ಪ್ರಾಮಾಣಿಕ ಅಧಿಕಾರಿಗಳ ಹಣೆಬರಹ ನಿಂದನೆ, ಆಪಾದನೆ, ವರ್ಗಾವಣೆ!

ಪ್ರಾಮಾಣಿಕ ಅಧಿಕಾರಿಗಳ ಹಣೆಬರಹ ನಿಂದನೆ, ಆಪಾದನೆ, ವರ್ಗಾವಣೆ!

ದಕ್ಷ ಅಧಿಕಾರಿ, ಪ್ರಾಮಾಣಿಕ ಅಧಿಕಾರಿ, ದಿಟ್ಟ ಅಧಿಕಾರಿ ಎಂಬಂತಹ ಧೈರ್ಯವಂತಿಕೆಯ ಬಿರುದುಗಳನ್ನು ಸ್ವತಃ ಜನರಿಂದಲೇ ಪಡೆದುಕೊಂಡಿರುವ ರೋಹಿಣಿ ಸಿಂಧುರಿ ಅವರ ಜನಸ್ನೇಹಿ ಕಾರ್ಯಗಳು ಯಾವುವು? ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುವ ಈ ದಿಟ್ಟ ಮಹಿಳೆಯ ಸಾಮರ್ಥ್ಯವನ್ನು ಪರಿಚಯಿಸುವ ಅವರ ಕಾರ್ಯಶೈಲಿ ಹೇಗಿದೆ? ಸಿನೆಮಾ ಸೆಲೆಬ್ರಿಟಿಗಳು, ರಾಜಕಾರಣಿಗಳನ್ನೇ ಮೀರಿಸುವಂತೆ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಅವರ ಪ್ರಸಿದ್ಧಿ ಎಂತಹದ್ದು? ಯಾವುದೇ ಕ್ಷಣದಲ್ಲಿ ಬೇಕಿದ್ದರೂ ತಮ್ಮ ಟೇಬಲ್ ಮೇಲೆ ವರ್ಗಾವಣೆ ಪತ್ರ ಬಂದು ಬೀಳುವಷ್ಟರ ಮಟ್ಟಿಗೆ ವೃತ್ತಿಪರತೆಯಲ್ಲಿ ಪರಾಕಾಷ್ಠತೆಯನ್ನು ತಲುಪಿರುವ ಅವರ ಕಾರ್ಯದಕ್ಷತೆ ಎಷ್ಟು ಪ್ರಖರ? ತಮ್ಮ ವರ್ಚಸ್ಸನ್ನು ಕುಗ್ಗಿಸಲು ಹರಸಾಹಸ ಪಡುತ್ತಾ ಮಿಥ್ಯ ಆಪಾದನೆ, ನಿಂದನೆಗಳನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ತಮ್ಮ ಕಲ್ಯಾಣಕಾರಿ ಕಾರ್ಯಗಳ ಮೂಲಕವೇ ಸ್ಪಷ್ಟ ಉತ್ತರ ನೀಡುವ ಇವರ ಆತ್ಮಬಲದ ಹಿಂದಿನ ರಹಸ್ಯವೇನು? ಅವರ ಇತಿಹಾಸದ ಯಶೋಗಾಥೆಯ ಮೂಲಕವೇ ವಿಶ್ಲೇಷಿಸೋಣ ಬನ್ನಿ. 

8 ತಿಂಗಳ ಹಿಂದೆಯಷ್ಟೆ ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ರೋಹಿಣಿ ಸಿಂಧುರಿ ಅವರ ಮೇಲೆ 7 ತಿಂಗಳುಗಳಿಂದ ಯಾವುದೇ ರೀತಿಯ ಆಪಾದನೆ, ಆರೋಪಗಳು ಕೇಳಿ ಬರದೇ ಇದ್ದದ್ದು ಕಳೆದ 1 ತಿಂಗಳಿಂದ ಧಿಡೀರನೆ ಎಲ್ಲಾ ಪಕ್ಷದವರಿಂದಲೂ ಹಾಗೆಯೇ ಮುಖ್ಯವಾಗಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್ ಅವರಿಂದಲೂ ಕೇಳಿ ಬಂದಿದೆ. ಶಿಲ್ಪಾನಾಗ್ ಅವರು ರೋಹಿಣಿ ಅವರ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಹೊರಿಸಿ ರಾಜೀನಾಮೆ ಸಹ ನೀಡಿದ್ದರು. ಒಬ್ಬ ಜನಸ್ನೇಹಿ ಅಧಿಕಾರಿಯ ವಿರುದ್ಧ ಹಲವಾರು ಶಾಸಕರು, ಅಧಿಕಾರಿಗಳು, ಸಂಸದರು ಒಗ್ಗೂಡಿದ್ದಾರೆಂದರೆ ಅದರ ತಾತ್ಪರ್ಯ ಏನು ಎಂಬುದು ನಿಮಗೇ ಅರ್ಥವಾಗುತ್ತದೆ. ಒಟ್ಟಿನಲ್ಲಿ ಈಗ ಮೈಸೂರು ಡಿಸಿ ಸ್ಥಾನದಿಂದ ವರ್ಗಾವಣೆ ಮಾಡಿ ರೋಹಿಣಿ ಅವರನ್ನು  ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ನೇಮಕ ಮಾಡಿ, ಶಿಲ್ಪಾನಾಗ್ ಅವರನ್ನು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಇ-ಗವರ್ನೆನ್ಸ್ ನ ನಿರ್ದೇಶಕರನ್ನಾಗಿ ವರ್ಗಾಯಿಸಿ ಇಬ್ಬರು ಐಎಎಸ್ ಅಧಿಕಾರಿಗಳ ಪ್ರತಿಷ್ಠೆಯ ಕದನಕ್ಕೆ ತೆರೆ ಎಳೆಯಲಾಗಿದೆ.

ಮೂಲತಃ ಆಂಧ್ರಪ್ರದೇಶದವರಾದ ರೋಹಿಣಿ ಅವರು ಚಿಕ್ಕಂದಿನಿಂದಲೇ ಶಿಸ್ತು, ಆಧ್ಯಾತ್ಮಿಕತಾ ಬುನಾದಿಯ ಸುಭದ್ರ ಶಿಕ್ಷಣ ಪಡೆದರು. ಅವರೇ ಹೇಳುವಂತೆ ಈ ಶಕ್ತಿಯೇ ಅವರ ಭವಿಷ್ಯ ಹೀಗೆ ಉಜ್ವಲವಾಗಿ ಬೆಳಗಲು ಸಹಕಾರಿಯಾಗಿದೆ. ಕೆಮಿಕಲ್ ಇಂಜಿನಿಯರಿಂಗ್ ಕೋರ್ಸ್ ಮಾಡಿದರೂ ತನ್ನ ದಾರಿ ಬೇರೆಯೇ ಎಂಬುದನ್ನು ಅರಿತುಕೊಂಡು, ತಮ್ಮ ಸ್ವಂತ ನಿರ್ಧಾರದಿಂದಲೇ ನಾಗರಿಕ ಸೇವಾ ವಿಭಾಗದ ಪರೀಕ್ಷೆಯನ್ನು ಬರೆಯುತ್ತಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 43ನೇ ರಾಂಕ್ ಪಡೆದು ಯಶಸ್ವಿಯಾಗುತ್ತಾರೆ. ತುಮಕೂರಿನ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಳ್ಳುವ ಇವರು ತಮ್ಮ ಮಿಂಚಿನ ಕಾರ್ಯಶೈಲಿಯಿಂದ ಮುನ್ಸಿಪಾಲಿಟಿ ಕಮಿಷನರ್ ಆಗಿ ನೇಮಕಗೊಳ್ಳುತ್ತಾರೆ. ತುಮಕೂರಿನ ಪ್ರಮುಖ ರಸ್ತೆಯಾದ ಎಮ್.ಜಿ ರಸ್ತೆಗಳ ಅಗಲೀಕರಣವನ್ನು ಮಾಡುತ್ತಾರೆ. ಹಾಗೆಯೇ ತೆರಿಗೆ ಸಂಗ್ರಹ, ಆಸ್ತಿ ವಿವರಗಳಿಗೆ ಸಂಬಂಧಿಸಿದ ಅಪ್ಲಿಕೇಶನ್ ಅನ್ನು ಜಾರಿಗೊಳಿಸಿ ಕಂಪ್ಯೂಟರೀಕರಣಗೊಳಿಸುತ್ತಾರೆ. ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆಗಾಗಿ ಸರ್ಕಾರವು ನೀಡಿದ್ದ 40 ಎಕರೆ ಭೂಮಿಯ ಬಳಕೆಗೆ ಸ್ಥಳೀಯರಿಂದ ಬಹಳ ವಿರೋಧ ವ್ಯಕ್ತವಾದರೂ, ಕೊನೆಗೆ ಅವರೆಲ್ಲರಿಗೂ ತ್ಯಾಜ್ಯ ವಿಲೇವಾರಿಯ ಅನಿವಾರ್ಯತೆ ಬಗೆಗೆ ತಿಳಿಸಿ ಸೌಜನ್ಯದಿಂದಲೇ ಅರ್ಥೈಸಿ ಆ ಕಾರ್ಯವನ್ನು ಸಾಧಿಸುತ್ತಾರೆ. ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸುತ್ತಾರೆ. ನಂತರ ಅವರು ಮಂಡ್ಯ ಜಿಲ್ಲಾ ಪಂಚಾಯತ್ ನ ಸಿಇಒ ಆಗಿ ನೇಮಕಗೊಳ್ಳುತ್ತಾರೆ. 2014-15ರ ಸ್ವಚ್ಛ ಭಾರತ್ ಮಿಷನ್ ಚಾಲ್ತಿಯಾಗಿದ್ದ ಕಾಲದಲ್ಲಿ ಅತಿ ವೇಗವಾಗಿ ಮಂಡ್ಯ ಜಿಲ್ಲೆಯನ್ನು ಬಯಲು ಮುಕ್ತ ಜಿಲ್ಲೆಯನ್ನಾಗಿಸುವ ಸಂಕಲ್ಪವನ್ನು ಮಾಡುತ್ತಾರೆ. ಒಂದು ವರ್ಷಕ್ಕೆ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡುವ ಪಣ ತೊಟ್ಟು ಕಾರ್ಯ ಸಾಧಿಸುತ್ತಾರೆ. ಇದರ ಪರಿಣಾಮವಾಗಿ ಸ್ವಚ್ಛಭಾರತ ಅಭಿಯಾನದಲ್ಲಿ ಮಂಡ್ಯ ಜಿಲ್ಲೆಯು ಕರ್ನಾಟಕದಲ್ಲೇ ನಂ.1 ಸ್ಥಾನದಲ್ಲಿತ್ತು ಹಾಗೂ ಭಾರತದಲ್ಲಿ 3ನೇ ಸ್ಥಾನದಲ್ಲಿತ್ತು. ದೇಶದೆಲ್ಲೆಡೆ ಇವರ ಕೀರ್ತಿಯನ್ನು ಹೆಚ್ಚಿಸಿದ ಈ ಕಾರ್ಯವು ಈ ವೃತ್ತಿಕ್ಷೇತ್ರದವರಿಗೂ ಒಂದು ಮಹತ್ತರ ಉದಾಹರಣೆಯನ್ನು ಸೃಷ್ಟಿಸಿ ಇವರಿಗೆ ಕೇಂದ್ರ ಸರ್ಕಾರವೇ ಸಮ್ಮಾನ ನೀಡಿ, ಇತರೆ ಎಲ್ಲಾ ಡಿಸಿಗಳಿಗೆ ತರಬೇತಿ ನೀಡುವ ದೊಡ್ಡ ಜವಾಬ್ದಾರಿಯನ್ನೇ ವಿಧಿಸಿತು. ಕೇಂದ್ರದಿಂದ 65 ಕೋಟಿ ಅನುದಾನ ಪಡೆದ ಇವರು 100 ಶುದ್ಧ ಘಟಕಗಳನ್ನು ಸಹ ಸ್ಥಾಪಿಸುವಲ್ಲಿ ಸಫಲರಾಗುತ್ತಾರೆ. ತಿಂಗಳಿಗೆ ಬರೋಬ್ಬರಿ ಶೇ.34ರ ಪ್ರಮಾಣದಲ್ಲಿದ್ದ ಶಿಶು ಮರಣ ದರವನ್ನು ತಗ್ಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಕಬ್ಬಿನ ಬೆಳೆಯನ್ನೇ ಹೆಚ್ಚು ಅವಲಂಬಿಸಿದ್ದರಿಂದ ಒಂದೇ ರೀತಿಯ ಅಧಿಕ ಬೆಳೆಯಾಗಿ ಮಾರುಕಟ್ಟೆಯಲ್ಲಿ ಅದರ ಮೌಲ್ಯ ಕುಸಿದರೆ ರೈತರು ಬೇರೆ ದಾರಿ ಕಾಣದೆ ಅಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇದನ್ನು ತಡೆಗಟ್ಟುವ ಸಲುವಾಗಿ ಬೆಳೆಗಳ ವಿವಿಧೀಕರಣಗಳ ಜೊತೆಗೆ ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆಗಾರಿಕೆಯ ತರಬೇತಿಗಳನ್ನು ರೈತರಿಗೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗುತ್ತಾರೆ.

12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ನಡೆಯಲು ಕೇವಲ 5 ತಿಂಗಳು ಮಾತ್ರವೇ ಸಮಯವಿದ್ದಾಗ ಹಾಸನ ಡಿಸಿಯಾಗಿ ನಿಯುಕ್ತಗೊಂಡ ರೋಹಿಣಿ ಅವರು ಈ ಸವಾಲಿನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. 25,00,000 ಜೈನ ತೀರ್ಥಯಾತ್ರಿಗಳ ನಿರೀಕ್ಷಣೆಯಲ್ಲಿ ಆಯೋಜಿಸಬೇಕಾದ ಹಾಗೂ ಕಠಿಣ ನಿಯಮಗಳನ್ನು ಪಾಲಿಸುವ ಹಲವಾರು ಮುನಿ-ಮಾತಾಗಳಿಗೆ ಹಲವು ದಿನಗಳವರೆಗೆ ಅವರ ಧರ್ಮ, ನಂಬಿಕೆಯನುಸಾರ ತಂಗಲು ಮಾಡಬೇಕಾದ ವ್ಯವಸ್ಥೆಯನ್ನು ಜಾರಿಗೊಳಿಸುತ್ತಾರೆ. ಜೈನ ಧರ್ಮದ ನಿಯಮಗಳು ಹಾಗೂ ಸರ್ಕಾರದ ಆಡಳಿತಾತ್ಮಕ ನಿಯಮಗಳು ಎರಡನ್ನೂ ನಿಭಾಯಿಸಿ ಎಲ್ಲರ ಮನಗೆಲ್ಲುತ್ತಾರೆ. ಮಹಾಮಸ್ತಕಾಭಿಷೇಕವು ಮಹತ್ತರ ಪ್ರಖ್ಯಾತ ಆಚರಣೆಯಾಗಿದ್ದು ಪವಿತ್ರ ಧಾರ್ಮಿಕ ನಂಬಿಕೆಗಳಿಂದ ಕೂಡಿದ್ದರಿಂದ ಆ ಕಾರ್ಯ ವ್ಯವಸ್ಥೆಯ ಜವಾಬ್ದಾರಿಯನ್ನು ನಂಬಿಕೆಯಿಲ್ಲದ ಆದರೆ ಅಲ್ಲಿನ ರಾಜಕಾರಣಿಗಳು ಆಗ್ರಹಿಸುತ್ತಿದ್ದ ಏಜೆನ್ಸಿಯವರಿಗೆ ಕೊಡಲಿಚ್ಛಿಸದೆ, ಅದರ ವಿರುದ್ಧ ಪ್ರತಿಭಟಿಸಿ ಕರ್ನಾಟಕ ಸರ್ಕಾರದ ಬೆಂಬಲವನ್ನು ಪಡೆದು ಉತ್ತಮ ಯೋಗ್ಯ ಏಜೆನ್ಸಿ ಅವರಿಗೆ ಆ ಕಾರ್ಯವನ್ನು ಹಸ್ತಾಂತರಿಸುತ್ತಾರೆ. ಇಷ್ಟೆಲ್ಲಾ ಉತ್ತಮ ಕೆಲಸಗಳನ್ನು ಮಾಡಿದರೂ ಶೀಘ್ರವಾಗಿ ವರ್ಗಾವಣೆ ಮಾಡುತ್ತಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿ ಜಯಗಳಿಸುತ್ತಾರೆ. ನಂತರ ಹಾಸನವು ಶೈಕ್ಷಣಿಕ ಪ್ರಗತಿಯಲ್ಲಿ ಹಿಂದುಳಿದಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 32 ಶೈಕ್ಷಣಿಕ ಜಿಲ್ಲೆಗಳ ಪೈಕಿ 31ನೇ ಸ್ಥಾನದಲ್ಲಿತ್ತು. ಇದರಿಂದ ಬೇಸರಗೊಂಡ ರೋಹಿಣಿ ಅವರು ಶಿಕ್ಷಕರ ತರಬೇತಿ, ರೇಡಿಯೋ ಕಾರ್ಯಕ್ರಮ, ಮುಖ್ಯೋಪಾಧ್ಯಾಯರಿಗೆ ಪತ್ರ ಕಾರ್ಯಕ್ರಮಗಳನ್ನು ನಡೆಸುವ ಸತತ ಪ್ರಯತ್ನದ ಮೂಲಕ ಮುಂದಿನ ವರ್ಷದಲ್ಲಿ 7ನೇ ಸ್ಥಾನಕ್ಕೇರಿಸುತ್ತಾರೆ. ನಂತರ ಅದರ ಮುಂದಿನ ವರ್ಷವೇ 1ನೇ ಸ್ಥಾನಕ್ಕೇರಿಸಿ ಐತಿಹಾಸಿಕ ದಾಖಲೆ ಬರೆಯುತ್ತಾರೆ. ಮೈಸೂರು ಡಿಸಿಯಾದ ನಂತರವೂ ಕೊರೊನಾ ನಿರ್ವಹಣೆ ಯಲ್ಲಿ ಶ್ರಮಿಸಿರುವ ಇವರು ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ಟೆಸ್ಟ್ ನಡೆಸಿರುವ ಹಾಗೂ ಅತಿ ಹೆಚ್ಚು ವ್ಯಾಕ್ಸಿನೇಷನ್ ಮಾಡಿಸಿರುವ ಜಿಲ್ಲೆ ಎಂಬ ಖ್ಯಾತಿಯ ಪಟ್ಟವನ್ನು ಮೈಸೂರಿಗೆ ಗಳಿಸಿಕೊಟ್ಟಿರುತ್ತಾರೆ.  

ಸರ್ಕಾರದ ಆಡಳಿತಾತ್ಮಕ ವಿಭಾಗದ ಅಧಿಕಾರಿಗಳ ಪಟ್ಟಕ್ಕೇರಿದ ಮೇಲೆ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸುವುದೇ ದೊಡ್ಡ ಹೊರೆ ಎಂಬ ಪ್ರತೀತಿ ಇರುವಾಗ, ರೋಹಿಣಿ ಸಿಂಧುರಿ ಅವರಂತಹ ದಕ್ಷ ಅಧಿಕಾರಿಗಳು ಅವುಗಳ ಜೊತೆಗೆ ರಿಸ್ಕ್ ತೆಗೆದುಕೊಂಡು ವಿಭಿನ್ನ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಅವರಿಗೆ ದೊರೆಯುವ ಪಾರಿತೋಷಕಗಳೇನು? ನಿರಂತರ ನಿಂದನೆ, ಆಪಾದನೆ, ವರ್ಗಾವಣೆ! ಈ ರೀತಿಯ ಪ್ರಕ್ರಿಯೆಯಿಂದ ಅವರಿಗೆ ಪೂರಕವಾಗಿ ಆಯಾ ವಿಭಾಗದ ಕಾರ್ಯಗಳನ್ನು ತಿಳಿದುಕೊಳ್ಳಲಾಗಲಿ ಅಥವಾ ಯೋಜನಾಬದ್ಧಗೊಳಿಸಲಾಗಲಿ ಅಥವಾ ಜಾರಿಗೊಳಿಸಲಾಗಲಿ ಸಮಯ ದೊರೆಯುವುದಿಲ್ಲ. ಯಾವುದೇ ಉತ್ತಮ ಕಾರ್ಯವನ್ನು ಮಾಡಲು ಮುಂದೆ ಬಂದರೂ ಹಿಂದೆ ತಳ್ಳಲು ಸಿದ್ಧರಿರುವರು ನೂರಾರು ಜನ. ಪ್ರಾಮಾಣಿಕ ಅಧಿಕಾರಿಗಳಿಗೆ ಅವರ ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲ ಲೋಭಿತರ ಮನ. ದೇಶದ ನಾಗರಿಕರ ಸೇವೆ ಮಾಡಲು ವರ್ಷಗಳ ಕಾಲ ತಪಸ್ಸು ನಡೆಸಿ ಬರುವ ಸಂತಸದೃಶರಿಗೆ ಸೇವಾಭಾಗ್ಯವನ್ನೇ ಕಸಿದುಕೊಳ್ಳುತಲಿಹರು, ಕಣ್ತೆರೆದು ನೋಡಿ ಧೈರ್ಯದಿಂದ ಹೋರಾಡಿದರಷ್ಟೆ ಕಾಣಬಹುದು ನ್ಯಾಯದ ಪರಿಣಾಮ.

~ಸಿಂಚನ. ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ