ಪಟಾಕಿಯ ಸಂಭ್ರಮವಿಲ್ಲದೆ ದೀಪಾವಳಿಯನ್ನು ಆಚರಿಸಿದರೆ ಭವಿಷ್ಯದಲ್ಲಿ ಏನಾಗುತ್ತದೆ?
ಪಟಾಕಿಯ ಸಂಭ್ರಮವಿಲ್ಲದೆ ದೀಪಾವಳಿಯನ್ನು ಆಚರಿಸಿದರೆ ಭವಿಷ್ಯದಲ್ಲಿ ಏನಾಗುತ್ತದೆ?
ನಾವು ಏಕೆ ನಮ್ಮ ಜೀವನದಲ್ಲಿ ಹಬ್ಬಗಳನ್ನು ಆಚರಿಸಬೇಕು? ಹಬ್ಬಗಳು ನಮ್ಮ ಜೀವನದ ಸಂತೋಷ, ಉತ್ಸಾಹ, ಆಧ್ಯಾತ್ಮ ಹಾಗೂ ಅದೆಲ್ಲಕ್ಕಿಂತ ಮಿಗಿಲಾಗಿ ಧರ್ಮರಕ್ಷಣೆಯ ಮಹತ್ತರವಾದ ಜವಾಬ್ದಾರಿಯನ್ನು ನಿರ್ವಹಿಸಲು ಹಾಗೂ ಅದರ ಮೂಲಕ ಮಾನವ ಸಮಾಜದ ಕಲ್ಯಾಣವನ್ನು ಸಾಧಿಸಲು ಮಾಡಬೇಕಾಗಿರುವ ಆಚರಣೆಗಳಾಗಿವೆ. ಹೌದು, ನಮ್ಮ ಸನಾತನ ಹಿಂದೂ ಧರ್ಮದ ಹಬ್ಬಗಳೆಂದರೆ ಕೇವಲ ಹೊಸ ವಸ್ತ್ರ ಧರಿಸುವುದು, ಸಿಹಿ ತಿನ್ನುವುದು, ಖುಷಿಯಾಗಿರುವುದಷ್ಟೆ ಅಲ್ಲ. ಈ ಹಬ್ಬಗಳ ಪರಂಪರೆಗಳು ಅತ್ಯಂತ ಪವಿತ್ರವಾದ ಆಚರಣೆಗಳನ್ನು ಅನುಸರಿಸುತ್ತಾ ಬಂದಿದೆ. ಸಾಂಸ್ಕೃತಿಕವಾಗಿ ಮಹತ್ವ ಪಡೆದುಕೊಂಡಿರುವ ಮುಖ್ಯವಾದ ಆಚರಣೆಗಳನ್ನು ನಾವು ನೆರವೇರಿಸಬೇಕು. ಈ ಆಚರಣೆಗಳು ವಿವಿಧ ಹಬ್ಬಗಳಿಗೆ ವಿಧ-ವಿಧದ ಪ್ರಕ್ರಿಯೆಗಳನ್ನು ಹೊಂದಿದ್ದರೂ, ಅವುಗಳ ಮೂಲ ಉದ್ದೇಶ ಒಂದೇ ಆಗಿದೆ. ಅದುವೇ ಧರ್ಮರಕ್ಷಣೆಯ ಮೂಲಕ ಮಾತ್ರವೇ ಸಾಧಿಸಬಹುದಾದ ಸಮಸ್ತ ಮಾನವ ಜಾತಿಯ ಕಲ್ಯಾಣ.
ದೀಪಾವಳಿ ಹಬ್ಬದ ಈ ಸಂಭ್ರಮದ ದಿನಗಳಲ್ಲಿ ಸರ್ಕಾರಗಳು ತಮ್ಮ ನಾಟಕೀಯ ಪ್ರದರ್ಶನವನ್ನು ಶುರು ಮಾಡಿಕೊಂಡಿವೆ. ಯಾವುದಾದರೂ ಮಹತ್ತರವಾದ ನಿರ್ಧಾರ ಕೈ ಗೊಳ್ಳುವ ಮುನ್ನ ಎಷ್ಟೆಲ್ಲಾ ಯೋಚಿಸಬೇಕು? ಯಾವ ಯಾವ ವಿಷಯಗಳೆಡೆಗೆ ಗಮನ ಹರಿಸಬೇಕು ಎಂಬುದು ಸಣ್ಣ-ಸಣ್ಣ ಉದ್ಯೋಗ ಕಾರ್ಯಗಳನ್ನು ಮಾಡುವವರಿಗೂ ತಿಳಿದಿರುತ್ತದೆ. ಆದರೆ ಶ್ರೇಷ್ಠ ರಾಷ್ಟ್ರೀಯ ಹಸಿರು ಮಂಡಳಿಯು ನವೆಂಬರ್ 9ರಿಂದ 30ರ ವರೆಗೆ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಬರೋಬ್ಬರಿ 23 ರಾಜ್ಯಗಳಿಗೆ ಪಟಾಕಿ ನಿಷೇಧಿಸುವಂತೆ ಆಗ್ರಹಿಸಿತು. ಅದೂ ದೀಪಾವಳಿ ಸಮೀಪಿಸುತ್ತಿದ್ದಾಗ! ಒಮ್ಮೆಯಾದರು ಅವರು ಯೊಚಿಸಿದರಾ ಪಟಾಕಿ ವ್ಯವಹಾರದವರಿಗೆ ಆಗುವ ನಷ್ಟದ ಬಗೆಗೆ? ಅವರು ಏಕೆ ಉತ್ಪಾದನಾ ಹಂತದಲ್ಲೇ ಪಟಾಕಿಯನ್ನು ನಿಷೇಧಿಸಲಿಲ್ಲ? ಅವರು ಉದ್ದೇಶಪೂರ್ವಕವಾಗಿಯೇ ದೀಪಾವಳಿ ಸಮೀಪಿಸುತ್ತಿರುವಾಗ ಪಟಾಕಿ ನಿಷೇಧ ಮಾಡಲು ಯೊಜನೆ ಮಾಡಿದ್ದರಾ, ಇದರಿಂದ ಮತ್ತೆ ಈ ಪಟಾಕಿ ವ್ಯವಹಾರಕ್ಕೆ ಮತ್ತ್ಯಾರು ಕೈ ಹಾಕದಿರಲೆಂದು? ಅವರ ತಂತ್ರಗಾರಿಕೆ ಏನು? ಕೆಲವೊಂದು ರಾಜ್ಯಗಳಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ಮತ್ತೆ ಕೆಲವು ರಾಜ್ಯಗಳಲ್ಲಿ ರಾತ್ರಿ 2 ಗಂಟೆಗಳ ಕಾಲ( ರಾತ್ರಿ 8ರಿಂದ 10) ಮಾತ್ರ ಪಟಾಕಿ ಸಿಡಿಸಲು ಅನುಮತಿ ಇದೆ. ಇವುಗಳೆಲ್ಲಕ್ಕಿಂತ ಮಿಗಿಲಾಗಿ 5 ರಾಜ್ಯಗಳು ಸಂಪೂರ್ಣವಾಗಿ ಪಟಾಕಿಯನ್ನೇ ನಿಷೇಧ ಮಾಡಿವೆ! ಆದರೆ ಮಧ್ಯಪ್ರದೇಶ ಎಂಬ ಒಂದೇ ಒಂದು ರಾಜ್ಯದಲ್ಲಿ ಪಟಾಕಿ ಸಿಡಿಸಲು ಯಾವುದೇ ನಿಬಂಧನೆಗಳಿಲ್ಲ, ನಿಷೇಧಾಜ್ಞೆಗಳಿಲ್ಲ.
ನಮಗೆಲ್ಲಾ ಚೆನ್ನಾಗಿ ಗೊತ್ತಿದೆ ಒಬ್ಬ ಮುಖ್ಯಮಂತ್ರಿ ತಾನು ಅಷ್ಟೊಂದು ಪರಿಸರ ಸಂರಕ್ಷಿಸುವ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದು ತೋರ್ಪಡಿಸಿಕೊಳ್ಳಲು ಸದಾ ಮುಂದೆ ಬರುತ್ತಾರೆ. ಅವರು ಮತ್ತ್ಯಾರು ಅಲ್ಲ, ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಹಲವಾರು ವರ್ಷಗಳಿಂದ ತಮ್ಮ ಸರ್ಕಾರದ ವಾಯು ಮಾಲಿನ್ಯ ನಿಯಂತ್ರಣದ ವೈಫಲ್ಯವನ್ನು ಮರೆ ಮಾಚಲು ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ದೂಷಿಸಿ, ನಿಷೇಧ ಮಾಡುತ್ತಿದ್ದಾರೆ. ಇವರು ಅನುಸರಿಸುತ್ತಿರುವ ಈ ವಿಧಾನವು ಎಲ್ಲಾ ಸರ್ಕಾರಗಳಿಗೂ ತಾವು ಪರಿಸರ ಮಾಲಿನ್ಯ ನಿಯಂತ್ರಣದ ಕಾರ್ಯ ಮಾಡುತ್ತಿರುವಂತೆ ತೋರ್ಪಡಿಸಿಕೊಳ್ಳಲು ಅತ್ಯಂತ ಸುಲಭಕರವಾಗಿದೆ. ನಮ್ಮ ಸರ್ಕಾರಗಳ ಜಾಣತನಕ್ಕೇನು ಕಡಿಮೆಯಿಲ್ಲ, ತಮ್ಮ ಬೇಜವಾಬ್ದಾರಿತನದ ಮಾಲಿನ್ಯ ನಿರ್ವಹಣೆಯನ್ನು ಮರೆ ಮಾಡಲು ಹಿಂದೂಗಳ ದೀಪಾವಳಿ ಹಬ್ಬವನ್ನು ದೂಷಿಸಿ ಬಿಡುತ್ತಾರೆ. ಸರ್ಕಾರಗಳ ತಡವಾದ ನಿರ್ಧಾರದಿಂದ ಪಟಾಕಿ ಉತ್ಪಾದಕರು, ಹೂಡಿಕೆದಾರು ಹಾಗೂ ವ್ಯಾಪಾರಿಗಳ ಜೀವನವು ಸಂಕಷ್ಟಕ್ಕೆ ದೂಡಲ್ಪಟ್ಟಿದೆ. ಆದರೆ ಸರ್ಕಾರಗಳಿಗೆ ಇದೊಂದು ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ. ಕೇವಲ ಮೂರು ದಿನಗಳ ದೀಪಾವಳಿಯಲ್ಲಿ ಆಗುವ ಮಾಲಿನ್ಯವೇ ಬಹು ದೊಡ್ಡ ಸಮಸ್ಯೆ.
ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು ಹಾಗೂ ಜಾತ್ಯಾತೀತವಾದಿಗಳು ಮೂರು ದಿನಗಳ ದೀಪಾವಳಿಯ ಸಂದರ್ಭದಲ್ಲಿ ಹಿಂದೂಗಳಿಗೆ ಪಟಾಕಿ ಹಚ್ಚಬೇಡಿ, ಪರಿಸರ ಮಾಲಿನ್ಯ ಮಾಡಬೇಡಿ ಎಂದು ಉಪನ್ಯಾಸ ಕೊಡುವವರು ಉಳಿದ 360ಕ್ಕೂ ಹೆಚ್ಚು ದಿನಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸುವುದೂ ಇಲ್ಲ. ತಮ್ಮ ಹುಟ್ಟುಹಬ್ಬಗಳಲ್ಲಿ, ತಮ್ಮ ಐಪಿಎಲ್ ಪಂದ್ಯಗಳಲ್ಲಿ, ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಪಟಾಕಿ ಹೊಡೆಯುವುದರಿಂದ ಇವರಿಗೇನು ತೊಂದರೆ ಆಗುವುದಿಲ್ಲ. ಆಗ ಇವರು ಪರಿಸರ ಮಾಲಿನ್ಯವಾಗುವುದೇ ಇಲ್ಲವೇನೊ ಎಂಬಂತೆ ವರ್ತಿಸುತ್ತಾರೆ, ಇವುಗಳನ್ನು ವಿರೋಧಿಸುವುದಿರಲಿ ಪ್ರಶ್ನಿಸುವ ಗೋಜಿಗೂ ಹೋಗುವುದಿಲ್ಲ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಇವರೆಲ್ಲಾ ತಮ್ಮ ದಿನನಿತ್ಯದ ಜೀವನದಲ್ಲಿ ಎಷ್ಟೆಲ್ಲಾ ಮಾಲಿನ್ಯ ಮಾಡುತ್ತಿದ್ದಾರೆ ಎಂದು ನಾವು ತಿಳಿದು ಕೊಳ್ಳಲೇಬೇಕು. ತಮಗಾಗಿ ಖಾಸಗಿ ವಿಮಾನ, ಎ.ಸಿ ಕಾರ್ ಹಾಗೇ ಮನೆಯಲ್ಲೂ 24/7 ಎ.ಸಿ, ದುಬಾರಿ ವಾಹನಗಳ ಸ್ವಚ್ಛತೆಗಾಗಿಯೂ ಶುದ್ಧ ನೀರು ಹೀಗೆ ಪಟ್ಟಿ ಅಪರಿಮಿತವೆಂದು ಭಾಸವಾಗುತ್ತದೆ. ಇಷ್ಟೆಲ್ಲಾ ಅಧಿಕವಾದ ಮಾಲಿನ್ಯ ಮಾಡುತ್ತಿರುವ ಇವರು ನಮಗೆ ಪಟಾಕಿ ಸಿಡಿಸಿ ಮಾಲಿನ್ಯ ಮಾಡಬೇಡಿ ಎಂದು ಭೋದಿಸಲು ಓಡೋಡಿ ಬರುತ್ತಾರೆ.
ನಾವು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ವಾಸ್ತವವೇನೆಂದರೆ ಪರಿಸರದ ಕಾರ್ಯಗಳನ್ನು ಮಾಡಲು ಮುಂದೆ ಬರುವವರೇ ನಾವು. ಆದರೆ ಯಾವಾಗಲೂ ಏಕೆ ನಾವೇ ತ್ಯಾಗ ಮಾಡಬೇಕು? ಕೇವಲ ನಮ್ಮ ಧರ್ಮದ ಹಬ್ಬದ ಮೇಲಷ್ಟೇ ನಿಬಂಧನೆಗಳನ್ನು ಹೇರದೆ ಅನ್ಯರ ಮೇಲೂ ಹೀಗೆ ಮಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಏಕೆ ಕೇವಲ ಪಟಾಕಿರಹಿತ ದೀಪಾವಳಿಯ ಮೇಲೇ ಇಷ್ಟೊಂದು ಭೋದನೆ? ಏಕೆ ಪ್ರಾಣಿಬಲಿರಹಿತ ಬಕ್ರೀದ್ ಹಾಗೂ ಮರದಬಲಿರಹಿತ ಕ್ರಿಸ್ ಮಸ್ ಮೇಲೆ ಸ್ವಲ್ಪವೂ ಭೋದನೆ ಇಲ್ಲ? ಹೀಗೆಯೇ ಒಂದಾದ ನಂತರ ಮತ್ತೊಂದು ಆಚರಣೆಗಳಿಗೆ ತಡೆ ನೀಡುತ್ತಾ ಬಂದರೆ ಮುಂದಿನ ಪೀಳಿಗೆಯ ಮಕ್ಕಳು ಹೇಗೆ ತಮ್ಮ ಜೀವನದಲ್ಲಿ ಉತ್ಸಾಹ, ಸಂತೋಷ, ಭಕ್ತಿ, ಸಕಾರಾತ್ಮಕತೆಗಳನ್ನು ಕಂಡುಕೊಳ್ಳುವರು? ಹೀಗೆ ಮುಂದುವರಿಯುತ್ತಿದ್ದರೆ ಜೀವನದಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಉಳಿಯುವುದೇ? ಇಲ್ಲ ಸಾಕಷ್ಟು ಸಹಿಸಿಕೊಂಡಾಗಿದೆ. ನಕಲಿ ಜಾತ್ಯಾತೀತತೆಯ ಹೆಸರಿನಲ್ಲಿ ಹೀಗೆ ಹಿಂದೂಗಳ ಸೌಜನ್ಯತೆ, ಕರುಣೆ, ದಯಾ ಭಾವಗಳು ದುರುಪಯೋಗವಾಗಬಾರದು.
ಹಿಂದೂಗಳು ಹೇಗೆ ತಮ್ಮ ಹಬ್ಬವನ್ನು ಆಚರಿಸಬೇಕೆಂಬುದನ್ನು ಯಾವ ಬುದ್ಧಿಜೀವಿಗಳು ಭೋದನೆ ಮಾಡಬೇಕಾಗಿಲ್ಲ. ನಾವು ನಮ್ಮ ಹಬ್ಬಗಳನ್ನು ಸಂಪ್ರದಾಯಗಳಿಗನುಗುಣವಾಗಿ ಸಂತೋಷ, ಸಬಲತೆ, ಸಕಾರಾತ್ಮಕತೆ, ಭಕ್ತಿ ಹಾಗೂ ಉತ್ಸಾಹದಿಂದ ಆಚರಿಸುತ್ತೇವೆ. ನಮ್ಮ ಹಬ್ಬದ ಆಚರಣೆಗಳಲ್ಲಿನ ಸಾಂಸ್ಕೃತಿಕವಾದ ಪ್ರಾಮುಖ್ಯತೆಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಆದ್ದರಿಂದ ನಾವು ದೀಪಾವಳಿಯನ್ನು ದೀಪ ಮತ್ತು ಪಟಾಕಿ ಎರಡನ್ನೂ ಹಚ್ಚುವ ಮೂಲಕ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇವೆ.
~ಸಿಂಚನ.ಎಂ.ಕೆ
Comments
Post a Comment