ಧೈರ್ಯವಂತ, ರಾಷ್ಟ್ರವಾದಿ ಪತ್ರಕರ್ತ ರೊಹಿತ್ ಸರ್ದಾನರು ಇನ್ನಿಲ್ಲ

ಧೈರ್ಯವಂತ, ರಾಷ್ಟ್ರವಾದಿ ಪತ್ರಕರ್ತ ರೊಹಿತ್ ಸರ್ದಾನರು ಇನ್ನಿಲ್ಲ
ಝೀ ನ್ಯೂಸ್ ಹಾಗೂ ಆಜ್ ತಕ್ ಮಾಧ್ಯಮಗಳಲ್ಲಿ ದಶಕಗಳ ಕಾಲ 'ತಾಲ್ ಠೋಂಕ್ ಕೆ' ಹಾಗೂ 'ದಂಗಲ್' ನಂತಹ ಪ್ರಸಿದ್ಧ ಡಿಬೆಟ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಧೈರ್ಯವಂತ, ರಾಷ್ಟ್ರವಾದಿ ಪತ್ರಕರ್ತ ರೋಹಿತ್ ಸರ್ದಾನರು ಇನ್ನಿಲ್ಲ. ವಾರದ ಹಿಂದೆಯಷ್ಟೆ ಕೊರೊನಾ ಪಾಸಿಟಿವ್ ಆಗಿದ್ದ ರೋಹಿತ್ ಅವರು ಏಪ್ರಿಲ್30ರ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಹಾರ್ಟ್ ಅಟ್ಯಾಕ್ ನಿಂದ ಚೇತರಿಸಿಕೊಳ್ಳಲಾಗದೆ ನಿಧನ ಹೊಂದಿದ್ದಾರೆ. ಸ್ವತಃ ತಮ್ಮ ಆರೋಗ್ಯ ಹದಗೆಟ್ಟಿದ್ದಂತಹ ದಿನಗಳಲ್ಲೂ, ತಮ್ಮ ಕೊನೆಯ ದಿನಗಳವರೆಗೂ ಇತರೆ ಕೋವಿಡ್ ಸೋಂಕಿತರಿಗೆ ಸಹಾಯ ಮಾಡುತ್ತಿದ್ದ ವಿಶಾಲ ಹೃದಯವಂತಿಕೆಯ, ಅಗಾಧ ಶೌರ್ಯವಂತಿಕೆಯ, ನೇರ ನುಡಿಯ ಪ್ರಖರ ಸತ್ಯ ವಚನಕಾರರು ಮತ್ತೆ ಇನ್ನೆಂದಿಗೂ ಸತ್ಯದ ಪರ, ನಮ್ಮ ರಾಷ್ಟ್ರದ ಪರ, ನಮ್ಮ ಧರ್ಮ-ಸಂಸ್ಕೃತಿಯ ಪರ ಹೋರಾಟ ಮಾಡಲು ಸಾಧ್ಯವಿಲ್ಲ ಎಂಬುದು ಪ್ರತಿಯೊಬ್ಬ ದೇಶಭಕ್ತರ ಪಾಲಿಗೆ ಅತೀವ ದುಃಖಕರ ಸಂಗತಿ. ಪತ್ರಿಕಾಮಾಧ್ಯಮಗಾರಿಕೆಗೆ ಹೊಸ ಭಾಷ್ಯ ಬರೆದ ನೇರಾನೇರ ಪ್ರಶ್ನಿಸುವ, ಸಾಹಸವಂತಿಕೆಯ ಪತ್ರಕರ್ತರ ದೇಹಾಂತ್ಯವು 42ನೇ ಅಲ್ಪಾಯುವಿನಲ್ಲೆ ಅಚಾನಕ್ಕಾಗಿ ನಡೆದು ಹೋಗಿದ್ದು ಭಾರತೀಯ ಮಾಧ್ಯಮಲೋಕಕ್ಕೆ ದುರಂತವೇ ಸರಿ. 

ಪ್ರಧಾನ ಮಂತ್ರಿ ನರೇಂದ್ರಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಸೆಲೆಬ್ರಿಟಿಗಳು ಹಾಗೂ ಮಾಧ್ಯಮ ಲೋಕದ ಎಲ್ಲಾ ಪ್ರಾಮಾಣಿಕ, ನಿಷ್ಠಾವಂತ ಪತ್ರಕರ್ತರು ರೋಹಿತ್ ಸರ್ದಾನರ ಅಗಲಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿ, ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ. ತಮ್ಮ ತಂದೆ-ತಾಯಿ, ಪತ್ನಿ, ಮುದ್ದಾದ ಮಕ್ಕಳು ಹಾಗೆ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಇಷ್ಟು ಬೇಗ ದುಃಖದ ಮಡುವಿನಲ್ಲಿ ಮುಳುಗಿಸಿ ಹೊರಟುಬಿಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ರೋಹಿತ್ ಸರ್ದಾನರಿಗೆ ಆಸ್ಪತ್ರೆಯಲ್ಲಿ ಬೆಡ್ ದೊರೆತೂ, ಸಹ ಚಿಕಿತ್ಸೆಯನ್ನು ನೀಡಲಾಗುತ್ತಿದ್ದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲವೆಂದರೆ ಕೋವಿಡ್ ನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಚಿಂತಿಸಿ. ಈ ಕೊರೊನಾ ವೈರಸ್ ನಿಂದ ದಿನದಿನವೂ ನಾವು ಕೇಳುತ್ತಿರುವ ದುಃಖ ಮಿಶ್ರಿತ ಅಚ್ಚರಿಯ ವಿಚಾರಗಳು ನಿಜವಾಗಿಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಮ್ಮೆ ಹಲವಾರು ವಯಸ್ಸಾದ ಮಾನವರು ಕೊರೊನಾವನ್ನು ಗೆದ್ದಿದ್ದಾರೆ, ಮನೆಯಲ್ಲೇ ಇದ್ದು ಅಗತ್ಯಕ್ರಮಗಳನ್ನು ಅನುಸರಿಸಿ ಧೈರ್ಯವಾಗಿದ್ದರೆ ಸಾಕು ಕೊರೊನಾ ಹೊರಟು ಹೋಗುತ್ತದೆ ಎಂಬ ಸಮಾಧಾನಕರ ಸುದ್ದಿಯನ್ನು ಕೇಳುತ್ತೇವೆ. ಮತ್ತೊಮ್ಮೆ ಅಮೂಲ್ಯವಾದ ಯುವಜೀವಗಳು ಕೊರೊನಾಗೆ ತುತ್ತಾಗಿ ಇದ್ದಕ್ಕಿದ್ದಂತೆ ಆರೋಗ್ಯ ಚಿಂತಾಜನಕವಾಗಿ ಅಥವಾ ಅವಶ್ಯಕ ಚಿಕಿತ್ಸೆಗಳು ಸಿಗದೆ ಸಾವನ್ನಪ್ಪುತ್ತಿದ್ದಾರೆ ಎಂಬ ಭೀಕರ ಸುದ್ದಿಯನ್ನೂ ಕೇಳುತ್ತೇವೆ. ಸರ್ಕಾರದ ಅಧಿಕಾರದಿಂದಾಗಲಿ, ಅಗಾಧ ಹಣದ ಶಕ್ತಿಯಿಂದಾಗಲಿ, ಮತ್ತ್ಯಾವುದೇ ಪ್ರಭಾವದಿಂದಾಗಲಿ ಈ ಸಮಸ್ಯೆಯ ನಿವಾರಣೆ ಸಾಧ್ಯವಿಲ್ಲ. ಇಂತಹ ಕಾಠಿಣ್ಯತೆಯ ಸಂದರ್ಭದಲ್ಲಿ ಎಲ್ಲಾ ಭೇದ-ಭಾವಗಳನ್ನು ಮರೆತು, ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ದೇಶವು ಒಗ್ಗಟ್ಟಾಗಿ ಹೋರಾಡಬೇಕಿದೆ. ಆದರೆ ರೋಹಿತ್ ಅವರ ಸಾವಿನ ಘಟನೆಯನ್ನು ಕೊರೊನಾ ಕಾರಣದ ದೃಷ್ಟಿಯಿಂದ ಮಾತ್ರ ನೋಡಲಾಗುವುದಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥವಾಗಿದ್ದ ರೋಹಿತ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಒಂದೇ ದಿನದಲ್ಲಿ ಮೃತ್ಯು ಸಂಭವಿಸಿದರ ಕುರಿತು ಹಲವಾರು ರಾಷ್ಟ್ರವಾದಿಗಳು ಅನುಮಾನ ವ್ಯಕ್ತಪಡಿಸಿ ಈ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥರಿಗೆ ಸಂದೇಶ ಕಳುಹಿಸಿದ್ದಾರೆ.

ರೋಹಿತ್ ಸರ್ದಾನರ ಸಾವಿನ ದುಃಖಕರ ಸುದ್ದಿಯಲ್ಲೂ ಸಂತೋಷವನ್ನು ಕಾಣುವ ಮೂಲಕ ಮಾನವೀಯತೆಯನ್ನೇ ಕಗ್ಗೊಲೆ ಮಾಡುತ್ತಿರುವ ಸದಾ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತಹ ನ್ಯೂಸ್ ಲಾಂಡ್ರಿ, ಟೈಮ್ಸ್ ಮ್ಯಾಗಜಿನ್, ದ ಪ್ರಿಂಟ್, ಇಂಡಿಯನ್ ಎಕ್ಸ್ಪ್ರೆಸ್ ನ ಅಂಕಣಕಾರರಾದ ಶರ್ಜೀಲ್ ಉಸ್ಮಾನಿ, ಮೊಹಮ್ಮದ್ ಇಬ್ರಾರ್, ಜೈನಾಬ್ ಸಿಕಂದರ್, ಅನ್ಯಶಂಕರ್ ಅವರು ಸಾವಿನ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ರೋಹಿತ್ ಸರ್ದಾನರು ಒಬ್ಬ ಸುಳ್ಳುಗಾರರಾಗಿದ್ದರು, ಮಾನವೀಯತೆಯನ್ನು ಗಳಿಸಿಕೊಳ್ಳಲು ಅನರ್ಹರು, ಅಯೋಗ್ಯ ಪತ್ರಕರ್ತರು, ಗೋದಿ ಮೀಡಿಯಾದವರಿಗೆ ಮುಂದೆ ಆಗಲಿರುವ ಪರಿಣಾಮದ ಕುರಿತು ಈ ಸುದ್ದಿ ಕೇವಲ ಟ್ರೇಲರ್ ಆಗಿರುವುದೆಂಬ ಅರ್ಥದಲ್ಲಿ ಟ್ಟೀಟ್ ಮಾಡಿದ್ದಾರೆ. ಎನ್ಡಿಟಿವಿ ಯಲ್ಲಿ ಪ್ರೈಮ್ ಟೈಮ್ಸ್ ನಡೆಸುವ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ನೀಚಸ್ತರದ ಮಾನಸಿಕತೆ ಮತ್ತೊಮ್ಮೆ ಅನಾವರಣಗೊಂಡಿದೆ. ರೋಹಿತ್ ಸರ್ದಾನರ ಸಾವಿಗೆ ಸಂತಾಪ ವ್ಯಕ್ತಪಡಿಸುವ ನಾಟಕದ ಸಾಲುಗಳನ್ನು ಬರೆದು ಸರ್ಕಾರವು 'ತಮ್ಮ' ಪತ್ರಕರ್ತರಿಗೆ ಅತೀಶೀಘ್ರವಾಗಿ 5 ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರತೀ ದಿನ ಪ್ರತೀ ಕ್ಷಣವೂ ತಾವೇ ಒಂದು ಅಜೆಂಡಾದ ಪರವಾಗಿ ಕಾರ್ಯ ಮಾಡುತ್ತಿರುವಂತೆ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇಂತಹವರು ಸತ್ಯದ ಪರ ನಿಲ್ಲುವ ನಿಷ್ಠಾವಂತ ಪತ್ರಕರ್ತರನ್ನು ಅಪಮಾನ ಮಾಡುತ್ತಾರೆ. ಒಬ್ಬ ವ್ಯಕ್ತಿಯ ಅದರಲ್ಲೂ ಶ್ರೇಷ್ಠ ವ್ಯಕ್ತಿಯ ಸಾವಿನಲ್ಲೂ ಪ್ರಬುದ್ಧತೆ, ವಿನಮ್ರತೆಗಳನ್ನು ಪ್ರದರ್ಶಿಸಲಾಗದ ಇಂತಹ ವ್ಯಕ್ತಿಗಳು ಹೇಗೆ ನಿಶ್ಚಿಂತರಾಗಿ ಬದುಕುತ್ತಾರೊ? ಅವರ ಮನಸ್ಸಾಕ್ಷಿ, ನೈತಿಕತೆಗಳು ಉಳಿದಿದೆಯೋ ಇಲ್ಲವೋ?

ಸಾವಿನೊಂದಿಗೆ ಆ ವ್ಯಕ್ತಿಯ ಬಗೆಗಿನ ಎಲ್ಲಾ ಆಕ್ರೋಶ, ಮತ್ಸರ, ದ್ವೇಷಗಳು ಕೊನೆಯಾಗಬೇಕೆಂದು ಭಾರತೀಯ ಸಂಸ್ಕೃತಿ ತಿಳಿಸುತ್ತದೆ. ಪರಸ್ಪರ ಮನುಷ್ಯರ ಮಧ್ಯೆ ಎಷ್ಟೇ ವೈಚಾರಿಕ ಭಿನ್ನತೆಗಳಿದ್ದರೂ ಅದು ವೈಯಕ್ತಿಕ ಸ್ತರದಲ್ಲಿ ಕೆಳಮಟ್ಟದ ಸಂಘರ್ಷವಾಗಿ ರೂಪಾಂತರವಾಗಲು ಎಂದಿಗೂ ಅವಕಾಶ ಕೊಡಬಾರದು. ವೈವಿಧ್ಯತೆಯಲ್ಲಿ ಏಕತೆ ಎಂಬುದೇ ಪ್ರಕೃತಿಯ ನಿಯಮ. ಅದರಲ್ಲೂ ಭಾರತವರ್ಷದಂತಹ ಸ್ವೀಕೃತ ಮನೋಭಾವದ ಜನರ ಬಾಹುಳ್ಯವಿರುವ ವಿಶಾಲ ಸ್ಥಳದಲ್ಲಿ ಇದು ಹೆಚ್ಚು ಪ್ರಚಲಿತ. ವಿವಿಧತೆಯೇ ಸೃಷ್ಟಿಯ ಎಲ್ಲಾ ಕಾರ್ಯಗಳಿಗೂ ಅವಶ್ಯಕ ಎಂಬುದು ಪ್ರಮಾಣಿತ ಸಂಗತಿ. ಮೂಲಭೂತವಾದ ವಾಯು, ಜಲದ ಕಣಗಳ ಚಲನೆಯ ಕ್ರಿಯೆಯಿಂದ ಹಿಡಿದು ಹೊಸ ಸೃಷ್ಟಿಯ ಜನ್ಮದ ಕ್ರಿಯೆಯವರೆಗೂ ವಿವಿಧತೆಯೇ ಕಾರಣ ಎಂಬುದು ವಾಸ್ತವಿಕ ಸಂಗತಿ. ಸೃಷ್ಟಿಯಲ್ಲಿ ವಿವಿಧತೆ ನಾಶವಾಗಿ ಹೋದರೆ, ಜೀವಸಂಕುಲವೇ ನಾಶವಾಗಿ ಹೋಗುತ್ತದೆ. ವಿವಿಧತೆಯೇ ಇಲ್ಲವಾದರೆ ಸತ್ಯ, ಧರ್ಮ, ನ್ಯಾಯ, ನೀತಿಗಳಿಗೆ ಮೌಲ್ಯವೆಲ್ಲಿರುತ್ತದೆ? 

ಯಾವ ವ್ಯಕ್ತಿಯಾದರೂ ಸರಿಯೇ ಭಾರತದ ಅಸ್ಮಿತೆಗೆ ಧಕ್ಕೆ ತರುವಂತಹ ದುಸ್ಸಾಹಸ ಮಾಡಿದರೆ, ಅದೇ ಕ್ಷಣ ಅಸಂಖ್ಯಾತ ಟಿ.ವಿ ವೀಕ್ಷಕರೆದುರಿಗೆ ಅವರ ನೈಜಬಣ್ಣವನ್ನು ಬಯಲು ಮಾಡುತ್ತಿದ್ದ ವಾಕ್ಚತುರ, ನೇರ ನುಡಿಗಾರ, ಸಾಹಸಿವೀರ ರೋಹಿತ್ ಸರ್ದಾನರಿಗೆ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಶತ್ರುಗಳಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಟು ಸತ್ಯವನ್ನು ಮಾತನಾಡುವವರಿಗೆ ಶತ್ರುಗಳು ಜಾಸ್ತಿಯೇ. ತಾನು ಪತ್ರಕರ್ತ ಎನ್ನುವುದಕ್ಕಿಂತ ಮೊದಲು ದೇಶಭಕ್ತ, ದೇಶವು ಸುಭದ್ರವಾಗಿದ್ದರೆ ಮಾತ್ರ ಪತ್ರಿಕಾಗಾರಿಕೆ ಮಾಡಲು ಸಾಧ್ಯ ಎಂದು ಹೇಳುತ್ತಿದ್ದರು. ತಮ್ಮ ಡಿಬೆಟ್ ಕಾರ್ಯಕ್ರಮದಲ್ಲಿ ಎದುರು ಕುಳಿತವರು ಅವರ ಖಡಕ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ ದಂಗಾಗಿ ಹೋಗುತ್ತಿದ್ದರು. ಡಿಬೆಟ್ ನಲ್ಲಿ ಭಾಗವಹಿಸುವ ಯಾವುದೇ ವ್ಯಕ್ತಿ ತಮ್ಮ ಯಾವುದೇ ಪ್ರಶ್ನೆಗಳಿಂದಲೂ ತಪ್ಪಿಸಿಕೊಳ್ಳುವ ಮಾತೇ ಇರಲಿಲ್ಲ. ಅದೆಷ್ಟೇ ಹಿಂದೆ ನಡೆದ ಚರ್ಚೆಯಾಗಿರಲಿ ಅದರ ಎಲ್ಲಾ ವಿಚಾರಗಳನ್ನು ಸ್ಮರಣೆಯಲ್ಲಿಟ್ಟುಕೊಳ್ಳುತ್ತಿದ್ದ ರೋಹಿತ್ ಅವರು ಯಾರಾದರೂ ಚರ್ಚೆಯಲ್ಲಿ ಅವರೇ ಹಿಂದೆ ಹೇಳಿದ್ದ ವಿಚಾರಗಳಿಗೆ ಯೂಟರ್ನ್ ಹೊಡೆದಾಗ, ಅದನ್ನು ನೆನಪಿಸಿ ಅವರ ಡಬಲ್ ಸ್ಟ್ಯಾಂಡರ್ಡ್ಸ್ ಅನ್ನು ವೀಕ್ಷಕರ ಮುಂದೆ ಬಟಾಬಯಲು ಮಾಡುತ್ತಿದ್ದರು. ಅರಾಷ್ಟ್ರೀಕರಣದ ಅಜೆಂಡಾವನ್ನು ಹೊತ್ತು ತರುವ ಯಾವುದೇ ವಿಚಾರಗಳಿಗೆ ರಾಷ್ಟ್ರೀಯತೆಯ ಪ್ರಜ್ವಲತೆಯಿಂದ ಠಕ್ಕರ್ ಕೊಡುತ್ತಿದ್ದರು. ಈ ಆರ್ಯಾವರ್ತ ಭೂಮಿ ಹಿಂದೂಸ್ಥಾನದ ಸಂಸ್ಕೃತಿ, ಧರ್ಮ, ಆರಾಧ್ಯಗಳ ಪವಿತ್ರ ವಿಚಾರಗಳನ್ನು ತಮ್ಮ ಅಪವಿತ್ರ ನುಡಿಗಳಿಂದ ನಿಂದಿಸುವ ಕಾರ್ಯ ಮಾಡಿದರೆ, ಅವರ ಸನಾತನ ಸಂಸ್ಕೃತಿಯ ವಿರೋಧಿ ನಿಲುವನ್ನು ಜನರಿಗೆ ಅರ್ಥೈಸಿ ಇಂತಹವರ ಬಗ್ಗೆ ಜಾಗೃತಿಯಿಂದಿರಲು ಎಚ್ಚರಿಸುತ್ತಿದ್ದರು. ಹಿಂದೂ ಸಂಸ್ಕೃತಿಗೆ ಅಗೌರವ ಪ್ರದರ್ಶಿಸಲು ಮಾತ್ರ ವಾಕ್ ಸ್ವಾತಂತ್ರ್ಯ ಅಸ್ತ್ರವನ್ನು ಎತ್ತಿ ಬರುವ, ಇತರೆ ಸಂಸ್ಕೃತಿಗಳ ಭಯಕ್ಕೆ ಅಥವಾ ಮತ್ತ್ಯಾವುದೋ ಕಾರಣಕ್ಕೆ ಅವುಗಳ ಬಗ್ಗೆ ತಕರಾರು ಮಾಡಲಿಚ್ಛಿಸದ ಡಬಲ್ ಸ್ಟ್ಯಾಂಡರ್ಡ್ಸ್ ಜನರ ಬಗ್ಗೆಯೂ ಜಾಗೃತಿ ಮೂಡಿಸಿದ್ದರು. ಇಷ್ಟೆಲ್ಲಾ ಕಠೋರ ವ್ಯಕ್ತಿತ್ವದಿಂದ ಕೂಡಿದ್ದರೂ ತಮ್ಮ ಅಭಿಮಾನಗಳ ಪಾಲಿಗೆ ಪ್ರೀತಿಯ ನಾಯಕರಂತೆ ಅಭಿಮಾನಿಗಳ ಪ್ರಶ್ನೆಗಳಿಗೆ ಸಾಧ್ಯವಾದಾಗಲೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರಿಸಿ ಅವರನ್ನು ಪ್ರಸನ್ನಗೊಳಿಸುತ್ತಿದ್ದ ವಿಶೇಷ ವ್ಯಕ್ತಿಯೂ ಕೂಡ ಆಗಿದ್ದರು. ರಾಷ್ಟ್ರವಾದಿ ಪತ್ರಕರ್ತರ ಬಗೆಗೆ ಅಜೆಂಡಾ ನಡೆಸುವವರು ತೋರಿಸಿಕೊಳ್ಳುತ್ತಿರುವ ದ್ವೇಷ, ತಿರಸ್ಕಾರ ಭಾವನೆಯು ಅವರ ಅಸಲಿಮುಖವನ್ನು ಮತ್ತಷ್ಟು ದೇಶವಾಸಿಗಳಿಗೆ ತೋರಿಸಿದೆ ಎಂಬುದೇ ಸಮಾಧಾನಕರ ವಿಚಾರ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ತಮ್ಮ ಅಸಲಿಯತ್ತನ್ನು ತಾವೇ ಪ್ರದರ್ಶಿಸಿಕೊಂಡು ದೇಶಭಕ್ತರ ಕೆಲಸವನ್ನು ಕಡಿಮೆ ಮಾಡಿದ್ದಾರೆ. 

ರೋಹಿತ್ ಸರ್ದಾನರ ವಿಕಿಪೀಡಿಯ ಪೇಜ್ ಅನ್ನು ಕೂಡ ಬಿಡದೆ, ಅದರಲ್ಲಿ ಅವರ ಬಗ್ಗೆ ಇಲ್ಲಸಲ್ಲದ ತಪ್ಪು ವಿಚಾರಗಳನ್ನು ಬರೆದು ಶತ್ರುಗಳು ಅವರ ತೇಜೋವಧೆ ಮಾಡಲು ಯತ್ನಿಸಿದರು. ಅವನೊಬ್ಬ ಗೋಮೂತ್ರ ಕುಡಿಯುವ ವ್ಯಕ್ತಿ, ಬಿಜೆಪಿ ಏಜೆಂಟ್, ಮೋದಿ ಏಜೆಂಟ್ ಹಾಗೂ ಇನ್ನು ಬರೆಯಲು ಸಾಧ್ಯವಾಗದ ಹಲವು ಹಲವು ಅಸಭ್ಯ ಮಾತುಗಳನ್ನು ಅವರ ಬಗ್ಗೆ ಬರೆದು ಪರಿಷ್ಕರಿಸಿದ್ದರು. ನಂತರದಲ್ಲಿ ಅನ್ಷುಲ್ ಸಕ್ಸೇನಾ ಎಂಬ ರಾಷ್ಟ್ರವಾದಿ ಸರಿಯಾಗಿ ತಿದ್ದುಪಡಿ ಮಾಡಿ, ರೋಹಿತ್ ಅವರ ಮಾಹಿತಿಯನ್ನು ಪುನಃ ಮೊದಲಿನಂತೆ ಮಾಡಿದರು. 

ಒಬ್ಬ ದೇಶಭಕ್ತ, ಖಡಕ್ ರಾಷ್ಟ್ರವಾದಿ ಪತ್ರಕರ್ತರ ಅಕಾಲಿಕ ಸಾವಿಗೆ ಇಷ್ಟೊಂದು ಸಂಭ್ರಮವನ್ನು ವ್ಯಕ್ತಪಡಿಸಿದ ಎಡಪಂಥೀಯ ಪತ್ರಕರ್ತರು, ಸೋ ಕಾಲ್ಡ್ ಲಿಬರಲ್ಸ್ ಗಳು, ಇಸ್ಲಾಂ ಮೂಲಭೂತವಾದಿಗಳು, ಕಮ್ಯುನಿಸ್ಟರು ತಮ್ಮ ವಾಸ್ತವ ರೂಪವನ್ನು ತಾವೇ ಪ್ರಕಟಗೊಳಿಸಿ ಜಾತ್ಯತೀತತೆಯ ಭ್ರಮೆಯಲ್ಲಿದ್ದ ಹಲವಾರು ಭಾರತೀಯರ ಕಣ್ಣನ್ನು ತೆರೆಸಿ ಸತ್ಯವನ್ನು ಅರ್ಥಮಾಡಿಕೊಳ್ಳಲು ಸಹಕರಿಸಿದ್ದಾರೆ. ಇವರ ದ್ವೇಷ ಕೇವಲ ರೋಹಿತ್ ಸರ್ದಾನರಿಗೆ ಮಾತ್ರವೆಂದು ತಿಳಿಯಬೇಡಿ, ಭಾರತೀಯ ಧರ್ಮ- ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ ಪ್ರತೀ ವ್ಯಕ್ತಿಗಳಿಗೂ ಎಂಬುದೇ ಸತ್ಯ. ಅವರ ಮಾತು, ಬರಹಗಳ ಮೂಲಕ ಇದನ್ನು ಖಾತರಿ ಪಡಿಸಿಕೊಳ್ಳಬಹುದು. ವ್ಯಕ್ತಿಗಳು ಸಾಯಬಹುದು. ಅವರ ಆದರ್ಶ, ಚಿಂತನೆ, ವಿಚಾರಗಳಲ್ಲ. ಬನ್ನಿ ನಾವು ರೋಹಿತ್ ಸರ್ದಾನರ ಧೈರ್ಯ-ಸಾಹಸದ ಪ್ರೇರಣೆ ಪಡೆದು, ಅವರ ಕಾರ್ಯವನ್ನು ಮುಂದುವರಿಸೋಣ. ಇಂದು ನಮ್ಮ ದೇಶವು ಎದುರಿಸುತ್ತಿರುವ ಬೌದ್ಧಿಕತೆಯ ಸಂಗ್ರಾಮದಂತಹ ದೊಡ್ಡ ಸಮಸ್ಯೆಗೆ ಪರಿಹಾರ ಧೈರ್ಯವಂತ, ನಿಷ್ಠಾವಂತ, ಪ್ರಖರ ಬುದ್ಧಿ-ವಿವೇಕದ ಪತ್ರಕರ್ತರು. ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್ ರಂತಹ ರಾಷ್ಟ್ರವಾದಿಗಳು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಚಿಂತನೆಗಳಿಗೆ ತಮ್ಮ ಜೀವನವನ್ನೇ ಸಮರ್ಪಣೆ ಮಾಡುವ ಕೋಟ್ಯಾಂತರ ದೇಶಭಕ್ತರಿದ್ದಾರೆ. ಹಾಗೆಯೇ ರೋಹಿತ್ ಸರ್ದಾನರ ದೇಶಭಕ್ತಿಯ ಚಿಂತನೆಗಳು ಸದಾ ನಮ್ಮಲ್ಲಿ ಜೀವಂತವಾಗಿರಲಿ, ಅವರ ಆತ್ಮಕ್ಕೆ ಈಶ್ವರನು ಸದ್ಗತಿ ಕರುಣಿಸಲಿ.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ