ಜೀವನ ಹುಡುಕುತ್ತಾ ಸಾವಿನ ಬಳಿ ಬಂದವರು!

ಜೀವನ ಹುಡುಕುತ್ತಾ ಸಾವಿನ ಬಳಿ ಬಂದವರು!

ಭಾರತದ ಯುವಶಕ್ತಿ ಹೆಚ್ಚಾದಷ್ಟೆ ವೇಗದಲ್ಲಿ ಕಡಿಮೆಯಾಗುತ್ತಿದೆಯೇ? ಬಣ್ಣ ಬಣ್ಣದ ಕನಸುಗಳು ಕರಗುವುದು ಬೇಗ ಎಂಬ ವಾಸ್ತವ ನುಡಿಗಟ್ಟನ್ನು ನಾವು ಬಲ್ಲೆವು. ಆದರೆ ಕನಸುಗಳೇ ಇರದಂತಹ ಬರಿದಾದ ಬದುಕನ್ನು ಬಾಳಲು ವಿವಶವಾಗಿಸಿರುವಾಗ, ಕನಸುಗಳೇ ಬೀಳದ ಮೇಲೆ, ಇನ್ನು ಕರಗುವ ಪ್ರಶ್ನೆಯೆಲ್ಲಿ? ಒಂದು ನಿರ್ದಿಷ್ಟ ವೃತ್ತಿಕ್ಷೇತ್ರದಲ್ಲೇ ಬದುಕು ಕಟ್ಟಿಕೊಳ್ಳಬೇಕು, ಇಲ್ಲವಾದರೆ ಜೀವನವೇ ನಾಶ ಎನ್ನುವಂತಹ ಭ್ರಮಾಲೋಕದಲ್ಲಿರುವವರು ಜಾಗೃತರಾಗುವುದು ಎಂದಿಗೆ? ಈಗ ನಾನು ವಿಶ್ಲೇಷಿಸಲು ಹೊರಟಿರುವುದು ಮಕ್ಕಳ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿ ಒಂದು ನಿರ್ದಿಷ್ಟ ವೃತ್ತಿಕ್ಷೇತ್ರದ ಬದುಕು ಅಥವಾ ಸಾವಿಗೆ ದುಡುಕು ಎಂಬ ಎರಡೇ ಆಯ್ಕೆಗಳು ಕಾಣಿಸುವಂತೆ ಮಾಡಿ, ಉಳಿದೆಲ್ಲಾ ಸಹಸ್ರ ಸಹಸ್ರ ಆಯ್ಕೆಗಳು ಅದೃಶ್ಯವಾಗುವಂತೆ ಮಾಡಿರುವ ಸಮಾಜದ ಬಗೆಗೆ.

ಸಾವಿಗೆ ಸಾವಿರ ದಾರಿ ಆದರೆ ಬದುಕೋಕೆ ಕೋಟಿ ದಾರಿ. ಆದರೆ ಈ ವರ್ಷ ಆಗಸ್ಟ್ ತಿಂಗಳಲ್ಲಿ ತಮಿಳುನಾಡಿನ 19 ವರ್ಷದ ಜಗದೀಶ್ವರನ್ ಎಂಬ ಯುವಕ ತಾನು ಎರಡೆರಡು ಬಾರಿ ಪ್ರಯತ್ನಿಸಿದರೂ ನೀಟ್ ಪರೀಕ್ಷೆಯಲ್ಲಿ ಪಾಸಾಗಲಿಲ್ಲ, ಡಾಕ್ಟರ್ ಆಗಲು ಸಾಧ್ಯವಿಲ್ಲ, ತನ್ನ ತಂದೆ ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯಿತು, ಅವರಿಗೆ ಹೇಗೆ ನನ್ನ ಮುಖವನ್ನು ತೋರಿಸಲಿ ಎಂದು ದುಃಖಿಸಿ ಅದರಿಂದ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡನು. ಇದಾದ ಎರಡು ದಿನಗಳ ನಂತರ ಆತನ ಒಬ್ಬರೇ ಪೋಷಕರಾಗಿದ್ದ ತಂದೆ ಕೂಡ ಇದೇ ದುರಂತದ ಮಾರ್ಗದಲ್ಲಿ ನಡೆದು ಕೊನೆಯುಸಿರೆಳೆದರು. ತಾವು ಹೆತ್ತು ಆಡಿಸಿ ಬೆಳೆಸಿದ್ದ ಒಬ್ಬನೇ ಒಬ್ಬ ಮಗನ ಅಂತ್ಯ ಸಂಸ್ಕಾರ ಮಾಡಿದ ನಂತರ ನೀಡಿದ ಸಂದರ್ಶನದಲ್ಲಿ 'ನಾನು ಅವನನ್ನು ಒಬ್ಬ ಡಾಕ್ಟರ್ ಆಗಿ ನೋಡಿದೆ, ಇಂಜಿನಿಯರ್ ಆಗಿ ನೋಡಿದೆ. ಆದರೆ ನನ್ನ ಮಗನಾಗಿ ನೋಡಲಿಲ್ಲ' ಎಂದು ಹೇಳಿರುವ ಅವರ ಕೊನೆಯ ಮಾತು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿದೆ. 

ನಮ್ಮ ದೇಶದ ಸುಪ್ರಸಿದ್ಧ ಕೋಚಿಂಗ್ ಸೆಂಟರ್ ಕೋಚಿಂಗ್ ಫ್ಯಾಕ್ಟರಿ ಎಂದೇ ಪ್ರಚಲಿತದಲ್ಲಿರುವ ಕೋಟಾದಲ್ಲಿ ವರ್ಷದಿಂದ ವರ್ಷಕ್ಕೆ ಈ ತೆರನಾದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಸೂಸೈಡ್ ಫ್ಯಾಕ್ಟರಿಯಾಗಿ ಪರಿಣಮಿಸುತ್ತಿದೆ. ಕೋವಿಡ್ ಸಮಯದಲ್ಲಿ ಮಕ್ಕಳು ಮನೆಯಲ್ಲಿಯೇ ಓದುತ್ತಿದ್ದರಿಂದ ಬಹುತೇಕ ಕಡಿಮೆಯಾಗಿದ್ದ ಈ ಪ್ರಕರಣಗಳು ಮತ್ತೆ ಬೆಳಕಿಗೆ ಬರುತ್ತಿವೆ. ತಮ್ಮ ಮಕ್ಕಳಿಗೆ ಇಚ್ಛೆ ಇಲ್ಲದಿದ್ದರೂ ಅವರನ್ನು ಡಾಕ್ಟರ್, ಇಂಜಿನಿಯರ್ ಆಗಿ ಮಾಡಲೇಬೇಕೆಂದು ಹೊರಟಿರುವ ಪೋಷಕರ ಮಹದಾಸೆಗಳೇ ಈ ಕೋಚಿಂಗ್ ಫ್ಯಾಕ್ಟರಿಗೆ ಬಂಡವಾಳ! ಈ ಪೋಷಕರು ತಮ್ಮ ಮಕ್ಕಳನ್ನೇ ಜೀವವೆಂದು ಕೊಂಡವರು, ತಮ್ಮ ಕುಟುಂಬಕ್ಕೆ ಮುಖ್ಯ ಜೀವನಾಧಾರವಾಗಿರುವ ಮನೆ, ಗದ್ದೆ, ಹೊಲಗಳ ಪತ್ರವನ್ನು ಅಡವಿಟ್ಟು ಕೋಟಾದಲ್ಲೇ ಕೋಚಿಂಗ್ ಕೊಡಿಸಲು ಮುಂದಾಗುತ್ತಾರೆ. ಇದರಿಂದ ಮಕ್ಕಳಿಗೆ ಕೋಚಿಂಗ್ ಸೇರುವ ಮೊದಲೇ ಅರ್ಧ ಜವಾಬ್ದಾರಿ ಹೆಗಲೇರಿ ಕುಳಿತಿರುತ್ತದೆ. ಆ ಕೋಚಿಂಗ್ ಫ್ಯಾಕ್ಟರಿಗಳಿಗೆ ಬೇಕಾಗಿರುವುದು ಅವರ ಜಾಹೀರಾತಿನ ಫ್ಲೆಕ್ಸ್ ನಲ್ಲಿ ವರ್ಷ-ವರ್ಷವೂ ಫೋಟೋ ಹಾಕಲು ಬೇಕಾದ 20-30 ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳು ಮಾತ್ರ. ಹೌದು ಅವರ ಟಾರ್ಗೆಟ್ ಅಷ್ಟೆ, ಆದರೆ ಈ ಟಾರ್ಗೆಟ್ ಅನ್ನು ತಲುಪಲು ಅನಾಸಕ್ತ ಸಾವಿರಾರು ಮಕ್ಕಳನ್ನು ಡಿಫೆಕ್ಟ್ ಪ್ರಾಡಕ್ಟ್ ಗಳನ್ನಾಗಿ ಮಾಡುತ್ತಿದ್ದಾರೆ. ಆ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಬೆಂಕಿಯನ್ನು ಹಾಕಿ, ಆ ಶಾಖದಿಂದ ತಮ್ಮ ಅಡಿಗೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಹೌದು ಅಸಲಿಗೆ ಎಲ್ಲಾ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗೋಕ್ಕಾಗಲ್ಲ. ಹಾಗೆಯೇ ಎಲ್ಲಾ ಮಕ್ಕಳು ಆರ್ಟಿಸ್ಟ್, ಜರ್ನಲಿಸ್ಟ್ ಕೂಡ ಆಗೋಕ್ಕಾಗಲ್ಲ. ದೇವರು ಎಲ್ಲರಿಗೂ ಒಂದಲ್ಲಾ ಒಂದು ಶಕ್ತಿಯನ್ನು ನೀಡಿರುತ್ತಾನೆ. ನಾವು ಯಾರನ್ನೂ ಜಡ್ಜ್ ಮಾಡೋಕ್ಕಾಗಲ್ಲ, ಯಾರ ಜೊತೆಗೂ ಕಂಪೇರ್ ಕೂಡ ಮಾಡೋಕ್ಕಾಗಲ್ಲ. ಇದೇ ಪ್ರಕೃತಿಯ ಸಮಾನತೆಯ ನಿಯಮ ಹಾಗೂ ವೈವಿಧ್ಯತೆಯ ನಿಯಮ. 

ಇಂದಿನ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಆರ್ಥಿಕತೆಯ ದುರಾಸೆಯಿಂದ ಮಕ್ಕಳನ್ನು ಅದೇ ವಿಜ್ಞಾನ ಕ್ಷೇತ್ರದಲ್ಲಿ ಸಾಗಲು ವಿವಶವಾಗಿಸುತ್ತಿರುವುದರಿಂದ ಎಷ್ಟೆಲ್ಲಾ ಸಮಸ್ಯೆಗಳು, ಅದರಲ್ಲೂ ಆತ್ಮಹತ್ಯೆ ಪ್ರಕರಣಗಳು! ಪುಟ್ಟ ಪುಟ್ಟ ಹೆಜ್ಜೆಗಳು ಬಲಿತು ದೊಡ್ಡದಾದ ಮೇಲೆ ಜೀವನವನ್ನು ಹುಡುಕುತ್ತಾ ಹೊರಟವರು ಸಾವಿನ ಬಳಿ ಸಾಗುತ್ತಿದ್ದಾರೆ. ಓದಿನ ನಂತರ ಶುರುವಾಗಬೇಕಾದ ಬದುಕು, ಇಚ್ಛೆಯಿಲ್ಲದ ಓದಿನ ವಿವಶತೆಗೆ ಕಟ್ಟುಬಿದ್ದು ಅಂತ್ಯವಾಗುತ್ತಿದೆ. ಈ ಕೋಚಿಂಗ್ ಸೆಂಟರ್ ಗಳಲ್ಲಿ ನಿರಂತರವಾಗಿ ವಾರಕ್ಕೊಮ್ಮೆ ನೀಡುವ ಯೂನಿಟ್ ಟೆಸ್ಟ್ ಗಳಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಮಾನಸಿಕ ಸ್ಥೈರ್ಯ ಕಳೆದು ಕೊಂಡ ವಿದ್ಯಾರ್ಥಿಗಳು ನನಗೆ ಹೆಚ್ಚು ಅಂಕ ಗಳಿಸಲಾಗಲ್ಲ,
ಇನ್ನು ನಾನು ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಿಲ್ಲ. ನನ್ನ ತಂದೆ ತಾಯಿ ಊರಿನಲ್ಲಿ ಗದ್ದೆ (ಆಸ್ತಿ) ಮಾರಿ ಅಥವಾ ಅಡವಿಟ್ಟು ಓದಲು ನನ್ನನ್ನು ಕಳಿಸಿದ್ದಾರೆ, ಅವರನ್ನು ಹೇಗೆ ಎದುರಿಸಲಿ? ಅವರ ಕನಸುಗಳನ್ನು ಹೇಗೆ ನುಚ್ಚುನೂರು ಮಾಡಲಿ? ಎಂದು ನೋವನ್ನು ತಾಳಲಾಗದೆ ಜೀವನವನ್ನೇ ಕೊನೆಗೊಳಿಸಿದ್ದಾರೆ. 2015ರಲ್ಲಿ 17, 2016ರಲ್ಲಿ 16, 2017ರಲ್ಲಿ 7, 2018ರಲ್ಲಿ 20, 2019ರಲ್ಲಿ 8, 2020ರಲ್ಲಿ 4 (ಕೋವಿಡ್ ಸಮಯ), 2021ರಲ್ಲಿ 0 (ಕೋವಿಡ್ ಸಮಯ), 2022ರಲ್ಲಿ 15 ಹಾಗೂ 2023ರಲ್ಲಿ 24 ವಿದ್ಯಾರ್ಥಿಗಳು ಈ ಕೋಟಾ ಕೋಚಿಂಗ್ ಸೆಂಟರ್ ಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಸಮರ್ಥವಾಗಿ, ಧೈರ್ಯವಾಗಿ ನಿರ್ಧಾರ ತೆಗೆದುಕೊಳ್ಳಲಾಗದ ಮಕ್ಕಳ ಬಗೆಗೆ ಅನುಕಂಪ ಸೂಚಿಸುವ ಮೊದಲು ಅವರ ಈ ಸ್ಥಿತಿಗೆ ಕಾರಣವಾದ ಆರ್ಥಿಕ ಸಮಸ್ಯೆಗೆ ವಾಸ್ತವಿಕ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಶ್ರೀಮಂತರ ಮಕ್ಕಳಿಗೆ ಹಣಬಲ ಇರುವುದರಿಂದ ಇದು ಸಮಸ್ಯೆಯಲ್ಲ. ಅಂತೆಯೇ ಬಡಮಕ್ಕಳಿಗೆ ಹಣಬಲ ಇಲ್ಲದಿರುವುದರಿಂದ ಅವರು ಈ ಮಟ್ಟದ ಕೋಚಿಂಗ್ ಗೆ ಸೇರುವುದಿಲ್ಲವಾದ್ದರಿಂದ ಅವರಿಗೂ ಇದು ಸಮಸ್ಯೆಯಲ್ಲ. ಆದರೆ ಯಾವಾಗಲೂ ಎಲ್ಲಾ ಕ್ಷೇತ್ರಗಳಲ್ಲೂ ಸಮಸ್ಯೆಯನ್ನು ಅನುಭವಿಸುವ ಮಧ್ಯಮ ಕ್ಷೇತ್ರದವರೇ ಇಲ್ಲಿಯೂ ಪೆಟ್ಟು ತಿನ್ನುವುದು. ಯಾವ ಮಕ್ಕಳು ಕೋಚಿಂಗ್ ಸೇರಲು ಹೋಗುತ್ತಾರೊ ಅವರಿಂದ ಸಂಪೂರ್ಣ ಅಥವಾ ಬಹುತೇಕ ಹೆಚ್ಚು ಭಾಗದ ಫೀಸ್ ಹಣವನ್ನು ಪಡೆದ ಮೇಲೆಯೇ ಅಡ್ಮಿಷನ್ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ಅಲ್ಲಿ ಸೇರಿದ ನಂತರ ವಿದ್ಯಾರ್ಥಿಗೆ ನಾನು ಇಲ್ಲಿ ಓದಲಾಗುವುದಿಲ್ಲ, ಮನೆಗೆ ಮರಳಬೇಕು ಎಂದೆನಿಸಿದರೆ ಕೋಚಿಂಗ್ ಪಡೆದಷ್ಟು ದಿನದ ಹಣವನ್ನು ಮಾತ್ರ ಫೀಸ್ ಆಗಿ ಉಳಿಸಿಕೊಂಡು ಬಾಕಿ ಮೊತ್ತವನ್ನು ಮರಳಿ ನೀಡುವ ವ್ಯವಸ್ಥೆಯಾಗಬೇಕು. ಲಂಗು ಲಗಾಮಿಲ್ಲದೆ ಓಡುತ್ತಿರುವ ಕೋಚಿಂಗ್ ಸೆಂಟರ್ ಗಳು ಯಾವ ಕಂಪನಿ- ಫ್ಯಾಕ್ಟರಿಗಳಿಗೂ ಕಡಿಮೆಯಿಲ್ಲ. ಹೀಗಿರುವಾಗ ಸರ್ಕಾರವು ಇದರ ಮೇಲೆ ಏಕೆ ನಿಯಂತ್ರಣವನ್ನು ಹೊಂದಿಲ್ಲ, ಯಾವ ನಿಯಮಾವಳಿಯನ್ನು ಜಾರಿಗೊಳಿಸಿಲ್ಲ?

ಈ ವರ್ಷದ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಂತು ಸರಣಿ ಆತ್ಮಹತ್ಯೆ, ಒಂದೇ ದಿನ ಇಬ್ಬರ ಆತ್ಮಹತ್ಯೆ ಅಂತಹ ಪ್ರಕರಣಗಳು ಬೆಳಕಿಗೆ ಬಂದ ಮೇಲೆ ಅಲ್ಲಿನ ಡಿಸಿ, ಶಾಸಕರ ಮೇಲೆ ಒತ್ತಡ ಹೆಚ್ಚಾದಾಗ ವಿದ್ಯಾರ್ಥಿಗಳಿರುವ ಪಿಜಿ ರೂಮ್ ಗಳ ಫ್ಯಾನ್ ಗಳಿಗೆ ಸ್ಪ್ರಿಂಗ್ ಅಳವಡಿಸುವಂತೆ, ಟೆರಸ್ಗಳಲ್ಲಿ ಮುಳ್ಳಿನ ತಂತಿ (ಫೆನ್ಸ್) ಹಾಕುವಂತೆ, ಯೂನಿಟ್ ಟೆಸ್ಟ್ ಗಳನ್ನು ನಿಲ್ಲಿಸುವಂತೆ ನಿರ್ದೇಶನಗಳು ಬಂದವು. ಸಮಸ್ಯೆಗೆ ಪರಿಹಾರ ನೀಡುವ ಬದಲು ಸಮಸ್ಯೆಗೆ ಶಕ್ತಿ ತುಂಬುವ ಕೆಲಸವಾಯಿತು. ಮನುಷ್ಯ ಎಂದ ಮೇಲೆ ಅವನು ಮನುಷ್ಯನೇ, ಯಂತ್ರವಾಗಲು ಸಾಧ್ಯವಿಲ್ಲ. ವಿರಾಮ ನೀಡದೆ ರಜೆ ನೀಡದೆ ದೀರ್ಘಕಾಲ ತರಗತಿಗಳನ್ನು ನಡೆಸುವುದು, ಪರೀಕ್ಷೆಗಳನ್ನು ಕೊಡುವುದು ಆ ವಿದ್ಯಾರ್ಥಿಗಳ ಮೇಲೆ ಎಷ್ಟು ಒತ್ತಡವಾಗುತ್ತಿದೆ ಎಂಬುದನ್ನು ಅವರು ಆ ನಗರದ ದೇವಾಲಯಗಳ ಗೋಡೆಯ ಮೇಲೆ ಬರೆದಿರುವ ಪ್ರಾರ್ಥನಾ ಬರಹಗಳೇ ಸಾರಿ ಹೇಳುತ್ತಿವೆ. ತಂದೆ - ತಾಯಿ ಕಾಲ್ ಮಾಡಿದಾಗ ಎಲ್ಲಾ ಸರಿಯಿದೆ, ನಾನು ಚೆನ್ನಾಗಿದ್ದೇನೆ, ಚೆನ್ನಾಗಿ ಓದುತ್ತಿದ್ದೇನೆ ಎಂದು ತಿಳಿಸಿದ್ದ ವಿದ್ಯಾರ್ಥಿಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ತಿಳಿಯುತ್ತಿದೆ ಮಕ್ಕಳು ಹಾಗೂ ಪೋಷಕರ ನಡುವೆ ಇರಬೇಕಾದ ಪ್ರೀತಿಯ ಬಂಧನವು ಹೇಗೆ ವಿವಶತೆಯ ಬಂಧನವಾಗಿದೆ ಎಂದು! ಇಂತಹ ಕಠಿಣ ಸನ್ನಿವೇಶವನ್ನು ಭೇದಿಸಿ ಸತ್ಯವನ್ನು ಒಪ್ಪಿಕೊಂಡು ಪೋಷಕರ ಜೊತೆ ಮರಳಿ ಹೋಗಿ ಓದನ್ನು ಚೆನ್ನಾಗಿಯೇ ಮುಂದುವರೆಸುತ್ತಿರುವ ಮಕ್ಕಳಿಗೆ ಅಭಿನಂದನೆಗಳು. ಇನ್ನೂ ಸಮಸ್ಯೆಯಲ್ಲಿ ಸಿಲುಕಿಕೊಂಡು ಹೊರಬರಲಾಗದೆ ಇರುವವರು ಈ ಮಕ್ಕಳಿಂದ ಸ್ಫೂರ್ತಿಯನ್ನು ಪಡೆದು ಮನೆಗೆ ಮರಳಲಿ ಎಂಬುದೇ ನಮ್ಮ ಬಯಕೆ. ಇನ್ನು ಆ ಕೋಚಿಂಗ್ ಸೆಂಟರ್ ಗಳಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ನ್ಯಾಯ ದೊರೆಕಲಿ ಎಂಬುದೇ ನಮ್ಮ ಹಾರೈಕೆ.

ಜೀವನದ ಬೆಟ್ಟವನ್ನೇರುವ ಸಲುವಾಗಿ ತರಬೇತಿ ಪಡೆಯಲು ವಿದ್ಯಾಭ್ಯಾಸದಲ್ಲಿ ತೊಡಗುವ ಮಕ್ಕಳು ಅದನ್ನು ಮುಗಿಸಲಾಗದೆ ಬೆಟ್ಟದ ತಪ್ಪಲಿನಲ್ಲೇ ಜೀವನವನ್ನು ಸಮಾಪ್ತಿ ಮಾಡುತ್ತಿದ್ದಾರೆ ಎಂದರೆ ಇದಕ್ಕಿಂತ ದೊಡ್ಡ ಶೋಕ ಬೇರೆ ಏನಿದೆ? ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಕೌರವರ ವಿರುದ್ಧ ಗೆದ್ದ ನಂತರವೂ ತಮ್ಮ ಮಕ್ಕಳನ್ನು ಕಳೆದುಕೊಂಡು ಸೋಲಿಗಿಂತ ಘೋರ ವೇದನೆಯನ್ನು ಅನುಭವಿಸಿದರು. ಆ ಮಕ್ಕಳ ಅಕಾಲಿಕ ಸಾವಿನ ದುಃಖವನ್ನು ಸಹಿಸಲು ಶ್ರೀಕೃಷ್ಣನ ದ್ವಾರ ರಕ್ಷಣೆಯಾದ ಅಭಿಮನ್ಯುವಿನ ಮಗು ಪರೀಕ್ಷಿತನ ಪಾಲನೆ ಪೋಷಣೆಯೊಂದೇ ಮಾರ್ಗವಾಯಿತು. ಅಂದರೆ ಮಕ್ಕಳನ್ನು ಕಳೆದುಕೊಂಡ ದುಃಖವನ್ನು ಸಹಿಸಲು ಮಕ್ಕಳ ಪಾಲನೆಯ ವಿನಃ ಮತ್ತ್ಯಾವುದೂ ಮಾರ್ಗವಿಲ್ಲ ಎಂಬುದನ್ನು ಮಹಾಭಾರತವೇ ತಿಳಿಸುತ್ತಿದೆ. 

ದಿನೇ ದಿನೇ ಹೀಗೆ ನಮ್ಮ ಯುವಕ ಯುವತಿಯರು ಪ್ರಾಣ ಕಳೆದುಕೊಳ್ಳುತ್ತಿದ್ದರೂ, ಈ ವಿಷಯ ಹೆಚ್ಚು ಗಂಭೀರವಾಗಿದ್ದರೂ ಬಹುತೇಕ ನ್ಯೂಸ್ ಚಾನೆಲ್ ಗಳು ಇದನ್ನು ಪ್ರಮುಖ ವಿಷಯವಾಗಿ ಪ್ರೈಂ ಟೈಮ್ ನಲ್ಲಿ ವರದಿ ಮಾಡಿಲ್ಲ. ಸಿಎಂ ಕುರ್ಚಿ ಅಲ್ಲಾಡುತ್ತಿದೆಯೇ? ಪಿಎಂ ಕುರ್ಚಿ ಭದ್ರವಾಗಿದೆಯೇ? ಎಂಬುದೇ ಇವರ ಸದಾಕಾಲದ ಚಿಂತೆ.
ಆದರೆ ಸುಧೀರ್ ಚೌದ್ರಿ ಎಂಬ ಪ್ರಮುಖ ಜರ್ನಲಿಸ್ಟ್ ತಮ್ಮ ಪ್ರೈಂ ಟೈಮ್ ಶೋ ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ಹಲವಾರು ದಿನಗಳ ಕಾಲ ಈ ಬಗೆಗೆ ವಿಸ್ಕೃತ ವರದಿಯನ್ನು ಮಾಡಿ ನನ್ನಂತಹ ಎಷ್ಟೋ ಜನರಿಗೆ ಈ ವಿಷಯವನ್ನು ಮತ್ತಷ್ಟು ಪಸರಿಸಿ ಜಾಗೃತಿ ಮೂಡಿಸಲು ಪ್ರೇರಣೆಯಾಗಿದ್ದಾರೆ. 

ಹೀಗೆ ಓದಿನ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ಮಕ್ಕಳು ಸಾಯಲು ತೋರಿದ ಧೈರ್ಯವನ್ನು ಕುಟುಂಬವನ್ನು ಮತ್ತು ಸಮಾಜವನ್ನು ಎದುರಿಸಲು ಏಕೆ ತೋರಲಿಲ್ಲ? ಅರಳಿ ನಲಿಯಬೇಕಾದ ಹೂಗಳು ಬಿರುಗಾಳಿಯ ಹೊಡೆತವನ್ನು ಎದುರಿಸಲಾಗದೆ ಮರದಿಂದ ಬಿದ್ದು ನಾಶವಾಗಲು ಕಾರಣವೇನು? ಪೋಷಕರು ತಮ್ಮ ಮಕ್ಕಳಿಗೆ ಈ ಪ್ರಪಂಚ ಎಷ್ಟು ದೊಡ್ಡದು? ಜೀವನ ಎಷ್ಟು ಸೊಗಸಾದುದು? ಎಂದು ತಿಳಿಸುತ್ತಾ ಬೆಳೆಸಿದ್ದರೆ ಅವರಿಗೆ ಎಂದಿಗೂ ಈ ಸ್ಥಿತಿ ಬರುತ್ತಿರಲಿಲ್ಲ. ಏನೇ ಇರಲಿ ನಮ್ಮ ಜೀವನಕ್ಕೆ ನಾವೇ ಜವಾಬ್ದಾರರು. ಸಮಾಜ- ಸರ್ಕಾರದ ವ್ಯವಸ್ಥೆಗಳು ನಮ್ಮ ಮೇಲೆ ಎಷ್ಟೇ ಪ್ರಭಾವ ಬೀರಿದರೂ ಅದಕ್ಕೆ ಪ್ರತಿಕ್ರಿಯೆ ನೀಡುವ ಸಂಪೂರ್ಣ ಹಕ್ಕು ನಮ್ಮದೇ. ನಮ್ಮ ಕೈಯಲ್ಲಿ ಓದಲಾಗುತ್ತಿಲ್ಲವೆಂದರೆ ಅಥವಾ ಈಗ ಮಾಡುತ್ತಿರುವ ವೃತ್ತಿಯನ್ನು ಮುಂದುವರಿಸಲಾಗುತ್ತಿಲ್ಲವೆಂದರೆ ತಂದೆ-ತಾಯಿಗೆ ಶರಣಾಗಿ ನಮ್ಮ ಇಚ್ಛೆಯನ್ನು ತಿಳಿಸೋಣ, ಇಚ್ಛೆಯಿಲ್ಲವಾದರೆ ಮಾರ್ಗದರ್ಶನ ಪಡೆದು ಮಾರ್ಗವನ್ನು ಹುಡುಕೋಣ. ಈ ಜೀವನದಲ್ಲಿ ನಾವು ನಮ್ಮ ತಂದೆ-ತಾಯಿಯ ಕೈ ಹಿಡಿದುಕೊಂಡಿರುವವರೆಗೂ ಯಾರ ಕಾಲನ್ನೂ ಹಿಡಿಯಬೇಕಾದ ದುಃಸ್ಥಿತಿ ಬರುವುದಿಲ್ಲ. ನಮ್ಮ ಜೀವನದಲ್ಲಿ ಎಂತಹ ಮಹತ್ವಾಕಾಂಕ್ಷೆ, ಮಹೋನ್ನತ ಗುರಿ ಇದೆ ಎಂದರೂ ಅದನ್ನು ಮೀರಿ ಸದಾಕಾಲ ಒಂದು ಗುರಿ ಸ್ಥಿರವಾಗಿರುವುದು. ಜೀವನದ ಹಂತಗಳಲ್ಲಿ ಆಯಾ ಹಂತಕ್ಕನುಗುಣವಾಗಿ ನಿಭಾಯಿಸಬೇಕಾದ ತಂದೆ/ತಾಯಿ, ಮಗು/ಮಗಳು, ಪತಿ/ಪತ್ನಿ, ಅಳಿಯ/ಸೊಸೆ, ಮಾವ/ಅತ್ತೆ ಎಂಬ ಆದರ್ಶಕರ ಜವಾಬ್ದಾರಿಗಳು. ಈ ರೀತಿ ಸುಂದರವಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾ ಹೋದರೆ ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಆಪ್ತರು ಧೈರ್ಯ ಕೊಡುತ್ತಾರೆ, ಮಾರ್ಗದರ್ಶನ ಮಾಡುತ್ತಾರೆ, ಯಶಸ್ಸಿಗೆ ಮುನ್ನುಡಿಯಾಗುತ್ತಾರೆ.

~ಸಿಂಚನ. ಎಂ.ಕೆ. ಮಂಡ್ಯ

Comments