ತಾಯಿ ಭಾರತಿಯ ಹೆಮ್ಮೆಯ ಪುತ್ರಿ ನಿವೇದಿತಾ
ತಾಯಿ ಭಾರತಿಯ ಹೆಮ್ಮೆಯ ಪುತ್ರಿ ನಿವೇದಿತಾ(1867 ಅಕ್ಟೋಬರ್ 28-1911 ಅಕ್ಟೋಬರ್ 13
ನಿವೇದಿತಾ ಅಬ್ಬಾ! ಒಮ್ಮೆ ಈ ಹೆಸರು ನೆನೆದರೆ ಸಿಡಿಲಿನಂತಹ ಶಕ್ತಿ ಬರುವುದು. ಈ ಮಹಾತಾಯಿಯ ತ್ಯಾಗ ಹಾಗೂ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ಸಾಕ್ಷಾತ್ ಸಿಂಹಿಣಿಯಂತೆ ಪುಟಿದೆದ್ದ ಈ ಚೈತನ್ಯಶಾಲಿ ದಿಟ್ಟ ಮಹಿಳೆ ಸಮಸ್ಯೆಗಳಿಗೆ ಸವಾಲೆಸೆದು ಸ್ತ್ರೀಶಕ್ತಿಯನ್ನು ಮತ್ತೊಮ್ಮೆ ಜಾಗೃತಗೊಳಿಸಿದರು.
ಮಾರ್ಗರೇಟ್ ನೋಬೆಲ್ ಆಗಿದ್ದ ಈ ಸಿಂಹಿಣಿ ನಿವೇದಿತಾ ಆಗಿ ಬದಲಾದ ಸಾಹಸಯಾತ್ರೆ ಬಲುರೋಚಕ. ಬಾಲ್ಯದಿಂದಲೇ ಶುರುವಾದ ಸತ್ಯದ ಹುಡುಕಾಟ ಅವರನ್ನು ಭಾರತ ಪ್ರವೇಶಿಸುವಂತೆ ಮಾಡಿತು. ಮೂಲತಃ ಐರಿಷ್ ಮಹಿಳೆಯಾದ ನಿವೇದಿತಾರಿಗೆ ಭಾರತಕ್ಕೆ ಬರುವಂತೆ ಪ್ರೇರಣೆ ನೀಡಿದ್ದು ಶ್ರೀ ಗುರು ಸ್ವಾಮಿ ವಿವೇಕಾನಂದ. ಸ್ವಾಮೀಜಿಯ ಸತ್ಯನುಡಿಗಳಿಂದ ತನ್ನ ಹಲವಾರು ಉತ್ತರ ಸಿಗದಿದ್ದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ಕಂಡುಕೊಂಡರು. ಸ್ವಾಮಿ ವಿವೇಕಾನಂದರ ಶಿಷ್ಯರಾಗುವುದೆಂದರೆ ಸಾಮಾನ್ಯದ ಮಾತೇನು? ಆದರೆ, ನಿವೇದಿತಾ ಅವರು ಸ್ವಾಮೀಜಿಯ ಸಮರ್ಥ ಶಿಷ್ಯರಾದರು. ತ್ಯಾಗ ಮತ್ತು ಸೇವೆಯನ್ನೇ ತನ್ನ ಜೀವನದ ಆದರ್ಶವನ್ನಾಗಿಸಿಕೊಂಡ ನಿವೇದಿತಾ ವಜ್ರಾಯುಧವಾಗಿ ಮಾರ್ಪಾಡಾದರು.
ಯೌವನಕ್ಕೆ ಬರುತ್ತಿದ್ದಂತೆಯೇ ಕ್ರಿಸ್ತ, ಬುದ್ಧ ಹಾಗೂ ಸಾಕ್ರೆಟಿಸ್ ರ ಬಗ್ಗೆ ಓದಿ ಮುಗಿಸಿದ್ದ ನಿವೇದಿತಾ ಅವರು ಒಂದೊಂದಾಗಿ ಚರ್ಚಿನ ಬಂಡವಾಳವನ್ನು ಬಯಲು ಮಾಡತೊಡಗಿದರು. ಕ್ರೈಸ್ತ ಧರ್ಮದ ಮೇಲೆ ತನ್ನ ನಂಬಿಕೆಯನ್ನೇ ಕಳೆದುಕೊಂಡು, ತನಗೆ ಇಷ್ಟದ ಕೆಲಸವಾದ ಮಕ್ಕಳಿಗೆ ಪಾಠ ಹೇಳಿಕೊಡುವುದನ್ನೇ ಮಾಡುತ್ತಾ ಜೀವನ ನಡೆಸುತ್ತಿದ್ದರು. ಆದರೆ, ಭಗವಂತನ ಇಚ್ಛೆಯೇ ಬೇರೆಯಾಗಿತ್ತು. ಸಾಮಾನ್ಯರಂತೆ ಬದುಕುತ್ತಿದ್ದ ಸ್ತ್ರೀ ಅಸಾಮಾನ್ಯ ಸ್ತ್ರೀಶಕ್ತಿಯಾದರು. ಸ್ವಾಮಿ ವಿವೇಕಾನಂದರ ಮೊದಲ ಭಾಷಣದಲ್ಲೇ ಹಿಂದೂ ಧರ್ಮದ ಶ್ರೇಷ್ಠ ತತ್ತ್ವಗಳು ನಿವೇದಿತಾರನ್ನು ತನ್ನತ್ತ ಆಕರ್ಷಿದವು. ಸ್ವಾಮಿ ವಿವೇಕಾನಂದರ ಉಪನ್ಯಾಸಗಳಿಗೆ ತಪ್ಪದೆ ಹಾಜರಾಗಿ, ಅತ್ಯಂತ ಶ್ರದ್ಧೆಯಿಂದ ಆಲಿಸುತ್ತಿದ್ದ ಹಾಗೂ ಅಷ್ಟೇ ಶ್ರದ್ಧೆಯಿಂದ ತಮ್ಮ ಸಂದೇಹಗಳನ್ನು ಪ್ರಶ್ನೆ ಕೇಳಿ ಬಗೆಹರಿಸಿಕೊಳ್ಳುತ್ತಿದ್ದ ನಿವೇದಿತಾರು ಸ್ವಾಮೀಜಿಯನ್ನು ತಮ್ಮ ಗುರುವಾಗಿ ಸ್ವೀಕರಿಸಿದರು.
ನಿವೇದಿತಾರ ಗುರುಭಕ್ತಿ ಎಲ್ಲಿಯವರೆಗೂ ತಿಳಿದಿದೆಯೇನು? ಅದುವೆ ಸ್ವಾಮೀಜಿಯವರ ಕನಸನ್ನು ಸಾಕಾರಗೊಳಿಸುವವರೆಗೂ ಅಂದರೆ ಭಾರತೀಯ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವವರೆಗೂ. ತಮ್ಮ ದೇಶ, ಜನ, ಸಂಸ್ಕೃತಿ, ಕುಟುಂಬ, ಶಾಲೆ ಎಲ್ಲವನ್ನೂ ಬಿಟ್ಟು ತ್ಯಾಗ ಮಾಡಿ ಭಾರತಕ್ಕೆ ಬರುವ ಸಂಕಲ್ಪ ಮಾಡಿದ ನಿವೇದಿತಾರ ದಿಟ್ಟ ನಡೆ ಇತಿಹಾಸದ ಪುಟಗಳನ್ನು ಸೇರಿದೆ. ಭಾರತವು ತಮ್ಮ ಪಾಲಿಗೆ ಕಠಿಣಪಥವಾಗುವುದೆಂದು ಅರಿತಿದ್ದರೂ, ಭಾರತೀಯರಿಗಾಗಿ ಮಿಡಿದ ತ್ಯಾಗಜೀವಿ ನಿವೇದಿತಾರು ಭಾರತದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಯಾದರು. ಆರಂಭಿಕ ಜೀವನ ಕಠಿಣ ಹಾದಿಯಲ್ಲಿ ಸಾಗುವಂತಾದರೂ, ತಮ್ಮ ಆತ್ಮಶಕ್ತಿಯಿಂದ ಭಾರತೀಯರಿಂದ 'ಅಕ್ಕ' ಎನಿಸಿಕೊಳ್ಳುವ ಶ್ರೇಷ್ಠ ಸ್ಥಾನವನ್ನು ತಲುಪಿದರು.
ಸಾಕ್ಷಾತ್ ಜಗನ್ಮಾತೆ ಶ್ರೀ ಶಾರದಾದೇವಿಯವರಿಂದಲೇ ಪ್ರಾರಂಭವಾದ ನಿವೇದಿತಾರ ಶಾಲೆಯಲ್ಲಿ ಕೇವಲ ಪಾಠವನ್ನು ಮಾತ್ರ ಹೇಳಿಕೊಡುತ್ತಿರಲಿಲ್ಲ. ಪಾಠದ ಜೊತೆಗೆ ರಾಮಾಯಣ- ಮಹಾಭಾರತದಂತಹ ಪವಿತ್ರ ಗ್ರಂಥಗಳ ಸಾಹಿತ್ಯ, ಚಿತ್ರಕಲೆ , ಜೀವನಕ್ಕೆ ಅವಶ್ಯವಿರುವ ಹೊಲಿಗೆ ಉದ್ಯೋಗ ಹೀಗೆ ಮುಂತಾದ ವಿಷಯಗಳ ಕಲಿಕೆಯು ಸೇರಿತ್ತು. ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೂ ಅದರಲ್ಲೂ ವಿಶೇಷವಾಗಿ ವಿಧವೆಯರ ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು.
ತಾಯಿ ಭಾರತಿಯನ್ನು ಬ್ರಿಟಿಷರ ದಾಸ್ಯದ ಬಂಧನದಿಂದ ಸ್ವತಂತ್ರಗೊಳಿಸಲು ಪಣತೊಟ್ಟರು ಅಕ್ಕಾ ನಿವೇದಿತಾ. ಅರವಿಂದ್ ಘೋಷ್, ಬಾರೀಂದ್ರ ಘೋಷ್, ಬಿಪಿನ್ ಚಂದ್ರಪಾಲ್ ರಂತಹ ಕ್ರಾಂತಿಕಾರಿಗಳಿಗೆ ಅಕ್ಕ ಪತ್ರಿಕೆಗಳಪ್ರೇರಣೆಯಾದರು. ಪತ್ರಿಕೆಗಳ ಮೂಲಕವೇ ಬ್ರಿಟಿಷರಿಗೆ ಎಚ್ಚರಿಕೆ ನೀಡುತ್ತಿದ್ದರು. ಬಂಗಾಳದ ವಿಭಜನೆಯ ವಿರೋಧದ ಹೋರಾಟಗಳಲ್ಲಂತೂ ಇವರ ಕಾರ್ಯ ಚಟುವಟಿಕೆಗಳು ಅವಿಸ್ಮರಣೀಯ.
ಭಾರತಮಾತೆಗೆ ನಿವೇದನೆಯಾದ ಈ ಪುಷ್ಪವು ತನ್ನ ಅಂತ್ಯಕಾಲದವರೆಗೂ ಭಾರತೀಯರ ಸೇವೆಯನ್ನೇ ತನ್ನ ಆದರ್ಶವಾಗಿಸಿಕೊಂಡಿತು. ಬಂಗಾಳದಲ್ಲಿ ಪ್ಲೇಗ್ ರೋಗ ಹರಡಿದ್ದ ಸಮಯದಲ್ಲಂತೂ ರೋಗಿಗಳ ಶುಶ್ರೂಷೆ ಮಾಡಿದ ಕಾರ್ಯ ಶ್ಲಾಘನೀಯ. ಭಾರತೀಯರ ಹೃದಯವನ್ನು ಗೆದ್ದು, ಭಾರತಮಾತೆಯ ಹೆಮ್ಮೆಯ ಪುತ್ರಿಯಾದ ನಿವೇದಿತಾ ಅವರು ತಮ್ಮ ತ್ಯಾಗ ಮತ್ತು ನಿಸ್ವಾರ್ಥ ಸೇವೆಯ ಆದರ್ಶ ಜೀವನವನ್ನು ಜಗತ್ತಿಗೆ ಅತ್ಯುನ್ನತ ಸಂದೇಶವಾಗಿ ನೀಡಿದ್ದಾರೆ. 'ನಾವೆ ಮುಳುಗುತ್ತಿದೆ, ಆದರೆ ಸೂರ್ಯೋದಯ ಕಾಣುತ್ತಿದೆ' ಎಂಬ ವಿದಾಯದ ಸಂದೇಶ ಬರೆದ ಈ ಬದುಕು 1911 ಅಕ್ಟೋಬರ್ 13ರಂದು ಡಾರ್ಜಿಲಿಂಗ್ ನಲ್ಲಿ ಅಸ್ತಂಗತವಾಯಿತು.
Comments
Post a Comment