ಪವಿತ್ರ ದೇವಸ್ಥಾನಗಳ ನಿರ್ವಹಣಾಕಾರ್ಯವನ್ನು ಗೌರವಪೂರ್ವಕವಾಗಿ ಭಕ್ತರಿಗೆ ಮರಳಿ ಕೊಡಿ, ನಮ್ಮ ಪ್ರಾಣವನ್ನು ಕೊಟ್ಟಾದರೂ ನಾವು ದೇವಸ್ಥಾನಗಳ ರಕ್ಷಣೆ ಮಾಡುತ್ತೇವೆ: ಸದ್ಗುರು ಅವರ ಐತಿಹಾಸಿಕ ಕರೆ

ಪವಿತ್ರ ದೇವಸ್ಥಾನಗಳ ನಿರ್ವಹಣಾಕಾರ್ಯವನ್ನು ಗೌರವಪೂರ್ವಕವಾಗಿ ಭಕ್ತರಿಗೆ ಮರಳಿ ಕೊಡಿ, ನಮ್ಮ ಪ್ರಾಣವನ್ನು ಕೊಟ್ಟಾದರೂ  ನಾವು ದೇವಸ್ಥಾನಗಳ ರಕ್ಷಣೆ ಮಾಡುತ್ತೇವೆ: ಸದ್ಗುರು ಅವರ ಐತಿಹಾಸಿಕ ಕರೆ 
ಪ್ರಸ್ತುತ ವರ್ಷದ ಇಶಾ ಫೌಂಡೇಶನ್ ನ ಮಹಾಶಿವರಾತ್ರಿಯ ಆಚರಣೆಯಲ್ಲಿ ಸದ್ಗುರು ಅವರು ಐತಿಹಾಸಿಕ ಭಾಷಣವನ್ನು ಮಾಡಿದ್ದಾರೆ. ಆ ಪಾವಿತ್ರ್ಯ ಘಳಿಗೆಯಲ್ಲಿ ನೆರೆದಿದ್ದ ಎಲ್ಲಾ ಭಕ್ತರು ಸದ್ಗುರು ಅವರ ಬಂಧಮುಕ್ತ ದೇವಸ್ಥಾನಗಳ ಸಂಕಲ್ಪಕ್ಕೆ #FreeTNtemples, #FreeHinduTemples ಎಂಬ ಬರಹಗಳ ಬೋರ್ಡ್ ಹಿಡಿಯುವುದರ ಮೂಲಕ ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಭಾಷಣದಲ್ಲಿ 'ದೇವಸ್ಥಾನಗಳ ಸಮಸ್ತ ಜವಾಬ್ದಾರಿಯನ್ನು ಭಕ್ತವೃಂದವೇ ಏಕೆ ವಹಿಸಿಕೊಳ್ಳಬೇಕು?' ಎಂಬುದರ ಬಗ್ಗೆ ಸಂಪೂರ್ಣ ಸ್ಪಷ್ಟ ವಿವರಣೆಯನ್ನು ನೀಡಿದ್ದಾರೆ. ಇದರೊಂದಿಗೆ ಅವಕಾಶ ಸಿಕ್ಕರೆ ಸಾಕು ಹಿಂದೂ ಧರ್ಮವನ್ನು ಅವಹೇಳನ ಮಾಡಲು ಕುಪ್ಪಳಿಸುತ್ತಾ ಓಡೋಡಿ ಬರುವ ತಮ್ಮನ್ನು ತಾವು ಬುದ್ಧಿಜೀವಿಗಳೆಂದು ಕರೆದುಕೊಳ್ಳುತ್ತಾ ಭ್ರಮೆಯಲ್ಲಿರುವವರು, ಮ್ಯಾಜಿಕ್ ಇತಿಹಾಸವನ್ನು ಬರೆದು ಸುಭದ್ರ ಸಮಾಜದ ಸ್ಥಾಪನೆಗೆ ಅಡ್ಡಗೋಡೆಯಾಗಿರುವವರು, ವಿಶ್ವದೆಲ್ಲೆಡೆ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಕಮ್ಮಿನಿಷ್ಠರು, ಹಾಗೆಯೇ ನಮ್ಮ ಶ್ರೇಷ್ಠ ಸಂಸ್ಕೃತಿಯ ಅಸ್ತಿತ್ವದಿಂದಲೇ ಪತನ ಹೊಂದಬಹುದಾದ ಭಯದಲ್ಲಿರುವ ಅನ್ಯಸಂಸ್ಕೃತಿಗರು ಕೇಳುವ ಸಾಮಾನ್ಯ ಪ್ರಶ್ನೆಗಳಾದ ದೇವಸ್ಥಾನದ ಸಂಪತ್ತು-ವರಮಾನಗಳ ವೆಚ್ಚ ದುಬಾರಿ ಏಕೆ ಹಾಗೂ ದೇವಸ್ಥಾನದ ನಿರ್ಮಾಣ ವೆಚ್ಚವನ್ನು ಬಡತನ ನೀಗಿಸಲು ಏಕೆ ಭರಿಸಬಾರದು ಎಂಬುವುದಕ್ಕೆ ನೇರಾನೇರ ಉತ್ತರಿಸಿದ್ದಾರೆ. ಸಹಸ್ರಾರು ಸಹಸ್ರಾರು ವರ್ಷಗಳ ಪೂರ್ವದಲ್ಲಿ ನಮ್ಮ ಹಿರಿಯರು ತಮ್ಮ ಸ್ವಾರ್ಥತೆಯನ್ನು ಬದಿಗಿಟ್ಟು, ಭಕ್ತಿಯ ಆಭರಣವನ್ನು ತೊಟ್ಟು ಸಾಧಿಸಿದ ಅಸಂಭವ ಪ್ರತೀತ ಕಾರ್ಯವಾದ ಅಭೂತಪೂರ್ವ ದೇವಾಲಯಗಳ ನಿರ್ಮಾಣವು ಇಂದು ಯಾವ ಹಂತ ತಲುಪಿದೆಯೆಂಬುದನ್ನು ಹೃದಯಚ್ಛಿದ್ರ ನೋವಿನಿಂದ ವಿವರಿಸಿದ್ದಾರೆ. ನಮ್ಮ ಪೂರ್ವಜರ ತ್ಯಾಗ, ಸಾಹಸ ಹಾಗೂ ಬಲಿದಾನಗಳ ಪ್ರತೀಕವಾಗಿರುವ ದೇವಾಲಯಗಳ ನಿರ್ಮಿತ ಕಾರ್ಯವು ವ್ಯರ್ಥವಾಗುವುದನ್ನು ನೋಡಲು ಸಾಧ್ಯವಿಲ್ಲ ಎಂದು ಎಲ್ಲಾ ನೊಂದ ಭಕ್ತರ ಹೃದಯಗಳ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಿದ್ದಾರೆ.

ಸದ್ಗುರು ಅವರ ಭಾಷಣದ ಸತ್ತ್ವವನ್ನು ಅರಿಯಬೇಕಾದರೆ ಅವರ ಸಂಪೂರ್ಣ ಸಂದೇಶವನ್ನು ತಿಳಿಯಲೇಬೇಕು. ಅವರ ಭಾಷಣದ ಮುಖ್ಯ ಸಂಗತಿಗಳನ್ನು ಭಾರತೀಯರೆಲ್ಲರಿಗೂ ಅನ್ವಯವಾಗುವಂತೆ ವಿಶ್ಲೇಷಿಸಿ ಈ ಕೆಳಕಂಡಂತೆ ಬರೆದಿದ್ದೇನೆ. ಉತ್ತರ ಭಾರತಕ್ಕೆ ಹೋಲಿಸಿದರೆ ಕನಿಷ್ಟ ಪ್ರಮಾಣದ ವಿದೇಶಿ ಆಕ್ರಮಣವನ್ನು ಎದುರಿಸಿರುವ ದಕ್ಷಿಣ ಭಾರತವು ಭಕ್ತಿ ಪರಂಪರೆಯ ಪುಣ್ಯಭೂಮಿ. ತಮಿಳುನಾಡಿನ ಆದಿಯಾಗಿ ಈ ಭರತಭೂಮಿಯ ಸಂಸ್ಕೃತಿಯಲ್ಲಿ ಪ್ರಖ್ಯಾತರಾದ ಧರ್ಮವೀರ ರಾಜರು ಮಹಾನ್ ಭಕ್ತರಾಗಿದ್ದವರು. ತ್ಯಾಗದ ಶ್ರೇಷ್ಠತೆಯನ್ನು ಎತ್ತಿಹಿಡಿದ ಈ ಭೂಮಿಯ ಪ್ರಜೆಗಳು ರಾಜಮಹಾರಾಜರಿಗಿಂತ ಸನ್ಯಾಸದ ಸಾಹಸ ಹಾದಿಯಲ್ಲಿ ನಡೆದ ಸಿದ್ಧಪುರುಷರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ಗೌರವಿಸಿದೆ. ನಮ್ಮ ಇತಿಹಾಸವು ಸಂತರ ಭೋದನೆಗಳನ್ನು ತ್ಯಜಿಸಿ, ಕೇವಲ ಸಾಮ್ರಾಟರ ಸಾಧನೆಗಳನ್ನು ಕೊಂಡಾಡುವಂಥದ್ದಲ್ಲ. ನಮ್ಮ ನಾಡಿನ ಮೂಲಸತ್ತ್ವವೇ ಭಕ್ತಿ. ಅದ್ಭುತ ಕಲಾಕೃತಿಗಳನ್ನೊಳಗೊಂಡ ದೇವಸ್ಥಾನಗಳು ನಿರ್ಮಾಣಗೊಂಡಿರುವುದು ಭಕ್ತಿಯ ಸಾಮರ್ಥ್ಯದಿಂದಲೇ. ಕೇವಲ ಈ ಪ್ರಕ್ರಿಯೆ ಮತಗಳ ಆಚರಣೆಯ ಸಂಬಂಧವಾಗಿ ಮಾತ್ರವೆಂದು ಮಾಡಿದ್ದಲ್ಲ. ಭಕ್ತಿಯೆಂಬುದು ನಮ್ಮ ಹೃದಯಗಳನ್ನು ಪ್ರತೀ ಕ್ಷಣವೂ ಉತ್ತಮ ಸ್ಪಂದನ, ಕಂಪನಶೀಲ ಸ್ಥಿತಿಯಲ್ಲಿಡಲು ಅತಿಮುಖ್ಯ ಸಾಧನ. ನಾವು ಎಂದೂ ನಮ್ಮ ಜೀವನದ ಯಾವುದೇ ಸಮಯದಲ್ಲೂ ಖಿನ್ನತೆಗೆ ಒಳಗಾಗಬಾರದೆಂದು ಖಚಿತ ಪಡಿಸಿಕೊಳ್ಳಬೇಕೆಂದರೆ ನಾವು ಭಕ್ತರಾಗಬೇಕು. ಭಕ್ತನ ಹೃದಯವು ಮಾನವನ ಅತ್ಯಧಿಕ ಸಾಮರ್ಥ್ಯಕ್ಕನುಸಾರ ಸ್ಪಂದನಶೀಲವಾಗಿರುತ್ತದೆ. ಯಾರ ಹೃದಯವು ಭಕ್ತಿಯ ಆನಂದಸಾಗರದಲ್ಲಿ ಸಂಚರಿಸುತ್ತಿರುವುದೊ, ಅವರು ತಮ್ಮ ಜೀವನದಲ್ಲಿ ಎಂತಹ ಕಾಠಿಣ್ಯ ಪರಿಸ್ಥಿತಿ ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಿರುತ್ತಾರೆ. ನಮ್ಮ ಭಕ್ತಿಯು ಅಭಿವ್ಯಕ್ತಿಗೊಂಡು ಕಲೆ, ಸಾಹಿತ್ಯ, ನೃತ್ಯಗಳಾಗಿ ಹೊರಹೊಮ್ಮಿದೆಯೇ ಹೊರತು ಅವುಗಳಿಂದ ನಾವು ಭಕ್ತಿಯನ್ನು ಪಡೆದಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಭಕ್ತಿಯ ಪರಾಕಾಷ್ಠೆಯನ್ನು ತಲುಪಿದ್ದಂತಹ ಆ ಪ್ರಾಚೀನ ಕಾಲದಲ್ಲಿ ನಮ್ಮ ರಾಷ್ಟ್ರವು ಒಂದು ರಾಷ್ಟ್ರ ಇಷ್ಟೊಂದು ವೈಭವಶಾಲಿಯಾಗಿರಲು ಸಾಧ್ಯವೆ ಎಂಬಷ್ಟು ವಿಜೃಂಭಿಸುತ್ತಿತ್ತು. ಆದ್ದರಿಂದಲೇ ಭಾರತವು ಎಲ್ಲಾ ಅನ್ಯರಾಷ್ಟ್ರಗಳನ್ನು ತನ್ನತ್ತ ಆಕರ್ಷಿಸುತ್ತಿತ್ತು. ಇತ್ತೀಚೆಗೆ ಕೇವಲ 300-400 ವರ್ಷಗಳ ಹಿಂದೆ ಯೂರೋಪ್ ನಲ್ಲಿ ಪ್ರತಿಯೊಬ್ಬರೂ ಇಲ್ಲಿಗೆ ಬರಲು ಉತ್ಸುಕರಾಗಿರುತ್ತಿದ್ದರು. ಆದರೆ, ಅವರು ಇಲ್ಲಿಗೆ ಜ್ಞಾನದೋಯಕ್ಕಾಗಿ ಬರಲು ತವಕ ಪಡುತ್ತಿದ್ದರು ಎಂದು ಭಾವಿಸಬೇಡಿ ಅಥವಾ ಸಮುದ್ರಗಳ ಜಲರಾಶಿಯನ್ನು ನೋಡಲೆಂದೊ ಅಲ್ಲ. ಅವರು ನಮ್ಮನ್ನು ತುಂಬಾ ಇಷ್ಟಪಡುತ್ತಿದ್ದರು ಎಂದೂ ಕೂಡ ಮೂರ್ಖವಾಗಿ ಭಾವಿಸಬೇಡಿ. 

ಈ ಗ್ರಹದಲ್ಲಿರುವ ಅತ್ಯಂತ ಸಂಪದ್ಭರಿತ ನಾಡು ಈ ರಾಷ್ಟ್ರವೆಂದು ಅರಿತು ಅವರು ಬಂದದ್ದು. ಆದರೆ ಈ ಸಂಪತ್ತು-ಸಮೃದ್ಧಿ ನಮ್ಮ ಗುರಿಯಾಗಿರಲಿಲ್ಲ. ಅದು ನಮ್ಮ ಭಕ್ತಿಯ ಆಚರಣೆಗಳ ಪರಿಣಾಮವಾಗಿತ್ತು. ಏಕೆಂದರೆ ನಾವು ಮಾನವ ಸಂಪತ್ತಿಗೆ ಹೆಚ್ಚು ಆದ್ಯತೆ ನೀಡಿದೆವು. ಕೇವಲ ಆರ್ಥಿಕ ಸಂಪತ್ತಿನಿಂದ ಮಾನವ ಜನಾಂಗದ ಕಲ್ಯಾಣ ಮಾಡಬಹುದೆಂಬ ಮೂರ್ಖತನದ ಯೋಚನೆಗಳನ್ನು ನಾವು ಮಾಡಲೇ ಇಲ್ಲ. ಯಾರು ಒಂದು ಬಾರಿಯೂ ಮಸಾಲಾ ಪದಾರ್ಥಗಳ ರುಚಿಯನ್ನು ಸವಿದಿರಲಿಲ್ಲವೊ ಅವರು ಒಮ್ಮೆ ಈ ರುಚಿ ಕಂಡ ಮೇಲೆ ಬಿಡಲು ತಯಾರಾಗಲಿಲ್ಲ. ತಮ್ಮ ಧನವು ಎಷ್ಟೇ ವ್ಯಯವಾದರೂ ಈ ಪದಾರ್ಥಗಳನ್ನು ಬಿಟ್ಟು ಕೊಡದೆ ಹಲವಾರು ಹಡಗುಗಳಲ್ಲಿ ಹೊತ್ತೊಯ್ದು ಸಾಗಿಸುತ್ತಿದ್ದರು. ನಾವು ನಮಗಾಗಿ ಮನೆ, ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ಕಟ್ಟಿ ಕೊಂಡು ನಂತರ ದೇವಸ್ಥಾನಗಳನ್ನು ನಿರ್ಮಿಸಲಿಲ್ಲ. ನಾವು ಸಣ್ಣಪುಟ್ಟ ಮನೆಯಲ್ಲಿದ್ದಾಗ್ಯು ಮೊದಲು ದೇವಸ್ಥಾನಗಳನ್ನು ಕಟ್ಟಿದೆವು. ಅದುವೇ ಭವ್ಯ,ಮಹೋನ್ನತ ದೇವಸ್ಥಾನಗಳನ್ನು. ಯಾವುದೇ ಆಧುನಿಕ ಯಂತ್ರ, ತಂತ್ರಜ್ಞಾನಗಳಿಲ್ಲದ ಕಾಲದಲ್ಲೂ ಕೇವಲ ಮಾನವನ ಬಲವನ್ನು ಬಳಸಿ ಭಕ್ತಿಯ ಸಾಧನದಿಂದ ನಿರ್ಮಿಸಲು ಸಾಧ್ಯವಾಗಿತ್ತು. ಇಂತಹ ನಿರ್ಮಾಣ ಪ್ರಕ್ರಿಯೆಗೆ ಸಂಬಂಧಪಟ್ಟ ಸ್ವಲ್ಪವೇ ಮಾಹಿತಿ ನಿಮಗೆ ತಿಳಿದಿದ್ದರೂ, ಇಂತಹ ಘನ ಸಂಸ್ಕೃತಿಯ ಬಗೆಗೆ ಹೆಮ್ಮೆ ಪಡಲಾಗದಂತೆ ಇರಲು ಸಾಧ್ಯವೇ ಇಲ್ಲ. ಅಂತಹ ಭಕ್ತರಿಗೆ ಅವರ ಸ್ವಂತ ಹಿತಾಸಕ್ತಿಗಳು ಮುಖ್ಯವಾಗಲಿಲ್ಲ, ಅವರು ಸಂಪೂರ್ಣ ಜಗತ್ತಿನ ಹಿತಾಸಕ್ತಿಯ ಬಗೆಗೆ ಚಿಂತಿಸಿದರು. ಯಾವೆಲ್ಲಾ ಪ್ರಮುಖ ಕಾರ್ಯಗಳು ಜಗತ್ತಿನಲ್ಲಿ ನಡೆದಿದೆಯೊ ಅದೆಲ್ಲಾ ನಡೆದಿರುವುದು ಮಾನವರ ಚೇತನದಿಂದ. ನಾವು ಭಕ್ತರಾದರೆ ಈ ಮಾನವಚೇತನವು ಬಹಳ ಪರಿಣಾಮಕಾರಿಯಾಗಿರುತ್ತದೆ. ಯಾವ ಈಸ್ಟ್ ಇಂಡಿಯಾ ಕಂಪನಿಯು ದೇವಸ್ಥಾನಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡಿ ಸಂಪತ್ತು ಕಬಳಿಸಲು ಪ್ರಾರಂಭಿಸಿತ್ತೊ, ಅದೇ ಪ್ರಕ್ರಿಯೆ ಸ್ವಾತಂತ್ರ್ಯಾನಂತರ 74 ವರ್ಷಗಳಾದ ಮೇಲೂ ಇಂದಿನ ಸರ್ಕಾರದ ಆಡಳಿತದಲ್ಲೂ ಮುಂದುವರೆಯುತ್ತಿದೆ. ನಾವು ಎಂದಾದರೂ ನಮ್ಮ ತಾಯಿ, ಪತ್ನಿ, ಮಕ್ಕಳನ್ನು ಸಂಪತ್ತು ಎಂದು ಪರಿಗಣಿಸುತ್ತೇವೆಯೇ? ಇಲ್ಲವೆಂದ ಮೇಲೆ ಅದೇ ರೀತಿಯ ಪವಿತ್ರ ಸಂಬಂಧವನ್ನು ಹೊಂದಿರುವ ದೇವಾಲಯಗಳನ್ನೇಕೆ ಸಂಪತ್ತು ಎಂದು ಹೇಳುತ್ತೀರಿ? ಈ ದೇವಾಲಯಗಳೇ ನಮ್ಮ ನಾಡಿನ ಚೈತನ್ಯದ ಮೂಲ. ಇದನ್ನು ದುರುಪಯೋಗ ಮಾಡಲಾಗುವುದಿಲ್ಲ. ಆದರೆ ಪ್ರಸ್ತುತ ಇವೆಲ್ಲಾ ನಡೆಯುತ್ತಿರುವುದು ದುರಾದೃಷ್ಟಕರ. ದೇವಸ್ಥಾನಗಳ ಹೊರತಾಗಿಯೂ ಕೂಡ ಯಾವುದೇ ಪ್ರಾರ್ಥನಾ ಮಂದಿರಗಳನ್ನು ನಿಯಂತ್ರಿಸುವ ಹಕ್ಕು ಯಾವ ಅಧಿಕಾರಿಗಳಿಗೂ ಇಲ್ಲ. ನಿಜವಾದ ಸೆಕ್ಯುಲರಿಸಂ ಎಂದರೆ ಸರ್ಕಾರ ಯಾವ ಧಾರ್ಮಿಕತೆಯ ವಿಚಾರಗಳಿಗೂ ತಲೆ ಹಾಕಬಾರದು. ಹಾಗೆ ಧಾರ್ಮಿಕತೆಯು ಸರ್ಕಾರದ ಯಾವ ವಿಚಾರಗಳಿಗೂ ತಲೆ ಹಾಕಬಾರದು. ದೇವಸ್ಥಾನಗಳ ನಿರ್ಮಾಣದ ಹಿಂದೆ ಬಹು ದೊಡ್ಡ ವಿಜ್ಞಾನದ ಸಂಗತಿಗಳು ಅಡಕವಾಗಿವೆ. ಇವುಗಳು ಕೇವಲ ಪ್ರಾರ್ಥನಾ ಸ್ಥಳಗಳಲ್ಲ. ಇವುಗಳು ನಮ್ಮ ಜೀವನದಲ್ಲಿ ಹೊಸ ಆಯಾಮಗಳನ್ನು ತೆರೆದುಕೊಳ್ಳುವ, ಹೊಸ ಅನುಭವಗಳನ್ನು ಗಳಿಸಿಕೊಳ್ಳುವ, ಹೊಸ ಶಕ್ತಿ ಸಂಚಾರದ ಅನುಭೂತಿಯನ್ನು ಪಡೆದು ಕೊಳ್ಳುವ ಶಕ್ತಿ ಕೇಂದ್ರಗಳು. ಇವುಗಳು ಭಕ್ತರ ಪಾಲಿಗೆ ಸಾಧನಾ ಸ್ಥಳವಾಗಿದ್ದು, ಸರ್ವರ ಕ್ಷೇಮಾಭಿವೃದ್ಧಿಗಾಗಿ ಕಾರ್ಯ ಮಾಡುವ ಬೃಹತ್ ಯಂತ್ರಗಳು. ಯೋಗ ವಿಜ್ಞಾನದ ಅನುಸಾರ ದೈಹಿಕ, ಮಾನಸಿಕ ಶುದ್ಧಿಯು ಮಾನವ ಜನಾಂಗದ ಆದ್ಯ ಕರ್ತವ್ಯ. ನಮ್ಮ ದೇಹ, ಮನಸ್ಸು ಸರಿಯಿಲ್ಲದೆ ಅಗಾಧ-ಅಗಾಧ ಸಂಪತ್ತು ಹರಿದು ಬಂದರೂ ನಾವು ಮಹತ್ತ್ವದ ಜೀವನ ನಡೆಸಲು ಸಾಧ್ಯವೇ ಇಲ್ಲ. ಯೋಗದ ಬಗ್ಗೆ ಸವಿವರ ಜ್ಞಾನವುಳ್ಳವರು ತಮ್ಮ ಸ್ವಂತ ಶಕ್ತಿಯಿಂದಲೇ ಈ ಕಾರ್ಯವನ್ನು ಮಾಡಿಕೊಳ್ಳುವರು. ಆದರೆ ಸಾಮಾನ್ಯ ಜನರಿಗೆ ಇದಕ್ಕಾಗಿ ದೇವಸ್ಥಾನಗಳ ಅತ್ಯವಶ್ಯಕತೆ ಖಂಡಿತಾ ಇದೆ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ತಿಳಿಯುವುದೇನೆಂದರೆ ಜನರು ದೇವಸ್ಥಾನವನ್ನು ಸ್ವಚ್ಛಗೊಳಿಸಿ ಎರಡು ಬಾರಿ ಪೂಜೆ ಸಲ್ಲಿಸಿ ಬಿಟ್ಟರೆ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದೇವೆಂದು ಭಾವಿಸುತ್ತಾರೆ. ಆದರೆ ನಿರ್ವಹಣೆ ಎಂದರೆ ಇದಲ್ಲ. ಇದರಲ್ಲಿ ಹಲವಾರು ವೈಜ್ಞಾನಿಕ ಅಂಶಗಳು ಸಮ್ಮಿಳನವಾಗಬೇಕು. ಆದ್ದರಿಂದಲೇ ಇದೆಲ್ಲದರ ಬಗ್ಗೆ ಸಮರ್ಪಕ ಜ್ಞಾನವನ್ನು ಹೊಂದಿರುವ ಭಕ್ತರು ದೇವಸ್ಥಾನಗಳನ್ನು ನಿರ್ವಹಿಸಬೇಕು. ನಮ್ಮ ಪೂರ್ವಜರ ಮಹಾನ್ ಮಹಿಮ ಕಾರ್ಯಶೈಲಿಯಿಂದ ಅನುಷ್ಠಾನವಾಗಿರುವ ವೈಜ್ಞಾನಿಕತೆ, ಸರ್ವರ ಕುಶಲತೆ ಹಾಗೂ ಸಂಭ್ರಮಾಚರಣೆಯ ಪದ್ಧತಿ, ಉತ್ಸಾಹಮಯವಾದ ಜೀವನವನ್ನು ಕಟ್ಟಿಕೊಟ್ಟಿರುವ ಸಂಸ್ಕೃತಿಗಳು ಹೀಗೆ ಕ್ಷೀಣವಾಗುತ್ತಿದೆ ಎಂದು ಹೇಳಲು ನನ್ನ ಹೃದಯದಿಂದಲೇ ರಕ್ತ ಹರಿದು ಹೋಗುತ್ತಿರುವಂತೆ ಅಂತಃಕರಣ ದುಃಖಿಸುತ್ತಿದೆ. ನಾವು ಯಾವುದೇ ಹೋರಾಟಗಾರರಲ್ಲ, ಚಳುವಳಿಗಾರರಲ್ಲ. ನಾವು ತುಂಬಾ ದುಃಖಿತರಾಗಿದ್ದೇವೆ, ನೋವನ್ನನುಭವಿಸಿದ್ದೇವೆ. ನಾವು ಯಾವುದೇ ರಸ್ತೆಗಳನ್ನು ತಡೆಯುವುದಿಲ್ಲ, ರೈಲುಗಳನ್ನು ತಡೆಯುವುದಿಲ್ಲ‌. ನಾವು ಯಾರಿಗೂ ಅನಾನುಕೂಲ ಮಾಡುವುದಿಲ್ಲ. ಆದರೆ ನಾವು ಪ್ರಜ್ಞಾವಂತ ಪ್ರಜೆಗಳಾಗಿ ಚುನಾವಣೆ ಸಮೀಪಿಸುತ್ತಿರುವಾಗ ಈ ಅವ್ಯವಸ್ಥೆಯ ಬಗ್ಗೆ ನಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದೇವೆ. ಕೆಲವು ಜನರು ನಮಗೆ ಇಷ್ಟೊಂದು ಬಡತನ-ದಾರಿದ್ರ್ಯಗಳ ಮಧ್ಯೆ ದೇವಸ್ಥಾನಗಳ ವಿಚಾರವನ್ನು ಏಕೆ ಪ್ರಸ್ತುತ ಪಡಿಸುತ್ತಿದ್ದೀರಿ, ಬಡವರಿಗೆ ಸಹಾಯ ಮಾಡಬೇಕೆಂದು ನಿಮಗೆ ಅನಿಸುವುದಿಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ. ಹೌದು ಬಡತನದ ಸ್ಥಿತಿ ಇನ್ನೂ ಬಹಳ ಪ್ರಮಾಣದಲ್ಲಿರುವುದು ದೌರ್ಭಾಗ್ಯ ಸಂಗತಿ. ಆದರೆ ಏಕೆ ಇಷ್ಟೊಂದು ಬಡತನವಿದೆ? ಕೆಲವು ನೂರಾರು ವರ್ಷಗಳ ಹಿಂದೆ ಸಂಪದ್ಭರಿತವಾಗಿದ್ದ ರಾಷ್ಟ್ರವು ಈಗ ಸ್ವಾತಂತ್ರ್ಯಾನಂತರ 74 ವರ್ಷಗಳಾದ ಮೇಲೂ ಏಕೆ ಬಡತನದ ಸಮಸ್ಯೆಯಲ್ಲಿ ಸಿಲುಕಿದೆ? ಇದಕ್ಕೆ ಮೂಲಭೂತವಾದ ಕಾರಣ ನಾವು ಒಡೆದು ಹೋಗಿರುವ ಚೇತನಗಳಾಗಿದ್ದೇವೆ. ಚೈತನ್ಯಮಯ ವ್ಯಕ್ತಿಗಳು ಇಲ್ಲದಿದ್ದರೆ ಆ ರಾಷ್ಟ್ರವು ಪ್ರಗತಿ ಹೊಂದಲು ಸಾಧ್ಯವಿಲ್ಲ. ನಾವು ಯಾವುದೇ ನೀತಿ-ನಿಯಮಗಳನ್ನು ಜಾರಿಗೊಳಿಸಿದರೂ ಸಹ ಸಾಧ್ಯವಾಗುವುದಿಲ್ಲ. ಇದನ್ನೇ ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗಿರುವುದು. ಜನರ ಚೇತನವನ್ನು ಎತ್ತರಕ್ಕೇರಿಸಲು ದೇವಸ್ಥಾನಗಳ ನಿರ್ವಹಣೆ ಭಕ್ತರ ಕೈಗಳಿಂದಾಗಬೇಕು.

ಈ ಮೇಲಿನ ವ್ಯಾಖ್ಯಾನದಂತೆ ಸದ್ಗುರು ಅವರು ತಮಿಳುನಾಡು ರಾಜ್ಯದ ಚುನಾವಣೆ ಸಮೀಪಿಸುತ್ತಿರುವ ಈ ಹೊಸ್ತಿಲಲ್ಲಿ ಬಂಧಮುಕ್ತ ದೇವಸ್ಥಾನಗಳ ಆಗ್ರಹಕ್ಕೆ ಐತಿಹಾಸಿಕ ಕರೆ ನೀಡಿದ್ದಾರೆ. ಈ ಕರೆ ದೇಶದಾದ್ಯಂತ ವಿಸ್ತಾರವಾಗಬೇಕು ಹಾಗೂ ಪ್ರಧಾನವಾಗಿ ಕನ್ನಡಿಗರಿಗೆ ಹೆಚ್ಚಾಗಿ ತಲುಪಬೇಕೆಂದು ಈ ಲೇಖನವನ್ನು ಬರೆದಿದ್ದೇನೆ. ಅಲ್ಪ ಸಂಖ್ಯೆಯಲ್ಲಿರುವ ಮತದವರೆ ಅವರವರ ಪ್ರಾರ್ಥನಾಮಂದಿರಗಳನ್ನು ನಿರ್ವಹಣೆ ಮಾಡಿಕೊಳ್ಳಲು ಸಮರ್ಥರಾಗಿರುವಾಗ ಬಹುಸಂಖ್ಯಾತ ಹಿಂದೂ ಭಕ್ತರು ತಮ್ಮ ದೇವಸ್ಥಾನಗಳನ್ನು ನಿರ್ವಹಿಸಲು ಸಕ್ಷಮರಾಗಿಲ್ಲವೆಂದು ಕೊಂಡಿದ್ದೀರಾ? ಯಾವ ಹಿಂದೂ ನಾಗರಿಕತೆಯು ಪ್ರಪಂಚದಲ್ಲೇ ಸುದೀರ್ಘವಾದ ಘನವೈಭವದ ಇತಿಹಾಸವನ್ನು ಹೊಂದಿದೆಯೊ ಹಾಗೂ ಸುದೀರ್ಘವಾದ ಕ್ರೂರತೆಯ ಆಕ್ರಮಣದ ಪೆಟ್ಟನ್ನು ಮೆಟ್ಟಿ ನಿಂತಿದೆಯೊ, ಅಂತಹ ಧರ್ಮವೀರರ ವರ್ಗಕ್ಕೆ ಅವರ ದೇವಸ್ಥಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿಲ್ಲವೆಂದು ಕೊಂಡಿದ್ದೀರಾ? ದೇವಸ್ಥಾನಗಳ ನಿರ್ಮಾಣನಿರ್ವಹಣೆಯ ವಿಚಾರ ಬಂದಾಗಲೆಲ್ಲ ಮೂಢನಂಬಿಕೆ, ಹಣವ್ಯಯ ಎಂದು ಆಪಾದನೆ ಮಾಡಿ ಬಡತನವನ್ನು ನಿವಾರಿಸಬೇಕೆಂದು ಆಕ್ಷೇಪಿಸುವವರಿಗೆ ಸದ್ಗುರು ಅವರು ನೀಡಿದ ಖಡಕ್ ವೈಜ್ಞಾನಿಕ-ಆಧ್ಯಾತ್ಮಿಕ ಉತ್ತರವು ಕಡ್ಡಿ ತುಂಡು ಮಾಡಿದಂತೆ ನೇರವಾಗಿದೆ. ಈ ನೆಲದ ಸಂಸ್ಕೃತಿಯ ಪ್ರತಿಯೊಂದು ಆಚರಣೆಗಳನ್ನು ಖಂಡಿಸಲು ಕಾಣದ ವಿದೇಶಿ ಕೈಗಳ ಜೊತೆ ಕೈ ಜೋಡಿಸಿರುವ ರಾಷ್ಟ್ರವಿರೋಧಿಗಳಿಗೆ ಸರಿಯಾದ ಪೆಟ್ಟನ್ನು ಕೊಡಲು ಧರ್ಮ-ದೇಶದ ರಕ್ಷಣೆ ಮಾಡಲು ಹೆಚ್ಚೆಚ್ಚು ಜ್ಞಾನವನ್ನು ಸಂಪಾದಿಸಬೇಕು. ಹಿಂದಿನ ಸಿಎಎ ವಿರೋಧಿ ಹಾಗೂ ಕೃಷಿ ಕಾನೂನಿನ ವಿರೋಧಿ ಹೋರಾಟಗಳಲ್ಲಿ ವಿದೇಶಿ ಕೈಗಳ ಸಣ್ಣದೊಂದು ಝಲಕ್ ಅನ್ನು ಪ್ರತ್ಯಕ್ಷವಾಗಿ ಕಂಡಿದ್ದೇವೆ. ಪ್ರತಿಯೊಂದು ಹಿಂದೂ ಸಂಸ್ಕೃತಿಯ ಹಬ್ಬದ ಸಂಭ್ರಮಾಚರಣೆಯ ದಿನಗಳಲ್ಲಿ ಅದರಿಂದಾಗಿರುವ ಕೆಲವು ಕೆಡುಕುಗಳ ಬಗ್ಗೆ ಹೈಲೈಟ್ ಮಾಡಿ ಹೇಳುತ್ತಾರೆ. ಈ ಪ್ರಪಂಚದಲ್ಲಿ ಎಲ್ಲಾ ಧರ್ಮದ ಆಚರಣಾವಿಧಿಗಳಲ್ಲೂ ಕೆಡುಕುಗಳಿವೆ. ನಮ್ಮ ಧರ್ಮಕ್ಕಿಂತ ಅಧಿಕವಾಗಿಯೇ ಇದೆ. ಇವುಗಳನ್ನು ಸುಧಾರಿಸಲು ನಾವು ಹೋರಾಡುತ್ತಾ ಬಂದಿದ್ದೇವೆ. ನಮ್ಮ ಧರ್ಮವು ಸಮಾಜದ ಹಿತಾಸಕ್ತಿಗೆ ಅನುಗುಣವಾಗಿ ಸುಧಾರಿಸಲ್ಪಡುತ್ತದೆ. ಧರ್ಮವಿರುವುದೇ ಮಾನವಸಮಾಜದ ಕಲ್ಯಾಣಕ್ಕಾಗಿ. ಬೇರೆ ಯಾವ ಪಾಶ್ಚಿಮಾತ್ಯ ಧರ್ಮ ಸಂಸ್ಕೃತಿಗಳು ಅಧಿಕವಾಗಿ ಸಮಾಜದ ಹಿತದನುಸಾರವಾಗಿ ಧರ್ಮವನ್ನು ಸುಧಾರಿಸಿಕೊಳ್ಳುವುದಿಲ್ಲ. ವ್ಯತಿರಿಕ್ತವಾಗಿ ಸಮಾಜವನ್ನೇ ಧರ್ಮಕ್ಕನುಸಾರ ಬದಲಾಯಿಸುತ್ತವೆ. ಆದಾಗ್ಯೂ ಕೇವಲ ಹಿಂದೂ ಧರ್ಮದ ಕೆಡುಕುಗಳನ್ನು ಮಾತ್ರ ಎತ್ತಿ ತೋರಿಸುವ ವರ್ಗಕ್ಕೆ ಪ್ರಖರ ಧ್ವನಿಯಲ್ಲಿ ಉತ್ತರವನ್ನು ಸ್ಪಷ್ಟಪಡಿಸಬೇಕು. 

ನಮ್ಮ ಹಬ್ಬದ ಸಂಭ್ರಮಾಚರಣೆಯಲ್ಲಿ ಮಾನವ ಜೀವನದ ಆಯಾಮವನ್ನು ಮೇಲಿನ ಸ್ತರಕ್ಕೆ ಹೊತ್ತೊಯ್ಯುವ ಪೌರುಷಾರ್ಥದ ಕ್ರೀಡೆಗಳು, ಒಗ್ಗಟ್ಟಿನ ಪ್ರಾರ್ಥನೆಗಳು, ಶಕ್ತಿ ಸಂವರ್ಧನೆಯ ವಿಧಿಗಳು, ಚೈತನ್ಯದ ಉತ್ಥಾನ ಪ್ರಕ್ರಿಯೆಗಳು ಇವುಗಳನ್ನೆಲ್ಲ ಒಟ್ಟಾಗಿ ಮೂಢನಂಬಿಕೆಯೆಂದು ಸಾಬೀತು ಪಡಿಸಲು ಹೆಣಗಾಡುತ್ತಾರೆ. ಹಿಂದೂ ಧರ್ಮದ ಸುಧಾರಣೆಗೆಂದು ಮುಂದೆ ಬಂದು ಹಲವರು ಮಾಡಿದ್ದೇ ನಮ್ಮ ಧರ್ಮದ ಅವಹೇಳನ. ಆದರೆ ಶ್ರೀಗುರು ಸ್ವಾಮಿ ವಿವೇಕಾನಂದರು, ವೀರ ಸಾವರ್ಕರ್ ರಂತಹ ಧರ್ಮ ಜ್ಞಾನಿಗಳು ಧರ್ಮದ ಸಂಪೂರ್ಣ ಲೋಪದೋಷಗಳನ್ನು ಖಂಡಿಸಿ ಸುಧಾರಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಆದರೆ ಅವರೆಂದೂ ಧರ್ಮಕ್ಕೆ ಅಲ್ಪವೂ ಅಪಮಾನ ಮಾಡಲಿಲ್ಲ. ಹಾಗೆಯೇ ತಾವು ಧರ್ಮದ ಬಗ್ಗೆ ಹೊಂದಿದ್ದ ಅಪಾರ ಅಭಿಮಾನವನ್ನು ಒಂದಿನಿತೂ ಕಳೆದುಕೊಳ್ಳಲಿಲ್ಲ. ವಾಸ್ತವದಲ್ಲಿ ಆ ಅಭಿಮಾನವೇ ಸುಧಾರಣೆಯ ಕಾರ್ಯಕ್ಕೆ ಕೈ ಹಾಕುವಂತೆ ಮಾಡಿತು. ಯಾರಿಗಾದರೂ ನಮ್ಮ ಅಗಾಧ ಧರ್ಮದ ವ್ಯಾಖ್ಯಾನ, ಪರಿಭಾಷೆ, ಆಚರಣಾ ವಿಧಿಗಳನ್ನು ಅರ್ಥೈಸಿಕೊಳ್ಳಲು ಸಾಮರ್ಥ್ಯ ಅಥವಾ ಯೋಗ್ಯತೆಯಿಲ್ಲವೆಂದ ಮಾತ್ರಕ್ಕೆ ಅದನ್ನು ಅಗೌರವದಿಂದ ಖಂಡಿಸುವ ಹಕ್ಕೂ ನಿಮಗಿಲ್ಲ. ಹೇಗೆ ನೀವು ಕಲಿತಿರದ ಒಂದು ಭಾಷೆಯ ಲಿಪಿಯು ಸರಿಯಿದ್ದು ನಿಮಗೆ ಗೊತ್ತಿಲ್ಲವೆಂಬ ಕಾರಣಕ್ಕೆ ತಪ್ಪು ಎನ್ನಲಾಗುವುದಿಲ್ಲವೊ ಹಾಗೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸೇರಿಸಿರುವುದು ಈ ಪುಣ್ಯಭೂಮಿಯ ಸಂಸ್ಕೃತಿಯನ್ನು ಅವಹೇಳನ ಮಾಡಿ ಭಾರತದ ಸಂವಿಧಾನಕ್ಕೆ ಕಳಂಕ ತರಲಿ ಎಂದಲ್ಲ. ನಿಸ್ವಾರ್ಥದ ಪರಾಕಾಷ್ಠೆಯನ್ನು ತಲುಪಿ, ಸಾಹಸಮಯ ಸನ್ಯಾಸದ ಜೀವನ ನಡೆಸಿ, ತಮ್ಮ ಹಿತಕ್ಕಿಂತಲೂ ಜಗತ್ತಿನ ಹಿತವೇ ಪ್ರಾಧಾನ್ಯವೆಂದು ಬದುಕಿದ ಋಷಿ ಪರಂಪರೆಯ ಭೋದನೆಯನ್ನು ನಂಬಬೇಕೊ ಅಥವಾ ತಮ್ಮ ಸ್ವಾರ್ಥಕ್ಕಾಗಿ ಸಮಾಜದ ಹಿತವನ್ನೇ ಬಲಿಕೊಡುವ, ಧರ್ಮ-ದೇಶ ವಿರೋಧಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಕಲಿಯುಗದ ಬೌದ್ಧಿಕ ರಾಕ್ಷಸರ ಭೋದನೆಯನ್ನು ನಂಬಬೇಕೊ....!? ನಿಮ್ಮ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳಿ.

~ಸಿಂಚನ.ಎಂ.ಕೆ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ