ತಮ್ಮದೇ ದೊಡ್ಡ ವೈಫಲವಿದ್ದಾಗ್ಯು ಭಾರತಕ್ಕಾಗಿ ವೈಫಲ್ಯವನ್ನು ಚಿತ್ರಿಸುತ್ತಿದ್ದ ವಿದೇಶಿ ಮಾಧ್ಯಮಗಳ ಪ್ರಯತ್ನ ಸಂಪೂರ್ಣ ವಿಫಲ!
ತಮ್ಮದೇ ದೊಡ್ಡ ವೈಫಲವಿದ್ದಾಗ್ಯು ಭಾರತಕ್ಕಾಗಿ ವೈಫಲ್ಯವನ್ನು ಚಿತ್ರಿಸುತ್ತಿದ್ದ ವಿದೇಶಿ ಮಾಧ್ಯಮಗಳ ಪ್ರಯತ್ನ ಸಂಪೂರ್ಣ ವಿಫಲ!
21 ಜೂನ್ 2021, 85 ಲಕ್ಷಕ್ಕಿಂತ ಅಧಿಕ ಭಾರತದ ಪ್ರಜೆಗಳಿಗೆ ಲಸಿಕೆ ನೀಡುವುದರ ಮೂಲಕ ವಿಶ್ವ ದಾಖಲೆ ಮಾಡಿದ ಯೋಗ ವಿಶ್ವಗುರು ಭಾರತದ ಪಾಲಾದ ಐತಿಹಾಸಿಕ ದಿನ. ಅದರ ಮುಂದಿನ ದಿನಗಳಲ್ಲೂ ಸಹ ಕ್ರಮವಾಗಿ 54 ಲಕ್ಷ, 62 ಲಕ್ಷ, 60 ಲಕ್ಷ, 61 ಲಕ್ಷ, 59 ಲಕ್ಷದಷ್ಟು ಜನರಿಗೆ ಲಸಿಕೆಯನ್ನು ಕೊಡುವುದರ ಮೂಲಕ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಮುಂದುವರಿಸುತ್ತಿರುವ ಶ್ರೇಯಸ್ಸು ಭಾರತ ಸರ್ಕಾರ ಹಾಗೂ ಅದರೊಂದಿಗೆ ಕೈ ಜೋಡಿಸಿರುವ ಎಲ್ಲಾ ಕೊರೊನಾ ವಾರಿಯರ್ಸ್ ಗೆ ಸಲ್ಲುತ್ತದೆ. 45 ವರ್ಷಕ್ಕಿಂತ ಅಧಿಕ ವಯಸ್ಸಿನವರಿಗೆ ಲಸಿಕೆ ನೀಡಿದ ನಂತರ ಆರಂಭವಾದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ವಿಶ್ವದಲ್ಲೇ ದೊಡ್ಡ ಲಸಿಕಾ ಅಭಿಯಾನಕ್ಕೆ ಚಾಲ್ತಿ ನೀಡಿದಾಗ ಕೋ-ವಿನ್ ಡಿಜಿಟಲ್ ಪ್ಲಾಟ್ ಫಾರ್ಮ್ ನಿಂದ 100 ಕೋಟಿಯಷ್ಟು ಜನರ ನೋಂದಣಿ ಪ್ರಕ್ರಿಯೆಯನ್ನು ನಿಭಾಯಿಸುವುದು ಅತಿ ದೊಡ್ಡ ಸವಾಲಾಗಿತ್ತು. ಆದರೆ ಕೋ-ವಿನ್ ನಲ್ಲಿನ ನೋಂದಣಿಯ ಪ್ರಕ್ರಿಯೆಯಿಂದ 32 ಕೋಟಿಗಿಂತಲೂ ಅಧಿಕ ಲಸಿಕೆಯ ಡೋಸ್ ಗಳನ್ನು ನೀಡುವ ಮೂಲಕ ಅಮೆರಿಕಾವನ್ನು ಮೀರಿಸಿ ನಮ್ಮ ದೇಶವು ಜಗತ್ತಿನಲ್ಲೇ ಅತಿ ಹೆಚ್ಚು ಲಸಿಕೆ ನೀಡಿರುವ ಹಿರಿಮೆಗೆ ಪಾತ್ರವಾಗಿರುವುದರಿಂದ, 50 ರಾಷ್ಟ್ರಗಳು ಈ ತಂತ್ರಜ್ಞಾನದ ಬಗೆಗೆ ಆಸಕ್ತಿ ತೋರಿ ಮುಂದೆ ಬಂದಿರುವುದು ಅತಿ ವೇಗದ ಟೆಕ್ ಪ್ಲಾಟ್ ಫಾರ್ಮ್ ಕೋ-ವಿನ್ ನ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಮಾಸ್ಟರ್ ಸ್ಟ್ರೋಕ್ ಗಳಂತಹ ಅಚ್ಚರಿ ಮಿಶ್ರಿತ ಅಸಂಭವಪ್ರತೀತ ಕಾರ್ಯಗಳನ್ನು ಮಾಡುವಲ್ಲಿ ಪ್ರಸಿದ್ಧಿ ಪಡೆದಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನದಂದು ನಡೆಯಲಿರುವ ಕಾರ್ಯ ಯೋಜನೆಗಳ ಬಗ್ಗೆ ಯಾವುದೇ ಅದ್ಧೂರಿ ಜಾಹೀರಾತುಗಳನ್ನಾಗಲಿ ಅಥವಾ ಯಾವುದೇ ಪ್ರಚಾರವನ್ನಾಗಲಿ ಮಾಡದೆ ಪ್ರತಿಪಕ್ಷಗಳು ಹೆಚ್ಚಾಗಿ ಈ ರೀತಿಯ ಬೃಹತ್ ಯೋಜನೆಗಳ ಬಗ್ಗೆ ಅತರ್ಕಬದ್ಧವಾಗಿ ಅಥವಾ ವಿರೋಧವಾಗಿ ಹೇಳಿಕೆ ಕೊಡುವ, ಪ್ರಜೆಗಳನ್ನು ದಾರಿ ತಪ್ಪಿಸುವ ಅಥವಾ ಇನ್ನಿತರ ಅಡೆತಡೆಗಳನ್ನು ನಿರ್ಮಿಸುವ ಯಾವ ಪ್ರಯತ್ನಕ್ಕೂ ಅವಕಾಶ ನೀಡದೆ ನಮ್ಮ ರಾಷ್ಟ್ರದ ಲಸಿಕಾ ಅಭಿಯಾನವು ಪ್ರಪಂಚಕ್ಕೆ ಮಾದರಿಯಾಗುವಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಭಾರತದ ಪ್ರಜೆಗಳು ಆಡಳಿತ ಪಕ್ಷಕ್ಕೆ ನೀವು ಅರ್ಹರಲ್ಲ ಎಂದು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದರೂ ಕಾಂಗ್ರೆಸ್ ಮಾತ್ರ ಆ ಜವಾಬ್ದಾರಿಯನ್ನು ಪ್ರಬುದ್ಧವಾಗಿ ನಿರ್ವಹಿಸುವಂತೆ ಕಾಣುತ್ತಿಲ್ಲ. ವಿರೋಧ ಮಾಡುವುದೇ ವಿರೋಧ ಪಕ್ಷದ ಕಾರ್ಯ ಎಂಬಂತೆ ವರ್ತಿಸುತ್ತಿರುವ ಕಾಂಗ್ರೆಸ್, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿಯವರು ಭಾರತದ ಗೌರವವನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿರುವ ಈ ಸಾಧನೆಯ ಬಗೆಗೆ ಹೆಮ್ಮೆಯಿಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುವುದಿರಲಿ, ಕನಿಷ್ಟಪಕ್ಷ ಒಂದೆರಡು ಮೆಚ್ಚುಗೆಯ ಮಾತುಗಳನ್ನೂ ಆಡಲಿಲ್ಲ. ಆದರೆ, ಕೋವಿಡ್ ಲಸಿಕಾ ಅಭಿಯಾನದ ಅಂಕಿ-ಅಂಶಗಳನ್ನು ಪ್ರಪಂಚದ ಎಲ್ಲಾ ದೇಶಗಳ ಪೈಕಿ ಕೊನೆಯ ನಾಲ್ಕನೆಯವರಾಗಿ ಪೂರ್ಣಗೊಳಿಸಿದ ಅವರ ಸರ್ಕಾರದ ಪೋಲಿಯೊ ಲಸಿಕಾ ಅಭಿಯಾನದ ಜೊತೆ ಹೋಲಿಕೆ ಮಾಡಿ, ಕೇಂದ್ರ ಸರ್ಕಾರದ ಹಾಗೆಯೇ ಪ್ರಧಾನಿಯವರ ನಿಂದನೆ ಮಾಡುವುದೊಂದೇ ತಮ್ಮ ಉದ್ದೇಶ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿ ರಾಜಕೀಯ ಪ್ರಬುದ್ಧತೆಯನ್ನು ದೂರ ತಳ್ಳಿದ್ದಾರೆ. ಶತಮಾನದಲ್ಲೇ ಪ್ರಥಮವಾಗಿ ನಾವು ಎದುರಿಸುತ್ತಿರುವ ಕೊರೊನಾ ಸಂಕ್ರಮಣದಂತಹ ಸ್ಥಿತಿಯಲ್ಲೂ ಪ್ರತಿಪಕ್ಷಗಳು ಕೇವಲ ಆಡಳಿತ ಸರ್ಕಾರವನ್ನೇ ದೂರುವ ಕೆಳಸ್ತರದ ರಾಜಕೀಯದಿಂದ ಮೇಲೇಳಲಾಗದೆ ಇರುವುದು ಶೋಚನೀಯ. ಇತ್ತೀಚೆಗೆ ಬೆಳಕಿಗೆ ಬಂದಿರುವ ಅರವಿಂದ್ ಕೇಜ್ರಿವಾಲ್ ಅವರ ದ್ವಾರ ಅಗತ್ಯಕ್ಕಿಂತ ನಾಲ್ಕು ಪಟ್ಟು ಆಕ್ಸಿಜನ್ ಅನ್ನು ಕೇಂದ್ರದಿಂದ ಪಡೆಯಲಾಗಿರುವ, ಅದರ ಪರಿಣಾಮ ಉಳಿದೆಡೆ ಆಕ್ಸಿಜನ್ ಹಾಹಾಕಾರಕ್ಕೆ ಕಾರಣವಾಗಿರುವ ವಿಚಾರವು ದೇಶವಾಸಿಗಳ ಜೀವದೆಡೆಗೆ ಅವರ ಕಾಳಜಿ, ಸಂವೇದನಾಶೀಲತೆ ಯಾವ ಹಂತವನ್ನು ತಲುಪಿದೆಯೆಂಬುದನ್ನು ಪ್ರದರ್ಶಿಸುತ್ತದೆ.
ಪ್ರಧಾನಿ ಮೋದಿಯವರು ಲಸಿಕಾ ಅಭಿಯಾನದ ಪ್ರಕ್ರಿಯೆಯ ಮಾಹಿತಿಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ತಜ್ಞರು ಕಳೆದ 6 ದಿನಗಳಲ್ಲಿ ನೀಡಲಾಗಿರುವ 3.77 ಕೋಟಿ ಡೋಸ್ ಗಳ ಸಂಖ್ಯೆಯು ಮಲೇಷಿಯಾ, ಸೌದಿ ಅರೇಬಿಯಾ ಮತ್ತು ಕೆನಡಾ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಿದೆ ಎಂದು ತಿಳಿಸಿದ್ದಾರೆ. ನ್ಯೂಜಿಲೆಂಡ್ ನಂತಹ ಕೇವಲ 48 ಲಕ್ಷ ಜನಸಂಖ್ಯೆಯ ರಾಷ್ಟ್ರದ ಲಸಿಕಾ ಅಭಿಯಾನದ ವೇಗದ ಶೇಕಡವಾರು ಪ್ರಮಾಣದೊಂದಿಗೆ ಭಾರತದಂತಹ 135 ಕೋಟಿ ಜನಸಂಖ್ಯೆಯ ರಾಷ್ಟ್ರವನ್ನು ಹೋಲಿಕೆ ಮಾಡಿ ಕೆಲವು ಅಜ್ಞಾನಿಗಳು ನ್ಯೂಜಿಲೆಂಡ್ ಸರ್ಕಾರವನ್ನು ನಮಗೆ ಮಾರ್ಗದರ್ಶಿಸುವಂತೆ ಟ್ವೀಟ್ ಮಾಡಿ ತಮ್ಮ ಅವಿವೇಕದ ಪರಾಕಾಷ್ಠತೆಯನ್ನು ಪ್ರದರ್ಶಿಸಿದ್ದರು. ಈಗ ಭಾರತವು ಒಂದೇ ದಿನದಲ್ಲಿ ನ್ಯೂಜಿಲೆಂಡ್ ನ ಜನಸಂಖ್ಯೆಯ ಎರಡು ಪಟ್ಟು ಜನಸಂಖ್ಯೆಗೆ ಲಸಿಕೆ ನೀಡಿರುವುದು ಅವರ ನಿಜವಾದ ಮುಖವನ್ನು ದೇಶದ ಮುಂದೆ ಬಹಿರಂಗ ಪಡಿಸಿದೆ.
ಪಾಶ್ಚಿಮಾತ್ಯ ಮಾಧ್ಯಮಗಳಿಗೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಬಗೆಗಿರುವ ದ್ವೇಷವು ಮತ್ತೆ ಮತ್ತೆ ಬಹಿರಂಗವಾಗುತ್ತಲೇ ಇದೆ. ಅವರ ಡಬಲ್ ಸ್ಟ್ಯಾಂಡರ್ಡ್ಸ್, ಅಜೆಂಡಾ ಎಲ್ಲವೂ ಸಹ ಜಗಜ್ಜಾಹೀರಾಗಿದ್ದರೂ ಯಾವುದೇ ಸಂಕೋಚವಿಲ್ಲದೆ ಸಜ್ಜನಿಕೆಯ ಮುಖವಾಡವನ್ನು ಧರಿಸಿ ಪ್ರಪಂಚಕ್ಕೆ ಭೋದನೆ ಮಾಡಲು ನಿಂತುಬಿಡುತ್ತಾರೆ. ವರ್ಣಭೇದ ನೀತಿ ಪ್ರಸ್ತುತವಿದ್ದಂತಹ ಕಾಲದಲ್ಲಿ ಹೇಗೆ ಅವರು ದೇವರು ಬಿಳಿಯರಿಗೆ ಕರಿಯರ ಉದ್ಧಾರ ಮಾಡುವ ಹೊಣೆಗಾರಿಕೆಯನ್ನು ನೀಡಿದ್ದಾರೆಂದು ಹೇಳಿಕೊಂಡು ಶೋಷಣೆ ನಡೆಸುತ್ತಿದ್ದರೊ, ಆ ರೀತಿಯ ಮಾನಸಿಕತೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂಬುದು ಕಂಡು ಬರುತ್ತದೆ. ಈಗಲೂ ತಮಗೆ ಮಾತ್ರ ಜಗತ್ತಿಗೆಲ್ಲಾ ಭೋದಿಸಲು, ಮಾರ್ಗದರ್ಶಿಸಲು ಅಧಿಕಾರವಿರುವುದು ಎಂಬ ಭ್ರಮೆಯಲ್ಲಿದ್ದಾರೆ. ತಮ್ಮನ್ನು ತಾವು ಮುಂದುವರೆಯುತ್ತಿರುವ ರಾಷ್ಟ್ರಗಳು ಎಂದು ಕರೆದುಕೊಳ್ಳುವ ಈ ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕತೆಯಲ್ಲಿ ಮಾತ್ರ ಮುಂದಿದ್ದು, ಉಳಿದ ಎಲ್ಲಾ ಆದರ್ಶದ ಉದಾರತೆಗಳಲ್ಲಿ ಹಿಂದಿದ್ದರೆ ಹಿಂದುವರೆಯುತ್ತಿರುವ ರಾಷ್ಟ್ರಗಳು ಎಂದು ಕರೆಯಬೇಕಾಗುತ್ತದೆ.
ನಮ್ಮ ದೇಶವು ಕೊರೊನಾದ 2ನೆ ಅಲೆಯ ಗರಿಷ್ಠ ಹಂತವನ್ನು ತಲುಪಿದ್ದಂತಹ ಸಮಯದಲ್ಲಿ ಯಾವ ರೀತಿ ಮಾನವೀಯತೆಯಿಂದ, ಸಂವೇದನಾಶೀಲತೆಯಿಂದ ವರ್ತಿಸಬೇಕು ಎಂಬುದರ ಬಗ್ಗೆ ಅರಿಯದ ಇವರು ತಮ್ಮ ಪ್ರಮುಖ ಪತ್ರಿಕೆ, ಮ್ಯಾಗಜಿನ್( ಬಿಬಿಸಿ, ನ್ಯೂಯಾರ್ಕ್ ಟೈಮ್ಸ್ )ಗಳಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಅತಿ ದುಃಖದಾಯಕ ಸಾಮೂಹಿಕ ಅಂತ್ಯ ಸಂಸ್ಕಾರದ ಭಾವಚಿತ್ರಗಳನ್ನು ತಮ್ಮ ಮುಂದಿನ ಕವರ್ ಪೇಜ್ ಗಳಲ್ಲಿ ಹಾಕಿ ಪ್ರಕಟಿಸಿದರು. ಅಂತ್ಯ ಸಂಸ್ಕಾರಗಳು ನಡೆಯುತ್ತಿದ್ದ ಸ್ಥಳಗಳಿಗೆ ತಲುಪಿ ಮೃತರ ಪರಿವಾರದವರ ಆ ಅತೀವ ನೋವಿನ ಸ್ಥಿತಿಯಲ್ಲೂ ಅವರಿಗೆ ಪ್ರಶ್ನೆಗಳನ್ನು ಕೇಳಿ, ಆಡಳಿತ ಸರ್ಕಾರವನ್ನು ನಿಂದಿಸುವಂತೆ ಪ್ರಚೋದಿಸಿದರು. ಹಿಂದೂ ಅಂತ್ಯ ಸಂಸ್ಕಾರ ಪದ್ಧತಿಯ ಬಗೆಗೆ ಪಾಶ್ಚಿಮಾತ್ಯ ದೇಶಗಳಲ್ಲಿರುವ ಕುತೂಹಲ, ಉತ್ಸುಕತೆಯ ಲಾಭ ಪಡೆಯಲು ಈ ರೀತಿಯ ಶವಸಂಸ್ಕಾರದ ಚಿತ್ರಗಳನ್ನು ಹೆಚ್ಚು ಹೆಚ್ಚು ಬೆಲೆಗೆ ಮಾರಾಟ ಮಾಡಿ, ಅದನ್ನು ಒಂದು ಅಪಹಾಸ್ಯದ ವಿಷಯವನ್ನಾಗಿ ಮಾಡಿದರು. ಬೇರೆ ದೇಶದ ದುಃಖದ ಬಗೆಗೆ ಇಷ್ಟೊಂದು ಮಾಹಿತಿಯನ್ನು ಪ್ರಕಟಿಸಿದ ಇವರು, ತಮ್ಮ ದೇಶದ ಬಗೆಗಿನ ಈ ರೀತಿಯ ದುಃಖದ ಮಾಹಿತಿಯನ್ನು ಅದರ ಸಂಬಂಧಿತ ಪರಿವಾರಗಳು ನೊಂದುಕೊಳ್ಳುವುದರಿಂದ ಪ್ರಕಟಿಸುವುದಿಲ್ಲ ಎನ್ನುತ್ತಾರೆ. ಹಾಗಾದರೆ ಇವರ ಪ್ರಕಾರ ಭಾರತ ದೇಶದ ಪರಿವಾರಗಳಿಗೆ ದುಃಖವಾಗುವುದಿಲ್ಲವೇ!? ಒಸಾಮಾ ಬಿನ್ ಲಾಡೆನ್ ನಿಂದಾದ ಭೀಕರ ದಾಳಿಯಲ್ಲಿ ಜೀವ ತೆತ್ತ 3000ಕ್ಕೂ ಹೆಚ್ಚು ಅಮೆರಿಕನ್ನರ ಶವಸಂಸ್ಕಾರದ ಚಿತ್ರವನ್ನಾಗಲಿ ಅಥವಾ ಅದರ ಸಂಬಂಧಿತ ಚಿತ್ರವನ್ನಾಗಲಿ ಏಕೆ ಬಿಡುಗಡೆ ಮಾಡಲಿಲ್ಲ? ಅಷ್ಟೇ ಅಲ್ಲ, ತಮ್ಮ ರಾಷ್ಟ್ರಕ್ಕಾಗಿ ಬಲಿದಾನವಾದ ಹುತಾತ್ಮ ಸೈನಿಕರ ಚಿತ್ರವನ್ನೂ ಸಹ ಬಿಡುಗಡೆ ಮಾಡುವುದಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಇತರೆ ದೇಶಗಳ ಸಂಕಷ್ಟಗಳನ್ನು ಅದ್ಧೂರಿಯಾಗಿ ಚಿತ್ರಿಸಿ ಪ್ರಕಟಿಸುವ, ತಮ್ಮಲ್ಲೇ ಇರುವ ದೊಡ್ಡ ಸಂಕಷ್ಟಗಳನ್ನು ಮರೆಮಾಚುವ ಕಾರ್ಯ ಅನ್ಯಾಯವಾದುದು. ನಮ್ಮ ದೇಶವು 2ನೆ ಅಲೆಯಲ್ಲಿ ತೀವ್ರ ಸಂಕಷ್ಟವನ್ನು ಅನುಭವಿಸಿದ್ದು ಸತ್ಯ. ಆದರೆ, ಸರ್ಕಾರ ಹಾಗೂ ಎಲ್ಲಾ ಕೊರೊನಾ ವಾರಿಯರ್ಸ್ಗಳು ಸಂಪೂರ್ಣ ಶ್ರಮ ಹಾಕಿ ಪಾಶ್ಚಾತ್ಯ ದೇಶಗಳಲ್ಲಾದಂತೆ ಪರಿಸ್ಥಿತಿ ಕೈ ಮೀರುವಂತಹ ಸಂದರ್ಭವನ್ನು ತಡೆದರು. ಹೌದು, ಈ ಚೀನಾ ವೈರಸ್ ನ ಹಾವಳಿಯಲ್ಲಿ ಪಾಶ್ಚಾತ್ಯ ದೇಶಗಳು ಹಾಗೂ ಇನ್ನಿತರ ಅಭಿವೃದ್ಧಿ ದೇಶಗಳಲ್ಲಿ ಕಂಡು ಬಂದ ಕೊರೊನಾ ಸಾವು-ನೋವುಗಳ ಪರಿಣಾಮವನ್ನು ಜನಸಂಖ್ಯೆಯ ಅನುಪಾತಕ್ಕನುಗುಣವಾಗಿ ನೋಡಿದರೆ, ನಮ್ಮ ರಾಷ್ಟ್ರಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಂಕಟಗಳು ಅಲ್ಲಿ ಸೃಷ್ಟಿಯಾಗಿತ್ತು. ಯೂರೋಪ್ ಮತ್ತು ಉತ್ತರ ಅಮೆರಿಕಾಗಳು ಅಂದರೆ ಒಟ್ಟು 87 ದೇಶಗಳು, 134 ಕೋಟಿ ಜನಸಂಖ್ಯೆಯ ಕೊರೊನಾ ಸಮಸ್ಯೆಯನ್ನು 87 ಪ್ರಧಾನಿಗಳು ನಿರ್ವಹಿಸುತ್ತಿದ್ದರೂ, ಭಾರತವೆಂಬ ಒಂದೇ ಒಂದು ರಾಷ್ಟ್ರದ 135 ಕೋಟಿ ಜನಸಂಖ್ಯೆಯನ್ನು ನಮ್ಮ ಒಬ್ಬ ಪ್ರಧಾನಿ ಮೋದಿಯವರ ಸಮರ್ಥ ನಿರ್ವಹಣೆಯ ಮುಂದೆ ಯಶಸ್ವಿಯಾಗಿಸಲು ಸಾಧ್ಯವಾಗಲಿಲ್ಲ. ಆದರೆ, ಭಾರತೀಯರಲ್ಲಿರುವ ಸಂಸ್ಕಾರವು ಪಾಶ್ಚಿಮಾತ್ಯರಂತೆ ಅನ್ಯ ದೇಶದ ಸಾವುಗಳನ್ನು ವೈಭವೀಕರಿಸದೆ, ಮಾನವೀಯತೆಯನ್ನು ಮೆರೆಯುವುದರಿಂದ ಅವರ ಸಂಕಷ್ಟಗಳನ್ನು ನಾವೆಂದೂ ಅಪಹಾಸ್ಯ ಮಾಡಲಿಲ್ಲ. ಆದರೆ, ಅದರರ್ಥ ನಮ್ಮ ಅಪಹಾಸ್ಯವನ್ನು ನೋಡಿಕೊಂಡು ಸುಮ್ಮನೆ ಕುಳಿತಿರುತ್ತೇವೆ ಎಂದಲ್ಲ. ಇವರ ಜೊತೆಗೆ ಕೈ ಜೋಡಿಸಿ ಶರೀರದಿಂದ ಮಾತ್ರ ಹಿಂದುಸ್ಥಾನಿಗಳಾಗಿ, ಮನಸ್ಸಿನಿಂದ ಪಾಶ್ಚಿಮಾತ್ಯರಾಗಿರುವ ಕೆಲವರು ಭಾರತೀಯರ ರಕ್ಷಣೆಗಾಗಿ ಸರ್ಕಾರಗಳು ಆಕ್ಸಿಜನ್ ವೆಂಟಿಲೇಟರ್ಗಳ ತಯಾರಿಕೆಯನ್ನು ಹೆಚ್ಚಿಸಿ ಹಾಗೂ ಸೇನಾ ಹೆಲಿಕಾಪ್ಟರ್ ಗಳ ಮೂಲಕ ಆಮದನ್ನು ಹೆಚ್ಚಿಸಿ ಮಾಡಿದ ಪ್ರಯತ್ನವನ್ನು ಕಂಡೂ ಕಾಣದಂತೆ ನಟಿಸಿ, ಭಾರತದಲ್ಲಿ ಮನುಷ್ಯತ್ವದ ವಿರುದ್ಧ ನಡೆಯುತ್ತಿರುವ ಅಪರಾಧವನ್ನು ಕಾಣುತ್ತಿದ್ದೇವೆ ಎಂಬ ಲೇಖನಗಳನ್ನು ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದರು ಹಾಗೂ ಐಸಿಯುಗಳಿಗೆ ತೆರಳಿ ನೇರದೃಶ್ಯಾವಳಿಗಳನ್ನು ತೋರ್ಪಡಿಸುವ ಅಮಾನವೀಯ ಕೃತ್ಯವನ್ನು ಮಾಡಿದರು. ಈ ರೀತಿಯ ಭಾರತೀಯರು, ಯಾರು ಭಾರತದಲ್ಲಿದ್ದು ಭಾರತದ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಳ್ಳಲಾಗಿಲ್ಲವೊ ಅಂತಹ ಕೃತಘ್ನರನ್ನು ನಿರ್ಮಿಸಿದ ಸಂಪೂರ್ಣ ಶ್ರೇಯಸ್ಸು ಭಾರತದ ಧರ್ಮದ ಗಟ್ಟಿಯ ಬೇರಿಗೆ ಬ್ರಿಟಿಷ್ ಶಿಕ್ಷಣ ಪದ್ಧತಿ ಎಂಬ ಹರಿತವಾದ ಕೊಡಲಿಯನ್ನು ಪ್ರಯೋಗಿಸಿದ ಬ್ರಿಟಿಷ್ ಆಕ್ರಮಣಕಾರರಿಗೆ ಸಲ್ಲುತ್ತದೆ.
ಇಂಗ್ಲೆಂಡ್ ಸರ್ಕಾರವು ಸರಿ ಸುಮಾರು 4 ಕೋಟಿ ಜನರಿಗೆ ಲಸಿಕೆ ನೀಡಲು 6 ತಿಂಗಳುಗಳ ಕಾಲ ಸಮಯ ತೆಗೆದುಕೊಂಡರೆ, ಭಾರತ ಸರ್ಕಾರವು ಕೇವಲ 6 ದಿನಗಳ ಸಮಯವನ್ನು ಮಾತ್ರ ತೆಗೆದುಕೊಂಡಿದೆ. ತಮ್ಮದೇ ದೊಡ್ಡ ವೈಫಲ್ಯವಿದ್ದಾಗ್ಯು ಭಾರತಕ್ಕಾಗಿ ವೈಫಲ್ಯವನ್ನು ಚಿತ್ರಿಸುತ್ತಿದ್ದ ಬಿಬಿಸಿ, ನ್ಯೂಯಾರ್ಕ್ ಟೈಮ್ಸ್ ಮಾಧ್ಯಮಗಳು ಈಗ ಭಾರತವು ಮಾಡಿರುವ ಸಾಧನೆಯನ್ನು ತಮ್ಮ ಪತ್ರಿಕೆಯ ಮುಂದಿನ ಪುಟದಲ್ಲಿ ಪ್ರಕಟಿಸುವುದೇ? ಒಂದೋ ಇವರಿಗೆಲ್ಲಾ ಭಾರತದ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಅಥವಾ ಭಾರತದ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಂಡಿರುವುದರಿಂದಲೇ ಅಸುರಕ್ಷಿತರಾಗಿ ಈ ರೀತಿ ಮಾಡುತ್ತಿರಬಹುದು. ಲೌಕಿಕತೆಯ ಆಧಾರದ ಮೇಲೆ ಜೀವನ ನಡೆಸುತ್ತಿರುವ ಪಾಶ್ಚಾತ್ಯರು ಅದರ ತದ್ವಿರುದ್ಧವಾದ ಭಾರತದ ಅಲೌಕಿಕತೆಯ ಆದರ್ಶವನ್ನು ಅರ್ಥ ಮಾಡಿಕೊಳ್ಳಬಲ್ಲರೇ? ಈ ಅರ್ಥ ಮಾಡಿಸುವ ಕಾರ್ಯವನ್ನು ಭಾರತೀಯರು ಕೈಗೆತ್ತಿಕೊಳ್ಳಲೇಬೇಕಿದೆ. ಈ ಪ್ರಪಂಚದಲ್ಲಿ ಹೀಗೆ ಮಾನವರ ಸ್ವಾರ್ಥ, ಆಮಿಷ, ದುರಾಸೆಗಳು ಹೆಚ್ಚುತ್ತಾ ಹೋದರೆ ಭವಿಷ್ಯದಲ್ಲಿ ಯಾವ ರೀತಿಯ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದೆಂದು ಕೊರೊನಾದ ಮುನ್ನುಡಿಯೇ ಅರ್ಥಮಾಡಿಸುತ್ತಿದೆ. ಪಾಶ್ಚಿಮಾತ್ಯ, ಅರೇಬಿಕ್ ಸಂಸ್ಕೃತಿಗಳಂತೆ ಪ್ರತ್ಯೇಕತಾವಾದವನ್ನು ಹೊಂದಿರದ ಎಲ್ಲರನ್ನೂ ಸಹಿಸಿಕೊಳ್ಳುವುದು ಮಾತ್ರವಲ್ಲದೆ ಸ್ವೀಕಾರವನ್ನೂ ಮಾಡುವ ಸಮಸ್ತ ಮಾನವ ಜನಾಂಗದ ಕಲ್ಯಾಣವನ್ನು ಸಾಧಿಸಲು ಭಾರತದಲ್ಲಿರುವ ಉದಾರ ಹಿಂದೂ ಧರ್ಮ-ಸಂಸ್ಕೃತಿಯ ಆಚರಣೆಯಿಂದ ಮಾತ್ರ ಸಾಧ್ಯ. ಆಧ್ಯಾತ್ಮಿಕವಾಗಿ ದೇವರ ದೇವ ಮಹಾದೇವನು ಹೇಗೆ ಸಮಸ್ತ ಜೀವಿಗಳ ಅಪೂರ್ಣತಾ ಅಯೋಗ್ಯತೆಗಳನ್ನು ಸಂಹಾರ ಮಾಡಿ ಅಂತ್ಯದಲ್ಲಿ ಪರಿಪೂರ್ಣತೆಯ ಯೋಗ್ಯತೆಯ ಮುಕ್ತಿಯನ್ನು ಪ್ರಧಾನಿಸಿ ನಮ್ಮ ಉದ್ಧಾರ ಮಾಡುವನೊ, ಹಾಗೆ ಭೌತಿಕವಾಗಿ ಕ್ರೋಧ, ದ್ವೇಷ, ಮದ, ಮಾತ್ಸರ್ಯ, ಅಹಂಕಾರದಂತಹ ನಕಾರಾತ್ಮಕತೆಗಳನ್ನು ಸಂಹಾರ ಮಾಡಿ ಜಗತ್ತಿನ ಉದ್ಧಾರ ಮಾಡುವ ಕ್ಷಾತ್ರತೇಜ ದೈವೀಗುಣಗಳ ಕ್ಷಮತೆ ಇರುವುದು ನಮ್ಮ ಭಾರತ ದೇಶದ ಸಂಸ್ಕೃತಿಗೆ ಮಾತ್ರ.
~ಸಿಂಚನ. ಎಂ.ಕೆ ಮಂಡ್ಯ
Comments
Post a Comment