ರಾಜಕೀಯವನ್ನು ಹಿಂದುತ್ವಮಯಗೊಳಿಸಿ ಹಿಂದೂಸಮಾಜವನ್ನು ಕ್ಷಾತ್ರತೇಜಗೊಳಿಸಿ: ವೀರ ಸಾವರ್ಕರ್ ಜೀವನದ ಶ್ರೇಷ್ಠ ಸಂದೇಶ
ರಾಜಕೀಯವನ್ನು ಹಿಂದುತ್ವಮಯಗೊಳಿಸಿ ಹಿಂದೂಸಮಾಜವನ್ನು ಕ್ಷಾತ್ರತೇಜಗೊಳಿಸಿ: ವೀರ ಸಾವರ್ಕರ್ ಜೀವನದ ಶ್ರೇಷ್ಠ ಸಂದೇಶ
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರಂತಹ ತೇಜಸ್ವಿ, ಸಾಹಸಿ, ಜ್ಞಾನಿ ವ್ಯಕ್ತಿ ಭಾರತ ಭೂಮಿಯ ಮುಕ್ತಿಗಾಗಿ ಕೈಗೊಂಡ ಮುಳ್ಳಿನ ಹಾದಿಯ ಜೀವನದ ಬಗ್ಗೆ ನಮಗೆಲ್ಲಾ ಹೆಚ್ಚು ಅರಿವಿದೆ. ಆದಾಗ್ಯು ಈ ಮಹಾನ್ ಕ್ರಾಂತಿಕಾರಿಯ ಪರಿಚಯವು ಭಗತ್ ಸಿಂಗ್, ಗಾಂಧೀಜಿ, ನೇತಾಜಿ ಅವರಂತೆ ಸಹಜವಾಗಿ ಶಾಲಾದಿನಗಳಿಂದಲೇ ಏಕೆ ಆಗಲಿಲ್ಲ ಎಂಬ ಸಂಶಯವೂ ಇದೆ. ಹಾಗೆಯೇ ಇವರು ಈ ಪುಣ್ಯಭೂಮಿಯ ವೀರಪುತ್ರನಾದರೂ, ಮಹಾನ್ ದೇಶಭಕ್ತನಾದರೂ, ಧರ್ಮ ರಕ್ಷಕನಾದರೂ ಅಗಾಧ ಅಭಿಮಾನಿಗಳ ನಡುವೆ ಶತ್ರುಗಳ ದೊಡ್ಡ ಪಂಕ್ತಿಯನ್ನೇ ಹೊಂದಿರುವುದರ ಬಗ್ಗೆ ಅಚ್ಚರಿಯೂ ಇದೆ. ವೀರ ಸಾವರ್ಕರ್ ಅವರು ತಮ್ಮ ಜೀವನದುದ್ದಕ್ಕೂ ಸವೆಸಿದ ಸವಾಲಿನ ಹಾದಿ ಅಥವಾ ಈಶ್ವರನಿಂದ ಈ ನಿಸ್ವಾರ್ಥ ವಜ್ರಾಯುಧ ಮಾನವನಿಗೆ ದೊರೆತ ಸಂಘರ್ಷದ ಯಾತ್ರೆ ಎಷ್ಟು ಕಾಠಿಣ್ಯತೆಗಳಿಂದ ಕೂಡಿತ್ತು? ಹಿಂದುಸ್ಥಾನದ ಸ್ವಾತಂತ್ರ್ಯ ಯಜ್ಞದಲ್ಲಿ ತಮ್ಮನ್ನು ತಾವು ಹವಿಸ್ಸಾಗಿ ಸಮರ್ಪಿಸಿಕೊಂಡ ತ್ಯಾಗಿ, ಬಲಿದಾನ ವೀರನ ಮೇಲೆ ಯಾರಾದರೂ ಏಕೆ ವೈರತ್ವ ಸಾಧಿಸುತ್ತಾರೆ? ದೀರ್ಘ ಕಾಲಗಳವರೆಗೆ ಕಾಡುತ್ತಾ ಬಂದಿರುವ ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಾವರ್ಕರ್ ಅವರ ಕ್ರಾಂತಿ ಹಾಗೂ ಸಂಸ್ಕೃತಿ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಾವರ್ಕರ್ ಒಬ್ಬರು ಸಹಜ ಕ್ರಾಂತಿಕಾರಿಯಾಗಿ ಮಾತ್ರ ಉಳಿಯಲಿಲ್ಲ. ಅವರೊಬ್ಬ ಕ್ರಾಂತಿ ಪುರುಷರಾದರು, ಕ್ರಾಂತಿ ಕವಿಯಾದರು, ಕ್ರಾಂತಿ ಜ್ಞಾನಿಯಾದರು, ಕ್ರಾಂತಿ ಚಿಂತಕರಾದರು, ಕ್ರಾಂತಿ ಸ್ವಾತಂತ್ರ್ಯ ಹೋರಾಟಗಾರರಾದರು, ಕ್ರಾಂತಿ ಧರ್ಮ ರಕ್ಷಕರಾದರು.
ಭಾರತವನ್ನು ಬಂಧಮುಕ್ತಗೊಳಿಸಲು ಬಾಲ್ಯದಲ್ಲೇ ಸಂಕಲ್ಪಿಸಿದ ಸಾವರ್ಕರ್ ಮುನ್ನುಗ್ಗಿರದ ಯಾವುದಾದರೂ ಸ್ವಾತಂತ್ರ್ಯ ಹೋರಾಟದ ಸಾಹಸಿ ಹಾದಿಗಳು ಅಸ್ತಿತ್ವದಲ್ಲಿವೆಯೇ? ಅಗಾಧ ವಿದೇಶಿ ಬಟ್ಟೆಗಳ ಹೋಳಿ, ಅಗಾಧ ರಾಷ್ಟ್ರಭಕ್ತಿಯಿಂದಾಗಿ ಕಾಲೇಜು-ಹಾಸ್ಟೆಲ್ ಗಳಿಂದ ಅಮಾನತು, ಪ್ರಕಟಣೆಗೊಳ್ಳುವ ಮುನ್ನವೇ ನಿಷೇಧಕ್ಕೊಳಗಾಗುವ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕೃತಿ, ಅತ್ಯುನ್ನತ ಪದವಿಯಾಗಿದ್ದ ಬ್ಯಾರಿಸ್ಟರ್ ನ ಹಕ್ಕುದಾರರಾದರೂ ಅದರಿಂದ ವಂಚನೆ, ನವಕ್ರಾಂತಿಕಾರಿಗಳ ನಿರ್ಮಾಣಕ್ಕೆ ಮುನ್ನುಡಿ, ಬ್ರಿಟಿಷರ ಬಂಧನಕ್ಕೊಳಪಟ್ಟಿದ್ದಾಗ ಹಡಗಿನಿಂದ ತಪ್ಪಿಸಿಕೊಂಡು ರಕ್ತ ಹರಿಸಿದ ಪರಿ, ಪ್ರಪಂಚದ ಇತಿಹಾಸದಲ್ಲೆ ಸಂಭವಿಸಿರದ ಎರಡು ಜೀವಾವಧಿ ಶಿಕ್ಷೆಗೆ ಗುರಿ( 50 ವರ್ಷ ), ನರಕಸದೃಶ ಅಂಡಮಾನ್ ನ ಕಾಲಾಪಾಣಿಯ ಜೈಲು ಅನುಭವ( 13 ವರ್ಷ ), ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಅವಿರತ ಶ್ರಮ, ಸಮಸ್ಯೆಗಳನ್ನು ಸೀಳಿ ಸತ್ಯ ತಿಳಿಸಲು ಸತ್ಯ ವಚನಕಾರರಾದ ಚಾಣಾಕ್ಷತನ, ಕ್ರಾಂತಿ ಜ್ಯೋತಿಯಿಂದ ಮಾತೃಭೂಮಿಯನ್ನುಳಿಸಲು ಹಿಂದುಗಳ ಸೈನ್ಯಿಕೀಕರಣ, ರಾಷ್ಟ್ರದ ಹಿತಕ್ಕಾಗಿ ತಮ್ಮ ಸ್ವಂತ ಹಿತಾಸಕ್ತಿಗಳನ್ನು ತ್ಯಜಿಸಿದ ಕರ್ಮಯೋಗಿ, ತಮ್ಮ ಒಂದೇ ಒಂದು ತಪ್ಪಿಲ್ಲದಿದ್ದರೂ ಗಾಂಧೀಜಿ ಹತ್ಯೆಯ ಆರೋಪಿ ಸ್ಥಾನದ ಅಪಮಾನಕ್ಕೊಳಗಾದ ನಿರಪರಾಧಿತನ, ಬ್ರಿಟಿಷರಂತಹ ನಮ್ಮ ದೇಶದ ಆಕ್ರಮಣಕಾರರ ವಿರುದ್ಧವೂ ಹಿಂಸಾಮಾರ್ಗದ ಹೋರಾಟವನ್ನು ಖಂಡಿಸಿದ ಅಹಿಂಸಾಮಾರ್ಗಿಗಳಿಂದಾದ ತಮ್ಮ ಸಹೋದರನ ಹತ್ಯೆ, ಸ್ವತಂತ್ರ ಭಾರತದಲ್ಲೂ ತಮ್ಮ ಯೋಗ್ಯತೆಯನ್ನು ಗೌರವಿಸದ ಜಾಣ ವಿರೋಧಿಗಳಿಂದಾದ ನಿಂದನೆ, ಸಶಕ್ತ ಹಿಂದೂ ಧರ್ಮದ ಜಾಗೃತಿಗಾಗಿ ರಣಕಹಳೆ ಮೊಳಗಿಸಿದ ಹಿಂದುತ್ವದ ಶಕ್ತಿಯುತ ವ್ಯಾಖ್ಯಾನ, ತುಂಬು ಜೀವನದ ನಂತರ ತಮ್ಮ ದೇಶವಾಸಿಗಳಿಂದಲೇ ನಡೆದ ಆಘಾತದ ತರುವಾಯ 21 ದಿನಗಳ ಆಹಾರ ತ್ಯಾಗದ ಆತ್ಮ ಸಮರ್ಪಣೆ. ಒಬ್ಬ ವ್ಯಕ್ತಿ ತಮ್ಮ ಒಂದು ಜೀವನದಲ್ಲಿ ಇನ್ನೆಷ್ಟು ಸವಾಲುಗಳನ್ನು ಎದುರಿಸಿ ಸಫಲವಾಗಲು ಸಾಧ್ಯ ಹೇಳಿ.
ಸಾವರ್ಕರ್ ಅವರು ಕೇವಲ ಮೇಲ್ವರ್ಗದವರನ್ನು ಮಾತ್ರ ಬೆಂಬಲಿಸಿದರು ಎಂಬ ತಪ್ಪು ಕಲ್ಪನೆಯನ್ನು ಜನರಲ್ಲಿ ಬೇಕಂತಲೇ ತರಿಸಲಾಗಿದೆ. ಆದರೆ, 1924ರಿಂದ ಯಾವುದೇ ರಾಜಕೀಯ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗದೆ ತಮ್ಮ ಸ್ಥಳದಲ್ಲೇ ಉಳಿಯಬೇಕೆಂಬ ಷರತ್ತಿನ ಮೇಲೆ ಬಿಡುಗಡೆ ಯಾದ ಸಾವರ್ಕರ್ ಅವರು ತಮ್ಮ ಮುಂದಿನ 13 ವರ್ಷಗಳ ಕಾಲ ಹಿಂದೂ ಧರ್ಮದಲ್ಲಿ ಕಳಂಕವಾಗಿ ಮಾರ್ಪಾಡಿಹೋಗಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ, ಭೇದ ಭಾವಗಳನ್ನು ನಿವಾರಿಸಲು ಸತತ ಪ್ರಯತ್ನ ನಡೆಸಿದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ- ಒಬ್ಬ ವ್ಯಕ್ತಿ ಬಾಲ್ಯದಿಂದಲೂ ಸ್ವಾತಂತ್ರ್ಯ ಹೋರಾಟದ ಚಿಂತನೆ, ಚಟುವಟಿಕೆಗಳನಲ್ಲೇ ಮುಳುಗಿ ಸಮರ್ಪಣೆಗೊಂಡಿದ್ದನೊ ಆತನನ್ನು ಈ ಯಾವುದೇ ಕಾರ್ಯ ಮಾಡಬಾರದೆಂದು ಷರತ್ತು ವಿಧಿಸಿ ಬಿಡುಗಡೆ ಮಾಡಿದಾಗ ಎಂತಹ ಆಘಾತವಾಗಿದ್ದಿರಬಹುದು! ಸಾವರ್ಕರ್ ಜೀವನದಲ್ಲೂ ನಡೆದಿದ್ದು ಇದೇ. ಆದರೆ, ಸಾವರ್ಕರ್ ಅವರು ಚಿಂತೆ ಮಾಡುತ್ತಿರಲಿಲ್ಲ, ಚಿಂತನೆ ಮಾಡುತ್ತಿದ್ದರು. ಸ್ವಾಮಿ ವಿವೇಕಾನಂದರಿಗೆ ಒಬ್ಬ ವ್ಯಕ್ತಿ ನಿಮ್ಮಂತಹ ಮಹಾನ್ ಸಾಧಕರು ಮನಸ್ಸು ಮಾಡಿದರೆ 24 ಗಂಟೆಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಬಹುದು. ಆದರೆ ನೀವೇಕೆ ಹಾಗೆ ಮಾಡುತ್ತಿಲ್ಲವೆಂದು ಪ್ರಶ್ನಿಸಿದ್ದಾಗ ಸ್ವಾಮೀಜಿ ಅವರು ಸ್ವಾತಂತ್ರ್ಯವನ್ನು ಸಮರ್ಥವಾಗಿ ನಿಭಾಯಿಸಲು ಮನುಷ್ಯರೆಲ್ಲಿದ್ದಾರೆ? ಎಂದು ಮರುಪ್ರಶ್ನಿಸಿದ್ದರಂತೆ. ಹಾಗೆಯೇ ಸಾವರ್ಕರ್ ಅವರು ಸಹ ಯಾವುದೇ ಸುಧಾರಣೆಗಳಿಲ್ಲದೆ ಗಳಿಸಿದ ಸ್ವಾತಂತ್ರ್ಯವು 3 ದಿನವೂ ಉಳಿಯುವುದಿಲ್ಲ ಎಂಬುದನ್ನು ಅರ್ಥೈಸಿಕೊಂಡು ಸಾಮಾಜಿಕ ಸುಧಾರಣೆಗೆ ಮುಂದೆ ಬಂದರು.
ಅಸ್ಪೃಶ್ಯತೆಯಂತಹ ಮಾರಕಗಳು ಏಕೆ ಅನುಷ್ಠಾನದಲ್ಲಿರಲೇ ಬಾರದು ಎಂಬುದಕ್ಕೆ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದರು. ಒಬ್ಬ ವ್ಯಕ್ತಿ ಯಾವುದಾದರೂ ಮನುಷ್ಯನನ್ನು ಆತ ಒಂದು ಜಾತಿಯಲ್ಲಿ ಜನ್ಮ ತಾಳಿದ್ದಾನೆಂಬ ಒಂದೇ ಒಂದು ಕಾರಣಕ್ಕೆ ಆತನನ್ನು ಸ್ಪರ್ಶಿಸುವುದಿಲ್ಲ, ಆತನೊಂದಿಗೆ ಯಾವುದೇ ಸಂಬಂಧವನ್ನು ಹೊಂದುವುದಿಲ್ಲ. ಆದರೆ ಬೆಕ್ಕು, ನಾಯಿಗಳನ್ನು ಯಾವುದೇ ಭೇದವಿಲ್ಲದೆ ಸ್ಪರ್ಶಿಸಿ ಅವುಗಳೊಂದಿಗೆ ಆಟವಾಡುತ್ತಾನೆಂದರೆ ಅದಕ್ಕಿಂತ ದೊಡ್ಡ ಹೀನ ಕೃತ್ಯ ಮನುಷ್ಯತ್ವದ ಚರಿತ್ರೆಯಲ್ಲಿ ಮತ್ತೊಂದಿರಲು ಸಾಧ್ಯವಿಲ್ಲ. ನಮ್ಮ ಜನರನ್ನು ನಾವೇ ಅಸ್ಪೃಶ್ಯರೆಂದು ಕರೆದು ಅವಮಾನಿಸುವುದು ಕೇವಲ ಮನುಷ್ಯತ್ವದ ಘನತೆಗೆ ಮಾತ್ರ ಧಕ್ಕೆ ತರುವುದಲ್ಲ, ಬದಲಾಗಿ ನಮ್ಮ ಪವಿತ್ರ ಆತ್ಮಗಳಿಗೂ ಧಕ್ಕೆ ತಂದಂತೆ. ಹೀಗೆ ಸಮಾಜದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆಯ ಬಗೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಭೇದ ಭಾವಗಳಿಗೆ ಕಾರಣವಾದ ಸ್ಪರ್ಶಬಂದಿ, ರೋಟಿಬಂದಿ, ಬೇಟಿಬಂದಿ, ವ್ಯವಸಾಯಬಂದಿ, ಸಿಂಧುಬಂದಿ, ವೇದೋಕ್ತಬಂದಿ, ಶುದ್ಧಿಬಂದಿಗಳ ವಿರುದ್ಧ ಹೋರಾಡಿದರು. ಸಾವರ್ಕರ್ ಅವರು ರಾಷ್ಟ್ರವಾದಿಯಾಗಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಬ್ರಿಟಿಷರಿಂದ ಸಮಸ್ಯೆಯನ್ನು ಎದುರಿಸಬೇಕಾಯಿತು. ನಂತರದಲ್ಲಿ ಅವರು ಒಬ್ಬ ಸಮಾಜ ಸುಧಾರಕರಾಗಿ ಹಿಂದೂ ಸಮಾಜದ ಭರತ ಭೂಮಿಯ ಉನ್ನತಿಗಾಗಿ ಸಾಮಾಜಿಕ ಸ್ವಾತಂತ್ರ್ಯದ ಹೋರಾಟ ಮಾಡುತ್ತಿದ್ದಾಗ ಅವರ ಸ್ವಂತ ಜನರಿಂದಲೇ ಸಮಸ್ಯೆಯನ್ನು ಎದುರಿಸಬೇಕಾಯಿತು. ಅವರೇ ಹೇಳುವಂತೆ ಸಾಮಾಜಿಕ ಕಾರ್ಯಗಳನ್ನು ಮಾಡುವುದೆಂದರೆ ಮುಳ್ಳಿನ ಹಾಸಿಗೆಯ ಮೇಲೆ ನಡೆದ ಹಾಗೆ, ಅದು ಬಲಹೀನ ಹೃದಯದವರಿಗಲ್ಲ.
ಅಸ್ಪೃಶ್ಯತೆ ಒಂದು ಪಿಡುಗು ಎಂದು ಮಾತ್ರ ನಾವು ಅದನ್ನು ನಿವಾರಿಸುತ್ತಿಲ್ಲ. ಅದನ್ನು ನಮ್ಮ ಧರ್ಮದ ಯಾವ ತತ್ತ್ವ, ಆದರ್ಶಗಳೂ ಸಮರ್ಥಿಸುವುದಿಲ್ಲವಾದ್ದರಿಂದ ಅದನ್ನು ನಿವಾರಿಸಿ ಅಂತ್ಯ ಹಾಡಲೇಬೇಕಿದೆ. ಈ ಅಸ್ಪೃಶ್ಯತೆಯ ಪಿಡುಗನ್ನು ನಮ್ಮ ಧರ್ಮದ ಖಡಕ್ ಆದೇಶವೆಂದೇ ತಿಳಿದು ನಿವಾರಿಸಬೇಕು. ಕೆಳವರ್ಗದವರಿಗೆ ಸಾರ್ವಜನಿಕ ಜಲ ಸಂಗ್ರಹ ಸ್ಥಳಗಳಾದ ಕೆರೆ, ಬಾವಿಗಳಲ್ಲಿ ನೀರು ತೆಗೆದುಕೊಳ್ಳಲು ಅವಕಾಶ ನೀಡಬೇಕು. ಹಾಗೆಯೇ ಅವರು ಸಹ ಎಲ್ಲರಂತೆ ದೇವಾಲಯಗಳನ್ನು ಪ್ರವೇಶಿಸಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅವಕಾಶ ನೀಡಬೇಕು ಎಂದು ವಾದ ಮಾಡಿ ಜನರಿಗೆ ಅರ್ಥೈಸಲು ಪ್ರಯತ್ನ ಪಡುತ್ತಿದ್ದರು. ರತ್ನಾಗಿರಿಯ ಹಲವು ಹಳ್ಳಿ-ಪಟ್ಟಣಗಳಿಗೆ ಸಂಚರಿಸಿ, ಸಭೆಗಳನ್ನು ನಡೆಸುವ ಮೂಲಕ ಅಸ್ಪೃಶ್ಯತೆಯ ನಿವಾರಣೆಗೆ ಕರೆ ಕೊಟ್ಟರು. ಹಾಗೆಯೇ ಐಸಿಎಸ್ ಅಧಿಕಾರಿಗಳ ಬಳಿ ತೆರಳಿ, ಎಲ್ಲಾ ಮಕ್ಕಳು ಚಿಕ್ಕಂದಿನಿಂದ ಒಟ್ಟಿಗೆ ಕಲಿತರೆ ಅಸ್ಪೃಶ್ಯತೆಯಂತಹ ಕೆಳಮಟ್ಟದ ಮಾನಸಿಕತೆ ಅವರಲ್ಲಿ ಹುಟ್ಟುವುದೇ ಇಲ್ಲ ಎಂಬುದಾಗಿ ಚರ್ಚಿಸುತ್ತಿದ್ದರು. ಕೆಳವರ್ಗದ ವಿದ್ಯಾರ್ಥಿಗಳಿಗೆ ಸ್ಲೇಟ್ಸ್, ಚಾಕ್ ಪೀಸ್, ಮಾಸಿಕ ಗೌರವಧನವನ್ನು ನೀಡಿ ಶಾಲೆಗೆ ತಪ್ಪದೆ ಹಾಜರಾಗಿ ವಿದ್ಯಾಭ್ಯಾಸ ಪಡೆಯಬೇಕೆಂದು ಪ್ರೋತ್ಸಾಹ ನೀಡುತ್ತಿದ್ದರು. ಒಂದು ವೇಳೆ ಸಾಮಾಜಿಕ ಸುಧಾರಣೆಯ ಮೂಲಕ ಸಮಾನತೆಯನ್ನು ತರಲು ಸಾಧ್ಯವಾಗದಿದ್ದರೆ, ಕಾನೂನಿನ ಬಲವನ್ನು ಪ್ರಯೋಗಿಸಿಯಾದರೂ ಸಮಾನತೆಯನ್ನು ಸ್ಥಾಪಿಸಿ ಕೆಳವರ್ಗದ ಜನರ ಉದ್ಧಾರ ಮಾಡಬೇಕೆಂಬ ಖಡಕ್ ಸಂದೇಶವನ್ನು ನೀಡಿದ್ದರು. ಎಲ್ಲಾ ಜಾತಿಯವರನ್ನು ಒಟ್ಟುಗೂಡಿಸಿ ಭಜನೆ ಕಾರ್ಯಕ್ರಮಗಳು ಹಾಗೂ ಔತಣ ಕೂಟಗಳನ್ನು ಏರ್ಪಡಿಸುವುದು ಅಧಿಕವಾಗಿ ನಡೆಯುತ್ತಿತ್ತು. ಅದುವೇ ನೂರಾರು ಜನರ ಭಾಗವಹಿಸುವಿಕೆಯ ಯಶಸ್ಸಿನಲ್ಲಿ ಎಂದರೆ ನೀವು ನಂಬಲೇಬೇಕು. ದಸರಾ, ಸಂಕ್ರಾಂತಿಯಂತಹ ವಿಶೇಷ ಹಬ್ಬಗಳಲ್ಲಿ ಸಾವರ್ಕರ್ ಅವರು ಮಿತ್ರರೊಡಗೂಡಿ ಕೆಳವರ್ಗದವರ ಮನೆಗಳಿಗೆ ಭೇಟಿ ನೀಡಿ ಸಿಹಿಯನ್ನು ವಿತರಿಸುತ್ತಿದ್ದರು. ತಮ್ಮ ಪತ್ನಿ ಯಮುನಾ ಬಾಯಿಯವರ ದ್ವಾರ ಎಲ್ಲಾ ಜಾತಿಯ ಮಹಿಳೆಯರಿಗಾಗಿ ಅರಿಶಿಣ-ಕುಂಕುಮ ನೀಡುವ ಆಚರಣೆಯನ್ನು ಮಾಡಿಸುತ್ತಿದ್ದರು. ಅಲ್ಲಿ ಕೆಳವರ್ಗದ ಮಹಿಳೆಯರು ಮೇಲ್ವರ್ಗದ ಮಹಿಳೆಯರ ಹಣೆಗೆ ಕುಂಕುಮ ಹಚ್ಚುತ್ತಿದ್ದರು. ಹಾಗೆಯೇ ಎಲ್ಲಾ ಜಾತಿಯ ಹಿಂದೂಗಳಿಗೂ ತೆರೆಯಲ್ಪಡುವ ಕೆಫೆಯನ್ನು ಆರಂಭಿಸಿದರು. ತಮ್ಮನ್ನು ಎಂತಹ ಗಣ್ಯ ವ್ಯಕ್ತಿ ಭೇಟಿ ಮಾಡಲು ಅವರ ಜಿಲ್ಲೆಗೆ ಬಂದರೂ, ಈ ಕೆಫೆಯಲ್ಲಿ ಒಂದು ಕಪ್ ಚಹಾವನ್ನಾದರೂ ಸೇವಿಸಿ ಬರಬೇಕೆಂಬ ನಿಯಮವೇ ನಿರ್ಮಾಣವಾಗಿ ಹೋಗಿತ್ತು. ಪತೀತ ಪಾವನ ಮಂದಿರವೆಂಬ ಎಲ್ಲಾ ಜಾತಿಯ ಹಿಂದೂಗಳಿಗೂ ತೆರೆಯಲ್ಪಡುವ ದೇವಾಲಯದ ಉದ್ಘಾಟನೆ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದು ಸಾವರ್ಕರ್ ಅವರ ಸಾಹಸಕಾರ್ಯಕ್ಕೆ ಹಸ್ತಾಕ್ಷರಿ. ಅಂಬೇಡ್ಕರ್ ಅವರು ನೇತೃತ್ವ ವಹಿಸಿದ್ದ ನಾಸಿಕ್ ಹಾಗೂ ಮಹರ್ ಚಳುವಳಿಗಳಿಗೆ ಸಮರ್ಥನೆ ನೀಡಿದ್ದರು.
ಮೊದಲು ಹಿಂದುಗಳಾಗಿದ್ದು ನಂತರ ಭಯದಲ್ಲೊ, ಪ್ರಭಾವದಲ್ಲೊ ಮತಾಂತರವಾಗಿದ್ದವರ ಸ್ವ-ಇಚ್ಛೆಯಂತೆ ಶುದ್ಧಿಕಾರ್ಯ ಆರಂಭಿಸಿ ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಂಡರು. ಬಿಹಾರ್ ನಲ್ಲಿ ಅಸ್ಪೃಶ್ಯರ ಸಭೆಯಲ್ಲಿ ಭಾಗವಹಿಸಿದ್ದಾಗ ತಮ್ಮ ಜನ್ಮದಿನವನ್ನು ಅಸ್ಪೃಶ್ಯತೆಯ ನಿವಾರಣಾದಿನವನ್ನಾಗಿ ಆಚರಿಸಬೇಕೆಂದು ಹೇಳಿಕೆ ನೀಡಿದ್ದರು. ಅಸ್ಪೃಶ್ಯತೆಯ ನಿವಾರಣೆಯಾಗುವುದೆಂಬ ನಂಬಿಕೆ ನನಗಿದೆ. ನನ್ನ ಮರಣಾನಂತರ ನನ್ನ ಶವಯಾತ್ರೆಯನ್ನು ಕೆಳವರ್ಗದವರೊಂದಿಗೆ ಮೇಲ್ವರ್ಗದವರು ಸೇರಿ ಮಾಡಿದಾಗಲೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದು ಎಂದು ತಿಳಿಸಿದ್ದರು. ಸಾವರ್ಕರ್ ಅವರು ಸಾಮಾಜಿಕ ಸುಧಾರಣೆಯ ಬಗೆಗೆ ಕೇವಲ ಭಾಷಣವನ್ನು ಮಾತ್ರ ಮಾಡದೆ ನೈಜ ಜೀವನದಲ್ಲೂ ಆಚರಣೆಗೆ ತಂದ ನಿಜವಾದ ಸುಧಾರಕರು.
ಸಾವರ್ಕರ್ ಅವರು ಜಯಂತಿಯನ್ನು ಕೇವಲ ನಾಮಕಾವಸ್ಥೆಗೆ ಮಾತ್ರ ಮೀಸಲಾಗಿ ಉಳಿಸದೆ, ಅವರ ಶ್ರೇಷ್ಠ ಆದರ್ಶಗಳನ್ನು ಮುನ್ನೆಡಸಲು ಪ್ರೇರಣೆ ಪಡೆದುಕೊಳ್ಳೋಣ. ಭಾರತವರ್ಷದಂತಹ ಭವ್ಯಭೂಮಿಯು ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಏಕೆ ಅನುಭವಿಸಬೇಕಾಗಿ ಬಂತು? ಆ ನಿರ್ದಿಷ್ಟಾವಧಿಯಲ್ಲಿ ನಮ್ಮ ಧರ್ಮ-ಸಂಸ್ಕೃತಿಯ ಜ್ಞಾನವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲರಾದ ಪರಿಣಾಮವೊ ಅಥವಾ ಧರ್ಮವನ್ನು ಮಿಥ್ಯವಾಗಿ, ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾಗದ ಪರಿಣಾಮವೊ ಈ ದುರಂತಕ್ಕೆ ಕಾರಣವಾಗಿದ್ದಿರಬಹುದು. 1757ರ ಪ್ಲಾಸಿ ಕದನದಲ್ಲಿ ಮೀರ್ ಜಾಫರ್ ಎಂಬ ದುಷ್ಟನಿಂದ 300 ಸೈನಿಕರನ್ನು ಹೊಂದಿದ್ದ ರಾಬರ್ಟ್ ಕ್ಲೈವ್ 18000 ಸೈನಿಕರನ್ನು ಹೊಂದಿದ್ದ ಸಿರಾಜುದ್ದೌಲನ ವಿರುದ್ಧ ಕಪಟದಿಂದ ಜಯಗೊಳಿಸುತ್ತಾನೆ. ಅಂದು ಆತ ವಿಜಯಯಾತ್ರೆ ನಡೆಸುತ್ತಿದ್ದಾಗ ಅದನ್ನು ನೋಡುತ್ತಿದ್ದ ಭಾರತೀಯರು ಒಂದೊಂದು ಕಲ್ಲನ್ನು ಎತ್ತಿಕೊಂಡು ಅವರ ಮೇಲೆ ದಾಳಿ ಮಾಡಿದ್ದರೆ ಅವರ ಸಂಹಾರವಾಗುತ್ತಿತ್ತು, ಭಾರತದ ಇತಿಹಾಸ ಬದಲಾಗುತ್ತಿತ್ತು. ನಮ್ಮ ದೇಶ-ಧರ್ಮದ ಬಗೆಗಿನ ವಿಷಯಗಳಲ್ಲಿ ಅನಾಸಕ್ತಿ ಹೊಂದಿ ಕ್ಷಾತ್ರತೇಜವನ್ನು ಕ್ಷೀಣಿಸಿ, ಪ್ರವೃತ್ತಿ-ನಿವೃತ್ತಿಗಳಲ್ಲಿ ಸಮಾನತೆ ಸಾಧಿಸದಿದ್ದದ್ದೇ ಇದಕ್ಕೆ ಕಾರಣ ಅಲ್ಲವೆ? ನಿರಂತರ ಆಕ್ರಮಣಗಳ ಪೆಟ್ಟಿಗೆ ಕಾರಣವಾಗಿದ್ದು ನಮ್ಮ ಸನಾತನ ಧರ್ಮದಲ್ಲಿ ಉಂಟಾದ ಒಡುಕುಗಳೇ ಅಲ್ಲವೆ? ನಮ್ಮ ಸನಾತನ ಧರ್ಮದ ಸರಿಯಾದ ಅರ್ಥೈಸುವಿಕೆಯಿಂದ ಮಾತ್ರವೇ ನಮ್ಮ ಶಕ್ತಿ ಒಗ್ಗೂಡಲು ಬಲಿಷ್ಠವಾಗಲು ಸಾಧ್ಯ, ಆ ಒಗ್ಗಟ್ಟಿನಿಂದಲೇ ನಮ್ಮ ಮಾತೃಭೂಮಿಯನ್ನು ರಕ್ಷಣೆ ಮಾಡಲು ಸಕ್ಷಮರಾಗುತ್ತೇವೆ. ಸಮಸ್ತ ಮಾನವಕಲ್ಯಾಣದ ಮಾರ್ಗವಾಗಿರುವ ನಮ್ಮ ಸಂಸ್ಕೃತಿಯನ್ನು ನಾವು ಅರಿತುಕೊಂಡರೆ ಭಾರತ ವಿಶ್ವಗುರುವಾಗಿ, ಇಡೀ ವಿಶ್ವಕ್ಕೆ ಕಲ್ಯಾಣಕರಿಯಾದ ಮಾರ್ಗವನ್ನು ಭೋದಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment