ವಿದ್ಯಾರ್ಥಿಗಳ ಭವಿಷ್ಯ ಸುಭದ್ರವಾಗಿರಲಿ

ವಿದ್ಯಾರ್ಥಿಗಳ ಭವಿಷ್ಯ ಸುಭದ್ರವಾಗಿರಲಿ
ಯಾರ ನಿಮಂತ್ರಣವೂ ಇಲ್ಲದೆ ಚೀನಾದಿಂದ ರಫ್ತಾಗಿರುವ ಕೊರೊನಾ ವೈರಸ್ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಮಾನವಜನಾಂಗವು ಆಪತ್ತಿನ ಸಂಘರ್ಷವನ್ನು ನಡೆಸಲೇ ಬೇಕಾದ ವಿವಶತೆಯನ್ನು ತಂದೊಡ್ಡಿದೆ. ಮಾನವ ಜೀವನದ ಹಲವಾರು ಕ್ಷೇತ್ರಗಳ ಮೇಲೆ ತನ್ನ ದುಷ್ಪರಿಣಾಮವನ್ನು ಬೀರಿರುವ ಈ ವೈರಸ್ ಸಿರಿವಂತರಿಗೆ ಅಸಹಾಯಕತೆಯನ್ನು ತಂದೊಡ್ಡಿದೆ, ಇನ್ನು ಬಡವರಿಗೆ ಅವರ ದುಡಿಮೆಯ ದ್ವಾರವನ್ನೇ ಮುಚ್ಚಿದೆ. ಇಂತಹ ಅನುಭವಿ ಉದ್ಯೋಗ ಕ್ಷೇತ್ರಗಳ ನಾಗರಿಕರಿಗೇ ಈ ಪರಿಯ ಹೊಡೆತದ ಆಘಾತವಾಗಿದ್ದರೆ, ಇನ್ನು ವಿದ್ಯೆಯನ್ನು ಗಳಿಸುತ್ತಾ ಭವಿಷ್ಯದ ಪ್ರಜ್ವಲ ಕಾರ್ಯಗಳಿಗಾಗಿ ಯೋಜನೆ ರೂಪಿಸುತ್ತಿರುವ ರಾಷ್ಟ್ರದ ಮುಂದಿನ ಆಸ್ತಿಯೇ ಆಗಿರುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ಹೊಡೆತದ ಅನುಭವವಾಗಿರಬಹುದು? ವಿದ್ಯೆಯ ಪ್ರಾಮುಖ್ಯತೆಯನ್ನು ಭಾರತೀಯರಿಗೆ ಭೋದಿಸುವುದು ಎಂದರೆ ಸೂರ್ಯನಿಗೆ ಬೆಳಕನ್ನು ದಾನ ಮಾಡಿದಂತೆ ಎನ್ನಬಹುದು. ಮಾನವ ಜೀವನದ ಎಲ್ಲಾ ಸ್ತರಗಳಲ್ಲೂ ಶ್ರೀಮಂತಿಕೆಯನ್ನು ಸಾಧಿಸಿ ಮಾನವ ಕಲ್ಯಾಣದ ಉತ್ತುಂಗತೆಯನ್ನು ತಲುಪಿದ್ದ ಹಾಗೂ ಈ ಏಲ್ಲಾ ಶ್ರೀಮಂತಿಕೆಗಳ ನಡುವೆ ಭೌತಿಕ ಶ್ರೀಮಂತಿಕೆಯನ್ನು ಮಾತ್ರ ಅರ್ಥೈಸಿಕೊಳ್ಳುವ ಜ್ಞಾನ ಹೊಂದಿದ್ದ ಮತ್ತೊಬ್ಬರ ಧನವನ್ನು ಲೂಟಿ ಮಾಡಿಯೇ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ಪಾಶ್ಚಾತ್ಯರನ್ನು ತನ್ನತ್ತ ಸೆಳೆದ ಭಾರತವು ತನ್ನ ಅತೀವ ಸಾತ್ತ್ವಿಕ ಉದಾರತೆಗೆ ದಂಡ ತೆರಲೇಬೇಕಾಯಿತು.
ನಮ್ಮ ಸಂಪತ್ತಿನ ರಾಶಿಯಿಂದ ಆಕರ್ಷಿತರಾಗಿ ಬಂದ ಆಕ್ರಮಣಕಾರರು ಕೇವಲ ಬಾಹ್ಯ ಪ್ರಪಂಚದ ಸುತ್ತ ಸುತ್ತುವ ಭೋಗದ ವ್ಯಕ್ತಿಗಳೇ ಆಗಿದ್ದರು. ಅಂತಹ ವ್ಯಕ್ತಿತ್ವದವರಿಗೆ ಅವರ ತದ್ವಿರುದ್ಧದ ಈ ಸನಾತನ ಭೂಮಿಯು ಬೆಳೆಸಿರುವ ಆಂತರಿಕ ಪ್ರಪಂಚದ ಹಿರಿಮೆಯ ಆಧ್ಯಾತ್ಮ ಜ್ಞಾನವನ್ನು ಅರ್ಥೈಸಿಕೊಳ್ಳಲು ಸಾಧ್ಯವೇ!? ನಮ್ಮ ರಾಷ್ಟ್ರದ ಅತೀವ ಸಜ್ಜನಿಕೆಯ ಲಾಭವನ್ನು ಪಡೆದುಕೊಂಡ ಈ ಆಕ್ರಮಣಕಾರರು ಇಲ್ಲಿಂದ ಲೂಟಿ ಮಾಡಿ ಕೊಂಡೊಯ್ದ ಸಂಪತ್ತಿನಿಂದ ತಮ್ಮ ರಾಷ್ಟ್ರವನ್ನು ಶ್ರೀಮಂತಗೊಳಿಸಿ, ನಮ್ಮನ್ನೇ ಬಡವರೆಂದು ಅವಮಾನಿಸಿದರು. ಅದನ್ನು ನಾವು ಸಹಿಸಿಕೊಂಡೆವು. ಏಕೆಂದರೆ ನಮ್ಮದು ಆಧ್ಯಾತ್ಮಿಕ, ಸಾಂಸ್ಕೃತಿಕ ರಾಷ್ಟ್ರವಾಗಿತ್ತು. ಇಲ್ಲಿಗೇ ನಿಲ್ಲದ ಆಕ್ರಮಣಕಾರರು ಭಾರತೀಯರ ಶಕ್ತಿ ಅವರ ಪೂರ್ವಜರ ತಪಃಶ್ಚೈರ್ಯದ ಪ್ರಚಂಡ ಜ್ಞಾನ ಶಕ್ತಿ, ತಮ್ಮ ಇತಿಹಾಸ ಪರಂಪರೆ ಸಂಸ್ಕೃತಿಯ ಬಗೆಗಿನ ಜ್ಞಾನವೇ ಇಲ್ಲಿಯವರ ಆತ್ಮಬಲದ ಆಯುಧ ಎಂಬುದನ್ನು ಕಂಡುಕೊಂಡು ನಮ್ಮ ಜ್ಞಾನದ ಪರಂಪರೆಯನ್ನೇ ಮಿಥ್ಯವೆಂದು ಸಾಬೀತುಪಡಿಸಲು ಹೊರಟರು.    ಇದೊಂದು ಮಾರ್ಗದಿಂದ ಮಾತ್ರವೇ ತಮ್ಮ ಆಳ್ವಿಕೆಯನ್ನು ಇಲ್ಲಿ ಮುಂದುವರೆಸಲು ಸಾಧ್ಯ ಎಂಬುದನ್ನು ಅರಿತುಕೊಂಡರು. ಅಂದು ಅವರು ಆರಂಭಿಸಿದ ವೈಚಾರಿಕ ಸಂಗ್ರಾಮವು ಇಂದಿಗೂ ಅವರ ಹಿಂಬಾಲಕರ ಮೂಲಕ ಅಸ್ತಿತ್ವದಲ್ಲಿರುವುದು ಜ್ಞಾನದ ತಾಕತ್ತು ಏನು ಎಂಬುದನ್ನು ತಿಳಿಸುತ್ತದೆ. ರಾಜಕೀಯ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಕ್ಷಾತ್ರತೇಜದ ಶಕ್ತಿಯಿಂದ, ಸಾತ್ತ್ವಿಕತೆಯ ಯುಕ್ತಿಯಿಂದ ವಿಜಯಿಯಾದವೇನೊ ನಿಜ. ಆದರೆ ಈ ವೈಚಾರಿಕ ಸಂಗ್ರಾಮ ಮುಗಿಯುವುದೆಂದಿಗೆ? 

ಧರ್ಮ ಪಾಲ್ ಜಿ ಅವರ 'ದಿ ಬ್ಯೂಟಿಫುಲ್ ಟ್ರೀ' ಎಂಬ ದಾಖಲೆ ಸಹಿತದ ಕೃತಿಯನ್ನು ಓದಿದವರಿಗೆ ತಿಳಿದಿರುತ್ತದೆ ಹೇಗೆ ಭಾರತದ ಜ್ಞಾನದ ಪರಾಕಾಷ್ಠತೆಯ ಗುರುಕುಲಗಳನ್ನು ಧ್ವಂಸಗೊಳಿಸಿ, ಅವುಗಳ ಬದಲಾಗಿ ಯಂತ್ರಮಾನವರ ನಿರ್ಮಾಣದ ಕಾನ್ವೆಂಟ್ ಗಳನ್ನು ಬಲವಂತವಾಗಿ ಅಸ್ತಿತ್ವಕ್ಕೆ ತಂದು ಬ್ರಿಟಿಷರು ಹೇಗೆ ಜ್ಞಾನದ ವಿಕಸತೆಯ ಬಾಗಿಲನ್ನೇ ಮುಚ್ಚಿದರು ಎಂಬುದು. ಇಂದಿಗೂ ಇದರ ಪರಿಣಾಮವಾಗಿ ಕೋಟ್ಯಾಂತರ ವಿದ್ಯಾರ್ಥಿಗಳ ಅಂತರಂಗದಲ್ಲಿ ನಡೆಯುತ್ತಿರುವ ಆತ್ಮಗೌರವದ ಹಂತ-ಹಂತವಾದ ಕೊಲೆಯ ಬಗ್ಗೆ ಯಾರೂ ಪ್ರಖರವಾಗಿ ಧ್ವನಿಯೆತ್ತುವುದಿಲ್ಲವೇಕೆ? ಆರ್ಥಿಕತೆ ಎಂಬ ವಾಹನದ ಚಕ್ರಗಳಿಗೆ ನೀಡುತ್ತಿರುವ ವಿದ್ಯಾರ್ಥಿಗಳು ಎಂಬ ಇಂಧನದ ಬಲಿಯು ನಿಂತು ಹೋದರೆ ಎಂಬ ಭಯವೇ? ಒಂದು ರಾಷ್ಟ್ರದ ಔನ್ನತ್ಯವು ಸಮರ್ಥ ಯುವ ಶಕ್ತಿಯ ಕೈಗಳಲ್ಲೇ ಇರುತ್ತದೆ. ಯುವ ಶಕ್ತಿಯನ್ನು ಸಮರ್ಥವನ್ನಾಗಿಸದೆ ಕೇವಲ ಕಾರ್ಯಗಳನ್ನು ಪೂರ್ಣಗೊಳಿಸುವ ಯಂತ್ರಗಳನ್ನಾಗಿ ಮಾರ್ಪಡಿಸಿದರೆ ರಾಷ್ಟ್ರದ ಏಳಿಗೆ ಸಾಧ್ಯವೇ? ಒಂದಷ್ಟು ಕಾಲಗಳವರೆಗೆ ಯಂತ್ರಸದೃಶ ವಿದ್ಯಾರ್ಥಿಗಳಿಂದ ಭೌತಿಕ ಅಭಿವೃದ್ಧಿಯನ್ನು ಸಾಧಿಸಬಹುದು, ನಂತರ! ಶಿಕ್ಷಣವೇ ರಾಷ್ಟ್ರದ ಅಡಿಪಾಯವಾಗಿರುವಾಗ, ಆ ಅಡಿಪಾಯವನ್ನು ದುರ್ಬಲವಾಗಿ ಕಟ್ಟಿ ಸಕ್ಷಮ ರಾಷ್ಟ್ರವನ್ನು ಹೇಗೆ ನಿರ್ಮಿಸಲು ಸಾಧ್ಯ? ಅಂಕಗಳ ಹಿಂದೆ, ಗ್ರೇಡ್ ಗಳ ಹಿಂದೆ ಓಡುತ್ತಿರುವ ಯುವ ಮನಸ್ಸುಗಳಿಗೆ ಜ್ಞಾನದ ಹಿಂದೆ, ಸತ್ಯದ ಹಿಂದೆ ಧಾವಿಸಿ ಓಡುವ ಪ್ರೇರಣೆ ನೀಡಿ ಅವರ ಮಾರ್ಗವನ್ನು ಪ್ರಶಸ್ತಗೊಳಿಸಬೇಕಿದೆ. 

ಈ ಕೊರೊನಾ ಸಂಕಟದ ಒತ್ತಡಮಯ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವುದು ಸರಿಯಲ್ಲ. 'ಪರೀಕ್ಷೆಗಳಿಗಿಂತ ಜೀವನವೇ ಮುಖ್ಯ' ಎಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಬಿಎಸ್ಇ ಹಾಗೂ ಐಸಿಎಸ್ಇ ವಿಭಾಗದ 10 ಮತ್ತು12ನೇ ತರಗತಿಗಳ ಪರೀಕ್ಷೆಯನ್ನು ರದ್ದುಪಡಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳನ್ನು ಮುಂದಿನ ಹಂತದ ಶೈಕ್ಷಣಿಕ ವರ್ಷಕ್ಕೆ ತೇರ್ಗಡೆಗೊಳಿಸಲು ಪರ್ಯಾಯ ಮಾನದಂಡವನ್ನು ಅನುಸರಿಸಬೇಕು ಎಂದೂ ಸಹ ಸ್ಪಷ್ಟಪಡಿಸಿದೆ ಹಾಗೂ ಈ ಫಲಿತಾಂಶದ ನಂತರ ತೃಪ್ತಿ ಹೊಂದದ ವಿದ್ಯಾರ್ಥಿಗಳು ಪರಿಸ್ಥಿತಿಯ ಸುಧಾರಣಾನಂತರ ಪರೀಕ್ಷೆಗಳನ್ನು ಬರೆಯಬಹುದೆಂಬ ಅವಕಾಶವನ್ನು ಖಚಿತ ಪಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರವೂ ಸಹ ರಾಜ್ಯಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವೋ ಇಲ್ಲವೋಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ. 

ಎರಡು-ಮೂರು ಗಂಟೆಗಳಲ್ಲಿ ತಮ್ಮ ಭವಿಷ್ಯವನ್ನು ನಿರ್ಧರಿಸುವ ಶೈಕ್ಷಣಿಕ ಪರೀಕ್ಷೆಗಳ ಒತ್ತಡದಿಂದ ಎಷ್ಟೊಂದು ವಿದ್ಯಾರ್ಥಿಗಳು ಮಾನಸಿಕವಾಗಿ ನರಳಿಲ್ಲ ಹೇಳಿ. ಸರ್ಕಾರವು ಈಗಲಾದರೂ ಕೇವಲ ಅಂಕಗಳಿಕೆಯ ವಿದ್ಯಾರ್ಥಿಗಳ ಹಾದಿಯನ್ನು ಮಾತ್ರವೇ ಪ್ರಶಸ್ತಗೊಳಿಸಿ, ಉಳಿದ ವರ್ಗದ ವಿದ್ಯಾರ್ಥಿಗಳ ಸಬಲೀಕರಣ ಮಾಡದೆ ಕಡೆಗಣಿಸುತ್ತಿರುವುದನ್ನು ಕೈಬಿಡಬೇಕಿದೆ. ನವಶಿಕ್ಷಣ ನೀತಿಯಲ್ಲಿನ ಸುಧಾರಣೆಯ ಜೊತೆಗೆ ಮತ್ತಷ್ಟು ಮಗದಷ್ಟು ಸುಧಾರಣೆಗಳು ನಡೆಯಬೇಕಿದೆ. ಈಗಿನ ಸಾಮಾಜಿಕ ಸ್ಥಿತಿಗತಿಗೆ ಹೊಂದುವಂತೆ ಸರ್ವರ ಆಸಕ್ತಿಯನುಸಾರ ನಿರಂತರತೆಯ ಮೌಲ್ಯಮಾಪನದ ಜೊತೆಗೆ ಇನ್ನಿತರ ಯೋಗ್ಯಯುತವಾದ ಜ್ಞಾನಸಂಪಾದನೆಯ ಮಾರ್ಗವನ್ನು ಹೆಚ್ಚೆಚ್ಚು ಬಲಪಡಿಸಬೇಕು. ವಿದ್ಯಾರ್ಥಿಗಳ ಜ್ಞಾನವು ಕೊನೇ ಕ್ಷಣದ ಆಟವೆಂಬಂತೆ 3 ಗಂಟೆಗಳ ವಿವಶತೆಯ ಪರೀಕ್ಷೆಯಿಂದ ತಿಳಿಯುವಂಥದ್ದಾಗಬಾರದು. ಪರಿವರ್ತನೆ ಜಗದ ನಿಯಮ. ಒಂದು ವೇಳೆ ನಾವು ಈ ಸಮಸ್ಯೆಯ ಗಂಭೀರತೆಯನ್ನು ಅರಿಯದೆ ಪರಿವರ್ತನೆಯ ಸಾಹಸಕ್ಕೆ ಮುಂದಾಗದಿದ್ದರೆ, ಪ್ರಕೃತಿಯೇ ನಮ್ಮನ್ನು ಆ ಹಾದಿಗೆ ಕರೆದೊಯ್ಯಲು ವಿವಶತೆಯ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಹೇಗೆ ನಾವು ಪ್ರಕೃತಿಯ ಆಸ್ತಿಯಾದ ಪವಿತ್ರ ಜಲಸಂಗ್ರಹಗಳಾದ ನದಿ, ಸಮುದ್ರಗಳನ್ನು ನಮ್ಮ ಅಜ್ಞಾನದಿಂದ ಮಲಿನಗೊಳಿಸಿದಾಗ ತನ್ನನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಳಯಭಯಂಕರನಂತೆ ಉಕ್ಕಿ ಹರಿದು ಸ್ವಚ್ಛವಾಗುವುದೊ ಹಾಗೆ.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ