ಜನಿಸುವ ಮೊದಲೇ ಜನನಿಯ ಹತ್ಯೆಯೇ!?

ಜನಿಸುವ ಮೊದಲೇ ಜನನಿಯ ಹತ್ಯೆಯೇ!?

ಒಂದು ಹುಡುಗಿ ಪ್ರೌಢಾವಸ್ಥೆಗೆ ಬಂದ ನಂತರ ಆಕೆಯನ್ನು ಸಮಾಜದಲ್ಲಿ ಹೆಚ್ಚು ರಕ್ಷಣಾತ್ಮಕವಾಗಿ ನೋಡಿಕೊಳ್ಳಲಾಗುತ್ತದೆ. ಅಂತೆಯೇ ಆಕೆಯೂ ಕೂಡ ತನ್ನ ಬಗೆಗೆ ತಾನು ಹೆಚ್ಚು ಕಾಳಜಿ ವಹಿಸಲು ಶುರು ಮಾಡುತ್ತಾಳೆ. ಏಕೆಂದರೆ ಅಂದಿನಿಂದ ಅವಳದು ಏಕಾಂತದ ಪಯಣವಲ್ಲ, ಭವಿಷ್ಯದ ಜೀವವು ಅವಳ ಜೊತೆಯಾಗುವ ಜಂಟಿ ಪಯಣ ಶುರುವಾಗುತ್ತದೆ. ಪ್ರಕೃತಿಯು ಆಕೆಗೆ ತನ್ನ ಸೃಜನ ಕಾರ್ಯದ ಜವಾಬ್ದಾರಿಯನ್ನು ನೀಡಿರುವುದರಿಂದ ಸೃಷ್ಟಿ ಚೈತನ್ಯವು ಸದಾಕಾಲ ಸಂಪದ್ಭರಿತವಾಗಿರುವಂತೆ ನೋಡಿಕೊಳ್ಳುತ್ತಾ ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾಳೆ. ಶರವನ್ನವರಾತ್ರಿಯ ನಾಲ್ಕನೇ ದಿನ ಆರಾಧಿಸಲಾಗುವ ಜಗನ್ಮಾತೆ ಕೂಷ್ಮಂಡ ದೇವಿಯು ಇಡೀ ಜಗತ್ತನ್ನೇ ತನ್ನ ಗರ್ಭವಾಗಿ ಧರಿಸಿದ್ದಾಳೆ ಎಂದು ದೇವಿ ಮಹಾತ್ಮೆಯಲ್ಲಿ ಉದ್ಗರಿಸಲಾಗಿದೆ. ಈ ಪ್ರಪಂಚದಲ್ಲಿ ಬೀಜ ಬಿತ್ತಿದಾಗ ಫಲವನ್ನು ನೀಡುವ ಭೂಮಿಯನ್ನಾಗಲಿ, ಬೆಳವಣಿಗೆಗೆ ಅವಶ್ಯಕವಾದ ಜಲವನ್ನು ನೀಡುವ ನದಿಯನ್ನಾಗಲಿ, ಜೀವನಪರ್ಯಂತ ಪೋಷಣೆಗೆ ಪ್ರಮುಖವಾದ ಹಾಲನ್ನು ನೀಡುವ ಗೋವನ್ನಾಗಲಿ, ನಮಗೆ ಜೀವ ನೀಡುವುದರಿಂದ ಹಿಡಿದು ಜೀವನ ಕಟ್ಟಿಕೊಳ್ಳಲು ಸಂಪೂರ್ಣ ಸಹಾಯ ಮಾಡುವ ಹೆತ್ತ ತಾಯಿಯನ್ನಾಗಲಿ ಎಲ್ಲವನ್ನೂ ಮಾತೃ ಸ್ಥಾನದಲ್ಲಿ ಪೂಜಿಸಿ ಗೌರವಿಸಲಾಗುತ್ತದೆ. ಇಂತಹ ಸ್ತ್ರೀಯನ್ನು (ಜನನಿಯನ್ನು) ಜನಿಸುವ ಮೊದಲೇ ಹತ್ಯೆ ಮಾಡುತ್ತಿರುವ ಅಂಧ, ಅಜ್ಞಾನಿ, ಅವಿವೇಕಿಗಳಿಗೆ ಘೋರ ಧಿಕ್ಕಾರವಿರಲಿ. ಪುತ್ರಿಕಾರತ್ನಗಳು ಅರಳುವ ಮುನ್ನವೇ ಅಂತ್ಯಗೊಳಿಸುತ್ತಿರುವ ಇವರಿಗೆ ಮತ್ತೆ ಮತ್ತೆ ಧಿಕ್ಕಾರವಿರಲಿ. ಇತ್ತೀಚೆಗೆ ಮಂಡ್ಯದ ಆಲೆಮನೆಯಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣವು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಐದು ತಿಂಗಳುಗಳವರೆಗಿನ ಭ್ರೂಣವನ್ನು ಹತ್ಯೆ ಮಾಡಿರುವುದು ಖದೀಮರ ಹಾಗೂ ಅವರಿಂದ ಭ್ರೂಣವನ್ನು ಹತ್ಯೆ ಮಾಡಿಸಿದ ಕುಟುಂಬದವರ ವಿಕೃತ ಮನಸ್ಥಿತಿಯನ್ನು ತೆರೆದಿಡುತ್ತದೆ.

ಐದು ಹೆಣ್ಣು ಮಕ್ಕಳನ್ನು ಹಡೆದ ತರುವಾಯ ತಾಯಿ ಭುವನೇಶ್ವರಿಯು ತನ್ನ ಅನನ್ಯ ಭಕ್ತಿಯಿಂದ ಕಾಶಿ ವಿಶ್ವನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿ ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ಪುತ್ರನನ್ನು ಹಡೆದರು. ಹಾಗೆಯೇ ಇಂದಿನ ಕಾಲದಲ್ಲೂ ಕೂಡ ಎರಡು ಅಥವಾ ಮೂರು ಹೆಣ್ಣು ಮಕ್ಕಳ ನಂತರ ದೇವರಲ್ಲಿ ಹರಕೆ ಹೊತ್ತು, ಪ್ರಾರ್ಥನೆ ಮಾಡಿ ವಂಶೋದ್ಧಾರಕ ಗಂಡು ಮಗುವನ್ನು ಪಡೆಯುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಯಾವುದಾದರೂ ಹರಕೆ ಹೊತ್ತು ಕೊಂಡರೆ ಅದನ್ನು 12 ವರ್ಷಗಳ ಕಾಲಾವಧಿಯೊಳಗೆ ತೀರಿಸಬೇಕೆಂಬ ಪ್ರತೀತಿ ಇದೆ, ಆದಾಗ್ಯೂ ತಂದೆ ತಾಯಿ ಜೊತೆಗೆ ಅವರ ಬಂಧುಗಳೆಲ್ಲಾ ಪುತ್ರರತ್ನನಿಗಾಗಿ ಎಷ್ಟೊಂದು ಹರಕೆಗಳನ್ನು ಹೊತ್ತಿರುತ್ತಾರೆಂದರೆ 12 ವರ್ಷದೊಳಗೆ ಆ ಎಲ್ಲಾ ದೇವರ ದೇವಸ್ಥಾನಗಳಿಗೆ ತೆರಳಿ ಹರಕೆ ತೀರಿಸೋದು ಸಾಧ್ಯವೇ ಆಗುವುದಿಲ್ಲ. ತಪ್ಪು ಕಾಣಿಕೆಯನ್ನು ಸಲ್ಲಿಸಿ ಆ ಮಗುವಿಗೆ 18-20 ವರ್ಷಗಳಾಗುವ ತನಕವೂ ಹರಕೆ ತೀರಿಸುತ್ತಲೇ ಇರುವ ನಿದರ್ಶನಗಳು ಕಂಡು ಬರುತ್ತವೆ. ವಂಶೋದ್ಧಾರಕನನ್ನು ಪಡೆಯಲು ಹಲವಾರು ವ್ರತ, ಹರಕೆ, ಪ್ರಾರ್ಥನೆ ಗಳನ್ನು ಮಾಡುವುದು ಅತ್ಯುತ್ತಮ ವಿಚಾರವೇ ಸರಿ. ಆದರೆ ಅದೇ ಸಂದರ್ಭದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿ ವಂಶೋದ್ಧಾರಕನನ್ನು ಪಡೆದುಕೊಳ್ಳುವ ಪ್ರಯತ್ನ ಮಾಡುವುದು ಅತಿ ದೊಡ್ಡ ಅಪರಾಧವೇ ಸರಿ. ನಿಮ್ಮ ವಂಶೋದ್ಧಾರಕನು ವಂಶವನ್ನು ಬೆಳೆಸಲು ಅನ್ಯ ಉತ್ತಮ ಕುಲದ ಕನ್ಯೆಯನ್ನು ವರಿಸಬೇಕಲ್ಲವೇ? ಹಾಗೆಯೇ ನಿಮ್ಮ ಕುಟುಂಬದ ಕನ್ಯೆಯು ಅನ್ಯ ಉತ್ತಮ ಕುಲದ ವಂಶೋದ್ಧಾರಕನ ವಂಶ ಬೆಳೆಸಲು ಅವನನ್ನು ವರಿಸಬೇಕಲ್ಲವೇ? ಹಾಗಾಗಿ ಸೃಷ್ಟಿಗೆ ಇಬ್ಬರೂ ಅತ್ಯವಶ್ಯಕ. ಗಂಡು ಮಗುವಿಲ್ಲದಿರುವವರು ತಮ್ಮ ಅಳಿಯನನ್ನೇ ಮಗನಂತೆ ಪ್ರೀತಿಯಿಂದ ಕಂಡರೆ ಹಾಗೂ ಹೆಣ್ಣು ಮಗುವಿಲ್ಲದಿರುವವರು ತಮ್ಮ ಸೊಸೆಯನ್ನೇ ಮಗಳಂತೆ ವಾತ್ಸಲ್ಯದಿಂದ ಕಂಡರೆ ಯಾವ ಸಮಸ್ಯೆಯೂ ಸುಳಿಯುವುದಿಲ್ಲ!

ಪ್ರಕೃತಿದತ್ತವಾಗಿ ಸೃಜನ ಕಾರ್ಯವು ಹೆಣ್ಣಿಗೆ ದೊರೆತಿರುವುದರಿಂದ ಪ್ರತಿಯೊಂದು ಹೆಣ್ಣು ಕೂಡ ತಾಯಿಯಾಗುವವಳೆ, ತಾಯಿಯೇ. ಹೀಗಿರುವಾಗ ಹೆಣ್ಣು ಮಗು ಬೇಡವೆಂದು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆಂದರೆ ಅದರ ಅರ್ಥ ಪರೋಕ್ಷವಾಗಿ ತಾಯಿಯನ್ನು ಕೊಲ್ಲುತ್ತಿದ್ದಾರೆ ಎಂದಲ್ಲವೆ? ಮಗುವು ಗರ್ಭದಲ್ಲಿರುವಾಗ ಶೇ.90ರಷ್ಟು ಉತ್ತಮ ಸಂಸ್ಕಾರಗಳನ್ನು ನೀಡಲು ತಪಸ್ವಿ ಜೀವನ ಮಾಡುವವಳು ತಾಯಿ, ಹಾಗಿದ್ದರೂ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆಂದರೆ ಸಂಸ್ಕಾರದಾತೆಯನ್ನು ಕೊಲ್ಲುತ್ತಿದ್ದಾರೆ ಎಂದಲ್ಲವೆ? ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ, ಹಾಗಿದ್ದರೂ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆಂದರೆ ಮಕ್ಕಳ ಮೊದಲ ಗುರುವನ್ನು ಕೊಲ್ಲುತ್ತಿದ್ದಾರೆ ಎಂದಲ್ಲವೆ?

ಹುಡುಗಿಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಅಂತೆಯೇ ಆಯಾ ಕ್ಷೇತ್ರಗಳಲ್ಲಿ ಸಾಧನೆಗೈದು ಗೌರವಾದರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದಾಗ್ಯೂ ಪ್ರಪಂಚದ ಯಾವುದೇ ಕ್ಷೇತ್ರಗಳಲ್ಲಿ ಸ್ತ್ರೀಯು ಕಾರ್ಯತತ್ಪರಳಾಗದಿದ್ದರೆ ನಷ್ಟವಿಲ್ಲ. ಆದರೆ ಕುಟುಂಬವನ್ನು ಸಮರ್ಪಣೆಯಿಂದ ಬೆಳೆಸುವ, ಪೊರೆಯುವ ಆದರ್ಶ ತಾಯಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಸಮಾಜಕ್ಕೆ ತುಂಬಲಾರದ ನಷ್ಟ. ಆ ಸ್ಥಾನವನ್ನು ಮತ್ತ್ಯಾರು ತುಂಬಲಾರರು. ಈ ಒಂದು ಮಹತ್ಕಾರ್ಯವನ್ನು ಸ್ತ್ರೀಯು ವಹಿಸಿಕೊಂಡಿರುವುದರಿಂದಲೇ ಆಕೆಗೆ ನಮ್ಮ ಸಂಸ್ಕೃತಿ ಅಪಾರ ಗೌರವ ಹಾಗೂ ಪ್ರಾಮುಖ್ಯತೆಯನ್ನು ನೀಡುತ್ತದೆ. ಎಂತಹ ಧೀಮಂತ, ಪೌರುಷವಂತ, ಸಾಹಸವಂತ ವ್ಯಕ್ತಿಯಾದರೂ ತಾಯಿಯ ಮುಂದೆ ಮಗುವೇ, ಅದೇ ತಾಯಿಯ ಪದವಿಗಿರುವ ಪ್ರಚಂಡ ಶಕ್ತಿ. ಬಹುತೇಕ ಯಶಸ್ವಿ ವ್ಯಕ್ತಿಗಳ ಹಿಂದೆ ಅವರ ತಂದೆ ತಾಯಿಯ ಅದರಲ್ಲೂ ವಿಶೇಷವಾಗಿ ತಾಯಿಯ ಪಾತ್ರ ಗಣನೀಯವಾಗಿರುತ್ತದೆ.

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಹಾಗೆ ಹೆಣ್ಣನ್ನು ತವರುಮನೆಯಿಂದ ವಿದಾಯ ಮಾಡಿ ಮದುವೆ ಮಾಡಿದ ಮೇಲೆ ಆಕೆಯ ಪತಿಯ ಮನೆಯೇ ಅವಳ ಮನೆ, ಇನ್ನು ಅವಳು ತವರಿಗೆ ಬರುವುದು ವಿರಳಾತಿವಿರಳ. ಆದ್ದರಿಂದ ತಂದೆ ತಾಯಿಯು ಗಂಡು ಮಗುವಿದ್ದರೆ ಕೊನೆಯುಸಿರಿರುವ ತನಕ ಜೊತೆಯಾಗಿರಬಹುದು, ನಂತರ ಉಸಿರು ಹೋದ ಮೇಲೂ ನಮಗೆ ಮೋಕ್ಷ ಸಿಗಲು ಆತ ನಮ್ಮ ಅಂತ್ಯಸಂಸ್ಕಾರ ಮಾಡಬಹುದು ಎಂಬ ಗಂಭೀರ ಸಂಗತಿಗಳನ್ನು ಯೋಚಿಸುತ್ತಿದ್ದರು. ಆದರೆ ಈಗಿನ ಕಾಲ ಹಾಗಿಲ್ಲ. ತಂತ್ರಜ್ಞಾನ, ಸಂಪರ್ಕ-ಸಾರಿಗೆ ತೀವ್ರಗತಿಯಲ್ಲಿ ಬೆಳವಣಿಗೆಯಾಗಿದೆ. ಒಂದೇ ದಿನ ಹಲವಾರು ದೇಶಗಳನ್ನು ಸಂಚರಿಸುತ್ತಾ ಪ್ರಪಂಚವನ್ನು ಸುತ್ತಬಹುದು. ಮಗಳು ಎಷ್ಟೇ ದೂರದಲ್ಲಿದ್ದರೂ ತನ್ನ ತಂದೆ ತಾಯಿಯನ್ನು ನೋಡುವ ಆಸೆಯಾದರೆ ವೇಗವಾಗಿ ಓಡೋಡಿ ಬರಬಹುದು. ಆದ್ದರಿಂದ ಗಂಡು ಮಗುವನ್ನು ಪಡೆಯುವ ಸಲುವಾಗಿ ಹೆಣ್ಣು ಮಗುವನ್ನು (ಹೆಣ್ಣು ಭ್ರೂಣವನ್ನು) ಹತ್ಯೆ ಮಾಡಿ ನೈತಿಕವಾಗಷ್ಟೇ ಅಲ್ಲದೆ ವೈಜ್ಞಾನಿಕವಾಗಿಯೂ ಅಪರಾಧ ಮಾಡಿ ಪ್ರಕೃತಿಯ ಸಮತೋಲನವನ್ನು ಹಾಳು ಮಾಡಬೇಡಿ. ದಯವಿಟ್ಟು ಗಂಡು ಮಗುವಾಗದೆ ಹೋದರೆ ಭವಿಷ್ಯದಲ್ಲಿ ಬರುವ ಅಳಿಯನನ್ನೇ ಮಗನಂತೆ ಕಾಣಿರಿ, ಭವಿಷ್ಯದಲ್ಲಿ ಬೆಳಗಬೇಕಾದ ದೀಪಗಳನ್ನು ಒತ್ತಾಯಪೂರ್ವಕವಾಗಿ ಆರಿಸಬೇಡಿ.

~ಸಿಂಚನ. ಎಂ.ಕೆ ಮಂಡ್ಯ

Comments