ವೀರಾಂಗನಾ ರಾಣಿ ಜಿಂದ್_ಕೌರ್
#ರಾಣಿ_ಜಿಂದ್_ಕೌರ್
ಇಂದಿನ ಕಾಲದಲ್ಲೂ ಕೂಡ ಸ್ತ್ರೀ-ಪುರುಷರ ಸಮಾನತೆ, ಶ್ರೇಷ್ಠತೆ, ಹಿರಿಮೆ ಹಾಗೂ ಗರಿಮೆಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇಂತಹ ಚರ್ಚೆಗಳಲ್ಲಾ ಜನ್ಮ ತಾಳಿರುವುದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಲೇ ಹೊರತು, ಈ ನೆಲದ ಸಂಸ್ಕೃತಿಯಿಂದಲ್ಲ. ಈ ಆರ್ಯವರ್ತದ ಭೂಮಿಯಲ್ಲಿ( ಭಾರತ ದೇಶದಲ್ಲಿ ) ಮೊದಲಿನಿಂದಲೂ ಸ್ತ್ರೀ-ಪುರುಷರಿಗೆ ಸಮಾನವಾದ ಗೌರವ, ಸಮ್ಮಾನ ಹಾಗೂ ಅವಕಾಶಗಳನ್ನು ನೀಡಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ, ನಮ್ಮ ದೇಶವನ್ನು ಮಾತೃಭೂಮಿ ಎಂದು ಸಂಭೋದಿಸಲಾಗುತ್ತದೆ. ಇಲ್ಲಿನ ಪವಿತ್ರ ನದಿಗಳಿಗೆ ಗಂಗಾ, ಯಮುನಾ, ಸಿಂಧು, ಕಾವೇರಿ ಎಂಬ ಸ್ತ್ರೀ ನಾಮಧೇಯದಿಂದ ಕರೆದು ನದಿಗಳಲ್ಲೂ ಕೂಡ ಮಾತೃಭಾವವನ್ನು ಕಾಣುತ್ತಾರೆ. ಇಂತಹ ಗರಿಷ್ಠ ಸಂಸ್ಕೃತಿಯನ್ನು ನೀಡಿರುವ ಭರತ ಭೂಮಿಯಲ್ಲಿ ಸ್ತ್ರೀ ಪುರುಷರ ಸಮಾನತೆಯ ಚರ್ಚೆಗೆ ಅರ್ಥವೇ ಇಲ್ಲ.
ಸಿಖ್ಖರ ಪ್ರಖ್ಯಾತ ದೊರೆ ಮಹಾರಾಜ ರಣಜಿತ್ ಸಿಂಗ್ ನ ಶೌರ್ಯ, ಪರಾಕ್ರಮದ ಬಗ್ಗೆ ನಾವೆಲ್ಲಾ ಪರಿಚಿತರಾಗಿದ್ದೇವೆ. ಆದರೆ, ಈ ಮಹಾರಾಜನ ಕೊನೆಯ ಪತ್ನಿ ರಾಣಿ ಜಿಂದ್ ಕೌರ್ ಎಂಬ ವೀರಾಂಗನಾಳ ಬಗ್ಗೆ ನಾವೆಷ್ಟು ಜನ ಪರಿಚಿತರಾಗಿದ್ದೀವಿ? ಆಕೆಯ ಸಾಹಸ, ಬಲಿದಾನಗಳ ರೋಚಕ ಕಹಾನಿಯನ್ನು ದೇಶಭಕ್ತರ ಬೀಡಾದ ಭಾರತ ದೇಶವು ಎಂದಾದರು ಮರೆಯಲು ಸಾಧ್ಯವೇ? ನಾವೆಂದೂ ನಮ್ಮ ದೇಶದ ಒಳಿತಿಗಾಗಿ ತಮ್ಮ ಜೀವನದುದ್ದಕ್ಕೂ ಸಂಘರ್ಷ ಮಾಡಿದ ಮಹನೀಯರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಇಸ್ಲಾಂನ ಘೋರ ಆಕ್ರಮಣದಿಂದ ಶುರುವಾದ ಭಾರತೀಯ ಸಂಸ್ಕೃತಿ, ಧರ್ಮವನ್ನು ನಾಶ ಮಾಡುವ ವ್ಯರ್ಥ ಪ್ರಯತ್ನದ ಮೋಸದ ಹೋರಾಟವು ಶಕರು, ಹೂಣರು, ಫ್ರೆಂಚರು, ಬ್ರಿಟಿಷರ ಮೂಲಕ ಸಾಗಿ ಬಂದು ಈಗಿನ ಪಾಕಿಸ್ತಾನದ ಭಯೋತ್ಪಾದಕರವರೆಗೆ, ವಿಶ್ವಾಸದ್ರೋಹ ಮಾಡುವ ಚೀನಿಯರವರೆಗೆ, ನಮ್ಮ ದೇಶದ ಅನ್ನವನ್ನೇ ತಿಂದು ನಮ್ಮ ದೇಶಕ್ಕೇ ದ್ರೋಹ ಬಗೆಯುತ್ತಿರುವ ದೇಶದ್ರೋಹಿಗಳವರೆಗೆ ನಡೆಯುತ್ತಲೇ ಬಂದಿದೆ.
ಆದರೆ, ಇಂದಿಗೂ ನಮ್ಮ ದೇಶದಲ್ಲಿ ಸಾವಿರ-ಸಾವಿರ ವರ್ಷಗಳ ಸಂಸ್ಕೃತಿ-ಧರ್ಮದ ರಕ್ಷಣೆಗೆ ಭಾರತೀಯರು ತಮ್ಮ ಪ್ರಾಣವನ್ನೇ ಕೊಡಲು ತಯಾರಿರುವರು, ಆದರೆ ನಮ್ಮ ಸಂಸ್ಕೃತಿ-ಧರ್ಮವು ನಾಶವಾಗುವುದನ್ನು ನೋಡಲಾರರು. 1815ರಲ್ಲಿ ಮನ್ನಾಸಿಂಗ್ ಔಲಖ್ ರ ಪುತ್ರಿಯಾಗಿ ಜನಿಸಿದ ರಾಣಿ ಜಿಂದ್ ಕೌರ್ ತನ್ನ ಬದುಕಿನುದ್ದಕ್ಕೂ ನಿರ್ಭೀತಿಯಿಂದ ಬ್ರಿಟಿಷರ ವಿರುದ್ಧ ಹೋರಾಡಿದರು. ಮಹಾರಾಜ ರಣಜಿತ್ ಸಿಂಗ್ ನ ಮರಣಾನಂತರ ತನ್ನ 5 ವರ್ಷದ ಮಗ ದುಲೀಪ್ ಸಿಂಗ್ ನನ್ನೇ ರಾಜನನ್ನಾಗಿಸಿ, ತಾನು ಸಿಂಹಾಸನದ ಸಂರಕ್ಷಕರಾಗಿ ಸಾಕ್ಷಾತ್ ದುರ್ಗೆಯಂತೆ ನಿಂತರು.
ಮಹಾರಾಣಿ ಜಿಂದ್ ಕೌರ್ ನ ಜೀವನದ ಬಹುಪಾಲು ಭಾಗವು ಬ್ರಿಟಿಷರ ಅನ್ಯಾಯದ ವಿರುದ್ಧ ಹೋರಾಡಲು ವ್ಯತೀತವಾಯಿತು. ತನ್ನ ಜೀವಿತಾವಧಿಯಲ್ಲಿ ಬ್ರಿಟಿಷರ ವಿರುದ್ಧ ಎರಡು ಆಕ್ರಮಣಕಾರಿ ಹೋರಾಟಗಳನ್ನು ಮಾಡಿದ್ದಾರೆ. ಆದರೆ, ಅನುಭವದ ಕೊರತೆಯ ಕಾರಣ, ವಿಜಯಿಯಾಗದೆ ಸಿಖ್ಖರ ಸ್ವಾಧೀನತೆಯನ್ನೇ ಕಳೆದು ಕೊಳ್ಳಬೇಕಾಗಿ ಬಂದರೂ ತನ್ನ ಹೋರಾಟದ ಛಲವನ್ನೆಂದೂ ಬಿಡಲಿಲ್ಲ. ಕ್ರಿಸ್ಟಿ ಕ್ಯಾಂಪ್ ಬೆಲ್ ಅವರು ಬರೆದಿರುವ ದುಲೀಪ್ ಸಿಂಗ್ ನ ಬಗೆಗಿನ ಪುಸ್ತಕ ಮಹಾರಾಜಾಸ್ ಬಾಕ್ಸ್ ನಲ್ಲಿ "19ನೇ ಶತಮಾನದ ಭಾರತೀಯರ ಇತಿಹಾಸದ ಅದ್ವಿತೀಯ ವ್ಯಕ್ತಿತ್ವ ರಾಣಿ ಜಿಂದ್ ಕೌರ್ ರದ್ದು" ಎಂದು ವ್ಯಾಖ್ಯಾನಿಸಿದ್ದಾರೆ.
ತಮ್ಮ ಅಧಿಕಾರಕ್ಕೆ ತೊಡಕಾಗಿ ನಿಂತಿದ್ದ ಜಿಂದ್ ಕೌರ್ ರ ಖ್ಯಾತಿಯನ್ನು ಅಳಿಸಲು ಬ್ರಿಟಿಷರು ಸರ್ವವಿಧದಲ್ಲೂ ಪ್ರಯತ್ನ ಮಾಡ ತೊಡಗಿದರು. ಬ್ರಿಟಿಷರು ಈಕೆಯನ್ನು ಪಂಜಾಬಿನ ಮೆಸಲೈನಾ ಎಂದೆಲ್ಲಾ ಚಿತ್ರಿಸಿ, ಆಕೆಯ ತೇಜೋವಧೆನ್ನು ಮಾಡಲು ಯತ್ನಿಸಿದರು. ಬ್ರಿಟಿಷರ ಯಾವ ನಿಯಮಗಳಿಗೂ ಸಹಕಾರ ಕೊಡದ ಜಿಂದ್ ಕೌರ್ ತನ್ನ ಮಗನ ಮೇಲೆ ಹೇಗೆ ಪ್ರಭಾವ ಬೀರುವಳು, ಅವನನ್ನು ಹೇಗೆ ಸಮರ್ಥನಾಗಿ ಬೆಳೆಸಿ ನಮ್ಮ ವಿರುದ್ಧ ಭೀಕರ ಹೋರಾಟ ನಡೆಸಲು ಪ್ರೇರಣೆ ನೀಡುವಳೆಂದು ಹೆದರಿ ಆಕೆಯಿಂದ ಅವಳ ಮಗನನ್ನೇ ಬೇರ್ಪಡಿಸುವ ಯೋಜನೆ ಮಾಡಿದರು. 9 ವರ್ಷದ ಮಗನನ್ನು ತಾಯಿಯಿಂದ ಬೇರ್ಪಡಿಸುವ ಅನುಚಿತ ಕಾರ್ಯವನ್ನೇ ಮಾಡಿಬಿಟ್ಟರು ಮನುಷ್ಯತ್ವ ಇಲ್ಲದ ಬ್ರಿಟಿಷರು. ನಂತರ ಅವನನ್ನು ಇಂಗ್ಲೆಂಡ್ ಗೆ ಕರೆದೊಯ್ದು, ಅಲ್ಲಿ ರಾಣಿ ವಿಕ್ಟೋರಿಯಾ ಅವರ ಸಮ್ಮುಖದಲ್ಲಿ ತನ್ನ ಗೆಳೆಯರೊಂದಿಗೆ ಬದುಕು ನಡೆಸಬೇಕಾದ ವಿವಶತೆಯನ್ನು ನಿರ್ಮಾಣ ಮಾಡಿದರು.
ಬ್ರಿಟಿಷರ ಬಂಧನದಲ್ಲಿದ್ದ ರಾಣಿಯು ಗುಲಾಮಿತನದ ಬದುಕಿನಿಂದ ತಪ್ಪಿಸಿ ಕೊಳ್ಳಬೇಕೆಂದು ನಿರ್ಧಾರ ಮಾಡಿದರು. ಬಂಧನದ ಕೋಟೆಯಿಂದ ತಪ್ಪಿಸಿ ಕೊಂಡು ಕಾಡುಗಳ ಮೂಲಕ ಸುಮಾರು 800 ಮೈಲಿಗಳ ಕಠಿಣ ಪ್ರಯಾಣ ಮಾಡಿ ನೇಪಾಳವನ್ನು ತಲುಪಿದರು. ಅಲ್ಲಿಂದ ಬ್ರಿಟಿಷರಿಗೆ ತಾನು ಚಮತ್ಕಾರದಿಂದ ತಪ್ಪಿಸಿ ಕೊಂಡಿರುವುದಾಗಿ ಪತ್ರ ಬರೆದರು. ನೇಪಾಳದ ರಾಜ ಜಂಗ್ ಬಹದ್ದೂರ್ ಅವರು ಬ್ರಿಟಿಷರ ವಿರೋಧದ ನಡುವೆಯೂ, ರಾಣಿ ಜಿಂದ್ ಕೌರ್ ರಿಗೆ ರಕ್ಷಣೆಯನ್ನು ಒದಗಿಸಿ ಸಾರ್ಥಕತೆ ಮೆರೆದರು.
ಸಿಖ್ಖರ ಸಾಮ್ರಾಜ್ಯವನ್ನು ಉಳಿಸಲು ಶತಾಯ ಗತಾಯ ಪ್ರಯತ್ನ ಮಾಡಿದರೂ, ಅದಕ್ಕಾಗಿ ಜೀವನವಿಡೀ ಹೋರಾಟದ ಕಠಿಣ ಹಾದಿಯಲ್ಲೇ ಸಾಗಿದರೂ ಬ್ರಿಟಿಷರ ಮೋಸದ ಜಾಲದಲ್ಲಿ ಸಿಲುಕಿದ ಸಿಖ್ ಸಾಮ್ರಾಜ್ಯ ಭಾರತೀಯ ಇತಿಹಾಸದ ಶೌರ್ಯದ ಪುಟಗಳನ್ನು ಸೇರಿ ಹೋಯಿತು. ರಾಣಿ ಜಿಂದ್ ಕೌರ್ ಸಿಖ್ಖರ ಕೊನೆಯ ರಾಣಿಯಾಗಿ ಹೋದರು.
ಯಾವ ಮಾತೆ ತಾನೆ ತನ್ನ ಪುತ್ರನಿಂದ ದೂರವಿರುವ ದುಃಖವನ್ನು ಸಹಿಸಲು ಸಾಧ್ಯ? ಮಮತಾಮಯಿ ರಾಣಿ ಜಿಂದ್ ರು ತನ್ನ ಮಗನಿಗೆ ಸಂದೇಶ ಕಳುಹಿಸುತ್ತಲೇ ಇದ್ದರು, ತನ್ನನ್ನು ಶೀಘ್ರವಾಗಿ ಕಾಣಬೇಕೆಂಬ ಬಯಕೆಯನ್ನು ವ್ಯಕ್ತ ಪಡಿಸುತ್ತಲೇ ಇದ್ದರು. ನೊಂದ ಮಾತೆಯ ಹೃದಯದ ಪ್ರಾರ್ಥನೆ ಸಾಕ್ಷಾತ್ ಭಗವಂತನಿಗೇ ತಲುಪಿತೋ ಏನೋ? 1860ರ ಹೊತ್ತಿಗೆ ಕಲ್ಕತ್ತಾದಲ್ಲಿ ತನ್ನ ಮಗನನ್ನು
ಭೇಟಿಯಾಗುವ ಸೌಭಾಗ್ಯ ಬಂದೊದಗಿತು. ಆದರೆ, ದೌರ್ಭಾಗ್ಯವಶಾತ್ ಆ ಸಮಯದ ಹೊತ್ತಿಗೆ ರಾಣಿ ಜಿಂದ್ ರ ದೃಷ್ಟಿ ಬಹುತೇಕ ಕ್ಷೀಣಿಸಿತ್ತು. ತನ್ನ ಮಮತೆಯ ಸ್ಪರ್ಶದಿಂದಲೇ ಪುತ್ರನ ಉಪಸ್ಥಿತಿಯನ್ನು ಸಂಭ್ರಮಿಸಿದರು.
ಹಾಗೆಯೇ ಆತನ ತಲೆಯ ಭಾಗವನ್ನು ಸ್ಪರ್ಶಿಸಿದಾಗ ಅವನ ಕೂದಲನ್ನು ಕತ್ತರಿಸಲಾಗಿರುವುದು ತಿಳಿಯಿತು. ಇದರಿಂದ ಅತ್ಯಂತ ದುಃಖಿತರಾದ ರಾಣಿಯು "ಮಹಾರಾಜರು ಸತ್ತಿದ್ದಾರೇನೊ ನಿಜ, ಸಿಖ್ ಸಾಮ್ರಾಜ್ಯ ಸ್ವಾಧೀನತೆ ಕಳೆದು ಕೊಂಡಿದೆ ನಿಜ. ಆದರೆ, ಅಷ್ಟು ಮಾತ್ರಕ್ಕೆ ನನ್ನ ಮಗ ಹೀಗೆ ತನ್ನ ಸಿಖ್ಖರ ಪರಂಪರೆಯನ್ನು, ಸಿಖ್ಖರ ಸ್ವಾಭಿಮಾನವನ್ನು ಮರೆತು ಬಿಡುತ್ತಾನೆಂದು ನಾನೆಂದೂ ಅಂದು ಕೊಂಡಿರಲಿಲ್ಲ" ಎಂದು ಹೇಳುವ ಮೂಲಕ ನಮಗೆಲ್ಲರಿಗೂ ಒಂದು ಪಾಠವನ್ನು ಕಲಿಸಿದ್ದಾರೆ. ನಮ್ಮ ಮೇಲೆ ನಮ್ಮ ದೇಶ-ಧರ್ಮ-ಸಂಸ್ಕೃತಿಯ ಮೇಲೆ ಎಷ್ಟೇ ಆಕ್ರಮಣಗಳಾಗಲಿ, ಎಷ್ಟೇ ದೊಡ್ಡ ಆಘಾತವಾಗಲಿ, ಎಷ್ಟೇ ಸಂಕಟಗಳು ಬಂದು ಅಪ್ಪಳಿಸಲಿ ನಾವೆಂದಿಗೂ ಈ ಜೀವನದ ಯುದ್ಧದಲ್ಲಿ ಪರಾಜಿತರಾಗಬಾರದು. ನಮ್ಮ ಕಟ್ಟ ಕಡೆಯ ಉಸಿರಿನವರೆಗೂ ಹೋರಾಡಬೇಕು ಎಂಬ ಮರೆಯಬಾರದ ಪಾಠವನ್ನು ಕಲಿಸಿದ್ದಾರೆ. ನಂತರದ ಸಮಯದಲ್ಲಿ ಅವರ ಪುತ್ರನು ತನ್ನ ಕೇಶವನ್ನು ಚೆನ್ನಾಗಿ ಬೆಳೆಸಿ, ಹೆಮ್ಮೆಯ ಸಿಖ್ ದೊರೆಯಾಗಿ ಬೆಳೆಯುತ್ತಾನೆ. ಹೀಗೆ ತನ್ನ ಬದುಕನ್ನೇ ಸಿಖ್ ಸಾಮ್ರಾಜ್ಯದ ಸಮ್ಮಾನಕ್ಕಾಗಿ ಸಮರ್ಪಿಸಿದ ವೀರಾಂಗನೆಯು ತನ್ನ 46ನೇ ವಯಸ್ಸಿನಲ್ಲಿ 1863ನೇ ಇಸವಿಯಂದು ಬದುಕಿನ ಹೋರಾಟವನ್ನು ನಿಲ್ಲಿಸಿ ಶಾಂತವಾದರು.
ಇಂತಹ ಮಹಾನ್ ವ್ಯಕ್ತಿಗಳ ಜೀವನವನ್ನು ಅರ್ಥ ಮಾಡಿಕೊಂಡರೆ ಒಂದು ಪ್ರಮುಖವಾದ ಸಂಗತಿ ತಿಳಿಯುವುದು. ನಾವೆಷ್ಟೇ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದರೂ, ನಾವು ನಮ್ಮ ದೇಶಕ್ಕಾಗಿ, ಈ ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯನ್ನು ಮಾಡದಿದ್ದರೆ ನಮ್ಮ ಬದುಕಿಗೆ ಸಾರ್ಥಕತೆ ದೊರೆಯುವುದಿಲ್ಲ. ಇತಿಹಾಸವೇ ಈ ಮಾತಿಗೆ ಸಾಕ್ಷಿಯಾಗಿದೆ. ಸ್ವಾರ್ಥಕ್ಕಾಗಿ ಬದುಕು ನಡೆಸಿದ ಸತ್ತ ಮಾನವರ ಶವಕ್ಕೆ ಮಣ್ಣು ಹಾಕುವಾಗಲೆ, ಅವರ ಜೀವನದ ಅಧ್ಯಾಯಕ್ಕೂ ಮಣ್ಣು ಹಾಕಿ ಮುಕ್ತಾಯಗೊಳಿಸಲಾಗುತ್ತದೆ. ಆದರೆ ಯಾರು ಜೀವನವಿಡೀ ತನಗಿಂತ ಹೆಚ್ಚು ಇತರರ ಒಳಿತಿನ ಬಗ್ಗೆ ಯೋಚಿಸುವರೋ, ಸಮಾಜದ ಹಿತಕ್ಕಾಗಿ ತನ್ನದೆಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗುವರೋ ಅವರು ಸ್ವಯಂ ಈಶ್ವರನ ಕಾರ್ಯಕ್ಕೆ ಬಳಕೆಯಾಗುತ್ತಾರೆ. ಅವರ ಮೃತ್ಯುವೇ ಆದರೂ ಅವರ ಜೀವನದ ಅಧ್ಯಾಯ ಎಂದೆಂದಿಗೂ ಸಮಾಪ್ತವಾಗುವುದಿಲ್ಲ. ಜನಮಾನಸದಲ್ಲಿ ಅವರೆಂದಿಗೂ ಅಜರಾಮರರಾಗಿರುತ್ತಾರೆ.
Comments
Post a Comment