ಸೂರ್ಯ ಮುಳುಗದ ಸಾಮ್ರಾಜ್ಯದ ಅಸ್ತಂಗತೆಗಾಗಿ ಮುನ್ನುಡಿ ಬರೆದ ಸೂರ್ಯದೇವನ ಆಶೀರ್ವದಿತ ಭಾರತದ ಸುಪುತ್ರ ಲೋಕಮಾನ್ಯ ತಿಲಕರು
ಸೂರ್ಯ ಮುಳುಗದ ಸಾಮ್ರಾಜ್ಯದ ಅಸ್ತಂಗತೆಗಾಗಿ ಮುನ್ನುಡಿ ಬರೆದ ಸೂರ್ಯದೇವನ ಆಶೀರ್ವದಿತ ಭಾರತದ ಸುಪುತ್ರ ಲೋಕಮಾನ್ಯ ತಿಲಕರು
ಬ್ರಿಟಿಷ್ ಸಾಮ್ರಾಜ್ಯಶಾಹಿ ಸೂರ್ಯನ ಅಸ್ತಂಗತೆಗಾಗಿ ಮುನ್ನುಡಿ ಬರೆಯಲು ಭಾರತದ ಸೌಭಾಗ್ಯವತಿ ಮಾತೆ ಪಾರ್ವತಿ ಬಾಯಿಯ 18 ಮಾಸಗಳ ಕಾಲದ ಸೂರ್ಯದೇವನ ವ್ರತದ ಫಲವಾಗಿ ದೊರೆತ ವರ, ಆಶೀರ್ವಾದ ತೇಜಸ್ವೀ ವೀರ ಸುಪುತ್ರರೇ 'ಲೋಕಮಾನ್ಯ ಬಾಲ ಗಂಗಾಧರ ತಿಲಕ್.' ವಜ್ರಕ್ಕಿಂತಲೂ ಗುಣಮಟ್ಟದ ಹೊಳಪಿನ ಭಾರತೀಯತೆಯ ಶಿಕ್ಷಣವನ್ನು ಭೋದಿಸಲು ಶಿಕ್ಷಕರಾದ, ಸ್ಫಟಿಕಕ್ಕಿಂತಲೂ ಸ್ಪಷ್ಟವಾದ ಪ್ರಖರ ಬೆಳಕಿನ ನ್ಯಾಯವನ್ನು ಎತ್ತಿ ಹಿಡಿಯಲು ವಕೀಲರಾದ, ಕತ್ತಿಗಿಂತಲೂ ಹರಿತವಾದ ನೇರ ನುಡಿವಂತಿಕೆಯ ಶೌರ್ಯ-ಸಾಹಸವಂತಿಕೆಯ ಸತ್ಯವನ್ನು ಉಚ್ಛರಿಸಲು ಪತ್ರಕರ್ತರಾದ ಧ್ವನಿಯಿಲ್ಲದವರ ಧ್ವನಿ, ಧೈರ್ಯವಿಲ್ಲದವರ ಧೈರ್ಯ, ವಿದ್ಯೆಯಿಲ್ಲದವರ ವಿದ್ಯೆ ಭಾರತ ಲೋಕವೇ ಮೆಚ್ಚಿದಂತಹ ಹಿಂದೂ ರಾಷ್ಟ್ರೀಯತೆಯ ಪಿತಾಮಹರು ನಮ್ಮ ಲೋಕಮಾನ್ಯ ನಾಯಕ ತಿಲಕರು.
ಜನ್ಮದತ್ತವಾಗಿ ಸಿದ್ಧಿಸಿದ ತೇಜಸ್ಸು
ಈ ಪುಣ್ಯಭೂಮಿಯ ಧರ್ಮ, ಸಂಸ್ಕೃತಿ, ಪರಂಪರೆಗಳ ರಕ್ಷಣೆಗಾಗಿ ಅವತಾರವೆತ್ತಿ ಬಂದ ಛತ್ರಪತಿ ಶಿವಾಜಿ ಮಹಾರಾಜರ ಕಾಲಾನಂತರದಲ್ಲಿ ಆಳ್ವಿಕೆ ಮಾಡಿದ ಪೇಶ್ವೆ ವಂಶಾವಳಿಯ ಮನೆತನದವರಾದ ತಿಲಕರಿಗೆ ಜನ್ಮದತ್ತವಾಗಿ ಪ್ರಖರ ತೇಜಸ್ಸು, ವಿದ್ವತ್ತುಗಳು ಸಿದ್ಧಿಯಾಗಿದ್ದವು. ಬಾಲ್ಯದಲ್ಲಿ ದೊರೆಯುವ ಮೌಲ್ಯ, ಆದರ್ಶ, ಶಿಕ್ಷಣಗಳು ಭವಿಷ್ಯದ ಉಜ್ವಲ ಮಾರ್ಗಕ್ಕೆ ನಮ್ಮನ್ನು ಕರೆದೊಯ್ಯುತ್ತವೆ ಎಂಬ ಸತ್ಯಸಂಗತ ಮಾತಿಗೆ ಜ್ವಲಂತ ಉದಾಹರಣೆ 'ತಿಲಕರ ಜೀವನ.' ಹಿಂದೂ ಸಂಸ್ಕೃತಿಯ ಆದರ್ಶ ಭೋದನಾಕಲಿಕೆಯು ಹಾಗೂ ಭಾರತೀಯತೆಯ ಗೌರವಕ್ಕೆ ಧಕ್ಕೆ ತಂದಿದ್ದ ಮನಕಲುಕಿದ ಘಟನೆಗಳ ಪ್ರಭಾವವು ಸಂಸ್ಕಾರವಂತ, ಚಾಣಾಕ್ಷ, ನಿರ್ಭಯ ರಾಷ್ಟ್ರಭಕ್ತನನ್ನು ಹುಟ್ಟು ಹಾಕಿತು.
ಭಾರತೀಯ ಶಿಕ್ಷಣ ವಿಧಾನದ ಶಾಲೆಯ ಸ್ಥಾಪನೆ
ಪಾಶ್ಚಿಮಾತ್ಯರ ಶಿಕ್ಷಣ ಪದ್ಧತಿಯು ಭಾರತೀಯ ಶಿಕ್ಷಣಾ ಪದ್ಧತಿಯನ್ನು ಅವಹೇಳನ ಮಾಡುವಂಥದ್ದು, ಭಾರತೀಯರನ್ನು ಅವಮಾನ ಮಾಡುವಂಥದ್ದು ಎಂಬುದನ್ನು ಅರ್ಥೈಸಿಕೊಂಡ ತಿಲಕರು ನಾವು ಇಂದು ಓದಿ ಬ್ರಿಟಿಷ್ ಸರ್ಕಾರದ ಕ್ಲರ್ಕುಗಳಾಗಿ, ಕ್ಲರ್ಕುಗಳಾಗಿಯೇ ಸಾಯಬಾರದು. ತಮ್ಮನ್ನು ತಾವು ಸಶಕ್ತರೆಂದು ಬಿಂಬಿಸಲು, ಭಾರತೀಯರನ್ನು ಅಶಕ್ತರೆಂದು ನಂಬಿಸುತ್ತಿದ್ದಾರೆ. ಬ್ರಿಟಿಷರನ್ನು ಮಣಿಸಲು ಅವರ ಕೋಲಲ್ಲೇ ಅವರಿಗೆ ಹೊಡೆಯಿರಿ ಎಂಬ ತತ್ವವನ್ನು ಅನುಸರಿಸಿ, ಇಂಗ್ಲಿಷ್ ಶಾಲೆಗಳಿಗೆ ಸೆಡ್ಡು ಹೊಡೆಯಲು 'ದಿ ನಿವ್ ಇಂಗ್ಲಿಷ್ ಸ್ಕೂಲ್' ಎಂಬ ಹೆಸರಿನ ಭಾರತೀಯ ಸಂಸ್ಕೃತಿಯ ಶಾಲೆಯನ್ನು ಸ್ಥಾಪಿಸುತ್ತಾರೆ. ಅದಮ್ಯ ಉತ್ಸಾಹಿ ಚೇತನರಾಗಿದ್ದ ತಿಲಕರು ಶಾಲೆಯನ್ನು ನಡೆಸುವುದರ ಜೊತೆ ಜೊತೆಗೆ 'ಕೇಸರಿ' ಹಾಗೂ 'ಮರಾಠ' ಎಂಬ ಪತ್ರಿಕೆಗಳನ್ನು ಶುರು ಮಾಡಿ ಬ್ರಿಟಿಷರಿಗೆ ನೇರಾನೇರ ಪೆಟ್ಟನ್ನು ಕೊಡುವ ಪ್ರಕ್ರಿಯೆಗೆ ನಾಂದಿ ಹಾಡುತ್ತಾರೆ.
ತಮ್ಮ ಜೀವನದ ಆದರ್ಶಗಳ ಆಸರೆಯಾಗಿದ್ದ ಈ ಶಾಲೆಯನ್ನು ಬೆಳೆಸಲು ತಮ್ಮ ಕಠಿಣ ಪರಿಶ್ರಮ, ತರಬೇತಿ, ಭೋದನಾಕಾರ್ಯಗಳ ಮೌಲ್ಯದ ಜೊತೆಗೆ ಬದುಕಿನ ನಿರ್ವಹಣೆಯ ಅವಶ್ಯಕತೆಗಾಗಿ ಮಾತ್ರ ಕಡಿಮೆ ಸಂಬಳ ಪಡೆಯುವ, ಬೇರೆ ಯಾವ ವೃತ್ತಿಗಳನ್ನು ಮಾಡುತ್ತಿದ್ದರೂ ಅದರ ಪ್ರತಿಫಲವನ್ನು ಶಾಲೆಯ ಕಲ್ಯಾಣಕ್ಕೆ ಅರ್ಪಿಸುವ ತ್ಯಾಗಗಳ ಸಂಕಲ್ಪದ ಮೌಲ್ಯವನ್ನೂ ಕಟ್ಟಿದ್ದಾರೆ. 1882ರ ಸಮಯದಲ್ಲಿ ಒಂದು ರಾಜಮನೆತನದ ದತ್ತುಪುತ್ರನ ಹತ್ಯೆಯ ಸಂಚಿನ ಬಗೆಗಿನ ಸಾಕ್ಷಿ ಪತ್ರದ ಆಧಾರದ ಮೇಲೆ ಲೇಖನವನ್ನು ಪ್ರಕಟಿಸುವ ಇವರು, ನಂತರದಲ್ಲಿ ಆ ಪತ್ರ ನೀಡಿದವರ ರಕ್ಷಣೆಗಾಗಿ ಸಾಕ್ಷಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸದೆ ತಮ್ಮ ಸ್ನೇಹಿತ ಅಗರ್ಕರ್ ಅವರೊಂದಿಗೆ ನಾಲ್ಕು ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ಆನುಭವಿಸುತ್ತಾರೆ. ಆದರೆ ತಿಲಕರು ಮೊದಲೇ ಬರೆದು ಎಚ್ಚರಿಸಿದ್ದ ಹಾಗೆ ಆ ದತ್ತುಪುತ್ರನ ಹತ್ಯೆಯಾಗುತ್ತದೆ. ಅಂದಿನಿಂದ ಜನರಿಗೆ ತಿಲಕರ ಮಾತಿನ ಮೇಲಿದ್ದ ಗೌರವ, ವಿಶ್ವಾಸ, ಆದರಗಳು ಹೆಚ್ಚಾಗುತ್ತವೆ. ಅವರ ಶಾಲೆ ದಿ ನಿವ್ ಇಂಗ್ಲಿಷ್ ಸ್ಕೂಲ್ ಮುಂದೆ 'ಡೆಕ್ಕನ್ ಎಜುಕೇಷನ್ ಸೊಸೈಟಿ' ಎಂಬುದಾಗಿ ಪರಿವರ್ತನೆಗೊಂಡು ಪ್ರಖ್ಯಾತವಾಗುತ್ತದೆ. ಆದರೆ ಇನ್ನು ತಮ್ಮ ಆದರ್ಶದ ಶಾಲೆಯಲ್ಲಿ ಕಾರ್ಯ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಹುದ್ಯೋಗಿಗಳ ನಡುವೆ ಮನಸ್ತಾಪ ಬೆಳೆದದ್ದು, ಕೊನೆಗೆ ತಿಲಕರ ಅತೀವ ನೊಂದ ಮನದ ರಾಜೀನಾಮೆ ಪತ್ರದಿಂದಲೇ ಅಲ್ಪ ವಿರಾಮ ದೊರೆತಂತಾಗುತ್ತದೆ.
ನ್ಯಾಯದ ತರಬೇತಿಯಿಂದ ನಿರ್ಮಾಣವಾದ ರಾಜಕೀಯ ತಳಹದಿ
ತಿಲಕರ ಪಾಲಿಗೆ ಭರಿಸಲಾಗದ ದುಃಖ ನೀಡಿದ ಶಾಲೆಯಿಂದ ಹೊರ ಬರಲು ಕೈ ಗೊಂಡ ನಿರ್ಧಾರವು ಮುಂದೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಹೆಜ್ಜೆಯನ್ನಿಡಲು ಪ್ರೇರೇಪಿಸುತ್ತದೆ. ತಮ್ಮ ಪಾಲಿನ ಅಧಿಕ ಸಮಯವನ್ನು ಶಾಲೆಯಲ್ಲಿ ವಿನಿಯೋಗಿಸುತ್ತಿದ್ದ ತಿಲಕರಿಗೆ ಆ ಸಮಯವನ್ನೆಲ್ಲಾ ಸ್ವಾತಂತ್ರ್ಯ ಹೋರಾಟದ ಯೋಜನೆ, ಸಿದ್ಧತೆಗಳಿಗೆ ವಿನಿಯೋಗಿಸಲು ಸಹಕಾರಿಯಾಗುತ್ತದೆ. ಬ್ರಿಟಿಷ್ ಶಿಕ್ಷಣದ ಕಾನೂನು ಪದವಿಯ ಜೊತೆಗೆ ಭಾರತೀಯ ಶಿಕ್ಷಣದ ಕಾನೂನು-ನಿಯಮ ಸುವ್ಯವಸ್ಥೆಗಳ ಅಧ್ಯಯನವನ್ನೂ ಮಾಡಿ ಕೊಂಡಿದ್ದ ತಿಲಕರು ನ್ಯಾಯಾಲಯದಲ್ಲಿ ತಮ್ಮ ಜ್ಞಾನವನ್ನೂ ಮೀರಿದಂತೆ ವಾದ ಮಂಡಿಸುವ ಪರಿಯನ್ನು ಮೆಚ್ಚಿದ ನ್ಯಾಯಾಧೀಶರು ತಮ್ಮ ಅರಿವಿಗೆ ಬಾರದ ಭಾರತೀಯ ಕಾನೂನಿನ ಚಿಂತನೆಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಇದರಿಂದ ತಮ್ಮ ಶಕ್ತಿಯನ್ನು ಕಂಡು ಕೊಂಡ ತಿಲಕರು ವಕೀಲ ವೃತ್ತಿಯ ಹಲವು ಪರೀಕ್ಷೆಗಳಿಗಾಗಿ ತರಬೇತಿಯನ್ನು ಆರಂಭಿಸಿ ಎಲ್ಲೆಡೆ ತಮ್ಮ ಅಗಾಧ ಶಿಷ್ಯವೃಂದವನ್ನು ಸಂಪಾದಿಸುವ ಮೂಲಕ ನಾಯಕತ್ವದ ಪಟ್ಟವನ್ನು ಪಡೆದುಕೊಳ್ಳುತ್ತಾರೆ. ತಮ್ಮ ಜ್ಞಾನ-ಪಾಂಡಿತ್ಯದಿಂದ ನಿರ್ಮಾಣವಾದ ಅಗಾಧ ಸಂಖ್ಯೆಯ ವಕೀಲರು ತಿಲಕರ ಸಮರ್ಥ ಅನುಯಾಯಿಗಳಾಗುವ ಮೂಲಕ ಭವಿಷ್ಯದ ರಾಜಕೀಯ ತಳಹದಿಗೆ ಕಾರಣೀಭೂತರಾಗುತ್ತಾರೆ.
ಮುಕ್ತಿಯ ಹೋರಾಟದಲ್ಲಿ ಬರವಣಿಗೆಯ ಆಯುಧ
ಒಂದು ಸಾಮಾನ್ಯ ಪೆನ್ ಕೂಡ ಬೃಹದಾಕಾರದ ಶಕ್ತಿಯುತ ಗನ್ ನಂತಹ ಆಯುಧಗಳಿಗಿಂತಲೂ ಪರಿಣಾಮಕಾರಿಯಾಗಿ ಕಾರ್ಯ ಮಾಡಬಲ್ಲದು. ಭಾರತ ಮಾತೆಯ ಮುಕ್ತಿಯ ಹೋರಾಟದಲ್ಲಿ ತಿಲಕರು ಬಳಸಿದ ಕೇಸರಿ ಹಾಗೂ ಮರಾಠ ಎಂಬ ಎರಡು ಪತ್ರಿಕಾ ಆಯುಧಗಳು ಹೋರಾಟದ ದಿಕ್ಕನ್ನೇ ಬದಲಿಸಿದವು. ಬ್ರಿಟಿಷರೆಂಬ ಬಿಳಿ ಬಣ್ಣದ ಮನುಷ್ಯರು ನಮ್ಮನ್ನು ಸತತವಾದ ಚೆಂಗಿಸ್ ಖಾನ್, ತೈಮೂರ್ ರಂತಹ ಆಕ್ರಮಣಕಾರರಿಂದ ರಕ್ಷಿಸಲು ಬಂದಿರುವ ದೇವತೆಗಳೇನೋ ಎಂಬಂತೆ ಆಶ್ಚರ್ಯದಿಂದ ನಾವು ಅವರನ್ನು ನೋಡುತ್ತಿದ್ದೆವು. ನಮ್ಮನ್ನು ಮಾನಸಿಕವಾಗಿ ಅಶಕ್ತರೆಂದು ನಂಬಿಸುವ ಜಾಲ ಹರಡಿ ಅವರು ಸಶಕ್ತರಾದರು. ಆದರೆ ಈಗ ಅವರ ಸತ್ಯಾಸತ್ಯತೆ ನಮಗೆ ಅರ್ಥವಾಗಿದೆ. ಮನೆಯ ಒಳಗೆ ಯಾರಾದರೂ ಕಳ್ಳರು ಬಂದಾಗ ಅವರನ್ನು ಓಡಿಸಲಾಗದಿದ್ದರೆ ಮನೆಯ ಒಳಗೇ ಸುಟ್ಟುಬಿಡಿ ಎಂಬ ಕ್ರಾಂತಿಕಾರಿ ಚಿಂತನೆಯನ್ನು ನೀಡಿ, ಜಾಡ್ಯದ ನಾಶಕ್ಕಾಗಿ ಕ್ಷಾತ್ರವನ್ನು ಪ್ರಯೋಗಿಸಿದರು. ಬಂಗಾಳದ ವಿಭಜನೆಯ ವಿರುದ್ಧದ ಹೋರಾಟದಲ್ಲಿ ತನ್ನನ್ನೇ ತಾನು ವಿಭಜಿಸಿಕೊಂಡ ಕಾಂಗ್ರೆಸ್ ಸೂರತ್ ಅಧಿವೇಶನದಲ್ಲಿ ಇಬ್ಭಾಗವಾಗಿ ಮಂದಗಾಮಿಗಳ ಗುಂಪೊಂದು ಬ್ರಿಟಿಷರ ಮನವೊಲಿಸುವ ಪ್ರಯತ್ನವನ್ನು ಮುಂದುವರೆಸಿದರೆ, ಕಾಂಗ್ರೆಸ್ ನಿಂದ ಹೊರನಡೆದ ಲಾಲ್ ಬಾಲ್ ಪಾಲ್ ತಂಡವು ತೀವ್ರತರ ಹೋರಾಟದ ಮೂಲಕವೇ ಬ್ರಿಟಿಷರನ್ನು ಓಡಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬಂದವು. 'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ' ಎಂದು ಪ್ರಪ್ರಥಮವಾಗಿ ನಿಖರತೆಯಿಂದ ಅಷ್ಟೇ ಬಲಿಷ್ಠತೆಯಿಂದ ಸಂಪೂರ್ಣ ಸ್ವರಾಜ್ಯಕ್ಕೆ ಕರೆ ಕೊಟ್ಟ ಧೀರನಾಯಕ ತಿಲಕರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ವದೇಶಿ, ಸ್ವರಾಜ್ಯ, ರಾಷ್ಟ್ರೀಯತೆಯ ಮಂತ್ರವನ್ನು ನೀಡಿ ಸಕ್ಷಮ ಕಾರ್ಯನೀತಿಯನ್ನು ಆಚರಣೆಗೆ ತರುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ ಇವರ ಪತ್ರಿಕೆಗಳು ಅಂದಿನ ಕಾಲಕ್ಕೆ ಹಲವಾರು ಭಾರತೀಯ ಭಾಷೆಗಳಿಗೆ ಭಾಷಾಂತರವಾಗುತ್ತಿದ್ದ ಹಾಗೂ ಹಲವಾರು ಭಾರತೀಯ ರಾಜ್ಯಗಳ ಅಗಾಧ ಚಂದಾದಾರರಿಗೆ ರವಾನೆಯಾಗುತ್ತಿದ್ದ ಪ್ರಖ್ಯಾತ ಪತ್ರಿಕೆಗಳಾಗಿ ಸಾಧನೆಗೈದವು.
ಬ್ರಿಟಿಷ್ ಸರ್ಕಾರದಿಂದ ನೇಮಕಗೊಂಡು ಪ್ಲೇಗ್ ಅಧಿಕಾರಿ ಆಗಿ ಮಹಾರಾಷ್ಟ್ರಕ್ಕೆ ಆಗಮಿಸಿದ ರಾಂಡ್ ಎಂಬಾತನು ಪ್ಲೇಗ್ ಅನ್ನು ನಿಯಂತ್ರಿಸಲು ಬಂದಿದ್ದಾನೆಯೋ ಅಥವಾ ಪ್ಲೇಗ್ ಅನ್ನು ಪಸರಿಸಲು ಬಂದಿದ್ದಾನೆಯೋ, ಒಂದೂ ತಿಳಿಯದಾಯಿತು. ರಾಂಡ್ ಅನ್ನು ಸಹಿಸಿಕೊಳ್ಳುವುದಕ್ಕಿಂತ ಪ್ಲೇಗ್ ಅನ್ನು ಸಹಿಸಿಕೊಳ್ಳುವುದೇ ಬಹುಪಾಲು ಉತ್ತಮ ಎನ್ನುವಷ್ಟರ ಮಟ್ಟಿಗೆ ಈತನು ಮಾಡುತ್ತಿದ್ದ ಶೋಷಣೆಗಳು ಮಿತಿ ಮೀರಿತ್ತು. ಆಗ ತಿಲಕರು ಈತನನ್ನು ಖಂಡಿಸಿ, ಆಕ್ರೋಶದ ಧ್ವನಿಯಲ್ಲಿ ಲೇಖನವನ್ನು ಬರೆಯುತ್ತಾರೆ. ಅವರನ್ನು ಒಬ್ಬ ಯುವಕ ಶಿವಾಜಿ ಅಫ್ಜಲ್ ಖಾನ್ ನನ್ನು ಕೊಂದದ್ದು ಸರಿಯೇ? ಎಂದು ಪ್ರಶ್ನಿಸಿದಾಗ, ಅನಿವಾರ್ಯತೆ ಒದಗಿಬಂದಾಗ ಅಧರ್ಮಿಗಳನ್ನು ಸಂಹರಿಸುವುದು ಧರ್ಮರಕ್ಷಣೆಯ ಮಹಾನ್ ಕಾರ್ಯ ಎಂಬುದಾಗಿ ವಿವರಿಸಿ ಅದರ ಬಗೆಗೆ ಲೇಖನವನ್ನೂ ಪ್ರಕಟಿಸುತ್ತಾರೆ. ಆ ಲೇಖನ ಪ್ರಕಟಣೆಗೊಂಡ ಒಂದು ವಾರಕ್ಕೆ ಸರಿಯಾಗಿ ಚಾಪೇಕರ್ ಸಹೋದರರು ರಾಂಡ್ ಅನ್ನು ಸಂಹಾರ ಮಾಡುತ್ತಾರೆ. ಈ ಆರೋಪವನ್ನು ತಿಲಕರ ತಲೆಗೆ ಕಟ್ಟಿ 18 ತಿಂಗಳ ಜೈಲು ಶಿಕ್ಷೆಯನ್ನು ಘೋಷಿಸುತ್ತಾರೆ. ಮುಂದೆಯೂ ಸಹ ಅಸಹಕಾರ ಚಳುವಳಿಯು ತೀವ್ರವಾಗಿ ಹಬ್ಬುತ್ತಿದ್ದಂತಹ ಕಾಲದಲ್ಲಿ ಅವರನ್ನು ಬಂಧಿಸಿ, ಪೂರ್ವನಿರ್ಧಾರಿತವಾದ ಯೋಜನೆ ಮಾಡಿಕೊಂಡು ವಾದ-ವಿವಾದಗಳ ನಾಟಕ ಮಾಡಿ 6 ವರ್ಷಗಳ ಗಡಿಪಾರಿನ ಶಿಕ್ಷೆಯನ್ನು ವಿಧಿಸುತ್ತಾರೆ. ಅವರು ಪ್ರತಿ ಬಾರಿ ಜೈಲಿಗೆ ಹೋಗಿ ಮರಳುವಾಗ ತಾವು ಚಿಂತನೆ ನಡೆಸಿದ ವಿಷಯಗಳ ಕುರಿತು ಪುಸ್ತಕವನ್ನು ಬರೆಯುತ್ತಿದ್ದರು. ಆರ್ಯನ್ ಆರ್ ದಿ ಆಂಟಿಕ್ವಿಟಿ ಆಫ್ ದ ವೇದಾಸ್, ದಿ ಆರ್ಕಟಿಕ್ ಹೋಮ್ ಆಫ್ ದ ವೇದಾಸ್, ಭಗವದ್ಗೀತಾ ರಹಸ್ಯ ಎಂಬ ಭಾರತೀಯ ಸಂಸ್ಕೃತಿಯ ಮಹಾನತೆಯನ್ನು ಸಾರುವ ಪುಸ್ತಕಗಳನ್ನು ಬರೆಯುವ ಮೂಲಕ ಇತಿಹಾಸದಲ್ಲಿ ಹುದುಗಿದ್ದ ಸತ್ಯವನ್ನು ಶೋಧಿಸಿ ಜಗತ್ತಿನ ಮುಂದಿಡಲು ಇವರು ತೋರಿದ ಬೌದ್ಧಿಕ ಸಾಹಸ ಅಸಾಧಾರಣವಾದುದು.
ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆ
ತಿಲಕರ ಅದ್ವಿತೀಯ ಕಾರ್ಯಗಳ ಪಟ್ಟಿಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡು ಇಂದಿಗೂ ಅತ್ಯಂತ ಯಶಸ್ವಿಯಾಗಿ ಮುಂದುವರೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ, ಶಿವಾಜಿ ಜಯಂತಿಯಂತಹ ವೈಭವೋಪೇತ ಕಾರ್ಯಕ್ರಮಗಳ ಆಚರಣೆಗಳು ನಮ್ಮನ್ನು ಹಿಂದೂ ರಾಷ್ಟ್ರೀಯತೆಯ ಪಥದಲ್ಲಿ ಮುಂದುವರೆಯಲು ಕಟಿಬದ್ಧರಾಗಿಸಿದೆ. ಬ್ರಿಟಿಷರ ಆಡಳಿತ ನೀತಿಯ ವಿರುದ್ಧವಾಗಿ ನಡೆಯುತ್ತಿದ್ದ ಸಾರ್ವಜನಿಕವಾದ ಬೃಹತ್ ಸಭೆ-ಸಮಾರಂಭಗಳನ್ನು ತಡೆಯಲು ಅವುಗಳಿಗೆಲ್ಲಾ ನಿಷೇಧವನ್ನು ಹೇರಿದ್ದಂತಹ ಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ವಿಜೃಂಭಣೆಯನ್ನು ಹಿರಿದಾಗಿಸುವ ಮೂಲಕ ವಿಶಾಲ ಸಂಘಟನೆಗಳನ್ನು ಪುನರ್ ಸ್ಥಾಪಿಸುತ್ತಾರೆ. ಎಲ್ಲಾ ಹಿಂದೂಗಳಿಗೂ ಪ್ರಿಯವಾಗಿರುವ ಪ್ರಥಮ ಪೂಜ್ಯ ಗಣಪತಿಯ ಹಬ್ಬದಂದು ಜನರನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದ ಕಾರ್ಯತಂತ್ರವನ್ನು ರೂಪಿಸುತ್ತಿದ್ದ ಇವರು ಇದರೊಂದಿಗೆ ಭಾರತದ ಆತ್ಮವೇ ಆಗಿರುವ ಧರ್ಮವು ಗಟ್ಟಿಯಾಗಿ ಸ್ವಾತಂತ್ರ್ಯಾನಂತರವೂ ಶಕ್ತಿಯ ಆಗರವಾಗಿ ನಮ್ಮನ್ನು ಸಬಲೀಕರಣ ಮಾಡಬಲ್ಲ ಈ ಕಲ್ಯಾಣಕಾರಿ ಮಾರ್ಗವನ್ನೂ ಪ್ರಶಸ್ತಗೊಳಿಸುತ್ತಾರೆ. ಹೇಗೆ ಶಿವಾಜಿ ಮಹಾರಾಜರು ಶೂನ್ಯದಿಂದ ಶುರು ಮಾಡಿ ವಿರಾಟ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರೊ ಆ ಮಹಾ ಶೌರ್ಯಗಾಥೆಯ ಇತಿಹಾಸವನ್ನು ಪುನರಿಚ್ಛರಿಸುವ ಮೂಲಕ ಸಂಘರ್ಷದ ಮಾರ್ಗಕ್ಕೆ ಪ್ರೇರಣಾಸ್ತೋತ್ರವನ್ನು ಹರಿಸುತ್ತಾರೆ.
ಯಾವ ಅನ್ಯಮತಗಳ ದೇವರುಗಳು ಅವರಿಗೆ ತಾನು ಮರಳಿಬರುವುದಾಗಿ ಭರವಸೆ ನೀಡಿಲ್ಲ, ಆದರೆ ನಮ್ಮ ಧರ್ಮದಲ್ಲಿ ಭಗವಾನ್ ಶ್ರೀಕೃಷ್ಣನು ಯಾವಾಗಲೆಲ್ಲಾ ಧರ್ಮಕ್ಕೆ ಸಂಕಟವೊದಗಿಬರುವುದೊ ಯಾವಾಗಲೇಲ್ಲಾ ಧರ್ಮರಕ್ಷಣೆಯ ಕಾರ್ಯ ಅನಿವಾರ್ಯವಾಗುವುದೊ ಆವಾಗಲೆಲ್ಲಾ ನಾನು ಅವತರಿಸಿ ಧರ್ಮಸಂಸ್ಥಾಪನೆಯನ್ನು ಮಾಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾನೆ. ಮತ್ತ್ಯಾಕೆ ಹೆದರುವಿರಿ? ಬ್ರಿಟಿಷ್ ದಂಡಸಂಹಿತೆಗಳಿಂದ ಹಿಂತಿರುಗಿ ಭಗವದ್ಗೀತಾದ ಅಭಯ ಜೀವನಕ್ಕೆ ಮರಳಿ ಎಂಬ ಕರೆ ಕೊಡುವುದರ ಮೂಲಕ ಹಿಂದೂಗಳ ಸತ್ಯ ಸನಾತನವಾದ ವಾಸ್ತವತೆಯನ್ನು ಪರಿಚಯಿಸಿದರು.
ತಿಲಕರಂತಹ ಮಹಾಪುರುಷರು ತಮ್ಮ ಜೀವಿತಾವಧಿಯ ಉದ್ದಕ್ಕೂ, ಅನಾರೋಗ್ಯ ದೇಹದಿಂದ ಪೀಡನೆಗೆ ಒಳಗಾಗಿದ್ದಾಗ್ಯು ಅಂತಿಮ ಶ್ವಾಸದವರೆಗೆ ಈ ಭವ್ಯಭಾರತದ ಬಗ್ಗೆಯೇ ಚಿಂತಿಸಿದರು. ಇಂತಹ ಮಹಾತ್ಮರು ದೇಶದ ಸ್ವಾತಂತ್ರ್ಯಕ್ಕಾಗಿ ನಿರಂತರ ನವನವೀನ ಯೋಜನೆ, ಕಾರ್ಯಗಳನ್ನು ಮಾಡುತ್ತಾ ಬಂದಿದ್ದರಿಂದಲೇ ಇಂದು ನಮ್ಮ ರಾಷ್ಟ್ರವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ನಮ್ಮ ರಾಷ್ಟ್ರದ ಭೌಗೋಳಿಕ ನೆಲೆಗಟ್ಟಿನಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಸಾಧಿಸಿದ ನಾವು ಬೌದ್ಧಿಕತೆಯ ಸ್ತರದಲ್ಲಿ ಪೂರ್ಣ ಸ್ವತಂತ್ರವಾದೆವಾ? ಎಂಬುದೇ ಯಕ್ಷಪ್ರಶ್ನೆ. ನಮ್ಮ ರಾಷ್ಟ್ರದ ಯುವಶಕ್ತಿಯ ಮಹಾ ಪ್ರಚಂಡತೆಯ ವರ್ಗದಲ್ಲಿ ಎಂದಿಗೆ ಈ ಭೂಮಿಯ ಆಧ್ಯಾತ್ಮದ ಚೈತನ್ಯ ಜಾಗೃತವಾಗುವುದೊ, ಅಂದು ಜಗತ್ತಿನೆಲ್ಲೆಡೆ ಸಮಸ್ತ ಮಾನವಕುಲದ ಉದ್ಧಾರಕ್ಕಾಗಿ ಸನಾತನ ಬದುಕಿನ ಮಹೋನ್ನತ ಆದರ್ಶ ಸ್ಥಾಪಿತವಾಗುವುದು ರಾಮರಾಜ್ಯ ನಿರ್ಮಾಣವಾಗುವುದು.
~ಸಿಂಚನ. ಎಂ.ಕೆ ಮಂಡ್ಯ
Comments
Post a Comment