ಕೊರೊನಾದ ಎರಡನೆ ಅಲೆಯನ್ನು ಧೈರ್ಯವಾಗಿ ಎದುರಿಸು ಭಾರತ
ಕೊರೊನಾದ ಎರಡನೆ ಅಲೆಯನ್ನು ಧೈರ್ಯವಾಗಿ ಎದುರಿಸು ಭಾರತ
ಚೀನಾದಿಂದ ಉದ್ಭವಗೊಂಡು ಪ್ರಪಂಚದಾದ್ಯಂತ ತಲ್ಲಣ ಎಬ್ಬಿಸಿ, ಮಾನವ ಕುಲಕ್ಕೇ ಸವಾಲು ಹಾಕಿರುವ ಕಣ್ಣಿಗೆ ಕಾಣದ ಕೊರೊನಾ ವೈರಸ್ ಇದೀಗ ನಮ್ಮ ಭಾರತದಲ್ಲಿ ಎರಡನೆ ಅಲೆಯಾಗಿ ತೀವ್ರತರದಲ್ಲಿ ಅಪ್ಪಳಿಸಿದೆ. ಪ್ರತಿನಿತ್ಯ ಮೂರು ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಹಾಗೆಯೇ ಎರಡು ಸಾವಿರಕ್ಕಿಂತಲೂ ಹೆಚ್ಚು ಜನರ ಸಾವಿನ ಸಂಖ್ಯೆಯು ಕೂಡ ದಾಖಲಾಗುತ್ತಿವೆ. ಇನ್ನು ನಮ್ಮ ರಾಜ್ಯದಲ್ಲಿನ ಕೊರೊನಾದ ಅಂಕಿ ಅಂಶಗಳನ್ನು ಗಮನಿಸಿದರೆ, ದಿನಕ್ಕೆ ಮೂವತ್ತು ಸಾವಿರಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ಹಾಗೂ ಇನ್ನೂರಕ್ಕಿಂತ ಹೆಚ್ಚು ಸಾವಿನ ಪ್ರಕರಣಗಳು ಕಂಡು ಬರುತ್ತಿದೆ. ಭಾರತದ ಜನಸಂಖ್ಯೆ ಬೆಳೆದಿರುವ ವೇಗಕ್ಕೆ ಅನುಭವಿಸಬೇಕಾದ ಸಂಕಷ್ಟಗಳು ಹೇಗಿರುತ್ತವೆ ಎಂಬುದು ಈ ಸಂಕಷ್ಟದ ಸಂದರ್ಭದಲ್ಲಿ ಎಲ್ಲರ ಅರಿವಿಗೂ ಬಂದಿದೆ. ಎಲ್ಲಾ ಕಡೆಗಳಲ್ಲೂ ಆರೋಗ್ಯ ಸಂಬಂಧಿತ ಕ್ಷೇತ್ರದ ಅವಶ್ಯಕತೆಗಳು ಹೆಚ್ಚಾಗುತ್ತಲೇ ಇದೆ. ಮೊದಲನೆ ಅಲೆಯಲ್ಲಿ ಬಹಳ ಜವಾಬ್ದಾರಿಯಿಂದ, ಜಾಗರೂಕತೆಯಿಂದ ಹೋರಾಡಿ ಕೊರೊನಾ ವಿರುದ್ಧ ಯಶಸ್ಸನ್ನು ಗಳಿಸಿದ ಭಾರತ ಎರಡನೆ ಅಲೆಗೆ ಸೋತು ಹೋಯಿತೆ? ಜಗತ್ತಿನೆಲ್ಲೆಡೆ ಕೊರೊನಾ ಮಾಯವಾಗಿ ಆಯಾ ದೇಶಗಳು ಸುಭದ್ರವಾಗಿ ಬಿಟ್ಟಿದೆ, ಭಾರತದಲ್ಲಿ ಮಾತ್ರ ಕೊರೊನಾದ ರಣಕೇಕೆ ಅಬ್ಬರಿಸುತ್ತಿದೆ ಎಂಬ ನಕಾರಾತ್ಮಕ ಸುದ್ದಿಯನ್ನೇ ಹರಡುತ್ತಾ ಎಲ್ಲೆಡೆ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ದೇಶದ ಒಳಗಿನ ಶತ್ರುಗಳನ್ನು ಎದುರಿಸುವುದು ಕೊರೊನಾವನ್ನು ಎದುರಿಸುವುದಕ್ಕಿಂತ ಕಷ್ಟಕರವಾಗುತ್ತಿದೆಯಾ? ಬನ್ನಿ ವಿಶ್ಲೇಷಿಸೋಣ.
ಗಟ್ಟಿಗರಾದ ಭಾರತೀಯರನ್ನು ಶಸ್ತ್ರದಲ್ಲಾಗಲಿ, ಶಾಸ್ತ್ರದಲ್ಲಾಗಲಿ ಪರಾಭವಗೊಳಿಸಲು ಸಾಧ್ಯವೇ ಇಲ್ಲ ಎಂಬುದನ್ನರಿತ ಬ್ರಿಟಿಷರು ಭಾರತೀಯರಿಗೆ ಇಂತಹ ಅಗಾಧ ಶಕ್ತಿ ನೀಡಿರುವ ಧರ್ಮದ ಬೇರನ್ನೇ ಅಲುಗಾಡಿಸಿ ಅದನ್ನು ಮಿಥ್ಯವೆಂದು ಸಾಬೀತುಪಡಿಸಿ ಬೌದ್ಧಿಕ ದಾಸ್ಯ ಮನೋಭಾವ ಮೂಡಿಸಲು ಆರಂಭಿಸಿದ ವೈಚಾರಿಕ ಸಂಗ್ರಾಮವು ಬುದ್ಧಿಜೀವಿಗಳು, ಕಮ್ಯುನಿಸ್ಟ್ ಜೀವಿಗಳು ಹಾಗೂ ಸೆಕ್ಯುಲರ್ ಜೀವಿಗಳ ಮೂಲಕ ಮುಂದುವರಿಯುತ್ತಲೇ ಬಂದಿದೆ. ಇವರೆಲ್ಲಾ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳು ಒಂದೇ ಎರಡೇ? ದೇಶದ ಈ ಸಂಕಷ್ಟದ ಸಂಧರ್ಭದಲ್ಲೂ ಕನಿಷ್ಟ ಮಾನವೀಯತೆಯಿಂದಲೂ ನಡೆದುಕೊಳ್ಳಲಾಗದ ಸ್ಥಿತಿಗೆ ಇವರೆಲ್ಲ ತಲುಪಿದ್ದಾರಾ? ಪ್ರಮುಖವಾಗಿ ಟ್ವಿಟ್ಟರ್ ನಂತಹ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ತಮ್ಮ ತಾಯಿ ಅಥವಾ ತಂದೆ ಅಥವಾ ಮತ್ತ್ಯಾರೊ ಹತ್ತಿರದ ಸಂಬಂಧಿಯೊಬ್ಬರು ಕೋವಿಡ್ ನಿಂದಾಗಿ ಇಂದು ತೀರಿಕೊಂಡರು. ವ್ಯವಸ್ಥೆ ಗೆದ್ದಿತು, ಆದರೆ ನಮ್ಮವರನ್ನು ಬಲಿಪಡೆಯಿತು ಎಂಬ ಅರ್ಥದಲ್ಲಿ ಟ್ಟೀಟ್ ಮಾಡುತ್ತಾರೆ. ಅದನ್ನೇ 50ಕ್ಕೂ ಹೆಚ್ಚು ಜನ ಕಾಪಿ ಪೇಸ್ಟ್ ಮಾಡಿ ಟ್ಟೀಟ್ ಮಾಡುತ್ತಾರೆ. ಎಷ್ಟು ಧೈರ್ಯವಾಗಿ ಸುಳ್ಳು ಸುದ್ದಿಗಳನ್ನು ಶೇರ್ ಮಾಡುತ್ತಿದ್ದಾರೆ! ಹಾಗೆಯೇ ಮಹಿಳೆಯರು ಋತುಸ್ರಾವದ ಮುಂಚಿನ ಮತ್ತು ನಂತರದ ಐದು ದಿನಗಳ ಕಾಲ ಲಸಿಕೆ ಪಡೆದುಕೊಳ್ಳಬಾರದೆಂದು ಹಬ್ಬಿಸಿದ ವೈರಲ್ ಸುದ್ದಿಯೂ ಕೂಡ ಮಿಥ್ಯವಾದುದೆಂದು ಪಿಐಬಿನೇ ಟ್ಟೀಟ್ ಮಾಡಿ ತಿಳಿಸಿತು. ಮತ್ತೆ ಮುಖ್ಯವಾಗಿ ಕೊರೊನಾ ವಾರಿಯರ್ಸ್ ಎಂದು ಕರೆಯಲ್ಪಡುವ ಎಲ್ಲಾ ಆರೋಗ್ಯಕ್ಷೇತ್ರದ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದ ಇನ್ಶುರೆನ್ಸ್ (ವಿಮೆ) ಅನ್ನು ರದ್ದುಗೊಳಿಸಲಾಗುವುದು ಎಂಬುದಾಗಿ ಕೂಡ ಸುಳ್ಳು ಸುದ್ದಿಯನ್ನು ಹರಡಿಸಿ ಆತಂಕವನ್ನು ಸೃಷ್ಟಿಸಿದರು. ವೈರ್ ಪತ್ರಿಕೆಯವರು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ರಾಮ ಚರಿತ ಮಾನಸವನ್ನು ಓದಿದರೆ ಕೊರೊನಾ ಗುಣವಾಗುವುದಾಗಿ ಹೇಳಿದ್ದಾರೆಂದು ಮತ್ತೊಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಶಶಿತರೂರ್ ಅವರು ಸುಮಿತ್ರಾ ಮಹಾಜನ್ ಅವರು ತೀರಿಕೊಂಡಿದ್ದಾರೆಂದು ಟ್ವೀಟ್ ಮಾಡಿ ಸ್ವತಃ ಸುಮಿತ್ರಾ ಮಹಾಜನ್ ಅವರಿಂದಲೇ ಅಪಮಾನಕ್ಕೊಳಗಾದರು. ಕಮ್ಯುನಿಸ್ಟ್ ನಾಯಕಿ ಕವಿತಾ ಕೃಷ್ಣನ್ ಅವರು ದೆಹಲಿಯಲ್ಲಿ ಆಮ್ಲಜನಕದ ಕೊರತೆಯಿಂದ ಎಲ್ಲಾ ತುರ್ತು ಘಟಕಗಳು ಮುಚ್ಚಲ್ಪಟ್ಟಿದೆ ಎಂಬ ಆತಂಕದ ಸುಳ್ಳು ಸುದ್ದಿಯನ್ನೇ ಹಬ್ಬಿಸಿದ್ದರಿಂದ ಆಸ್ಪತ್ರೆಯವರೆ ಪ್ರತಿಕ್ರಿಯಿಸಿ ಇದು ಸುಳ್ಳೆಂದು ಸ್ಪಷ್ಟೀಕರಿಸಿದರು. ಎನ್ಡಿಟಿವಿ ಮಾಧ್ಯಮದವರು ಪತಂಜಲಿ ಘಟಕದಲ್ಲಿ 83 ಜನರಿಗೆ ಕೊರೊನಾ ಸೋಂಕು ಹರಡಿದೆ ಎಂದು ವರದಿ ಮಾಡಿದ್ದರು. ಮಾರ್ಚ್ 11ರಂದೇ ಆರಂಭಗೊಂಡಿದ್ದ ಕುಂಭಮೇಳ ಆಚರಣೆಯಿಂದಲೇ ಎರಡನೆ ಅಲೆ ತೀವ್ರವಾಗಿ ಹರಡಿತು ಎಂದು ತಮ್ಮ ಹಿಂದೂ ಸಂಸ್ಕೃತಿಯ ಬಗೆಗಿನ ದ್ವೇಷವನ್ನು ಸದಾ ಪ್ರದರ್ಶಿಸುವಂತೆ ಅತಿರೇಕವಾಗಿಯೇ ಹಲವಾರು ನೇತಾಗಳು, ಬುದ್ಧಿಜೀವಿಗಳು ವರ್ತಿಸಿದರು. ಪ್ರಧಾನಿಯವರ ಒಂದೇ ಒಂದು ಮಾತಿಗೆ ಬೆಲೆ ಕೊಟ್ಟ ನಮ್ಮ ಸಾಧು ಸಂತರು ಶಾಂತವಾಗಿ ಎಲ್ಲವನ್ನು ಮುಕ್ತಾಯಗೊಳಿಸಿದರು. ಎರಡನೆ ಅಲೆಗೆ ಕುಂಭಮೇಳವೇ ಕಾರಣವಾಗಿದ್ದರೆ ಉತ್ತರಾಖಂಡ ರಾಜ್ಯವು ಕನಿಷ್ಟ ಕೊರೊನಾ ಸೋಂಕಿತರ ಟಾಪ್ 10 ಪಟ್ಟಿಯಲ್ಲೂ ಏಕೆ ಬಂದಿಲ್ಲ? ಈ ರೀತಿಯ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಇಂತಹವರೆಲ್ಲ ನಡೆದುಕೊಳ್ಳುತ್ತಿರುವ ಪರಿಯನ್ನು ನೋಡಿದರೆ ಇವರು ಈ ದೇಶದ ನಾಗರಿಕರೊ ಅಥವಾ ಬೇರೆ ದೇಶದ್ದೊ ಎಂದೆನಿಸುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಆಮ್ಲಜನಕದ ಕೊರತೆಯನ್ನು ನಿವಾರಿಸಲು ಸುಳ್ಳು ಸುದ್ದಿಗಳನ್ನು ಹರಡುವವರ ಸಂಪತ್ತನ್ನು ವಶಪಡಿಸಿಕೊಂಡು ಬಳಸಿಕೊಳ್ಳಲಾಗುವುದು ಎಂದು ಎಚ್ಚರಿಸಿರುವುದು ಅನ್ಯ ರಾಜ್ಯಗಳಿಗೂ ಮಾದರಿಯಾಗಬೇಕು. ಪ್ರಜಾಪ್ರಭುತ್ವದ ಸಂವಿಧಾನವು ನೀಡಿರುವ ಹಕ್ಕುಗಳು ಎಂದಿಗೂ ದುರುಪಯೋಗವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
ಕೊರೊನಾ ಸೋಂಕಿತರ ಹಾಗೂ ಮೃತರ ಸಂಖ್ಯೆಯನ್ನು ಟಿ.ವಿಯಲ್ಲಿ ನೋಡುವಾಗ ಅದು ಕೇವಲ ಅಂಕಿಯಷ್ಟೆ. ಆದರೆ ಆ ಸಂಖ್ಯೆಯಲ್ಲಿ ನಮ್ಮ ಹತ್ತಿರದವರು ಒಬ್ಬರಾಗಿದ್ದರೆ, ಆಗ ಅದರ ಗಂಭೀರತೆಯ ಅರಿವು ನಮಗಾಗುವುದು. ಆಮ್ಲಜನಕ ಅಗತ್ಯವಿರುವ ಸೋಂಕಿತರಿಗೆ ಸಕಾಲಕ್ಕೆ ದೊರೆಯದಿರುವುದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಿದರೂ ಬೆಡ್ ಗಳು ಸಿಗದಿರುವುದು, ಐಸಿಯುಗಳು ಸಿಗದೆ ರೋಗಿಗಳು ಪರದಾಡುತ್ತಿರುವುದು ಹೀಗೆ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳನ್ನು ತನ್ನ ಎರಡನೆ ಅಲೆಯಲ್ಲಿ ಹೊತ್ತು ತಂದಿದೆ ಕೊರೊನಾ. ಆದರೆ ಏಕೆ ಮತ್ತು ಹೇಗೆ ಈ ಸಮಸ್ಯೆಗಳು ಹುಟ್ಟಿಕೊಂಡಿತು? ನುರಿತ ವೈದ್ಯರು, ಆರೋಗ್ಯ ತಜ್ಞರು ಅಥವಾ ಕೊರೊನಾ ವಾಸ್ತವವನ್ನು ಪರಿಶೀಲಿಸಿರುವ ಪ್ರಜ್ಞಾವಂತರು ಹೇಳುತ್ತಿರುವ ಪ್ರಕಾರ ಯಾವುದೇ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ತಿಳಿದ ಕೂಡಲೆ ಆಸ್ಪತ್ರೆಗೆ ಹೋಗಿ ಪ್ರವೇಶ ಪಡೆಯಬೇಕಾದ ಅವಶ್ಯಕತೆ ಇಲ್ಲ. ಸೋಂಕಿತ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳು ಕಂಡುಬರುತ್ತಿಲ್ಲವೆಂದರೆ ಅವರು ಮನೆಯಲ್ಲೇ ತಮ್ಮನ್ನು ಐಸೊಲೇಟ್ ಮಾಡಿಕೊಂಡು, ವೈದ್ಯರ ಮೂಲಕ ಫೋನ್ ನಲ್ಲೇ ಆರೋಗ್ಯ ಸಲಹೆಗಳನ್ನು ಪಡೆದು ಗುಣಪಡಿಸಿ ಕೊಳ್ಳಬಹುದು. ಹಾಗೆಯೇ ಸಾಮಾನ್ಯ ರೋಗಲಕ್ಷಣಗಳಿರುವವರೂ ಕೂಡ. ಆದರೆ ಯಾರಿಗೆ ಹೆಚ್ಚು ಉಸಿರಾಟದ ಸಮಸ್ಯೆಯಂತಹ ಗಂಭೀರ ಸ್ಥಿತಿ ತಲುಪುತ್ತಿದ್ದೇವೆ ಎಂದೆನಿಸುವುದೊ, ಅಂತಹವರಿಗೆ ಮಾತ್ರ ಆಕ್ಸಿಜನ್, ವೆಂಟಿಲೇಟರ್ ಅಥವಾ ಐಸಿಯುಗಳ ಅವಶ್ಯಕತೆ ಕಂಡು ಬರುತ್ತದೆ. ಇಂತಹ ಪ್ರಕರಣಗಳು ನೂರಕ್ಕೆ ಕೇವಲ ಒಂದು ಅಥವಾ ಎರಡು ಮಾತ್ರ ಆಗಿರುತ್ತದೆ. ಇನ್ನುಳಿದಂತೆ ಶೇ.98ರಷ್ಟು ಸೋಂಕಿತರನ್ನು ಮನೆಯಲ್ಲೇ ಗುಣಪಡಿಸಿಕೊಳ್ಳಬಹುದಾಗಿದ್ದರೂ ಗಾಬರಿಯಿಂದ ಆಸ್ಪತ್ರೆಗಳಿಗೆ ಧಾವಿಸುತ್ತಿರುವ ಕಾರಣದಿಂದ ಅತ್ಯವಶ್ಯಕವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಶೇ.2ರಷ್ಟು ಸೋಂಕಿತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಇದರ ಜೊತೆಗೆ ಕೆಲವು ರಾಜ್ಯ ಸರ್ಕಾರಗಳ ( ದೆಹಲಿ, ಮಹಾರಾಷ್ಟ್ರ) ಮುಖ್ಯಮಂತ್ರಿಗಳು ಪ್ರಧಾನಮಂತ್ರಿಯವರು ಪಿಎಮ್ ಕೇರ್ಸ್ ನಿಂದ 8 ರಿಂದ 10ಆಕ್ಸಿಜನ್ ಪ್ಲ್ಯಾಂಟ್ ಗಳ ನಿರ್ಮಣಕ್ಕಾಗಿ ಜನವರಿಯಲ್ಲೇ ಧನಸಂದಾಯ ಮಾಡಿದ್ದರೂ ಇದುವರೆಗೆ ಕೇವಲ ಒಂದನ್ನು ಮಾತ್ರವೇ ನಿರ್ಮಿಸಿದ್ದಾರೆ. ಅದರಲ್ಲೂ ದೆಹಲಿ ಮುಖ್ಯಮಂತ್ರಿಗಳು ತಮ್ಮ ಆಡಳಿತಾವಧಿಯ 6 ವರ್ಷಗಳಲ್ಲಿ ಒಂದೂ ಸಹ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿಲ್ಲ, ಆದರೆ 150 ಕೋಟಿ ಖರ್ಚು ಮಾಡಿ ಜಾಹಿರಾತುಗಳನ್ನು ಮಾಡಿದ್ದಾರೆ. ಅದರ ಭಯಾನಕ ಪರಿಣಾಮವನ್ನು ಅಲ್ಲಿನ ಜನತೆ ಎದುರಿಸುತ್ತಿದ್ದಾರೆ. ಹಾಗೆಯೇ ಕೊರೊನಾ ಚಿಕಿತ್ಸೆಗಾಗಿ ಬಳಸುವ ರೆಮಿಡಿಸಿವರ್ ಇಂಜೆಕ್ಷನ್ ಸೇರಿದಂತೆ ವಿವಿಧ ಲಸಿಕೆ ಮತ್ತು ಮಾತ್ರೆಗಳನ್ನು ಕೂಡ ಕಳ್ಳಸಾಗಾಣಿಕೆ ಮಾಡಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ವೈದ್ಯರ ಹೊರತು ಬೇರೆ ಯಾರಿಂದಲೋ ಔಷಧಿಗಳನ್ನು ಪಡೆದುಕೊಂಡರೇ ಎಂದಾದರೂ ನಮಗೆ ಮಾರಕವಾಗುವುದು ಎಂಬುವುದು ನೆನಪಿರಲಿ. ಜನರು ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ. ಆದರೆ ಯಾರಿಗೂ ಈ ಸತ್ಯವನ್ನು ತಿಳಿಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿಲ್ಲ, ಅದರಲ್ಲೂ ಅವಶ್ಯಕವಾಗಿ ಮಾಡಬೇಕಾದ ಮಾಧ್ಯಮಗಳಿಗೆ. ಯಾರೋ ಮೋದಿ ವಿರೋಧಿಗಳು ತಮ್ಮ ರಾಜಕೀಯ ಲಾಭಕ್ಕಾಗಿಯೋ, ಸ್ವಾರ್ಥಹಿತಾಸಕ್ತಿಗಾಗಿಯೋ ಮೋದಿಯಂತಹ ಶ್ರೇಷ್ಠ ಪ್ರಧಾನಮಂತ್ರಿಯನ್ನು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ನಿಂದಿಸುತ್ತಿದ್ದರೆ ಅದರಿಂದ ಪ್ರಭಾವಿತರಾಗಿ ಹಲವರು ಅದನ್ನು ಶೇರ್ ಮಾಡಿ ಕಮೆಂಟ್ ಮಾಡಲು ನಿಂತುಬಿಡುತ್ತಾರೆ. ಹೀಗೆ ವಾಟ್ಸಾಪ್ ಯೂನಿವರ್ಸಿಟಿ, ಟ್ಟಿಟ್ಟರ್ ಯೂನಿವರ್ಸಿಟಿಗಳಲ್ಲಿ ಸಕ್ರಿಯವಾಗಿ ದೇಶದ ತುಂಬಾ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರು ಈ ಸಂಕಷ್ಟದ ಸ್ಥಿತಿಯಲ್ಲಿ ದೇಶಕ್ಕೆ ಏನಾದರೂ ಸಹಾಯ ಮಾಡಿದ್ದಾರಾ ಎಂದು ಪ್ರಶ್ನಿಸಬೇಕಿದೆ.
ಏನೇ ಇರಲಿ ಕೊರೊನಾ ಎರಡನೆ ಅಲೆ ಇಷ್ಟೊಂದು ವ್ಯಾಪಕವಾಗಲು ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಕಾರಣರಾಗಿದ್ದೇವೆ. ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿ ಮೋದಿಯವರೆ ಎಂಬುದರಿಂದ ಹಿಡಿದು ಪ್ರತಿಯೊಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕೂಡ ಮೋದಿಯವರೇ ಎಂಬಂತೆ ಎಲ್ಲದಕ್ಕೂ ಮೋದಿಯವರನ್ನೇ ಜನಸಾಮಾನ್ಯರು ನಿಂದಿಸುವಂತೆ ಷಡ್ಯಂತರ ರೂಪಿಸಿರುವ ಒಳಶತ್ರುಗಳ ಬಗ್ಗೆ ಜಾಗೃತಿ ವಹಿಸಬೇಕು. ವಿರೋಧ ಪಕ್ಷದಲ್ಲಿದ್ದರೆ ಆಡಳಿತ ಸರ್ಕಾರದ ಎಲ್ಲ ನೀತಿಗಳನ್ನು ವಿರೋಧಿಸಬೇಕು ಎಂಬ ಹೊಸ ಸಿದ್ಧಾಂತವನ್ನು ಸೃಷ್ಟಿಸುತ್ತಿರುವ ರಾಹುಲ್ ಗಾಂಧಿಯವರನ್ನು ಒಳಗೊಂಡಂತೆ ಹಲವಾರು ಪ್ರತಿಪಕ್ಷದ ನಾಯಕರು ದೇಶದ ಕಠಿಣ ಪರಿಸ್ಥಿತಿಯಲ್ಲೂ ಮೋದಿಯವರನ್ನು ಮತ್ತು ಅವರ ಸರ್ಕಾರವನ್ನು ನಿಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಂದೆಡೆ ಕೋವಿಡ್ ಸೋಂಕಿತರ ಸಂಖ್ಯೆಯನ್ನು ಅಂಕಿಗಳಲ್ಲಿ ನೀಡಿ ಎಷ್ಟೊಂದು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಜನರಲ್ಲಿ ಭಯ ಮೂಡಿಸುತ್ತಾರೆ ಮತ್ತು ಇನ್ನೊಂದೆಡೆ ಕೊರೊನಾ ಲಸಿಕೆ ಪಡೆದಿರುವವರ ಸಂಖ್ಯೆಯನ್ನು ಶೇಕಡವಾರು ಪ್ರಮಾಣದಲ್ಲಿ ನೀಡಿ ಎಷ್ಟು ಕಡಿಮೆ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸುತ್ತಾ ಆತಂಕವನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ಇವರೆಲ್ಲ ಸಕಾರಾತ್ಮಕವಾಗಿ ಹೇಳಬೇಕಾದ ವಿಚಾರವನ್ನು ನಕಾರಾತ್ಮಕವಾಗಿ ಹೇಳುವ, ನಕಾರಾತ್ಮಕವಾಗಿ ಹೇಳಬೇಕಾದ ವಿಚಾರವನ್ನು ಸಕಾರಾತ್ಮಕವಾಗಿ ಹೇಳುವ ಕಲೆಯಲ್ಲಿ ನಿಸ್ಸೀಮರಾಗಿಬಿಟ್ಟಿದ್ದಾರೆ. ಭಾರತದ ಜನಸಂಖ್ಯೆಗೆ ಅನುಗುಣವಾಗಿ ವಿಮರ್ಶಿಸಿ ನೋಡಿದರೆ, ಈಗ ಎರಡನೆ ಅಲೆಯಲ್ಲಿ ದಾಖಲಾಗುತ್ತಿರುವ ಪಾಸಿಟಿವ್ ಸಂಖ್ಯೆಗಳು ಶೇ.0.1ರಿಂದ 0.2ರ ನಡುವಿನಲ್ಲೇ ಬರುತ್ತಿದೆ. ಹಾಗೆ ಭಾರತವು ಕಡಿಮೆ ಅವಧಿಯಲ್ಲಿ ಶೇ.1ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಇನ್ನು ಕೊರೊನಾ ನಿರ್ಮೂಲನೆಗೆ ರಾಮಬಾಣ ಎಂದರೆ ಲಸಿಕೆ ಮಾತ್ರ.
ಲಸಿಕೆಯನ್ನು ಎಷ್ಟು ಜನರಿಗೆ ನೀಡಲಾಗಿದೆ ಎಂಬುದಕ್ಕಿಂತ ಪ್ರಮುಖವಾದ ಸಂಗತಿಯೇನೆಂದರೆ ಭಾರತವು ಆತ್ಮನಿರ್ಭರವಾಗಿ ತನ್ನ ರಾಷ್ಟ್ರಕ್ಕೆ ತಾನೇ ಲಸಿಕೆಯನ್ನು ತಯಾರಿಸಿದೆ ಹಾಗೂ ಇದರ ಪರಿಣಾಮ ಆರ್ಥಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಲಸಿಕೆಯ ಖರೀದಿಯಾಗಬೇಕಿದ್ದ ದೊಡ್ಡ ಮಾರುಕಟ್ಟೆ ಬಂದ್ ಆಗಿದೆ. ಭವಿಷ್ಯದಲ್ಲಿ ಭಾರತ ಮತ್ತಷ್ಟು ಬೆಳೆದು ಈ ಶ್ರೀಮಂತ ರಾಷ್ಟ್ರಗಳನ್ನು ಮೀರಿ ಸಾಧನೆ ಮಾಡಬಹುದೆಂಬ ಭಯ, ಮತ್ಸರಗಳು ಹುಟ್ಟುಕೊಂಡಿದೆ. ಇತ್ತೀಚೆಗೆ ಅಮೆರಿಕಾ ತೋರಿದ ವರ್ತನೆಯಿಂದ ಇದು ಬಹಿರಂಗವಾಗಿದೆ. ಭಾರತಕ್ಕೆ ರಫ್ತು ಮಾಡಬೇಕಿದ್ದ ಲಸಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಬಂದ್ ಮಾಡಿ, ನಂತರ ಅಜಿತ್ ದೋವಲ್ ಅವರ ಹಸ್ತಕ್ಷೇಪದ ಜೊತೆಗೆ ಭಾರತೀಯರ ವ್ಯಾಪಕ ಟೀಕೆಗೆ ಮಣಿದು ಒಪ್ಪಿಕೊಂಡಿದೆ. ನಮ್ಮ ದೇಶವು ಅಮೆರಿಕಾ ಸಂಕಷ್ಟದಲ್ಲಿದ್ದಾಗ ಹೈಡ್ರಾಕ್ಸಿಕ್ಲೋರಿನ್ ಅನ್ನು ಅಗಾಧಪ್ರಮಾಣದಲ್ಲಿ ಪೂರೈಸಿತ್ತು. ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ನಮ್ಮ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯಾವ ಕಮಲಾಹ್ಯಾರಿಸ್ ಎಂಬಾಕೆ ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷರಾದರೊ ಅವರು ಭಾರತೀಯ ಮೂಲದವರೆಂದು ನಾವೆಲ್ಲ ಸಂಭ್ರಮಿಸಿದೆವೊ, ಅವರಿಗೆ ಭಾರತದ ಬಗ್ಗೆ ಎಷ್ಟು ಅಭಿಮಾನ ಗೌರವವಿದೆ ಎಂಬುದು ಈಗ ತಿಳಿಯಿತು. ನಾವಾದರೊ 'ವಸುದೈವ ಕುಟುಂಬಕಂ' ಎಂಬ ಆದರ್ಶವನ್ನು ಪಾಲಿಸುವ ವಿಶಾಲ ಹೃದಯದವರು. ಅಮೆರಿಕಾದವರು ನಮಗೆ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರೂ ಅಲ್ಲ, ನಮಗೆ ನಮ್ಮ ಹಿತವೊಂದೇ ಶಾಶ್ವತ ಎಂಬಂತಹ ಸಂಕುಚಿತ ಬುದ್ಧಿಯವರು. ಸಿಂಗಪುರ್, ಇಸ್ರೇಲ್, ಇಂಗ್ಲೆಂಡ್ ಫ್ರಾನ್ಸ್, ರಷ್ಯಾ, ಜರ್ಮನಿ, ಡೆನ್ಮಾರ್ಕ್, ಯುಎಇ ರಾಷ್ಟ್ರಗಳು ಆಕ್ಸಿಜನ್ ಪ್ಲ್ಯಾಂಟ್ ಗಳನ್ನು ರವಾನಿಸುವುದಾಗಿ ಭರವಸೆ ನೀಡಿವೆ.
ಎಲ್ಲಕ್ಕಿಂತ ದೌರ್ಭಾಗ್ಯದ ಸಂಗತಿಯೆಂದರೆ ನಮ್ಮ ದೇಶವು ಪ್ರಪಂಚದ ಎಲ್ಲಾ ದೇಶಗಳಿಗಿಂತ ಕನಿಷ್ಟ ಬೆಲೆಗೆ ಲಸಿಕೆಯ ದರ ನಿಗದಿಪಡಿಸಿದೆ. ಲಸಿಕೆಯ ಶೇ.50ರಷ್ಟು ದರವನ್ನು ಕೇಂದ್ರಸರ್ಕಾರವೇ ಭರಿಸಿದೆ. ಉಳಿದ ಶೇ.50ರಷ್ಟು ದರವನ್ನು ರಾಜ್ಯಸರ್ಕಾರಗಳು ನಿರ್ಧರಿಸಬೇಕಿದೆ. ಅದಾಗಲೇ ನಮ್ಮ ರಾಜ್ಯವನ್ನೂ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿವೆ. ಇಷ್ಟೆಲ್ಲಾ ಸುವಿಧತೆಗಳನ್ನು ಮಾಡಿದರೂ ಕೂಡ ಲಸಿಕೆಯ ನೆಪದಲ್ಲಿ ಸರ್ಕಾರ ಹಣ ದೋಚುತ್ತಿದೆ ಎಂಬಂತೆಲ್ಲ ಪ್ರಚಾರ ಮಾಡುತ್ತಾ ತಮ್ಮ ಕೆಳಮಟ್ಟದ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿರುವ ಜಾಣಕಿವುಡರಿಗೆ ಏನೆನ್ನಬೇಕೊ ತಿಳಿಯದು. ಪ್ರಪಂಚದಲ್ಲಿ ಶ್ರೀಮಂತ ದೇಶಗಳೆಂದು ಗರ್ವ ಪಡುವ ಅಮೆರಿಕಾ, ಚೀನಾ ರಾಷ್ಟ್ರಗಳು ಹೆಚ್ಚಾಗಿ ಬೇರೆ ರಾಷ್ಟ್ರಗಳಿಗೆ ಲಸಿಕೆಯನ್ನು ರವಾನಿಸದೆ ಅಗತ್ಯಕ್ಕಿಂತ ಹೆಚ್ಚಾಗಿ ಶೇಖರಿಸಿಕೊಂಡಿದೆ. ಆದರೆ ವಿಶ್ವಗುರು ಭಾರತ ಮಾತ್ರ ವಿಶ್ವದ ಹಲವಾರು ರಾಷ್ಟ್ರಗಳಿಗೆ 60 ಮಿಲಿಯನ್ ಡೋಸ್ ಗಿಂತಲೂ ಅಧಿಕ ಪ್ರಮಾಣದ ಲಸಿಕೆಯನ್ನು ತಲುಪಿಸುವ ಮೂಲಕ ವ್ಯಾಕ್ಸಿನ್ ಮೈತ್ರಿ ಸಾಧಿಸಿದೆ.
ವಾಸ್ತವ ಸತ್ಯ ಏನೆಂದರೆ ಭಾರತದ ಜನಸಂಖ್ಯೆಗೆ ಕೊರೊನಾದ ಮೊದಲ ಅಲೆಯಲ್ಲಿ ಕಂಡ ಸೋಂಕಿತರ ಪ್ರಕರಣಗಳು ಏನೇನು ಅಲ್ಲ. ಮೊದಲ ಇನ್ನಿಂಗ್ಸ್ ನಲ್ಲಿ ತುಂಬಾ ಅಲರ್ಟ್ ಆಗಿದ್ದು ಉತ್ತಮ ಆಟವನ್ನು ಪ್ರದರ್ಶಿಸಿದೆವು. ಆದರೆ ಅನ್ಯ ರಾಷ್ಟ್ರಗಳ ಸ್ಥಿತಿ ಹಾಗಾಗಿರಲಿಲ್ಲ. ಅವುಗಳೆಲ್ಲ ಅದಾಗಲೆ ನಾವು ಈಗ ಅನುಭವಿಸುತ್ತಿರುವ ಸಂಕಟಕ್ಕಿಂತ ಹೆಚ್ಚಿನದ್ದನ್ನು ಅನುಭವಿಸಿವೆ. ಆದರೆ ಅಲ್ಲಿ ನಮ್ಮ ದೇಶದಂತೆ ತನ್ನ ದೇಶದ ವಿರುದ್ಧವೇ ನಿರಂತರವಾಗಿ ಮಾತನಾಡುವ, ಬರೆಯುವ ಸ್ವಾತಂತ್ರ್ಯದ ದುರುಪಯೋಗ ಕಂಡುಬರುವುದಿಲ್ಲ. ನಮ್ಮ ದೇಶದ ಒಳಶತ್ರುಗಳಂತು ಎಷ್ಟು ನಿರಾಯಾಸವಾಗಿ ದೊಡ್ಡ ದೊಡ್ಡ ಸ್ಥಾನದಲ್ಲಿ ಕುಳಿತು ನಮ್ಮ ದೇಶಕ್ಕೆ ಕಳಂಕವಾಗಿದ್ದಾರೆ. ಪ್ರತಿನಿತ್ಯ ಇವರು ನಮ್ಮ ಭಾರತವನ್ನೇ ನಿಂದಿಸುತ್ತಿದ್ದರೂ ಎಂದಿಗೂ ಇವರು ಈ ದೇಶವನ್ನು ಬಿಟ್ಟು ಹೋಗುವುದಿಲ್ಲ. ಭಾರತ ಇವರಿಗೆ ಸ್ವರ್ಗದ ಹಾಗೆ ಆಗಿಬಿಟ್ಟಿದೆ. ಇಂತಹವರನ್ನೆಲ್ಲ ಪೋಷಿಸುವುದು ಎಂದಿಗೂ ಅಪಾಯಕಾರಿ, ಕ್ಯಾನ್ಸರ್ ನಂತೆ ಇವರು ಮಾರಕವಾಗಿ ಜನರ ಬುದ್ಧಿಯನ್ನು ಭ್ರಷ್ಟಗೊಳಿಸುತ್ತಾ ಬರುತ್ತಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಲೇಬೇಕು, ಆಗ ಮಾತ್ರ ಭಾರತ ಮತ್ತಷ್ಟು ಶಕ್ತಿಶಾಲಿಯಾಗಿ ಬೆಳೆಯಲು ಸಾಧ್ಯ. ಪ್ರತಿಯೊಂದು ವಿಚಾರದಲ್ಲೂ ಮೋದಿ, ಅಡಾಣಿ, ಅಂಬಾನಿ, ಆರ್ ಎಸ್ ಎಸ್, ರಾಮಮಂದಿರ, ಸ್ಟಾಚ್ಯು ಆಫ್ ಯೂನಿಟಿಯನ್ನು ಮಧ್ಯಕ್ಕೆ ತಂದು ಅದನ್ನು ನಿಂದಿಸುವ ಕಾರ್ಯ ಮಾಡುತ್ತಾರೆ. ಅವುಗಳೆಲ್ಲ ನಮ್ಮ ಭಾರತದ ಸ್ವಾಭಿಮಾನದ, ಗೌರವದ, ಶ್ರೇಷ್ಠತೆಯ ಪ್ರತೀಕ. ಆದರೆ ಇವರೆಲ್ಲ ಯಾವಾಗಲೂ ಈ ಶ್ರೇಷ್ಠತೆಗಳನ್ನು ಕೆಳಮಟ್ಟದಲ್ಲಿ ತೋರಿಸಲು ಹಾತೊರೆಯುತ್ತಿರುತ್ತಾರೆ ಎಂದರೆ ಏನರ್ಥ, ಇವರು ನಮ್ಮ ತಾಯ್ನಾಡಿನ ಮೂಲಭೂತ ಅಸ್ತಿತ್ವಕ್ಕೇ ಸವಾಲೆಸೆಯುತ್ತಿದ್ದಾರೆ ಎಂದೇ ಅಲ್ಲವೆ? ಇಂತಹವರ ಕಾರ್ಯ ಸ್ಥಗಿತಗೊಳ್ಳಬೇಕಾದರೆ ದೇಶಭಕ್ತರ, ಧರ್ಮರಕ್ಷಕರ ಕಾರ್ಯ ಅಧಿಕವಾಗಲೇಬೇಕು. ಸಜ್ಜನರ ನಿಷ್ಕೃತ್ಯ ದುರ್ಜನರ ದುಷ್ಕೃತ್ಯಕ್ಕಿಂತಲೂ ದೊಡ್ಡ ಅಪರಾಧ ಎಂಬುದನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕು.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment