ವಿಶ್ವಧರ್ಮವಾಗುವಲ್ಲಿ ಹಿಂದೂ ಧರ್ಮಕ್ಕಿರುವ ಸಾಧ್ಯತೆಗಳು- ವಿವೇಕಾನಂದರ ಚಿಂತನೆ

ಪ್ರಪ್ರಥಮವಾಗಿ ಧರ್ಮವೆಂಬುದು ಮಾನವರ ಜೀವನದಲ್ಲಿ ಏಕೆ ಇಷ್ಟೊಂದು ಮುಖ್ಯವಾಗಿದೆ? ಈ ಪ್ರಪಂಚದಲ್ಲಿ ಧರ್ಮದ ಬಗೆಗೇ ಮಾನವರು ಏಕೆ ಇಷ್ಟೊಂದು ಚರ್ಚೆಗಳನ್ನು ಮಾಡುತ್ತಾರೆ? ಧರ್ಮದ ಹೆಸರಿನಲ್ಲೇ ಏಕೆ ಇಷ್ಟೊಂದು ಸಂಘರ್ಷಗಳು, ಹಿಂಸಾಚಾರಗಳು ನಡೆಯುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಧರ್ಮವೆಂಬುದು ಮಾನವರ ಜೀವನದಲ್ಲಿ ಎಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಎಂದು ಅರಿವಾಗುವುದು. ಧರ್ಮವು ನಮ್ಮೆಲ್ಲರ ಜೀವನದಿಂದ ಎಂದೆಂದಿಗೂ ಬೇರ್ಪಡಿಸಲಾಗದ ಅವಿಭಾಜ್ಯ ಅಂಗವಾಗಿದೆ. ಹಲವು ನಾಸ್ತಿಕರು ನಾವು ದೇವರು, ಧರ್ಮ ಇದನ್ನೆಲ್ಲಾ ನಂಬುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಅವರು ತಮ್ಮ ಜೀವನದಲ್ಲಿ ನೈತಿಕತೆ ಅಥವಾ ಆದರ್ಶದ ಯಾವುದಾದರೂ ಒಂದು ಮಾರ್ಗವನ್ನು ಅನುಸರಿಸುತ್ತಲೇ ಇರುತ್ತಾರೆ. ಇದು ಧರ್ಮವಲ್ಲವೇನು? ಇಂತಹ ನಾಸ್ತಿಕರು ಪರೋಕ್ಷವಾಗಿ ಧರ್ಮವನ್ನು ಅನುಸರಿಸುತ್ತಾರೆ ಅಷ್ಟೆ. ಇದೆಲ್ಲ ಅರಿತ ಮೇಲೆ ಖಾತ್ರಿಯಾಗುವುದು ಧರ್ಮವಿಲ್ಲದೆ ಮಾನವರ ಜೀವನ ಪಶು-ಪಕ್ಷಿಗಳಂತೆ ಆಗಿಬಿಡುವುದು.

ವಿಶ್ವಧರ್ಮ ಹಾಗೆಂದರೇನು? ಅದು ಯಾವುದು? ಈ ವಿಶ್ವವನ್ನು ಉಚಿತವಾದ ಸದೃಢ ಮಾರ್ಗದಲ್ಲಿ ನಡೆಸಲು ಒಂದು ಧರ್ಮದ ಅವಶ್ಯಕತೆ, ಅನಿವಾರ್ಯತೆಯಂತು ಇದ್ದೇ ಇದೆ. ಇಲ್ಲದಿದ್ದರೆ, ವಿಶ್ವಶಾಂತಿಯನ್ನು ಸ್ಥಾಪಿಸಲು ಸಾಧ್ಯವೇ? ಈ ವಿಶ್ವಕ್ಕೆ ಸ್ನೇಹ, ಸಹಬಾಳ್ವೆ, ಶಾಂತಿ ಹಾಗೂ ಸದೃಢತೆಯಿಂದ ಜೀವನ ನಡೆಸಲು ದಾರಿ ತೋರುವ ಒಂದು ವಿಶ್ವಧರ್ಮವಿಲ್ಲದೆ ಹೋದರೆ ಈಗಿನ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ವೈರತ್ವವನ್ನೆಲ್ಲಾ ನೋಡಿದರೆ ಮೂರನೆ ಮಹಾಯುದ್ಧ ನಡೆಯಲು ಹೆಚ್ಚು ಕಾಲಾವಧಿಯೇನು ಬೇಕಿಲ್ಲ ಎಂಬ ವಾಸ್ತವತೆ ಅರ್ಥವಾಗುವುದು. ವಿಶ್ವಧರ್ಮವಾಗುವಂತಹ ಶ್ರೇಷ್ಠತೆ, ಯೋಗ್ಯತೆ ಹೊಂದಿರುವ ಧರ್ಮ ಯಾವುದು? ನಮ್ಮ ಸನಾತನ, ಪುರಾತನ, ನವನವೀನ ಭವ್ಯ ಭರತ ಭೂಮಿಯ ನಿರ್ಮಾತೃ ಹಿಂದೂ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆಗಳಿವೆಯೇ?

ಯಾವ ಧರ್ಮವು ಇಡೀ ಪ್ರಪಂಚದಲ್ಲೇ ಅಗಣಿತವಾದ ಅತ್ಯಂತ ದೀರ್ಘ ಇತಿಹಾಸವನ್ನು ಹೊಂದಿರುವುದೋ ಆ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಪ್ರಪಂಚದ ಎಲ್ಲಾ ಧರ್ಮಗಳ ಮಾತೆಯಾಗಿರುವುದೋ ಆ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಪ್ರಪಂಚದ ಎಲ್ಲಾ ಧರ್ಮಗಳ ಶ್ರೇಷ್ಠಾತಿಶ್ರೇಷ್ಠ ವಿಚಾರಗಳನ್ನು ಒಳಗೊಂಡಿರುವುದೋ ಆ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಪ್ರತಿಯೊಂದು ಜೀವಿಯಲ್ಲಿಯೂ ಭಗವಂತನನ್ನು ಕಾಣು ಎಂಬ ಶ್ರೇಷ್ಠ ತತ್ವವನ್ನು ಸಾರಿದೆಯೋ ಆ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಇತರೆ ಧರ್ಮಗಳನ್ನು ಕೇವಲ ಸಹಿಸಿಕೊಳ್ಳದೆ, ಅವುಗಳನ್ನು ಸತ್ಯ ಎಂದು ಒಪ್ಪಿಕೊಂಡು ಗೌರವಿಸಿ (ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದಲ್ಲಿ ಹೇಳಿದಂತೆ) ಎಂದು ಸಾರಿದೆಯೋ ಆ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಪರಕೀಯರ ಆಕ್ರಮಣಕ್ಕೆ ಒಳಗೊಂಡಿದ್ದರೂ, ಸಾವಿರಾರು ವರ್ಷಗಳ ನಿರಂತರ ಪರಕೀಯರ ಆಡಳಿತದ ನಂತರವೂ ತನ್ನ ಅಂತಃಸತ್ವವನ್ನು ಹಾಗೆಯೇ ಕಾಪಾಡಿಕೊಂಡಿರುವುದೋ ಅಂತಹ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಸಂಕಟದಲ್ಲಿರುವಾಗ ಧರ್ಮರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿರುವ ಹಾಗೂ ಈಗಲೂ ಅದಕ್ಕೆ ಸಿದ್ಧವಾಗಿರುವ ಧರ್ಮವೀರರನ್ನು ಹುಟ್ಟು ಹಾಕುತ್ತಿರುವುದೋ ಅಂತಹ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಅದರ ಅಳಿವಿನಂಚು ಬರುತ್ತಿದೆ ಎಂದು ಕೊಳ್ಳುವಾಗ ಆ ಧರ್ಮವನ್ನು ಉದ್ಧರಿಸಲು ಸ್ವಯಂ ಭಗವಂತನೇ ಅವತಾರವೆತ್ತಿ ಬರುವನೋ ಅಂತಹ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ಆದಿ-ಅನಂತವನ್ನು ಮೀರಿರುವುದೋ, ಯಾವ ಧರ್ಮಗ್ರಂಥಗಳ ಸಾಹಿತ್ಯವು ಪ್ರಪಂಚದ ಎಲ್ಲಾ ದೊಡ್ಡ ದೊಡ್ಡ ಗ್ರಂಥಗಳ ಸಾಹಿತ್ಯಕ್ಕಿಂತಲೂ ಅಗಾಧವಾಗಿರುವುದೋ ಅಂತಹ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಯಾವ ಧರ್ಮವು ತಮ್ಮ ಧರ್ಮದವರೇ ತಮಗೆ ಆಶ್ರಯ ನೀಡದಂತಾಗಿ ನಿರಾಶ್ರಿತರಾಗಿದ್ದವರಿಗೂ ಅಭಯ ನೀಡಿ ಆಶ್ರಯ ಒದಗಿಸಿಕೊಟ್ಟಿತೊ ಅಂತಹ ಧರ್ಮಕ್ಕೆ ವಿಶ್ವಧರ್ಮವಾಗುವ ಸಾಧ್ಯತೆ ಇಲ್ಲವೇನು? ಈ ಪ್ರಶ್ನೆಗಳು ಹೇಗಿವೆಯೆಂದರೆ ಸ್ವಯಂ ಸೂರ್ಯ ನಾರಾಯಣನಿಗೇ ಜಗತ್ತಿಗೆ ಬೆಳಕು ನೀಡುವ ಯೋಗ್ಯತೆ ಇದೆಯೇ ಎಂದು ಕೇಳಿದಂತಾಯ್ತು.

ಆದರೆ ಇಂದಿನ ವಾಸ್ತವ ಜಗತ್ತನ್ನು ನೋಡಿದರೆ ದುಃಖವಾಗುವುದು. ಇಸ್ಲಾಮೀಕರಣ, ಕ್ರೈಸ್ತೀಕರಣಗಳು ಜಗತ್ತಿನಾದ್ಯಂತ ಎಗ್ಗಿಲ್ಲದೆ ಸಾಗಿವೆ. ಒಂದು ವೇಳೆ ಜಗತ್ತು ಏನಾದರೂ ಹೀಗೆ ಇಸ್ಲಾಂ ಧರ್ಮವನ್ನೋ ಅಥವಾ ಕ್ರಿಶ್ಚಿಯನ್ ಧರ್ಮವನ್ನೋ ಅನುಸರಿಸುತ್ತಾ ಹೋದರೆ ಭವಿಷ್ಯದ ಸ್ಥಿತಿ-ಗತಿಗಳು ಏನಾಗುವುದು ಎಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರ ಚಿಂತನೆಯನ್ನೇ ತೆಗೆದುಕೊಳ್ಳಿ, ಅವರು ಹೇಗೆ ಪಶ್ಚಿಮ ದೇಶಗಳಲ್ಲಿ ಚರ್ಚ್ ನ, ಕ್ರಿಶ್ಚಿಯನ್ನರ ಲೋಪದೋಷಗಳನ್ನು ಅವರ ಮುಂದೆಯೇ ತೆರೆದಿಟ್ಟರು. ಕ್ರಿಶ್ಚಿಯನ್ನರ ವಿಚಾರಧಾರೆಯ ಕುಂದು ಕೊರತೆಗಳನ್ನು ತಿಳಿಸಿದರು. ಅವರ ಮಾತಿನ ಸತ್ಯವನ್ನರಿತ ಎಷ್ಟೋ ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಅವರ ಶಿಷ್ಯರಾದರು. ಅವರ ಎಷ್ಟೋ ಶಿಷ್ಯರು ತಮ್ಮ ದೇಶದವರು ಭಾರತೀಯರ ಮೇಲೆ ನಡೆಸುತ್ತಿರುವ ಅತ್ಯಾಚಾರವನ್ನು ಸಹಿಸದೆ, ಅದರ ಪ್ರಾಯಶ್ಚಿತಕ್ಕಾಗಿ ಭಾರತೀಯರ ಸೇವೆ ಮಾಡಲು ಬಂದರು. 

ಕ್ರಿಶ್ಚಿಯನ್ನರು ಹಿಂದೂ ಧರ್ಮದ ದೇವಾಲಯದಂತೆ ಚರ್ಚ್ ಗಳಿಗೆ ಹೆಸರಿಡುವುದು, ಹಿಂದೂ-ಸಂಸ್ಕೃತಿಯ ಸೂರ್ಯ ನಮಸ್ಕಾರವನ್ನು ಯೇಸು ನಮಸ್ಕಾರವೆಂಬಂತೆ ಬಿಂಬಿಸಲು ಪ್ರಯತ್ನಿಸುವುದು ಹೀಗೆ ಹತ್ತು ಹಲವಾರು ರೀತಿಗಳಲ್ಲಿ ನಮ್ಮ ಧರ್ಮವನ್ನು ಅವರಿಗೆ ಹೊಂದುಕೊಳ್ಳುವಂತೆ ಅನುಕರಣೆ ಮಾಡುತ್ತಿರುವುದನ್ನು ನೋಡಬಹುದು. ತಮ್ಮ ಕ್ರಿಶ್ಚಿಯನ್ ಧರ್ಮದ ಪ್ರಚಾರಕ್ಕಾಗಿ ನಮ್ಮ ಧರ್ಮದ ಶ್ರೇಷ್ಠ ಸಂಗತಿಗಳನ್ನು ಹೀಗೆ ನಕಲು ಮಾಡುತ್ತಿರುವುದನ್ನು ನೋಡಿದರೆ ನಮಗೆ ಅರ್ಥವಾಗುವುದು ನಮ್ಮದು ಎಷ್ಟು ಶ್ರೇಷ್ಠವಾದ ಧರ್ಮ ಎಂದು. ಕ್ರಿಶ್ಚಿಯನ್ ಮಿಷನರಿಗಳು ಹಣದ ಆಮಿಷ ತೋರಿಸಿ, ಇಂದಿಗೂ ಹಿಂದೂ ಧರ್ಮದ ದಲಿತ ವರ್ಗದವರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ. ಯಾವ ಕ್ರಿಶ್ಚಿಯನ್ ಧರ್ಮವು ನಮ್ಮ ದೇಶವನ್ನು ಒಳಗೊಂಡಂತೆ ಹಲವಾರು ದೇಶಗಳ ಮೇಲೆ ತನ್ನ ಧರ್ಮ-ಸಂಸ್ಕೃತಿಯನ್ನು ಹೇರಲು ಆಕ್ರಮಣ ಮಾಡಿ, ಮೋಸದ ಮಾರ್ಗದಲ್ಲೇ ತನ್ನ ಅಧಿಪತ್ಯ ಸ್ಥಾಪಿಸಿದ ಇತಿಹಾಸವನ್ನು ಹೊಂದಿರುವುದೋ ಅಂತಹ ಧರ್ಮ ವಿಶ್ವಧರ್ಮವಾದರೆ ಪ್ರಪಂಚದಲ್ಲಿ ಎಲ್ಲರೂ ಪರಸ್ಪರ ಸಹಬಾಳ್ವೆಯಿಂದ ಬದುಕು ನಡೆಸಲು ಸಾಧ್ಯವಾಗುವುದೇ? ನೀವೇ ಸ್ವಯಂ ಚಿಂತಿಸಿ.

ಇನ್ನು ಇಸ್ಲಾಂ ಧರ್ಮದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಭಯೋತ್ಪಾದನೆ ಹಾಗೂ ಲವ್ ಜಿಹಾದ್ ಎಂಬ ಜಗತ್ತಿಗೇ ಮಾರಕವಾಗಿರುವ ಕಳಂಕವನ್ನು ತನ್ನ ಮೇಲೆ ಹೊತ್ತಿಕೊಂಡಿರುವುದೋ ಆ ಧರ್ಮವು ವಿಶ್ವಧರ್ಮವಾಗಲು ಸಾಧ್ಯವಿದೆಯೇ? ಸ್ವತಃ ಅಂಬೇಡ್ಕರ್ ಅವರು ತಮ್ಮ 'ಪಾಕಿಸ್ತಾನ್ ಆರ್ ದ ಪಾರ್ಟಿಷನ್ ಆಫ್ ಇಂಡಿಯಾ' ಎಂಬ ಪುಸ್ತಕದಲ್ಲಿ ಮುಸ್ಲಿಮರ ಭ್ರಾತೃತ್ವವು ಎಂದೂ ಹೊರಗಿನವರಿಗೆ ಅಂದರೆ ಇತರೆ ಧರ್ಮದವರಿಗೆ ಅನ್ವಯಿಸುವುದಿಲ್ಲ. ಅವರು ಕೇವಲ ತಮ್ಮ ಧರ್ಮದವರನ್ನು ಮಾತ್ರ ಭ್ರಾತೃತ್ವದ ಭಾವನೆಯಿಂದ ಕಾಣುತ್ತಾರೆ. ತಾವು ವಾಸ ಮಾಡುವ ದೇಶದಲ್ಲಿ ತಮ್ಮದೇ ಆಡಳಿತ ಹೊಂದಿರಬೇಕು, ಇಲ್ಲದಿದ್ದರೆ ಅವರ ಆಡಳಿತಕ್ಕಾಗಿ ಹೋರಾಟ ಮಾಡಬೇಕು ಎಂಬ ಘೋರ ನಿಲುವನ್ನು ಹೊಂದಿದ್ದಾರೆ. ಮುಸ್ಲಿಮರು ತಮ್ಮ ದೇವರು ಅಲ್ಲಾನನ್ನು ನಂಬುವವರು ಮಾತ್ರ ಸ್ವರ್ಗಕ್ಕೆ ಹೋಗುತ್ತಾರೆ, ಉಳಿದವರು ನರಕಕ್ಕೆ ಹೋಗುತ್ತಾರೆ ಎಂಬ ಧೋರಣೆಯನ್ನು ಹೊಂದಿದ್ದಾರೆ. ತಮ್ಮ ಧರ್ಮದ ಬಗೆಗೆ ಮಾತ್ರ ಚಿಂತನೆ ನಡೆಸುವ, ಇತರ ಧರ್ಮಗಳೊಂದಿಗೆ ಪರಸ್ಪರ ಸಹಕಾರವನ್ನು ಹೊಂದಲು ತಯಾರಿಲ್ಲದ ವಿಚಾರಧಾರೆ ಹೊಂದಿರುವ ಇಸ್ಲಾಂ ಧರ್ಮವು ವಿಶ್ವಕ್ಕೆ ಬದುಕಲು ಸೂಕ್ತ ಮಾರ್ಗವನ್ನು ತೋರಲು ಸಾಧ್ಯವಾಗುವುದೇ? ನೀವೇ ಸ್ವಯಂ ಚಿಂತಿಸಿ. ಇಸ್ಲಾಂ ಧರ್ಮವು ಭಯೋತ್ಪಾದಕತೆ ಎಂಬ ಪಿಡುಗಿನಿಂದ ತನ್ನ ಧರ್ಮದ ಯುವಜನಾಂಗದವರ ಉತ್ತಮ ಬದುಕನ್ನೇ ಕಸಿದುಕೊಂಡಿದೆ. ಲವ್ ಜಿಹಾದ್ ಎಂಬ ಮತ್ತೊಂದು ಪಿಡುಗಿನಿಂದ ಪರಧರ್ಮದ ನಾರಿಯರನ್ನು ವಂಚನೆಯಿಂದ ವಿವಾಹವಾಗಿ ಅವರ ಇಚ್ಛೆಗೆ ವಿರುದ್ಧ ಮತಾಂತರವಾಗುವಂತೆ ಬಲಾತ್ಕಾರ ಮಾಡುತ್ತಾ ಬಂದಿದೆ. ಆ ನಾರಿಯರ ಜೀವನವನ್ನೇ ನರಕಸದೃಶವಾಗಿಸಿದೆ. 

ಇನ್ನು ಪ್ರಮುವಾದ ಉಳಿದ ಧರ್ಮಗಳ ಬಗೆಗೆ ತಿಳಿಸುವುದಾದರೆ ಜೈನ, ಬೌದ್ಧ, ಸಿಖ್ ಧರ್ಮಗಳು ನಮ್ಮ ಹಿಂದೂ ಧರ್ಮದ ಶಾಖೆಗಳಂತೆಯೇ ಇವೆ. ಹಿಂದೂ ಧರ್ಮದಿಂದಲೇ ಜನಿಸಿದ ವಿಶೇಷವಾದ ಶಾಖಾ ಧರ್ಮಗಳಂತೆ ಇವುಗಳ ಸ್ವರೂಪವಿದೆ. ನಮ್ಮ ದೇವರು ಮತ್ತು ಅವರ ಧರ್ಮದ ದೇವರ ತತ್ವಗಳು ಪರಸ್ಪರ ಪೂರಕವಾಗಿಯೇ ಇವೆ.

ಸನಾತನ ಧರ್ಮವೇ ಭರತಖಂಡದ ಹೃದಯವಾಗಿರುವಾಗ, ಅದನ್ನು ಮರೆತು ಜೀವಿಸಲು ಸಾಧ್ಯವೇ? ನಮ್ಮ ಜೀವನದಲ್ಲಿ ಇದುವರೆವಿಗೂ ಹೆಚ್ಚು ಕೇಳಿರುವ ಇತಿಹಾಸವು ಧರ್ಮಕ್ಕಾಗಿ, ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡು ಬದುಕಿದ ಮಹಾನ್ ವ್ಯಕ್ತಿಗಳದ್ದೇ ಆಗಿದೆ. ನಮ್ಮ ಹಿಂದೂ ಧರ್ಮವು ಹೇಳುವಂತೆ "ಸರ್ವೇ ಜನಃ ಸುಖಿನೋ ಭವಂತು", ಪ್ರಪಂಚದ ಎಲ್ಲಾ ಜೀವಿಗಳು ಎಲ್ಲಾ ಸೃಷ್ಟಿವರ್ಗವೂ ಸುಖಕರವಾಗಿರಲಿ ಎಂಬ ಧ್ಯೇಯವು ಎಷ್ಟೊಂದು ಆದರ್ಶಪ್ರಾಯವಾಗಿದೆ? ಬೇರೆ ಯಾವ ಧರ್ಮದಲ್ಲಾದರೂ ಇದನ್ನು ಕಾಣುವಿರೇನು? ಬೇರೆ-ಬೇರೆ ಧರ್ಮದವರ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುವುದು ಅವರೆಲ್ಲಾ ಈ ಜಗತ್ತಿನಲ್ಲಿ ಅಧಿಕಾರ, ಐಶ್ವರ್ಯ, ಸ್ಥಾನ-ಮಾನಗಳೆಂಬ ಲೌಕಿಕ ಭೋಗಗಳಿಗೇ ಧರ್ಮದ ಆಚಾರ-ವಿಚಾರಗಳಿಗಿಂತ ಹೆಚ್ಚು ಪ್ರಾತಿನಿಧ್ಯವನ್ನು ನೀಡುತ್ತಾರೆ. ಆದರೆ, ಹಿಂದೂ ಧರ್ಮವು ಜಗತ್ತಿಗೆ ನೀಡಿರುವುದು ವಜ್ರಾಯುಧಗಳನ್ನು, ಪುರುಷಸಿಂಹರನ್ನು. ಯಾರು ತಮ್ಮ ಸ್ವಂತ ಸುಖ-ಸಂತೋಷಗಳನ್ನು ತ್ಯಾಗ ಮಾಡಿ ಮಾನವ ಕೋಟಿಯ ಕಲ್ಯಾಣಕ್ಕಾಗಿ ಬದುಕನ್ನು ಸಮರ್ಪಿಸಿದರೊ ಅಂತಹ ಮಹಾನ್ ಸಂತರನ್ನು ನೀಡಿದೆ. ಹಾಗೆಯೇ ಯಾರು ತಮ್ಮ ಧರ್ಮದ ಉಳಿವಿಗಾಗಿ ತಮ್ಮ ನೆತ್ತರ ಕೊನೆ ಹನಿಯವರೆಗೂ ಹೋರಾಡಿದರೊ ಅಂತಹ ಶೌರ್ಯವಂತ ಸಾಮ್ರಾಟರನ್ನು ನೀಡಿದೆ.

ಹಿಂದೂ ಧರ್ಮವು ಎಂದೂ ಬಲಾತ್ಕಾರದಿಂದ ಅನ್ಯ ಧರ್ಮೀಯರನ್ನು ಮತಾಂತರಿಸುವ ಅನುಚಿತ, ಅಧರ್ಮದ ಕಾರ್ಯವನ್ನು ಮಾಡುವುದಿಲ್ಲ. ಆದರೆ ಇಸ್ಲಾಂ-ಕ್ರಿಶ್ಚಿಯನ್ ಧರ್ಮಗಳು ಬಲಾತ್ಕಾರದಿಂದ, ಮೋಸದಿಂದ ಮತಾಂತರ ಮಾಡುತ್ತಿರುವ ಸುದ್ದಿಗಳನ್ನು ದಿನ ಬೆಳಗಾದರೆ ಕೇಳುತ್ತಲೇ ಇರುತ್ತೇವೆ. ನಮ್ಮ ಧರ್ಮವು ಎಂದೂ ಒಂದೇ ಒಂದು ಭಯೋತ್ಪಾದಕನನ್ನು ಈ ವಿಶ್ವಕ್ಕೆ ಕಳುಹಿಸಲಿಲ್ಲ. ಬದಲಾಗಿ ತಾನು ಹಸಿದು ಕೊಂಡಿದ್ದರೂ ಮತ್ತೊಬ್ಬರ ಹಸಿವನ್ನು ತಣಿಸುವ ನಿಸ್ವಾರ್ಥದ ಉತ್ಕೃಷ್ಟತೆ ತಲುಪಿರುವ ಸನ್ಯಾಸಿಗಳ ಪರಂಪರೆಯನ್ನೇ ಸೃಷ್ಟಿಸಿದೆ. ಹಾಗೆಂದು ಯಾವಾಗಲೂ ಶಾಂತಿ ಮಂತ್ರವನ್ನು ಜಪಿಸುತ್ತಾ ಕೂರಿ ಎಂದು ನಮ್ಮ ಧರ್ಮವು ಎಂದೂ ಹೇಳಿಲ್ಲ. ಧರ್ಮ ಸಂಕಟದಲ್ಲಿದ್ದಾಗ ಅದರ ರಕ್ಷಣೆಗಾಗಿ ಅವಶ್ಯಕತೆ ಬಂದರೆ ಸ್ವಯಂ ಸಾಧುಗಳು, ಯಾರು ಅಹಿಂಸೆಯ ತತ್ವವನ್ನು ಎತ್ತಿ ಹಿಡಿದಿರುವರೊ ಅವರೂ ಕೂಡ ರಣಭೂಮಿಯಲ್ಲಿ ಶಸ್ತ್ರ ಹಿಡಿದು ಹೋರಾಡಬೇಕೆಂಬ ಶಕ್ತಿಯುತ ವಿಚಾರಧಾರೆಯನ್ನು ಹೊಂದಿದೆ. "ಅಹಿಂಸಾ ಪರಮೋಧರ್ಮ ಧರ್ಮ ಹಿಂಸಾ ತತೈವಚ" ಎಂಬ ಭೋದನೆ ನಮ್ಮ ಧರ್ಮದ್ದು. ಅಹಿಂಸೆಯೇ ಪರಮಧರ್ಮವಾಗಿರುವುದು ನಿಜ. ಆದರೆ, ಧರ್ಮದ ರಕ್ಷಣೆಗಾಗಿ ಅನಿವಾರ್ಯತೆ ಉಂಟಾದರೆ ಹಿಂಸೆ ಮಾಡುವುದೂ ಶ್ರೇಷ್ಠ ಧರ್ಮವೇ ಎಂಬ ಭೋದನೆಯನ್ನು ಸಾರಿದೆ. "ಶಸ್ತ್ರ ಸಂರಕ್ಷಿತೆ ರಾಷ್ಟ್ರೆ ಶಾಸ್ತ್ರ ಚರ್ಚಾಂವಿಧಿಯತೆ", ಯಾವ ರಾಷ್ಟ್ರವು ಸುಸಜ್ಜಿತ ಶಸ್ತ್ರಗಳಿಂದ ಸಂರಕ್ಷಿತವಾಗಿರುವುದೋ, ಅಂತಹ ರಾಷ್ಟ್ರ ಮಾತ್ರವೇ ಶಾಸ್ತ್ರಗಳ ಅಧ್ಯಯನ ಮಾಡಲು ಸಾಧ್ಯ. ಈ ಭೋದನೆಯ ಮೂಲಕ ಸನಾತನ ಧರ್ಮವು ಶಾಂತಿಯ ಮೌಲ್ಯ ಏನೆಂಬುದನ್ನು ಜಗತ್ತಿಗೆ ತಿಳಿಸಿದೆ. ಶಕ್ತಿ ಮತ್ತು ಶಾಂತಿಗಳೆರಡೂ ಪ್ರಮುಖವಾಗಿರುವ ಆದರ್ಶವನ್ನು ಜಗತ್ತಿಗೆ ನೀಡಿದ ಕೀರ್ತಿ ಭರತ ಭೂಮಿಯ ಧರ್ಮಕ್ಕೆ ಸಲ್ಲುತ್ತದೆ. ಇಂತಹ ಧರ್ಮವನ್ನು ವಿಶ್ವದ ಜನರು ಅನುಸರಿಸಿದರೆ, ಜಗತ್ತಿನಲ್ಲಿ ಸುರಕ್ಷಿತವಾಗಿ ಶಾಂತಿಯಿಂದ ಪರಸ್ಪರ ಸಹಕಾರದಿಂದ ಬದುಕುವ ಸೌಭಾಗ್ಯ ಎಲ್ಲರಿಗೂ ದೊರೆಯುತ್ತದೆ. ಜೀವನವೆಂಬ ರಣರಂಗದಲ್ಲಿ ಬದುಕೆಂಬ ಹೋರಾಟವನ್ನು ಶುರು ಮಾಡಿದ ಮೇಲೆ ಸರಿಯಾದ ಮಾರ್ಗದಲ್ಲಿ ಸಾಗಲು ಧರ್ಮವೆಂಬ ಶಕ್ತಿ ಅಸ್ತ್ರ ಬೇಕೇ ಬೇಕು. ಧರ್ಮವನ್ನೇ ಅನುಸರಿಸದ ಮಾನವರ ಬದುಕು ಪಶುಪಕ್ಷಿಗಳಂತೆ ಆಗಿಬಿಡುತ್ತದೆ. ಹೇಗಿದ್ದರೂ ಒಂದು ಧರ್ಮವನ್ನು ಅನುಸರಿಸಿ ಬಾಳಬೇಕು ಎಂಬುದು ಖಚಿತವಾಗಿರುವಾಗ, ನಾವು ಯಾವ ಧರ್ಮವು ಜೀವನವನ್ನು ಸಮೃದ್ಧವಾಗಿಸುವುದೋ ಭವಸಾಗರದ ದುಃಖವನ್ನು ಎದುರಿಸುವ ಸಾಮರ್ಥ್ಯವನ್ನು ನೀಡುವುದೋ ಅಂತಹ ಧರ್ಮವನ್ನು ಅನುಸರಿಸುವುದು ಹೆಚ್ಚು ಒಳಿತಲ್ಲವೇ?

ಅನ್ಯಧರ್ಮಗಳು ತಮ್ಮ ಧರ್ಮ, ದೇವರು ಹೇಳಿದ್ದೇ ಪರಮಸತ್ಯ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸಾರುವ ಮೂಲಕ ಮಾನವರ ಸ್ವಾತಂತ್ರ್ಯಕ್ಕೇ ನಿರ್ಬಂಧವನ್ನೇರುತ್ತದೆ. ಆ ಧರ್ಮಗಳ ದೇವರು ಧರ್ಮದ ಸ್ಥಾಪಕನಿಗೆ ಸತ್ಯವನ್ನು ಸಾಕ್ಷಾತ್ಕರಿಸಿರುವನು. ಅದನ್ನು ನಾವು ಒಪ್ಪಲೇಬೇಕು, ಪ್ರಶ್ನಿಸಬಾರದು ಎಂಬ ನಿಲುವನ್ನು ಹೊಂದಿದ್ದಾರೆ. ಆದರೆ, ಹಿಂದೂ ಧರ್ಮದ ಶ್ರೇಷ್ಠ ಗ್ರಂಥಗಳಾದ ಉಪನಿಷತ್ತು ಹಾಗೂ ಭಗವದ್ಗೀತೆಯಲ್ಲಿ ಶಿಷ್ಯರ ಅನೇಕಾನೇಕ ಪ್ರಶ್ನೆಗಳಿಗೆ ಸ್ವಯಂ ಗುರುವೇ ಉತ್ತರ ನೀಡಿದ್ದಾರೆ. ಯಾವುದನ್ನು ಹಿಂದೆ ಋಷಿಗಳು ಸಾಧಿಸಿ ಸತ್ಯ ಎಂದು ತಿಳಿಸಿರುವರೊ, ಅದನ್ನು ಯಾರು ಬೇಕಾದರೂ ಸಾಕ್ಷಾತ್ಕರಿಸಿಕೊಳ್ಳಬಹುದು. ಅದಕ್ಕಾಗಿ ಅನುಸರಿಸಬೇಕಾದ ಮಾರ್ಗಗಳನ್ನು ಭೋದಿಸಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಇಂದಿಗೂ ಪ್ರಸ್ತುತದಲ್ಲಿರುವ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಹಾಗೂ ರಾಜಯೋಗಗಳೇ ಆಗಿವೆ.

ಹಲವಾರು ಸಂವತ್ಸರಗಳವರೆಗೆ ತಮ್ಮ ಚಕ್ರಾಧಿಪತ್ಯವನ್ನು ಸ್ಥಾಪಿಸಿ ಭೂ ಮಂಡಲದ ಬಹುತೇಕ ಭಾಗಗಳನ್ನು ಆಳಿದ ಗ್ರೀಕ್, ರೋಮನ್ನರ ಸಾಮ್ರಾಜ್ಯ ಹೇಳ ಹೆಸರಿಲ್ಲದಂತೆ ನಾಶವಾಯಿತು. ಆದರೆ, ನಮ್ಮ ಹಿಂದೂ ಧರ್ಮವು ಸಾವಿರಾರು ವರ್ಷಗಳ ನಿರಂತರ ಪರಕೀಯರ ಆಕ್ರಮಣದ ನಂತರವೂ ತನ್ನ ಅಂತಃಸತ್ವವನ್ನು ಕಾಪಾಡಿಕೊಂಡಿದೆ. ಇದು ಒಂದೇ ಒಂದು ಕಾರಣ ಸಾಕಾಗುವುದು, ಹಿಂದೂ ಧರ್ಮವು ವಿಶ್ವಧರ್ಮವಾಗಲು ಸಾಧ್ಯತೆ-ಸಾಮರ್ಥ್ಯತೆಗಳನ್ನು ಹೊಂದಿರುವುದು ಎಂದು ಸಾಬೀತುಪಡಿಸಲು. ಯಾವ ಆಕ್ರಮಣದ ಪೆಟ್ಟಿಗೂ ಬಗ್ಗದೆ ತನ್ನತನವನ್ನು ಉಳಿಸಿಕೊಂಡ ಹಿಂದೂ ಧರ್ಮವು ಈಗ ತನ್ನ ಧರ್ಮದ ಕೆಲವು ಜನಗಳೇ ಧರ್ಮದ್ರೋಹಿಗಳಾಗಿ ಅದರ ಮೇಲೆ ಆಕ್ರಮಣ ಮಾಡುತ್ತಿರುವ ಪೆಟ್ಟನ್ನು ಸಹಿಸಿಕೊಳ್ಳಬಲ್ಲದೆ? ನಾಲ್ಕು ಕಾಸಿನಾಸೆಗೆ ತನ್ನ ಧರ್ಮದ ವಿರುದ್ಧವೇ ಕೆಲಸ ಮಾಡುತ್ತಿರುವ ಇಂತಹ ಧರ್ಮದ್ರೋಹಿಗಳ ಅವಿವೇಕತನಕ್ಕೆ ಏನೆನ್ನಬೇಕು? ನಿಜವಾಗಿಯೂ ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸಬಹುದು. ಆದರೆ, ನಿದ್ರಿಸುವಂತೆ ನಾಟಕ ಮಾಡುವವರನ್ನು ಎಬ್ಬಿಸಲು ಸಾಧ್ಯವೇ? ಇದು ಹೇಗಾಯಿತೆಂದರೆ ಒಂದು ತಾಯಿಯ ಕೆಲವು ಮಕ್ಕಳು ಹಣದ ಆಮಿಷದಿಂದ ಅವಳಿಗೇ ವಿದ್ರೋಹವೆಸಗಿ, ಬೇರೆ ತಾಯಿಯ ಬಳಿ ಮೂರ್ಖರಂತೆ ಓಡುತ್ತಿರುವಂತಾಗಿದೆ. ಆದರೇನಾಯಿತು? ಇಂತಹ ಧರ್ಮದ್ರೋಹಿಗಳಿಗಿಂತ ಸಾವಿರ-ಸಾವಿರ ಪಟ್ಟು ಅಗಾಧವಾಗಿ ಬೆಳೆದು ನಿಂತಿರುವರು ಧರ್ಮವೀರರು. ಹಿಂದೂ ಧರ್ಮದ ರಕ್ಷಣೆಗಾಗಿ ಹೇಗೆ ನಮ್ಮ ಪೂರ್ವಜರು ತಮ್ಮ ಸರ್ವಸ್ವವನ್ನೂ ಧಾರೆ ಎರೆದರೊ, ಹಾಗೆ ಇಂದಿಗೂ ಅಂತಹ ಶೌರ್ಯವಂತ ಧರ್ಮವೀರರು-ಬಲಿದಾನವೀರರು ಧರ್ಮರಕ್ಷಣೆಗಾಗಿ ಸಜ್ಜಾಗಿರುವರು. ತಮ್ಮ ತಾಯಿಗೆ ಕೆಲವು ಮಕ್ಕಳು ವಿದ್ರೋಹವೆಸಗಿದರೇನಾಯ್ತು? ಆ ಮಹಾತಾಯಿಗೆ ತಮ್ಮ ಪ್ರಾಣವನ್ನೇ ನೀಡಲು ಸಿದ್ಧರಿರುವ ಮಕ್ಕಳಿದ್ದಾರೆ. ಸ್ವಾಮಿ ವಿವೇಕಾನಂದರು ಹೇಳುವಂತೆ ಈ ಭರತಭೂಮಿಯೆಂಬ ಹಡಗು ಲಕ್ಷಾಂತರ ವರ್ಷಗಳಿಂದ ಕೋಟ್ಯಾಂತರ ಜೀವಿಗಳನ್ನು ದಡ ಸೇರಿಸಿದೆ. ಈಗ ಅದಕ್ಕೆ ಸಣ್ಣ ತೂತಾಗಿದೆ. ಅದನ್ನು ಸುಮ್ಮನೆ ನೋಡುತ್ತಾ ಕೂರುವಿರೋ ಅಥವಾ ತಮ್ಮ ತಲೆಯ ರಕ್ತವನ್ನಾದರೂ ಅಲ್ಲಿ ಸುರಿಸಿ ಹಡಗನ್ನು ಮತ್ತೆ 
ಸಿದ್ಧಗೊಳಿಸುವಿರೊ? ಈ ಪ್ರಶ್ನೆಗೆ ನಾವೆಲ್ಲಾ ಇಂದು ಉತ್ತರಿಸಬೇಕಾಗಿದೆ. 

ಭರತಖಂಡದ ಆಧಾರವೇ ಹಿಂದೂ ಧರ್ಮ. ಇಡೀ ವಿಶ್ವಕ್ಕೆ ಹಿಂದೂ ಧರ್ಮದ ಅನಿವಾರ್ಯತೆಯನ್ನು ಈ ಲೇಖನದ ಮೂಲಕ ಅರ್ಥ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈಗ ಮತ್ತಷ್ಟು ಮಗದಷ್ಟು ಜಾಗೃತವಾಗುವ ಅವಶ್ಯಕತೆಯಿದೆ. ಧರ್ಮರಕ್ಷಣೆ ಹಾಗೂ ದೇಶಸೇವೆಯಂತಹ ಯೋಗ್ಯವಾದ ಆದರ್ಶವು ಮತ್ತೊಂದಿರಲು ಸಾಧ್ಯವಿಲ್ಲ. ಭವ್ಯ ಭಾರತವು ವಿಶ್ವಗುರುವಾಗಲಿ, ಸನಾತನ ಹಿಂದೂ ಧರ್ಮವು ವಿಶ್ವಧರ್ಮವಾಗಲಿ. ಸತ್ಯವಂತು ಇದೇ ಆಗಿದೆ. ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಅನಾದಿಯಿಂದ ಅಂತ್ಯದವರೆಗೂ ಭಾರತವೇ ವಿಶ್ವಗುರುವಾಗಿದೆ, ಹಿಂದೂ ಧರ್ಮವೇ ವಿಶ್ವಧರ್ಮವಾಗಿದೆ.

~ಸಿಂಚನ.ಎಂ.ಕೆ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ