ಸ್ಮರಣೆಯಲ್ಲಿಟ್ಟುಕೊಳ್ಳುವುದೇ ನಮ್ಮ ಶಿಕ್ಷಣವಾದರೆ, ಯಂತ್ರಗಳೇ ನಮಗಿಂತ ಶ್ರೇಷ್ಠವೆಂದು ಒಪ್ಪಿಕೊಂಡತಲ್ಲವೆ?

ಸ್ಮರಣೆಯಲ್ಲಿಟ್ಟುಕೊಳ್ಳುವುದೇ ನಮ್ಮ ಶಿಕ್ಷಣವಾದರೆ, ಯಂತ್ರಗಳೇ ನಮಗಿಂತ ಶ್ರೇಷ್ಠವೆಂದು ಒಪ್ಪಿಕೊಂಡತಲ್ಲವೆ?
ಈ ಶೈಕ್ಷಣಿಕ ವರ್ಷದ ವಿದ್ಯಾಭ್ಯಾಸ ಪದ್ಧತಿಯಿಂದಾಗುತ್ತಿರುವ ಯಂತ್ರಸದೃಶ ಮಾನವರ ನಿರ್ಮಾಣ ಪ್ರಕ್ರಿಯೆಯಿಂದ ಒತ್ತಡಕ್ಕೊಳಪಟ್ಟಿದ್ದೀರಾ? ನಿರಂತರ ಪರೀಕ್ಷೆಗಳ ಆಕ್ರಮಣದಿಂದ ನಿಮ್ಮ ನೆಚ್ಚಿನ ಸ್ವಾತಂತ್ರ್ಯದ ಬದುಕಿಗೆ ಕೊಳ್ಳಿ ಇಟ್ಟು ಬಂಧನಕ್ಕೊಳಪಟ್ಟಿದ್ದೀರಾ? ನಿಮ್ಮ ಕನಸಿನ ಭವಿಷ್ಯದ ದಾರಿಯಲ್ಲಿ ನಡೆಯಲು ಸಾಧ್ಯವಾಗುವುದಿಲ್ಲವೇನೊ ಎಂಬ ಅಸಹಾಯಕ ಸ್ಥಿತಿಗೆ ತಲುಪಿದ್ದೀರಾ? ಬ್ರಿಟಿಷ್ ಶಿಕ್ಷಣ ಪದ್ಧತಿ ಎಂಬ ಅವ್ಯವಸ್ಥೆಯ ಜಾಲತಾಣದಲ್ಲಿ ಸಿಲುಕಿ ಕೊಂಡು ನಿಮ್ಮ ಕೌಶಲ, ಜ್ಞಾನ, ಪ್ರತಿಭೆ, ಸತ್ತ್ವಗಳು ಕ್ಷೀಣವಾಗುತ್ತಿರುವ ವಿವಶತೆಯ ಹಾದಿಯಲ್ಲಿ ನಡೆಯುತ್ತಿದ್ದೀರಾ? ಹಾಗಾದರೆ ನಿಮ್ಮಂತಹ ನೊಂದ ಹೃದಯಗಳ ಆಕ್ರಂದನಕ್ಕೆ ಸಾಕ್ಷಿಯಾಗಿ, ನಿಮಗಾಗಿ ಈ ಲೇಖನವನ್ನು ಬರೆಯುತ್ತಿದ್ದೇನೆಂದು ಪ್ರಮಾಣೀಕರಿಸುತ್ತೇನೆ.

ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ಹಾರಾಡುವ ಉತ್ಸಾಹದಲ್ಲಿರುವ ಪುಟ್ಟ ಮಗುವಿಗೆ ಕಡಿವಾಣ ಹಾಕುವ, ಜ್ಞಾನದ ವಿಕಸತೆಗೆ ಹಾತೊರೆಯುವ ಸ್ವಚ್ಛಂದ ಮನಸುಗಳಿಗೆ ಸಂಕುಚಿತತೆಯ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಕಟ್ಟಿ ಹಾಕುವ, ಅಂತರಂಗದ ಕಲಾಪೀಠದಲ್ಲಿ ಕ್ರಿಯಾತ್ಮಕತೆಯನ್ನು ಆವಿರ್ಭವಿಸಲು ಹೊರಟಿರುವ ಸಂತಸಮಯ ಜೀವಿಗಳಿಗೆ ಮಾನಸಿಕ ಒತ್ತಡದ ಆಯುಧವನ್ನು ಪ್ರಯೋಗಿಸಿ ಹತ್ತಿಕ್ಕುವ ಗರಿಮೆಯ ಭ್ರಮೆಯಲ್ಲಿರುವ ಪ್ರಕ್ರಿಯೆಗೆ ವಾಸ್ತವದಲ್ಲಿ ಶಿಕ್ಷಣವೆನ್ನಬೇಕೊ ಅಥವಾ ಅಶಿಕ್ಷಣವೊ?

ಶಕ್ತಿಯುತ, ಅರ್ಥಗರ್ಭಿತ, ವಿವೇಚನಾಯುತ, ನಿಸ್ವಾರ್ಥಯುತ ಸನಾತನ ಋಷಿ ಪರಂಪರೆಯಿಂದ ನಿರ್ಮಾಣಗೊಂಡಿದ್ದ ಅತ್ಯುತ್ತಮ ಮಾರ್ಗದ ಜ್ಞಾನಾರ್ಜನೆಗೆಂದೇ ತಯಾರಾದ ಗುರುಕುಲ ಪದ್ಧತಿಯನ್ನು ವಿಧ್ವಂಸ ಮಾಡಿ ತಿಲಾಂಜಲಿ ಇಟ್ಟ ಮೇಲೆ ಈಗ ಕಾಣುತ್ತಿರುವ ಮೆಕಾಲೆಯ ಕುಟಿಲ ಧೋರಣೆಯ ಬ್ರಿಟಿಷ್ ಶಿಕ್ಷಣ ಪದ್ಧತಿಯ ಘೋರ ಪರಿಣಾಮವನ್ನಲ್ಲದೆ ಮತ್ತೇನನ್ನು ಕಾಣಲು ಸಾಧ್ಯ? ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ನಮ್ಮ ದೇಶವು 1995ರಿಂದ 2019ರವರೆಗೆ ಸರಿ ಸುಮಾರು1.7 ಲಕ್ಷ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಕಂಡಿದೆ ಎಂದರೆ ಎಂತಹ ಗಂಭೀರ ಸ್ಥಿತಿಯನ್ನು ನಾವು ತಲುಪಿದ್ದೇವೆ? ಈ ಆತ್ಮಹತ್ಯಾ ಪ್ರಕರಣಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳ ಫೇಲ್ಯೂರ್, ಡ್ರಗ್ ಅಡಿಕ್ಷನ್ ನಿಂದಲೇ ಹೀಗೆ ದುರಂತ ನಿರ್ಧಾರವನ್ನು ಕೈ ಗೊಂಡಿರುವುದು ಎಂದೂ ಉಲ್ಲೇಖವಾಗಿದೆ. ಮತ್ತಷ್ಟು ಅಂಕಿ-ಅಂಶಗಳ ವಿವರಣೆ ತಿಳಿಯಲು ಹೋದರೆ, 1995-1999ರ ವರೆಗೆ 27359 ವಿದ್ಯಾರ್ಥಿಗಳು, 2000-2004ರ ವರೆಗೆ 27880 ವಿದ್ಯಾರ್ಥಿಗಳು, 2005-2009ರ ವರೆಗೆ 30064 ವಿದ್ಯಾರ್ಥಿಗಳು, 2010-2014ರ ವರೆಗೆ 38220 ವಿದ್ಯಾರ್ಥಿಗಳು, 2014-2019ರ ವರೆಗೆ 48537 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಈ ವರದಿ ತಿಳಿಸುತ್ತದೆ. ಇದನ್ನು ಗಮನಿಸಿದಾಗ ನಮಗೆ ಸುಲಭವಾಗಿ ಅರ್ಥವಾಗುತ್ತದೆ ಹೇಗೆ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ ಎಂದು. 2019ರ ವಿಶ್ವ ಸಂಸ್ಥೆಯ ವರದಿಯೊಂದರ ಪ್ರಕಾರ ಇಡೀ ಪ್ರಪಂಚದ 15-29 ವರ್ಷದ ಯುವಜನಾಂಗದವರ ಅಕಾಲಿಕ ಮೃತ್ಯುವಿನ ಪ್ರಕರಣಗಳಲ್ಲಿ ಆತ್ಮಹತ್ಯೆಯೇ ಎರಡನೆ ಪ್ರಮುಖ ಕಾರಣವೆಂದು ದಾಖಲಾಗಿದೆ. ಇಂದಿನ ಶಾಲಾ ಕಾಲೇಜಿನ ಮಕ್ಕಳು ನಾವು ಹೆಚ್ಚು ನಿಯಂತ್ರಣ ಮಾಡಲು ಸಾಧ್ಯವಾಗದ ಆಘಾತಕಾರಿ ಅಪಘಾತಗಳಿಂದಲೋ ಅಥವಾ ಭಯಾನಕ ಕಾಯಿಲೆಗಳಿಂದಲೋ ಅಧಿಕವಾಗಿ ಸಾವನ್ನಪ್ಪುತ್ತಿಲ್ಲ. ಬದಲಾಗಿ ನಾವು ನಿಯಂತ್ರಣ ಮಾಡಿಕೊಳ್ಳಬಹುದಾದ ನಮ್ಮ ಜೀವನದ ಮಾನಸಿಕ ಸಮಸ್ಯೆಗಳಿಂದ. 

ತಮ್ಮ ಬದುಕಿನ ಸಮಸ್ಯೆಗಳಿಗೆ ಹೆದರಿ, ಅದನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಆತ್ಮಹತ್ಯೆಗೆ ಶರಣಾಗುವ ದುರ್ಬಲ ವಿದ್ಯಾರ್ಥಿಗಳನ್ನು ಈ ಶಿಕ್ಷಣ ವ್ಯವಸ್ಥೆ ನಿರ್ಮಿಸುತ್ತಿದೆ ಎಂಬುದು ನಿಜವೇ ಆದರೆ ಇದನ್ನು ಬೆಂಬಲಿಸುತ್ತಾ ನಕಲಿ ಪ್ರತಿಷ್ಠೆಯ ಹಿಂದೆ ಬಿದ್ದಿರುವ ಈ ಸಮಾಜ ಹಾಗೆ ಸರ್ಕಾರವೂ ಕೂಡ ಅಪರಾಧ ಮಾಡುತ್ತಿದೆಯೆಂದಲ್ಲವೆ? ಈ ದೇಶದ ಭವಿಷ್ಯದ ಪ್ರಜೆಗಳು ಹೀಗೆ ದುರಂತ ಅಂತ್ಯವನ್ನು ಕಾಣುತ್ತಿರಲು, ಇದರ ಬಗ್ಗೆ ಗಂಭೀರ ಚರ್ಚೆಗಳು ಏಕೆ ನಡೆಯುತ್ತಿಲ್ಲ? ಸಮಾಜದ ನಿರ್ವಹಣೆಗೆ ಓಡುತ್ತಿರುವ ಆರ್ಥಿಕತೆಯ ಚಕ್ರಗಳಿಗೆ ವಿದ್ಯಾರ್ಥಿಗಳನ್ನೇ ಇಂಧನವನ್ನಾಗಿ ನೀಡುತ್ತಾ ಬಲಿಪಶುಗಳನ್ನಾಗಿ ಮಾಡುತ್ತಿರಬೇಕೆಂದು ಧೃಡನಿರ್ಧಾರವಾಗಿ ಹೋದಂತಿದೆ ಈ ವ್ಯವಸ್ಥೆಯ ಪರಿ. ಪ್ರಪಂಚದಲ್ಲಿ ನಡೆಯುತ್ತಿರುವ ಬಹುತೇಕ ಆರ್ಥಿಕ ಕ್ಷೇತ್ರದ ಕಾರ್ಯಗಳಿಗೆ ಶಿಕ್ಷಣವು ನೇರವಾಗಿ ಸಂಬಂಧಿಸಿದೆ. ಇದೇ ಮುಖ್ಯ ಕಾರಣದಿಂದಲೇ ನಿರ್ದಿಷ್ಟವಾಗಿ ಯಾರೂ ಹೆಚ್ಚಾಗಿ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಧ್ವನಿ ಎತ್ತುವುದಿಲ್ಲ. ಕೆಲವರು ಇದರ ಬಗ್ಗೆ ಮಾತನಾಡಿದರೂ ಇದರ ಸಂಬಂಧಿತ ಯಾವುದೇ ಕಾರ್ಯ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಒಟ್ಟಿನಲ್ಲಿ ತಮ್ಮ ಆರ್ಥಿಕತೆಯ ಸುಗಮ ಸಂಚಾರಕ್ಕೆ ಯಾವುದೇ ತೊಡುಕು ಆಗಬಾರದೆಂದು, ವಿದ್ಯಾರ್ಥಿಗಳ ಆಸೆ ಆಕಾಂಕ್ಷೆಗಳಿಗೆ ನೀರೆರೆಚುತ್ತಾ ಅವರ ಸಾಮರ್ಥ್ಯವನ್ನು ತಮಗೆ ಬೇಕಾದ ಹಾಗೆ ತಿರುಗಿಸಿ ಮುನ್ನಡೆಯುತ್ತಿದೆ ಈ ಸಮಾಜ.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶೈಕ್ಷಣಿಕ ವರ್ಷದ ಓದಿನ ಪದ್ಧತಿಯನ್ನು ಹೆಚ್ಚು ಇಷ್ಟಪಡುವವರು, ಹೆಚ್ಚು ಅಂಕ ಗಳಿಸುವವರು ಇದ್ದಾರೆ ನಿಜ. ಆದರೆ, ಇದನ್ನು ಇಷ್ಟಪಡದವರು ಕೂಡಾ ಇದೇ ಹಾದಿಯಲ್ಲಿ ನಡೆಯಬೇಕೆಂದು ಒತ್ತಡವನ್ನು ಹೇರುವುದು ಯಾವ ನ್ಯಾಯ? ಈ ವ್ಯವಸ್ಥೆಯನ್ನು ಇಷ್ಟಪಡುವವರು ಇದರಲ್ಲೇ ಮುಂದುವರಿಲಿ. ಇದರಲ್ಲಿ ಆಸಕ್ತಿ ಇಲ್ಲದೆ ಬೇರೆ ಕ್ಷೇತ್ರದಲ್ಲಿ ಆಸಕ್ತಿ, ಇಚ್ಛೆಗಳಿರುವವರು ಅದರಲ್ಲಿ ಮುಂದುವರೆಯಲು ಸಮರ್ಪಕ ತಳಹದಿಯ ವ್ಯವಸ್ಥೆ ಕಲ್ಪಿಸುವಂತಾಗಲಿ. ಈಗ ನಿಮ್ಮ ಮನಸ್ಸಿನಲ್ಲಿ ಒಂದು ಸಂದೇಹ ಮೂಡಿರಬಹುದು. ಯಾರಿಗೆ ಈ ವ್ಯವಸ್ಥೆಯಲ್ಲಿ ಓದಲು ಇಷ್ಟವಿಲ್ಲವೊ ಅವರು ಬೇರೆ ಕ್ಷೇತ್ರಕ್ಕೆ ಹೋಗಬಹುದಲ್ಲ ಅಥವಾ ಬೇರೆ ಮಾರ್ಗದ ಮೂಲಕ ಜ್ಞಾನ ಸಂಪಾದನೆ ಮಾಡಬಹುದಲ್ಲ ಎಂದು. ನಿಮ್ಮ ಆಂತರ್ಯದಲ್ಲೇ ಈ ಪ್ರಶ್ನೆಯನ್ನು ಕೇಳಿಕೊಳ್ಳಿ, ಇಷ್ಟು ಅಗಾಧವಾದ ಸ್ವಾತಂತ್ರ್ಯವನ್ನು ನೀವು ವಿದ್ಯಾರ್ಥಿಗಳಿಗೆ ನೀಡಿರುವಿರಾ? ಒಬ್ಬ ವಿದ್ಯಾರ್ಥಿ ತನಗೆ ಇಷ್ಟವಿಲ್ಲದ ವಿಷಯದ ಓದನ್ನು ನಿಲ್ಲಿಸಿ ಬೇರೆ ವಿಷಯಗಳೆಡೆಗೆ ಅಥವಾ ಬೇರೆ ಮಾರ್ಗದೆಡೆಗೆ ಸಾಗಲು ಇರುವ ದಾರಿ ಅಷ್ಟೊಂದು ಸುಲಭವಾಗಿದೆಯೆ? ಈ ರೀತಿಯ ಸಾಹಸಮಯ ಕಾರ್ಯವನ್ನು ಎಷ್ಟು ಜನ ಮಾಡಬಲ್ಲರು ಹೇಳಿ? ಆದರೆ ಒಂದಂತೂ ಸತ್ಯ. ಈ ರೀತಿ ದೊಡ್ಡ ದೊಡ್ಡ ರಿಸ್ಕ್ ತೆಗೆದುಕೊಂಡವರು ಸಾಧನೆಯ ಶಿಖರವನ್ನೇರಿ ಪ್ರಸಿದ್ಧಿಯಾಗಿರುವುದನ್ನು ಮಾತ್ರ ನಾವು ಯಾರು ಅಲ್ಲಗಳೆಯುವಂತಿಲ್ಲ. ಹೆಸರಾಂತ ಉದ್ಯೋಗಪತಿಗಳು, ರಾಜಕಾರಣಿಗಳು, ಸಿನಿಮಾ ನಟ-ನಟಿಯರು ಇದಕ್ಕೆ ಪ್ರಮುಖ ಸಾಕ್ಷ್ಯವಾಗಿದ್ದಾರೆ. ಇಂದು ಯಾವುದೇ ಪೋಷಕರ ಅಥವಾ ಶಿಕ್ಷಕರ ಅಥವಾ ವಿದ್ಯಾರ್ಥಿಗಳ ಸಂಭಾಷಣೆಯಲ್ಲಿ ಹೆಚ್ಚಾಗಿ ಅಂಕಗಳ ಹಿಂದೆ ಓಡುವುದು, ಉದ್ಯೋಗದ ಹಿಂದೆ ಓಡುವುದು ಒಟ್ಟಾಗಿ ದುಡ್ಡಿನ ಹಿಂದೆ ಓಡುವುದು ಇವೇ ಮೊದಲಾದ ಅಂಶಗಳನ್ನು ಗಮನಿಸಬಹುದು. ಇಂದಿನ ಜನರ ಮಾನಸಿಕತೆ ಎತ್ತ ಸಾಗುತ್ತಿದೆ ಎಂಬುದು ಈ ಅಂಶಗಳಿಂದಲೇ ಧೃಡೀಕೃತವಾಗುತ್ತದೆ. ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಅವರ ಸ್ನೇಹಿತರು, ಶಿಕ್ಷಕರು, ಬಂಧುಗಳು ಅಂಕಗಳಿಂದಲೇ ಹೆಚ್ಚಾಗಿ ಜಡ್ಜ್ ಮಾಡುತ್ತಿರುವ ದುಃಸ್ಥಿತಿಗೆ ತಲುಪಿದ್ದೇವೆ ಎಂಬುದನ್ನು ಯಾರೂ ಪ್ರಮಾಣೀಕರಿಸಿ ತೋರಿಸಬೇಕಿಲ್ಲ. ಕೇವಲ ಅಂಕಗಳು, ಉದ್ಯೋಗ ಇವುಗಳ ಫಲವಾಗಿ ದೊರೆಯುವ ದುಡ್ಡಿನ ಕಂತೆಗಳು ಇವಿಷ್ಟೇ ಜೀವನವೆ? ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಹೌದು ಎಂದು ಸಾರುತ್ತಿವೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಹಾಗೂ ಅದನ್ನೇ ನೆಚ್ಚಿಕೊಂಡಿರುವ ಈ ಸಾಮಾಜಿಕ-ಆರ್ಥಿಕ ವ್ಯವಸ್ಥೆ. ಚಿಕ್ಕಂದಿನಿಂದಲೂ ವಿದ್ಯಾರ್ಥಿಗಳ ತಲೆಯಲ್ಲಿ ಈ ಅಂಶಗಳನ್ನೇ ತುಂಬಿದ ಮೇಲೆ ಮಾನವೀಯತೆ, ಸಂಸ್ಕೃತಿ, ಧರ್ಮ, ರಾಷ್ಟ್ರೀಯತೆಯಂತಹ ಶ್ರೇಷ್ಠ ತತ್ತ್ವ, ಆದರ್ಶ, ಮೌಲ್ಯಗಳಿಗೆ ಸ್ಥಳವೆಲ್ಲಿರುತ್ತದೆ? 

 ಈ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ನೈತಿಕತೆಯ ಪತನವಾಗಿದೆ ಎಂದು ನೂರಾರು ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಎಚ್ಚರಪಡಿಸಿದ್ದರು. ಈಗಿನ ಶಿಕ್ಷಣ ಪದ್ಧತಿಯಲ್ಲಿ ಕಲಿಯುವ ಮಗು ಮೊದಲಿಗೆ ತನ್ನ ತಾಯಿ, ತಂದೆ, ಅಜ್ಜಿ, ಅಜ್ಜರನ್ನು ಮೂರ್ಖರು ಎಂದು ಕಲಿಯುತ್ತದೆ. ತನ್ನ ದೇಶ, ಸಂಸ್ಕೃತಿ, ಧರ್ಮದ ಬಗೆಗೆ ತಿರಸ್ಕಾರದಿಂದ ದ್ವೇಷದಿಂದ ಮಾತನಾಡುತ್ತದೆ. ಪರಕೀಯ ಬ್ರಿಟಿಷ್ ಸಂಸ್ಕೃತಿಯನ್ನು ಅಭಿಮಾನದಿಂದ ಕಾಣುತ್ತದೆ ಎಂದು. ಇದು ಪುರುಷ ಸಿಂಹರನ್ನು ನಿರ್ಮಾಣ ಮಾಡುವ ವಿದ್ಯಾಭ್ಯಾಸವಲ್ಲ. ಕೇವಲ ನಿಷೇಧಮಯವಾದುದು. ಯಾವ ವಿದ್ಯಾಭ್ಯಾಸವು ಜೀವನೋಪಾಯಕ್ಕೆ ಸಹಾಯ ಮಾಡಲಾರದೊ, ಚಾರಿತ್ರ್ಯಶುದ್ಧಿಗೆ ಸಹಾಯ ಮಾಡಲಾರದೊ, ಪರೋಪಕಾರ ಭಾವನೆ ಹಾಗೂ ಸಿಂಹಸದೃಶ ಧೈರ್ಯವನ್ನು ತುಂಬಲಾರದೊ ಅದರಿಂದ ಏನು ಪ್ರಯೋಜನ? ವಿದ್ಯಾರ್ಥಿಗಳ ಸ್ವಂತ ಶಕ್ತಿಯನ್ನೆಲ್ಲ ನಿರ್ನಾಮ ಮಾಡಿ ಯಂತ್ರಸದೃಶರನ್ನಾಗಿ ರೂಪಿಸುವುದೆ ವಿದ್ಯಾಭ್ಯಾಸವಾಗುತ್ತಿದೆಯೆ? ಎಂದು ಗಂಭೀರವಾಗಿ ಪ್ರಶ್ನಿಸಿದ್ದರು. ಸ್ವಾಮೀಜಿಯವರೇ ಒಂದೆಡೆ ಹೇಳುತ್ತಾರೆ ತಮಗೇನಾದರೂ ಹೊಸದಾಗಿ ವಿದ್ಯಾಭ್ಯಾಸವನ್ನು ಕಲಿಸುವ ಅವಕಾಶ ದೊರೆತರೆ ಮಕ್ಕಳಿಗೆ ಏಕಾಗ್ರತೆಯನ್ನು ಹೇಗೆ ಸಾಧಿಸುವುದು ಎಂದು ತರಬೇತಿ ಕೊಟ್ಟು ಅವರ ಐಚ್ಛಿಕ ವಿಷಯಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತೇನೆಂದು. ಶಿಕ್ಷಣ ಕ್ರಮವನ್ನು ಸುಧಾರಿಸಲು ಸರ್ಕಾರಗಳೇಕೆ ಈ ರೀತಿಯ ಮಹಾನ್ ವ್ಯಕ್ತಿಗಳ ಚಿಂತನಾರ್ಹ ಸಂಗತಿಗಳ ಬಗ್ಗೆ ಚರ್ಚೆ ನಡೆಸಬಾರದು? ಹಾಗೆಯೇ ರವೀಂದ್ರನಾಥ ಟಾಗೋರ್ ಅವರು 'ಶಾಂತಿನಿಕೇತನ' ಎಂಬ ಶಿಕ್ಷಣ ಸಂಸ್ಥೆಯನ್ನು ಎಲ್ಲಾ ರೀತಿಯ ಮಕ್ಕಳ ಇಚ್ಛೆಗನುಸಾರವಾಗಿ ರೂಪುಗೊಳಿಸಿದ್ದರು. ಇತ್ತೀಚೆಗೆ ಸದ್ಗುರು ಅವರು ಕೂಡ 'ಇಶಾ ವಿದ್ಯಾಸಂಸ್ಥೆ'ಯ ಮೂಲಕ ಇಂದಿನ ಶಿಕ್ಷಣ ಪದ್ಧತಿಗೆ ವಿರುದ್ಧವಾಗಿ ಮಕ್ಕಳ ವಿಕಸನದ ದೃಷ್ಟಿಯಿಂದ ಹೊಸ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದಾರೆ. ಹೀಗೆಯೇ ಹಲವಾರು ಪ್ರಬುದ್ಧರು, ಜ್ಞಾನಿಗಳು ಸನಾತನ ಶಿಕ್ಷಣ ಪದ್ಧತಿಯನ್ನು ಪ್ರತಿನಿಧಿಸಿ ಮಕ್ಕಳ ಉತ್ಥಾನಕ್ಕೆ ನವನವೀನ ಮಾದರಿಯ ಶಾಲೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಇವುಗಳ ಬಗ್ಗೆ ಸರ್ಕಾರವು ಏಕೆ ತಜ್ಞರೊಡಗೂಡಿ ವಿಶ್ಲೇಷಿಸಬಾರದು? ಈಗಿನ ಶಿಕ್ಷಣ ಪದ್ಧತಿಗೆ ವಿರೋಧ ವ್ಯಕ್ತಪಡಿಸುವವರ ಬಳಿ ಅಭಿಪ್ರಾಯ ಸಂಗ್ರಹಿಸಿ ಹೊಸ ವ್ಯವಸ್ಥೆಗಳ ಶಿಕ್ಷಣ ಸಂಸ್ಥೆಗಳನ್ನೇಕೆ ವಿಸ್ತರಿಸಬಾರದು? ಶರೀರದಿಂದ ಹಿಂದೂಸ್ಥಾನಿಗಳಾಗಿ ಆಂತರ್ಯದಿಂದ ಬ್ರಿಟಿಷಿಗರಾಗಿ ಈ ನಾಡಿನ ಜನರನ್ನು ನಿರ್ಮಾಣ ಮಾಡಬೇಕೆಂದು ಕಾರ್ಯಗತಗೊಳಿಸಿದ ಮೆಕಾಲೆ ತಂಡದ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಹೇಗೆ ಅಭೂತಪೂರ್ವವಾಗಿ ಯಶಸ್ಸನ್ನು ಕಾಣುತ್ತಿದೆ ಎಂಬುದನ್ನು ಇನ್ನೆಷ್ಟು ದಿನ ನೋಡಿಕೊಂಡು ಸಹಿಸಿಕೊಳ್ಳಬೇಕು? ಹಲವಾರು ದಶಕಗಳ ನಂತರ ನಿರ್ಮಾಣಗೊಂಡಿರುವ ಹೊಸ ಶಿಕ್ಷಣ ನೀತಿಯು ಭರವಸೆ ಮೂಡಿಸಿದೆಯಾದರೂ ಇನ್ನೂ ಸಾಕಷ್ಟು ಸುಧಾರಣೆಗಳು ಜಾರಿಗೊಳ್ಳಬೇಕಿರುವುದು ಅತ್ಯಾವಶ್ಯಕ. 

ಪ್ರಸ್ತುತ ಚಾಲ್ತಿಯಲ್ಲಿರುವ ಶಿಕ್ಷಣ ಪದ್ಧತಿಯೇ ಶ್ರೇಷ್ಠ, ಅದರಲ್ಲಿ ಯಾವುದೇ ಸುಧಾರಣೆಗಳು ಅಥವಾ ಹೊಸ ಶಿಕ್ಷಣ ಪದ್ಧತಿಯ ಅನಿವಾರ್ಯತೆ ಇಲ್ಲವೆಂದರೆ ಮಾಸ್ಟರ್ ಡಿಗ್ರಿ, ಪಿ.ಹೆಚ್.ಡಿ ಯನ್ನು ಪಡೆದು ಕೊಂಡಿರುವ ಹಲವಾರು ವಿದ್ಯಾರ್ಥಿಗಳೇಕೆ ನಿರುದ್ಯೋಗಿಗಳಾಗಿದ್ದಾರೆ? ಉತ್ತರಿಸಿ. ಇಂಜಿನಿಯರಿಂಗ್ ಅನ್ನು ಒಳಗೊಂಡಂತೆ ಬೇರೆ ಬೇರೆ ಪದವಿಗಳನ್ನು ಪಡೆದಿರುವ ವಿದ್ಯಾರ್ಥಿಗಳು ಅತ್ಯಂತ ಚಿಕ್ಕ ಚಿಕ್ಕ ಸರ್ಕಾರಿ ಉದ್ಯೋಗಗಳಿಗೂ ಅರ್ಜಿ ಹಾಕುತ್ತಿರುವುದನ್ನು ನಾವೇಕೆ ಇಂದು ಕಾಣುತ್ತಿದ್ದೇವೆ? ಯಾವ ಮಾನಸಿಕ ಒತ್ತಡ, ಖಿನ್ನತೆಗಳಿಂದ ಶುರುವಾಗಿ ಆತ್ಮಹತ್ಯೆಯಂತಹ ಘೋರ ನಿರ್ಧಾರವನ್ನು ಕೈ ಗೊಳ್ಳುತ್ತಿರುವ ದುರ್ಬಲ ವಿದ್ಯಾರ್ಥಿಗಳ ವರ್ಗವು ಈ ಸಮಾಜದಲ್ಲಿ ಏಕೆ, ಹೇಗೆ ಸೃಷ್ಟಿಯಾಗಿದೆ? ವಿವರಿಸಿ. 'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' ಎಂಬ ಅತ್ಯಾಧುನಿಕ ತಂತ್ರಜ್ಞಾನವು ಮಾನವರ ಸಂಗ್ರಹಣಾ ಸಾಮರ್ಥ್ಯಕ್ಕಿಂತ ಹೆಚ್ಚು ಸಂಗ್ರಹಿಸಿಕೊಳ್ಳುವುದು ಸಾಧ್ಯವಾಗುತ್ತಿರುವಾಗ, ಸ್ಮರಣೆಯಲ್ಲಿಟ್ಟುಕೊಳ್ಳುವುದು ಹೇಗೆ ಶಿಕ್ಷಣವಾಗುತ್ತದೆ?

ಎಲ್ಲಾ ಬಗೆಯ ಸಮಸ್ಯೆಗಳಿಗೂ ಮೂಲ ಯಾವುದೆಂದು ಹುಡುಕ ಹೊರಟರೆ, ಸಿಗುವ ಉತ್ತರವು ಶಿಕ್ಷಣವೇ ಆಗಿರುತ್ತದೆ. ತಮ್ಮ ಮಕ್ಕಳಿಗೆ ಇಷ್ಟವಿರಲಿ ಇಲ್ಲದಿರಲಿ, ಪೋಷಕರು ಮಾತ್ರ ನಕಲಿ ಪ್ರತಿಷ್ಠೆಯ ಭ್ರಮೆಗೆ ಬಿದ್ದು ಅವರಿಗೆ ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್ ಗಳನ್ನು ಕೊಡಿಸುತ್ತಾರೆ. ಆ ಮಗುವಿಗೆ ಆರ್ಟ್ಸ್ ಕ್ಷೇತ್ರದಲ್ಲಿ ಮುಂದುವರಿಯುವ ಇಚ್ಛೆ ಇದ್ದರೂ, ಸೈನ್ಸ್ ಕ್ಷೇತ್ರದಲ್ಲೇ ಮುನ್ನುಗ್ಗಬೇಕೆಂಬ ಒತ್ತಾಯ ಪೂರ್ವಕ ಕಾರ್ಯವನ್ನು ಜಾರಿಗೊಳಿಸಿದ್ದಾರೆ. ಇತಿಹಾಸ, ಭೂಗೋಳಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಆ ಕ್ಷೇತ್ರದಲ್ಲೆ ಓದಿ ವೃತ್ತಿ ಪಡೆದರೆ ಅದರಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಯಶಸ್ವಿಯಾಗುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯಾವುದೇ ದೊಡ್ಡ ಪುಸ್ತಕದ ಜ್ಞಾನ ಬೇಕಿಲ್ಲ ಅಲ್ಲವೆ, ಸಾಮಾನ್ಯ ಜ್ಞಾನದಿಂದ ಆಲೋಚಿಸಿದರೂ ಅರ್ಥವಾಗುತ್ತದೆ. ಆದಾಗ್ಯು ಏಕೆ 'ಸೈನ್ಸ್ ಮಾತ್ರ ಗ್ರೇಟ್, ಆರ್ಟ್ಸ್ ಎಂದರೆ ವೇಸ್ಟ್' ಎನ್ನುವಂತಹ ಅನರ್ಥ ಮಾನಸಿಕತೆಯನ್ನು ಸಮಾಜದಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದೆ? ಈ ಅವಿವೇಕತನದಿಂದ ಅಗುತ್ತಿರುವುದಾದರೂ ಏನು, ಸೈನ್ಸ್ ಕ್ಷೇತ್ರದಲ್ಲಿ ಅನಾಸಕ್ತಿ ತಾಳಿಯೂ ಬಲವಂತವಾಗಿ ಓದುವ ವಿದ್ಯಾರ್ಥಿಗಳಿಗೆ ಪಾಠಗಳು ಅರ್ಥವಾಗುವುದಿಲ್ಲ. ಅದರ ಸಂಬಂಧಿತ ಪ್ರಾಜೆಕ್ಟ್, ಸೆಮಿನಾರ್ ಗಳನ್ನು ಸ್ವಂತವಾಗಿ ಮಾಡಲಾಗುವುದಿಲ್ಲ. ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲಾಗುವುದಿಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ತಿಳಿಸಬೇಕೆಂದರೆ ಹಲವರು ಉತ್ತೀರ್ಣವಾಗುವುದೇ ಇಲ್ಲ. ಇದರಿಂದ ಇತರೆ ಚೆನ್ನಾಗಿ ಓದುವ ವಿದ್ಯಾರ್ಥಿಗಳ ಮುಂದೆ ಇಂತಹ ಅನಾಸಕ್ತ ವಿದ್ಯಾರ್ಥಿಗಳು ಕೀಳರಿಮೆಯನ್ನು ಬೆಳೆಸಿಕೊಳ್ಳಲೇಬೇಕು ಎಂಬ ವಾತಾವರಣವೇ ಕಾಲೇಜುಗಳಲ್ಲಿ ಸೃಷ್ಟಿಯಾಗುತ್ತಿದೆ. ತಮ್ಮಲ್ಲಿ ಬೇರೆ ವಿಶೇಷ ಶಕ್ತಿಯಿದೆ, ತಾವು ಅಸಮರ್ಥರಲ್ಲ ಎಂಬ ಆತ್ಮಗೌರವದ ಚಿಂತನೆಯನ್ನು ಹಂತ ಹಂತವಾಗಿ ಮುಗಿಸಿ ಬಿಡುವ ಆಲೋಚನಾ ತರಂಗಗಳು ಸುನಾಮಿಯಂತೆ ಬಂದು ಅಪ್ಪಳಿಸುತ್ತಲೇ ಇರುತ್ತದೆ. ಯಾವುದೋ ಕ್ಷುಲ್ಲಕ ಅಂಕ, ಹಣ, ಉದ್ಯೋಗಗಳು ಕಳೆದು ಹೋದರೆ ಮತ್ತೆ ಸಂಪಾದಿಸಬಹುದು. ಆದರೆ, ಆತ್ಮಗೌರವವು ಕಳೆದುಹೋದರೆ ಅಷ್ಟು ಸುಲಭವಾಗಿ ಸಂಪಾದಿಸಲಾದೀತೆ? ತಮ್ಮ ಪ್ರಾಣಕ್ಕಿಂತಲೂ ದೇಶ-ಧರ್ಮದ ರಕ್ಷಣಾ ಕಾರ್ಯವೇ ಅಮೂಲ್ಯವಾದದ್ದೆಂದು ಸಂಘರ್ಷ ಮಾಡಿ, ಕೊನೆಯವರೆಗೂ ನಮ್ಮ ಶ್ರೇಷ್ಠ ಪೂರ್ವಜರು ಪ್ರಾಣವನ್ನು ಅರ್ಪಿಸಿದರೂ ಆತ್ಮಸಮ್ಮಾನವನ್ನು ಎಂದಿಗೂ ಬಲಿ ಕೊಡಲಿಲ್ಲ. ಮಕ್ಕಳಲ್ಲಿ ಇಂತಹ ಆತ್ಮಸಮ್ಮಾನವು ಕಳೆಗುಂದುವಂತೆ ಮಾಡಿದರೆ, ಅವರ ಬೃಹತ್ ಆಸ್ತಿಯನ್ನೇ ಕಿತ್ತು ಕೊಂಡಂತಾಗುತ್ತದೆ. ಒಂದು ಮಾವಿನ ಹಣ್ಣಿನ ಬೀಜದಿಂದ ಹಲಸಿನ ಮರವನ್ನು ಬೆಳೆಯಲಾಗುವುದೆ? ಅಥವಾ ಒಂದು ಮಾವಿನ ಗಿಡವನ್ನು ಬೆಳೆಸಿ ಹಲಸಿನ ಹಣ್ಣಿಗಾಗಿ ಅಪೇಕ್ಷಿಸಲು ಸಾಧ್ಯವಾಗುವುದೆ? ಒಂದು ಆನೆಯ ಸಾಮರ್ಥ್ಯವನ್ನು ಚಿರತೆಯೊಂದಿಗೆ ಓಟದ ಸ್ಪರ್ಧೆಯನ್ನಿಟ್ಟು ಪರೀಕ್ಷಿಸಲು ಸಾಧ್ಯವೇ? 

ಯಾವ ವಿದ್ಯಾರ್ಥಿಗಳು ತಮಗೆ ಇಷ್ಟವಿಲ್ಲದ  ವಿಷಯಗಳನ್ನು ಓದಲು ವಿವಶರಾಗಿ  ಅನುತ್ತೀರ್ಣರಾಗುತ್ತಿರುವರೊ ಅವರು ತಮ್ಮ ನೆಚ್ಚಿನ ಕ್ಷೇತ್ರದ ಓದಿನ ಕಡೆ ಹೊರಟರೆ ಉತ್ತೀರ್ಣರಾಗಿ ಯಶಸ್ಸನ್ನು ಕಾಣುತ್ತಾರೆ ಹಾಗೂ ಯಾವ ವಿದ್ಯಾರ್ಥಿಗಳು ತಮಗೆ ಇಷ್ಟವಿರುವ ವಿಷಯಗಳನ್ನು ಓದುತ್ತಾ ಉತ್ತೀರ್ಣರಾಗಿ ಯಶಸ್ಸನ್ನು ಕಂಡಿರುವರೊ ಅವರನ್ನು ಅವರ ಇಚ್ಛೆಗೆ ವಿರುದ್ಧ ಬೇರೆ ವಿಷಯಗಳನ್ನು ಓದಲು ವಿವಶರನ್ನಾಗಿ ಮಾಡಿದರೆ ಅನುತ್ತೀರ್ಣರಾಗುತ್ತಾರೆ ಎಂಬ ಸರಳ ಆದರೆ ತೀಕ್ಷ್ಣವಾಗಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಏಕೆ ಇಷ್ಟೊಂದು ಕಷ್ಟಕರವಾಗಿ ಪರಿಣಮಿಸಿದೆ ಈ ಸಮಾಜದಲ್ಲಿ. ಯಾವುದಾದರೂ ಒಂದು ವೃತ್ತಿಗೆ ನೇಮಕ ಮಾಡಿಕೊಳ್ಳುವ ಮುನ್ನ ವಿದ್ಯಾರ್ಥಿಗಳನ್ನು ಅವರು ಅರ್ಹರೆ ಇಲ್ಲವೆ ಎಂದು ಕೂಲಂಕಷವಾಗಿ ಪರೀಕ್ಷಿಸುವ ವ್ಯವಸ್ಥೆಯನ್ನು ಹೊಂದಿರುವಾಗ, ಅದಕ್ಕೆ ಮೂಲಭೂತವಾಗಿ ಬೇಕಾದ ಓದಿನ ವಿಚಾರದಲ್ಲಿ ಹೀಗಾಗಲು ಏಕೆ ಸಾಧ್ಯವಿಲ್ಲ? ಏಕೆ ವಿದ್ಯಾರ್ಥಿಗಳನ್ನು ಒಂದು ಕೋರ್ಸ್ ಗೆ ಪ್ರವೇಶಾತಿ ನೀಡುವ ಮೊದಲು ಅವರು ಇದಕ್ಕೆ ಅರ್ಹರೇ, ಇದರಲ್ಲಿ ಆಸಕ್ತಿ ಹೊಂದಿರುವರೇ ಎಂದು ಪರೀಕ್ಷಿಸಲು ಸಾಧ್ಯವಿಲ್ಲ? ಸ್ವಾತಂತ್ರ್ಯಾನಂತರ ಅತಿ ಶೀಘ್ರವಾಗಿ ಭಾರತೀಯತೆಗೆ ಧಕ್ಕೆ ತಂದಿದ್ದ ಬ್ರಿಟಿಷರ ಪದ್ಧತಿಗಳನ್ನು ತೆಗೆದುಹಾಕಿ, ಆತ್ಮನಿರ್ಭರ ಭಾರತವನ್ನು ಮತ್ತೊಮ್ಮೆ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿತ್ತು. ಪ್ರಮುಖವಾಗಿ ಸರ್ಕಾರದ್ದು. ಆದರೆ, ಅದೆಷ್ಟೋ ದಶಕಗಳ ನಂತರ ನಮಗೆ ಭಾರತೀಯತೆಯನ್ನೇ ಮೈಗೂಡಿಸಿಕೊಂಡಿರುವ ಭಾರತೀಯತೆಯನ್ನೇ ಉಸಿರನ್ನಾಗಿಸಿಕೊಂಡಿರುವ ವ್ಯಕ್ತಿಯು ಪ್ರಧಾನಿಯಾಗಿ ದೊರೆತಿದ್ದಾರೆ. ಈ ಸುಸಂದರ್ಭದಲ್ಲಿ ಬ್ರಿಟಿಷರ ಶೋಷಣಾತೀತ ಪದ್ಧತಿಗಳನ್ನು ತೆಗೆದು ಹಾಕುವ ಕಾರ್ಯವು ಚಾಲ್ತಿಯಲ್ಲಿದ್ದು ತೀವ್ರಗತಿಯಲ್ಲಿ ಸಾಗುತ್ತಿದೆ. ಇದರಲ್ಲಿ ಮೇಲ್ಪಂಕ್ತಿಯ ಸ್ತರದಲ್ಲಿರುವ ಶಿಕ್ಷಣದ ಸುಧಾರಣೆಯೇ ಆಗಬೇಕಿರುವ ಮಹತ್ತರ ಕಾರ್ಯ. ಈ ಚಿಂತನೆ ಎಷ್ಟು ಹೃದಯಗಳನ್ನು ತಲುಪುವುದೊ, ಅಷ್ಟು ಬೇಗ ಇದು ಕಾರ್ಯರೂಪದಲ್ಲಿ ಪ್ರಕಟವಾಗಲು ಸಹಾಯಕವಾಗುವುದು.

~ಸಿಂಚನ.ಎಂ.ಕೆ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ