣವಾಗಿರುವ ಅತ್ಯಾಚಾರಕ್ಕೆ ಪರಿಹಾರ ಕಂಡುಕೊಳ್ಳುವ, ವಿಶೇಷ ಕಾನೂನನ್ನು ರಚಿಸಿ ಸಮಾಜಕ್ಕೆ ಭರವಸೆ ನೀಡಬೇಕಾದ ರಾಜ್ಯದ ರಾಜಕಾರಣಿಗಳು ಇಂತಹ ಸಂವೇದನಾಶೀಲ ವಿಷಯದಲ್ಲೂ ರಾಜಕಾರಣವನ್ನು ಮಾತ್ರ ಮರೆಯದಿರುವುದು ವಿಪರ್ಯಾಸ. ಇದೇ ಬಗೆಯ ರಾಜಕಾರಣವನ್ನು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರಲ್ಲಿ ಉಪಯೋಗಿಸಿದ್ದರೆ, ನಮ್ಮ ರಾಜ್ಯ ಮತ್ತಷ್ಟು ಪ್ರಗತಿಶೀಲತೆಗೆ ಸಾಕ್ಷಿಯಾಗುತ್ತಿತ್ತು. ದೇಶದ ಪ್ರಜೆಗಳನ್ನು ಒಗ್ಗಟ್ಟಾಗಿಸಿ ಉನ್ನತಿಯ ಪಥದೆಡೆಗೆ ಕೊಂಡೊಯ್ಯಬೇಕಾದ, ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಕಡಿಮೆಗೊಳಿಸಿ ದೇಶದ ಸ್ವಾಸ್ಥ್ಯವನ್ನು ಉತ್ತಮವಾಗಿರಿಸಬೇಕಾದ ರಾಜನೀತಿಯು ಇದಕ್ಕೆ ವಿಪರೀತವಾಗಿ ಭಿನ್ನತೆಯನ್ನು ಮೂಡಿಸುವ ಕಾರ್ಯಗಳಿಗೆ ಪ್ರೇರಕವಾಗುತ್ತಿರುವುದು ಅಶೋಭನೀಯ. 

ಈ ಪ್ರಕರಣವು ಅದಾಗಲೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವುದರ ಮೂಲಕ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಹೋರಾಟ ಮಾಡಿ, ದುಷ್ಕರ್ಮಿಗಳನ್ನು ಶೀಘ್ರವೇ ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದರು. ಹೋರಾಟದ ಸಂದರ್ಭದಲ್ಲಿ 'ಶಿಕ್ಷಿಸಿ ಶಿಕ್ಷಿಸಿ ಅತ್ಯಾಚಾರಿಗಳನ್ನು ಶಿಕ್ಷಿಸಿ', 'ವಿದ್ಯಾರ್ಥಿಶಕ್ತಿ ಗುಡುಗಿದರೆ ವಿಧಾನಸೌಧ ನಡುಗುವುದು' ಎಂಬ ಘೋಷಣೆಗಳನ್ನು ಕೂಗುವುದರ ಮೂಲಕ ವಿದ್ಯಾರ್ಥಿಶಕ್ತಿಯನ್ನು ಪ್ರದರ್ಶಿಸಿದರು. ಈ ಹಿಂದೆಯೂ ಮೈಸೂರಿನ ರಸ್ತೆಗಳಲ್ಲಿ ಪುಂಡು ಪೋಕರಿಗಳ ಹಾವಳಿ ಹೆಚ್ಚಾಗಿತ್ತೆಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಶ್ರೀಮತಿ ಗೀತಾ ಪ್ರಸನ್ನ, ಉಪ ಪೋಲಿಸ್ ಆಯುಕ್ತರು ಮೈಸೂರು ಇವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವತಿಯಿಂದ ಮನವಿಯನ್ನು  ಸಲ್ಲಿಸಲಾಗಿತ್ತು. 

ಈ ಪ್ರಕರಣದಷ್ಟೇ ಚರ್ಚೆಗೆ ಗ್ರಾಸವಾಗಿರುವ ರಾಜ್ಯ ಗೃಹ ಸಚಿವರು ಸಂತ್ರಸ್ತೆಯ ಬಗೆಗೆ ನೀಡಿರುವ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಈಗಾಗಲೇ ತೀವ್ರವಾಗಿ ನೊಂದಿರುವ ಸಂತ್ರಸ್ತೆ ಹಾಗೂ ಅವರ ಪರಿವಾರದವರಿಗೆ ಈ ರೀತಿಯ ಹೇಳಿಕೆಗಳಿಂದ ಆಘಾತವಾಗಿರುವುದು ಎಷ್ಟು ಸತ್ಯವೋ, ಈ ಪ್ರಕರಣದಿಂದ ಇನ್ನಿತರ ಪರಿವಾರದವರು ಪಾಠ ಕಲಿಯದಿದ್ದರೆ ಮುಂದಾಗಬಹುದಾದ ಆಘಾತವು ಇದಕ್ಕಿಂತ ಭಾರಿಯಾಗಲಿರುವುದೂ ಸಹ ಅಷ್ಟೇ ಸತ್ಯ. ಸಂತ್ರಸ್ತೆಯು ರಾತ್ರಿಯ ವೇಳೆ 7.30ರ ಸಮಯದಲ್ಲಿ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂಬುದು ಗೃಹ ಸಚಿವರ ಹೇಳಿಕೆ. ಇದರ ಜೊತೆಗೆ ನಾವು ಗಮನಿಸಬೇಕಿರುವುದು ಆಕೆ ತನ್ನ ಸ್ನೇಹಿತನೊಂದಿಗೆ ಹೋಗಿದ್ದು ಎಂಬುದು. ಇನ್ನೂ ತನಿಖೆಯು ಪೂರ್ಣ ಹಂತವನ್ನು ತಲುಪಿ ಇತ್ಯರ್ಥವಾಗದಿರುವ ಕಾರಣ ಈಗಲೇ ಸತ್ಯಾಸತ್ಯತೆಯನ್ನು ತೀರ್ಮಾನಿಸಲು ಸಾಧ್ಯವಿಲ್ಲ. ಈಗ ನಾವು ವಿಮರ್ಶೆ ಮಾಡಬೇಕಿರುವುದು ಸ್ತ್ರೀಯರು ರಾತ್ರಿ ಸಮಯ ಹೊರಗೆ ಹೋಗುವುದು ತಪ್ಪು ಎಂದಲ್ಲ. ಬದಲಿಗೆ ಯಾವ ಕಾರಣಕ್ಕಾಗಿ, ಯಾವ ಉದ್ದೇಶಕ್ಕಾಗಿ, ಯಾರೊಂದಿಗೆ ಹೋಗುತ್ತಾರೆ ಎಂಬುದರ ಮೇಲೆ ತಪ್ಪು-ಸರಿಗಳನ್ನು ನಿರ್ಧರಿಸಲಾಗುತ್ತದೆ. ಹೀಗೆ ಸ್ಪಷ್ಟವಾಗಿ ವಾದ ಮಂಡಿಸಿದ ನಂತರವೂ ಹಲವರು ಪ್ರತಿವಾದ ಮಾಡುವುದು ಹೀಗೆ: ಪುರುಷರು ಮಾತ್ರ ಎಲ್ಲಿ ಬೇಕಾದರೂ, ಯಾವ ಸಮಯದಲ್ಲಾದರೂ ತಿರುಗಾಡಬಹುದು. ಸ್ತ್ರೀಯರಿಗೆ ಏಕೆ ಈ ಹಕ್ಕಿಲ್ಲ? ಆದರೆ ಒಂದು ಗಂಭೀರ ಸಂಗತಿಯನ್ನು ನಾವು ಸದಾ ನೆನಪಿನಲ್ಲಿಡಬೇಕು. ಸ್ತ್ರೀಯರಿಗೆ ಈ ಸಮಾಜದ ಪಾವಿತ್ರ್ಯತೆಯನ್ನು ರಕ್ಷಿಸುವ ಮಹತ್ತರ ಜವಾಬ್ದಾರಿಯಿದೆ. ನಮ್ಮ ಸನಾತನ ಸಂಸ್ಕೃತಿಯು ಸ್ತ್ರೀಯರಿಗೆ ಅತಿ ಹೆಚ್ಚಿನ ಗೌರವವನ್ನು ನೀಡಿದೆ. ನಮ್ಮ ರಾಷ್ಟ್ರ, ನದಿಗಳು, ವಿದ್ಯೆ-ಧನ ಸಂಪತ್ತುಗಳು ಹಾಗೂ ಇನ್ನಿತರ ಶ್ರೇಷ್ಠತಮ ಸೂಚಕಗಳಿಗೆ ಮಾತೃಸ್ಥಾನವನ್ನು ನೀಡಿ ಸಮ್ಮಾನಿಸಿದೆ. ಮಾತೃಸ್ಥಾನವನ್ನು ಈ ಪ್ರಪಂಚದ ಯಾವ ಸ್ಥಾನದೊಂದಿಗೆ ಹೋಲಿಕೆ ಮಾಡುವಿರಿ? ನಮ್ಮ ಸಂಸ್ಕೃತಿಯು ಸ್ತ್ರೀಯನ್ನು ಶಕ್ತಿ ಎಂದು ಆರಾಧಿಸಿದೆ. ಸಾಕ್ಷಾತ್ ಪರಮೇಶ್ವರ ಶಿವನ ಶಕ್ತಿ ಜಗದಾಂಬ ಪಾರ್ವತಿ. ಅನ್ಯ ಸಂಸ್ಕೃತಿಗಳೆಲ್ಲವೂ ದೇವಿ ಆರಾಧನೆಯನ್ನು ಅಂತ್ಯಗೊಳಿಸಿರಲು, ನಮ್ಮ ಸಂಸ್ಕೃತಿಯು ಅನಾದಿಕಾಲದಿಂದಲೂ ಪ್ರತಿ ಗ್ರಾಮದಲ್ಲೂ ಸಹ ದೇವಿ ಆರಾಧನೆಗೆ ಪ್ರಾಮುಖ್ಯತೆ ನೀಡಿ ಈ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ ಎಂಬುದನ್ನು ಮರೆಯದಿರಿ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಸ್ತ್ರೀಯನ್ನು ದುರ್ಬಲೆ, ಅಸಹಾಯಕಿ ಎಂದು ಶೋಷಣೆ ಅಪಮಾನ ಮಾಡಿದ ದುರಾಚಾರಿ ಅಸುರರನ್ನು ಸಂಹಾರ ಮಾಡಿ, ಲೋಕಕ್ಕೆ ಅಭಯವನ್ನು ಪ್ರಧಾನಿಸುವ ಧರ್ಮದ ಕಾರ್ಯವನ್ನು ಮಾತೆ ಮಹಾಕಾಳಿಯು ನಿರ್ವಹಿಸಿದಳೆಂದು ನಮ್ಮ ಧಾರ್ಮಿಕ ಗ್ರಂಥಗಳು ಉಲ್ಲೇಖಿಸುತ್ತವೆ. ಇದೊಂದೇ ಒಂದು ಸಾಹಸದ ಆದರ್ಶ ಸಾಕು, ಸ್ತ್ರೀಶಕ್ತಿಯನ್ನು ಜಾಗೃತಗೊಳಿಸಲು ಮತ್ತು ಅರ್ಥೈಸಿಕೊಳ್ಳಲು.

ಯಾವ ತಂತ್ರಜ್ಞಾನವು ಇಂದು ಪೊಲೀಸರಿಗೆ ಅತ್ಯಾಚಾರಿಗಳನ್ನು ಸೆರೆ ಹಿಡಿಯಲು ಸಹಾಯಕವಾಯಿತೊ, ಅದೇ ತಂತ್ರಜ್ಞಾನವು ಅತ್ಯಾಚಾರಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬುದು ಜನರ ಅರಿವಿಗೆ ಬಂದಿದೆಯೇ? ತಂತ್ರಜ್ಞಾನವು ಮಾನವರ ಜೀವನದಲ್ಲಿ ಎಷ್ಟು ಸಕಾರಾತ್ಮಕತೆಯನ್ನು ತಂದಿದೆಯೋ ಅಷ್ಟೇ ನಕಾರಾತ್ಮಕತೆಯನ್ನೂ ಹೊತ್ತು ತಂದಿದೆ. ವರ್ಚುಯಲ್ ರೇಪ್ ವೀಡಿಯೋ ಗೇಮ್ ಗಳನ್ನು ಆಡುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿ ಪ್ರಸಿದ್ಧಿ ಪಡೆಯುತ್ತಿರುವುದು ಆತಂಕಕ್ಕೀಡು ಮಾಡಿದೆ. ಇವರಿಗೂ, ನಿಜವಾದ ಅತ್ಯಾಚಾರಿಗಳಿಗೂ ಏನು ವ್ಯತ್ಯಾಸ? ಇಬ್ಬರ ಮಾನಸಿಕತೆಯೂ ಒಂದೇ ಆಗಿದೆ. ವಿವಿಧ ಸನ್ನಿವೇಶಗಳಲ್ಲಿ ಹೇಗೆ ಬುದ್ಧಿ ಉಪಯೋಗಿಸಿ, ಯೋಜನೆ ರೂಪಿಸಿ ಅತ್ಯಾಚಾರವೆಸಗುವುದೆಂದು ವೀಡಿಯೋ ಗೇಮ್ ಆಡುವವರು ನಿಜವಾಗಿ ಅತ್ಯಾಚಾರ ಮಾಡುವ ನಿರ್ಧಾರಕ್ಕೆ ಬರಲು ಹೆಚ್ಚು ಸಮಯವೇನು ಬೇಕಿಲ್ಲ ಅಲ್ಲವೆ? ಈ ಕಾಲದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಸಮಾಜವನ್ನು ಪ್ರಭಾವಿಸುವವರು ಯಾವ ರೀತಿಯ ಅಸಂಸ್ಕೃತಿಯನ್ನು ಬೆಳೆಸಲು ಹೊರಟಿದ್ದಾರೆ? ಇದಕ್ಕೆ ಇಂದಿನ ಸಿನಿಮಾ, ಜಾಹೀರಾತು, ನೃತ್ಯ ಮುಂತಾದ ಕ್ಷೇತ್ರಗಳಲ್ಲಿ ಕಂಡು ಬರುತ್ತಿರುವ ಬೆಳವಣಿಗೆಯೇ ಸಾಕ್ಷಿ. ಇಂದಿನ ಸಮಾಜದಲ್ಲಿ ಚಾರಿತ್ರ್ಯಪೂರ್ಣ, ಸುಸಂಸ್ಕೃತ ಶಿಕ್ಷಣದ ಗೈರು ಹಾಜರಾಗಿರುವುದೇ ಚಾರಿತ್ರ್ಯಹೀನ, ಅಸಂಸ್ಕೃತ ಶಿಕ್ಷಣದ ಹಾಜರಿಗೆ ಕಾರಣವಾಗಿದೆ. ಸಮಾಜಕ್ಕೆ ಕಂಟಕವಾಗಿರುವ ಮಹಿಷಾಸುರ ಪ್ರವೃತ್ತಿಯ ಸಂಹಾರವಾಗಲಿ, ಸಮಾಜದ ಪಾವಿತ್ರ್ಯತೆಯನ್ನು ರಕ್ಷಿಸುವ ಸ್ತ್ರೀಶಕ್ತಿ ಜಾಗೃತವಾಗಲಿ.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ