ಹಿಂದೂಸ್ಥಾನದಲ್ಲಿ ಹುಟ್ಟಿರುವುದಕ್ಕೆ ಗರ್ವದಿಂದ ಹೇಳಿ 'ಭಾರತ್ ಮಾತಾ ಕಿ ಜೈ'

ಹಿಂದೂಸ್ಥಾನದಲ್ಲಿ ಹುಟ್ಟಿರುವುದಕ್ಕೆ ಗರ್ವದಿಂದ ಹೇಳಿ 'ಭಾರತ್ ಮಾತಾ ಕಿ ಜೈ'
21ನೆ ಶತಮಾನದಲ್ಲಿ ಅತೀವ ಕ್ರಿಯಾಶೀಲತೆಯಿಂದ ಕೂಡಿರುವ ಮಾನವ ಅಧಿಕಾರದ ಹೋರಾಟಗಾರರು, ಶಾಂತಿಪ್ರಿಯರು, ಬುದ್ಧಿಜೀವಿಗಳು, ಸೆಕ್ಯುಲರಿಸಂನ ಚಾಂಪಿಯನ್ಸ್ ಗಳ ಉಪಸ್ಥಿತಿಯ ನಡುವೆಯೂ ಆಫ್ಘಾನಿಸ್ತಾನದಲ್ಲಿ ಮಾನವೀಯತೆಯ ಹತ್ಯೆ ನಡೆದಿದೆ ಎಂದರೆ ನೀವೆಲ್ಲಾ ನಂಬಲೇಬೇಕು. ಒಂದಾನೊಂದು ಕಾಲದಲ್ಲಿ ಜಯಪಾಲ, ಆನಂದಪಾಲರಂತಹ ಪ್ರಜಾನುರಾಗಿ ಸಾಮ್ರಾಟರನ್ನು ಕಂಡಿದ್ದ ಆಫ್ಘಾನಿಸ್ತಾನ ರಾಷ್ಟ್ರ ಇಂದು ಭಯೋತ್ಪಾದಕರ ಕಪಿಮುಷ್ಟಿಯಲ್ಲಿ ಸಿಲುಕಿ ರೌರವ ನರಕವಾಗಿದೆ. ಆಫ್ಘಾನಿಸ್ತಾನ್ ಇನ್ನುಮುಂದೆ 'ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ್' ಎಂದು ಕರೆಯಲ್ಪಡುವ ಮೂಲಕ ಭಯೋತ್ಪಾದಕರ ಫ್ಯಾಕ್ಟರಿಯಾಗಿ ಪ್ರಪಂಚಕ್ಕೆಲ್ಲಾ ಅತ್ಯುತ್ತಮ ಉಗ್ರರನ್ನು ರಫ್ತು ಮಾಡಲಿದೆ. 1996-2001ರ ಅವಧಿಯ ಮೊದಲ ಇನ್ನಿಂಗ್ಸ್ ನ ಆಡಳಿತದಲ್ಲಿ ಪ್ರದರ್ಶಿಸಿರುವ ಕ್ರೌರ್ಯತೆಯ ಹಂತವನ್ನು ಮೀರಿ, ಅದರ ಪರಾಕಾಷ್ಠತೆಯನ್ನು ತಲುಪಬಹುದಾದ ಎಲ್ಲಾ ಲಕ್ಷಣಗಳನ್ನು ಈಗಾಗಲೇ ತಮ್ಮ ಎರಡನೆ ಇನ್ನಿಂಗ್ಸ್ ನ ಆರಂಭದಲ್ಲಿ ಸಾಬೀತುಪಡಿಸಿದ್ದಾರೆ ತಾಲಿಬಾನಿಗಳು. ಕಂಡ-ಕಂಡಲ್ಲಿ ಗುಂಡು ಹಾರಿಸುವ, ಸ್ತ್ರೀಯರನ್ನು ಬಲವಂತವಾಗಿ ವಿವಾಹ ಮಾಡಿಕೊಳ್ಳುವ ಹಾಗೂ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವ , ಇಸ್ಲಾಂನ ನಿಯಮಗಳ ವಿರುದ್ಧವಾಗಿ ನಡೆದುಕೊಳ್ಳುವವರ ಘೋರ ಅಂತ್ಯವನ್ನು ಖಚಿತ ಪಡಿಸುವ ತಮ್ಮ ಆಡಳಿತ ವೈಖರಿಯಿಂದ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ್ದ ಶರಿಯಾ ಕಾನೂನನ್ನು ಮತ್ತೊಮ್ಮೆ ಜಾರಿಗೊಳಿಸಿದ್ದಾರೆ. 

ಆಫ್ಘಾನಿಸ್ತಾನವನ್ನು ತಾಲಿಬಾನಿಸ್ತಾನವನ್ನಾಗಿ ಪರಿವರ್ತಿಸಿದ ನಂತರ ಪ್ರೆಸ್ ಕಾನ್ಫರೆನ್ಸ್ ಮಾಡಿರುವ ಈ ಭಯೋತ್ಪಾದಕರು ತಾವು ಸ್ವಯಂ ಭಗವಂತನೇ ಏನೋ ಎಂಬಂತೆ ಎಲ್ಲರನ್ನೂ ಕ್ಷಮಿಸಿರುವುದಾಗಿ ಹೇಳಿದ್ದಾರೆ. ಸ್ತ್ರೀಯರಿಗೆ ಶರಿಯಾ ಕಾನೂನಿನಡಿ ಹೊಂದಿರಬಹುದಾದ ಎಲ್ಲಾ ವಿಧದ ಸ್ವಾತಂತ್ರ್ಯವನ್ನು ನೀಡುವುದಾಗಿ ಹೇಳಿದ್ದಾರೆ. ಆದರೆ, ನಿಜವಾದ ಪ್ರಶ್ನೆಯಿರುವುದು ಶರಿಯಾ ಕಾನೂನಿನಡಿ ಸ್ತ್ರೀಯರಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯವಿದೆಯೆಂಬುದು! ತಮ್ಮ ಮೊದಲ ಆಡಳಿತಾವಧಿಯಲ್ಲಿ ಶರಿಯಾ ಕಾನೂನಿನಡಿ ಸ್ತ್ರೀಯರಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯವಿತ್ತು ಎಂಬುದು ಶೇ.30ರಷ್ಟು ಸ್ತ್ರೀ ಸಾಕ್ಷಾರತಾ ಪ್ರಮಾಣವನ್ನು ಸಾಧಿಸಿರುವ ಆ ರಾಷ್ಟ್ರದ ಚಿಂತಾಜನಕ ಸ್ಥಿತಿಯಿಂದಲೇ ಅರಿವಾಗುತ್ತದೆ. ಇದರೊಂದಿಗೆ ಔದ್ಯೋಗಿಕ ಕ್ಷೇತ್ರಗಳಲ್ಲಿ ನಿಷೇಧಾಜ್ಞೆಯನ್ನು ಹೇರಿ ಸ್ತ್ರೀಯರ ಸಬಲೀಕರಣದ ಮಾರ್ಗವನ್ನು ಮುಚ್ಚಿದ್ದರು ಎಂಬುದು ಸ್ವಾತಂತ್ರ್ಯದ ಚಿತ್ರಣವನ್ನು ಸ್ಪಷ್ಟಪಡಿಸುತ್ತದೆ. ಹಾಗಾದರೆ ಶರಿಯಾ ಕಾನೂನಿನಡಿ ಸ್ತ್ರೀಯರಿಗಿರುವ ಸ್ವಾತಂತ್ರ್ಯದ ಹಕ್ಕುಗಳೇನು? 
1. ಬುರ್ಖಾ ಧರಿಸುವ ಹಕ್ಕು
2. ಉದ್ಯೋಗ ಮಾಡದಿರುವ ಹಕ್ಕು
3. ಮೇರುಧ್ವನಿಯಲ್ಲಿ ಮಾತನಾಡದಿರುವ ಹಕ್ಕು
4. ಒಬ್ಬಂಟಿಯಾಗಿ ಹೊರಹೋಗದಿರುವ ಹಕ್ಕು
5. ತಮ್ಮ ಪತಿಗೆ ಹಲವಾರು ಪತ್ನಿಯರನ್ನು ಹೊಂದಲು ಅವಕಾಶ ಮಾಡಿಕೊಡುವ ಹಕ್ಕು
6. ಮೇಲಿನ ಹಕ್ಕುಗಳನ್ನು ಪಾಲಿಸದಿದ್ದರೆ ಶಿಕ್ಷೆಗೆ ಗುರಿಯಾಗುವ ಹಕ್ಕು.
ಇನ್ನು ತಮ್ಮ ಗೆಲುವು ಖಚಿತವೆಂದು ತಿಳಿದುಕೊಂಡ ಮೇಲೆ 15ರಿಂದ 45 ವರ್ಷದೊಳಗಿನ ಆಫ್ಘನ್ ಸ್ತ್ರೀಯರ ಹೆಸರನ್ನು ಪಟ್ಟಿ ಮಾಡಿಕೊಂಡು, ತಮ್ಮ ಮುಂದಿನ ಶೋಷಣಾಕಾರ್ಯದ ಬ್ಲೂಪ್ರಿಂಟ್ ಅನ್ನು ಸಿದ್ಧಪಡಿಸಿಕೊಂಡಿದ್ದರು. ಇನ್ನು ಎಲ್ಲೆಡೆ ವೈರಲ್ ಆಗಿರುವ ಸಾವಿರಾರು ಆಫ್ಘನ್ ಪ್ರಜೆಗಳು ಆತುರಾತುರವಾಗಿ ವಿಮಾನವೇರಿ ನಿರ್ಗಮನ ಮಾಡುತ್ತಿರುವ, ಅದರಿಂದ ಇಬ್ಬರು ಕೆಳಗೆ ಬಿದ್ದಿರುವ ಮನಕಲುಕುವ ದೃಶ್ಯದಲ್ಲಿ ಬಹುಪಾಲು ಪುರುಷವರ್ಗದವರೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪಿವ್ ರಿಸರ್ಚ್ ಸೆಂಟರ್ ನ ಸರ್ವೆಯೊಂದರ ಪ್ರಕಾರ ಶೇ.99ರಷ್ಟು ಆಫ್ಘನ್ ಪ್ರಜೆಗಳು ಶರಿಯಾ ಕಾನೂನಿನ ಪರವಾಗಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ. 80000 ಸಂಖ್ಯೆಯಲ್ಲಿದ್ದ ತಾಲಿಬಾನ್ ಸೇನೆಯು 300000 ಸಂಖ್ಯೆಯಲ್ಲಿದ್ದ ಆಫ್ಘನ್ ಸೇನೆಯ ವಿರುದ್ಧ ಇಷ್ಟು ಶೀಘ್ರವಾಗಿ ವಿಜಯ ಸಾಧಿಸಲು ಮುಖ್ಯ ಕಾರಣವೇನೆಂಬುದು ಈ ಸರ್ವೆಯ ಅಂಕಿ-ಅಂಶಗಳಲ್ಲೇ ವ್ಯಕ್ತವಾಗಿದೆ. ಆದರೂ ಈಗ ಏಕೆ ದೇಶವನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ? ಹಾಗೆಯೇ ಈ ಸರ್ವೆಯಲ್ಲಿ ಶೇ.74ರಷ್ಟು ಭಾರತೀಯ ಮುಸಲ್ಮಾನರೂ ಸಹ ಶರಿಯಾ ಕಾನೂನಿನ ಪರವಾಗಿದ್ದಾರೆ ಎಂದು ತಿಳಿದು ಬಂದಿರುವ ಹಿನ್ನಲೆಯಲ್ಲಿ ಇಸ್ಲಾಮಿಕ್ ಕಟ್ಟರ್ ಪಂಥೀಯ ವಿಚಾರಧಾರೆಯ ಬೆಳವಣಿಗೆಯಿಂದ ತಾಲಿಬಾನ್ ಮನಸ್ಥಿತಿಗಳ ನಿರ್ಮಾಣವು ತೀವ್ರತರವಾಗಿ ಚಾಲ್ತಿಯಲ್ಲಿರುವುದು ಸ್ಪಷ್ಟವಾಗಿದೆ. ಏನೇ ಇರಲಿ ಈಗ ತಾಲಿಬಾನ್ ನ ಆಡಳಿತವನ್ನು ಎದುರಿಸುವುದಕ್ಕಿಂತ ದೊಡ್ಡ ಸಮಸ್ಯೆ ಬೇರೆ ಏನೂ ಇಲ್ಲವೆಂಬಂತೆ ಪಲಾಯನ ಮಾಡುತ್ತಿರುವ, ಆಶ್ರಯವನ್ನು ಬೇಡುತ್ತಿರುವ ಆಫ್ಘನ್ ಪ್ರಜೆಗಳಿಗೆ ಭ್ರಾತೃತ್ವ ಸಂದೇಶವನ್ನು ಸಾರುವ ಇಸ್ಲಾಮಿಕ್ ರಾಷ್ಟ್ರಗಳು ಸಹಾಯ ಹಸ್ತ ಚಾಚುವ ಬದಲು, ಬೇಲಿ-ಗೋಡೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ.

ಇಷ್ಟು ಶೀಘ್ರವಾಗಿ, ನಿರಾಯಾಸವಾಗಿ ಆಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಾಲಿಬಾನಿಗಳಿಗೆ ಸಹಕರಿಸಿ ಅವರ ತಾಕತ್ತನ್ನು ಹೆಚ್ಚಿಸಿದ ಪಾಕಿಸ್ತಾನ ಹಾಗೂ ಅಮೆರಿಕಾ ರಾಷ್ಟ್ರಗಳಿಗೆ ಈ ಕರಾಳತೆಯ ಶ್ರೇಯಸ್ಸು ಸಲ್ಲಬೇಕು. ಅದರಲ್ಲಿ ಅಮೆರಿಕಾ ಮಾನವೀಯತೆಯ ಹೆಸರಿನಲ್ಲಿ ಅನ್ಯ ರಾಷ್ಟ್ರಗಳ ಆಂತರಿಕ ವಿಚಾರಗಳಲ್ಲಿ ತಲೆಹಾಕಿ ಸಂಕಷ್ಟದ ಸಮಯದಲ್ಲಿ ಕೈ ಬಿಡುವ ಮೂಲಕ ಆ ರಾಷ್ಟ್ರದ ನಿರಂತರ ಸಂಘರ್ಷಕ್ಕೆ ನಾಂದಿ ಹಾಡಿದರೆ, ಪಾಕಿಸ್ತಾನವು ಭಯೋತ್ಪಾದಕರ ಸ್ವರ್ಗವಾಗಿ ಬೆಳೆದು ಎಲ್ಲಾ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಜಗತ್ತಿನೆಲ್ಲೆಡೆ ತನ್ನನ್ನು ತಾನು ಸೂಪರ್ ಪವರ್, ಬಲಿಷ್ಠ ಸೇನೆ ಹಾಗೂ ಮಾನವ ಹಕ್ಕುಗಳ ಚಾಂಪಿಯನ್ ಆಗಿ ಗುರುತಿಸಿಕೊಳ್ಳುವ ಅಮೆರಿಕಾ ದೇಶವು ಕೊರಿಯಾ, ವಿಯೆಟ್ನಾಂ, ಆಫ್ಘಾನಿಸ್ತಾನ ಈ ಎಲ್ಲಾ ರಾಷ್ಟ್ರಗಳ ವಿಚಾರದಲ್ಲಿ ಪ್ರವೇಶಿಸಿ ಕೊನೆಗೆ ಮಾಡಿದ್ದು ಮಾತ್ರ ಪಲಾಯನ. ಹೇಡಿಗಳಂತೆ, ಮೋಸಗಾರರಂತೆ ಯುದ್ಧಗಳಲ್ಲಿ ಪಲಾಯನ ಮಾಡಿರುವ ಅಮೆರಿಕಾ ದೇಶವು ಹಾಲಿವುಡ್ ನಲ್ಲಿ ಸೂಪರ್ ಹೀರೋ ಸಿನಿಮಾಗಳನ್ನು ನಿರ್ಮಿಸುವ ಮೂಲಕ ತನ್ನನ್ನು ತಾನು ಶಕ್ತಿಶಾಲಿಯೆಂದು ತೋರ್ಪಡಿಸಿಕೊಳ್ಳುತ್ತದೆ. ಇನ್ನು ಪಾಕಿಸ್ತಾನದವರ ಮನಸ್ಥಿತಿ ಯಾವ ಹಂತ ತಲುಪಿದೆ ಎಂದರೆ ಚೀನಾ, ಇರಾನ್ ರಾಷ್ಟ್ರಗಳ ಸಾಧನೆಯನ್ನೇ ತನ್ನ ಸಾಧನೆ ಎಂಬಂತೆ ಹೆಮ್ಮೆ ಪಡುತ್ತದೆ. ಆಫ್ಘಾನಿಸ್ತಾನದಲ್ಲಿ ಶರಿಯಾ ಕಾನೂನು ಜಾರಿಗೊಂಡಿರುವುದರ ಸಂಭ್ರಮದಲ್ಲಿರುವ ಪಾಕಿಸ್ತಾನ ತನ್ನ ರಾಷ್ಟ್ರದಲ್ಲಿ ಮಾತ್ರ ಸಿನಿಮಾ, ಹಾಡು, ನೃತ್ಯವೆಲ್ಲಾ ಇರಬೇಕೆಂದು ಆಶಿಸುತ್ತದೆ!

ಈಗ ನಮ್ಮ ರಾಷ್ಟ್ರ ಭಾರತದ ಮೇಲೆ ತಾಲಿ'ಗನ್'ಗಳ ಸದ್ದು ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ವಿಶ್ಲೇಷಿಸೋಣ. ಮೊಟ್ಟ ಮೊದಲನೆಯದಾಗಿ ಹಿಂದೂಸ್ಥಾನವೆಂಬ ಈ ಪುಣ್ಯಭೂಮಿಯಲ್ಲಿ ಜನ್ಮವೆತ್ತಿರುವ ನಾವೇ ನಿಜವಾದ ಭಾಗ್ಯಶಾಲಿಗಳು! ಭಾರತೀಯರೆಲ್ಲರೂ ಒಟ್ಟಾಗಿ ತಾಲಿಬಾನಿಗಳ ಕೃತ್ಯವನ್ನು ಖಂಡಿಸುತ್ತಿದ್ದರೆ, ಕೆಲವು ತಾಲಿಬಾನ್ ಮನಸ್ಥಿತಿಯ ಬೌದ್ಧಿಕ ರಾಕ್ಷಸರು ಎಂದಿನಂತೆ ತಮ್ಮ ಹಳೆಯ ಶೈಲಿಯಲ್ಲಿ ಮಾನವೀಯತೆ, ಜಾತ್ಯಾತೀತತೆಯ ಮುಖವಾಡ ಹಿಡಿದು ಸತ್ಯವನ್ನೇ ಸುಳ್ಳು ಎಂದು ಸಾಬೀತುಪಡಿಸುವಲ್ಲಿ ನಿರತರಾಗಿದ್ದಾರೆ. ಈ ರೀತಿ ತಾಲಿಬಾನಿಗಳನ್ನು ಸಮರ್ಥಿಸುತ್ತಿರುವ ಅಥವಾ ಉದ್ದೇಶಪೂರ್ವಕವಾಗಿ ಈ ವಿಷಯವನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದನೆಯ ಪ್ರೇಮಿಗಳಿಗೆ ಭಾರತ ಸರ್ಕಾರವು ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿ ತಾಲಿಬಾನ್ ಸ್ವರ್ಗಕ್ಕೆ ಕಳುಹಿಸಬೇಕು. ಭಾರತದಲ್ಲಿ ಅಸಹಿಷ್ಣುತೆ, ಡರ್ ಕಾ ಮಹೌಲ್ ಹೈ, ಸರ್ವಾಧಿಕಾರಿ ಧೋರಣೆ ಇದೆ ಎಂದು ಭಯ ಪಡುತ್ತಿರುವವರಿಗೆ ಮತ್ತೆ ಇಂತಹ ಸುವರ್ಣಾವಕಾಶ ದೊರೆಯದು. ತಾಲಿಬಾನಿಗಳ ಆಳ್ವಿಕೆಯಡಿ ಎಷ್ಟು ಸ್ವಾತಂತ್ರ್ಯದ ಸುಖವಿದೆಯೆಂದರೆ ನೀವು ಕಂಡ-ಕಂಡಲ್ಲಿ ಗುಂಡು ಹಾರಿಸಬಹುದು, ಮಹಿಳೆಯರ ಶೋಷಣೆ ಮಾಡಬಹುದು ಮತ್ತು ಅವರನ್ನು ಬಲವಂತವಾಗಿ ವಿವಾಹವಾಗಬಹುದು, ವಿಮಾನದಲ್ಲೂ ಸಹ ಬಸ್ ನಂತೆ ದೊಂಬಿಯಾಗಿ ಸಂಚರಿಸಬಹುದು ಇತ್ಯಾದಿ. ಮತ್ತೇಕೆ ತಡ ತೆರಳಿ, ನಿಮ್ಮ ಪ್ರೀತಿಯ ತಾಲಿಬಾನ್ ನಿಮ್ಮ ಆಗಮಿಕೆಗಾಗಿ ಕಾಯುತ್ತಿದೆ. ನಿಮಗೆಲ್ಲ ಸರ್ವಾಧಿಕಾರಿ ನರೇಂದ್ರ ಮೋದಿಯವರ ಆಡಳಿತದಲ್ಲಿ  ಭಾರತದಲ್ಲಿರಲು ಭಯವಾಗುತ್ತಿದೆಯಲ್ಲವೆ? ಹಾಗಾದರೆ ಶಾಂತಿಪ್ರಿಯ ತಾಲಿಬಾನಿಗಳ ಸುವ್ಯವಸ್ಥಿತ ಆಡಳಿತದಲ್ಲಿ ನೀವು ಆಫ್ಘಾನಿಸ್ತಾನದಲ್ಲಿ ಸುರಕ್ಷಿತವಾಗಿರಬಹುದು. ಹ್ಹ ಹ್ಹ ಹ್ಹ, ಆದರೆ ನೀವು ಎಂದಿಗೂ ಭಾರತವನ್ನು ಬಿಟ್ಟು ಹೋಗುವುದಿಲ್ಲ ಎಂಬುದು ಸತ್ಯಖಚಿತ ಮಾತು. ಏಕೆಂದರೆ ನಮಗಿಂತ ನಿಮಗೇ ಚೆನ್ನಾಗಿ ತಿಳಿದಿದೆ ಭಾರತವೇ ಈ ವಿಶ್ವದಲ್ಲಿರುವ ಸ್ವರ್ಗ. ಭಾರತವೇ ಸರ್ವ ಜನರಿಗೂ ಸುರಕ್ಷತೆಯನ್ನು ಒದಗಿಸುವ ರಾಷ್ಟ್ರ. ಭಾರತವೇ ಅನಾದಿಕಾಲದಿಂದಲೂ ನಿರಾಶ್ರಿತರಿಗೆ ಆಶ್ರಯವನ್ನು ನೀಡುತ್ತಿರುವ ಮಾನವೀಯತೆಯ ಪರಾಕಾಷ್ಠತೆ ತಲುಪಿರುವ ರಾಷ್ಟ್ರ. ಭಾರತ ಮಾತ್ರವೇ ನಿಮ್ಮ ಅತೀವ ಸ್ವಾತಂತ್ರ್ಯದ ದುರ್ಬಳಕೆ, ವಿಕೃತ ಮಾನಸಿಕತೆ, ದೇಶವಿರೋಧಿ ಕಾರ್ಯಚಟುವಟಿಕೆಗಳಿಗೆ ದಂಡನೆ ನೀಡದೆ ತನ್ನ ಅತೀವ ಸಜ್ಜನಿಕೆಯ, ಅತೀವ ಪ್ರಜಾಪ್ರಭುತ್ವದಿಂದ ತನಗೆ ತಾನೇ ದಂಡನೆ ಕೊಟ್ಟಿಕೊಳ್ಳುತ್ತಿರುವುದು. ಇಂತಹ ರಾಷ್ಟ್ರಕ್ಕೆ ಆಪ್ಯಾಯಮಾನವಾಗಿ ಅಪಮಾನವನ್ನು ಮಾಡುತ್ತಿದ್ದೀರಲ್ಲ, ನಿಮ್ಮ ಆತ್ಮವು ಈ ಮಹಾಪಾಪದ ಭಾರವನ್ನು ಹೊರಲು ಸಾಧ್ಯವೆ?

ತಾಲಿಬಾನಿಗಳ ಅಟ್ಟಹಾಸ ಶುರುವಾದಾಗಿನಿಂದಲೂ ತಾಲಿಬಾನಿಗಳ ಮೇಲೆ ಒಂದೇ ಒಂದು ಆಕ್ರೋಶದ, ನಿಂದನಾತ್ಮಕ ಹೇಳಿಕೆಯನ್ನು ಕೊಡದ ಇವರು ಎಂದಿನಂತೆ ಇಸ್ಲಾಂ ಕಟ್ಟರ್ ಪಂಥೀಯ ವಿಚಾರವನ್ನು ವೈಟ್ ವಾಶ್ ಮಾಡುವ ಕಾರ್ಯದಲ್ಲಿ ವ್ಯಸ್ತವಾಗಿದ್ದಾರೆ. ಇದಕ್ಕೂ ಮೀರಿ ತಾಲಿಬಾನ್ ಭಯೋತ್ಪಾದಕರ ಸಂಘಟನೆಗೂ ಹಿಂದುತ್ವವಾದಿ ಸಂಘಟನೆಗೂ ಹೋಲಿಕೆ ಮಾಡಿ ಹಿಂದೂ ಧರ್ಮ-ಸಂಸ್ಕೃತಿಯ ಬಗೆಗಿರುವ ತಮ್ಮ ದ್ವೇಷವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಭಯೋತ್ಪಾದನೆಯ ಕಟ್ಟರ್ ಪಂಥೀಯ ವಿಚಾರವನ್ನು ವೈಟ್ ವಾಶ್ ಮಾಡುವಲ್ಲಿ ಪಿ.ಹೆಚ್.ಡಿ ಮಾಡಿರುವ ಇವರು ಧರ್ಮ ಹಾಗೂ ಅಧರ್ಮವನ್ನು ಒಂದೇ ಎಂದು ಹೇಳಲು ಹೊರಟಿದ್ದಾರೆ ಅರ್ಥಾತ್ ಹಿಂದುತ್ವ ಹಾಗೂ  ಭಯೋತ್ಪಾದನೆ ಒಂದೇ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ. ಯಾವ ಹಿಂದುತ್ವವಾದಿ ಸಂಘಟನೆಗಳು ತಾಲಿಬಾನ್ ನಂತಹ ಭಯೋತ್ಪಾದಕ ಸಂಘಟನೆಗಳಂತೆ ಮೆಷಿನ್ ಗನ್, ರೈಫೈಲ್ಸ್ ಗಳಂತಹ ಅಪಾಯಕಾರಿ ಶಸ್ತ್ರಗಳನ್ನು ಹಿಡಿದು ಜಗತ್ತನ್ನು ಕಾಡುತ್ತಿವೆ? ಹೇಡಿಗಳ ಹಾಗೆ ಬಾಂಬ್ ದಾಳಿಯನ್ನು ಮಾಡಿ ನಿರ್ದೋಷಿಗಳ ಹತ್ಯೆ ಮಾಡಿವೆ? ಸ್ತ್ರೀಯರ ಮೇಲೆ ಶೋಷಣೆ ಮಾಡಿವೆ, ಅತ್ಯಾಚಾರ ನಡೆಸಿವೆ? ಮಾನವೀಯತೆಗೆ ಧಕ್ಕೆ ತರುವಂತಹ ಪ್ರಜಾಪ್ರಭುತ್ವ ವಿರೋಧಿ ಕಾರ್ಯಗಳಲ್ಲಿ ತೊಡಗಿವೆ? ಹಿಂದೂಗಳ ಅತಿಯಾದ ಔದಾರ್ಯವಂತಿಕೆಯ ಕಾರಣದಿಂದಾಗಿ ಇವರ ಈ ರೀತಿಯ ಅಸತ್ಯದ, ಅವಮಾನಕರ ಮಾತುಗಳಿಗೆ ಇದುವರೆವಿಗೂ ದಂಡನೆಯಾಗಿಲ್ಲ. ಇಂತಹ ತಾಲಿಬಾನ್ ಮನಸ್ಥಿತಿಯವರನ್ನು ಹೀಗೇ ಮುಂದುವರಿಯಲು ಬಿಟ್ಟರೆ ಭಾರತದಲ್ಲೊಂದು ತಾಲಿಬಾನ್ ಸಂಘಟನೆ ನಿರ್ಮಾಣವಾಗುವ ಸಮಯ ದೂರವೇನಿಲ್ಲ. ಭಯೋತ್ಪಾದನೆ, ಜಿಹಾದ್ ಎಂಬ ವೈರಸ್ ನಿಂದ ಪ್ರಪಂಚವನ್ನು ಸಂರಕ್ಷಿಸಲು ಹಿಂದುತ್ವವೇ ವ್ಯಾಕ್ಸಿನ್. ಭಾರತ ಆಫ್ಘಾನಿಸ್ತಾನ ಆಗುವುದನ್ನು ತಡೆಯಬಲ್ಲ ಏಕೈಕ ಶಕ್ತಿ 'ಹಿಂದುತ್ವ'. 

ಯಾರೇ ಆಗಲಿ ಎಷ್ಟೇ ಸುಳ್ಳುನುಡಿಯನ್ನು ಉಚ್ಛರಿಸುತ್ತಿದ್ದರೂ, ಅಕ್ಕಸ್ಮಾತ್ ಆಗಿ ಆದರೂ ಒಂದಲ್ಲಾ ಒಂದು ಸತ್ಯವನ್ನು ಹೇಳಲೇಬೇಕು. ಇದರಂತೆಯೇ ತಮ್ಮನ್ನು ತಾವು ಲಿಬೆರಲ್ಸ್ ಗಳು ಎಂದು ಕರೆದುಕೊಳ್ಳುವವರು 'ತಾಲಿಬೆರಲ್ಸ್'ಗಳಾಗಿ ಮಾರ್ಪಾಡು ಹೊಂದಿ, ಆಫ್ಘಾನಿಸ್ತಾನದಿಂದ ನಿರಾಶ್ರಿತರಾಗಿ ಹೊರಬರುತ್ತಿರುವ ಎಲ್ಲರಿಗೂ ಭಾರತ ಆಶ್ರಯ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಭಾರತವೆಂಬ ರಾಷ್ಟ್ರ ಯಾವ ರಾಷ್ಟ್ರಗಳಲ್ಲೂ ಆಶ್ರಯ ಸಿಗದೆ ನೊಂದ ನಿರಾಶ್ರಿತರಿಗೂ ಆಶ್ರಯ ನೀಡಿದೆ. ಆದರೆ ಬಹುಸಂಖ್ಯೆಯಲ್ಲಿರುವ ಇಸ್ಲಾಮಿಕ್ ರಾಷ್ಟ್ರಗಳು ಈ ಕರ್ತವ್ಯವನ್ನು ನಿರ್ವಹಿಸಬೇಕಿದೆ. ಆದರೆ ಆ ರಾಷ್ಟ್ರಗಳೇ ವಿರೋಧವಾಗಿ ಆತಂಕದಲ್ಲಿರುವಾಗ ನಾವು ಹೇಗೆ ಅವರಿಗೆ ಆಶ್ರಯವನ್ನು ನೀಡುವುದು? ಸಿರಿಯಾ, ಇರಾನ್ ರಾಷ್ಟ್ರಗಳಲ್ಲಿ ಆಫ್ಘನ್ ನಂತೆ ಅರಾಜಕತೆ ಸೃಷ್ಟಿಯಾಗಿದ್ದಂತಹ ಕಾಲದಲ್ಲಿ ನಿರಾಶ್ರಿತರನ್ನು ತಮ್ಮ ದೇಶಗಳಿಗೆ ಸ್ವಾಗತಿಸಿದ ಯೂರೋಪ್ ಪ್ರಸ್ತುತ ಎದುರಿಸುತ್ತಿರುವ ಸಂಘರ್ಷಗಳು ಈ ವಿಚಾರಕ್ಕೆ ಪೂರಕವಾಗಿದೆ. 
ಆದರೂ ಸಹ ಭಾರತ ಸರ್ಕಾರವು ಇ-ವೀಸಾದ ಅವಕಾಶವನ್ನು ನೀಡಿ 6 ತಿಂಗಳವರೆಗೆ ಆಶ್ರಯ ನೀಡುವ ಸಹಾಯಕ್ಕೆ ಮುಂದಾಗಿದೆ. ಭಾರತ ಸರ್ಕಾರವು ಆಫ್ಘಾನಿಸ್ತಾನ್ ನಲ್ಲಿ ನೆಲೆಸಿದ್ದ 120 ಭಾರತೀಯ ರಾಜತಾಂತ್ರಿಕರನ್ನು ಏರ್ ಲಿಫ್ಟ್ ಮಾಡಿದೆ. ಅಲ್ಪಸಂಖ್ಯಾತರಾಗಿರುವ ಅಲ್ಲಿನ ಹಿಂದೂ ಹಾಗೂ ಸಿಖ್ ಗಳಿಗೆ ಪ್ರಾಥಮಿಕತ್ವವನ್ನು ನೀಡಿ, ಅವರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪ್ರಪಂಚದ ಕ್ಯಾಮೆರಾಗಳಿಂದ ಮರೆಯಾಗಿರುವ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾ ದೇಶದಲ್ಲಿ ಶೋಷಿತರಾಗಿರುವ ಹಿಂದೂ, ಸಿಖ್, ಬೌದ್ಧರಿಗೆ ಪೌರತ್ವ ನೀಡುವ ಸದುದ್ದೇಶದಿಂದ ಜಾರಿಗೆ ತಂದ ಸಿಎಎ ಕಾನೂನನ್ನು ವಿರೋಧಿಸಿದ ಇವರು ಈಗ ಆಫ್ಘನ್ ವಿಚಾರದಲ್ಲಿ ಹೀಗೆ ಮಾತನಾಡುತ್ತಿರುವುದು ಅವರ ಆಯ್ಕೆಯ ಪ್ರತಿನಿಧ್ಯತೆಯನ್ನು ಎತ್ತಿಹಿಡಿಯುತ್ತದೆ. ನಿರಂತರವಾಗಿ ಪ್ರತೀ ವಿಚಾರದಲ್ಲೂ ಹಿಂದುತ್ವವಾದಿ, ರಾಷ್ಟ್ರೀಯವಾದಿ ಸಂಘಟನೆಗಳ ಮೇಲೆ ಇವರು ಆಕ್ರಮಣ ಮಾಡುತ್ತಲೇ ಇದ್ದಾರೆಂದರೆ ಆ ಸಂಘಟನೆಗಳು ಪಾಲಿಸುವ ದೇಶಸೇವೆ, ಧರ್ಮರಕ್ಷಣೆಯ ವಿರುದ್ಧ ಒಟ್ಟಾರೆ ಈ ನೆಲದ ಸಂಸ್ಕೃತಿಯ ಅಸ್ತಿತ್ವದ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆಂಬುದು ಪ್ರಮಾಣಿತವಾಗಿದೆ. ತಾಲಿಬಾನಿಗಳು ಮಾಡಿದ ಪ್ರೆಸ್ ಕಾನ್ಫರೆನ್ಸ್ ಒಂದನ್ನೇ ವೈಭವೀಕರಿಸಿ, ಅವರ ಅಮಾನವೀಯ ಕೃತ್ಯಗಳನ್ನು ಮರೆಮಾಚುತ್ತಿರುವ ಇವರು ತಾಲಿಬಾನಿಗಳು ಜಾರಿಗೊಳಿಸುವ ಶರಿಯಾ ಕಾನೂನಿನ ಆಡಳಿತದ ಬಗ್ಗೆ ಒಲವು ಹೊಂದಿದ್ದಾರಾ? ಯಾವ ಶರಿಯಾ ಕಾನೂನಿನ ಅನ್ವಯ ಕಲೆ, ಸಾಹಿತ್ಯ, ನೃತ್ಯವೆಲ್ಲದಕ್ಕೂ ನಿಷೇಧವಿದೆಯೊ, ಯಾವ ಕಾನೂನು ಮಹಿಳೆಯರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಲೈಸೆನ್ಸ್ ನಂತೆ ಸಹಾಯಕವಾಗುವುದೊ, ಯಾವ ಕಾನೂನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿದೆಯೊ, ಯಾವ ಕಾನೂನು ನಿರ್ದಾಕ್ಷಿಣ್ಯವಾಗಿ ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಳ್ಳುವುದೊ ಆ ಕಾನೂನಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾರಾ? ನಮ್ಮ ದೇಶದಲ್ಲೇ ಉತ್ತರಪ್ರದೇಶದ ಬಳಿ ಇರುವ ದಿಯೋಬಂದಿ ಮದರಸದ ವಿಚಾರಧಾರೆಯು ಪಾಕಿಸ್ತಾನ, ಆಫ್ಘಾನಿಸ್ತಾನದೆಲ್ಲೆಡೆ ಹೆಚ್ಚು ಹೆಚ್ಚು ಪ್ರಸಾರವಾಗಿವೆ ಹಾಗೂ ಪ್ರೇರಣೆ ನೀಡಿವೆ. ತಾಲಿಬಾನಿಗಳು ಸಹ ಈ ವಿಚಾರಧಾರೆಯನ್ನೇ ಅನುಸರಿಸುತ್ತಾರೆ. ಈ ಕಾರಣದಿಂದಲೂ ತಾಲಿಬಾನಿಗಳ ಬೆಂಬಲಕ್ಕೆ ಭಾರತದ ಬುದ್ಧಿಜೀವಿಗಳು ನಿಂತಿದ್ದಾರೆ ಎನ್ನಬಹುದು. ತಾಲಿಬಾನಿಗಳ ಮೇಲಿನ ಪ್ರೀತಿಯಿಂದ ಭಾರತದ ಬುದ್ಧಿಜೀವಿಗಳು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಯಬೇಡಿ, ಸನಾತನ ಸಂಸ್ಕೃತಿಯೆಡೆಗೆ ಇವರಿಗಿರುವ ದ್ವೇಷವೇ ಇದಕ್ಕೆ ಮುಖ್ಯ ಕಾರಣ. ಯಾವ ಸನಾತನ ಸಂಸ್ಕೃತಿಯು ಇವರು ಭೋಗಿಸಲು ಇಚ್ಛೆ ಪಡುವ ಅನುಚಿತ, ಅಶೋಭನೀಯ ಕಾರ್ಯಗಳನ್ನು ಅಧರ್ಮವೆಂದು ಧಿಕ್ಕರಿಸುವುದೊ ಹಾಗೂ ಇವರ ಯೋಗ್ಯತೆಗೆ ನಿಲುಕದ ಆಧ್ಯಾತ್ಮವೆಂಬ ಅತ್ಯುನ್ನತ ಆದರ್ಶದ ಮೇಲೆ ನಿರ್ಮಾಣವಾಗಿದೆಯೊ ಅದರ ಮೇಲೆ ಇವರಿಗಿರುವ ದ್ವೇಷವು ಸಹಜವಾದುದೆ.

ಭಯೋತ್ಪಾದಕರನ್ನು ಕೊನೆಗೊಳಿಸುವುದರಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಲಾಗುವುದಿಲ್ಲ. ನಾವು ಅದನ್ನು ತಪ್ಪು ಎಂದು ಖಂಡಿಸುತ್ತೇವೆ, ಆದರೆ ಭಯೋತ್ಪಾದಕರ ಪಾಲಿಗೆ ಅದೇ ಸರ್ವಸ್ವ. ಅದಕ್ಕಾಗಿ ಪ್ರಾಣ ನೀಡಲೂ ಅವರು ಹಿಂಜರಿಯುವುದಿಲ್ಲ ಎಂದರೆ ನೀವೇ ಅರ್ಥೈಸಿಕೊಳ್ಳಿ. ಅವರು ಪಾಲಿಸುವ ಇಸ್ಲಾಮಿಕ್ ಕಟ್ಟರ್ ಪಂಥೀಯ ವಿಚಾರಧಾರೆಯು ಸುಧಾರಣೆಯಾಗದಿದ್ದರೆ, ಅದರ ವೈಚಾರಿಕ ಸ್ವಾತಂತ್ರ್ಯಕ್ಕೆ ಅವಕಾಶ ಮಾಡಿಕೊಡದಿದ್ದರೆ ಇಡೀ ವಿಶ್ವವು ಈ ಸಮಸ್ಯೆಯನ್ನು ನಿರಂತರವಾಗಿ ಎದುರಿಸುತ್ತಲೇ ಇರಬೇಕಾಗುತ್ತದೆ. ಈ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನವಾದ ಧರ್ಮ ಹಾಗೂ ಅಷ್ಟೇ ನವನವೀನವಾದ ಧರ್ಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಂದೂ ಧರ್ಮವು ಇದುವರೆವಿಗೂ ತನ್ನ ಭೋದನಾ-ತತ್ತ್ವಗಳಿಗೆ ಮುಕ್ತವಾದ ವೈಚಾರಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿರುವುದರಿಂದಲೇ ಇಂದಿನವರೆಗೂ ತನ್ನ ಭವ್ಯ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿ ದೊರೆತ ಮಾನವ ಜನಾಂಗದ ಕಲ್ಯಾಣಕರ ಮಾರ್ಗವನ್ನು ಭೋದಿಸಿದ ನಮ್ಮ ಪೂರ್ವಜರಾದ ಋಷಿಗಳು ತಾವು ಭೋದಿಸಿದ ಸತ್ಯವನ್ನು ಪರೀಕ್ಷಿಸಿ ಒಪ್ಪಿಕೊಳ್ಳಿ ಎಂದಿದ್ದಾರೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತವು ಆಧ್ಯಾತ್ಮದಿಂದ ಈ ಪ್ರಪಂಚವನ್ನು ಗೆಲ್ಲಬೇಕು, ತನ್ನ ಆಧ್ಯಾತ್ಮಿಕ ಭೋದನೆಯ ಮೂಲಕ ವಿಶ್ವ ಶಾಂತಿ, ಸಮೃದ್ಧಿಯನ್ನು ಸಾಧಿಸಬೇಕು. ಇಂತಹ ಆಧ್ಯಾತ್ಮ ಸಂಸ್ಕೃತಿಯ ರಕ್ಷಣೆಗಾಗಿ ಸಂಕಲ್ಪಬದ್ಧವಾಗಿರುವ ಹಿಂದುತ್ವವೆಂಬ ಶ್ರೀರಕ್ಷೆಯ ಆದರ್ಶವನ್ನೂ ಕೆಲವರು ಸಮಾನತೆಗೆ ಧಕ್ಕೆ ಎಂದು ಅಲ್ಲಗಳೆಯುತ್ತಾರೆ. ಆದರೆ ಅಂತಹ ವ್ಯಕ್ತಿಗಳು ವಿಶ್ವ ಸಮಾನತೆಯು ಮ್ಯಾಜಿಕ್ ನಂತೆ ಸ್ವಾಭಾವಿಕವಾಗಿ ಸೃಷ್ಟಿಯಾಗಬೇಕೆಂದು ಅಪೇಕ್ಷಿಸುತ್ತಾರೆ. ಆದರೆ ಹಿಂದುತ್ವದ ಆದರ್ಶವನ್ನು ಪಾಲಿಸುವ ವ್ಯಕ್ತಿಗಳು ವಿಶ್ವಶಾಂತಿ, ಸಮಾನತೆಯನ್ನು ಸಾಧಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ