ಆದರ್ಶದ ಬದುಕು ಕಟ್ಟಿಕೊಟ್ಟ ಸೋದರಿ ನಿವೇದಿತಾ ಪ್ರತಿಷ್ಠಾನ
ಪ್ರತಿಷ್ಠಾನ ಸೇರುವ ಮೊದಲು ಹಾಗೂ ನಂತರದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬಹುದು. ಸಾಮಾನ್ಯರಂತೆ ಜೀವನ ನಡೆಸುತ್ತಿದ್ದ ವ್ಯಕ್ತಿ, ಮಾತೃಭೂಮಿಯ ಚಿಂತನೆ ಹೊಂದಿ ಶ್ರೇಷ್ಠ ಜೀವನ ನಡೆಸುವಂತಾಗಿದೆ. ಯಾವಾಗ ಒಬ್ಬ ವಿದ್ಯಾರ್ಥಿ ಸಿದ್ಧವಾಗಿರುತ್ತಾನೊ, ಆಗ ಗುರು ಖಂಡಿತ ಪ್ರತ್ಯಕ್ಷವಾಗುತ್ತಾನೆ ಎಂಬಂತೆ ದೇಶಸೇವೆ ಮಾಡಬೇಕು ಎಂಬ ತುಡಿತಕ್ಕೊಳಗಾಗಿದ್ದ ನನಗೆ ದಾರಿದೀಪವಾಗಿದ್ದೇ 'ಸೋದರಿ ನಿವೇದಿತಾ ಪ್ರತಿಷ್ಠಾನ'.
ದೇಶಸೇವೆ ಮಾಡಬೇಕೆಂಬ ಅತ್ಯುನ್ನತ ಚಿಂತನೆ ಬಂದಿರುವುದು ನನ್ನ ಜನ್ಮ ಸಾರ್ಥಕವಾದಂತೆ.ಸ್ವಾಮಿ ವಿವೇಕಾನಂದರ ಮಾತಿನಂತೆ ಜೀವನದಲ್ಲಿ ಆದರ್ಶವನ್ನಿಟ್ಟುಕೊಂಡು ಬದುಕುವುದು, ಆದರ್ಶವಿಲ್ಲದೆ ಬದುಕುವುದಕ್ಕಿಂತ ಸಾವಿರ ಪಟ್ಟು ಮೇಲು. ಏಕೆಂದರೆ ಆದರ್ಶವನ್ನಿಟ್ಟುಕೊಂಡು ಬದುಕುವ ವ್ಯಕ್ತಿ ಒಂದು ಸಾವಿರ ತಪ್ಪು ಮಾಡಿದರೆ, ಆದರ್ಶವಿಲ್ಲದೆ ಬದುಕುವ ವ್ಯಕ್ತಿ ಐವತ್ತು ಸಾವಿರ ತಪ್ಪು ಮಾಡುತ್ತಾನೆ. ದೇಶಸೇವೆಯಂತಹ ಆದರ್ಶವನ್ನು ನನ್ನ ಜೀವನದಲ್ಲಿ ಅನುಸರಿಸಲು ಕಾರಣೀಭೂತರಾಗಿರುವ ಮಹಾನ್ ವ್ಯಕ್ತಿ ನಮ್ಮೆಲ್ಲರ ಅಚ್ಚು-ಮೆಚ್ಚಿನ ಪೂಜನೀಯ, ವಂದನೀಯ ಗುರು 'ಚಕ್ರವರ್ತಿ ಸೂಲಿಬೆಲೆ'. ಇಂತಹ ಮಹಾನ್ ವ್ಯಕ್ತಿಯ ಶ್ರೀ ಚರಣಗಳಿಗೆ ನನ್ನ ಶತ-ಶತ ನಮನಗಳು. ಇವರು ಸ್ಥಾಪಿಸಿರುವ ಸೋದರಿ ನಿವೇದಿತಾ ಪ್ರತಿಷ್ಠಾನದಲ್ಲಿ ನನ್ನಂತಹ ಸಾಮಾನ್ಯ ವ್ಯಕ್ತಿಗೂ ದೇಶಸೇವೆಯಂತಹ ಮಹಾನ್ ಕಾರ್ಯವನ್ನು ಮಾಡಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವೇ ಸರಿ.
ಇಂಜಿನಿಯರಿಂಗ್ ಎಂಬ ಯಂತ್ರಮಾನವರ ನಿರ್ಮಾಣದ ಪದವಿಯಿಂದ ಬೇಸತ್ತು ಹೋಗಿದ್ದ ನನ್ನ ಬದುಕಲ್ಲಿ ಸಿನಿಮಾಗಳು, ಧಾರಾವಾಹಿಗಳು, ಮನೋರಂಜನಾ ವಸ್ತುಗಳೆಲ್ಲವೂ ಅರ್ಥಹೀನವೆನಿಸುತ್ತಾ ಹೋದವು.ಅಂತಹ ಸಮಯದಲ್ಲಿ ಶ್ರೇಷ್ಠ ಬದುಕು ಯಾವುದು? ಎಂಬ ಹುಡುಕಾಟದಲ್ಲಿ ಕಳೆದುಹೋಗಿದ್ದ ನನಗೆ ಸಮರ್ಪಕವಾದ ಉತ್ತರ ದೊರೆತದ್ದು ಚಕ್ರವರ್ತಿ ಸೂಲಿಬೆಲೆಯವರ ಸ್ಫೂರ್ತಿಯುತ, ಚೈತನ್ಯಮಯಿ, ದೇಶಭಕ್ತಿಯ ಭಾಷಣಗಳಿಂದ.ಇಷ್ಟೊಂದು ಶ್ರೇಷ್ಠ ಬದುಕು ಜಗತ್ತಿನಲ್ಲಿದ್ದರೂ ಅದು ನನ್ನ ಗಮನಕ್ಕೇ ಬಂದಿಲ್ಲವಲ್ಲ ಎಂದು ಬೇಸರವೂ ಆಯಿತು.ಯುವ ಚೈತನ್ಯದ ಬದುಕಿಗೆ ಕಾಲಿಟ್ಟಿದ್ದ ನನಗೆ ಪ್ರಾರಂಭದಲ್ಲೇ ಈ ಶ್ರೇಷ್ಠ ಬದುಕಿನ ಬಗ್ಗೆ ತಿಳಿದುಕೊಂಡಿದ್ದು ಸತ್ಯವಾಗಿಯೂ ಅತ್ಯಂತ ಮಹತ್ವವಾದದ್ದು.ಇಲ್ಲದಿದ್ದರೆ ಸಾಮಾನ್ಯರಂತೆ ಸಿನಿಮಾ, ಧಾರಾವಾಹಿ, ಉದ್ಯೋಗ, ಸ್ವಾರ್ಥ, ಶೋಕಿ, ದುರಾಸೆಯ ಜೀವನವೇ ನನ್ನದ್ದೂ ಆಗುತ್ತಿತ್ತೇನೊ.
ಸೋದರಿ ನಿವೇದಿತಾ ಪ್ರತಿಷ್ಠಾನದ ಸ್ವಚ್ಛ ಮನಸ್ಸು, ಕಲ್ಯಾಣಿ ಸ್ವಚ್ಛತೆ, ನನ್ನ ದೇಶ ನನ್ನ ಪ್ರೇಮ(ದೇಶಪ್ರೇಮಿಗಳ ದಿನದ ಆಚರಣೆ), ಉಸಿರು ಹಂಚೋಣ, ಅಮ್ಮಂದಿರ ದಿನಾಚರಣೆ, ಸ್ವಾಮಿ ವಿವೇಕಾನಂದರ ಜಯಂತಿ, ಸೋದರಿ ನಿವೇದಿತಾ ಜಯಂತಿ, ಕಾರ್ಗಿಲ್ ವಿಜಯೋತ್ಸವ, ಸ್ವಾತಂತ್ರ್ಯಶ್ರಾವಣ, ವಿವೇಕಾನಂದರ ರಾಕ್ ಡೇ, ಅನೇಕ ವೀರ ಸ್ವಾತಂತ್ರ್ಯ ಹೋರಾಟಗಾರರ, ದೇಶದ ಅತ್ಯುನ್ನತ ನಾಯಕರ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಇಂತಹ ಹಲವಾರು ಸೇವಾಕಾರ್ಯಗಳನ್ನು ಮಾಡಿದಾಗ ದೊರೆಯುವ ಮನಃಶಾಂತಿ, ತೃಪ್ತಿಕರ ಮನೋಭಾವ, ಸುಖೀಭಾವ ಕೋಟಿ ಕೊಟ್ಟರೂ ಸಿಗುವುದಿಲ್ಲ.ಇವುಗಳಲ್ಲೆಲ್ಲ ನನಗೆ ಶಾಲಾ ಮಕ್ಕಳಿಗೆ ನಮ್ಮ ದೇಶದ ಧೀರ-ವೀರ ನಾಯಕರ ಬಗ್ಗೆ ವೀಡಿಯೊ ಭಾಷಣ ಪ್ರದರ್ಶಿಸಿ, ಅರಿವು ಮೂಡಿಸುವ, ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವ ಕಾರ್ಯವಂತೂ ಬಹಳ ಪ್ರಿಯವಾಯಿತು.ಚಕ್ರವರ್ತಿ ಅಣ್ಣನವರೇ ತಮ್ಮ ಒಂದು ಭಾಷಣದಲ್ಲಿ ತಿಳಿಸಿದ್ದ ಒಂದು ಮಾತು ನನ್ನನ್ನು ತುಂಬಾ ಕಾಡುತ್ತಿತ್ತು.ಅದುವೇ ಕಾಲೇಜು ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಭೋದಿಸುವುದು.ಈ ಕಾರ್ಯವನ್ನು ನಾನು ನನ್ನ ಜೀವನದ ಅವಿಭಾಜ್ಯ ಅಂಗವನ್ನಾಗಿಯೇ ಮಾಡಿಕೊಂಡಿರುವೆ.ನಮ್ಮದೇ ಊರಿನ ಸರ್ಕಾರಿ ಶಾಲೆಗೆ ಹೋಗಲು ನನ್ನ ಬಿಡುವಿನ ಸಮಯವನ್ನು, ನನ್ನ ಶೈಕ್ಷಣಿಕ ವರ್ಷದ ಓದಿನ ಅಂತ್ಯದ ಎರಡು ತಿಂಗಳ ರಜಾ ಅವಧಿಯನ್ನೂ ಮೀಸಲಾಗಿರಿಸಿದೆ.ಮಕ್ಕಳಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುವ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರು ಮಾಡುವ, ಸ್ಪರ್ಧೆಗಳಲ್ಲಿ ವಿಜಯವಾಗುವಂತೆ ಸ್ಫೂರ್ತಿ ತುಂಬಿ ಪ್ರೋತ್ಸಾಹಿಸುವ, ಸಮಾಜ-ಕನ್ನಡ-ವಿಜ್ಞಾನ-ಗಣಿತದ ವಿಷಯಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಕಲಿಸುವ ಕಾರ್ಯವಂತೂ ಅತ್ಯಂತ ಸುಖದಾಯಕವಾಗಿ ಹೋದವು. ಪದವಿ ವ್ಯಾಸಂಗ ಎಂಬ ಒತ್ತಡ ನಿರ್ಮಾಣದ ಬದುಕಿಗೆ ಈ ಸಮಾಜಮುಖಿ ಕಾರ್ಯವು ಅತ್ಯಂತ ಆಶಾದಾಯಕವಾಗಿಯೂ, ಧೈರ್ಯ-ಸಾಹಸದ ಗಣಿಯಾಗಿಯೂ, ಹೊಸ ಭರವಸೆಯ ಬೆಳಕಾಗಿಯೂ ಜೀವನವೆಂಬ ಹೋರಾಟಕ್ಕೆ ಶಕ್ತಿಯನ್ನು ತುಂಬುತ್ತಾ ಬಂದಿತು.
ಇನ್ನೇನೋ ಅಳಿವಿನಂಚಿಗೆ ಬರುತ್ತಾ, ಇತಿಹಾಸದ ಪುಟ ಸೇರುವ ಸಾಲಿನಲ್ಲಿದ್ದ ನಮ್ಮೂರು ಮಹದೇವಪುರದ ಸರ್ಕಾರಿ ಶಾಲೆಯಲ್ಲಿ ನಾನು ಮತ್ತು ನನ್ನ ಜೊತೆಗಾರರು ಸ್ವಯಂ ಸೇವಕ-ಸೇವಕಿಯರಾಗಿ ಮುಖ್ಯ ಶಿಕ್ಷಕಿಯವರ ಮಹಾನ್ ಸಂಕಲ್ಪದ ಕಾರ್ಯ ಶಾಲಾವಾರ್ಷಿಕೋತ್ಸವದ ಆಚರಣೆಗೆ ಬೆನ್ನೆಲುಬಾಗಿ ನಿಂತೆವು.ಚಕ್ರವರ್ತಿ ಅಣ್ಣನವರ ಪ್ರೇರಣೆಯಿಂದಲೇ ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸೈನಿಕನಿಗೆ ಸನ್ಮಾನ ಮಾಡುವ ಸದ್ಭಾಗ್ಯವೂ ದೊರೆಯಿತು.ಕಾಲೇಜಿನ ಸ್ವಲ್ಪ ತರಗತಿಗಳನ್ನು ತಪ್ಪಿಸಿಕೊಂಡು, ಮನೆಯವರ ಆಕ್ರೋಶದ ನುಡಿಗುಚ್ಛಗಳಿಂದಲೂ ಗೆದ್ದು ಬಂದು ಶಾಲಾ ವಾರ್ಷಿಕೋತ್ಸವವನ್ನು ಅಂದಾಜು ಎಪ್ಪತ್ತರಿಂದ ಎಂಭತ್ತು ಮಕ್ಕಳ ಭಾಗವಹಿಸುವಿಕೆಯಿಂದ ಸಂಭ್ರಮವಾಗಿ ಆಚರಿಸಿ, ಸಫಲತೆಯನ್ನು ಕಂಡೆವು.ಈ ಮಕ್ಕಳ ನಿಸ್ವಾರ್ಥ ಮನೋಭಾವಕ್ಕೆ, ನಿಷ್ಕಲ್ಮಶ ಪ್ರೀತಿಗೆ ಹಾಗೂ ಶಿಕ್ಷಕರ ಸಹಕಾರಕ್ಕೆ ಬೆಲೆ ಕಟ್ಟಲೋಗದು.ಈ ಎಲ್ಲಾ ಕಾರ್ಯಗಳಿಗೆ ಪ್ರೇರಣೆಯಾದ ಚಕ್ರವರ್ತಿ ಸೂಲಿಬೆಲೆಯವರನ್ನು ಈ ಶಾಲೆಗೆ ಕರೆಸಿ, ಅವರ ಆಶೀರ್ವಾದವನ್ನು ವಿದ್ಯಾರ್ಥಿಗಳಿಗೆ ದೊರಕಿಸಿ ಕೊಡುವ ಕಾಲ ಶೀಘ್ರವಾಗಿ ಬರಲಿ ಎಂದು ಆಶಿಸುತ್ತೇನೆ.
ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಭಾಷಣಗಳ ಮೂಲಕ, ನಿಸ್ವಾರ್ಥ ಕಾರ್ಯಗಳ ಮೂಲಕ, ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಯುವ ಜನಾಂಗದ ಮೂಲಕ ಮಾಡುತ್ತಿರುವ ಕಾರ್ಯವು ಅತ್ಯಮೂಲ್ಯವಾದದ್ದು.ಇದರ ಬೆಲೆ, ಅರ್ಥಾರ್ಥತೆಗಳು ಸಮಾಜದ ಕೆಲವರಿಗೆ ತಿಳಿದಿಲ್ಲ.ಆದ್ದರಿಂದಲೇ ಕೆಲವರು ತಮ್ಮನ್ನು ವಿರೋಧಿಸುವ, ತಮ್ಮ ಬಗ್ಗೆ ಮನಸೋ ಇಚ್ಛೆ ಬಂದಂತೆ ಹೇಳಿಕೆಗಳನ್ನು ಕೊಡುವ, ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ನಕಾರಾತ್ಮಕವಾದ ಕಮೆಂಟ್ಗಳನ್ನು ಹಾಕುವ ಅನುಚಿತವಾದ ಕಾರ್ಯವನ್ನು ಮಾಡುತ್ತಿದ್ದಾರೆ.ಆದರೆ, ನಮ್ಮಂತಹ ಕೋಟ್ಯಾನುಕೋಟಿ ಅಭಿಮಾನಿಗಳ ನಿಸ್ವಾರ್ಥ ಪ್ರೀತಿ ಹಾಗೂ ಆಶೀರ್ವಾದಗಳು ನಿಮಗೆ ಎಂದೆಂದಿಗೂ ರಕ್ಷಾಕವಚವಾಗಿರುವುದು ಎಂದು ಈ ಲೇಖನದ ಮೂಲಕ ತಿಳಿಸಲಿಚ್ಛೆಪಡುತ್ತೇನೆ.
ಸೋದರಿ ನಿವೇದಿತಾ ಎಂಬ ಮಹಾತಾಯಿಯ ಬಗ್ಗೆ ತಿಳಿಯುತ್ತಾ ಹೋದಂತೆ, ನಮ್ಮಲ್ಲೂ ದೇಶಸೇವೆ ಮಾಡುವ ಶಕ್ತಿ ಹೆಚ್ಚುತ್ತಾ ಬಂದಿದೆ.ಒಬ್ಬಳು ವಿದೇಶಿ ಮಹಿಳೆ ಶ್ರೇಷ್ಠ ಧರ್ಮ, ಸಂಸ್ಕೃತಿ, ಪರಂಪರೆಯ ಪುಣ್ಯಭೂಮಿ ಭಾರತದ ಬಗ್ಗೆ ತಮ್ಮ ಆರಾಧ್ಯದೈವ ಶ್ರೀ ಗುರುಗಳಿಂದ ಅರಿತು ತಮ್ಮ ಗುರುವಿನ ಮೇಲಿದ್ದ ಅಚಲ ವಿಶ್ವಾಸ ಹಾಗೂ ಶ್ರದ್ಧೆಯ ಏಕೈಕ ಕಾರಣದಿಂದ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಭಾರತದ ಸೇವೆಯನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡಿದ್ದು ನಾರಿ ಶಕ್ತಿಗೆ, ಸೇವಾಕಾರ್ಯದ ಶೌರ್ಯ ಸಾಹಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸೋದರಿ ನಿವೇದಿತಾ ಪ್ರತಿಷ್ಠಾನ ಸೇರಿದ ಪರಿಣಾಮ ಶ್ರೇಷ್ಠಾತಿಶ್ರೇಷ್ಠ, ಮೂಲ್ಯಾತಿಮೂಲ್ಯದಂತಹ ವ್ಯಕ್ತಿತ್ವಗಳಾದ ರಾಮಕೃಷ್ಣಪರಮಹಂಸ, ಶಾರದಾದೇವಿ, ಸ್ವಾಮಿ ವಿವೇಕಾನಂದ, ಸೋದರಿ ನಿವೇದಿತಾ, ಶಿವಾಜಿ, ಸಾವರ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಖದೇವ್, ರಾಜ್ ಗುರು, ಸುಭಾಷ್ ಚಂದ್ರ ಬೋಸ್ ಹೀಗೆ ಮುಂತಾದವರ ಜೀವನಚರಿತ್ರೆಯನ್ನು ತಿಳಿದು ಕೊಂಡು, ಸ್ಫೂರ್ತಿಯ ಸಾಗರವೇ ದೊರೆತಂತಾಯ್ತು. ನಮ್ಮ ಹೆಮ್ಮೆಯ ಸರ್ವಶ್ರೇಷ್ಠ, ಪರಮಶಕ್ತಿಯುತ ಹಿಂದೂ ಧರ್ಮದ ಮಹಿಮೆಯ ಬಗ್ಗೆ ಇನ್ನೂ ಹೆಚ್ಚೆಚ್ಚು ತಿಳಿದುಕೊಳ್ಳುವಂತಾಯ್ತು.ಈ ಪಾವನ ಪುಣ್ಯ ಭೂಮಿ ನಮ್ಮ ಮಾತೃಭೂಮಿಯನ್ನು ನಮ್ಮ ಧರ್ಮದ ಜೊತೆಗೆ ಹೃದಯದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವಂತಾಯ್ತು.
ಸೋದರಿ ನಿವೇದಿತಾ ಪ್ರತಿಷ್ಠಾನ ಸೇರಿದ ಮೇಲೆ ಮೊದಲಿದ್ದ ಭಯ, ಅಸುಕ್ಷರತೆ, ಅಹಂಕಾರ,ಸ್ವಾರ್ಥ, ದುರಾಸೆಯಂತಹ ಮನಸ್ಸಿನ ವಿಕೃತಿಗಳು ಕಡಿಮೆ ಆಗುತ್ತಾ ಬಂದಿವೆ.ಒಟ್ಟಿನಲ್ಲಿ ಸ್ವಾರ್ಥದ ಜೀವನದಿಂದ ಅರ್ಥಯುತವಾದ ನಿಸ್ವಾರ್ಥದ ಜೀವನಕ್ಕೆ ಪ್ರವೇಶಿಸುವಂತೆ ಅನುಭವವಾಗುತ್ತಿದೆ.ಪ್ರತಿ ಬಾರಿ ನಮ್ಮ ದೇಶದ ಯೋಧರು ಪಾಪಿ ಪಾಕಿಸ್ತಾನದ ಭಯೋತ್ಪಾದಕರಿಂದ-ಸೈನಿಕರಿಂದ, ಡ್ರ್ಯಾಗನ್ ಚೀನಾದ ಸೈನಿಕರಿಂದ ಹುತಾತ್ಮರಾದಾಗ ದೇಶದ ಮೇಲಾಗುವ ಸಂಕಷ್ಟವು ನನ್ನ ಸಂಕಷ್ಟವೇ ಎಂಬಂತೆ ಅತೀವ ನೋವಾಗುತ್ತದೆ.ಪ್ರತಿ ಬಾರಿ ದೇಶದ್ರೋಹಿಗಳು ನಮ್ಮೆಲ್ಲರ ಅತ್ಯಂತ ನೆಚ್ಚಿನ ಶ್ರಮಜೀವಿ, ಧೈರ್ಯಶಾಲಿ, ಕರ್ಮಯೋಗಿ, ಪ್ರಾಮಾಣಿಕ, ನಿಸ್ವಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತಮ್ಮ ಮನಸೋ ಇಚ್ಛೆ ಬಂದಂತೆ ನಿಂದಿಸುವಾಗ ನಮ್ಮ ಮನೆಯವರಿಗೇ ನಿಂದಿಸುವಾಗ ಆಗುವಷ್ಟು ಅಥವಾ ಅದಕ್ಕಿಂತ ಹೆಚ್ಚೇ ದುಃಖವಾಗುತ್ತದೆ.ಅಷ್ಟೇ ಅಲ್ಲದೆ, ಇವರು ನಾವು ಎಂತಹ ಕ್ಲಿಷ್ಟ ಸಮಯದಲ್ಲೂ ರಾಜಿ ಮಾಡಿಕೊಳ್ಳಲಾಗದ ನಮ್ಮ ಧರ್ಮ, ಶ್ರದ್ಧೆ, ದೇವರು, ಮಾತೃಭೂಮಿ, ಸೈನಿಕರ ಬಗ್ಗೆ ಕೊಡುವ ನಕಾರಾತ್ಮಕ ಹೇಳಿಕೆಗಳು, ಲೇಖನಗಳು, ಭಾಷಣಗಳು ಕ್ರೋಧಾಗ್ನಿಯಿಂದ ಜ್ವಲಿಸುವಷ್ಟು ದುಃಖವಾಗುತ್ತದೆ.
ಹಾಗೆಯೇ, ಪ್ರತಿ ಬಾರಿ ಪಾಕಿಸ್ತಾನದ ಕುತಂತ್ರಕ್ಕೆ ಪ್ರತ್ಯುತ್ತರವಾಗಿ ನಡೆಸಿದ ಸರ್ಜಿಕಲ್ ಸ್ಟೈಕ್, ಏರ್ ಸ್ಟ್ರೈಕ್ ನಂತಹ ಪ್ರತಿದಾಳಿಗಳು ನಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.ಇತ್ತೀಚಿಗೆ ಚೀನಾ ಕುತಂತ್ರಕ್ಕೆ ಪ್ರತ್ಯುತ್ತರವಾಗಿ ನಡೆಸಿದ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ನಂತಹ ಪ್ರತಿದಾಳಿಯೂ ಅತ್ಯಂತ ಸಂತೋಷದಾಯಕವಾಗಿದೆ.ದೇಶದ್ರೋಹಿಗಳು ಎಷ್ಟೇ ಅಪವಾದ ಮಾಡಿದರೂ ಶುದ್ಧ ಚಾರಿತ್ರ್ಯದ ಶಕ್ತಿಯ ಮುಂದೆ ಸೋತು ಸುಣ್ಣಾಗಿ, ಮತ್ತೆ-ಮತ್ತೆ ನರೇಂದ್ರಮೋದಿಯವರನ್ನೇ ನಮ್ಮ ಪ್ರಧಾನಿಯನ್ನಾಗಿಸುವ ದೇಶಭಕ್ತ ರಾಷ್ಟ್ರದಲ್ಲಿ ಜನ್ಮ ಪಡೆದಿರುವುದೇ ಸೌಭಾಗ್ಯವೆನಿಸುತ್ತದೆ.ಸಹಸ್ರಾರು ವರ್ಷಗಳಿಂದ ಅಪವಾದ ಮಾಡುತ್ತಾ ನಮ್ಮ ದೇಶದ ಶಕ್ತಿಯನ್ನು ನಾಶ ಮಾಡಲು ಸರ್ವವಿಧಗಳಲ್ಲೂ ಪ್ರಯತ್ನ ಮಾಡಿ ಪರಾಭವಗೊಂಡಿರುವ, ಪರಾಭವಗೊಳ್ಳುತ್ತಿರುವ ಇಸ್ಲಾಂ ಆಕ್ರಮಣಕಾರರು, ಪೋರ್ಚುಗೀಸರು, ಡಚ್ಚರು, ಬ್ರಿಟಿಷರು, ಫ್ರೆಂಚರು, ಶಕರು, ಹೂಣರು, ಪಾಕಿಸ್ತಾನಿಯರು, ದೇಶದ್ರೋಹಿಗಳನ್ನು ನೋಡಿ ನಮಗೆ ಇನ್ನೂ ನಮ್ಮ ದೇಶದ ಮೇಲೆ ಶ್ರದ್ಧೆ, ಗೌರವ ಹೆಚ್ಚಾಗುತ್ತಲೇ ಇದೆ.
ಬದುಕಿನಲ್ಲಿ ಒಂದು ಭರವಸೆಯಂತು ಮೂಡಿದೆ, ಯಾವುದೇ ವೃತ್ತಿಕಾರ್ಯವನ್ನು ಮಾಡಲು ಪ್ರಾರಂಭಿಸಿದರೂ, ಆ ಕಾರ್ಯದಲ್ಲಿ ದೇಶದ ಒಳಿತಿನ ಚಿಂತನೆ ಅವಶ್ಯವಾಗಿ ನಡೆಯುವುದೆಂದು.ಚಕ್ರವರ್ತಿ ಅಣ್ಣನವರ ಮಾತಿನಂತೆ ನಾವು ಮಾಡುತ್ತಿರುವ ಕಾರ್ಯದಿಂದ ನಮ್ಮ ದೇಶದ ಕೀರ್ತಿ, ಘನತೆ, ಗೌರವಗಳು ಹೆಚ್ಚಾಗುವುದಾದರೆ ಅದನ್ನು ಅವಶ್ಯವಾಗಿ ಮಾಡೋಣ, ಇಲ್ಲದಿದ್ದರೆ ಆ ಕಾರ್ಯವನ್ನು ಮಾಡದಿರುವುದೇ ದೇಶಕ್ಕೆ ನಾವು ಕೊಡುವ ಕೊಡುಗೆ.ಜೀವನದಲ್ಲಿ ಮುಂದೆ ಏನು ಮಾಡಬೇಕೆಂಬ ಭವಿಷ್ಯದ ಗುರಿಯ ಹುಡುಕಾಟದಲ್ಲಿ ಅನಿಶ್ಚಿತತೆ, ಒತ್ತಡ, ಗೊಂದಲ, ಪ್ರಭಾವದ ದಾರಿಗಳೇ ಕಾಣುತಿರಲು ಸ್ಪಷ್ಟ ಕಾರ್ಯದ ಚಿತ್ರಣವು ಅರಿವಾಗಲು ಇನ್ನಷ್ಟು ಸಮಯ, ಅನುಭವದ ಅವಶ್ಯಕತೆ ಇದೆ.ಆದರೂ, ಮಾತೃಭೂಮಿಗೆ ನೇರವಾಗಿ ಸೇವೆ ಮಾಡುಬಹುದಾದಂತಹ ಕಾರ್ಯವನ್ನೇ ಹುಡುಕುವ ಅಚಲ ನಿರ್ಧಾರವಂತೂ ಮಾಡಿಯಾಗಿದೆ.ಮುಂದೆ ನನ್ನ ಸ್ವಂತ ಕಾಲ ಮೇಲೇ ನಿಂತು ಬದುಕು ಸಾಗಿಸುವ ಶಕ್ತಿ-ಯುಕ್ತಿಗಳೆರಡೂ ಬಂದಾಗ ನಮ್ಮ ಸನಾತನ ಹಿಂದೂ ಧರ್ಮದ ತತ್ತ್ವ, ವಿಚಾರಧಾರೆ, ಸಂಸ್ಕೃತಿ, ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶಕ್ಕೆ ಮಹಾನ್ ರಕ್ಷಕರಾಗಿ, ಭವಿಷ್ಯದ ಭರವಸೆಯ ಬೆಳಕಾಗಿ, ಶೌರ್ಯವಂತ ಸಾಹಸಿಗಳಾಗಿ, ತೇಜಸ್ವಿ ಜ್ಞಾನಿಗಳಾಗಿ ಬದುಕುವುದರ ಮೂಲಕ ತ್ರೇತಾಯುಗದ ಶ್ರೀರಾಮನ ಹಾಗೂ ದ್ವಾಪರಯುಗದ ಶ್ರೀ ಕೃಷ್ಣನ ಗತವೈಭವವನ್ನು ಮರುಕಳಿಸುವ ಪ್ರಯತ್ನ ಮಾಡುವಂತಹ ಸಕ್ಷಮ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಅದ್ಭುತ ಶಾಲೆಯನ್ನು ನಿರ್ಮಾಣ ಮಾಡುವುದು ನನ್ನ ಕನಸಿನ ಗುರಿಯಾಗಿದೆ.ವಿದ್ಯಾಭ್ಯಾಸ ಪೂರ್ಣವಾದ ನಂತರ ಸೋದರಿ ನಿವೇದಿತಾ ಪ್ರತಿಷ್ಠಾನದ ಸೇವಾಕಾರ್ಯಗಳಲ್ಲಿ ಮತ್ತಷ್ಟು ಸಕ್ರಿಯವಾಗಿ ಭಾಗವಹಿಸಿ, ಧನ್ಯಳಾಗುವ ಅಭಿಲಾಷೆಯಂತು ಇದ್ದೇ ಇದೆ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment