ಮೋದಿಯ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತಾ ಉಚಿತಾಸ್ತ್ರ ಹಿಡಿದಿರುವ ಕೈ!? ನೀವು ರಾಜಕಾರಣ ಮಾಡದೆ ಇರಬಹುದು ಆದರೆ ರಾಜಕಾರಣದ ಪ್ರಭಾವ ನಿಮ್ಮ ಮೇಲೆ ಆಗದಂತೆ ತಡೆಯಲಾಗದು......
ಮೋದಿಯ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತಾ ಉಚಿತಾಸ್ತ್ರ ಹಿಡಿದಿರುವ ಕೈ!? ನೀವು ರಾಜಕಾರಣ ಮಾಡದೆ ಇರಬಹುದು ಆದರೆ ರಾಜಕಾರಣದ ಪ್ರಭಾವ ನಿಮ್ಮ ಮೇಲೆ ಆಗದಂತೆ ತಡೆಯಲಾಗದು......
"ಈ ದೇಶದ ಕಥೆ ಇಷ್ಟೇ ಕಣಮ್ಮೊ, ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೊ", ಇತ್ತೀಚೆಗೆ ಈ ಹಾಡು ತುಂಬಾ ವೈರಲ್ ಆಗಿದೆ. ಯಾರೋ ಒಬ್ಬ ದಿಟ್ಟ ಅಧಿಕಾರಿ ಅಥವಾ ರಾಜಕಾರಣಿ ಸಮಾಜದ ಘಾತುಕ ಶಕ್ತಿಗಳ ವಿರುದ್ಧ ಅಖಾಡಕ್ಕಿಳಿದು ಹೋರಾಡುತ್ತಿರುತ್ತಾನೆ. ತನ್ನ ಪ್ರಾಮಾಣಿಕತೆ, ಧೀಮಂತಿಕೆ, ಚಾತುರ್ಯತೆ, ಕಾರ್ಯಕ್ಷಮತೆಗಳಿಂದ ಸಮಾಜದ ಶುದ್ಧೀಕರಣ ಯಜ್ಞವನ್ನು ಮಾಡುತ್ತಿರುತ್ತಾನೆ. ಆದರೆ ಒಮ್ಮೆಗೆ ಎಲ್ಲಿಂದಲೋ ಪ್ರತ್ಯಕ್ಷಗೊಳ್ಳುವ ರಾಕ್ಷಸರು ಅವರ ಯಜ್ಞವನ್ನೆಲ್ಲಾ ಅಪವಿತ್ರಗೊಳಿಸಿ, ಅವರ ಶ್ರಮವನ್ನೆಲ್ಲಾ ವ್ಯರ್ಥಗೊಳಿಸುತ್ತಾರೆ. ಹೌದಲ್ಲವೆ? ಸಮಾಜದಲ್ಲಿ ಮೂಕಸಾಕ್ಷಿಯಾಗಿ, ಸಿನಿಮಾಗಳಲ್ಲಿ ಮೂಕಪ್ರೇಕ್ಷಕರಾಗಿ ಇದನ್ನೆಲ್ಲಾ ಕಂಡರೂ ಕಾಣದಂತೆ ಬದುಕಬೇಕು. ಹಲವು ಬಾರಿ ಹಣಬಲದ ಮುಂದೆ ಉಳಿದೆಲ್ಲಾ ಬಲಗಳು ಗೌಣವಾಗಿ ಹೋಗುವ ಆಪತ್ಕಾಲ ಬಂದೆರಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಇದೇ ರೀತಿಯ ಆಪತ್ಕಾಲ ಎದುರಾಗಬಹುದಾದ ಎಲ್ಲಾ ಮುನ್ಸೂಚನೆಗಳು ಕಂಡು ಬರುತ್ತಿದೆ. ಸ್ವಾತಂತ್ರ್ಯಾನಂತರ ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನಮಂತ್ರಿ 'ನರೇಂದ್ರ ದಾಮೋದರದಾಸ್ ಮೋದಿ', 2014ರಲ್ಲಿದ್ದ ವಿಷಮ ಪರಿಸ್ಥಿತಿಯಲ್ಲಿ ಸಂಘರ್ಷ ಮಾಡಿ ಪಟ್ಟಕ್ಕೇರಿದರು. ನಂತರ ಇಲ್ಲಿಯವರೆಗು ಅವರಿಡುತ್ತಾ ಬಂದಿರುವ ಎಲ್ಲಾ ಹೆಜ್ಜೆಗಳು ಐತಿಹಾಸಿಕವಾದುದಾಗಿದೆ. ಮೋದಿ ಎಂಬ ಒಬ್ಬ ವ್ಯಕ್ತಿಯ ಹೆಸರು ಇಡೀ ಭಾರತ ದೇಶದ ಕೋಟ್ಯಾನುಕೋಟಿ ಜನರು ಜಪಿಸುವ ಮಂತ್ರವಾಗಿ ಹೇಗೆ ಬದಲಾಯಿತು ಎಂಬುದನ್ನು ನಮ್ಮ ಮುಂದಿನ ಪೀಳಿಗೆಯವರು ಸುವರ್ಣಾಕ್ಷರದ ಇತಿಹಾಸದಲ್ಲಿ ಓದಲಿದ್ದಾರೆ. 2014ರಲ್ಲಿ ಆರಂಭವಾಗಿ ಇಂದಿಗೂ ಅಭೂತಪೂರ್ವವಾಗಿ ಓಡುತ್ತಿರುವ ಮೋದಿಯವರ ಅಶ್ವಮೇಧ ಯಾಗದ ಕುದುರೆಯನ್ನು ಈಗ ಹೇಗಾದರೂ ಸರಿ, ಯಾವ ಮಾರ್ಗದಿಂದಾದರೂ ಸರಿ ಅದನ್ನು ಕಟ್ಟಿ ಹಾಕಲೇಬೇಕು ಎಂದು ವಿಪಕ್ಷಗಳು ತೀರ್ಮಾನಿಸಿಬಿಟ್ಟಂತೆ ಕಾಣುತ್ತಿದೆ.
ಮೋದಿಯವರು ಪ್ರತೀದಿನ ಪ್ರತೀಕ್ಷಣ ಪಠಿಸುತ್ತಿರುವುದು ಒಂದೇ ಮಂತ್ರ, ಅದುವೇ ಭಾರತದ ವಿಕಾಸ ಮಂತ್ರ. ಈ ವಿಚಾರವಾಗಿ ಅತ್ಯಂತ ದೃಢತೆಯನ್ನು ಹೊಂದಿರುವ ಅವರು ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತಾ, ಅಭ್ಯುದಯದ ಅಧ್ಯಾಯಗಳನ್ನು ರಚಿಸುತ್ತಿದ್ದಾರೆ. ಆದರೆ ಅವರ ಎದುರಾಳಿಗಳು ಮೋದಿಯವರ ಆ ಗರಿಷ್ಠ ಸ್ಸರ್ಧೆಯ ಮಟ್ಟಕ್ಕೆ ತಲುಪಲಾಗದೆ, ಅಷ್ಟು ಕ್ಷಮತೆಯಿಂದ ನೇರಾನೇರ ಹೋರಾಡಲಾಗದೆ ಛದ್ಮವೇಷವನ್ನು ತೊಟ್ಟು ಜನತೆಗೆ ವಂಚಿಸುತ್ತಿದ್ದಾರೆ. ಹೇಗೆಂದರೆ, ನಿಮಗೆ ತಿಳಿದಿರುವ ಹಾಗೆ ಒಂದು ಸ್ಸರ್ಧೆ ಅಥವಾ ಯುದ್ಧದಲ್ಲಿ ಅದರ ಮಾನದಂಡಗಳಿಗನುಗುಣವಾಗಿ ನಡೆದುಕೊಳ್ಳಬೇಕು. ಉದಾಹರಣೆಗೆ, ಕಬಡ್ಡಿ ಆಟದಲ್ಲಿ ನಿಯಮಾನುಸಾರ ಎದುರಾಳಿ ತಂಡದ ಆಟಗಾರರನ್ನು ಮುಟ್ಟಿ ಮಧ್ಯಗೆರೆಯನ್ನು ತಲುಪಿ ಅಂಕ ಗಳಿಸಬೇಕೇ ಹೊರತು ಕಬಡ್ಡಿ ಕೋರ್ಟ್ ನಲ್ಲಿ ಕ್ರಿಕೆಟ್ ಅಥವಾ ಬೇರೆ ಯಾವುದೋ ಚೆಂಡಿನ ಆಟವನ್ನು ಆಡಿ ಸಮಯವನ್ನು ವ್ಯರ್ಥ ಮಾಡಿಸುತ್ತಾ ಗೆಲುವು - ಸೋಲುಗಳನ್ನು ಮುಂದೂಡುವುದಲ್ಲ. ಮೋದಿಯವರ ಒಂದು ವಿಕಾಸ ಮಂತ್ರಕ್ಕೆ ಪ್ರತಿಯಾಗಿ ಅವರ ಎದುರಾಳಿಗಳು ಅಷ್ಟೇ ಸಮರ್ಥವಾದ ಮತ್ತೊಂದು ಬಗೆಯ ವಿಕಾಸ ಮಂತ್ರವನ್ನು ಪ್ರಯೋಗಿಸದೆ ಉಚಿತ ಭಾಗ್ಯಗಳ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಇದು ಹೇಗಿದೆ ಎಂದರೆ ಮೋದಿಯವರು ಮೆಟ್ರೋ ರೈಲಿನ ಯೋಜನೆಯನ್ನು ಜಾರಿಗೊಳಿಸಿದರೆ ಅದರಲ್ಲಿ ನಮ್ಮ ರಾಜ್ಯದ ಜನರಿಗೆಲ್ಲಾ ಉಚಿತ ಪಯಣದ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಪ್ರಜೆಗಳನ್ನು ಹಾಗೂ ಅವರ ಮತಗಳನ್ನು ಮೋಸದಿಂದ ಹೈಜಾಕ್ ಮಾಡಿದಂತೆ. ಜನಸಾಮಾನ್ಯರ ದೌರ್ಬಲ್ಯತೆಯನ್ನೇ ಅಸ್ತ್ರವಾಗಿಸಿ ಜನಸಾಮಾನ್ಯರಿಗೇ ಹೊಡೆಯುವ ತಂತ್ರವನ್ನು ಇವರು ಅನುಸರಿಸುತ್ತಿದ್ದಾರೆ. ನಮ್ಮ ಸನಾತನ ಸಂಸ್ಕೃತಿಯನುಸಾರ ಅನ್ನದಾನ ಕ್ಕಿಂತ ಶ್ರೇಷ್ಠ ದಾನ ವಿದ್ಯಾದಾನ, ಹಾಗೆಯೇ ವಿದ್ಯಾದಾನಕ್ಕಿಂತ ಶ್ರೇಷ್ಠ ದಾನ ಆಧ್ಯಾತ್ಮದ ಜ್ಞಾನ ದಾನ ಎಂದು ವ್ಯಾಖ್ಯಾನಿಸುತ್ತಾರೆ. ನಾವು ಒಬ್ಬರಿಗೆ ಒಂದು ಹೊತ್ತಿನ ಅನ್ನವನ್ನು ನೀಡಿದರೆ ಆ ಹೊತ್ತಿಗಷ್ಟೇ ಆತನ ಹೊಟ್ಟೆ ತುಂಬಬಹುದು, ಆದರೆ ಆ ಅನ್ನವನ್ನು ಸಂಪಾದಿಸುವ ವಿದ್ಯೆಯನ್ನು ಕಲಿಸಿಕೊಟ್ಟರೆ ಆತ ಜೀವನವಿಡೀ ಹೊಟ್ಟೆ ತುಂಬಿಸಿಕೊಳ್ಳಬಹುದು. ಇನ್ನು ಆಧ್ಯಾತ್ಮದ ಜ್ಞಾನದಿಂದ ವಿದ್ಯೆಯನ್ನು ಕಲಿಯುವಾಗ ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು. ವಾಸ್ತವದಲ್ಲಿ ಇದುವೇ ನಮ್ಮ ಜೀವನದ ಸತ್ಯ. ಆದಾಗ್ಯು ಈ ಮೇಲಿನ ವಾಸ್ತವ ಸತ್ಯವು ಅಸ್ತಿತ್ವದಲ್ಲಿಲ್ಲದಂತಾಗುವ ಆಪತ್ತಿನ ಸಮಯದಲ್ಲಿ 'ಹಸಿದ ಹೊಟ್ಟೆಗೆ ವೇದಾಂತವನ್ನಲ್ಲ, ಅನ್ನವನ್ನು ನೀಡಿ' ಎಂಬ ನಮ್ಮ ಶ್ರೀಗುರು ಸ್ವಾಮಿ ವಿವೇಕಾನಂದರಂತಹವರ ಮಾತೇ ಅಕ್ಷರಶಃ ಸತ್ಯ! ಬಡತನದ ವಿಚಾರದಲ್ಲಿ ಅಸಂವೇದನೀಯವಾಗಿ ವರ್ತಿಸುವುದು ಘೋರ ಪ್ರಮಾದವೇ ಸರಿ. ಸ್ವಯಂ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಭೋದಿಸಿರುವಂತೆ ಬಡತನವು ಎಂತಹ ಧೀರಾತಿಧೀರರ ಮನವನ್ನು ಬೇಕಾದರೂ ಕಲಕಿ ವಿಚಲಿತಗೊಳಿಸುತ್ತದೆ. ಆದ್ದರಿಂದ ಉಚಿತ ಭಾಗ್ಯಗಳನ್ನು ನೆಚ್ಚಿ ಮತ ನೀಡುತ್ತಿರುವ ಮತದಾರರನ್ನು ನಿಂದಿಸುವುದು ಸರಿಯಲ್ಲ, ಇಂದಿಗೂ ನಮ್ಮ ಜನರಲ್ಲಿ ಎಷ್ಟೊಂದು ಕಷ್ಟಗಳಿವೆ ಎಂಬುದನ್ನು ಇದು ತಿಳಿಸುತ್ತದೆ. ಅತೀ ಹೆಚ್ಚು ಕಷ್ಟದಲ್ಲಿರುವವರಿಗೆ ಆ ನಿರ್ದಿಷ್ಟ ಸಂದರ್ಭದಲ್ಲಿ ಉಚಿತವಾಗಿ ಅಗತ್ಯತೆಯನ್ನು ತಲುಪಿಸುವುದು ಮಹಾತ್ಕಾರ್ಯವೇ ಸರಿ. ಇಂತಹ ಸಂವೇದನಾತ್ಮಕವಾದ ಬಡತನದ ವಿಷಯವನ್ನು ಅಸ್ತ್ರವಾಗಿಸಿಕೊಂಡು ಅಸಂವೇದನೀಯವಾಗಿ ವರ್ತಿಸುತ್ತಿರುವ ಬಹುತೇಕ ವಿಪಕ್ಷಗಳು ಆರ್ಥಿಕತೆಯ ಪರಿಣಾಮದ ಬಗ್ಗೆ ಯಾವುದೇ ಪ್ರಖರ ವಿಶ್ಲೇಷಣೆಯನ್ನು ಮಾಡದೆ, ಸ್ಪಷ್ಟೀಕರಣವನ್ನು ನೀಡದೆ ಉಚಿತ ಭಾಗ್ಯಗಳನ್ನು ಜಾರಿಗೊಳಿಸುತ್ತಿದ್ದಾರೆ. ರಾಜಕಾರಣಿಗಳಿಗೆ ಆಟ ಆದರೆ ಜನಸಾಮಾನ್ಯರಿಗೆ ಪ್ರಾಣಸಂಕಟ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಯಾವುದು ಅತಿ ಸುಲಭವಾಗಿ ದೊರೆಯುವುದೊ ಅದು ದೀರ್ಘಕಾಲ ನಮ್ಮ ಬಳಿ ಇರುವುದಿಲ್ಲ. ಯೋಗ್ಯವಾದದ್ದನ್ನು ಪಡೆಯಬೇಕಾದರೆ ಯೋಗ್ಯತೆಯನ್ನು ಸಂಪಾದಿಸಲೇಬೇಕು. ಒಂದೋ ನಮಗೆ ಏನಾದರೂ ಬೇಕೆಂದರೆ ಅದಕ್ಕಾಗಿ ಶ್ರಮ ಪಟ್ಟು ದುಡಿಯಬೇಕು ಅಥವಾ ಅದರ ಆಸೆ ಬಿಟ್ಟು ಅದಿಲ್ಲದೆ ಬದುಕಬೇಕು. ನಮ್ಮ ರಾಜ್ಯ ಬಿಜೆಪಿಯವರು ತಾವು ಕ್ಷಮತೆ ಗಳಿಸಿ ಹೋರಾಡದೆ ಮೋದಿಯವರನ್ನೇ ಯಾವಾಗಲೂ ಮುಂದಿರಿಸಿ ಯುದ್ಧ ಮಾಡುತ್ತಿದ್ದರಿಂದ ಅವರ ಸಾತ್ವಿಕ ಅಹಂಕಾರಕ್ಕೆ ವಾಸ್ತವತೆಯ ಪೆಟ್ಟು ಬಿದ್ದಿದೆ.
ಪ್ರಸ್ತುತ ಅತ್ಯಂತ ಪ್ರಾಚೀನ ಪಕ್ಷ ಕಾಂಗ್ರೆಸ್ ತನ್ನ ಗೆಲುವಿಗಾಗಿ ದೆಹಲಿ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಉಚಿತ ಭಾಗ್ಯಗಳ ದಾಳವನ್ನು ಪ್ರಯೋಗಿಸಿ ಆಡಳಿತ ಚುಕ್ಕಾಣಿ ಹಿಡಿದ ಪ್ರಾದೇಶಿಕ ಪಕ್ಷಗಳ ಸೂತ್ರವನ್ನು ನಕಲು ಮಾಡುವ ದಯನೀಯ ಸ್ಥಿತಿಗೆ ತಲುಪಿದೆ. ಹೀಗೆ ಎಲ್ಲಾ ವಿಪಕ್ಷಗಳು ಮೋದಿ ಎಂಬ ಮಹಾಶಕ್ತಿಯ ವಿರುದ್ಧ ಹೋರಾಡಲು ಆಯ್ಕೆ ಮಾಡಿಕೊಂಡಿರುವುದು ಉಚಿತ ಭಾಗ್ಯಗಳ ಅಸ್ತ್ರವನ್ನೇ! ಇವರೆಲ್ಲಾ ನಮ್ಮ ದೇಶದ ಉದ್ಧಾರಕ್ಕಾಗಿ ರಾಜಕಾರಣ ಮಾಡಲು ಬಂದಿದ್ದಾರೋ ಅಥವಾ ತಮ್ಮ ರಾಜಕಾರಣಕ್ಕಾಗಿ ದೇಶವನ್ನೇ ಮಾರಲು ಬಂದಿದ್ದಾರೋ!? ಎಂದು ಖಡಾಖಂಡಿತವಾಗಿ ಪ್ರಶ್ನಿಸುವ ಕಾಲ ಬಂದಿದೆ. ಮೋದಿಯವರಿಗೆ ನೀವು ಮತ್ತೆ ಏಕೆ ಪ್ರಧಾನಿಯಾಗಬೇಕು ಎಂದು ಪ್ರಶ್ನಿಸಿದರೆ ಅವರು ತಮ್ಮ ಅದ್ಭುತ ರಿಪೋರ್ಟ್ ಕಾರ್ಡ್ ಅನ್ನು ಮುಂದಿರಿಸಿ, ಆಕರ್ಷಕ ಭವಿಷ್ಯದ ಸಿಲಬಸ್ ಅನ್ನು ನೀಡಿ, ಹೆಮ್ಮೆಯಿಂದ ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ಆದರೆ ವಿಪಕ್ಷದ ಪ್ರಧಾನಿ ಆಕಾಂಕ್ಷಿಗಳನ್ನು ಕೇಳಿ, ಅವರೆಲ್ಲರ ಉತ್ತರ ಒಂದೇ 'ಮೋದಿಯನ್ನು ಹೇಗಾದರೂ ಮಾಡಿ ಕೆಳಗಿಳಿಸಬೇಕು' ಎಂದು, ಅವರ ಮಂತ್ರ ಒಂದೇ - 'ಮೋದಿ ದ್ವೇಷ'. ಪ್ರಪಂಚದಾದ್ಯಂತ ಬಹುತೇಕ ಗೌರವಾನ್ವಿತ ರಾಷ್ಟ್ರಗಳು ನಮ್ಮ ಪ್ರಧಾನಿ ಮೋದಿಯವರಿಗೆ ಆಯಾ ರಾಷ್ಟ್ರಗಳ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿಸಿ, ಅತೀವ ಗೌರವಾದರಗಳನ್ನು ನೀಡಿ ಕೊಂಡಾಡುತ್ತಿದ್ದರೂ ಜೊತೆಗೆ 130 ಕೋಟಿ ಭಾರತೀಯರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರನ್ನು ವಿಜಯಿಯಾಗಿಸಿದ್ದರೂ ನಮ್ಮ ವಿಪಕ್ಷಗಳು ಮಾತ್ರ ಇದ್ಯಾವುದಕ್ಕೂ ಬೆಲೆ ಕೊಡದೆ ಪ್ರಧಾನಿಯವರ ಪ್ರತೀ ಹೆಜ್ಜೆಯನ್ನು ಟೀಕಿಸುತ್ತಾ, ಅವರಿಗೆ ಅಡ್ಡಗಾಲಾಗುತ್ತಿದ್ದಾರೆ.
ಆಜಾದಿಯ ಅಮೃತ ಮಹೋತ್ಸವದಂದು ಎಲ್ಲಾ ದೇಶವಾಸಿಗಳು ಸಂಪೂರ್ಣವಾಗಿ ಗುಲಾಮಿತನದ ಮಾನಸಿಕತೆಯಿಂದ ಹೊರ ಬರಬೇಕೆಂದು ಕರೆ ನೀಡಿದ ಮೋದಿಯವರಿಗೆ ಇದೀಗ ವೈಟ್ ಹೌಸ್ ನಲ್ಲಿ ಅಮೆರಿಕನ್ ಪ್ರತಿನಿಧಿಗಳು 15 ಬಾರಿ ಎದ್ದು ನಿಂತು ಗೌರವ ಸೂಚಿಸಿರುವುದು ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದಾಗಲೇ ಗುಲಾಮಿತನವನ್ನು ಕಿತ್ತೊಗೆಯಬೇಕೆಂದಿದ್ದ ಬಿರುಗಾಳಿ ಸಂತ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವನ್ನು ನೆನಪಿಸುತ್ತಿದೆ! ಮೋದಿಯವರು ತಮ್ಮ ಶಕ್ತಿ, ಕಾರ್ಯಗಳ ಮೂಲಕ ಜಗತ್ತಿನಿಂದ ಭಾರತಕ್ಕಾಗಿ ಸಿಗಬೇಕಾದ ಗೌರವವನ್ನು ಕಮಾಂಡ್ ಮಾಡುತ್ತಿದ್ದಾರೆ. ನಮ್ಮ ಕಾಲದ ಮಹಾತಪಸ್ವಿ, ನಮ್ಮ ಪ್ರೀತಿಯ ಪ್ರಧಾನಿ ತಮ್ಮ ಜೀವನ ಕಾಲದ ತಪಃಶಕ್ತಿಯನ್ನೆಲ್ಲಾ ಧಾರೆ ಎರೆಯುತ್ತಾ, ಭಾರತದ ಶ್ರೇಯೋಭಿವೃದ್ಧಿಗಾಗಿ ತನ್ನ ತನು, ಮನ, ಧನವನ್ನೆಲ್ಲಾ ಅರ್ಪಿಸಿ ಯಜ್ಞವನ್ನು ಮಾಡುತ್ತಿರಲು, ಅದನ್ನು ತಮ್ಮ ತಮ್ಮ ಸ್ವಹಿತಾಸಕ್ತಿಗಳಿಗಾಗಿ ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ವಿಪಕ್ಷಗಳು ಹಾತೊರೆಯುತ್ತಿವೆ. ಆ ಮಹಾಯಜ್ಞವು ಬಹುದೀರ್ಘ ಕಾಲ ನಿರಂತರವಾಗಿ ನಡೆಯುವಂತೆ ಕಾಪಾಡಬೇಕಾದ ಜವಾಬ್ದಾರಿ ಈಗ ನಮ್ಮ ಹೆಗಲಿಗೆ ಬಂದಿದೆ, ಅದುವೇ 2024ರ ಲೋಕ ಸಭಾ ಚುನಾವಣೆಯಲ್ಲಿ ದೇಶದ ಹಿತಕ್ಕಾಗಿ ಮತ ಹಾಕುವ ಮೂಲಕ! ನೂತನ ಪಾರ್ಲಿಮೆಂಟ್ ನಲ್ಲಿ ಮೋದಿಯವರು ಪ್ರತಿಷ್ಠಾಪಿಸಿದ ಸನಾತನ ರಾಜದಂಡದ (ಸೆಂಗೋಲ್) ಮೇಲೆ 'ಶಿವಭಕ್ತನು ಈ ದೇಶವನ್ನು ಸ್ವರ್ಗವನ್ನು ಆಳುವ ರೀತಿ ಅಳುತ್ತಾನೆ' ಎಂದು ಉಲ್ಲೇಖಿಸಿರುವಂತೆ ಅವರು ಭಾರತವನ್ನು ಭೂಲೋಕದ ಸ್ವರ್ಗವನ್ನಾಗಿ ಆಳಲಿ ಎಂಬುದೇ ನಮ್ಮ ಅಭಿಲಾಷೆ. ನೀವು ರಾಜಕಾರಣದಲ್ಲಿ ಭಾಗವಹಿಸಬಹುದು ಅಥವಾ ಭಾಗವಹಿಸದಿರಬಹುದು, ಆದರೆ ರಾಜಕಾರಣದ ಪ್ರಭಾವವು ನಿಮ್ಮ ಜೀವನದ ಮೇಲೆ ಆಗದಂತೆ ತಡೆಯಲು ಸಾಧ್ಯವೇ ಇಲ್ಲ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment