ವಾಸ್ತವದಲ್ಲಿ ಅವರ ಗುರಿ ನಾನಲ್ಲ, ನೀವು : ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ, ರೈತರ ಚಳುವಳಿಯನ್ನು ರಾಜಕಾರಣಿಗಳೇಕೆ ಹೈಜಾಕ್ ಮಾಡಿದ್ದಾರೆ?

ವಾಸ್ತವದಲ್ಲಿ ಅವರ ಗುರಿ ನಾನಲ್ಲ, ನೀವು : ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ,
 ರೈತರ ಚಳುವಳಿಯನ್ನು ರಾಜಕಾರಣಿಗಳೇಕೆ ಹೈಜಾಕ್ ಮಾಡಿದ್ದಾರೆ?

ನೂತನವಾಗಿ ಜಾರಿಗೊಳಿಸಿರುವ 3 ಕೃಷಿ ಸುಧಾರಣಾ ಕಾಯಿದೆಗಳ ವಿರುದ್ಧ  ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದೀಗ ಅದು ಕೇವಲ ಹೋರಾಟವಾಗಿರದೆ ಬಂದ್ ನ ಸ್ವರೂಪ ಪಡೆದಿದೆ. ನಿರೀಕ್ಷಿಸಿದಂತೆಯೇ ಕಾಂಗ್ರೆಸ್, ಎ.ಎ.ಪಿ, ಡಿ.ಎಂ.ಕೆ, ಆರ್.ಜೆ.ಡಿ, ಸಮಾಜವಾದಿ ಮುಂತಾದ ಪ್ರತಿಪಕ್ಷಗಳು ಬಂದ್ ಗೆ ಬೆಂಬಲ 
ನೀಡಿವೆ. ಕೇವಲ ಇವರಷ್ಟೇ ಅಲ್ಲದೆ ಸಿ.ಎ.ಎ ವಿರೋಧಿ ಹೋರಾಟಗಾರರು ಈ ಚಳುವಳಿ ಆರಂಭವಾಗುತ್ತಿದ್ದಂತೆ ಬಂದು ಭಾಗವಹಿಸುತ್ತಿರುವುದು ತಿಳಿದೇ ಇದೆ. ಹಾಗೆಯೇ ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ಕೊಡುವಲ್ಲಿ ಪ್ರಸಿದ್ಧಿಯಾಗಿರುವ ಸೋನಂ ಕಪೂರ್, ಪ್ರಿಯಾಂಕ ಛೋಪ್ರ ಮತ್ತು ಈಗ ದಿಲ್ ಜೀತ್ ದೊಸಂಝ್ ಕೂಡ ತಮ್ಮ ಬೆಂಬಲ ಸೂಚಿಸಿದ್ದಾರೆ.

ಇದೀಗ ನಾವು ಒಂದು ಗಮನಾರ್ಹವಾದ ಸಂಗತಿಯನ್ನು ಅರಿಯಬೇಕು. ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯು ಮೊದಲೆಲ್ಲ ನಡೆಯುತ್ತಿದ್ದ ಪ್ರತಿಭಟನೆಗಳಂತಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದಲೂ ಸಮಾಜ ಸುಧಾರಣೆಗಾಗಿ, ದೇಶದ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ಹಲವಾರು( ಬಹುತೇಕ ಎಂದರೂ ತಪ್ಪಾಗಲಾರದು ) ಕಾಯಿದೆಗಳನ್ನು  ವಿರೋಧಿಸಿ ಹೋರಾಟಗಳು ನಡೆದಿವೆ. 'ನ ಖಾವುಂಗ ನ ಖಾನೆದೂಂಗ' ಸಿದ್ಧಾಂತವನ್ನು ಪಾಲಿಸುತ್ತಾ ಬಂದಿರುವ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಭವ್ಯ ಭಾರತವನ್ನು ಕಟ್ಟುವ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿಯೇ ಅವರು ಒಂದಾದ ನಂತರ ಮತ್ತೊಂದರಂತೆ ನೂತನ ಕಾಯಿದೆಗಳನ್ನು ಜಾರಿಗೆ ತರುತ್ತಿದ್ದಾರೆ. ಮೋದಿ ಅವರು ಜಾರಿಗೊಳಿಸಿದ ನೋಟು ಅಮಾನ್ಯೀಕರಣ, ರಫೇಲ್ ಖರೀದಿ, ಟ್ರಿಪಲ್ ತಲಾಖ್, ರಾಮ ಮಂದಿರ, ಆರ್ಟಿಕಲ್ 370, ಸಿಎಎ ಮತ್ತು 
ಇದೀಗ ಕೃಷಿ ಸುಧಾರಣಾ ಕಾಯ್ದೆಗಳು ವಿರೋಧ ಪಕ್ಷ ಹಾಗೂ ರಾಷ್ಟ್ರವಿರೋಧಿ ಹೋರಾಟಗಾರರಿಂದ ಪ್ರತಿಭಟನೆಗೊಳಪಟ್ಟಿವೆ. ಕೆಲವು ಹೋರಾಟಗಳು ನೇರವಾಗಿ ಧರಣಿ ಕೂರಿ ಮಾಡಿದ್ದರೆ ಮತ್ತೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಆಗಿದ್ದು. ಈ ಎಲ್ಲಾ ಕಾಯಿದೆಗಳನ್ನು ಕಾಂಗ್ರೆಸ್ ನವರು ಜಾರಿಗೊಳಿಸುವುದಿರಲಿ, ಆ ವಿಚಾರಗಳನ್ನು ಚರ್ಚಿಸುವ ಗೋಜಿಗೂ ಹೋಗಿರಲಿಲ್ಲ. ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣದಿಂದ ದೇಶದ ಚಿಂತನೆಯನ್ನು ಮಾಡದೆ, ಹಿಂದೂಗಳನ್ನು ಸಮ್ಮಾನದಿಂದ ನಡೆಸಿಕೊಳ್ಳದೆ 70 ವರ್ಷಗಳಿಂದ ದೇಶದ ಅಭಿವೃದ್ಧಿಯ ವಿಷಯವನ್ನೇ ಮರೆಮಾಚಲಾಗಿತ್ತು.

ಅವರಿಗೆಲ್ಲಾ ಇದ್ದ ಒಂದೇ ಒಂದು ಚಿಂತೆಯೆಂದರೆ ಕುಟುಂಬದ ರಾಜಕಾರಣದ ಚಿಂತೆ. ಅವರ ಸಮಯ ಬಹಳ ಚೆನ್ನಾಗಿತ್ತು, ಅದರಿಂದಲೇ ದೇಶದ ಸಮಯ ಕಳೆಗುಂದಿತ್ತು. ಭಾರತೀಯರ ತಾಳ್ಮೆ, ಸಹಿಷ್ಣುತೆ, ಸೌಜನ್ಯತೆಯು ಮೀರಿತ್ತು. ಆ ಸಮಯದಲ್ಲೇ ಸೂಕ್ತವೆಂಬಂತೆ ದೇಶದ ಚಿಂತನೆಯೇ ತನ್ನ ಮೊದಲ ಧ್ಯೇಯವಾಗಿರಿಸಿಕೊಂಡು ಬದುಕುತ್ತಿದ್ದ ನರೇಂದ್ರ ಮೋದಿಯವರನ್ನು ಪ್ರಧಾನಿ ಆಗಿ ಆಯ್ಕೆ ಮಾಡಲಾಯಿತು. ಅಂದಿನಿಂದಲೇ ಭಾರತ ದೇಶದ ಅಭಿವೃದ್ಧಿಯ ಸಂವತ್ಸರವು ಆರಂಭವಾಗಿ, ಇಂದಿಗೂ ಕೂಡ ಮುಂದುವರೆಯುತ್ತಾ ಬಂದಿದೆ.

70 ವರ್ಷಗಳಿಂದ ಚೆನ್ನಾಗಿ ನಡೆಯುತ್ತಿದ್ದ ಅವರ ಸಮಯ ಕಳೆಗುಂದಿತು. ಕಳೆಗುಂದಿದ್ದ ದೇಶದ ಸಮಯ ಹೊಸ ಆಶಾಕಿರಣದ ಆಗಮನದಿಂದ ಕಳೆಗಟ್ಟಿತು. ಮೋದಿಯವರ ಆಗಮನದ ನಂತರ ಆದ ಈ ಮಹತ್ತರ ಬದಲಾವಣೆಯನ್ನು ಗಮನಿಸಿದರೆ, ಈ ಹೋರಾಟಗಳು ನಡೆಯುತ್ತಿರುವುದರ ಹಿಂದಿನ ಮರ್ಮದ ಅರಿವಾಗುತ್ತದೆ. ಯಾವ ಕಾಯಿದೆಗಳ ವಿರುದ್ಧ ಇಷ್ಟೊಂದು ವಿರೋಧಗಳು, ಹೋರಾಟಗಳು ನಡೆದವೊ ಆ ಕಾಯಿದೆಗಳ ಸಕಾರಾತ್ಮಕ ಪರಿಣಾಮಗಳನ್ನು ಅದರ ಫಲಾಫಲತೆಗಳನ್ನು ಇಂದು ಕಾಣುತ್ತಿದ್ದೇವೆ. ವಿರೋಧ ಪಕ್ಷಗಳು, ಖಲಿಸ್ಥಾನ ಹೋರಾಟಗಾರರು, ಹಲವು ರಾಷ್ಟ್ರ ವಿರೋಧಿ ಸಂಘಟನೆಗಳು ತಮ್ಮ ರಾಜಕೀಯ ಕಾರಣಗಳಿಂದಲೋ ಮತ್ತ್ಯಾವುದೋ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಲೋ ವಿರೋಧಿಸುವರು. ಆದರೆ, ಈ ಕಾಯಿದೆಯ ಸತ್ಯಾಸತ್ಯತೆಗಳನ್ನು ತಿಳಿಯದೆ ಇವರ ಪ್ರಭಾವಕ್ಕೊಳಗಾಗಿ ದಾರಿ ತಪ್ಪಿ ಕೆಲವರು ವಿರೋಧಿಸುವರು.

ಎಲ್ಲಾ ಜನರು ಸರ್ಕಾರದ ಕಾಯಿದೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವಷ್ಟು ಪ್ರಬುದ್ಧರಾಗಿರುವುದಿಲ್ಲ, ಹಾಗೆಯೇ ಸ್ವಲ್ಪವೂ ಅರ್ಥ ಮಾಡಿಕೊಳ್ಳದಷ್ಟು ಮೂರ್ಖರು ಆಗಿರುವುದಿಲ್ಲ. ಯಾರೋ ಒಬ್ಬರು ಇಂದು ಅರ್ಥ ಮಾಡಿಕೊಳ್ಳುವುದನ್ನು ಮತ್ತೊಬ್ಬರು ಒಂದು ವರ್ಷದ ಬಳಿಕ ಅರ್ಥ ಮಾಡಿಕೊಳ್ಳಬಹುದು. ಹಾಗಾಗಿ ಕೆಲವು ಜನರು ರಾಷ್ಟ್ರವಿರೋಧಿಗಳ ಹಾದಿ ತಪ್ಪಿಸುವ ಬಲೆಯಲ್ಲಿ ಸಿಕ್ಕಿ ಬೀಳುತ್ತಾರೆ ಹಾಗೂ ಸರ್ಕಾರದ ನೂತನ ಕಾಯಿದೆಗಳ ಬಗ್ಗೆ ಭಯ ಪಡುತ್ತಾರೆ. ಈಗಿನ ಮೋದೀಜಿಯವರ ಸರ್ಕಾರದ ಅಡಿಯಲ್ಲಿ ಅವರ ಪಕ್ಷದ ಅಭ್ಯರ್ಥಿಗಳೆಲ್ಲಾ ಬಹುತೇಕ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿ ಮನ್ನಣೆಗಳಿಸುತ್ತಿದ್ದರೂ, ವಿರೋಧ ಪಕ್ಷಗಳು ಮಾತ್ರ ಇನ್ನೂ ಈ ಬೆಳವಣಿಗೆಯನ್ನು ಅರ್ಥಮಾಡಿಕೊಂಡಂತೆ ಕಂಡು ಬರುತ್ತಿಲ್ಲ. ತಾವು ಬದಲಾಗದೆ ಬದಲಾಗಿ ಬೆಳವಣಿಗೆಯ ಹೊಸ್ತಿಲಲ್ಲಿರುವ ದೇಶದ ಪರಿಸ್ಥಿತಿಯನ್ನು ಅವರ ಕಾಲದಂತೆ ಬದಲಾಯಿಸಲು ಹೋರಾಟ-ವಿರೋಧದಂತಹ ಅವಕಾಶಗಳಿಗೆ ಕಾದು ಕುಳಿತಿದ್ದಾರೆ. ಆದ್ದರಿಂದ ಪ್ರಜ್ಞಾವಂತ ವ್ಯಕ್ತಿಯಾಗಿ ದೇಶದ ಸಾಮಾನ್ಯ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿರುವ ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮಾಡದಿದ್ದರೆ, ಮುಂದೊಂದು ದಿನ ವಿಶ್ವದಲ್ಲೇ ಅತಿ ಹೆಚ್ಚು ವೈಭವೀಕೃತವಾದ ಸಂಸ್ಕೃತಿಯ ನಾಶವನ್ನು ಸ್ವೀಕರಿಸಲು ಸಿದ್ಧವಾಗಬೇಕಾಗುತ್ತದೆ. ಇದರಿಂದ ಲಜ್ಜಿತವಾದ ನಮ್ಮ ಮುಖಗಳನ್ನು ನಮ್ಮ ಶ್ರೇಷ್ಠ ಪೂರ್ವಜರಿಗೆ ತೋರಿಸಲು ಸಿದ್ಧವಾಗಬೇಕಾಗುತ್ತದೆ. ಯಾವಾಗೆಲ್ಲಾ ಮೋದಿ ಅವರು ಹೊಸ ಕಾಯಿದೆಗಳನ್ನು ಜಾರಿಗೆ ತರುತ್ತಾರೊ ಆಗೆಲ್ಲಾ ಪದೇ ಪದೇ ಬಂದ ಜನರೇ ಬಂದು ಹೋರಾಟ ಮಾಡುತ್ತಿರುತ್ತಾರೆ. ಹೀಗೆ ಎಷ್ಟು ಹೋರಾಟವಾದರೂ, ಒತ್ತಡಗಳು ಬಂದರೂ, ಕೊನೆಗೆ ಜೀವ ಬೆದರಿಕೆ ಬರುತ್ತಿದ್ದರೂ ಕೂಡ ಕಾಯಿದೆಗಳನ್ನು ಹಿಂಪಡೆಯುವುದಿಲ್ಲ. ಇದರಿಂದ ಒಂದಂತೂ ಅರ್ಥವಾಗುವುದು ಮೋದಿ ಅವರ ರಾಷ್ಟ್ರದ ಜೊತೆಗಿನ ಸಂಕಲ್ಪ ಹೇಗಿದೆಯೆಂದು ಮತ್ತು ಆ ಕಾಯಿದೆಗಳು ರಾಷ್ಟ್ರಕ್ಕೆ ಎಷ್ಟು ಅವಶ್ಯಕವಾಗಿದೆ ಎಂದು. 

ರೈತರ ಪ್ರತಿಭಟನೆಯನ್ನು ಒಮ್ಮೆ ಅವಲೋಕಿಸಿದರೆ ಅಲ್ಲಿ ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರು ಹೋರಾಟ ಮಾಡುತ್ತಿರುವುದು ಕಂಡು ಬರುತ್ತದೆ. ಈ ಹೋರಾಟ ಪ್ರಾರಂಭವಾದ ಕೆಲದಿನಗಳಲ್ಲೇ ರಾಜಕಾರಣಿಗಳು ಇದನ್ನು ಹೈಜಾಕ್ ಮಾಡಿದರು. ರೈತರಿಗೆ ಈ ಹೋರಾಟದಲ್ಲಿ ರಾಜಕಾರಣ ಮಧ್ಯ ಪ್ರವೇಶಿಸುವುದು ಇಷ್ಟವಿರಲಿಲ್ಲದಾಗ್ಯು ಇವರೆಲ್ಲ ಭಾಗವಹಿಸಿದರು.

ಕೇಂದ್ರ ಸರ್ಕಾರವು ಎಮ್.ಎಸ್.ಪಿ ರದ್ದಾಗುವುದಿಲ್ಲ, ಎ.ಪಿ.ಎಮ್.ಸಿ ರದ್ದಾಗುವುದಿಲ್ಲ, ಯಾವ ಕಂಪನಿಗಳ ಒಡೆತನದವರಿಗೂ ರೈತರ ಭೂಮಿ ವಶವಾಗುವುದಿಲ್ಲ ಎಂಬ ಭರವಸೆಗಳನ್ನು ನೀಡಿದ್ದರೂ ಭಾರತೀಯ ಕಿಸಾನ್ ಯೂನಿಯನ್( ಬಿ.ಕೆ.ಯು ) ಸರ್ಕಾರದೊಂದಿಗೆ ಸಹಕರಿಸಲು ಸಿದ್ಧವಿಲ್ಲ. ವಿಪರ್ಯಾಸವೆಂದರೆ ಈ ಬಿ.ಕೆ.ಯು ಮಾತ್ರವಲ್ಲದೆ ಕಾಂಗ್ರೆಸ್, ಎ.ಎ.ಪಿ ಸರ್ಕಾರಗಳೂ ಕೂಡ ಈಗ ತಾವು ವಿರೋಧಿಸುತ್ತಿರುವ ಕಾಯಿದೆಯನ್ನು ಜಾರಿಗೆ ತರುವುದಾಗಿ ತಮ್ಮ ಹಿಂದಿನ ಚುನಾವಣೆಗಳ ಪ್ರಣಾಳಿಕೆಯಲ್ಲಿ ಬಳಸಿಕೊಂಡು ಆಶ್ವಾಸನೆ ನೀಡಿದ್ದವು. 

2019ರಲ್ಲಿ ಬಿ.ಕೆ.ಯು ಸರ್ಕಾರವು ಈ ರೀತಿಯ ಕಾಯಿದೆಗಳನ್ನು ಸರ್ಕಾರವು ಏಕೆ ತರುತ್ತಿಲ್ಲ ಎಂದು ಅಸಮಾಧಾನದಿಂದ ಪ್ರಶ್ನಿಸಿ ಟ್ವೀಟ್ ಮಾಡಿತ್ತು. ಆದರೆ ಇಂದು ಅದೇ ಕಾಯಿದೆಗಳು ಜಾರಿಯಾದ ಮೇಲೆ ವಿರೋಧಿಸುತ್ತಿವೆ.


2019ರ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲೂ ಕೂಡ ಅವರು ಈ ಕಾಯಿದೆಯನ್ನು ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿರುವುದನ್ನು ಕಾಣಬಹುದು. "ಕಾಂಗ್ರೆಸ್ ಕೃಷಿ ಉತ್ಪನ್ನಗಳಿಗೆ ರಫ್ತು ಸೇರಿದಂತೆ ರಾಜ್ಯದೊಳಗೆ ಉಚಿತವಾಗಿ ಯಾವುದೇ ನಿರ್ಬಂಧವಿಲ್ಲದೆ ಮಾರಾಟಕ್ಕೆ ಅವಕಾಶ ಮಾಡಿಕೊಡುವುದು. ಎ.ಪಿ.ಎಂ.ಸಿ ಅನ್ನು ರದ್ದುಗೊಳಿಸಲಾಗುವುದು" ಎಂಬ ಉಲ್ಲೇಖವಿದೆ. 

ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ 2014ರಿಂದಲೇ ಹಣ್ಣು ಮತ್ತು ತರಕಾರಿಗಳನ್ನು ಎ.ಪಿ.ಎಂ.ಸಿಯ ಹೊರತಾಗಿಯೂ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಹೇಗೆ ಎ.ಪಿ.ಎಂ.ಸಿ ರದ್ದಾಗಿಲ್ಲವೊ ಹಾಗೆಯೇ ಕೇಂದ್ರ ಸರ್ಕಾರದ ಕಾಯಿದೆಯಿಂದಲೂ ರದ್ದಾಗುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೆ ಹೆಚ್ಚು ಲಾಭವಾಗುತ್ತದೆ. 

ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರಸಿಂಗ್ ಕೂಡ 2019ರಲ್ಲಿ ಕೇಂದ್ರಮಂತ್ರಿಯಾಗಿದ್ದಂತಹ ಲೇಟ್. ರಾಮ್ ವಿಲಾಸ್ ಪಾಸ್ವಾನ್ ರ ಬಳಿ ರೈತರಿಗೆ ನೇರವಾಗಿ ಹಣ ವರ್ಗಾಯಿಸುವಂತಹ ಕಾಯಿದೆಯನ್ನು ಜಾರಿಗೊಳಿಸಬೇಕೆಂಬ ಬೇಡಿಕೆಯಿಟ್ಟಿದ್ದರು. ಬಿ.ಕೆ.ಯು ಕೂಡ ಇದಕ್ಕೆ ಬೆಂಬಲ ಕೊಟ್ಟಿತ್ತು. ಆದರೆ ಇಂದು ಪಂಜಾಬ್ ನ ರೈತರೇ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುತ್ತಿರುವುದು.

ಕೆನಡಾ ಪ್ರಧಾನಿ ಯಾರು ನಮ್ಮ ದೇಶದ ಆಂತರಿಕ ವಿಷಯಗಳಿಗೆ ತಲೆ ಹಾಕಿದರೊ ಅವರು 2015ರಿಂದ 2019ರವರೆಗೂ ಭಾರತೀಯ ರೈತರಿಗೆ ನೀಡುವ ಹೆಚ್ಚಿನ ಎಮ್.ಎಸ್.ಪಿ, ಪ್ರಧಾನಮಂತ್ರಿ ಕಿಸಾನ್ ಯೋಜನೆ, ಫಸಲ್ ಭೀಮ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಈ ಯೋಜನೆಗಳು ಡಬ್ಲ್ಯು.ಟಿ.ಒ ನಿಯಮಗಳನ್ನು ಮೀರುವುದೆಂದು ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಈ ನೂತನ ಕೃಷಿ ಸುಧಾರಣಾ ಕಾಯಿದೆಯಿಂದ ರೈತರ ಉದ್ಧಾರ ಸಾಧ್ಯವಿಲ್ಲವೆಂದರೆ, ಮೊದಲೇ ಇರುವ ಕಾಯಿದೆಗಳಿಂದ ಉದ್ಧಾರವಾಗುತ್ತಿದೆಯೆ? ಈ ಕಾಯಿದೆ ಜಾರಿಗೆಯಾಗಿ ಇನ್ನೂ ಹೆಚ್ಚಿನ ಪ್ರಾಯೋಗಿಕ ಸನ್ನಿವೇಶಗಳನ್ನು ರೈತರು ಎದುರಿಸಿಯೇ ಇಲ್ಲದಿರುವಾಗ, ಇದು ರೈತರಿಗೆ ಮಾರಕ ಎಂದು ಹೇಗೆ ಹೇಳಲಾಗುತ್ತದೆ? ಕೆಲವು ರಾಜ್ಯಗಳ ರೈತರು ಮಾತ್ರ ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಬಹುತೇಕ ರೈತರು ಬಂದ್ ಗೆ ಬೆಂಬಲ ಸೂಚಿಸಿಲ್ಲವೇಕೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಪ್ರಸಕ್ತ ಸನ್ನಿವೇಶ ಅರ್ಥವಾಗುವುದು.

 ಇಂದು ಕೇವಲ ಈ ರೈತರ ಪ್ರತಿಭಟನೆಯು ರೈತರ ಪ್ರತಿಭಟನೆಯಾಗಿ ಮಾತ್ರ ಉಳಿಯದೆ, ರಾಜಕೀಯ ಪ್ರೇರಿತ ಪ್ರತಿಭಟನೆಯಾಗಿ ಮಾರ್ಪಾಡಾಗಿದೆ. ಇದರ ಜೊತೆಗೆ ಖಲಿಸ್ಥಾನ ಹೋರಾಟಗಾರರು, ರಾಷ್ಟ್ರವಿರೋಧಿ ಸಂಘಟನೆಗಳು ಜೊತೆಯಾಗಿರುವುದು ನೋಡಿದರೆ ಈ ಹೋರಾಟ ರಾಷ್ಟ್ರದ ಹಿತಾಸಕ್ತಿಯ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆ. ಪ್ರಾಮಾಣಿಕವಾದ, ನಿಜವಾದ ರೈತರಿಗೆ ಸಮಸ್ಯೆಗಳು, ಸಂದೇಹಗಳು, ಚಿಂತೆಗಳು ಇದ್ದರೆ ಅವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯ ಮೂಲಕ, ಸಂವಿಧಾನಾತ್ಮಕ ಪ್ರತಿಭಟನೆಗಳ ಮೂಲಕ ಬಗೆಹರಿಸಿಕೊಳ್ಳುವ ಅವಕಾಶವಿದೆ. ಆದರೆ ಈ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ರೈತರನ್ನು ಮುಂದಿರಿಸಿ ತಮ್ಮ ತಮ್ಮ ರಾಜಕೀಯ ಸಾಧನೆ ಮಾಡಿಕೊಳ್ಳುತ್ತಿರುವುದು, ರಾಷ್ಟ್ರವಿರೋಧಿ ಸಂಘಟನೆಗಳು ಲಾಭ ಪಡೆಯುತ್ತಿರುವುದು ನೋಡಿದರೆ ನಮ್ಮ ಅಭಿವೃದ್ಧಿಯ ವಿರುದ್ಧ ನಾವೇ ಹೋರಾಟ ಮಾಡುವಂತಹ ಮಾನಸಿಕ ದುಃಸ್ಥಿತಿಯನ್ನು ನಿರ್ಮಿಸಲು ಹೊರಟಿರುವುದಾಗಿ ಕಂಡು ಬರುತ್ತದೆ. ಸಿ.ಎ.ಎ ಪ್ರತಿಭಟನೆಯಲ್ಲಿ ದಲಿತ ಹಿಂದೂಗಳು ಭಾಗವಹಿಸಿದ್ದು ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೊನೆಯದಾಗಿ ಕಾಡುವ ಗಂಭೀರ ವಿಷಯವೆಂದರೆ ಪ್ರಧಾನಿ ಮೋದಿಯವರ ಪರಿಸ್ಥಿತಿ ಹೇಗಾಗಿರಬಹುದು ಎಂದು. ಯಾವ ತನ್ನ ದೇಶದ ಜನರಿಗಾಗಿ ಎಲ್ಲಾ ವಿರೋಧಿಗಳ ಬೈಗುಳ, ಅಪಮಾನ, ಶಾಪಗಳನ್ನೆಲ್ಲಾ ಮೆಟ್ಟಿ ನಿಂತು ಸತತವಾಗಿ ಕರ್ಮಯೋಗಿಯಂತೆ ಕೆಲಸ ಮಾಡುತ್ತಿರುವರೊ ಇಂದು ಅದೇ ಕೆಲವು ಜನರು ರಾಜಕೀಯ ಪ್ರಭಾವದಿಂದಲೋ ಮತ್ತ್ಯಾವುದೋ ರಾಷ್ಟ್ರವಿರೋಧಿ ಶಕ್ತಿಗಳ ಪ್ರಭಾವದಿಂದಲೋ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇವರೆಲ್ಲಾ ಸತ್ಯವನ್ನು ಬೇಗ ಅರಿತೇ ಅರಿಯುತ್ತಾರೆ. 130 ಕೋಟಿ ಭಾರತೀಯರ ಆಶೀರ್ವಾದವು ಸದಾ ಪ್ರಧಾನಿ ನರೇಂದ್ರ ಮೋದಿಯವರ ಮೇಲಿದ್ದು ಉತ್ತಮ ಭವಿಷ್ಯವನ್ನು ನಿರ್ಮಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

~ಸಿಂಚನ.ಎಂ.ಕೆ
ಸೋದರಿ ನಿವೇದಿತಾ ಪ್ರತಿಷ್ಠಾನ ಮತ್ತು ಎ.ಬಿ.ವಿ.ಪಿ ಸ್ವಯಂ ಸೇವಕಿ
ಇಂಜಿನಿಯರಿಂಗ್ ವಿದ್ಯಾರ್ಥಿನಿ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ